ಜೇಡರ ದಾಸಿಮಯ್ಯನ ವಚನದ ಓದು – 9 ನೆಯ ಕಂತು

– ಸಿ.ಪಿ.ನಾಗರಾಜ.

ಮಂಡೆಯ ಬೋಳಿಸಿಕೊಂಡು
ಮಡಿದು ಗೋಸಿಯ ಕಟ್ಟಿದಡೇನು
ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ
ಭಂಡರನೊಲ್ಲನೆಮ್ಮ ರಾಮನಾಥ.

ದುಡಿಮೆಯನ್ನು ಮಾಡದೆ, ಇತರರ ಮುಂದೆ ಕಯ್ ಒಡ್ಡಿ ಬೇಡಿ ಪಡೆದು, ಜೀವನವನ್ನು ನಡೆಸುವ ವ್ಯಕ್ತಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ.

ಮಂಡೆ=ತಲೆ; ಬೋಳಿಸು=ಕೂದಲನ್ನು ತೆಗೆಸು; ಮಡಿ=ಮಡಿಕೆಗಳನ್ನಾಗಿ ಜೋಡಿಸಿ; ಮಡಿದು=ತುಂಡು ಬಟ್ಟೆಯೊಂದನ್ನು ಮಡಿಕೆಗಳನ್ನಾಗಿ ಮಾಡಿ ಜೋಡಿಸಿಕೊಂಡು; ಗೋಸಿ=ಲಂಗೋಟಿ/ಕಚ್ಚೆಪಡೆ; ಕಟ್ಟಿದಡೆ+ಏನು; ಕಟ್ಟು=ತೊಡು;

ಮಂಡೆಯ ಬೋಳಿಸಿಕೊಂಡು, ಮಡಿದು ಗೋಸಿಯ ಕಟ್ಟಿದಡೇನು=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ತಲೆಯ ಕೂದಲನ್ನು ಬೋಳಿಸಿಕೊಂಡು, ಮಯ್ ಮೇಲೆ ಉಟ್ಟಿರುವ ಬಟ್ಟೆಯೆಲ್ಲವನ್ನೂ ಕಳಚಿ, ಲಂಗೋಟಿಯನ್ನು ಕಟ್ಟಿಕೊಂಡ ಮಾತ್ರಕ್ಕೆ ವ್ಯಕ್ತಿಯ ನಡೆನುಡಿಯಲ್ಲಿ ಯಾವುದೇ ಬದಲಾವಣೆಯು ಉಂಟಾಗುವುದಿಲ್ಲ. ಏಕೆಂದರೆ ಇಂತಹ ಲಂಗೋಟಿ ಉಡುಗೆಯು ವ್ಯಕ್ತಿಯು ತನ್ನನ್ನು ತಾನು “ಸರ್‍ವಸಂಗ ಪರಿತ್ಯಾಗಿ, ಯಾವುದೇ ಕಾಮನೆಗಳಿಲ್ಲದವನು” ಎಂಬುದನ್ನು ಸಮಾಜದಲ್ಲಿ ತೋರಿಸಿಕೊಳ್ಳುವುದಕ್ಕಾಗಿ ಬಹಿರಂಗದಲ್ಲಿ ಮಾಡಿಕೊಂಡಿರುವ ಬದಲಾವಣೆಯೇ ಹೊರತು, ಅವನ ಅಂತರಂಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲ;

ಕಂಡಕಂಡವರು=ಇತರರು/ಸಮಾಜದಲ್ಲಿನ ಜನರು; ಕಯ್+ಒಡ್ಡಿ; ಒಡ್ಡು=ಮುಂದೆ ಇಡು/ಎದುರಿಗೆ ಹಿಡಿ; ಕಯ್ಯೊಡ್ಡಿ=ಕಯ್ ಅನ್ನು ಚಾಚಿ; ಬೇಡು=ಯಾಚಿಸು/ಕೇಳು; ಭಂಡರನ್+ಒಲ್ಲನ್+ಎಮ್ಮ; ಭಂಡ=ನಾಚಿಕೆಯಿಲ್ಲದವನು/ಲಜ್ಜೆಗೇಡಿ; ಒಲಿ=ಒಪ್ಪು/ಮೆಚ್ಚು; ಒಲ್ಲನ್=ಅವನು ಒಪ್ಪಿಕೊಳ್ಳುವುದಿಲ್ಲ/ಅವನು ಮೆಚ್ಚಿಕೊಳ್ಳುವುದಿಲ್ಲ; ಎಮ್ಮ=ನಮ್ಮ; ರಾಮನಾಥ=ದೇವರಾದ ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ;

ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ವ್ಯಕ್ತಿಯು ತನ್ನ ಮಯ್ ಮನವನ್ನು ಒಗ್ಗೂಡಿಸಿ ಕಾಯಕವನ್ನು ಮಾಡಿ, ತನ್ನ ಅನ್ನವನ್ನು ತಾನು ಗಳಿಸಿ, ಸ್ವಾವಲಂಬಿಯಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳದೆ, ಇತರರ ಮುಂದೆ ಅಂಗಲಾಚಿ ಬೇಡುವುದು ನಾಚಿಕೆಗೇಡಿನ ಬದುಕಾಗುತ್ತದೆ. ದುಡಿದು ತಿನ್ನದ ಮಯ್ಗಳ್ಳರನ್ನು ದೇವರು ಮೆಚ್ಚುವುದಿಲ್ಲ.

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಕೂಡಿದ ಕಾಯಕದ ಬದುಕಿಗೆ ಮಹತ್ವವನ್ನು ನೀಡಿದ್ದರು. ಅವರ ಪಾಲಿಗೆ ‘ಕಾಯಕ’ ಎನ್ನುವುದು ಯಾವುದೋ ಒಂದು ಕಸುಬು/ಕೆಲಸ/ದುಡಿಮೆ ಮಾತ್ರ ಆಗಿರಲಿಲ್ಲ. ವ್ಯಕ್ತಿಯು ಮಾಡುವ ದುಡಿಮೆಯು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ರೀತಿಯಲ್ಲಿರಬೇಕು. ವ್ಯಕ್ತಿಯು ತನ್ನ ಬದುಕನ್ನು ಕಾಯಕದ ಮೂಲಕ ಕಟ್ಟಿಕೊಳ್ಳಬೇಕೆ ಹೊರತು, ಮತ್ತೊಬ್ಬರನ್ನು ಆಶ್ರಯಿಸಿ ಬಾಳಬಾರದು ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *