ಕವಿತೆ: ಎಳವೆಯ ನೆನಪು

– ಕಿಶೋರ್ ಕುಮಾರ್.

ಬಿದ್ದರೂ ಬೀಗುತ ಮೇಲೇಳೋ ವಯಸು
ಎಲ್ಲೆಡೆ ಮನಬಿಚ್ಚಿ ಮಾತಾಡೋ ಮನಸು
ಇರಲಿಲ್ಲ ನಾಳೆಗಳ ಬಗೆಗಿನ ಕನಸು
ಇಂದು ನೆನೆದರೆ ಆ ದಿನಗಳೇ ಸೊಗಸು

ಹಣವಿಲ್ಲದಿದ್ದರೂ ಅಂದಿತ್ತು ಹೊತ್ತು
ಶಾಲೆ ಮುಗಿದರೆ ಸಾಕಾಗಿತ್ತು
ತಿಂದು ಅಮ್ಮನ ಕೈತುತ್ತು
ಇನ್ನಿದ್ದದ್ದು ಒಂದೇ ಅದು ಆಟದ ಮತ್ತು

ಶಾಲೆಯಲ್ಲಿ ಕೊಟ್ಟ ಮನೆಕೆಲಸ
ಮುಗಿಸಿದರೆ ಸಾಕು ಮನಸಿಗೆ ಹರುಶ
ಗೆಳೆಯರೊಡನೆ ಸೇರುವ ಸಂತಸ
ನಲಿಯುತಲೇ ಉರುಳಿದವು ದಿವಸ

ತಾತ ಅವ್ವೆಯರ ಮುದ್ದಿನ ಕೂಸು
ಆಗಾಗ ಸಿಗುತ್ತಿದ್ದ ಕೂಡಿಟ್ಟ ಕಾಸು
ವರುಶದ ಕೊನೆಯಲ್ಲಿ ಆದರೆ ಪಾಸು
ಎರಡು ತಿಂಗಳ ರಜೆಯ ಆ ದಿನಗಳೇ ಲೇಸು

(ಚಿತ್ರ ಸೆಲೆ: pixabay.com)

ಅನಿಸಿಕೆ ಬರೆಯಿರಿ: