ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು: ಕಂತು-3

– ನಿತಿನ್ ಗೌಡ.

ಕಂತು-1, ಕಂತು-2

ಹಿಂದಿನ ಕಂತಿನಿಂದ ಮುಂದುವರಿದು ಒಮ್ಮೆ ಸಾಗರ ತಲುಪಿದ(ಮಾರನೆಯ ದಿನ) ಮೇಲೆ ಹೀಗೆ ಮಾಡಬಹುದು. ಸಾಗರದಿಂದ ನೇರ ಜೋಗ ತಲುಪಿ ( 30 ಕೀ.ಮೀ), ಜೋಗವನ್ನು ನೋಡಿ, ಕಾರ್‍ಗಲ್ – ಬಟ್ಕಳ ದಾರಿಯಲ್ಲಿ ಸಿಗುವ ಬೀಮೇಶ್ವರ ಗುಡಿ ಮತ್ತು ಜಲಪಾತವನ್ನು ನೋಡಬಹುದು. ಇಲ್ಲಿ 2.5 ಕೀ.ಮೀ ಚಾರಣವಿರುತ್ತದೆ. ಜೀಪ್ ಮೂಲಕ ಕೂಡಾ ಸಾಗಬಹುದು. ಮುಂಗಾರು ಮಳೆ-2 ಸಿನೆಮಾದಲ್ಲಿ (ಓಡುತಿಟ್ಟ) ಬರುವ ಒಂದು ಹಾಡನ್ನು ಇಲ್ಲೇ ಚಿತ್ರೀಕರಿಸಲಾಗಿತ್ತು. ಬೀಮೇಶ್ವರದಿಂದ ಬಟ್ಕಳ-ಉಡುಪಿಯ ತಲುಪಿ ತಂಗಿದ್ದು ಕರಾವಳಿಯ ಜಾಗಗಳನ್ನು ನೋಡಬಹುದು. ಇಲ್ಲವೇ ಬೀಮೇಶ್ವರದಿಂದ ಮರಳಿ ಸಾಗರ ತಲುಪಬಹುದು. ಇಲ್ಲವೇ ಸೊರಬ ತಲುಪಿ ತಂಗಬಹುದು. ಒಂದು ವೇಳೆ ಶರಾವತಿ ನದಿಯ ಸಾಹಸಮಯ ಕ್ಯಾಂಪ್ ಹೋಗಬೇಕಾದ್ದಲ್ಲಿ; ಮೊದಲೇ ಕಾಯ್ದಿರಿಸಿಕೊಂಡು, ಮದ್ಯಾಹ್ನ ಚೆಕ್ ಇನ್ ಮಾಡಬೇಕಾಗುತ್ತದೆ. ಅಲ್ಲಿ ಅವರೇ ಜೋಗಕ್ಕೆ ಕರೆದು ಕೊಂಡು ಹೋಗುವರು, ದೋಣಿ ನಡೆಸುವುದು, ಕಯಾಕಿಂಗ್ ಮತ್ತು ಕೆಲವು ಆಟಗಳನ್ನು ಆಡಿಸುವರು. ಆಮೇಲೆ ಮಾರನೆಯ ದಿನ ಬೆಳಿಗ್ಗೆ 10 ಗಂಟೆಗೆ ಚೆಕ್‌ಔಟ್ ಮಾಡಬೇಕು.

ಜೋಗದ ಮಿಂಚು ಹುಟ್ಟುಹಾಕುವ ಎಡೆ (Jog Power station)

ಈ ಆಯ್ಕೆ ನೀವು ಆಯ್ದುಕೊಂಡಲ್ಲಿ, ನೀವು ಸಾಗರದ ಬಳಿ ಇರುವ ದಬ್ಬೇ ಜಲಪಾತಕ್ಕೆ ಹೋಗಬಹುದು. ಇದಕ್ಕೂ ಅರ್‍ದ ದಿನವಾದರೂ ಬೇಕು. ಇದರಲ್ಲೂ ಚಾರಣಕ್ಕೆ ಹೋಗಬಹುದು. ಇಲ್ಲವಾದಲ್ಲಿ ಹೊನ್ನೇಮರಡು ತಲುಪಿ ಅಲ್ಲಿನ ಹಿನ್ನೀರು, ನೀರಿನಲ್ಲಿ ಸಾಹಸಮಯ ಆಟಗಳನ್ನು ಆಡಿ ಸಾಗರಕ್ಕೆ ಮರಳಬಹುದು. ಇಲ್ಲಿ ಸಮಯವಿದ್ದಲ್ಲಿ ಇನ್ನೊಂದು ಆಯ್ಕೆಯಿದೆ. ಕಾರ್‍ಗಲ್ ನಿಂದ ಕೇವಲ 14.5 ಕೀ.ಮೀ ದೂರದಲ್ಲಿ ಮುಪ್ಪಾನೆ ನೇಚರ್ ಕ್ಯಾಂಪ್ ಇದೆ. ಇಲ್ಲಿ ಇದ್ದು ದಿನ ಕಳೆಯಬಹುದು. ಇಲ್ಲಿಗೆ ಬರುವ ಮುನ್ನ ಕಾರ್‍ಗಲ್ ಕಾಡು ಸರಹದ್ದಿನ ಕಚೇರಿಯಲ್ಲಿ (ACF office (Wildlife) or at the Range Forest Office) ಕಾಯ್ದಿರಿಸಬೇಕಾಗುತ್ತದೆ. ಇಲ್ಲಿ ಸಾಮಾನ್ಯವಾಗಿ ತಂಗಲು ಟೆಂಟ್ ಸಿಗುತ್ತದೆ. ದೋಣಿ ನಡೆಸುವುದು, ಕಯಾಕಿಂಗ್ ಹೀಗೆ ಚಟುವಟಿಕೆಗಳಿರುತ್ತವೆ. ಶರಾವತಿ ಹಿನ್ನೀರಿನ ನೋಟ ನೋಡಲು ಚೆನ್ನಾಗಿರುತ್ತದೆ.

ಕೇದಾರೇಶ್ವರ ಗುಡಿ, ಬಳ್ಳಿಗಾವಿ

ಮುಪ್ಪಾನೆಯಲ್ಲಿ ತಂಗದಿದ್ದಲ್ಲಿ, ಸಾಗರ ತಲುಪಿ, ಅಲ್ಲಿಂದ ಸೊರಬಕ್ಕೆ ತೆರಳಿ ಅಲ್ಲಿನ ಜಾಗವನ್ನು (ಬನವಾಸಿ, ಮದುಕೇಶ್ವರ ದೇವಸ್ತಾನ, ಗುಡವಿ) ನೋಡಿ,ಶಿಕಾರಿಪುರದಲ್ಲಿ ತಂಗಬಹುದು. ಮಾರನೆಯ ದಿನ ಶಿಕಾರಿಪುರದಲ್ಲಿ ಬಳ್ಳಿಗಾವಿ ಕೇದಾರೇಶ್ಬರ ದೇವಸ್ತಾನ (ಚಾಳುಕ್ಯ-ಹೊಯ್ಸಳ ವಾಸ್ತುಶಿಲ್ಪ), ಉಡುಗಣಿ ಅಕ್ಕಮಹಾದೇವಿ ನೆನಪಿನ ಸ್ತಳ, ತಾಳಗುಂದದ ಕದಂಬರ ಪ್ರಣವೇಶ್ವರ ದೇವಸ್ತಾನ, ಅಂಜನಾಪುರ ಅಣೆಕಟ್ಟು ಮತ್ತು ಈಸೂರು ದಂಗೆ ಸಾರುವ ತೋಟ, ಅಂಬಳೀಗೊಳ/ಹೊಸ ಹೊಸೂರು ಅಣೆಕಟ್ಟು ನೋಡಿ ಶಿವಮೊಗ್ಗ ತಲುಪಿ ಬೆಂಗಳೂರಿಗೆ ತಲುಪಬಹುದು. ಇಲ್ಲವೇ ಅಲ್ಲಿಂದಲ್ಲೇ ದಾವಣಗೆರೆ-ಹಿರಿಯೂರು ಮೂಲಕ ಬೆಂಗಳೂರು ತಲುಪಬಹುದು.

ನೀವು ತೀರ್‍ತಹಳ್ಳಿಯಿಂದ ಕರಾವಳಿ ತಲುಪಬೇಕು ಮತ್ತು ಸಾಗುವ ದಾರಿಯಲ್ಲಿ ಒಳ್ಳೆಯ ಜಾಗಗಳನ್ನು ನೋಡಬೇಕೆಂದರೆ ಎರಡು ಆಯ್ಕೆಗಳಿವೆ.

ಅಂಬಳೀಗೊಳ(ಹೊಸ ಹೊಸೂರು) ಅಣೆಕಟ್ಟು

ಒಂದು ಆಗುಂಬೆ ಗಾಟಿ ಇಳಿದು, ಹೆಬ್ರಿ, ಮಣಿಪಾಲ್ ದಾರಿಯಿಂದ ಉಡುಪಿ ತಲುಪಬಹುದು. ದಾರಿಯಲ್ಲಿ ಹಿರಿಯಡ್ಕದ ವೀರಬದ್ರ ಸ್ವಾಮಿಯ ಗುಡಿ ನೋಡಬಹುದು. ಇಲ್ಲವೇ ಆಗುಂಬೆ ಗಾಟಿ ಇಳಿಯುವ ಮುನ್ನವೇ ಮಾಸ್ತಿಕಟ್ಟೆ ಹಾದಿ ಹಿಡಿದು ಅಲ್ಲಿಗೆ ತಲುಪಿ ಅಲ್ಲಿಂದ ಹುಲಿಕಲ್ ಗಾಟಿಯಲ್ಲಿ ಸಾಗಿ ಕುಂದಾಪುರ ತಲುಪಬಹುದು (ಹೊಸನಗರದಿಂದಲೂ ಮಾಸ್ತಿಕಟ್ಟೆ ತಲುಪಿ ಹುಲಿಕಲ್ ಮೂಲಕ ಹೋಗಬಹುದು). ಇಲ್ಲವೇ ಅದಕ್ಕೂ ಮುಂಚೆ ಉಡುಪಿಯ ಹಾದಿ ಹಿಡಿಯಬಹುದು. ಈ ದಾರಿಯ ಡ್ರೈವ್ ಚೆನ್ನಾಗಿರುತ್ತದೆ ಮತ್ತು ಯಡೂರು ಬಳಿ ಅಬ್ಬಿ ಜಲಪಾತ ಸಿಗುತ್ತದೆ. ಮಾಸ್ತಿಕಟ್ಟೆಯ ನಿಡಗೋಡಿನ ಬಳಿ ಕುಂಚಿನಕಲ್ ಜಲಪಾತ ಸಿಗುತ್ತದೆ. ಇದಕ್ಕೆ ಹೋಗಲು ಮಾಸ್ತಿಕಟ್ಟೆಯ ಚೆಕ್ ಪೋಸ್ಟ್ ಬಳಿ ಅನುಮತಿ ಪಡೆಯಬೇಕಾಗುತ್ತದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಇಲ್ಲಿ ಬೇಟಿ ನೀಡಬಹುದು. ಮಾಣಿ ಅಣಿಕಟ್ಟಿನ ಹತ್ತಿರದಲ್ಲಿ Underground Hydroelectric Project ಕೂಡಾ ಇದೆ. ಮಾಸ್ತಿಕಟ್ಟೆಯಿಂದ ಕುಂದಾಪುರ ಸಾಗುವ ಹಾದಿಯಲ್ಲಿ ದೇವಸ್ತಾನ ಮತ್ತು ಹುಲಿಕಲ್ ಜಲಪಾತ ಕೂಡಾ ಸಿಗುತ್ತದೆ. ಹುಲಿಕಲ್ ಗಾಟಿಯ ಡ್ರೈವ್ ಕೂಡಾ ಚೆನ್ನಾಗಿರುತ್ತದೆ. ಮಾಸ್ತಿಕಟ್ಟೆಯಿಂದ ನೀವು ಬೇಕಾದರೆ ವರಾಹಿ ಅಣೆಕಟ್ಟು ಹೋಗಬಹುದು (ಅನುಮತಿ ಬೇಕು).

ಹುಲಿಕಲ್ ಜಲಪಾತ

ನೀವು ಶಿವಮೊಗ್ಗ-ಉತ್ತರ ಕನ್ನಡದ ಕೆಲವು ಜಾಗಗಳನ್ನು ನೋಡ ಬಯಸಿದಲ್ಲಿ, ಸಾಗರದಿಂದ ಹೊನ್ನಾವರ ಕಡೆ ಸಾಗಬಹುದು. ಹೊನ್ನಾವರದಲ್ಲಿ ಸಾಕಶ್ಟು ಜಾಗಗಳಿವೆ. ನೀವು ಹೊಸನಗರದಿಂದ ರಿಪ್ಪನ್ ಪೇಟೆ ಮೇಲೆ ಶಿವಮೊಗ್ಗ ಬರುತ್ತಿದ್ದರೆ ನಿಮಗೆ ನಗರ ಕೋಟೆ, ಮಾಲ್ಗುಡಿ ತೋರುದಾಣ, ಸಿಂಹದಾಮ (ಶಿವಮೊಗ್ಗಕ್ಕೆ 10ಕಿ.ಮೀ) ಕೂಡಾ ಸಿಗುತ್ತದೆ. ಶಿವಮೊಗ್ಗದಿಂದ ಬದ್ರಾವತಿ ಮೂಲಕ ಹೋದಲ್ಲಿ ,ಬದ್ರಾವತಿಯ ಲಕ್ಶ್ಮೀ ನರಸಿಂಹ ದೇವಸ್ತಾನ (ಹೊಯ್ಸಳ ವಾಸ್ತುಶಿಲ್ಪ) ನೋಡಬಹುದು. ಇಲ್ಲವಾದಲ್ಲಿ ಚಿತ್ರದುರ್‍ಗದ ಮೂಲಕ ಹೋದಲ್ಲಿ, ದುರ್‍ಗದ ಏಳುಸುತ್ತಿನ ಕೋಟೆ ಕೂಡಾ ನೋಡಿ ಬೆಂಗಳೂರು ತಲುಪಬಹುದು.

 ಕಂತು-1, ಕಂತು-2

( ಚಿತ್ರೆಸೆಲೆ: wikimedia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: