ಬೇಸಿಗೆಯ ಗೆಳೆಯ ಕಲ್ಲಂಗಡಿ ಹಣ್ಣು
ಶಿವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ವರ್ಶಪೂರ್ತಿ ಮಾಯವಾಗಿದ್ದ ಕಲ್ಲಂಗಡಿ ಹಣ್ಣು ಇದ್ದಕ್ಕಿದ್ದಂತೆ ರಸ್ತೆ ಬದಿ, ಮಾರುಕಟ್ಟೆ, ಗಲ್ಲಿ ಗಲ್ಲಿಗಳಲ್ಲಿ ದಿಡೀರ್ ಅಂತ ರಾಶಿ ರಾಶಿಗಳಲ್ಲಿ ಪ್ರತ್ಯಕ್ಶವಾಗುತ್ತದೆ. ಶಿವರಾತ್ರಿಯ ಉಪವಾಸವನ್ನು ನೀಗುವುದರ ಜೊತೆ ಬೇಸಿಗೆಯ ದಾಹವನ್ನು ತಣಿಸುವಲ್ಲಿ ಈ ಹಣ್ಣುಗಳ ಪಾತ್ರ ಮೆಚ್ಚುವಂತಹುದು. ಇದು ಒಂದು ಬೇಸಿಗೆ ಕಾಲದಲ್ಲಿ ದೊರೆಯುವ ಹಣ್ಣು ಎಂದರೆ ತಪ್ಪಾಗಲಾರದು. ಬೇಸಿಗೆಯ ದಿನಗಳಲ್ಲಿ ಕೇವಲ ಪಾನೀಯಗಳಶ್ಟೇ ಅಲ್ಲ, ಈ ಬಗೆಯ ರಸಬರಿತವಾದ ಹಣ್ಣುಗಳನ್ನು ತಿಂದರೂ ಬಾಯಾರಿಕೆಯನ್ನು ನೀಗಿಸಬಹುದು. ಬೇಸಿಗೆ ಕಾಲದಲ್ಲಿ ಜ್ಯೂಸ್ ಸೆಂಟರ್ಗಳಲ್ಲಿ ಕಲ್ಲಂಗಡಿ(water melon) ಜ್ಯೂಸ್ಗೆ ಅದಿಕ ಬೇಡಿಕೆ ಇರುತ್ತದೆ. ಕುಂಬಳಕಾಯಿಯ ರೀತಿ ಬಳ್ಳಿಯಲ್ಲಿ ಪಲ ಬಿಡುವ ಈ ಹಣ್ಣು ನೋಡಲು ಗೋಲಾಕಾರದಲ್ಲಿರುತ್ತವೆ. ಇದರ ತೊಗಟೆ ದಪ್ಪನಾಗಿದ್ದು ನೋಡಲು ಗಾಡ ಹಸಿರು ಮತ್ತು ತಿಳಿ ಹಸಿರಿನ ಪಟ್ಟೆಗಳಂತೆ ಗೋಚರಿಸುತ್ತದೆ. ಒಳಗಿನ ತಿರುಳು ರಸಬರಿತವಾಗಿದ್ದು ಕೆಂಬಣ್ಣದಲ್ಲಿರುತ್ತದೆ. ಕಪ್ಪು ಬಣ್ಣದ ಬೀಜಗಳು ಈ ಹಣ್ಣಿನಲ್ಲಿ ಹೇರಳವಾಗಿರುತ್ತವೆ.
ಕಲ್ಲಂಗಡಿ ಹಣ್ಣು ಮೂಲತಹ ಆಪ್ರಿಕಾದ್ದು. ಇತಿಹಾಸ ತಜ್ನರ ಪ್ರಕಾರ ಚೀನಾದ ಪ್ರಾಚೀನ ಗುಹೆಗಳಲ್ಲೂ ಈ ಹಣ್ಣುಗಳು ಕಂಡುಬಂದಿದ್ದವಂತೆ. ಈಜಿಪ್ಟ್ ನ ಹಳೆಯ ಗೋರಿಗಳ ಮೇಲೆ ಈ ಹಣ್ಣಿನ ಚಿತ್ರವನ್ನು ಸಹಸ್ರಾರು ವರ್ಶಗಳ ಹಿಂದೆಯೇ ಕೆತ್ತಿದ್ದ ಉಲ್ಲೇಕಗಳು ಇವೆಯೆಂದು ಹೇಳಲಾಗುತ್ತದೆ. ಬಾರತವು ಸೇರಿದಂತೆ ಪ್ರಪಂಚದ ಬಹುಬಾಗಗಳಲ್ಲಿ ಈ ಹಣ್ಣಿನ ಕ್ರುಶಿಯನ್ನು ಮಾಡಲಾಗುತ್ತೆ. ಚಳಿಗಾಲದಲ್ಲಿ ಇದರ ಕ್ರುಶಿಯನ್ನು ಮಾಡಲು ಆರಂಬಿಸಿದರೆ ಬೇಸಿಗೆಯಲ್ಲಿ ಇದರ ಉತ್ತಮವಾದ ಸಿಹಿಯಾದ ಪಸಲನ್ನು ಎದುರು ನೋಡಬಹುದು. ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಕಲ್ಲಂಗಡಿಯ ಹೆಚ್ಚಿನ ಇಳುವರಿ ಪಡೆಯಲು ಸೂಕ್ತವೆಂಬುದು ಹಲವರ ಅನಿಸಿಕೆ. ಹಿಂದಿನಿಂದಲೂ ಕೆರೆ ಅಂಗಳದಲ್ಲೋ ಅತವಾ ನದಿ ತಟಗಳಲ್ಲೋ ಕಲ್ಲಂಗಡಿ ಬೇಸಾಯ ಮಾಡುವ ಕ್ರಮ ರೂಡಿಯಲ್ಲಿತ್ತು. ಬಾರತದಲ್ಲಿ ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯಲಾಗುತ್ತದೆ.
ಈ ಹಣ್ಣಿನ ಶೇಕಡಾ 90ರಶ್ಟು ಬಾಗ ನೀರಿನಿಂದ ತುಂಬಿರಲಿದ್ದು, ಜ್ಯೂಸಿ ಪ್ರೂಟ್ ತರಹ ಅನಿಸುತ್ತದೆ. ಇದರ ತಿರುಳನ್ನು ಸಣ್ಣ ಸಣ್ಣ ಹೋಳು ಮಾಡಿ, ಅದರ ಮೇಲೆ ಸ್ವಲ್ಪ ಕರಿಮೆಣಸು ಕಾಳಿನ ಪುಡಿ ಮತ್ತು ಉಪ್ಪನ್ನು ಅತವಾ ಚಾಟ್ ಮಸಾಲವನ್ನೋ ಸವರಿ ತಿಂದರೆ ರುಚಿಯಾಗಿರುತ್ತದೆ. ಹಣ್ಣು ಪಕ್ವವಾಗಿದೆಯೋ ಇಲ್ಲವೋ ಎಂದು ತಿಳಿಯುವುದು ಸ್ವಲ್ಪ ಗೊಂದಲವಾಗಬಹುದು. ಅದರ ಹಸಿರಿನ ತೊಗಟೆ ಬಣ್ಣ ಸ್ವಲ್ಪ ತಿಳಿಹಳದಿಗೆ ತಿರುಗಿದ್ದರೆ ಅದರ ತಿರುಳು ಕೆಂಪಗೆ ಮತ್ತು ಸಿಹಿಯಾಗಿರುತ್ತದೆ.
ತಳಿಗಳ ಬಗೆ
ಕಲ್ಲಂಗಡಿಯಲ್ಲಿ ಎರಡು ಮುಕ್ಯ ತಳಿಗಳಿವೆ. ಮೊದಲನೆಯದು ದೊಡ್ಡದಾದ ಮತ್ತು ದಪ್ಪನಾದ ತಳಿ ಅತವಾ ಜ್ಯುಬಿಲಿ ಟೈಪ್ ತಳಿ. ಇವು ಸಾಮಾನ್ಯವಾಗಿ ಎಲ್ಲ ಮಾರುಕಟ್ಟೆಯಲ್ಲಿ ದೊರೆಯುವಂತಹುದು.ಇದರ ತೂಕ 6 ರಿಂದ 8 ಕೆಜಿ ಮತ್ತೊಂದು ಐಸ್ ಬಾಕ್ಸ್ ತಳಿ (ಕೊಳವೆಯಾಕಾರದ ಗಾಡ ಹಸಿರು ಬಣ್ಣದ ಕಲ್ಲಂಗಡಿ), ಇವು ಹೆಚ್ಚಾಗಿ ಮಾಲ್, ಸೂಪರ್ ಮಾರ್ಕೆಟ್ ಗಳಲ್ಲಿ ಕರೀದಿಗೆ ಸಿಗುತ್ತವೆ. ಇವುಗಳ ತೂಕ 1.5 ಕೆಜಿ ಯಿಂದ 3 ಕೆ ಜಿ ಇರುತ್ತದೆ. ಇವುಗಳನ್ನು ಬಹಳ ದಿನಗಳವರೆಗೆ ಶೇಕರಿಡಿಸಬಹುದಾಗಿದೆ.
ಕಲ್ಲಂಗಡಿ ಹಣ್ಣಿನ ಸೇವನೆಯು, ಶರೀರವು ನಿರ್ಜಲೀಕರಣದಿಂದ ಮುಕ್ತವಾಗಲು ಸಹಕಾರ ಮಾಡುತ್ತದೆ. ಬೇಸಿಗೆಯ ತಾಪದಿಂದ ಏರುವ ದೇಹದ ಉಶ್ಣತೆಯನ್ನು ತಗ್ಗಿಸುವ ಉಶ್ಣಶಮನಕಾರಿ ಹಣ್ಣು ಕಲ್ಲಂಗಡಿ. ಒಟ್ಟಾರೆ ಬೇಸಿಗೆಗೆ ಹೇಳಿಮಾಡಿಸಿದಂತಹ ಹಣ್ಣು ಈ ರಸಬರಿತವಾದ ಕಲ್ಲಂಗಡಿ.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು