ಪೀಡೆನಾಶಕಗಳ ಜಗತ್ತು – 1 ನೇ ಕಂತು

–  ರಾಜಬಕ್ಶಿ ನದಾಪ.

ಹಸಿರು ಕ್ರಾಂತಿಯ ನಂತರ ದೇಸಿ ತಳಿಗಳು ಮಾಯವಾಗಿ ಈ ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು ಹೆಚ್ಚಾದಂತೆ ಕ್ರುಶಿಯಲ್ಲಿ ಶೀಲಿಂದ್ರಗಳು, ಕೀಟಗಳು ಮತ್ತು ಕಳೆಗಳಂತಹ ಪೀಡೆಗಳ ಸಂಕ್ಯೆಯು ಕೂಡ ಹೆಚ್ಚಾಗುತ್ತ ಬಂದಿತು. ಒಂದು ಅಂದಾಜಿನ ಪ್ರಕಾರ ಈ ಪೀಡೆಗಳ ಹಾವಳಿಯಿಂದ ಪ್ರತಿವರ‍್ಶ ಸುಮಾರು 25 ರಿಂದ 30 ಪ್ರತಿಶತ ಬೆಳೆ ಹಾಳಾಗುತ್ತಿದೆ. ಹೀಗಿರುವಾಗ ಇವುಗಳ ನಿಯಂತ್ರಣಕ್ಕಾಗಿ ರಾಸಾಯನಿಕ ಪೀಡೆನಾಶಕಗಳ ಬಳಕೆ ಕೂಡ ಅನಿವಾರ‍್ಯವಾಗಿದೆ. ಈಗ ಸದ್ಯದ ಪರಿಸ್ತಿತಿಯಲ್ಲಿ ಇವುಗಳ ಹೊರತು ಕ್ರುಶಿ ಅಸಾದ್ಯ ಎನ್ನುವ ಪರಿಸ್ತಿತಿ ಬಂದೊದಗಿದೆ. ಹೀಗೆ ಅಸ್ತಿತ್ವಕ್ಕೆ ಬಂದ ಈ ರಾಸಾಯನಿಕಗಳಲ್ಲಿ ಹಲವಾರು ವಿದಗಳಿವೆ. ಈ ಪೀಡೆನಾಶಕಗಳನ್ನು ಶಿಲೀಂದ್ರನಾಶಕಗಳು, ಕೀಟನಾಶಕಗಳು, ಕಳೆನಾಶಕಗಳು, ಜೇಡನಾಶಕಗಳು, ದುಂಡಾಣುನಾಶಕಗಳು ಹೀಗೆ ಅವುಗಳು ನಾಶಪಡಿಸುವ ಪೀಡೆಗಳ ಆದಾರದ ಮೇಲೆ ಸುಮಾರು ವಿದವಾಗಿ ವಿಂಗಡಿಸಬಹುದು. ಇಂದು ಇವುಗಳ ಮಾರಾಟ ಒಂದು ದೊಡ್ಡ ಉದ್ಯಮವಾಗಿ ಬೆಳೆದು ಹಲವಾರು ದೈತ್ಯ ಕಂಪನಿಗಳ ಸಂಶೋದನೆಯಿಂದ ಸಾಕಶ್ಟು ಸಂಕ್ಯೆಯ ಪೀಡೆನಾಶಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಳೆದ ವರ‍್ಶ ಬಾರತದ ಪೀಡೆನಾಶಕಗಳ ಮಾರುಕಟ್ಟೆ ಗಾತ್ರ ಸುಮಾರು ರೂ.2.29 ಲಕ್ಶ ಕೋಟಿ ತಲುಪಿದೆ.

ಈ ರಾಸಾಯನಿಕ ಪೀಡೆನಾಶಕಗಳ ಇತಿಹಾಸ ನೋಡಿದಾಗ, ಇದರ ಮೊದಲ ಹೆಜ್ಜೆ ಗುರುತು ಮೂಡಿದ್ದು ಪೌಲ್ ಮುಲ್ಲರ್ ಎಂಬಾತನಿಂದ. ಈತ 1948 ರಲ್ಲಿ ನೋಬೆಲ್ ಪಡೆದಿದ್ದು ಡಿ.ಡಿ.ಟಿ (Dichlorodiphenyltrichloroethane)ಯ ಕೀಟನಾಶಕ ಗುಣಗಳನ್ನು ಪತ್ತೆ ಮಾಡಿದ್ದಕ್ಕಾಗಿ. ಎರಡನೇ ಮಹಾಯುದ್ದದಲ್ಲಿ ಇದನ್ನು ಮಲೇರಿಯಾ ನಿಯಂತ್ರಣಕ್ಕಾಗಿ ಹೆಚ್ಚಾಗಿ ಬಳಸಲಾಗಿತ್ತು. ಯುದ್ದದ ನಂತರ ಇದು ಕ್ರುಶಿಯಲ್ಲಿ ತೀವ್ರಗತಿಯಲ್ಲಿ ಬಳಕೆಯಾಗತೊಡಗಿತು. ಬಾರತದಲ್ಲಿ 1948ರಲ್ಲಿ ರಾಸಾಯನಿಕ ಪೀಡೆನಾಶಕಗಳ ಬಳಕೆ ಪ್ರಾರಂಬವಾಗಿ 1952 ರಲ್ಲಿ ಕೋಲ್ಕತ್ತದಲ್ಲಿ ಉತ್ಪಾದನಾ ಕಾರ‍್ಕಾನೆಯೂ ಕೂಡ ಪ್ರಾರಂಬವಾಯಿತು. 1960ರಲ್ಲಿ ಹಸಿರು ಕ್ರಾಂತಿಯ ಪರಿಣಾಮ ಇವುಗಳ ಬಳಕೆ ಇನ್ನಶ್ಟು ಹೆಚ್ಚಾಯಿತು.

ಇಂದು ನಾವು ಪೀಡೆನಾಶಕಗಳನ್ನು ಹೆಚ್ಚಾಗಿ ಬಳಸುತ್ತಿದ್ದರೂ ಅವು ಕಾರ‍್ಯನಿರ‍್ವಹಿಸುವ ಪ್ರಕ್ರಿಯೆ ಬಗ್ಗೆ ನಮ್ಮಲ್ಲಿ ಬಹುಪಾಲು ಜನರಿಗೆ ಅರಿವು ಕಡಿಮೆ. ನಮಗೆ ಪೀಡೆನಾಶಕ ಬಳಸಿದರೆ ಪೀಡೆ ಸತ್ತು ಹೋಗುತ್ತದೆ ಎಂಬುದು ಮಾತ್ರ ಗೊತ್ತು ಆದರೆ ಪೀಡೆನಾಶಕಗಳ ಕಾರ‍್ಯವೈಕರಿ, ಪೀಡೆ ಹೇಗೆ ಸಾಯುತ್ತದೆ? ಏಕೆ ಸಾಯುತ್ತದೆ? ಪೀಡೆನಾಶಕದ ಪ್ರತಿರೋದಕತೆ ಎಂದರೇನು? ಎಂಬುದು ಗೊತ್ತಿಲ್ಲ. ರೈತರು ತಮ್ಮ ಬೆಳೆಗಳಿಗೆ ಸಿಂಪಡಣೆ ಮಾಡುವ ಮೊದಲು ಪೀಡೆನಾಶಕ ಕಂಪನಿಯ ಉದ್ಯೋಗಿಗಳು, ಪೀಡೆನಾಶಕ ಮಾರಾಟಗಾರರು, ಕ್ರುಶಿ ವಿದ್ಯಾರ‍್ತಿಗಳು, ಕ್ರುಶಿ ವಿಶ್ವವಿದ್ಯಾಲಯದ ಪ್ರಾದ್ಯಾಪಕರು ಹಾಗೂ ಈ ಕ್ಶೇತ್ರಕ್ಕೆ ಸಂಬಂದಿಸಿದವರಲ್ಲಿ ಸಲಹೆ ತೆಗೆದುಕೊಳ್ಳುವುದು ಸಹಜ. ಹೀಗಿರುವಾಗ ಪೀಡೆನಾಶಕಗಳ ಪ್ರತಿರೋದಕತೆಯ ಬಗ್ಗೆ ಅರಿತು, ರೈತರಿಗೆ ಸಮಂಜಸ ಸಿಂಪಡಣಾ ಸಲಹೆ ನೀಡಬೇಕಾದಲ್ಲಿ ಈ ಪೀಡೆನಾಶಕಗಳ ಪ್ರತಿರೋದಕತೆ ಹಾಗೂ ಅವುಗಳ ವಿಂಗಡಣೆ ಬಗ್ಗೆ ಅರಿಯುವುದು ಬಹುಮುಕ್ಯ.

ಪೀಡೆನಾಶಕಗಳ ಪ್ರತಿರೋದಕತೆ
ಒಂದು ನಿರ‍್ದಿಶ್ಟ ಜಾತಿಯ ಪೀಡೆಯ ಸಂತತಿಯು ಒಂದು ನಿರ‍್ದಿಶ್ಟ ಪೀಡೆನಾಶಕಕ್ಕೆ ವ್ಯಕ್ತಪಡಿಸುವ ಸಂವೇದನೆಯನ್ನು ಕಾಲಕ್ರಮೇಣವಾಗಿ ಕಳೆದುಕೊಂಡು, ಆ ಪೀಡೆನಾಶಕವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದಾಗಲೂ ಕೂಡ ಪೀಡೆ ನಿಯಂತ್ರಣವಾಗದೇ ಇರುವುದನ್ನು ‘ಪ್ರತಿರೋದಕತೆ’ ಎಂದು ಕರೆಯಬಹುದು. ಸರಳವಾಗಿ ಹೇಳುವುದಾದರೆ ‘ಪೀಡೆಯನ್ನು ನಿಯಂತ್ರಿಸುವಲ್ಲಿ, ಪೀಡೆನಾಶಕದ ವೈಪಲ್ಯ’ ಎನ್ನಬಹುದು. ನಾವು ಒಂದೇ ಕಾರ‍್ಯವೈಕರಿಯ ಪೀಡೆನಾಶಕಗಳನ್ನು ನಿರಂತರವಾಗಿ ಪುನಾರವರ‍್ತಿಸಿ ಬಳಸುವುದರಿಂದ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಪೀಡೆನಾಶಕವನ್ನು ಬಳಸುವುದರಿಂದ ಪೀಡೆಯ ಸಂತತಿಯು ನಿದಾನವಾಗಿ ತನ್ನ ವಂಶವಾಹಿನಿಯಲ್ಲಿ ಕೆಲವೊಂದು ಮಾರ‍್ಪಾಡುಗಳನ್ನು ಮಾಡಿಕೊಂಡು ಆ ಒಂದು ಗುಂಪಿನ ಪೀಡೆನಾಶಕಗಳಿಗೆ ಸ್ಪಂದಿಸುವುದನ್ನು ಕಡಿಮೆಗೊಳಿಸುತ್ತವೆ. ಕೊನೆಗೊಂದು ದಿನ ಆ ಪೀಡೆನಾಶಕ ಸಂಪೂರ‍್ಣ ವಿಪಲವಾಗುತ್ತದೆ. ರೈತರು ಪೀಡೆನಾಶಕದ ಉತ್ತಮ ಪಲಿತಾಂಶ ಪಡೆಯುವ ಅವಸರದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಪೀಡೆನಾಶಕವನ್ನು ಬಳಸುತ್ತಾರೆ ಹಾಗೂ ಒಂದು ಪೀಡೆನಾಶಕ ಉತ್ತಮ ಪಲಿತಾಂಶ ನೀಡಿದಾಗ ಪದೇ ಪದೇ ಅದನ್ನೇ ಬಳಸುತ್ತಾರೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವುದು ಉಂಟು. ಈ ರೀತಿಯ ಅವೈಜ್ನಾನಿಕ ಬಳಕೆ ಆರಂಬದಲ್ಲಿ ಉತ್ತಮ ಪಲಿತಾಂಶ ನೀಡಿದರೂ ನಂತರದಲ್ಲಿ ಇದು ಪೀಡೆನಾಶಕದ ಪ್ರತಿರೋದಕತೆಗೆ ಕಾರಣವಾಗುತ್ತದೆ. ಆಗ ಪೀಡೆನಾಶಕಗಳ ವಿಪಲತೆ ಬಗ್ಗೆ ದೂರುವುದಲ್ಲದೇ, ನೇರವಾಗಿ ಪೀಡೆನಾಶಕದ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಹೀಗೆ ಯಾವುದೇ ಪೀಡೆನಾಶಕವಾಗಲಿ ಅದರ ಸರಿಯಾದ ಬಳಕೆಯಿಂದ ಮಾತ್ರ ಪೀಡೆಗಳನ್ನು ತಡೆಗಟ್ಟಬಹುದೇ ಹೊರತು, ಹೆಚ್ಚಾಗಿ ಬಳಸುವುದರಿಂದಲ್ಲ.

ಮುಂದುವರೆಯುವುದು.. ಕಂತು-2

(ಚಿತ್ರ ಹಾಗೂ ಮಾಹಿತಿ ಸೆಲೆ: pixabay.com, irac-online )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks