ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 3)
– ಸಿ.ಪಿ.ನಾಗರಾಜ.
ನೋಟ – 3
ಬಾಗಿಲ್ಗೆ ಬಂದ ಅಖಿಳ ಭೂಪಾಲರನು ಕರೆಸಿ ಕಾಣಿಸಿಕೊಳ್ಳದೆ, ಓಲಗಮ್ ಕುಡದೆ , ಒಳಗೆ ಚಿಂತಾಲತಾಂಗಿಯ ಕೇಳಿಗೆ ಎಡೆಗೊಟ್ಟು ರಾಜೇಂದ್ರನಿರೆ , ಕೇಳ್ದು ಭೀತಿಯಿಂದೆ ಆ ಲಕ್ಷ್ಮಣಾದಿಗಳು ಅಂತಃಪುರವನು ಪೊಕ್ಕರು.
ಆಲಿಂಗಿಸಿದ ಜಾಡ್ಯದಿಂದೆ ಜಡಿವ ಅವಯವದ ನೀಲಾಂಗನನ್ ಕಂಡು ಕಾಲ್ಗೆರಗಿ, ನುಡಿಸಲು ಅಮ್ಮದೆ ಸುಮ್ಮನಿರುತಿರ್ದರು . ಕರುಣಾಳುಗಳ ಬಲ್ಲಹನು ಎದ್ದು ಕುಳ್ಳಿರ್ದು ಅನುಜರನು ಕರೆದು ಮುದ್ದುಗೈದು…
ರಾಮ: ಇಳೆಯೊಳು ಇಂದು ಎನಗೆ ಪೊದ್ದಿದ ಅಪವಾದಮನ್ ನೀವು ಅರಿದುದಿಲ್ಲ. ಅಕಟ, ಸಾಕಿನ್ನು ನೆರವಿಗಳೊಳು ಕದ್ದ ಕಳ್ಳನವೊಲು ಆಡಿಸಿಕೊಳ್ಳಲ್ಕೆ ಆರೆನು. ಒಡಲಿದ್ದಲ್ಲಿ ನಿಂದೆಗೆ ಒಳಗಾಗಿ ಬದುಕುವನಲ್ಲ.
ತಿದ್ದಿ ತೀರದ ವಿಲಗಕೆ ಅಂಜುವೆನು. ಸೀತೆಯ ಬಿಟ್ಟಿಲ್ಲದೆ ಇರೆನು.
(ಎಂದು ನುಡಿದು, ಮತ್ತೆ ತನ್ನ ಮಾತನ್ನು ಮುಂದುವರಿಸಿದನು.)
ರಾಮ: ಇವಳು ಅಯೋನಿಜೆ. ರೂಪ ಗುಣ ಶೀಲ ಸಂಪನ್ನೆ. ಭುವನಪಾವನೆ. ಪುಣ್ಯಚರಿತೆ. ಮಂಗಳ ಮಹೋತ್ಸವೆ. ಪತಿವ್ರತೆ ಎಂಬುದನು ಬಲ್ಲೆನು. ಆದೊಡಮ್ ನಿಂದೆಗೆ ಒಳಗಾದ ಬಳಿಕ ತನಗೆ ಅವನಿಸುತೆಯನು ಬಿಡುವುದೇ ನಿಶ್ಚಯಮ್. ರವಿಕುಲದ ರಾಯರು ಅಪಕೀರ್ತಿಯನು ತಾಳ್ದಪರೆ. ಕುವರನಾಗಿರ್ದ ತನ್ನನು ತಾತನು ಸತ್ಯಭಾಷೆಗಾಗಿ ಉಳಿದುದಿಲ್ಲವೆ. ಪಲವು ಮಾತೇನು ಕಲಿಯುಗದ ವಿಪ್ರರು ಆಚಾರಮನ್ ಬಿಡುವಂತೆ ಇನ್ನು ಸೀತೆಯನು ಬಿಟ್ಟೆನು.
(ಎನೆ, ಅನುಜಾತರು: “ಕಾರುಣ್ಯನಿಧಿಗೆ ಬಲು ಗರಮ್ ಇದು ಎತ್ತಣದೊ” ಎನುತೆ ನಡನಡುಗಿ ಭೀತಿಯಿಂದೆ…)
ಅನುಜಾತರು: ನೆಲೆಗೊಂಡ ವೇದಮನ್ ಧರೆಯ ಪಾಷಂಡಿಗಳು ಸಲೆ ನಿಂದಿಸಿದೊಡೆ ಅದನು ದ್ವಿಜರು ಮಾಣ್ಬರೇ. ಅಕಟ…ಕುಲವರ್ಧಿನಿಯನು ಎಂತು ಬಿಡುವೆ ನೀನು ಪೇಳ್
(ಎಂದರು ಅನುಜಾತರು ಅಗ್ರಜಂಗೆ. ಭಯಶೋಕದಿಂದೆ ಗದ್ಗದಿಸೆ ಕಂಠದೊಳು ಅಶ್ರು ನಯನದೊಳು ತುಳಕೆ…)
ಭರತ: ಕರೆವ ಕಪಿಲೆಯನು ನಯವಿದರು ಪೊಡೆದು ಅಡವಿಗೆ ಅಟ್ಟುವರೆ . ಪಾವಕನೊಳು ಅರಸಿಯನು ಪುಗಿಸಿದಂದು ಬಯಸಿದೊಡೆ ಅಯ್ಯನು ಬಂದು “ನಿನಗೆ ಪ್ರಿಯೆ.ಪರಿಶುದ್ಧೆ . ಕುಲಕೆ ಮಂಗಳೆ . ಸುತೋದಯಕೆ ನಿರ್ಮಲೆ. ತನಗೆ ಗತಿಗುಡುವ ಸೊಸೆ” ಎಂದು ಸುರಾಸುರರ ಮುಂದೆ ಕಪಿಕಟಕಮ್ ಅರಿಯೆ ಆಡನೆ. ಅದನ್ ಎಲ್ಲಮನ್ ಮರೆದು, ಹುಲುಮನುಜ ರಜಕನು ಆಡಿದ ದೂಸರನು ನೆನೆದು ಕುಲಪತ್ನಿಯನು ಬಿಡುವ ಹದನು ಆವುದು. ಅಕಟ…ಗುರುಲಘುವಿನ ಅಂತರವನು ಎಣಿಸದೆ ಬರಿದೆ ಮೂಢರಂತೆ ಎದೆಗೆಟ್ಟು ದೇವಿಯನು ದೋಷಿಯೆಂಬರೆ. ಜೀಯ ಪದುಳವು ಇಹುದು.
(ಎಂದು ವಿನಯದೊಳು ಭರತನು ಅಗ್ರಜಾತನನು ಕದುಬಿ ನುಡಿದನು. ಆತನನು ನೋಡುತ ಒಯ್ಯನೆ ಭೂಪನು ಇಂತೆಂದನು .)
ರಾಮ: ತಮ್ಮ, ನೀನು ಆಡಿದಂತೆ ಅವನಿಸುತೆ ವಿರಜೆ ಅಹುದು.ಉಮ್ಮಳಿಸಬೇಡ. ಈ ದೂಸರನು ಸೈರಿಸಲಾರೆನು. ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು ಮಹಿಯೊಳು ಸುಮ್ಮನೆ ಉಳಿವರೇ . ಅಪಕೀರ್ತಿಗೆ
ಒಳಗಾಗಲೇತಕೆ. ಮಮತೆಯನು ಮಹಾಯೋಗಿ ಬಿಡುವಂತೆ ಇವಳನು ಉಳಿವೆನು.
(ಎನೆ, ಲಕ್ಷ್ಮಣನು ಹಮ್ಮೈಸಿ ಕಂಪಿಸುತೆ ಕಿವಿಮುಚ್ಚುತ ಅಗ್ರಜಂಗೆ ಇಂತೆಂದನು)
ಲಕ್ಷ್ಮಣ: ಕಾಯಸುಖಕೋಸುಗಮ್ ಧರ್ಮಕೃತಮನು ಬಿಡುವೊಲು ಆಯತಾಕ್ಷಿಯ ಭಾವಶುದ್ಧಿಯನು ತಿಳಿದಿರ್ದು ನಿಷ್ಕರುಣದಿ ವಾಯದ ಅಪವಾದಕೆ ಇಂತು ಅರಸಿಯನು ತೊರೆಯಬೇಕು ಎಂಬರೇ . ಜೀಯ , ತುಂಬಿದ ಬಸುರು ಬೆಸಲಾದ ದೇವಿಯನು ಪ್ರಿಯದಿಂದೆ ಆರೈದು ಸಲಹಬೇಕು.
(ಎಂದು ರಘುರಾಯಂಗೆ ಲಕ್ಷ್ಮಣನು ಬಿನ್ನೈಸೆ , ಶತ್ರುಘ್ನನು ಮೇಲ್ವಾಯ್ದು ಇಂತೆಂದನು.)
ಶತ್ರುಘ್ನ: ಇಕ್ಷ್ವಾಕು ವಂಶದವರು ಅರಸಿಯನು ಎಂತು ಬಿಡುವರು. ಇಳೆಯೊಳು ಆರಾದೊಡಮ್ ದೂಸರನು ಎಂತು ನುಡಿವರು. ಬುದ್ಧಿ ಪೇಳ್ವುದಕೆ ಒಡೆಯರಿಲ್ಲವಾಗಿ ಅಮಲ ಸತ್ಕೀರ್ತಿಯನು ಎಂತು ಪಡೆವರು. ಏಳ್ಗೆಯನು ಎಂತು ಕಡಿವರು. ಪೆಣ್ ಅಳಲ ಬೆಂಕಿಯಿನ್ ಅನ್ವಯದ ಬಾಳ್ಕೆಯನು ಎಂತು ಸುಡುವರು. ಈಗಳು ಇದಕ್ಕೆ ಎನ್ನ ಒಡಹುಟ್ಟಿದವರು ಎಂತು ಕಿವಿ ಕುಡುವರು.
(ಎನುತ ಶತ್ರುಘ್ನನು ಉರಿದೆದ್ದನು. ಅರಸ ಕೇಳು, ಅನುಜರು ಆಡಿದ ನುಡಿಗೆ ತಲೆವಾಗಿ ತರಣಿಕುಲತಿಲಕನು ಒಯ್ಯನೆ ದೈನ್ಯಭಾವದಿನ್…)
ರಾಮ: ತನಗೆ ತರಹರಿಸಬಾರದ ಅಪವಾದ ಹೃತ್ಛೂಲಮನ್ ಪೆರೆ ಉರ್ಚಿದ ಉರಗನಂತೆ ಜಾನಕಿಯನು ಉಳಿದು ಇರ್ದಪೆನು . ಸಾಕು ನಿಮಗೆ ಒರೆದೊಡೆ ಏನಹುದು.
(ಎಂದು ಬೇಸರೊಳು ಮನೆಗಳ್ಗೆ ಭರತ ಶತ್ರುಘ್ನರನು ಕಳುಹುತ, ಏಕಾಂತದೊಳು ಸೌಮಿತ್ರಿಗೆ ಇಂತೆಂದನು.)
ರಾಮ: ತಮ್ಮ ಬಾ. ನೀನು ಇಂದುವರೆಗೆ ತಾನೆಂದ ಮಾತನು ಮೀರಿದವನಲ್ಲ. ಕೆಲಬಲವನು ಆರಯ್ಯುತ ಮರುಗದಿರು. ಅಲ್ಲದೊಡೆ ತನ್ನ ಕೊರಳಿಗಿದೆ ಖಡ್ಗಮ್. ಈಗ ಜಾನಕಿಯನು ಉಮ್ಮಳಿಸದೆ ಒಯ್ದು ಗಂಗೆಯ ತಡಿಯ ಅರಣ್ಯದೊಳು ಸುಮ್ಮನೆ ಕಳುಹಿ ಬರ್ಪುದು. ಅವಳು ಎನ್ನೊಳು ಬಯಕೆಯಿಂದ ಒಮ್ಮೆ ಕಾನನಕೆ ಐದಬೇಕೆಂದು ಆಡಿರ್ಪಳ್ . ಅದೆ ನಿನಗೆ ನೆವಮ್.
(ಎಂದನು. ಎನೆ)
ಲಕ್ಷ್ಮಣ: ರಾಘವೇಂದ್ರ, ನಿನ್ನ ಆಜ್ಞೆಯನು ಮೀರಲ್ಕೆ ತನಗೆ ರೌರವಮ್ ಅಪ್ಪುದು. ಎಂದುದನು ಮಾಡಲ್ಕೆ ಜನನಿಯನು ಕೊಂದ ಉಗ್ರಗತಿಯಪ್ಪುದು. ಏಗೈವೆನು.
(ಎಂದು ಕಡುಶೋಕದಿಂದೆ ತನು ಝೋಂಪಿಸಲ್ಕೆ ಸೆರೆಬಿಗಿದು ಕಂಬನಿಯಿಂದೆ ನನೆದು ಅಳಲ ತೊರೆಯೊಳ್ ಆಳ್ದ ಅನುಜನನು ಘೂರ್ಮಿಸುತೆ…)
ರಾಮ: ತಾನು ಇರಲ್ಕೆ ನಿನಗೆ ದೋಷಮೆ. ನಡೆ ಕಳುಹು.
(ಎಂದ ಅರಸನು ಏನ್ ದಯೆ ತೊರೆದನೋ.)
ಪದವಿಂಗಡಣೆ ಮತ್ತು ತಿರುಳು
ಅಖಿಳ=ಎಲ್ಲ/ಸಮಸ್ತ; ಭೂಪಾಲ=ರಾಜ;
ಬಾಗಿಲ್ಗೆ ಬಂದ ಅಖಿಳ ಭೂಪಾಲರನು ಕರೆಸಿ ಕಾಣಿಸಿಕೊಳ್ಳದೆ=ತನ್ನನ್ನು ನೋಡಲು ಬಂದ ರಾಜರನ್ನು ಕರೆದು ಮಾತನಾಡದೆ; ಓಲಗ=ರಾಜನು ನಡೆಸುವ ಸಬೆ/ರಾಜ ದರ್‍ಬಾರು;
ಕುಡು=ಕೊಡು/ನೀಡು;
ಓಲಗಮ್ ಕುಡದೆ=ಮಂತ್ರಿ, ಸೇನಾನಿ ಮತ್ತು ಇನ್ನಿತರ ರಾಜಪ್ರಮುಕರೊಡನೆ ಸಮಾಲೋಚನೆಯನ್ನು ಮಾಡುವ ಸಬೆಯನ್ನು ನಡೆಸದೆ;
ಒಳಗೆ=ಅಂತಹಪುರದ ಕೊಟಡಿಯೊಂದರಲ್ಲಿ; ಚಿಂತೆ=ಕಳವಳ/ದುಗುಡ/ದುಮ್ಮಾನ; ಲತಾಂಗಿ=ಬಳ್ಳಿಯಂತೆ ಬಳುಕುವ ಹೆಣ್ಣು/ಕೋಮಲೆ; ಚಿಂತಾಲತಾಂಗಿ=ಚಿಂತೆಯೆಂಬ ಹೆಣ್ಣು. ಕೇಳಿ=ಕ್ರೀಡೆ/ಆಟ; ಚಿಂತಾಲತಾಂಗಿಯ ಕೇಳಿ=ಇದೊಂದು ರೂಪಕ. ಮಯ್ ಮನವೆಲ್ಲವೂ ಚಿಂತೆಯಿಂದಲೇ ತೀವ್ರತರವಾದ ಸಂಕಟಕ್ಕೆ ಒಳಗಾಗಿ; ಎಡೆ+ಕೊಟ್ಟು; ಎಡೆಗೊಟ್ಟು=ಅವಕಾಶವನ್ನು ನೀಡಿ; ರಾಜೇಂದ್ರನ್+ಇರೆ;
ಒಳಗೆ ಚಿಂತಾಲತಾಂಗಿಯ ಕೇಳಿಗೆ ಎಡೆಗೊಟ್ಟು ರಾಜೇಂದ್ರನಿರೆ=ಅಗಸನು ಆಡಿದ ಕಟು ನುಡಿಗಳಿಂದ ಕಂಗೆಟ್ಟಿರುವ ರಾಮನ ಮಯ್ ಮನದಲ್ಲಿ ಉಂಟಾಗುತ್ತಿರುವ ಸಂಕಟವನ್ನು ಈ ರೂಪಕ ಸೂಚಿಸುತ್ತಿದೆ;
ಭೀತಿ+ಇಂದೆ; ಭೀತಿ=ಹೆದರಿಕೆ; ಲಕ್ಷ್ಮಣ+ಆದಿಗಳು; ಆದಿಗಳು=ಮೊದಲಾದವರು; ಪೊಕ್ಕರು=ಪ್ರವೇಶಿಸಿದರು;
ಕೇಳ್ದು ಭೀತಿಯಿಂದೆ ಆ ಲಕ್ಷಣಾದಿಗಳು ಅಂತಃಪುರವನು ಪೊಕ್ಕರು=ರಾಮನು ಯಾವುದೋ ಚಿಂತೆಯಲ್ಲಿ ತೊಡಗಿದ್ದಾನೆ ಎಂಬ ಸುದ್ದಿಯನ್ನು ತಿಳಿದು ಲಕ್ಶ್ಮಣನೊಡನೆ ಉಳಿದ ಇನ್ನಿಬ್ಬರು ತಮ್ಮಂದಿರು ರಾಮನ ಬಳಿಗೆ ಬಂದರು;
ಆಲಂಗಿಸು=ಆವರಿಸಿಕೊಳ್ಳುವುದು; ಜಾಡ್ಯ=ಬೇನೆ/ರೋಗ; ಜಡಿ=ನಡುಗು/ಕಂಪಿಸು; ಅವಯವ=ಅಂಗ/ದೇಹ; ನೀಲಾಂಗನ್+ಅನ್; ನೀಲಾಂಗನ್=ರಾಮ. ರಾಮನ ಮಯ್ ಕಡುನೀಲಿಯ ಬಣ್ಣವಾಗಿದ್ದುದರಿಂದ ಈ ಹೆಸರು ಬಂದಿದೆ; ಕಾಲ್ಗೆ+ಎರಗಿ; ಎರಗಿ=ನಮಸ್ಕರಿಸಿ; ಅಮ್ಮದೆ=ಆಗದೆ; ಸುಮ್ಮನೆ+ಇರುತ+ಇರ್ದರು;
ಆಲಿಂಗಿಸಿದ ಜಾಡ್ಯದಿಂದೆ ಜಡಿವ ಅವಯವದ ನೀಲಾಂಗನನ್ ಕಂಡು ಕಾಲ್ಗೆರಗಿ, ನುಡಿಸಲು ಅಮ್ಮದೆ ಸುಮ್ಮನಿರುತಿರ್ದರು=ಮಯ್ ಮನಕ್ಕೆ ಅಂಟಿದ ಚಿಂತೆಯೆಂಬ ರೋಗದಿಂದ ನಡುಗುತ್ತಿರುವ ರಾಮನನ್ನು ತಮ್ಮಂದಿರು ನೋಡಿ, ಅವನ ಕಾಲುಗಳಿಗೆ ನಮಸ್ಕರಿಸಿ, ಅವನನ್ನು ಮಾತನಾಡಿಸಲಾಗದೆ ಸುಮ್ಮನೆ ಇದ್ದರು;
ಬಲ್ಲಹ=ರಾಜ/ಒಡೆಯ; ಕರುಣಾಳುಗಳ ಬಲ್ಲಹ=ಕರುಣಾಮಯಿಯಾದ ರಾಮ; ಅನುಜ=ತಮ್ಮ; ಮುದ್ದುಗೈದು=ಪ್ರೀತಿಯಿಂದ ನೇವರಿಸಿ;
ಕರುಣಾಳುಗಳ ಬಲ್ಲಹನು ಎದ್ದು ಕುಳ್ಳಿರ್ದು ಅನುಜರನು ಕರೆದು ಮುದ್ದುಗೈದು=ಚಿಂತೆಯಿಂದ ಮುದುಡಿ ಮಲಗಿಕೊಂಡಿದ್ದ ಕರುಣಾಮಯಿಯಾದ ರಾಮನು ಮೇಲೆದ್ದು ಕುಳಿತುಕೊಂಡು, ತಮ್ಮಿಂದರನ್ನು ಹತ್ತಿರಕ್ಕೆ ಕರೆದು ಪ್ರೀತಿಯಿಂದ ನೇವರಿಸಿ;
ಇಳೆ=ಭೂಮಿ; ಪೊದ್ದು=ಅಂಟು/ಹತ್ತು; ಅಪವಾದಮ್+ಅನ್; ಅಪವಾದ=ನಿಂದೆ/ಕೆಟ್ಟ ಹೆಸರು; ಅರಿ=ತಿಳಿ;
ಇಳೆಯೊಳು ಇಂದು ಎನಗೆ ಪೊದ್ದಿದ ಅಪವಾದಮನ್ ನೀವು ಅರಿದುದಿಲ್ಲ=ಜಗತ್ತಿನಲ್ಲಿ ಇಂದು ನನ್ನ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವ ಅಪವಾದದ ಸ್ವರೂಪವೇನು ಮತ್ತು ಅದರ ಪರಿಣಾಮವೇನು ಎಂಬುದು ನಿಮಗೆ ಗೊತ್ತಿಲ್ಲ;
ಅಕಟ=ಅಯ್ಯೋ/ವ್ಯಕ್ತಿಯ ಮಯ್ ಮನದಲ್ಲಿ ಸಂಕಟ ಹೆಚ್ಚಾದಾಗ, ಬಾಯಿಂದ ಹೊರಬೀಳುವ ಪದ; ಸಾಕು+ಇನ್ನು; ನೆರವಿಗಳ್+ಒಳು; ನೆರವಿ=ಗುಂಪು/ಸಮೂಹ; ನೆರವಿಗಳೊಳು=ಜನಸಮುದಾಯದಲ್ಲಿ; ಆಡು=ತೆಗಳು/ನಿಂದಿಸು; ಆರೆನು=ನನಗೆ ಆಗುತ್ತಿಲ್ಲ;
ಅಕಟ, ಸಾಕಿನ್ನು ನೆರವಿಗಳೊಳು ಕದ್ದ ಕಳ್ಳನವೊಲು ಆಡಿಸಿಕೊಳ್ಳಲ್ಕೆ ಆರೆನು=ಅಯ್ಯೋ, ಕದ್ದ ಕಳ್ಳನ ಬಗ್ಗೆ ಜನರು ಆಡಿಕೊಂಡು ನಗುವಂತೆ ನನ್ನನ್ನು ಕುರಿತು ಜನ ಆಡಿಕೊಂಡು ತೆಗಳುವುದನ್ನಾಗಲಿ ಇಲ್ಲವೇ ಗೇಲಿ ಮಾಡುತ್ತ ನಗುವುದನ್ನಾಗಲಿ ತಡೆದುಕೊಳ್ಳಲು ಇನ್ನು ಮುಂದೆ ನನ್ನಿಂದ ಆಗುವುದಿಲ್ಲ; ಇದುವರೆಗೆ ನಾನು ಪಟ್ಟಿರುವ ಸಂಕಟವೇ ಸಾಕು;
ಒಡಲು=ದೇಹ/ಶರೀರ;
ಒಡಲಿದ್ದಲ್ಲಿ ನಿಂದೆಗೆ ಒಳಗಾಗಿ ಬದುಕುವನಲ್ಲ=ಲೋಕದಲ್ಲಿ ನಿಂದೆಗೆ ಗುರಿಯಾದ ಈ ದೇಹವನ್ನು ಹೊತ್ತುಕೊಂಡು ನಾನು ಬದುಕಲು ಇಚ್ಚಿಸುವುದಿಲ್ಲ; ತಿದ್ದಿ ತೀರದ=ಸರಿಪಡಿಸಲಾಗದ/ನಿವಾರಿಸಲಾಗದ; ವಿಲಗ=ಅಪವಾದ/ದೂರು; ಅಂಜು=ಹೆದರು;
ತಿದ್ದಿ ತೀರದ ವಿಲಗಕೆ ಅಂಜುವೆನು=ತೊಡೆದುಹಾಕಲಾಗದ ಅಪವಾದಕ್ಕೆ ನಾನು ಹೆದರುತ್ತೇನೆ;
ಸೀತೆಯ ಬಿಟ್ಟಿಲ್ಲದೆ ಇರೆನು ಎಂದನು=ಸೀತೆಯನ್ನು ಬಿಡದೆ ಇರಲಾರೆನು; ಅಯೋನಿಜೆ=ಸೀತೆ; ಸಂಪನ್ನೆ=ಕೂಡಿದವಳು/ಹೊಂದಿದವಳು;
ಇವಳು ಅಯೋನಿಜೆ=ಇವಳು ಸೀತೆ;
ರೂಪ ಗುಣ ಶೀಲ ಸಂಪನ್ನೆ=ರೂಪ ಗುಣ ಶೀಲವಂತಿಕೆಯಿಂದ ಕೂಡಿದವಳು;
ಭುವನಪಾವನೆ=ಲೋಕಪವಿತ್ರಳು; ಪುಣ್ಯಚರಿತೆ=ಒಳ್ಳೆಯ ನಡೆನುಡಿಯುಳ್ಳವಳು;
ಮಂಗಳ ಮಹೋತ್ಸವೆ=ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿ ಉತ್ಸುಕಳಾದವಳು;
ಪತಿವ್ರತೆ ಎಂಬುದನ್ ಬಲ್ಲೆನು=ಪತಿವ್ರತೆ ಎಂಬುದನ್ನು ಬಲ್ಲೆನು; ಅವನಿಸುತೆ=ಬೂದೇವಿಯ ಮಗಳಾದ ಸೀತೆ;
ಆದೊಡಮ್ ನಿಂದೆಗೆ ಒಳಗಾದ ಬಳಿಕ ತನಗೆ ಅವನಿಸುತೆಯನು ಬಿಡುವುದೇ ನಿಶ್ಚಯಮ್=ಸೀತೆಯು ಗುಣವಂತೆ ಎಂಬುದು ನನಗೆ ಚೆನ್ನಾಗಿ ತಿಳಿದಿದ್ದರೂ ಸೀತೆಯು ಲೋಕದ ಅಪವಾದಕ್ಕೆ ಗುರಿಯಾಗಿರುವುದರಿಂದ, ಅವಳನ್ನು ನಾನು ಬಿಡುವುದು ನಿಶ್ಚಿತ;
ರವಿಕುಲದ ರಾಯರು ಅಪಕೀರ್ತಿಯನು ತಾಳ್ದಪರೆ=ರವಿವಂಶದ ರಾಜರು ತಮ್ಮ ವಂಶಕ್ಕೆ ಕೆಟ್ಟಹೆಸರು ಬಂದರೆ ತಾಳಿಕೊಳ್ಳುತ್ತಾರೆಯೇ;
ಕುವರನ್+ಆಗಿ+ಇರ್ದ; ಕುವರ=ಮಗ; ತಾತ=ಅಪ್ಪ/ತಂದೆ; ಸತ್ಯಭಾಷೆ=ಆಡಿದ ಮಾತಿನಂತೆ ನಡೆದುಕೊಳ್ಳುವುದು; ಉಳಿ=ಬಿಡು/ತ್ಯಜಿಸು;
ಕುವರನಾಗಿರ್ದ ತನ್ನನು ತಾತನು ಸತ್ಯಭಾಷೆಗಾಗಿ ಉಳಿದುದಿಲ್ಲವೆ=ನಮ್ಮ ತಂದೆ ದಶರತ ಮಹಾರಾಜನು ಕೈಕಾದೇವಿಗೆ ಕೊಟ್ಟ ಮಾತನ್ನು ನಡೆಸಿಕೊಡುವುದಕ್ಕಾಗಿ ನನ್ನನ್ನೇ ತೊರೆಯಲಿಲ್ಲವೇ;
ದಶರತ ಮಹಾರಾಜನು ಒಮ್ಮೆ ಹಗೆಗಳೊಡನೆ ಕಾಳೆಗದಲ್ಲಿ ತೊಡಗಿದ್ದಾಗ, ಅವನ ಮೂರನೆಯ ಹೆಂಡತಿಯಾದ ಕೈಕಾದೇವಿಯು ತನ್ನನ್ನು ಕಾಪಾಡಿದ್ದಕ್ಕಾಗಿ ಎರಡು ವರಗಳನ್ನು ನೀಡಿದ್ದನು. ಆಕೆಯು ಅವನ್ನು ತನಗೆ ಅಗತ್ಯ ಬಂದಾಗ ಕೇಳುವೆನೆಂದು ಹೇಳಿದ್ದಳು. ರಾಮನಿಗೆ ಪಟ್ಟಕಟ್ಟುವ ಸನ್ನಿವೇಶದಲ್ಲಿ “ರಾಮನ ಬದಲು ತನ್ನ ಮಗ ಬರತನಿಗೆ ಪಟ್ಟಕಟ್ಟುವ ಮತ್ತು ರಾಮನನ್ನು ಹದಿನಾಲ್ಕು ವರುಶಗಳ ಕಾಲ ಕಾಡಿಗೆ ಅಟ್ಟುವ” ವರಗಳನ್ನು ಕೇಳಿದಳು. ದಶರತನು ಕೊಟ್ಟ ಮಾತಿಗೆ ತಪ್ಪದೆ ಅವೆಲ್ಲವನ್ನೂ ಪಾಲಿಸಿದನು;
ಪಲವು ಮಾತೇನು=ಈಗ ಹಲವು ಮಾತುಗಳನ್ನಾಡುವುದರಿಂದ ಪ್ರಯೋಜನವೇನು?:
ವಿಪ್ರ=ಬ್ರಾಹ್ಮಣ; ಆಚಾರಮ್+ಅನ್; ಆಚಾರ=ಸಂಪ್ರದಾಯ/ಜಾತಿಯ ಕಟ್ಟುಕಟ್ಟಲೆ;
ಕಲಿಯುಗದ ವಿಪ್ರರು ಆಚಾರಮನ್ ಬಿಡುವಂತೆ ಇನ್ನುಸೀತೆಯನು ಬಿಟ್ಟೆನು ಎನೆ=ಕಲಿಯುಗದಲ್ಲಿ ಬ್ರಾಹ್ಮಣರು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಡುವಂತೆ ನಾನು ಸೀತೆಯನ್ನು ಬಿಡುತ್ತೇನೆ ಎನ್ನಲು;
ಕಾರುಣ್ಯ=ದಯೆ/ಕರುಣೆ; ನಿಧಿ=ಕಡಲು/ಸಮುದ್ರ; ಕಾರುಣ್ಯನಿಧಿ=ಕರುಣಾಸಾಗರ/ರಾಮ; ಬಲು=ಅತಿ ದೊಡ್ಡ; ಗರ=ದೆವ್ವ/ಪಿಶಾಚಿ; ಎತ್ತಣ=ಯಾವ ಕಡೆ; ಅನುಜಾತರು=ಒಡಹುಟ್ಟಿದವರು;
ಕಾರುಣ್ಯನಿಧಿಗೆ ಬಲು ಗರಮ್ ಇದು ಎತ್ತಣದೊ ಎನುತೆ ಅನುಜಾತರು ಭೀತಿಯಿಂದೆ ನಡನಡುಗಿ=ಕರುಣಾಸಾಗರನಂತಿದ್ದ ನಮ್ಮ ಅಣ್ಣ ರಾಮನಿಗೆ ಸೀತೆಯ ಬಗೆಗೆ ಇಂತಹ ನಿಲುವನ್ನು ತಳೆಯುವ ಪಿಶಾಚಿ ಯಾವ ಕಡೆಯಿಂದ ಬಂದು ಹಿಡಿಯಿತೋ ಎಂದು ತಮ್ಮಿಂದರೆಲ್ಲರೂ ಹೆದರಿಕೆಯಿಂದ ನಡನಡುಗುತ್ತ;
ನೆಲೆಗೊಳ್ಳು=ತಳವೂರು/ನೆಲೆನಿಲ್ಲು; ವೇದ=ರುಗ್ವೇದ-ಯಜುರ್‍ವೇದ-ಸಾಮವೇದ-ಅತರ್‍ವಣ ವೇದ ಎಂಬ ಹೆಸರಿನ ನಾಲ್ಕು ಹೊತ್ತಿಗೆಗಳು; ಧರೆ=ಬೂಮಂಡಲ; ಪಾಷಂಡಿ=ನೀಚ/ಕೆಟ್ಟವ್ಯಕ್ತಿ; ಸಲೆ=ಒಂದೇ ಸಮನೆ/ಯಾವಾಗಲೂ; ದ್ವಿಜ=ಬ್ರಾಹ್ಮಣ; ಮಾಣ್=ಬಿಡು/ತ್ಯಜಿಸು;
ನೆಲೆಗೊಂಡ ವೇದಮನ್ ಧರೆಯ ಪಾಷಂಡಿಗಳು ಸಲೆ ನಿಂದಿಸಿದೊಡೆ ಅದನು ದ್ವಿಜರು ಮಾಣ್ಬರೇ=ಜನಮನದಲ್ಲಿ ಬಹುಕಾಲದಿಂದಲೂ ನೆಲೆಸಿರುವ ವೇದಗಳನ್ನು ಈ ಬೂಮಂಡಳದಲ್ಲಿರುವ ಕೆಲವು ನೀಚ ವ್ಯಕ್ತಿಗಳು ನಿಂದಿಸಿದ ಮಾತ್ರಕ್ಕೆ ಬ್ರಾಹ್ಮಣರು ವೇದಗಳನ್ನು ತೊರೆಯುತ್ತಾರೆಯೇ;
ಅಕಟ=ಅಯ್ಯೋ/ಸಂಕಟದಿಂದ ತೊಳಲಾಡುವಾಗ ಬಾಯಿಂದ ಹೊರಹೊಮ್ಮುವ ಉದ್ಗಾರದ ನುಡಿ; ಕುಲವರ್ಧಿನಿ=ವಂಶದ ಉದ್ದಾರಕಳನ್ನು; ಎಂತು=ಯಾವ ರೀತಿ;
ಅಕಟ. ನೀನು ಕುಲವರ್ಧಿನಿಯನು ಎಂತು ಬಿಡುವೆ ಪೇಳು=ಅಯ್ಯೋ, ನಮ್ಮ ವಂಶದ ಉದ್ದಾರಕಳಾದ ಸೀತಾದೇವಿಯನ್ನು ಅದು ಹೇಗೆ ತಾನೆ ನೀನು ಬಿಡುತ್ತೀಯೆ ಹೇಳು;
ಅನುಜಾತರು=ಒಡಹುಟ್ಟಿದವರು; ಅಗ್ರಜ=ಅಣ್ಣ;
ಅನುಜಾತರು ಅಗ್ರಜಂಗೆ ಎಂದರು=ತಮ್ಮಂದಿರು ಅಣ್ಣನನ್ನು ಪ್ರಶ್ನಿಸಿದರು;
ಗದ್ಗದ=ಸಂಕಟವು ಹೆಚ್ಚಾದಾಗ ಆಡುವ ಮಾತುಗಳು ಗಂಟಲಿನಲ್ಲಿಯೇ ಸಿಕ್ಕಿಕೊಂಡಂತಾಗಿ, ತಡೆತಡೆದು ಮಾತುಗಳು ಹೊರಹೊಮ್ಮುತ್ತವೆ; ಅಶ್ರು=ಕಣ್ಣೀರು; ನಯನ=ಕಣ್ಣು; ಕಂಠ=ಕೊರಳು; ತುಳುಕು=ತುಂಬಿ ಹೊರಚೆಲ್ಲುವುದು;
ಭಯಶೋಕದಿಂದೆ ಗದ್ಗದಿಸೆ ಕಂಠದೊಳು ಅಶ್ರು ನಯನದೊಳು ತುಳಕೆ=ತಮ್ಮ ಬರತನ ಮಯ್ ಮನದಲ್ಲಿ ಅತಿ ಹೆಚ್ಚಾದ ಹೆದರಿಕೆ ಮತ್ತು ಸಂಕಟ ಉಂಟಾಗಿ, ಗಂಟಲು ಕಂಪಿಸತೊಡಗಿ ಆಡುವ ಮಾತುಗಳು ತಡವರಿಸತೊಡಗಿದವು…ಕಣ್ಣುಗಳು ತುಂಬಿಬಂದವು;
ಕರೆವ=ಹಾಲನ್ನು ಕೊಡುವ; ಕಪಿಲೆ=ಕಂದುಬಣ್ಣದ ಹಸು; ನಯವಿದರು=ನ್ಯಾಯ ನೀತಿಯನ್ನು ಬಲ್ಲ ಒಳ್ಳೆಯ ವ್ಯಕ್ತಿಗಳು; ಪೊಡೆದು=ಹೊಡೆದು; ಅಡವಿ=ಕಾಡು;
ಕರೆವ ಕಪಿಲೆಯನು ನಯವಿದರು ಪೊಡೆದು ಅಡವಿಗೆ ಅಟ್ಟುವರೆ=ನ್ಯಾಯನೀತಿಯನ್ನು ಬಲ್ಲ ಸಜ್ಜನರು ಹಾಲು ಕೊಡುವ ಹಸುವಿನ ಮೇಲೆ ಹಲ್ಲೆಯನ್ನು ಮಾಡಿ, ಕಾಡಿಗೆ ಅಟ್ಟುತ್ತಾರೆಯೇ;
ಪಾವಕ=ಬೆಂಕಿ/ಅಗ್ನಿ; ಅರಸಿ=ರಾಣಿಯಾದ ಸೀತೆಯನ್ನು; ಪುಗಿಸಿದ+ಅಂದು; ಪುಗಿಸು=ಒಳಸೇರು/ಪ್ರವೇಶಿಸು; ಅಂದು=ಆ ದಿನ;
ಪಾವಕನೊಳು ಅರಸಿಯನು ಪುಗಿಸಿದಂದು ಬಯಸಿದೊಡೆ=ಲಂಕೆಯ ಕಾಳೆಗದ ನೆಲದಲ್ಲಿ ನೀನು ಸೀತಾದೇವಿಯ ಶೀಲದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿ, ಸೀತಾದೇವಿಯ ಶೀಲವನ್ನು ಒರೆಹಚ್ಚಿ ನೋಡಲೆಂದು ಅಗ್ನಿಪ್ರವೇಶವನ್ನು ಮಾಡುವಂತೆ ಬಯಸಿದಾಗ;
ಅಯ್ಯನು ಬಂದು=ನಮ್ಮ ತಂದೆಯಾದ ದಶರತ ರಾಜನು ಬಂದು; ಸಾವನ್ನಪ್ಪಿರುವ ದಶರಥನು ಗಗನದಲ್ಲಿ ಗೋಚರಿಸಿ ಮಾತನಾಡಿದನು ಎಂಬುದು ಕಾವ್ಯಲೋಕದ ಸತ್ಯ. ಇದು ವಾಸ್ತವ ಜಗತ್ತಿನ ಕ್ರಿಯೆಯಲ್ಲ;
ಪರಿಶುದ್ಧೆ=ಕಳಂಕವಿಲ್ಲದ ಹೆಣ್ಣು; ನಿನಗೆ ಪ್ರಿಯೆ=ನಿನಗೆ ಬಹಳ ಮೆಚ್ಚಿನವಳು/ನಿನ್ನನ್ನು ಬಹಳವಾಗಿ ಪ್ರೀತಿಸುವವಳು;
ಪರಿಶುದ್ಧೆ=ಯಾವುದೇ ಕಳಂಕವಿಲ್ಲದ ಹೆಣ್ಣು; ಕುಲಕೆ ಮಂಗಳೆ=ನಮ್ಮ ರವಿವಂಶಕ್ಕೆ ಮಂಗಳವನ್ನುಂಟುಮಾಡುವವಳು;
ಸುತ+ಉದಯಕೆ; ಸುತ=ಮಗ; ಉದಯ=ಹುಟ್ಟು; ನಿರ್ಮಲೆ=ಕಳಂಕರಹಿತಳು;
ಸುತೋದಯಕೆ ನಿರ್ಮಲೆ=ಮಗನನ್ನು ಪಡೆಯುವುದಕ್ಕೆ ಯೋಗ್ಯಳಾದವಳು;
ಗತಿ+ಕುಡುವ; ಗತಿ=ಆಶ್ರಯ; ಕುಡು=ಕೊಡು;
ತನಗೆ ಗತಿಗುಡುವ ಸೊಸೆಯೆಂದು=ತನ್ನ ವಂಶಕ್ಕೆ ಒಳ್ಳೆಯದನ್ನು ಮಾಡುವ ಸೊಸೆಯೆಂದು;
ಸುರ+ಅಸುರರ; ಸುರ=ದೇವತೆ; ಅಸುರ=ರಕ್ಕಸ; ಕಟಕ=ಸೇನೆ/ಗುಂಪು; ಕಪಿಕಟಕ=ವಾನರ ಸೇನೆ; ಅರಿಯೆ=ತಿಳಿಯುಂತನೆ; ಆಡನೆ=ಹೇಳಲಿಲ್ಲವೇ;
ಸುರಾಸುರರ ಮುಂದೆ ಕಪಿಕಟಕಮ್ ಅರಿಯೆ ಆಡನೆ=ಸೀತೆಯ ಅಗ್ನಿಪ್ರವೇಶದ ಸನ್ನಿವೇಶದಲ್ಲಿ ನಮ್ಮ ತಂದೆಯಾದ ದಶರತನು ಗೋಚರನಾಗಿ ದೇವತೆಗಳು, ರಕ್ಕಸರು ಮತ್ತು ವಾನರಸೇನೆಯ ಮುಂದೆ ಸೀತಾದೇವಿಯ ಒಳ್ಳೆಯ ಗುಣಗಳನ್ನು ಹೊಗಳಿ ಕೊಂಡಾಡಲಿಲ್ಲವೇ;
ಅದನ್ ಎಲ್ಲಮನ್ ಮರೆದು=ಅದೆಲ್ಲವನ್ನೂ ಮರೆತು;
ಹುಲು=ಸಾಮಾನ್ಯ/ಅಲ್ಪವಾದುದು; ಮನುಜ=ಮಾನವ/ವ್ಯಕ್ತಿ; ರಜಕ=ಅಗಸ; ದೂಸರು=ಅಪವಾದ; ಕುಲಪತ್ನಿ=ಕುಲಕ್ಕೆ ಸೇರಿದ ಹೆಂಡತಿ; ಹದನು=ರೀತಿ/ಕ್ರಮ; ಆವುದು=ಯಾವುದು;
ಹುಲುಮನುಜ ರಜಕನು ಆಡಿದ ದೂಸರನು ನೆನೆದು ಕುಲಪತ್ನಿಯನು ಬಿಡುವ ಹದನು ಆವುದು=ಅತಿ ಸಾಮಾನ್ಯ ವ್ಯಕ್ತಿಯಾದ ಅಗಸನು ಆಡಿದ ನಿಂದನೆಯ ನುಡಿಗಳನ್ನು ನೆನೆದುಕೊಂಡು, ಹೆಂಡತಿಯನ್ನು ಬಿಡುವ ಈ ನಿನ್ನ ರೀತಿಯ ಯಾವುದು. ಅಂದರೆ ನಿನ್ನ ನಿಲುವು ಸರಿಯಲ್ಲ;
ಗುರು=ದೊಡ್ಡದು; ಲಘು=ಚಿಕ್ಕದು; ಅಂತರ=ವ್ಯತ್ಯಾಸ; ಎಣಿಸು=ತಿಳಿದುನೋಡು/ಪರಿಶೀಲಿಸು/ಒರೆಹಚ್ಚಿ ನೋಡು;
ಗುರುಲಘುವಿನ ಅಂತರ ಎಣಿಸು=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಒರೆಹಚ್ಚಿ ನೋಡದೆ;
ಬರಿದೆ=ಸುಮ್ಮನೆ; ಮೂಢ=ತಿಳಿಗೇಡಿ; ಎದೆಗೆಟ್ಟು=ಮನಸ್ಸನ್ನು ಕೆಡಿಸಿಕೊಂಡು; ದೋಷಿ+ಎಂಬರೆ; ದೋಷಿ=ಅಪರಾದಿ; ಎಂಬರೆ=ಎನ್ನುತ್ತಾರೆಯೆ;
ಅಕಟ…ಗುರುಲಘುವಿನ ಅಂತರವನು ಎಣಿಸದೆ ಬರಿದೆ ಮೂಢರಂತೆ ಎದೆಗೆಟ್ಟು ದೇವಿಯನು ದೋಷಿಯೆಂಬರೆ=ಅಯ್ಯೋ, ಈ ಸನ್ನಿವೇಶದಲ್ಲಿ ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಒರೆಹಚ್ಚಿ ನೋಡದೆ, ತಿಳಿಗೇಡಿಗಳಂತೆ ಮನಸ್ಸನ್ನು ಹಾಳುಮಾಡಿಕೊಂಡು ವಿನಾಕಾರಣವಾಗಿ ಸೀತಾದೇವಿಯ ಮೇಲೆ ತಪ್ಪನ್ನು ಹೊರಿಸುವುದು ಸರಿಯೇ;
ಜೀಯ=ಒಡೆಯ; ಪದುಳ=ನೆಮ್ಮದಿ; ಕದುಬು=ತಳಮಳಿಸು/ಕಳವಳಪಡು;
ಜೀಯ, ಪದುಳವು ಇಹುದು ಎಂದು ವಿನಯದೊಳ್ ಭರತನ್ ಅಗ್ರಜಾತನನು ಕದುಬಿ ನುಡಿದನು=ಒಡೆಯನೇ, ಇಂತಹ ಚಿಕ್ಕ ಸಂಗತಿಗಾಗಿ ಮನಸ್ಸನ್ನು ಕೆಡಿಸಿಕೊಳ್ಳದೆ, ಶಾಂತಚಿತ್ತನಾಗಿ ನೆಮ್ಮದಿಯಿಂದ ಇರುವುದೆಂದು ಭರತನು ರಾಮನನ್ನು ಕುರಿತು ಅತ್ಯಂತ ವಿನಯದ ದನಿಯಲ್ಲಿ ಕಳವಳಿಸುತ್ತ ನುಡಿದನು;
ಆತನನು ನೋಡುತ ಒಯ್ಯನೆ ಭೂಪನು ಇಂತೆಂದನು=ಆಗ ರಾಮನು ಬರತನನ್ನು ನೋಡುತ್ತ ಕೂಡಲೇ ಈ ರೀತಿ ಹೇಳತೊಡಗಿದನು;
ಉಮ್ಮಳಿಸು=ಚಿಂತಿಸು/ತವಕಿಸು/ತಳಮಳಗೊಳ್ಳು; ವಿರಜೆ=ಕಳಂಕರಹಿತಳು;
ತಮ್ಮ ಉಮ್ಮಳಿಸಬೇಡ. ನೀನು ಆಡಿದಂತೆ ಅವನಿಸುತೆ ವಿರಜೆ ಅಹುದು=ತಮ್ಮನೇ, ಚಿಂತಿಸಬೇಡ. ನೀನು ಹೇಳಿದಂತೆ ಸೀತೆಯು ಕಳಂಕರಹಿತಳು;
ಈ ದೂಸರನು ಸೈರಿಸಲಾರೆನು=ಆದರೆ ಈಗ ಬಂದಿರುವ ಅಪವಾದವನ್ನು ಸಹಿಸಿಕೊಳ್ಳುವುದಕ್ಕೆ ನನ್ನಿಂದ ಆಗುತ್ತಿಲ್ಲ;
ಹರಿಶ್ಚಂದ್ರ+ಆದಿ; ಆದಿ=ಮೊದಲಾದ; ಪೃಥು=ಒಬ್ಬ ರಾಜ; ಪುರೂರವ=ಒಬ್ಬ ರಾಜ; ಹರಿಶ್ಚಂದ್ರ=ಒಬ್ಬ ರಾಜ; ನರಪತಿ=ರಾಜ; ಮಹಿ=ಬೂಮಂಡಲ;
ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು ಮಹಿಯೊಳು ಸುಮ್ಮನೆ ಉಳಿವರೇ=ಬೂಮಂಡಲದಲ್ಲಿ ಪೃತು ಪುರೂರವ ಹರಿಶ್ಚಂದ್ರ ಮುಂತಾದ ರಾಜರಿಗೆ ಕೀರ್‍ತಿಯು ಸುಮ್ಮನೆ ಬಂದಿಲ್ಲ. ಅವರೆಲ್ಲರೂ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳಿದ್ದರಿಂದಲೇ ಅಮರರಾಗಿ ಉಳಿದಿದ್ದಾರೆ;
ಅಪಕೀರ್ತಿ=ಕೆಟ್ಟಹೆಸರು; ಒಳಗಾಗಲು+ಏತಕೆ;
ಅಪಕೀರ್ತಿಗೆ ಒಳಗಾಗಲೇತಕೆ=ಕೆಟ್ಟಹೆಸರಿಗೆ ಏಕೆ ಬಲಿಯಾಗಬೇಕು;
ಮಮತೆ=ನಾನು ನನ್ನದು ಎಂಬ ಮೋಹ/ಮಮಕಾರ; ಯೋಗಿ=ತಪಸ್ವಿ/ರಿಸಿ;
ಮಮತೆಯನು ಮಹಾಯೋಗಿ ಬಿಡುವಂತೆ ಇವಳನು ಉಳಿವೆನು ಎನೆ=ದೊಡ್ಡ ತಪಸ್ವಿಯು ಮಮಕಾರವನ್ನು ತ್ಯಜಿಸುವಂತೆ ನಾನು ಸೀತೆಯನ್ನು ತೊರೆಯುತ್ತೇನೆ ಎಂದು ರಾಮನು ನುಡಿಯಲು;
ಹಮ್ಮೈಸು=ಗೋಳಾಡು; ಕಂಪಿಸು=ನಡುಗು;
ಲಕ್ಷ್ಮಣನು ಹಮ್ಮೈಸಿ ಕಂಪಿಸುತೆ ಕಿವಿಮುಚ್ಚುತ ಅಗ್ರಜಂಗೆ ಇಂತೆಂದನು=ರಾಮನ ನುಡಿಗಳನ್ನು ಕೇಳಿ ಲಕ್ಶ್ಮಣನು ಸಂಕಟದ ತೀವ್ರತೆಯಿಂದ ನಡುಗಿ ಗೋಳಿಡುತ್ತ ಅಣ್ಣನಿಗೆ ಈ ರೀತಿ ಹೇಳಿದನು;
ಕಾಯ+ಸುಖಕೆ+ಓಸುಗಮ್; ಕಾಯ=ದೇಹ/ಮಯ್; ಸುಖ=ಆನಂದ; ಸುಖಕೋಸುಗಮ್=ಆನಂದಕ್ಕಾಗಿ; ಧರ್ಮಕೃತ=ಸತ್ಯನೀತಿನ್ಯಾಯದ ನಡೆನುಡಿ; ಬಿಡುವೊಲು=ಬಿಡುವಂತೆ;
ಕಾಯಸುಖಕೋಸುಗಮ್ ಧರ್ಮಕೃತಮನು ಬಿಡುವೊಲು=ದೇಹದ ಬಯಕೆಯನ್ನು ಈಡೇರಿಸಿಕೊಂಡು ಆನಂದವನ್ನು ಪಡೆಯುವುದಕ್ಕಾಗಿ ಸತ್ಯನೀತಿನ್ಯಾಯದ ನಡೆನುಡಿಯನ್ನು ಬಿಟ್ಟು ಬಾಳುವಂತೆ;
ಆಯತ+ಅಕ್ಷಿಯ; ಆಯತ=ವಿಶಾಲವಾದ; ಅಕ್ಷಿ=ಕಣ್ಣು; ಆಯತಾಕ್ಷಿ=ವಿಶಾಲವಾದ ಕಣ್ಣುಳ್ಳವಳು/ಸೀತೆ; ಭಾವಶುದ್ಧಿ=ಒಳ್ಳೆಯ ಮನಸ್ಸು;
ಆಯತಾಕ್ಷಿಯ ಭಾವಶುದ್ಧಿಯನು ತಿಳಿದಿರ್ದು=ಸೀತಾದೇವಿಯ ಮನಸ್ಸು ಎಶ್ಟು ಒಳ್ಳೆಯದು ಎಂಬುದು ತಿಳಿದಿದ್ದರೂ;
ನಿಷ್ಕರುಣದಿ=ತುಸುವಾದರೂ ಕರುಣೆಯಿಲ್ಲದೆ; ವಾಯ=ಸುಳ್ಳು/ಹುಸಿ; ಇಂತು=ಈ ರೀತಿ;
ನಿಷ್ಕರುಣದಿ ವಾಯದ ಅಪವಾದಕೆ ಇಂತು ಅರಸಿಯನು ತೊರೆಯಬೇಕು ಎಂಬರೇ=ಸುಳ್ಳು ಅಪವಾದಕ್ಕಾಗಿ ಸೀತೆಯನ್ನು ತೊರೆಯಬೇಕೆಂದು ಕರುಣೆಯಿಲ್ಲದೆ ಹೇಳುತ್ತಿರುವೆಯಲ್ಲ, ಇದು ಸರಿಯೇ:
ಬೆಸಲು+ಆದ; ಬೆಸಲು=ಹಡೆಯುವಿಕೆ/ಹೆರಿಗೆ; ಆರೈದು=ಅಕ್ಕರೆಯನ್ನು ತೋರಿಸುವುದು; ಸಲಹು=ಸಾಕು/ಬೆಳೆಸು/ಪಾಲಿಸು; ಸಲಹಬೇಕು=ಕಾಪಾಡಿಕೊಳ್ಳಬೇಕು;
ಜೀಯ, ತುಂಬಿದ ಬಸುರು ಬೆಸಲಾದ ದೇವಿಯನು ಪ್ರಿಯದಿಂದೆ ಆರೈದು ಸಲಹಬೇಕು ಎಂದು ರಘುರಾಯಂಗೆ ಲಕ್ಷ್ಮಣನು ಬಿನ್ನೈಸೆ=ಒಡೆಯನೆ, ತುಂಬು ಬಸುರಿಯಾಗಿ ಮಗುವನ್ನು ಹೆರಲಿರುವ ಸೀತಾದೇವಿಯನ್ನು ಅಕ್ಕರೆಯಿಂದ ಕಾಪಾಡಿಕೊಳ್ಳಬೇಕಾದ ಹೊಣೆಯು ನಿನ್ನ ಪಾಲಿಗಿದೆ ಎಂದು ರಾಮನಿಗೆ ಲಕ್ಶ್ಮಣನು ಅರಿಕೆ ಮಾಡಿಕೊಳ್ಳಲು;
ಮೇಲ್+ಪಾಯ್ದು; ಪಾಯ್=ನೆಗೆ/ಹಾರು/ಎರಗು; ಮೇಲ್ವಾಯ್ದು=ಆವೇಶದಿಂದ ಮುನ್ನುಗ್ಗಿ; ಇಂತು+ಎಂದನು;
ಶತ್ರುಘ್ನನು ಮೇಲ್ವಾಯ್ದು ಇಂತೆಂದನು=ಶತ್ರುಗ್ನನು ತುಂಬಾ ಆವೇಶದಿಂದ ಮುಂದೆ ಬಂದು ಈ ರೀತಿ ಹೇಳಿದನು;
ಇಕ್ಷ್ವಾಕು=ಅಯೋದ್ಯೆಯನ್ನು ಆಳುತ್ತಿದ್ದ ರವಿವಂಶದ ಮೊದಲ ರಾಜನ ಹೆಸರು;
ಇಕ್ಷ್ವಾಕು ವಂಶದವರು ಅರಸಿಯನು ಎಂತು ಬಿಡುವರು=ಹೆಸರಾಂತ ಇಕ್ಶ್ವಾಕು ವಂಶದ ರಾಜರು ಪಟ್ಟದ ರಾಣಿಯನ್ನು ಯಾವ ರೀತಿ ಬಿಡಲು ಆಗುತ್ತದೆ. ಹಾಗೆ ಬಿಟ್ಟರೆ ರಾಜವಂಶಕ್ಕೆ ಕಳಂಕ ತಟ್ಟುತ್ತದೆ;
ಇಳೆ=ಬೂಮಂಡಲ; ಆರ್+ಆದೊಡಮ್; ಆರ್=ಯಾರು; ಆದೊಡಮ್=ಆದರೂ: ದೂಸರು=ಅಪವಾದ;
ಇಳೆಯೊಳು ಆರಾದೊಡಮ್ ದೂಸರನು ಎಂತು ನುಡಿವರು=ಬೂಮಂಡಲದಲ್ಲಿ ಯಾರಾದರೂ ಇಂತಹ ನಿಂದನೆಯನ್ನು ಇಕ್ಶ್ವಾಕು ರಾಜವಂಶದ ಬಗ್ಗೆ ಹೇಗೆ ತಾನೆ ನುಡಿಯುವರು;
ಅಮಲ=ಕೊಳಕು ಇಲ್ಲದಿರುವುದು/ಪರಿಶುದ್ದವಾದುದು; ಸತ್ಕೀರ್ತಿ=ಒಳ್ಳೆಯ ಹೆಸರು;
ಅಮಲ ಸತ್ಕೀರ್ತಿಯನು ಎಂತು ಪಡೆವರು=ಈ ರೀತಿ ಅಪವಾದವನ್ನು ಮತ್ತೊಬ್ಬರ ಮೇಲೆ ಹೊರಿಸುವವರು ಹೇಗೆ ತಾನೆ ಒಳ್ಳೆಯ ಹೆಸರನ್ನು ಪಡೆಯಲು ಆಗುತ್ತದೆ;
ಬುದ್ಧಿ ಪೇಳ್ವುದಕೆ ಒಡೆಯರಿಲ್ಲವಾಗಿ=ಯಾವುದು ಸರಿ/ಯಾವುದು ತಪ್ಪು ಎಂಬುದನ್ನು ತಿಳಿಯಹೇಳಿ, ಸರಿಯಾದ ತಿಳುವಳಿಕೆಯನ್ನು ಹೇಳುವವರು ಇಲ್ಲವಾಗಿರುವುದರಿಂದ ಇಂತಹ ಅಪಚಾರ ನಡೆಯುತ್ತಿದೆ;
ಏಳ್ಗೆ=ಬೆಳವಣಿಗೆ; ಕಡಿ=ಕತ್ತರಿಸು;
ಏಳ್ಗೆಯನು ಎಂತು ಕಡಿವರು=ರಾಜವಂಶದ ಬೆಳವಣಿಗೆಯನ್ನು ಹೇಗೆ ತುಂಡರಿಸುತ್ತಾರೆ. ತುಂಬು ಬಸುರಿಯಾಗಿರುವ ಸೀತೆಯನ್ನು ತ್ಯಜಿಸುವುದರಿಂದ ರಾಜವಂಶದ ಕುಡಿಯನ್ನು ಕತ್ತರಿಸಿದಂತಾಗುತ್ತದೆ;
ಅನ್ವಯ=ವಂಶ/ಕುಲ; ಬಾಳ್ಕೆ=ಬದುಕು/ಜೀವನ; ಅಳಲು=ಸಂಕಟ/ಶೋಕ/ವೇದನೆ;
ಅನ್ವಯದ ಬಾಳ್ಕೆಯನು ಪೆಣ್ ಅಳಲ ಬೆಂಕಿಯಿನ್ ಎಂತು ಸುಡುವರು=ರಾಜವಂಶದ ಬದುಕನ್ನು ಹೆಣ್ಣಿನ ಸಂಕಟದ ಬೆಂಕಿಯಿಂದ ಹೇಗೆ ತಾನೇ ಸುಡುವರು. ಅಂದರೆ ಸೀತೆಯ ಒಡಲ ಬೆಂಕಿಯು ಇಕ್ಶ್ವಾಕು ರಾಜವಂಶವನ್ನೇ ಸುಟ್ಟು ನಾಶಮಾಡುತ್ತದೆ;
ಉರಿದು+ಎದ್ದನು; ಉರಿ=ರೇಗು/ಕೆರಳು;
ಈಗಳ್ ಎನ್ನ ಒಡಹುಟ್ಟಿದವರು ಇದಕ್ಕೆ ಕಿವಿ ಎಂತು ಕುಡುವರು ಎನುತ ಶತ್ರುಘ್ನನು ಉರಿದೆದ್ದನು=ಈಗ ನನ್ನ ಒಡಹುಟ್ಟಿದವರು ಸೀತೆಯನ್ನು ತೊರೆಯಬೇಕೆಂಬ ಅಣ್ಣನ ಮಾತನ್ನು ಹೇಗೆ ತಾನೆ ಕೇಳಲು ಆಗುತ್ತದೆ ಎಂದು ಶತ್ರುಗ್ನನು ಕೋಪೋದ್ರೇಕದಿಂದ ನುಡಿದನು;
ಅನುಜರು=ಒಡಹುಟ್ಟಿದವರು; ತಲೆ+ಬಾಗಿ; ತರಣಿ=ಸೂರ್‍ಯ; ತರಣಿಕುಲತಿಲಕ=ಸೂರ್‍ಯವಂಶಕ್ಕೆ ತಿಲಕಪ್ರಾಯನಂತಿರುವ ರಾಮ; ಒಯ್ಯನೆ=ಮರುಗಳಿಗೆಯಲ್ಲಿಯೇ; ದೈನ್ಯಭಾವ=ಸಂಕಟದಿಂದ ಮುದುಡಿಹೋಗಿ;
ಅನುಜರು ಆಡಿದ ನುಡಿಗೆ ತಲೆವಾಗಿ ತರಣಿಕುಲತಿಲಕನು ಒಯ್ಯನೆ ದೈನ್ಯಭಾವದಿನ್=ತನ್ನ ನಿಲುವಿಗೆ ಎದುರಾಗಿ, ಸೀತೆಯ ಪರವಾಗಿ ಮಾತನಾಡಿದ ತಮ್ಮಂದಿರ ನುಡಿಗಳನ್ನು ಕೇಳಿ, ರಾಮನು ತಲೆಯನ್ನು ಬಗ್ಗಿಸಿ, ಸಂಕಟದಿಂದ ಮುದುಡಿಹೋಗಿ ಮಾತನಾಡತೊಡಗಿದನು;
ತರಹರಿಸು=ಸಹಿಸಿಕೊಳ್ಳು; ಹೃತ್+ಶೂಲಮ್+ಅನ್; ಹೃತ್=ಎದೆ; ಶೂಲ=ಚೂಪಾದ ಮೊನೆಯುಳ್ಳ ಹರಿತವಾದ ಹತಾರ; ಹೃತ್ ಶೂಲ=ಇದೊಂದು ನುಡಿಗಟ್ಟು. ಎದೆಯನ್ನು ಹೊಕ್ಕಿರುವ ಶೂಲ ಎಂದರೆ ಮಯ್ ಮನವನ್ನು ಗಾಸಿಗೊಳಿಸುತ್ತಿರುವ ಸಂಕಟ; ಜಾನಕಿ=ಜನಕ ಮಹಾರಾಜನ ಸಾಕು ಮಗಳಾದ ಸೀತೆ;
ತನಗೆ ತರಹರಿಸಬಾರದ ಅಪವಾದ ಹೃತ್ಛೂಲಮನ್ =ನನ್ನ ಮಯ್ ಮನವನ್ನು ಚುಚ್ಚಿ ಗಾಸಿಗೊಳಿಸುತ್ತಿರುವ ಸಹಿಸಿಕೊಳ್ಳಲಾಗದ ಈ ಲೋಕಾಪವಾದದ ಸಂಕಟವನ್ನು;
ಪೆರೆ=ಹಾವಿನ ಪೊರೆ; ಉರ್ಚು=ಉದುರು/ಕಳಚಿ ಬೀಳು; ಉರಗ=ಹಾವು/ಸರ್‍ಪ;
ಪೆರೆ ಉರ್ಚಿದ ಉರಗನಂತೆ =ಪೊರೆಯನ್ನು ಕಳಚಿಕೊಳ್ಳುವ ಹಾವಿನಂತೆ;
ಜಾನಕಿಯು ಉಳಿದು ಇರ್ದಪೆನು=ಸೀತೆಯನ್ನು ತೊರೆದು ಕಳಂಕರಹಿತನಾಗುವೆನು;
ಒರೆ=ಹೇಳು;
ಸಾಕು ನಿಮಗೆ ಒರೆದೊಡೆ ಏನಹುದು ಎಂದು ಬೇಸರೊಳು ಮನೆಗಳ್ಗೆ ಭರತ ಶತ್ರುಘ್ನರನು ಕಳುಹುತ=ನಿಮ್ಮ ಜತೆ ನನ್ನ ಸಂಕಟವನ್ನು ಹೇಳಿಕೊಳ್ಳುವುದರಿಂದ ಏನು ತಾನೆ ಪ್ರಯೋಜನ ಎಂದು ಬೇಸರಿಸಿಕೊಂಡು, ಭರತ ಶತ್ರುಗ್ನರನ್ನು ಅವರ ಮನೆಗಳಿಗೆ ಕಳುಹಿಸಿ;
ಸೌಮಿತ್ರಿ=ದಶರತನ ಎರಡನೆಯ ಹೆಂಡತಿಯಾದ ಸುಮಿತ್ರೆಯ ಮಗನಾದ ಲಕ್ಶ್ಮಣ;
ಏಕಾಂತದೊಳು ಸೌಮಿತ್ರಿಗೆ ಇಂತೆಂದನು=ರಾಮನು ಲಕ್ಶ್ಮಣನನ್ನು ಏಕಾಂತಕ್ಕೆ ಕರೆದು ಈ ರೀತಿ ಹೇಳಿದನು; ಇಂದುವರೆಗೆ=ಈ ದಿನದ ತನಕ; ತಾನ್+ಎಂದ;
ತಮ್ಮ ಬಾ. ನೀನು ಇಂದುವರೆಗೆ ತಾನೆಂದ ಮಾತನು ಮೀರಿದವನಲ್ಲ=ಲಕ್ಶ್ಮಣ, ಈ ದಿನದ ತನಕ ನೀನು ಯಾವತ್ತು ನನ್ನ ಮಾತನ್ನು ಕಡೆಗಣಿಸಿಲ್ಲ;
ಆರಯ್=ಚಿಂತಿಸು/ಯೋಚಿಸು;
ಕೆಲಬಲವನು ಆರಯ್ಯುತ ಮರುಗದಿರು=ಅಗಸನ ಮಾತಿನಿಂದ ಉಂಟಾಗಿರುವ ಬಿಕ್ಕಟ್ಟನ್ನು ಕಂಡು ಮತ್ತು ಅದರ ಬಗ್ಗೆ ತಮ್ಮಂದಿರಾದ ನೀವೆಲ್ಲರೂ ಆಡಿದ ಮಾತುಗಳನ್ನು ಚಿಂತಿಸುತ ಮರುಗಬೇಡ;
ಅಲ್ಲದೊಡೆ=ಹಾಗಲ್ಲದಿದ್ದರೆ;
ಅಲ್ಲದೊಡೆ ತನ್ನ ಕೊರಳಿಗಿದೆ ಖಡ್ಗಮ್=ಈಗ ನನ್ನ ಮಾತು ನಡೆಯದಿದ್ದರೆ, ನನ್ನ ಕೊರಳನ್ನು ನಾನೇ ಕತ್ತರಿಸಿಕೊಂಡು ಸಾವನ್ನಪ್ಪುತ್ತೇನೆ; ಉಮ್ಮಳಿಸು=ಚಿಂತಿಸು/ಕಳವಳಪಡು;
ಈಗ ಜಾನಕಿಯನು ಉಮ್ಮಳಿಸದೆ ಒಯ್ದು ಗಂಗೆಯ ತಡಿಯ ಅರಣ್ಯದೊಳು ಸುಮ್ಮನೆ ಕಳುಹಿ ಬರ್ಪುದು=ಏನನ್ನೂ ಚಿಂತಿಸದೆ ಸುಮ್ಮನೆ ಈಗ ನೀನು ಸೀತೆಯನ್ನು ಗಂಗಾ ನದಿಯ ತಡಿಯಲ್ಲಿರುವ ಕಾಡಿನಲ್ಲಿ ಬಿಟ್ಟು ಬರುವುದು;
ಎನ್ನೊಳು=ನನ್ನಲ್ಲಿ; ಒಮ್ಮೆ=ಒಂದು ಬಾರಿ; ಐದಬೇಕು=ಹೋಗಬೇಕು; ನೆವ=ಕಾರಣ;
ಅವಳು ಎನ್ನೊಳು ಬಯಕೆಯಿಂದ ಒಮ್ಮೆ ಕಾನನಕೆ ಐದಬೇಕೆಂದು ಆಡಿರ್ಪಳ್ . ಅದೆ ನಿನಗೆ ನೆವಮ್ ಎಂದನು=ಸೀತಾದೇವಿಯು ಒಮ್ಮೆ ನನ್ನ ಮುಂದೆ ತಾನು ಕಾಡಿಗೆ ಹೋಗಿಬರಬೇಕೆಂಬ ಬಸುರಬಯಕೆಯನ್ನು ಹೇಳಿಕೊಂಡಿದ್ದಳು. ಈಗ ನಿನಗೆ ಅದು ನೆರವಾಗುತ್ತದೆ. ಆಕೆಯ ಬಯಕೆಯಂತೆಯೇ ನೀನು ಕಾಡಿಗೆ ಕರೆದುಕೊಂಡು ಹೋಗುತ್ತಿರುವೆ ಎಂದು ತಿಳಿಯುತ್ತಾಳೆ;
ರೌರವ=ಅತಿಹೆಚ್ಚಿನ ದಂಡನೆಯನ್ನು ನೀಡುವ ಈ ಹೆಸರಿನ ನರಕವೊಂದು ಇದೆಯೆಂಬ ಕಲ್ಪನೆಯು ಜನಮನದಲ್ಲಿದೆ;
ನಿನ್ನ ಆಜ್ಞೆಯನು ಮೀರಲ್ಕೆ ತನಗೆ ರೌರವಮ್ ಅಪ್ಪುದು=ನಿನ್ನ ಅಪ್ಪಣೆಯನ್ನು ಮೀರಿದರೆ ಅಂದರೆ ಸೀತಾದೇವಿಯನ್ನು ಕಾಡಿನಲ್ಲಿ ಬಿಟ್ಟುಬಾರದಿದ್ದರೆ, ನನಗೆ ಬಹುದೊಡ್ಡ ನರಕ ಪ್ರಾಪ್ತವಾಗುತ್ತದೆ;
ಎಂದುದನು ಮಾಡಲ್ಕೆ ಜನನಿಯನು ಕೊಂದ ಉಗ್ರಗತಿಯಪ್ಪುದು=ನೀನು ಹೇಳಿದಂತೆ ಮಾಡಿದರೆ, ತಾಯಿಯನ್ನು ಕೊಂದ ಪಾಪಿಗೆ ಉಂಟಾಗುವ ಬಯಂಕರವಾದ ದಂಡನೆಗೆ ಗುರಿಯಾಗುತ್ತೇನೆ;
ಏಗೈವೆನು=ಏನು ಮಾಡಲಿ;
ಏಗೈವೆನು ಎಂದು=ಈಗೇನು ಮಾಡಲಿ ಎಂದು ಇಬ್ಬಗೆಯ ಸಂಕಟದಿಂದ ತೊಳಲಾಡುತ್ತ;
ಕಡುಶೋಕ=ಬಹಳ ಸಂಕಟ; ತನು=ದೇಹ; ಝೋಂಪಿಸು=ನಡುಗು/ಕಂಪಿಸು;
ಕಡುಶೋಕದಿಂದೆ ತನು ಝೋಂಪಿಸಲ್ಕೆ=ಹೆಚ್ಚಿನ ಸಂಕಟದಿಂದ ದೇಹವು ನಡುಗುತ್ತಿರಲು;
ಸೆರೆಬಿಗಿದು=ಕೊರಳು ಕಟ್ಟಿಬಂದಂತಾಗಿ; ನನೆ=ಒದ್ದೆಯಾಗಿ; ಅಳಲ=ಸಂಕಟ/ವೇದನೆ/ನೋವು; ತೊರೆ=ನದಿ/ಹೊಳೆ; ಆಳ್=ಮುಳುಗು; ಘೂರ್ಮಿಸು=ಅಬ್ಬರಿಸು/ದೊಡ್ಡ ದನಿಯಲ್ಲಿ ಗದರಿಸು;
ಸೆರೆಬಿಗಿದು ಕಂಬನಿಯಿಂದೆ ನನೆದು ಅಳಲ ತೊರೆಯೊಳ್ ಆಳ್ದ ಅನುಜನನು ಘೂರ್ಮಿಸುತೆ=ಗಂಟಲು ಕಟ್ಟಿಬಂದು ಮಾತನಾಡಲಾಗದೆ, ಕಣ್ಣೀರಿನಲ್ಲಿ ತೊಯ್ದುಹೋಗಿ, ಸಂಕಟದ ಹೊಳೆಯಲ್ಲಿ ಮುಳುಗಿದ ತಮ್ಮನನ್ನು ದೊಡ್ಡ ದನಿಯಲ್ಲಿ ಗದರಿಸುತ್ತ;
ತಾನು ಇರಲ್ಕೆ ನಿನಗೆ ದೋಷಮೆ. ನಡೆ ಕಳುಹು ಎಂದ ಅರಸನು=ನಾನು ಇರುವಾಗ ನಿನಗೆ ಯಾವ ಪಾಪವು ತಟ್ಟುವುದಿಲ್ಲ. ಹೋಗು ಸೀತೆಯನ್ನು ಕಾಡಿಗೆ ಕಳುಹಿಸು ಎಂದು ನುಡಿದ ರಾಮನು;
ಏನ್ ದಯೆ ತೊರೆದನೋ=ಇದೇನು ರಾಮನು ಕರುಣೆ ಎಂಬುದನ್ನು ಸಂಪೂರ್‍ಣವಾಗಿ ತೊರೆದಿರುವನಲ್ಲ; ಸೀತೆಯ ಬಗ್ಗೆ ತುಂಬಾ ಕ್ರೂರಿಯಾಗಿದ್ದಾನೆ; ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಹೇಳುತ್ತಿರುವ ಜೈಮಿನಿ ಮುನಿಯು ರಾಮನ ಬಗ್ಗೆ ಈ ರೀತಿ ಉದ್ಗಾರದ ನುಡಿಗಳನ್ನಾಡಿದ್ದಾನೆ;
(ಚಿತ್ರ ಸೆಲೆ: ವಿಕಿಪೀಡಿಯ)
ಇತ್ತೀಚಿನ ಅನಿಸಿಕೆಗಳು