ಜೇಡರ ದಾಸಿಮಯ್ಯನ ವಚನದ ಓದು – 8 ನೆಯ ಕಂತು
– ಸಿ.ಪಿ.ನಾಗರಾಜ.
ತೊಡೆಯಲ್ಲಿ ಮುದ್ರೆಯನೊತ್ತಿದಡೇನು
ಅದು ನಡೆಯಲ್ಲಿ ಶುಚಿಯಾಗಬಲ್ಲುದೆ
ಮಡಿಲಲ್ಲಿ ಲಿಂಗವ ಕಟ್ಟಿದಡೇನೊ
ಲೋಕದ ಅಜ್ಞಾನಿತನ ಬಿಡುವುದೆ
ನಡೆ ನುಡಿ ಸತ್ಯಸದಾಚಾರಿಗಳು
ಎಡೆಯೆಡೆಗೊಬ್ಬರು ಕಾಣಾ ರಾಮನಾಥ.
ದೇವರ ಹೆಸರಿನಲ್ಲಿ ವ್ಯಕ್ತಿಯು ಕೆಲವು ಬಗೆಯ ವಸ್ತುಗಳನ್ನು ತೊಟ್ಟ ಮಾತ್ರಕ್ಕೆ ಇಲ್ಲವೇ ಪೂಜೆಯ ಆಚರಣೆಗಳಲ್ಲಿ ತೊಡಗಿದ ಮಾತ್ರಕ್ಕೆ , ಅವನ ಮಯ್ ಮನದಲ್ಲಿರುವ ಕೆಟ್ಟತನ ಹೋಗುವುದಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
ತೊಡೆ+ಅಲ್ಲಿ; ತೊಡೆ=ದೇಹದ ಒಂದು ಅಂಗ; ಮುದ್ರೆ+ಅನ್+ಒತ್ತಿದಡೆ+ಏನು; ಮುದ್ರೆ=ಗುರುತು/ಚಿಹ್ನೆ/ಸಂಕೇತ; ಅನ್=ಅನ್ನು; ಒತ್ತು=ಲೇಪಿಸು/ಸವರು/ಅದುಮು/ಕುಟ್ಟು; ಒತ್ತಿದಡೆ=ಒತ್ತಿದರೆ;
ತೊಡೆಯಲ್ಲಿ ಮುದ್ರೆಯನ್ನು ಒತ್ತುವುದು=ಇದೊಂದು ಬಗೆಯ ಆಚರಣೆ. ವ್ಯಕ್ತಿಯು ತಾನು ಪೂಜಿಸುವ ಕುಲದೇವರ ಸಂಕೇತವಾಗಿ ಕೆಲವು ಬಗೆಯ ಗುರುತುಗಳನ್ನು ತನ್ನ ಮಯ್ ಮೇಲೆ ಹಾಕಿಕೊಳ್ಳುತ್ತಾನೆ. ಉದಾಹರಣೆ: ಗಂದದ ಮರದ ಕೊರಡನ್ನು ನೀರಿನಲ್ಲಿ ತೇಯ್ದಾಗ ಬರುವ ಗಂದದ ಹಸಿಯಿಂದ ದೇವರ ತೊಡುಗೆಗಳಾದ ಶಂಕ, ಚಕ್ರ, ಗದೆ, ತಾವರೆಯ ಹೂವು ಮುಂತಾದ ವಸ್ತುಗಳ ಆಕಾರದ ಚಿಹ್ನೆಗಳನ್ನು ತನ್ನ ಹಣೆ, ಎದೆ, ತೋಳು ಮತ್ತು ತೊಡೆಗಳ ಮೇಲೆ ಹಾಕಿಕೊಳ್ಳುತ್ತಾನೆ; ಕೆಲವೊಮ್ಮೆ ತನ್ನ ಕುಲಗುರುಗಳಿಂದ ಲೋಹದ ಮುದ್ರೆಯಿಂದ ಈ ಬಗೆಯ ಚಿಹ್ನೆಗಳನ್ನು ಹಾಕಿಸಿಕೊಳ್ಳುವುದುಂಟು;
ನಡೆ+ಅಲ್ಲಿ; ನಡೆ=ವರ್‍ತನೆ/ನಡವಳಿಕೆ; ಶುಚಿ+ಆಗಬಲ್ಲುದೆ; ಶುಚಿ=ಕೊಳಕಿಲ್ಲದಿರುವುದು; ಆಗಬಲ್ಲುದೆ=ಆಗುತ್ತದೆಯೆ;
ನಡೆಯಲ್ಲಿ ಶುಚಿಯಾಗುವುದು=ವ್ಯಕ್ತಿಯು ತನ್ನ ಮಯ್ ಮನದಲ್ಲಿ ನಿರಂತರವಾಗಿ ಮೂಡುತ್ತಿರುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದು;
ತೊಡೆಯಲ್ಲಿ ಮುದ್ರೆಯನೊತ್ತಿದಡೇನು, ಅದು ನಡೆಯಲ್ಲಿ ಶುಚಿಯಾಗಬಲ್ಲುದೆ=ವ್ಯಕ್ತಿಯು ತೊಡೆಯಲ್ಲಿ ಮುದ್ರೆಯನ್ನು ಒತ್ತಿಸಿಕೊಂಡ ಮಾತ್ರಕ್ಕೆ, ಅವನ ವರ್‍ತನೆಯಲ್ಲಿ ಒಳ್ಳೆಯತನ ಮೂಡುವುದಿಲ್ಲ. ಏಕೆಂದರೆ ತೊಡೆಯ ಮೇಲಿನ ಮುದ್ರೆಯು ಬಹಿರಂಗದ ಆಚರಣೆಯೇ ಹೊರತು ಅಂತರಂಗದ ಮನಸ್ಸಿನ ಕ್ರಿಯೆಯಲ್ಲ; ಆದ್ದರಿಂದ ತೊಡೆಯ ಮುದ್ರೆಗೂ ವ್ಯಕ್ತಿಯ ಒಳ್ಳೆಯತನಕ್ಕೂ ಯಾವುದೇ ನಂಟಿಲ್ಲ. ವ್ಯಕ್ತಿಯ ಮನಸ್ಸಿನಲ್ಲಿ ಮೂಡುವ ಅರಿವು ಮತ್ತು ಎಚ್ಚರದಿಂದ ಮಾತ್ರ ಒಳ್ಳೆಯ ನಡೆನುಡಿಯು ರೂಪುಗೊಳ್ಳುತ್ತದೆ;
‘ಅರಿವು’ ಎಂದರೆ “ಲೋಕಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ವಾಸ್ತವ/ಯಾವುದು ಕಲ್ಪಿತ” ಎಂಬುದನ್ನು ಒರೆಹಚ್ಚಿ ನೋಡಿ, ತನ್ನನ್ನು ಒಳಗೊಂಡಂತೆ ಲೋಕದ ಜನಸಮುದಾಯಕ್ಕೆ ಒಳಿತನ್ನು ಮಾಡುವ ಮಾತಿನ ಮತ್ತು ದುಡಿಮೆಯ ಸ್ವರೂಪವನ್ನು ತಿಳಿಯುವುದು:
‘ಎಚ್ಚರ’ ಎಂದರೆ ಜಾತಿ, ಮತ , ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ , ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು.
ಮಡಿಲು+ಅಲ್ಲಿ; ಮಡಿಲು=ಸೊಂಟ/ನಡು; ಲಿಂಗ=ದೇವರಾದ ಶಿವನ ಸಂಕೇತವಾದ ವಸ್ತು; ಕಟ್ಟಿದಡೆ+ಏನೊ; ಕಟ್ಟು=ತೊಡು; ಕಟ್ಟಿದಡೆ=ತೊಟ್ಟುಕೊಂಡರೆ; ಏನೊ=ಏನಾಗುವುದು;
ಮಡಿಲಲ್ಲಿ ಲಿಂಗವನ್ನು ಕಟ್ಟಿಕೊಳ್ಳುವುದು=ವ್ಯಕ್ತಿಯು ತಾನೊಬ್ಬ ಶಿವಶರಣನೆಂದು ಸಮಾಜಕ್ಕೆ ತಿಳಿಸುವುದಕ್ಕಾಗಿ ಶಿವನ ಸಂಕೇತವಾದ ಲಿಂಗವನ್ನು ಸೊಂಟದಲ್ಲಿ ಇಲ್ಲವೇ ಕೊರಳಿನಲ್ಲಿ ಕಟ್ಟಿಕೊಳ್ಳುವುದು;
ಲೋಕ=ಜಗತ್ತು/ಪ್ರಪಂಚ; ಅಜ್ಞಾನ=ತಿಳುವಳಿಕೆಯಿಲ್ಲದಿರುವುದು; ಅಜ್ಞಾನಿತನ=ತಿಳುವಳಿಕೆಯಿಲ್ಲದ ನಡೆನುಡಿ; ಲೋಕದ ಅಜ್ಞಾನಿತನ=ವ್ಯಕ್ತಿಯು ದಿನನಿತ್ಯದ ಜೀವನದಲ್ಲಿ ಕೆಟ್ಟ ನಡೆನುಡಿಯಿಂದ ಬಾಳುತ್ತಿರುವುದು; ಬಿಡು=ತೊರೆ/ತ್ಯಜಿಸು;
ಮಡಿಲಲ್ಲಿ ಲಿಂಗವ ಕಟ್ಟಿದಡೇನೊ, ಲೋಕದ ಅಜ್ಞಾನಿತನ ಬಿಡುವುದೆ=ವ್ಯಕ್ತಿಯು ಮಡಿಲಲ್ಲಿ ಲಿಂಗವನ್ನು ಕಟ್ಟಿಕೊಂಡ ಮಾತ್ರಕ್ಕೆ ಅವನಲ್ಲಿರುವ ಕೆಟ್ಟ ನಡೆನುಡಿಗಳು ತೊಲಗುವುದಿಲ್ಲ. ಏಕೆಂದರೆ ಲಿಂಗವೆಂಬುದು ಒಂದು ಸಂಕೇತದ ವಸ್ತುವೇ ಹೊರತು ಮತ್ತೇನಲ್ಲ. ವ್ಯಕ್ತಿಯು ಲಿಂಗವನ್ನು ಒಳ್ಳೆಯ ನಡೆನುಡಿಗಳಿಗೆ ಒಂದು ಪ್ರೇರಣೆಯನ್ನಾಗಿ ಪಡೆದು, ಸದಾಕಾಲ ಅರಿವು ಮತ್ತು ಎಚ್ಚರದಿಂದ ಬಾಳಲು ತೊಡಗಿದಾಗ ಮಾತ್ರ ಅವನ ಮಯ್ ಮನದಲ್ಲಿರುವ ಕೆಟ್ಟತನ ಇಲ್ಲವಾಗುತ್ತದೆ;
ನುಡಿ=ಮಾತು; ಸತ್ಯ=ದಿಟ/ನಿಜ; ಸದಾಚಾರಿ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ; ಎಡೆ+ಎಡೆಗೆ+ಒಬ್ಬರು; ಎಡೆ=ಜಾಗ/ನೆಲೆ; ಎಡೆಯೆಡೆಗೆ=ಅಲ್ಲಲ್ಲಿ/ಕೆಲವು ಕಡೆಗಳಲ್ಲಿ ಮಾತ್ರ; ಕಾಣ್=ನೋಡು; ಕಾಣಾ=ತಿಳಿದು ನೋಡು; ರಾಮನಾಥ=ದೇವರಾದ ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ;
ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ=ದೇವರನ್ನು ಬಹಿರಂಗದಲ್ಲಿ ಬಹುಬಗೆಗಳಲ್ಲಿ ಪೂಜಿಸುವ ವ್ಯಕ್ತಿಗಳು ಹೆಚ್ಚಾಗಿ ಕಾಣಿಸುತ್ತಾರೆಯೇ ಹೊರತು ಒಳ್ಳೆಯ ನಡೆನುಡಿಯುಳ್ಳವರ ಸಂಕೆಯು ಯಾವಾಗಲೂ ಕಡಿಮೆಯಿರುತ್ತದೆ. ಏಕೆಂದರೆ ಜನಸಮುದಾಯದಲ್ಲಿ ಹೆಚ್ಚಿನವರ ಪಾಲಿಗೆ ದೇವರು “ತಮ್ಮ ಜೀವನದಲ್ಲಿನ ಸಂಕಟಗಳನ್ನು ಪರಿಹರಿಸಿ, ಸಂಪತ್ತನ್ನು ಕೊಡುವವನಾಗಿದ್ದಾನೆಯೇ ಹೊರತು, ತಮ್ಮ ನಡೆನುಡಿಯಲ್ಲಿನ ಕೆಟ್ಟತನವನ್ನು ಹೋಗಲಾಡಿಸಿಕೊಳ್ಳಲು ನೆರವಾಗುವ ವ್ಯಕ್ತಿಯಾಗಿಲ್ಲ.” ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;
(ಚಿತ್ರ ಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು