ರವೀಂದ್ರನಾತ ಟ್ಯಾಗೋರರ ಕವನಗಳು ಓದು – 12 ನೆಯ ಕಂತು
– ಸಿ.ಪಿ.ನಾಗರಾಜ.
ಪಡುವಣದಿ ಮುಳುಗುತಿಹ ರವಿಯೊಮ್ಮೆ ಕೇಳಿದನು
“ಯಾರಿಹರು ನನ್ನ ಕೆಲಸ ನಿರ್ವಹಿಸಲು?”
ಕ್ಷೀಣದನಿಯಲಿ ಹೇಳಿತೊಂದು ಮಣ್ಣಿನಾ ಹಣತೆ
“ನಾನಿಹೆನು ಎಷ್ಟು ಶಕ್ಯವೊ ಬೆಳಗುತಿರಲು”
“ನನ್ನಿಂದಲೇ ಎಲ್ಲರಿಗೂ ಒಳ್ಳೆಯದಾಗುತ್ತಿದೆ. ನನ್ನನ್ನು ಬಿಟ್ಟರೆ ಇತರರು ಈ ಕೆಲಸವನ್ನು ಮಾಡಲಾರರು” ಎಂಬ ನಾನತ್ವದಿಂದ ಕೂಡಿರುವ ವ್ಯಕ್ತಿಗೆ ಅರಿವನ್ನು ಮೂಡಿಸುವ ಸಂಗತಿಯನ್ನು ಈ ಕವನದಲ್ಲಿ ರೂಪಕವೊಂದರ ಮೂಲಕ ಚಿತ್ರಿಸಲಾಗಿದೆ.
‘ನಾನತ್ವ’ ಎಂದರೆ “ನನ್ನ ದುಡಿಮೆಯಿಂದಲೇ ಈ ಕುಟುಂಬ ಉಳಿದಿದೆ / ನನ್ನ ಬುದ್ದಿವಂತಿಕೆಯಿಂದಲೇ ಈ ಸಂಸ್ತೆ ಬೆಳೆಯುತ್ತಿದೆ/ ನನ್ನ ಮುನ್ನೋಟದಿಂದಲೇ ಈ ನಾಡು ಪ್ರಗತಿಯನ್ನು ಹೊಂದುತ್ತಿದೆ” ಎಂಬ ಅಹಂಕಾರದ ನಡೆನುಡಿ;
ಪಡುವಣ=ಪಶ್ಚಿಮ ದಿಕ್ಕು; ಮುಳುಗುತ+ಇಹ; ಮುಳುಗು=ಒಳಸೇರು/ಕಾಣೆಯಾಗು/ಮರೆಯಾಗು; ಇಹ=ಇರುವ; ರವಿ+ಒಮ್ಮೆ; ರವಿ=ಸೂರ್ಯ/ನೇಸರು; ಒಮ್ಮೆ=ಒಂದು ದಿನ ಸಂಜೆ; ಯಾರು+ಇಹರು; ಇಹರು=ಇರುವರು; ನಿರ್ವಹಿಸು=ಮಾಡು/ಜವಾಬ್ದಾರಿಯನ್ನು ಹೊರು;
ಪಡುವಣದಿ ಮುಳುಗುತಿಹ ರವಿಯೊಮ್ಮೆ ಕೇಳಿದನು, “ಯಾರಿಹರು ನನ್ನ ಕೆಲಸ ನಿರ್ವಹಿಸಲು?” =ಪಶ್ಚಿಮ ದಿಕ್ಕಿನ ಅಂಚಿನಲ್ಲಿ ಮರೆಯಾಗುತ್ತಿರುವ ರವಿಯು ಒಂದು ದಿನ ಸಂಜೆ “ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕೊಡುವ ಶಕ್ತಿಯು ಜಗತ್ತಿನಲ್ಲಿ ನನ್ನೊಬ್ಬನ್ನು ಬಿಟ್ಟರೆ ಮತ್ತಾರಿಗೂ ಇಲ್ಲ” ಎಂಬ ಅಹಂಕಾರದಿಂದ “ಯಾರಿದ್ದಾರೆ ನನ್ನ ಈ ಕೆಲಸವನ್ನು ಮಾಡಲು” ಎಂದು ಜಗತ್ತಿನ ಮುಂದೆ ಒಂದು ಪ್ರಶ್ನೆಯನ್ನು ಒಗೆದ;
ಕ್ಷೀಣ=ಕುಗ್ಗಿದ/ಮೆಲ್ಲನೆಯ; ದನಿ=ಶಬ್ದ/ಸದ್ದು; ಹೇಳಿತು+ಒಂದು; ಹಣತೆ=ದೀಪ/ಸೊಡರು; ನಾನ್+ಇಹೆನು; ಇಹೆನು=ಇರುವೆನು; ಎಷ್ಟು=ಯಾವ ಪ್ರಮಾಣದಲ್ಲಿ; ಶಕ್ಯ=ಮಾಡಬಹುದಾದುದು/ಸಾಧ್ಯವಾದುದು; ಬೆಳಗುತ+ಇರಲು; ಬೆಳಗುತ=ಬೆಳಕಿನ ಕಿರಣಗಳನ್ನು ಚೆಲ್ಲುತ್ತ; ಬೆಳಗುತಿರಲು=ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಹರಡುತ್ತಿರಲು;
ಕ್ಷೀಣದನಿಯಲಿ ಹೇಳಿತೊಂದು ಮಣ್ಣಿನಾ ಹಣತೆ, “ನಾನಿಹೆನು ಎಷ್ಟು ಶಕ್ಯವೊ ಬೆಳಗುತಿರಲು” =ರವಿಯ ಅಹಂಕಾರದ ಪ್ರಶ್ನೆಗೆ ಒಂದು ಮಣ್ಣಿನ ಹಣತೆಯು ಮೆಲ್ಲನೆಯ ದನಿಯಲ್ಲಿ “ನಾನಿದ್ದೇನೆ. ನನ್ನಿಂದ ಎಶ್ಟು ಸಾದ್ಯವೋ ಅಶ್ಟರಮಟ್ಟಿಗೆ ನಾನಿರುವ ಎಡೆಯಲ್ಲಿ ಕವಿದಿರುವ ಕತ್ತಲೆಯನ್ನು ನಿವಾರಿಸಲು ಬೆಳಕಿನ ಕಿರಣಗಳನ್ನು ಹರಡುತ್ತೇನೆ” ಎಂದು ವಿನಯದಿಂದ ನುಡಿಯಿತು;
ಈ ಕವನದಲ್ಲಿ ರವಿ ಮತ್ತು ಹಣತೆಯ ಮಾತಿನ ರೂಪಕದ ಮೂಲಕ ಜಗತ್ತಿನ ನಿತ್ಯದ ಬದುಕಿನಲ್ಲಿ “ಒಬ್ಬ ದೊಡ್ಡವನು… ಮತ್ತೊಬ್ಬ ಚಿಕ್ಕವನು” ಎನ್ನುವುದು ಇಲ್ಲ. ತಮ್ಮ ತಮ್ಮ ನೆಲೆಗಳಲ್ಲಿ ಪ್ರತಿಯೊಬ್ಬರು ಮಾಡುತ್ತಿರುವ ಒಳಿತಿನ ಕೆಲಸಗಳೆಲ್ಲವೂ ಬೇರೆ ಬೇರೆ ಪ್ರಮಾಣದಲ್ಲಿ ಜಗತ್ತಿನ ಜೀವನವನ್ನು ಮುನ್ನಡೆಸುತ್ತಿವೆ ಎಂಬ ವಾಸ್ತವವನ್ನು ನಿರೂಪಿಸುತ್ತ, ಯಾವೊಬ್ಬ ವ್ಯಕ್ತಿಯು ತನ್ನಿಂದಲೇ ಜಗತ್ತು ನಡೆಯುತ್ತಿದೆ ಎಂಬ ಅಹಂಕಾರಕ್ಕೆ ಒಳಗಾಗಬಾರದೆಂಬ ತಿಳುವಳಿಕೆಯನ್ನು ನೀಡಲಾಗಿದೆ.
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು