ಕವಿತೆ: ಬಾವಯಾನ

– ಮಹೇಶ ಸಿ. ಸಿ.

ಮರುಗದಿರು ಮನವೇ
ಬಾಲಿಶ ತೊಂದರೆಗೆ
ಮುಂದೊಂದು ಯುಗವುಂಟು
ನಿನ್ನ ಬಾಳ ಬವಕೆ

ನೀ ತಂದ ಪುಣ್ಯವು
ನಿನಗಶ್ಟೆ ಮೀಸಲಿದೆ
ಬೇಯುವುದು ತರವಲ್ಲ
ಚಿಂತೆಯ ಚಿತೆಯಲ್ಲಿ

ನೆನೆಪಿನ ಕಹಿಯನ್ನು
ಮರೆಸುವ ಗಳಿಗೆ
ಬೇಕೆನಿಸಿದೆ ನನಗೀಗ
ನೊಂದು-ಬೆಂದ ಮನಕೆ

ಬಾವಜೀವಿಯು ನಾನು
ಬಾವದಲೆಯ ಅರಸಿ
ಊರೆಲ್ಲಾ ಸುತ್ತಿದರು
ಎನಗದು ಅದೆಂದು ಒಲಿಯುವುದೇ

ತಪ್ಪುಗಳ ಸರಮಾಲೆ
ಮೈಯೆಲ್ಲಾ ಹರಡಿದೆ
ಅಪರಾದ ಪ್ರಜ್ನೆಯೂ
ಬಹುಬೇಗ ಕಳೆವುದುಂಟೆ

ಸಾಗುವ ದಾರಿಯಲಿ
ಎಡವಿ ಬಿದ್ದಾಗಿದೆ
ಮೈಕೊಡವಿ ಏಳಲು
ಎನಗೆ ಕಲಿಯಲಾಗುವುದೆ

ನನಗಾಗಿ ಯಾರಿಲ್ಲ
ತನಗೆಂದು ಏನಿಲ್ಲ
ಎನ್ನ ಕಾಯುವುದು ಏನೋ
ಅವನ ಪಾದದಿ ಮೊರೆವೆ

( ಚಿತ್ರ ಸೆಲೆ: wikimedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks