ಕಾಬೂಲ್ ಕಡಲೆ (ಚನ್ನ) ಮಸಾಲೆ

– ಶ್ಯಾಮಲಶ್ರೀ.ಕೆ.ಎಸ್.

ಬೇಕಾಗುವ ಸಾಮಾನುಗಳು

ಚನ್ನ ಅತವಾ ಕಾಬೂಲ್ ಕಡಲೆ ಕಾಳು – 1 ಕಪ್
ಚನ್ನ ಮಸಾಲೆ ಪುಡಿ – 1 ಅತವಾ 1.5 ಟೀ ಚಮಚ
ಗರಂ ಮಸಾಲೆ – 1 ಟೀ ಚಮಚ
ಈರುಳ್ಳಿ (ಮದ್ಯಮ ಗಾತ್ರದ್ದು) -2
ಟೊಮ್ಯಾಟೊ – 1
ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ
ಹಸಿ ಮೆಣಸಿನ ಕಾಯಿ -1
ಅಚ್ಚ ಕಾರದ ಪುಡಿ -1 ಟೀ ಚಮಚ
ಏಲಕ್ಕಿ -1
ಪಲಾವ್ ಎಲೆ – 1
ಅರಿಶಿನ – ಅರ್‍ದ ಟೀ ಚಮಚ
ಅಡುಗೆ ಎಣ್ಣೆ – 6 ಟೀ ಚಮಚ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಕಾಬೂಲ್ ಕಡಲೆ ಕಾಳುಗಳನ್ನು 10 ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು. ನಂತರ ನೆನೆಸಿದ ಕಾಳುಗಳನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ ಬೇಯಿಸಿಟ್ಟುಕೊಳ್ಳಬೇಕು. ತಣ್ಣಗಾದ ನಂತರ ನೀರನ್ನು ಬಸಿದು ಇಟ್ಟುಕೊಳ್ಳಿ.

ಒಂದು ಕಡಾಯಿಗೆ ಮೂರು ಚಮಚ ಎಣ್ಣೆ ಹಾಕಿ ಕತ್ತರಿಸಿದ ಒಂದು ಈರುಳ್ಳಿ, ಕತ್ತರಿಸಿದ ಒಂದು ಟೊಮ್ಯಾಟೊ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಅಚ್ಚ ಕಾರದ ಪುಡಿ ಮತ್ತು ಅರಿಶಿನ ಸೇರಿಸಿ ಬಾಡಿಸಿಟ್ಟುಕೊಂಡು ತಣ್ಣಗಾದ ನಂತರ ಮಿಕ್ಸರ್ ನಲ್ಲಿ ರುಬ್ಬಿಟ್ಟುಕೊಳ್ಳಿ. ಮತ್ತೆ ಅದೇ ಕಡಾಯಿಗೆ ಮೂರು ಚಮಚ ಎಣ್ಣೆ ಹಾಕಿ. ಸ್ವಲ್ಪ ಬಿಸಿಯಾದ ಬಳಿಕ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಪಲಾವ್ ಎಲೆ, ಏಲಕ್ಕಿ ಹಾಕಿ ಬಾಡಿಸಿ ತದನಂತರ ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ. ಆಮೇಲೆ ಬೇಯಿಸಿಟ್ಟ ಕಾಬೂಲ್ ಕಡಲೆ ಕಾಳುಗಳನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಕುದಿಸಿ. ಕೊನೆಗೆ ಗರಂ ಮಸಾಲೆ, ಚನ್ನ ಮಸಾಲೆ ಪುಡಿ, ಮತ್ತು ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿದರೆ ಚನ್ನ ಮಸಾಲೆ ಸಿದ್ದವಾಗುತ್ತದೆ. ಪೂರಿ ಅತವಾ ಚಪಾತಿಯೊಂದಿಗೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: