ಈಜಿಪ್ಟಿನ ಕಾರ‍್ನಾಕ್ ದೇವಾಲಯ

– .

ಕಾರ‍್ನಾಕ್ ಹಳ್ಳಿಯು ನೈಲ್ ನದಿಯ ಬಲದಂಡೆಯಲ್ಲಿದೆ. ಈಜಿಪ್ಟಿನ ಲುಕ್ಸರ್ ನಗರದ ಈಶಾನ್ಯಕ್ಕೆ ಸುಮಾರು 2.5 ಕಿಲೋಮೀಟರ್ ದೂರದಲ್ಲಿದೆ. ಇವು ಈಜಿಪ್ಟಿನ ಪೆರೋಗಳ ಆಳ್ವಿಕೆಯಲ್ಲಿ ನಿರ‍್ಮಿಸಲಾದ ದೇವಾಲಯಗಳ ದೊಡ್ಡ ಸಮೂಹವಾಗಿವೆ. ಕಾರ‍್ನಾಕ್ನಲ್ಲಿರುವ ದೇವಾಲಯವನ್ನು 1979ರಿಂದ ಯುನಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ‍್ಪಡೆ ಮಾಡಲಾಗಿದೆ. ಕಾನಾರ‍್ಕ್ ದೇವಾಲಯದ ಸಂಕೀರ‍್ಣವು ಅನೇಕ ಬಾರಿ ವಿಸ್ತರಣೆಗೊಂಡಿದೆ. ಪ್ರತಿ ಬಾರಿ ವಿಸ್ತರಣೆಗೊಂಡಾಗಲೂ ಸಾಕಶ್ಟು ಬದಲಾವಣೆಗಳನ್ನು ಕಂಡಿದೆ. ಇದು ಈಜಿಪ್ಟ್ ಸಾಮ್ರಾಜ್ಯದ ಬದಲಾಗುತ್ತಿರುವ ಅದ್ರುಶ್ಟದ ಪ್ರತಬಿಂಬವಾಗಿದೆ. ಈ ದೇವಾಲಯದ ಸಂಕೀರ‍್ಣದ ನಿರ‍್ಮಾಣ ಕಾರ‍್ಯ ಆರಂಬವಾಗಿದ್ದು 16ನೇ ಶತಮಾನದಲ್ಲಿ. ಇದರ ನಿರ‍್ಮಾಣಕ್ಕೆ ಸುಮಾರು 30 ಪೆರೋಗಳು ಕೊಡುಗೆ ನೀಡಿದ್ದಾರೆ. (ಪೆರ‍್ರೋಸ್- ಪ್ರಾಚೀನ ಈಜಿಪ್ಟಿನ ಆಡಳಿತಗಾರನನ್ನು ಪರೋ ಎಂದು ಕರೆಯಲಾಗುತ್ತಿತ್ತು. ಪೇರೋಗಳನ್ನು ಆಡಳಿತಗಾರರಿಗಿಂತ ಹೆಚ್ಚಾಗಿ, ಅವರು ಜನರನ್ನು ಕಾಪಾಡುವ ದೇವರುಗಳಾಗಿದ್ದರು. ಜನರು ಮತ್ತು ಅವರ ದೇವರುಗಳ ನಡುವೆ ಪ್ರಮುಕ ಸಂಪರ‍್ಕವನ್ನು ಒದಗಿಸುವವರಾಗಿದ್ದರು) ಕಾನಾರ‍್ಕ್ ದೇವಾಲಯದ ಮುಕ್ಯ ಬಾಗ(ಆಮುನ್)ವನ್ನು 18ನೇ ರಾಜವಂಶದ ಅವದಿಯಲ್ಲಿ ನಿರ‍್ಮಿಸಲಾಯಿರು.

ಕಾನಾರ್‍ಕ್ ದೇವಾಲಯವನ್ನು ಪ್ರಮುಕವಾಗಿ ಮೂರು ಬಾಗಗಳಾಗಿ ವಿಂಗಡಿಸಲಾಗಿದೆ. ಮೂರೂ ಬಾಗಗಳು ಗೋಡೆಗಳಿಂದ ಬೇರ‍್ಪಟ್ಟಿದೆ. ಪ್ರತಿ ಬಾಗವೂ ಬೇರೆ ಬೇರೆ ದೇವರುಗಳಿಗೆ ಮೀಸಲಾಗಿದೆ. ಅಮುನ್ (ದೇವಾಲಯದ ಕೇಂದ್ರ ಮತ್ತು ದೊಡ್ಡ ಬಾಗ. ಇದು ಸಂದರ‍್ಶಕರಿಗೆ ಮಾತ್ರ ತೆರೆದಿರುತ್ತದೆ). ಮೊಂಟು (ತೀಬನ್ ದೇವ ಯೋದ) ,ಮಟ್ (ಅಮುನ್ ದೇವರ ದೈವಿಕ ಪತ್ನಿ). ಕಾನಾರ‍್ಕ್ ದೇವಾಲಯವು ಹೆಸರುವಾಸಿಯಾಗಿರುವುದು ಇಲ್ಲಿರುವ ಕಂಬಗಳಿಂದ. ಪಿಲ್ಲರ್ ಅಂಗಣದಲ್ಲಿ ಹದಿನಾರು ಸಾಲುಗಳಲ್ಲಿ ಆಯೋಜಿಸಲಾಗಿರುವ 134 ಬ್ರುಹತ್ ಕಂಬಗಳು ಅದ್ಬುತವಾಗಿದೆ. ಈ 134 ಕಂಬಗಳಲ್ಲಿ 122 ಕಂಬಗಳು ಹತ್ತು ಮೀಟರ್ ಎತ್ತರವಿದ್ದರೆ, ಉಳಿದ 12 ಕಂಬಗಳು 21 ಮೀಟರ್ ಎತ್ತರವಿದೆ. ಇವುಗಳ ವ್ಯಾಸ (ಸುತ್ತಳತೆ) ಮೂರು ಮೀಟರ‍್ಗಳಿಗೂ ಹೆಚ್ಚಿದೆ. ಈ ಕಂಬಗಳ ಮೇಲ್ಬಾಗದಲ್ಲಿರುವ ಕಮಾನುಗಳು 70 ಟನ್ನುಗಳಶ್ಟು ಬಾರವಾಗಿದೆ ಎನ್ನಲಾಗಿದೆ. ಇಶ್ಟು ಬಾರವಾದ ಕಮಾನುಗಳನ್ನು ಹೇಗೆ ಅಶ್ಟು ಎತ್ತರಕ್ಕೆ ಏರಿಸಿದರು ಹಾಗೂ ಇದಕ್ಕಾಗಿ ಅವರುಗಳು ಬಳಸಿದ ತಾಂತ್ರಿಕತೆ ಯಾವುದು? ಎಂಬುದು ಇನ್ನೂ ನಿಗೂಡವಾಗಿಯೇ ಇದೆ.

ಈ ಎತ್ತರದ ಕಂಬಗಳ ಮೇಲೆ ಹೊದಿಸಿ ನಿರ‍್ಮಿಸಲಾಗಿರುವ ಹಾಲ್, ದೇವಾಲಯದ ಒಂದು ಬಾಗವಾಗಿದ್ದು ಅದರ ದೈತ್ಯಾಕಾರಕ್ಕೆ ಚಾಯಾಚಿತ್ರದ ಮೂಲಕ ನ್ಯಾಯ ಒದಗಿಸಲಾಗುವುದಿಲ್ಲ. ಆ ಹಾಲಿನ ಗಾತ್ರ ಮತ್ತು ಬವ್ಯತೆಯನ್ನು ನೋಡಿಯೇ ಅನುಬವಿಸಬೇಕೆ ಹೊರತು, ಚಾಯಾಚಿತ್ರದಿಂದ ಅರಿಯಲು ಸಾದ್ಯವಿಲ್ಲ. ಈ ಹಾಲಿನಲ್ಲಿರುವ ಪೆರ‍್ರೋಗಳಿಗೆ ಬೆಳಕಿನ ಕಿರಣಗಳು ದಟ್ಟವಾದ ದೈತ್ಯ ಕಂಬಗಳ ನಡುವಿನಿಂದ ಹಾದು ಬರುವುದರಿಂದ, ಇಡೀ ದ್ರುಶ್ಯ ನಯನಮನೋಹರವಾಗಿ ಕಾಣುತ್ತದೆ. ಕಾನಾರ‍್ಕ್ ದೇವಾಲಯವು ಹೋಲಿ ಟ್ರಿನಿಟಿಯ ಮುಕ್ಯ ಆರಾದನಾ ಸ್ತಳ ಮಾತ್ರವಲ್ಲದೆ ಪೆರ‍್ರೋಗಳ ರಾಜದಾನಿಯನ್ನು ಪ್ರತಿನಿದಿಸುತ್ತದೆ. ಇದು ಈಜಿಪ್ಟಿನ ಆರ‍್ತಿಕತೆಯ ಹಾಗೂ ಸರ‍್ಕಾರದ ಕೇಂದ್ರ. ಇಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ‍್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ದೇವಾಲಯದ ಹ್ರುದಯ ಪ್ರದೇಶಕ್ಕೆ ಪುರೋಹಿತರು ಮತ್ತು ರಾಜಮನೆತನದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿತ್ತು. ಈ ದೇವಾಲಯದಲ್ಲಿ ಹತ್ತು ಸ್ಮಾರಕ ದ್ವಾರಗಳಿದ್ದು ಅವುಗಳು ಅರಮನೆ ಮತ್ತು ಸಬಾಂಗಣದಿಂದ ಬೇರ‍್ಪಡಿಸಲಾಗಿದೆ. ಈ ಸಬಾಂಗಣ 4850 ಚದರ ಮೀಟರ‍್ ವಿಸ್ತೀರ‍್ಣವನ್ನು ಹೊಂದಿದೆ.

ಈ ದೇವಾಲಯವು ಪ್ರತಿದಿನ ಬೆಳಿಗ್ಗೆ 6.00 ರಿಂದ ಸಂಜೆ 5.30 ವರೆವಿಗೂ ತೆರೆದಿರುತ್ತದೆ. ಇದರ ವೀಕ್ಶಣೆಗೆ ಹೋಗುವವರು 150 ಈಜಿಪ್ಶಿಯನ್ ಪೌಂಡ್ ಪ್ರವೇಶ ಶುಲ್ಕ ತೆರಬೇಕಾಗುತ್ತದೆ. ಅಂದರೆ ಅಂದಾಜು ನಾಲ್ಕು ನೂರು ರುಪಾಯಿಗಳು. ಒಟ್ಟಿನಲ್ಲಿ ಕಾನಾರ‍್ಕ್ ದೇವಾಲಯವು ಈಜಿಪ್ಟಿನ ವಾಸ್ತುಶಿಲ್ಪಕ್ಕೆ ಅತ್ಯಂತ ಪ್ರಶಸ್ತ ಉದಾಹರಣೆಯಾಗಿದೆ. ಇಂತಹ ಬ್ರುಹತ್ ಸ್ಮಾರಕಗಳು ಮತ್ತು ದೇವಾಲಯಗಳನ್ನು ನಿರ‍್ಮಿಸುವ ಅನುಬವ ಊಹಿಸುವುದು ಸಾದ್ಯವಿಲ್ಲ.

(ಮಾಹಿತಿ ಮತ್ತು ಚಿತ್ರಸೆಲೆ: kasadoo.com , www.ancient-origins.net, wikicommons.org  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks