ಬಗವಾನ್: ಚಂದನವನದ ಬಾಂಡ್ ಚಿತ್ರಗಳ ರೂವಾರಿ

– ಕಿಶೋರ್ ಕುಮಾರ್.

‘ಬಗವಾನ್’ ಈ ಹೆಸರನ್ನ ಕೇಳಿದರೆ ಯಾರಿದು ಎಂದು ಕೇಳಬಹುದು, ನಿರ‍್ದೇಶಕ ಬಗವಾನ್ ಅವರು ಅಂತ ಕೇಳಿದ್ರೆ ಕೆಲವರಿಗೆ ತಿಳಿಯಬಹುದು. ಅದೇ ದೊರೆ-ಬಗವಾನ್ ಅಂತ ಕೇಳಿದ್ರೆ ಗೊತ್ತಿಲ್ಲ ಅನ್ನೋ ಕನ್ನಡ ಚಿತ್ರರಸಿಕರಿಲ್ಲ ಅಂತಲೇ ಹೇಳಬಹುದು. ಹೌದು, ಕನ್ನಡ ಸಿನೆಮಾರಂಗದಲ್ಲಿ ಹಲವಾರು ಮೊದಲುಗಳನ್ನ ಹುಟ್ಟುಹಾಕಿದ ಗರಿಮೆ ದೊರೆ-ಬಗವಾನ್ ಜೋಡಿಗೆ ಸಲ್ಲಬೇಕು. ಸುಮಾರು 30 ವರುಶಗಳ ಕಾಲ ಹಲವಾರು ಬಗೆಯ ಸಿನೆಮಾಗಳನ್ನು ಕನ್ನಡಿಗರಿಗೆ ಉಣಬಡಿಸಿದ ಜೋಡಿ ಇದು.

1933ರ ಪೆಬ್ರವರಿ 20 ರಂದು ಮೈಸೂರಿನಲ್ಲಿ ಹುಟ್ಟಿದ ಬಗವಾನ್ ಅವರ ಕಲಿಕೆ ಮೈಸೂರಿನಲ್ಲಿ ಮೊದಲಾಗಿ, ಮುಂದೆ ಬೆಂಗಳೂರಿನಲ್ಲಿ ಮುಂದುವರೆಯಿತು. ಬಗವಾನ್ ಅವರು ಬೆಂಗಳೂರು ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದರು. ಜಿ. ವೆಂಕಟಸುಬ್ಬಯ್ಯ ನವರು ಇವರಿಗೆ ಕನ್ನಡ ಕಲಿಸುಗರಾಗಿದ್ದದ್ದು ಮತ್ತೊಂದು ವಿಶೇಶ. ಕಾಲೇಜಿನ ದಿನಗಳಲ್ಲಿ ಒಡನಾಡಿಯಾದ ಮಾಸ್ಟರ್ ಹಿರಣ್ಣಯ್ಯರವರೊಂದಿಗೆ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಗವಾನ್ ರವರು, ಹಿರಣ್ಣಯ್ಯ ಮಿತ್ರಮಂಡಳಿಯ ನಾಟಕಗಳಲ್ಲಿ ಹವ್ಯಾಸಿ ನಟರಾಗಿ ನಟಿಸುತ್ತಿದ್ದರು. ಸ್ಪುರದ್ರೂಪಿಯಾಗಿದ್ದ ಬಗವಾನ್ ರವರು ಆಕಸ್ಮಿಕವಾಗಿ ಒಲಿದು ಬಂದ ಹೆಣ್ಣಿನ ಪಾತ್ರದಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾದರು. ಹವ್ಯಾಸಿ ನಾಟಕಕಾರರಗಿದ್ದ ಬಗವಾನ್ ರವರಿಗೆ ಮುಂದೆ ಎಡತೊರೆ ನಾಟಕ ಕಂಪನಿಯಿಂದ ಕರೆಬಂತು, ಆಗಿನ ಕಾಲಕ್ಕೆ ತಿಂಗಳಿಗೆ 300 ರೂಪಾಯಿಗಳ ಸಂಬಳ ಪಡೆದರು ಬಗವಾನ್.

ಒಮ್ಮೆ ಬಗವಾನ್ ರವರಿಗೆ ನಾಟಕವನ್ನು ಪುಸ್ತಕಕ್ಕೆ ಇಳಿಸುವ ಕೆಲಸವನ್ನು ಕೊಡಲಾಗಿ, ಬಗವಾನ್ ರವರ ಮುದ್ದಾದ ಬರವಣಿಗೆ ಕಂಡ ಮೇಲೆ ಆ ಕೆಲಸಕ್ಕೆ ಬಗವಾನ್ ರವರನ್ನೇ ನೇಮಿಸಲಾಯಿತು. ಕಲಿತವರಾಗಿದ್ದ ಬಗವಾನ್ ರವರಿಗೆ ನಾಟಕ ಕಂಪನಿಯ ಪ್ರಾಕ್ಟೀಸ್ ಮ್ಯಾನೇಜರ್ ಆಗುವ ಮತ್ತೊಂದು ಅವಕಾಶ ಒಲಿದು ಬಂತು. ಕಲಿಕೆಯ ಜೊತೆಗೆ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಬಗವಾನ್ ರವರು ಮನೆಯವರ ಅಣತಿಯಂತೆ ನಾಟಕವನ್ನ ಬಿಟ್ಟು, ತಮ್ಮ ಕಲಿಕೆಯನ್ನು ಮುಂದುವರೆಸಿದರು. ತಮ್ಮ ಕಲಿಕೆ ಪೂರ‍್ಣಗೊಂಡ ನಂತರ ಪ್ರಕಾಶ್ ಪಿಕ್ಚರ‍್ಸ್ ನಲ್ಲಿ ರೆಪ್ರಸೆಂಟಿವ್ ಆಗಿ ಕೆಲಸಕ್ಕೆ ಸೇರಿದರು ಬಗವಾನ್. 1956 ರಲ್ಲಿ ಉದಯ ಪ್ರೊಡಕ್ಶನ್ ರವರ, ಉದಯ್ ಕುಮಾರ್ ಅವರು ನಟಿಸಿರುವ ಬಾಗ್ಯೋದಯ ಚಿತ್ರದಲ್ಲಿ ನಿರ‍್ದೇಶಕ ಪ್ರಬಾಕರ ಶಾಸ್ತ್ರಿಯವರಿಗೆ ಸಹಾಯಕರಾಗಿ ಕೆಲಸಮಾಡಿದರು. ಬಾಗ್ಯೋದಯ ಚಿತ್ರ ಉದಯ್ ಕುಮಾರ್ ರವರ ಮೊದಲ ಸಿನೆಮಾ ಕೂಡ ಅಗಿತ್ತು. ಕೆಲವು ಸಿನೆಮಾಗಳಲ್ಲಿ ಪುಟ್ಟ ಪಾತ್ರಗಳನ್ನೂ ಸಹ ಮಾಡಿದ ಬಗವಾನ್ ರವರು ಮುಂದೆ ನಟನೆಗಿಂತ ನಿರ‍್ದೇಶನದ ಕಡೆ ಹೆಚ್ಚು ತೊಡಗಿಸಿಕೊಂಡರು. ಮುಂದೆ ವರನಟ ಡಾ. ರಾಜ್ ಕುಮಾರ್ ರವರೊಡನೆ ಬಗವಾನ್ ರವರ ಒಡನಾಟ ಮೊದಲಾಯಿತು. ಇದೇ ಸಮಯದಲ್ಲಿ ಕ್ಯಾಮೆರಾಮ್ಯಾನ್ ದೊರೆ ಅವರ ಪರಿಚಯವೂ ಆಯಿತು.

1966 ರಲ್ಲಿ ಎ. ಸಿ. ನರಸಿಂಹ ಮೂರ‍್ತಿಯವರೊಡನೆ ಬಗವಾನ್ ರವರು ಡಾ ರಾಜ್ ಕುಮಾರ್ ನಟಿಸಿರುವ, ದೊರೆ ಅವರ ಸಿನೆಮಾಟೋಗ್ರಪಿ ಇದ್ದ ಸಂದ್ಯಾರಾಗ ಚಿತ್ರವನ್ನು ನಿರ‍್ದೇಶಿಸಿದರು. ಚಿತ್ರದಿಂದ ಚಿತ್ರಕ್ಕೆ ಡಾ. ರಾಜ್, ದೊರೆ ಹಾಗೂ ಬಗವಾನ್ ರವರ ಒಡನಾಟ ಗಟ್ಟಿಯಾಗುತ್ತಾ ಹೋಯಿತು. ದೊರೆಯವರ ಸಲಹೆಯಂತೆ ಸಿನೆಮಾ ನಿರ‍್ಮಾಣಕ್ಕೆ ಇಳಿದ ಬಗವಾನ್ ಅವರು, ಮದ್ರಾಸ್ (ಇಂದಿನ ಚೆನ್ನೈ) ನಲ್ಲಿದ್ದ ದಕ್ಶಿಣ ಕನ್ನಡ ಮೂಲದ ಕಂಟ್ರಾಕ್ಟರ್ ಆಗಿದ್ದ ಯು. ಎಸ್. ರಾಜಾರಾಮ್ ಅವರ ಸಹಾಯದಿಂದ, ಡಾ ರಾಜ್ ಕುಮಾರ್ ನಟಿಸಿರುವ ಮಂತ್ರಾಲಯ ಮಹಾತ್ಮೆ ಸಿನೆಮಾ ನಿರ‍್ಮಾಣ ಮಾಡಿದರು.

1968 ರಲ್ಲಿ ದೊರೆಯವರೊಡನೆ ಕನ್ನಡದ ಮೊದಲ ಬಾಂಡ್ ಶೈಲಿಯ ಚಿತ್ರವಾದ ಜೇಡರಬಲೆ ಚಿತ್ರವನ್ನು ಬಗವಾನ್ ನಿರ‍್ದೇಶಿಸಿದರು. ನಂತರ ಗೋವಾದಲ್ಲಿ CID 999, ಆಪರೇಶನ್ ಜಾಕ್ಪಾಟ್ ನಲ್ಲಿ CID 999, ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ (ದೊರೆ ಬಗವಾನ್ ರವರು ಡಾ ರಾಜ್ ರನ್ನು ಬಿಟ್ಟು ನಿರ‍್ದೇಶಿಸಿದ ಮೊದಲ ಚಿತ್ರ), ಚಂದನದ ಗೊಂಬೆ, ಗಾಳಿಮಾತು, ಮುನಿಯನ ಮಾದರಿ, ಹೊಸ ಬೆಳಕು ಹೀಗೆ ಹಲವು ಬಗೆಯ ಚಿತ್ರಗಳನ್ನು ಕನ್ನಡಿಗರಿಗೆ ಉಣಬಡಿಸಿದ ಬಗವಾನ್ ರವರ ಹೆಚ್ಚು ಚಿತ್ರಗಳು ಕಾದಂಬರಿ ಆದಾರಿತ ಚಿತ್ರಗಳಾಗಿದ್ದವು. ಅತಿ ಹೆಚ್ಚು ಬಾಂಡ್ ಶೈಲಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಗರಿಮೆ ಬಗವಾನ್ ರವರಿಗೆ ಸಲ್ಲಬೇಕು.

ಡಾ. ರಾಜ್ ಹಾಗೂ ದೊರೆ ಬಗವಾನ್ ಜೋಡಿಯ ಹೆಚ್ಚಿನ ಚಿತ್ರಗಳು ಬ್ಲಾಕ್ ಬಸ್ಟರ್ ಗಳಾಗಿವೆ. ಹಾಗೂ ದೊರೆ ಬಗವಾನ್ ನಿರ‍್ದೇಶಿಸಿ ನಿರ‍್ಮಿಸಿದ ಹೆಚ್ಚಿನ ಚಿತ್ರಗಳು ಡಾ. ರಾಜ್ ರವರೊಡನೆ ಎಂಬುದು ಮತ್ತೊಂದು ವಿಶೇಶ. 1994 ರಲ್ಲಿ ತೆರೆಕಂಡ ಒಡಹುಟ್ಟಿದವರು ಡಾ. ರಾಜ್ ಕುಮಾರ್ ರೊಡನೆ ದೊರೆ ಬಗವಾನ್ ಜೋಡಿಯ ಕೊನೆಯ ಚಿತ್ರ. 1995 ರಲ್ಲಿ ತೆರೆಕಂಡ ಬಾಳೊಂದು ಚದುರಂಗ ದೊರೆ ಬಗವಾನ್ ಜೋಡಿಯ ಕೊನೆಯ ಚಿತ್ರವಾದರೆ, 2019 ರಲ್ಲಿ ತೆರೆಕಂಡ ಆಡುವ ಗೊಂಬೆ ಬಗವಾನ್ ರವರ 50 ನೇ ಹಾಗೂ ಕೊನೆಯ ನಿರ‍್ದೇಶನದ ಚಿತ್ರವಾಗಿದೆ. ಬೆಂಗಳೂರಿನ ಬಸವೇಶ್ವರನಗರದ ತಮ್ಮ ಮನೆಯಲ್ಲಿ ವಾಸವಿದ್ದ, ಕೊನೆಯ ದಿನಗಳ ವರೆಗೂ ಸಾರ‍್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಬಗವಾನ್ ರವರು ವಯೋಸಹಜ ತೊಂದರೆಗಳಿಂದ 2022 ರ ಡಿಸೆಂಬರ್ ನಲ್ಲಿ ಆಸ್ಪತ್ರೆಗೆ ದಾಕಲಾಗಿದ್ದರು. ಸುಮಾರು 63 ವರುಶ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಬಗವಾನ್ ರವರು 2023 ಪೆಬ್ರವರಿ 20 ರಂದು ಬದುಕಿನ ಕೊನೆಯ ಪಯಣವನ್ನು ಮುಗಿಸಿದರು. ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಶ್ಟವೇ ಸರಿ.

(ಮಾಹಿತಿ ಮತ್ತು ಚಿತ್ರ ಸೆಲೆ: youtube.com, peoplepill.com, nettv4u.com, wikipedia.org, thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: