ಹೀಗಳೆಯದಿರಿ ಉಪ್ಪಿಟ್ಟು ಎಂದು…

– ಶ್ಯಾಮಲಶ್ರೀ.ಕೆ.ಎಸ್.

ಉಪ್ಪಿಟ್ಟು ಎಂದರೆ ಮಾರು ದೂರ ಹೋಗುವವರೇ ಜಾಸ್ತಿ. ಅದೇಕೋ ಉಪ್ಪಿಟ್ಟು ಅಂದರೆ ಬಹಳ ಜನಕ್ಕೆ ತಾತ್ಸಾರ. ಆದರೆ ಬಿಸಿ ಬಿಸಿ ಉಪ್ಪಿಟ್ಟು ಎಂದರೆ ಪಂಚಪ್ರಾಣ ಎನ್ನುವವರೂ ಇದ್ದಾರೆ. ಕೆಲವರಂತೂ ಉಪ್ಪಿಟ್ಟಿನ ತಟ್ಟೆ ನೋಡಿದ ಕೂಡಲೇ ಯಾರಪ್ಪ ಕಂಡುಹಿಡಿದದ್ದು ಈ ಉಪ್ಪಿಟ್ಟು ಅಂತ ತಮ್ಮಶ್ಟಕ್ಕೆ ತಾವೇ ಬೇಸರ ವ್ಯಕ್ತಪಡಿಸುತ್ತಾರೆ. ಹಾಗಾದ್ರೆ ಯಾರು ಕಂಡು ಹಿಡಿದವರು? ಇನ್ನು ಉಪ್ಪಿಟ್ಟಿನ ದ್ವೇಶಿಗಳು ಉಪ್ಪಿಟ್ಟು ಎಂದರೆ ಕಾಂಕ್ರೀಟ್ ಎಂದು ನಿಶ್ಟುರವಾಗಿ ಹೇಳಿಬಿಡುತ್ತಾರೆ. ಯಾರಿಗೆ ಇಶ್ಟ ಇರಲೀ ಇಲ್ಲದೇ ಇರಲಿ ವಾರಕ್ಕೊಮ್ಮೆಯಾದರೂ ಉಪ್ಪಿಟ್ಟಿನ ಪರಿಮಳ ಬಹಳಶ್ಟು ಮನೆಗಳಲ್ಲಿ ಹರಡಿರುತ್ತದೆಯಲ್ಲವೇ?

ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಬೆಳಗಿನ ತಿಂಡಿಗೆ ಮನೆಮಾತಾಗಿರುವ ಉಪ್ಪಿಟ್ಟು ಹುಟ್ಟಿದ ಬಗೆಯಾದರೂ ಹೇಗೆ ಎನ್ನುವ ಪ್ರಶ್ನೆ ಮೂಡದೇ ಇರದು. ಎರಡನೇ ಮಹಾಯುದ್ದದ ವೇಳೆ(1939-1945) ಅಂದರೆ ಸ್ವಾತಂತ್ರ್ಯ ಬರುವ ಮುನ್ನ ಆಗಿನ ಬ್ರಿಟೀಶ್ ಸರ‍್ಕಾರವು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಕಟಾವಿಗೆ ಬಂದಿದ್ದ ಅಕ್ಕಿಯನ್ನು ಯುದ್ದದಲ್ಲಿ ಹೋರಾಡುವ ಸೈನಿಕರಿಗೆ ಅಕ್ಕಿಯನ್ನು ಹಂಚಿತಂತೆ. ಆ ಸಮಯದಲ್ಲಿ ಮದ್ರಾಸಿನಲ್ಲಿ ಅಕ್ಕಿಯ ಕೊರತೆ ಎದುರಾಯಿತು. ಹೆಚ್ಚಾಗಿ ಇಡ್ಲಿ ದೋಸೆಗೆ ಪ್ರಾಮುಕ್ಯತೆ ನೀಡುತ್ತಿದ್ದ ದಕ್ಶಿಣ ಬಾರತದಲ್ಲಿ ಅಕ್ಕಿಯ ಕೊರತೆಯನ್ನು ನೀಗಿಸಲು ಬರ‍್ಮಾದಿಂದ ಅಕ್ಕಿಯನ್ನು ರಪ್ತು ಮಾಡಲಾಯಿತು. ಯಾವಾಗ ಬರ‍್ಮಾದ ಮೇಲೂ ಜಪಾನ್ ಆಕ್ರಮಣ ನಡೆಸಿತೋ , ಮತ್ತೆ ಅಕ್ಕಿಗೆ ಬರ ಹೆಚ್ಚಾಗತೊಡಗಿತು. ಈ ತೊಡಕನ್ನು ನಿವಾರಿಸಲು ಉತ್ತರಬಾರತದಿಂದ ಗೋದಿಯನ್ನು ತರಿಸಿ ದಕ್ಶಿಣ ಬಾರತಕ್ಕೆ ಪರಿಚಯಿಸಲಾಯಿತು. ಆದರೆ ಆಗ ತರಿಸಿದ ಜನರಿಗೆ ಗೋದಿಯ ಹಿಟ್ಟನ್ನು ತಯಾರಿಸಿ ರೊಟ್ಟಿ ಮಾಡಲು ತುಂಬಾ ಸಮಯ ಬೇಕಾಗಿ, ವ್ಯರ‍್ತ ಶ್ರಮ ಪಡಬೇಕಾಯಿತಂತೆ. ಆಗ ಅಕ್ಕಿಯ ಹಾಗೆ ಬೇಯಿಸಿ ತಿನ್ನುವಂತ ಗಟ್ಟಿ ಗೋದಿಯನ್ನು ತರಿಸುವ ಯೋಜನೆ ನಡೆಸಲಾಗಿ, ಇದಕ್ಕೆ ಪರ‍್ಯಾಯವಾಗಿ ‘ದುರುಮ್’ ಎಂಬ ಗೋದಿಯನ್ನು ಪರಿಚಯಿಸಲಾಯಿತು. ಇದರಿಂದ ತರಿತರಿಯಾದ ರವೆಯನ್ನು ಸಿದ್ದಪಡಿಸಲಾಯಿತು. ಅಲ್ಲಿಂದ ಶುರುವಾಗಿದ್ದೆ ನಮ್ಮ ಉಪ್ಪಿಟ್ಟಿನ ಕತೆ. ಆದರೆ ಇದಕ್ಕೂ ಮುಂಚೆಯೇ ಅಲ್ಲಲ್ಲಿ ವಿರಳವಾಗಿ ಸಣ್ಣ ಸಣ್ಣ ಅಕ್ಕಿನುಚ್ಚಿನಿಂದ ಉಪ್ಪಿಟ್ಟನ್ನು ಮಾಡುತ್ತಿದ್ದರು ಎನ್ನುವ ಅಬಿಪ್ರಾಯವಿದೆ. ಆದರೆ ಯಾವಾಗ ಈ ಬಗೆಯ ಗೋದಿ ರವೆ ಪರಿಚಯವಾಯಿತೋ ಅಂದಿನಿಂದ ಎಲ್ಲಾ ಪಾಕಶಾಲೆ, ಹೋಟೆಲ್, ಮನೆಗಳಲ್ಲಿ ಉಪ್ಪಿಟ್ಟು ಮನೆಮಾತಾಯಿತು. ಈ ರೀತಿಯಾಗಿ ದಕ್ಶಿಣ ಬಾರತದಲ್ಲಿ ಎಲ್ಲರಿಗೂ ಚಿರಪರಿಚಿತವಾದ ಉಪ್ಪಿಟ್ಟು ಅಸ್ತಿತ್ವಕ್ಕೆ ಬಂದಿತು ಎನ್ನಬಹುದು.

ಸಾಮಾನ್ಯವಾಗಿ ನಾವು ದೈನಂದಿನ ತಿಂಡಿಗೆ ಬಳಸುವ ರವೆ ಬನ್ಸಿರವೆ ಅತವಾ ಗೋದಿರವೆ, ಬಾಂಬೆರವೆ ಇತ್ಯಾದಿ. ಗೋದಿರವೆಯಲ್ಲಿ ಪ್ರೋಟೀನ್, ಪೈಬರ್, ಪೋಶಕಾಂಶಗಳ ಇರುವಿಕೆ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ. ಆದ್ದರಿಂದಲೋ ಏನೋ ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಗೋದಿರವೆ ಉಪ್ಪಿಟ್ಟು ನೀಡುವುದು. ಮೊದಲೆಲ್ಲಾ ಗೋದಿರವೆ ಬಳಸಿ ತಯಾರಿಸಿದ ಹುರಿಹಿಟ್ಟು ಎನ್ನುವ ಸಿಹಿ ತಿಂಡಿಯನ್ನು ನೀಡುತ್ತಿದ್ದರು. ಅಕ್ಕಿ ರವೆಯಿಂದ ಮಾಡುವ ಉಪ್ಪಿಟ್ಟು ಕೂಡ ತುಂಬಾ ಸವಿಯಾಗಿರುತ್ತದೆ. ಬೆಳಗಿನ ತಿಂಡಿಗೆ, ಸಂಜೆಯ ಲಗು ಉಪಹಾರಕ್ಕೆ, ವ್ರತಾಚರಣೆಗೆ ಬೇಗ ಬೇಗ ತಯಾರಿಸಲು ಹೆಣ್ಣು ಮಕ್ಕಳಿಗೆ ತಟ್ಟನೆ ನೆನಪಾಗುವುದು ಉಪ್ಪಿಟ್ಟು. ಉಪ್ಪಿಟ್ಟು/ಕಾರಾಬಾತ್ ಜೊತೆಗೆ ಹೊಂದಿಕೆಯಾಗುವ ಸಿಹಿ ತಿಂಡಿ ಶಿರಾ/ಕೇಸರಿಬಾತ್. ಮದುವೆ, ನಾಮಕರಣ ಇತ್ಯಾದಿ ಸಮಾರಂಬಗಳಲ್ಲಿಯೂ ತಿಂಡಿಗೆ ಬಾಣಸಿಗರ ಕೈಯಿಂದ ತಯಾರಾಗುವ ಉಪ್ಪಿಟ್ಟು-ಕೇಸರಿಬಾತ್ ಜೋಡಿಗೆ ಮೊದಲ ಆದ್ಯತೆ. ಹೋಟೆಲುಗಳ ಮೆನು ಪಟ್ಟಿಯಲ್ಲಿ ಸಹ ಉಪ್ಪಿಟ್ಟು-ಕೇಸರಿಬಾತ್ ಅನ್ನು ಒಟ್ಟಿಗೆ ಕರೆಯುವ ಚೌ-ಚೌ ಬಾತ್ ಸೇರಿರುತ್ತದೆ. ಒಟ್ಟಾರೆ ಉಪ್ಪಿಟ್ಟನ್ನು ಬೆಳಗಿನ ತಿಂಡಿಗಳ ಪೈಕಿ ಒಬ್ಬ ಸದಸ್ಯ ಎನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks