ಲಿಂಗಮ್ಮನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ.

ನೆನೆವುತ್ತಿದೆ ಮನ
ದುರ್ವಾಸನೆಗೆ ಹರಿವುತ್ತಿದೆ ಮನ
ಕೊನೆಗೊಂಬೆಗೆ ಎಳೆವುತ್ತಿದೆ ಮನ
ಕಟ್ಟಿಗೆ ನಿಲ್ಲದು ಮನ
ಬಿಟ್ಟಡೆ ಹೋಗದು ಮನ
ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು
ಗೊತ್ತಿಗೆ ನಿಲಿಸಿ
ಬಚ್ಚ ಬರಿಯ ಬಯಲಿನೊಳಗೆ ಓಲಾಡುವ
ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ
ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ

ನೂರೆಂಟು ಬಗೆಯ ಒಳಮಿಡಿತಗಳಿಂದ ಕೂಡಿ ಚಂಚಲತೆಯಿಂದ ತುಯ್ದಾಡುತ್ತಿರುವ ತನ್ನ ಮನಸ್ಸನ್ನು ವ್ಯಕ್ತಿಯು ಒಂದು ಹತೋಟಿಗೆ ತಂದುಕೊಂಡು, ಶಿವಶರಣರ ಒಡನಾಟದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ನೆನೆ+ಉತ್ತ+ಇದೆ; ನೆನೆ=ಕಲ್ಪಿಸು/ಊಹಿಸು/ಬಯಸು/ಆಲೋಚಿಸು; ಮನ=ಮನಸ್ಸು;

ನೆನೆವುತ್ತಿದೆ ಮನ=ವ್ಯಕ್ತಿಯ ಮನದಲ್ಲಿ ನೂರೆಂಟು ಬಗೆಯ ಬಯಕೆ/ಆಲೋಚನೆ/ಕಲ್ಪನೆ/ಚಿಂತೆ/ಆತಂಕದ ಒಳಮಿಡಿತಗಳು ಎಡೆಬಿಡದೆ ತಾಕಲಾಡುತ್ತಿರುತ್ತಿವೆ;

ದುರ್ವಾಸನೆ=ಕೆಟ್ಟ ವಾಸನೆ. ಹರಿ+ಉತ್ತ+ಇದೆ; ಹರಿ=ಚಲಿಸು/ಸಾಗು;

ದುರ್ವಾಸನೆಗೆ ಹರಿವುತ್ತಿದೆ ಮನ=‘ದುರ್‍ವಾಸನೆ’ ಎಂಬ ಪದವು ಒಂದು ರೂಪಕವಾಗಿ ಬಳಕೆಗೊಂಡಿದೆ. ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಇತರರಿಗೆ ಕೇಡನ್ನು ಬಗೆಯುವ ಕೆಟ್ಟ ಆಲೋಚನೆಗಳಲ್ಲಿ ತೊಡಗುತ್ತಾನೆ;

ಕೊನೆ+ಕೊಂಬೆ; ಕೊಂಬೆ=ಮರದ ರೆಂಬೆ/ಟೊಂಗೆ; ಕೊನೆಗೊಂಬೆ=ಮರದ ಕೊಂಬೆಯ ತುತ್ತ ತುದಿ; ಎಳೆ+ಉತ್ತ+ಇದೆ; ಎಳೆ=ತನ್ನ ಕಡೆಗೆ ಸೆಳೆದುಕೊಳ್ಳುವುದು;

ಕೊನೆಗೊಂಬೆಗೆ ಎಳೆವುತ್ತಿದೆ ಮನ=ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ತುಂಬಿಕೊಂಡು, ವ್ಯಕ್ತಿಯನ್ನು ಸಾವು ನೋವಿನ ಕಡೆಗೆ ಎಳೆದೊಯ್ಯುತ್ತಿವೆ; ‘ಕೊನೆಗೊಂಬೆ’ ಎಂಬ ಪದವು ಒಂದು ರೂಪಕವಾಗಿ ಬಳಕೆಗೊಂಡಿದೆ. ದೊಡ್ಡ ಮರದ ಕೊಂಬೆಯ ತುತ್ತತುದಿಗೆ ಯಾವುದೇ ವ್ಯಕ್ತಿಯು ಹೋದರೆ, ಆಯತಪ್ಪಿ ಕೆಳಕ್ಕೆ ಬಿದ್ದು ಅವನಿಗೆ ಸಾವು ನೋವು ಉಂಟಾಗುತ್ತದೆ. ‘ಕೊನೆಗೊಂಬೆ ’ ಎಂಬ ಪದ “ದುರಂತ/ಕೇಡು/ಹಾನಿ/ಸಾವು ನೋವು” ಎಂಬ ರೂಪಕದ ತಿರುಳನ್ನು ಹೊಂದಿದೆ;

ಕಟ್ಟು=ಹತೋಟಿ/ಹಿಡಿತ/ಏಕಾಗ್ರತೆ/ಸಂಯಮ;

ಕಟ್ಟಿಗೆ ನಿಲ್ಲದು ಮನ=ನೂರೆಂಟು ಬಗೆಯ ಕಾಮನೆ/ಚಿಂತೆ/ಆಲೋಚನೆಗಳಿಂದ ತುಯ್ದಾಡುತ್ತಿರುವ ಮನಸ್ಸನ್ನು ಹತೋಟಿಯಲ್ಲಿಡಲು ವ್ಯಕ್ತಿಗೆ ಆಗುತ್ತಿಲ್ಲ;

ಬಿಡು=ತೊರೆ/ತ್ಯಜಿಸು;

ಬಿಟ್ಟಡೆ ಹೋಗದು ಮನ=ಮನವನ್ನು ಎಡೆಬಿಡದೆ ಕಾಡುತ್ತಿರುವ ಕೆಟ್ಟ ಕೆಟ್ಟ ಕಾಮನೆಗಳನ್ನು/ಆಲೋಚನೆಗಳನ್ನು ಬಿಡಬೇಕೆಂದರೂ ಆಗುತ್ತಿಲ್ಲ. ವ್ಯಕ್ತಿಯ ಮನಸ್ಸು ಚಂಚಲತೆಯಿಂದ ನರಳುತ್ತಿದೆ. ಮನಸ್ಸಿನಿಂದ ಕೆಟ್ಟ ಒಳಮಿಡಿತಗಳು ತೊಲಗುತ್ತಿಲ್ಲ; ಮಾನಸಿಕ ಚಂಚಲತೆ ಎಂದರೆ “ಯಾವುದನ್ನು ಮಾಡಲಾಗದೆ ಇಲ್ಲವೇ ಯಾವುದನ್ನು ಬಿಡಲಾಗದೆ” ಇಬ್ಬಗೆಯ ಆಲೋಚನೆಯಲ್ಲಿ ತೊಡಗುವುದು;

ತನ್ನ+ಇಚ್ಛೆ+ಅಲ್+ಆಡುವ; ಇಚ್ಛೆ=ಆಸೆ/ಕಾಮನೆ/ಬಯಕೆ; ಆಡು=ಚಲಿಸು/ವರ್‍ತಿಸು;

ತನ್ನಿಚ್ಛೆಯಲಾಡುವ ಮನ=ಮಾನವನ ಮನದಲ್ಲಿ ಯಾವ ಯಾವ ಬಗೆಯ ಒಳಮಿಡಿತಗಳು ತುಡಿಯುತ್ತಿರುತ್ತವೆ ಎಂದು ಹೇಳಲು ಯಾರಿಂದಲೂ ಆಗದು; ಪ್ರತಿಯೊಬ್ಬ

ವ್ಯಕ್ತಿಯ ಮನದಲ್ಲಿ ಪ್ರತಿಗಳಿಗೆಯಲ್ಲಿಯೂ ನೂರಾರು ಬಗೆಯ ಒಳಮಿಡಿತಗಳು ತಮಗೆ ತಾವೆ ಮೂಡುತ್ತಿರುತ್ತವೆ; ಒಳಮಿಡಿತಗಳು ಎಂದರೆ “ಆಸೆ, ಆಕ್ರೋಶ, ಆತಂಕ, ಸೇಡು, ಹಗೆತನ, ಹೊಟ್ಟೆಕಿಚ್ಚು, ಅಸೂಯೆ, ಹೆದರಿಕೆ, ಹಿಂಜರಿಕೆ” ಮುಂತಾದುವು;

ಕಟ್ಟಿಗೆ ತಂದು=ಹತೋಟಿಯಲ್ಲಿಟ್ಟುಕೊಂಡು; ಗೊತ್ತು=ನೆಲೆ/ನಿಶ್ಚಿತವಾದ ಒಂದು ಜಾಗ;

ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು ಗೊತ್ತಿಗೆ ನಿಲಿಸಿ= ವ್ಯಕ್ತಿಯ ಹಿಡಿತಕ್ಕೆ ಸಿಲುಕದೆ ಎಡೆಬಿಡದೆ ತುಡಿಯುತ್ತಿರುವ ಕೆಟ್ಟ ಆಲೋಚನೆಗಳೆಲ್ಲವನ್ನೂ ಒಂದು ಹತೋಟಿಗೆ ತಂದುಕೊಂಡು, ಮನಸ್ಸಿನಲ್ಲಿ ಮತ್ತೆ ಮತ್ತೆ ಚಂಚಲತೆಯು ಉಂಟಾಗದಂತೆ ಎಚ್ಚರವನ್ನು ವಹಿಸಿ, ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡುವಂತೆ ಮಾಡಿ;

ಬಚ್ಚ ಬರಿಯ=ಏನೂ ಇಲ್ಲದ; ಬಯಲು+ಇನ್+ಒಳಗೆ; ಬಯಲು=ಮರಗಿಡಗಳಾಗಲಿ ಇಲ್ಲವೇ ಕಲ್ಲು ಬಂಡೆಗಳಾಗಲಿ ಇಲ್ಲದ ಬರಿದಾದ ವಿಸ್ತಾರವಾದ ಜಾಗ;

ಬಚ್ಚ ಬರಿಯ ಬಯಲು=ಇದೊಂದು ನುಡಿಗಟ್ಟು. ಮನದಲ್ಲಿ ಕೆಟ್ಟ ಕಾಮನೆ/ಕೆಟ್ಟ ಆಲೋಚನೆಗಳು ಇಲ್ಲದಿರುವುದು; ಓಲಾಡು=ನಲಿ/ಹಿಗ್ಗು/ಮೆರೆದಾಡು; ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು ಶಿವನನ್ನು ಪೂಜಿಸುವವನು;

ನಾ=ನಾನು; ಬೆಚ್ಚ+ಅಂತೆ+ಇದ್ದೆನ್+ಅಯ್ಯಾ; ಬೆಚ್ಚ=ಹೊಂದಿಸು/ಜತೆಗೂಡಿಸು; ಬೆಚ್ಚಂತೆ=ಜತೆಗೂಡಿದಂತೆ;

ಬಚ್ಚ ಬರಿಯ ಬಯಲಿನೊಳಗೆ ಓಲಾಡುವ ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಒಳಿತಿನ ನಡೆನುಡಿಗಳಿಂದ ಕೂಡಿ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತ, ಒಲವು ನಲಿವು ನೆಮ್ಮದಿಯಿಂದ ಬಾಳುತ್ತಿರುವ ಶಿವಶರಣರ ಜತೆಗೂಡಿ ನಾನು ಮಾನಸಿಕ ತೊಳಲಾಟವಿಲ್ಲದೆ ನೆಮ್ಮದಿಯಾಗಿ ಬಾಳುತ್ತಿದ್ದೇನೆ;

ಅಪ್ಪಣ್ಣ=ಶಿವಶರಣೆ ಲಿಂಗಮ್ಮನ ಗಂಡ; ಅಪ್ಪಣ್ಣ ಪ್ರಿಯ=ಅಪ್ಪಣ್ಣನಿಗೆ ಆಪ್ತನಾದ; ಚೆನ್ನಬಸವಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ;

ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ=ಲಿಂಗಮ್ಮನು ರಚಿಸಿರುವ ವಚನಗಳ ಅಂಕಿತನಾಮ;

( ಚಿತ್ರ ಸೆಲೆ:  shivasharaneyaru)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *