ಚಂದಿಮರಸನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ.

ಜಾಣನಯ್ಯಾ ಸದ್ಗುರುವ ನಂಬುವಲ್ಲಿ
ಜಾಣನಯ್ಯಾ ವಿಷಯಂಗಳ ಬಿಡುವಲ್ಲಿ
ಜಾಣನಯ್ಯಾ ಅವಿದ್ಯವ ಗೆಲ್ಲುವಲ್ಲಿ
ಜಾಣನಯ್ಯಾ ತನ್ನ ತಾನರಿವಲ್ಲಿ
ಜಾಣನಯ್ಯಾ ನಿಜಗುಣನ ಶ್ರೀಪಾದವ ಪಿಡಿವಲ್ಲಿ
ಜಾಣನಯ್ಯಾ ನಮ್ಮ ಸಿಮ್ಮಲಿಗೆಯ ಚೆನ್ನರಾಮಾ.

ವ್ಯಕ್ತಿಯು ತನ್ನ ನಡೆನುಡಿಗಳನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡು ಬಾಳುವುದಕ್ಕಾಗಿ ಜಾಣತನದಿಂದ ಆಯ್ಕೆಗಳನ್ನು ಹೇಗೆ ಮಾಡಿಕೊಂಡಿರುತ್ತಾನೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಜಾಣನ್+ಅಯ್ಯಾ; ಜಾಣ=ಚತುರ/ಬುದ್ದಿವಂತ; ಅಯ್ಯಾ=ಗಂಡಸನ್ನು ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ; ಸದ್ಗುರು=ಒಳ್ಳೆಯ ಗುರು. ವಿದ್ಯೆಯನ್ನು ಕಲಿಯಲೆಂದು ತನ್ನ ಬಳಿ ಬಂದ ವ್ಯಕ್ತಿಗಳಿಗೆ ಅಕ್ಕರದ ತಿಳಿವು ಮತ್ತು ಹತಾರಗಳ ಬಳಕೆಯ ತರಬೇತಿಯನ್ನು ನೀಡುವುದರ ಜತೆಗೆ, ಅವರ ವ್ಯಕ್ತಿತ್ವದಲ್ಲಿ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುವ ಗುರುವನ್ನು ‘ಸದ್ಗುರು’ ಎಂದು ಕರೆಯುತ್ತಾರೆ;

‘ಸಾಮಾಜಿಕ ಅರಿವು’ ಎಂದರೆ “ಲೋಕಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ವಾಸ್ತವ/ಯಾವುದು ಕಲ್ಪಿತ” ಎಂಬುದನ್ನು ಒರೆಹಚ್ಚಿ ನೋಡಿ, ತನ್ನನ್ನು ಒಳಗೊಂಡಂತೆ ಲೋಕದ ಜನಸಮುದಾಯಕ್ಕೆ ಒಳಿತನ್ನು ಮಾಡುವ ಮಾತಿನ ಮತ್ತು ದುಡಿಮೆಯ ಸ್ವರೂಪವನ್ನು ತಿಳಿಯುವುದು;

‘ಸಾಮಾಜಿಕ ಎಚ್ಚರ’ ಎಂದರೆ ಜಾತಿ, ಮತ, ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ, ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು.

ನಂಬು=ನೆಚ್ಚು/ನೆಮ್ಮು/ಅವಲಂಬಿಸು/ಆಶ್ರಯಿಸು; ನಂಬುವಲ್ಲಿ=ನಂಬುವುದರಲ್ಲಿ;

ಜಾಣನಯ್ಯಾ ಸದ್ಗುರುವ ನಂಬುವಲ್ಲಿ=ವ್ಯಕ್ತಿಯ ಹುಟ್ಟಿಗೆ ತಂದೆತಾಯಿ ಕಾರಣರಾಗಿದ್ದರೆ, ವ್ಯಕ್ತಿಯ ವ್ಯಕ್ತಿತ್ವ ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳಲು ಒಳ್ಳೆಯ ಗುರು ನೆರವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸದ್ಗುರುವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ವ್ಯಕ್ತಿಯು ಜಾಣನಾಗಿದ್ದಾನೆ.

ವಿಷಯ=ಮಯ್ ಮನದಲ್ಲಿ ನಿರಂತರವಾಗಿ ತುಡಿಯುತ್ತಿರುವ ಒಳಿತು ಕೆಡುಕಿನ ಒಳಮಿಡಿತಗಳು; ಬಿಡು=ತೊರೆ/ತ್ಯಜಿಸು; ಬಿಡುವಲ್ಲಿ=ಬಿಡುವುದರಲ್ಲಿ;

ಜಾಣನಯ್ಯಾ ವಿಷಯಂಗಳ ಬಿಡುವಲ್ಲಿ=ವ್ಯಕ್ತಿಯು ತನ್ನ ಮನದಲ್ಲಿ ತುಡಿಯುತ್ತಿರುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ತ್ಯಜಿಸಿ, ತನ್ನ ಮಯ್ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಲ್ಲಿ ಜಾಣನಾಗಿದ್ದಾನೆ;

ವಿದ್ಯೆ=ಅರಿವು/ತಿಳುವಳಿಕೆ; ಅವಿದ್ಯೆ=ಕೆಟ್ಟ ವಿದ್ಯೆ. ವ್ಯಕ್ತಿಯು ತಾನು ಕಲಿತ ವಿದ್ಯೆಯಿಂದ ಸಹಮಾನವರನ್ನು ವಂಚಿಸಿ, ಸಮಾಜಕ್ಕೆ ಕೇಡನ್ನು ಬಗೆಯುತ್ತಿದ್ದರೆ, ಅಂತಹ ವಿದ್ಯೆಯು ಅವಿದ್ಯೆಯಾಗುತ್ತದೆ; ಗೆಲ್ಲು=ಜಯಿಸು/ವಿಜಯ; ಗೆಲ್ಲುವಲ್ಲಿ=ಗೆಲ್ಲುವುದರಲ್ಲಿ;

ಜಾಣನಯ್ಯಾ ಅವಿದ್ಯವ ಗೆಲ್ಲುವಲ್ಲಿ=ವ್ಯಕ್ತಿಯು ತಾನು ಕಲಿತ ವಿದ್ಯೆಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯದೆ, ಒಳಿತನ್ನು ಮಾಡುವುದರಲ್ಲಿ ಎಚ್ಚರದಿಂದಿದ್ದು, ತನ್ನ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದರಲ್ಲಿ ಜಾಣನಾಗಿದ್ದಾನೆ.

ತನ್ನ=ತನ್ನನ್ನು; ತಾನ್+ಅರಿವಲ್ಲಿ; ಅರಿವಲ್ಲಿ=ತಿಳಿಯುವುದರಲ್ಲಿ;

“ತನ್ನನ್ನು ತಾನು ಅರಿಯುವುದು” ಎಂದರೆ ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುತ್ತಿರುವ ಒಳಿತು ಕೆಡುಕಿನ ಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಕ್ರಿಯೆಗಳಿಗೂ ನಿಸರ್‍ಗ ಮತ್ತು ಮಾನವರ ನಡೆನುಡಿಗಳೇ ಕಾರಣವೆಂಬ ವಾಸ್ತವವನ್ನು ಅರಿತುಕೊಂಡು ಒಳ್ಳೆಯ ನಡೆನುಡಿಯಿಂದ ಬಾಳುವುದು;

ಜಾಣನಯ್ಯಾ ತನ್ನ ತಾನರಿವಲ್ಲಿ=ಮಾನವ ಜೀವಿಯ ವ್ಯಕ್ತಿತ್ವದ ಇತಿಮಿತಿಗಳನ್ನು ಮತ್ತು ಜಗತ್ತಿನ ವಾಸ್ತವವನ್ನು ಅರಿತುಕೊಂಡು ಬಾಳುವುದರಲ್ಲಿ ವ್ಯಕ್ತಿಯು ಜಾಣನಾಗಿದ್ದಾನೆ;

ನಿಜಗುಣ=ದೇವರು/ಶಿವನ ಮತ್ತೊಂದು ಹೆಸರು; ಶ್ರೀಪಾದ=ಮಂಗಳಕರವಾದ ಪಾದ; ಪಿಡಿ=ಹಿಡಿ;

ಜಾಣನಯ್ಯಾ ನಿಜಗುಣನ ಶ್ರೀಪಾದವ ಪಿಡಿವಲ್ಲಿ=ಒಳ್ಳೆಯ ನಡೆನುಡಿಗಳ ಸಂಕೇತವಾದ ಶಿವನನ್ನು ಆಶ್ರಯಿಸುವಲ್ಲಿ ಜಾಣನಾಗಿದ್ದಾನೆ;

ಸಿಮ್ಮಲಿಗೆಯ ಚೆನ್ನರಾಮ=ಶಿವನ ಮತ್ತೊಂದು ಹೆಸರು/ಚಂದಿಮರಸನ ವಚನಗಳ ಅಂಕಿತನಾಮ;

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: