ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 4)
– ಸಿ.ಪಿ.ನಾಗರಾಜ.
ನೋಟ – 4
ಅಣ್ಣದೇವನೊಳು ಇಡಿದ ವಾತ್ಸಲ್ಯಮೆಂಬ ಬಲ್ಗಣ್ಣಿಯೊಳು ಕಟ್ಟುವಡೆದು, ಅಲ್ಲ ಎನಲು ಅರಿಯದೆ ನಿರ್ವಿಣ್ಣಭಾವದೊಳು ಅಂದು ಲಕ್ಷ್ಮಣನು ತುರಗ ಸಾರಥಿ ಕೇತನಂಗಳಿಂದೆ ಹಣ್ಣಿದ ವರೂಥಮನು ತರಿಸಿ, ಪೊರಗೆ ಇರಿಸಿ, ನೆಲವೆಣ್ಣ ಮಗಳು ಇರುತಿರ್ದ ರಾಜಮಂದಿರಕೆ ಐದಿ, ದೂರದೊಳೆ ನಿಂದು ಕಣ್ಣೊಳು ಈಕ್ಷಿಸದೆ ತಲೆವಾಗಿ ಆ ಸೀತೆಗೆ ಇಂತೆಂದನು.
ಲಕ್ಷ್ಮಣ: ತಾಯೆ, ನೀನು ಏತಕೆ ಎಳಸಿದೆ. ನಿನ್ನನು ಈಗ ರಘುರಾಯನು ತಪೋವನಕೆ ಕಳುಹಿ ಬರಹೇಳಿದನು. ಪ್ರಿಯಮುಳ್ಳೊಡೆ ರಥಮ್ ಪಣ್ಣಿ ಬಂದಿದೆಕೊ…ಬಿಜಯಂಗೈವುದು.
(ಎಂದು ಮರುಗಿ ಸುಮಿತ್ರಾತ್ಮಜನು ಛಾಯೆಗಾಣಿಸಿ ನುಡಿದ ಅಭಿಪ್ರಾಯಮನ್ ತಿಳಿಯದೆ. ಆಯತಾಂಬಕಿ ಅತಿ ಸಂಭ್ರಮಾನ್ವಿತೆಯಾದಳು. ತನ್ನ ಅಭೀಷ್ಟಮನು ಸಲಿಸುವನು ಕಾಂತನು ಎಂಬ ಉತ್ಸವದೊಳು ಅಂಬುಜಾನನೆ ಬಳಿಕ ಪಯಣಮನು ನಿಶ್ಚೈಸಿ, ಅತ್ತೆಯಾದ ಕೌಸಲೆಯ ಬಳಿಬಂದು…)
ಸೀತೆ: ನಂಬಿದರ ಅಭೀಷ್ಟಮನು ಸಲಿಸುವ ಕೃಪಾಳು ತಾನು ಎಂಬುದನು ಎನ್ನ ಕಾಂತನು ಇಂದು ಎನಗೆ ಕಾಣಿಸಿದನು.
(ಎಂದು ಕೌಸಲೆಗೆ ಪೇಳ್ದು, ಮುಂಬರಿದು ಒಡಂಬಡಿಸಿ ಬಲವಂದು ಕಾಲ್ಗೆರಗಿ, ತುಂಬಿದ ಪರಕೆವೆತ್ತು, ಕೈಕೆಯೀ ದೇವಿಗೆ ಶಿರಂಬಾಗಿ , ವರಸುಮಿತ್ರೆಗೆ ನಮಿಸಿ ಸಖಿಯರನು ಸಂತೈಸಿ ಬೀಳ್ಕೊಂಡಳು. ನಿಜಮ್ ಇದೆಂದು ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯರ್ಗೆ ಅಗರು ಚಂದನ ಕುಂಕುಮ ಅನುಲೇಪನಗಳನು ಬಗೆಬಗೆಯ ದಿವ್ಯಾಂಬರಗಳನು ವಿವಿಧ ಮಣಿಭೂಷಣ ಸುವಸ್ತುಗಳನು ತೆಗೆದು ಕಟ್ಟಿಸಿ ರಥದೊಳು ಇಂಬಿಟ್ಟು, ರಾಮನ ಅಂಘ್ರಿಗಳ ಚೆಂಬೊನ್ನ ಪಾವುಗೆಗಳನು ತರಿಸಿಕೊಂಡು, ಒಗುಮಿಗೆಯ ಹರುಷದೊಳು ಅಂಗನೆ ಮಣಿವರೂಥಮನು ಅಡರ್ದಳು. ಅಗ್ರಜನು ತರಿಸಂದು ತನ್ನೊಳು ಆಡಿದ ಕಜ್ಜದ ಉಗ್ರಮನು. ಬನಕೆ ಪೋದಪೆನು ಎಂಬ ದೇವಿಯ ಸಮಗ್ರ ಸಂತೋಷಮನು ಕಂಡು ಸೌಮಿತ್ರಿ ಮನದೊಳು ಮರುಗಿ ಕಂಬನಿಯನು ನಿಗ್ರಹಿಸಿಕೊಂಡು, ಸಾರಥಿಗೆ ಸೂಚನೆಗೈದು ವ್ಯಗ್ರದಿಂದೆ ಆಗ ಆ ದೇವಗ್ರಾಮನಿಲಯ ಲಕ್ಷ್ಮೀಶನ ಉಂಗುಟದೊಳು ಒಗೆದ ಅಮಲಜಾಹ್ನವಿಯ ತಡಿಗೆ ರಥವನು ಐದಿಸಿದನು.)
ಪದ ವಿಂಗಡಣೆ ಮತ್ತು ತಿರುಳು
ಇಡಿದ=ಹೆಚ್ಚಾಗಿರುವ/ತುಂಬಿದ; ವಾತ್ಸಲ್ಯಮ್+ಎಂಬ; ವಾತ್ಸಲ್ಯ=ಅಕ್ಕರೆ/ಮಮತೆ; ಎಂಬ=ಎನ್ನುವ; ಬಲ್ಲಿತ್ತು+ಕಣ್ಣಿ+ಒಳು; ಬಲ್ಲಿತ್ತು=ಬಲವಾಗಿರುವುದು; ಕಣ್ಣಿ=ಹಗ್ಗ; ಬಲ್ಗಣ್ಣಿ=ಗಟ್ಟಿಯಾದ ಹಗ್ಗ; ಒಳು=ಅಲ್ಲಿ; ಕಟ್ಟು+ಪಡೆದು; ಕಟ್ಟು=ಸಂಕೋಲೆ/ಸರಪಳಿ; ಪಡೆದು=ಹೊಂದಿ;
ಅಣ್ಣದೇವನೊಳು ಇಡಿದ ವಾತ್ಸಲ್ಯಮೆಂಬ ಬಲ್ಗಣ್ಣಿಯೊಳು ಕಟ್ಟುವಡೆದು=ದೇವಸ್ವರೂಪಿಯಾಗಿರುವ ರಾಮನೊಡನೆ ಮಮತೆಯೆಂಬ ಬಲುಗಟ್ಟಿಯಾದ ಹಗ್ಗದಿಂದ ನಾನು ಕಟ್ಟಲ್ಪಟ್ಟಿದ್ದೇನೆ. ಇದೊಂದು ರೂಪಕವಾಗಿ ಬಳಕೆಗೊಂಡಿದೆ. ರಾಮ ಮತ್ತು ಲಕ್ಶ್ಮಣರ ನಡುವಣ ಸೋದರಿಕೆಯ ಗಟ್ಟಿಯಾದ ನಂಟನ್ನು ಇದು ಸೂಚಿಸುತ್ತದೆ;
ಅಲ್ಲ ಎನಲು ಅರಿಯದೆ=ಅಣ್ಣನ ಮಾತಿಗೆ ಆಗದು ಎಂದು ಹೇಳಲು ತಿಳಿಯದೆ; ನಿರ್ವಿಣ್ಣಭಾವದೊಳು=ಉತ್ಸಾಹರಹಿತನಾಗಿ;
ಅಂದು=ಆಗ; ತುರಗ=ಕುದುರೆ; ಸಾರಥಿ=ತೇರನ್ನು ನಡೆಸುವವನು; ಕೇತನಂಗಳ್+ಇಂದೆ; ಕೇತನ=ಬಾವುಟ; ಹಣ್=ಅಣಿಗೊಳಿಸು/ಸಿದ್ಧಗೊಳಿಸು; ಹಣ್ಣಿದ=ಸಿದ್ಧಗೊಂಡ/ಸಜ್ಜಾದ; ವರೂಥ=ರತ/ತೇರು; ಪೊರಗೆ ಇರಿಸಿ=ಹೊರಗೆ ನಿಲ್ಲಿಸಿ; ನೆಲ+ಪೆಣ್; ನೆಲವೆಣ್=ಬೂದೇವಿ; ನೆಲವೆಣ್ಣ ಮಗಳು=ಬೂದೇವಿಯ ಮಗಳಾದ ಸೀತೆ; ಇರುತ+ಇರ್ದ; ಐದಿ=ಬಂದು; ಈಕ್ಷಿಸದೆ=ನೋಡದೆ; ಏತಕೆ=ಯಾವ ಕಾರಣಕ್ಕಾಗಿ; ಎಳಸು=ಇಚ್ಚಿಸು/ಬಯಸು;
ತಾಯೆ, ನೀನು ಏತಕೆ ಎಳಸಿದೆ=ತಾಯೆ, ನೀನು ಏತಕ್ಕೆ ಇಂತಹ ಬಯಕೆಗೆ ಒಳಗಾಗಿ ರಾಮನಿಗೆ ತಿಳಿಸಿದೆ;
ನಿನ್ನನು ಈಗ ರಘುರಾಯನು ತಪೋವನಕೆ ಕಳುಹಿ ಬರಹೇಳಿದನು=ಈಗ ರಾಮನು ನಿನ್ನನ್ನು ತಪೋವನಕ್ಕೆ ಕಳುಹಿಸಿ ಬಾ ಎಂದು ನನಗೆ ಹೇಳಿದ್ದಾನೆ; ಪ್ರಿಯಮ್+ಉಳ್ಳೊಡೆ; ಪ್ರಿಯ=ಪ್ರೀತಿ/ಇಶ್ಟವಾದುದು; ಉಳ್ಳೊಡೆ=ಇದ್ದರೆ;
ಪ್ರಿಯಮುಳ್ಳೊಡೆ=ಆ ನಿನ್ನ ಬಯಕೆ ಈಗಲೂ ಇದ್ದರೆ;
ರಥಮ್ ಪಣ್ಣಿ ಬಂದಿದೆಕೋ=ಇದೋ ನೋಡಿರಿ, ನಿಮ್ಮನ್ನು ಕಾಡಿಗೆ ಕರೆದುಕೊಂಡು ಹೋಗಲು ತೇರು ಸಿದ್ದವಾಗಿ ಬಂದಿದೆ;
ಬಿಜಯಂಗೈವುದು=ಹೊರಡುವುದು/ತೆರಳುವುದು; ಛಾಯೆ+ಕಾಣಿಸಿ;
ಛಾಯೆ=ಸೂಚನೆ; ಛಾಯೆಗಾಣಿಸಿ=ಸೂಚನೆಯನ್ನು ನೀಡಿ;
ಸುಮಿತ್ರಾತ್ಮಜನು ಛಾಯೆಗಾಣಿಸಿ ನುಡಿದ ಅಭಿಪ್ರಾಯಮನ್ ತಿಳಿಯದೆ=“ನೀವೇತಕ್ಕೆ ಕಾಡಿಗೆ ಹೋಗುವ ಬಯಕೆಯನ್ನು ನನ್ನ ಅಣ್ಣನ ಮುಂದೆ ಹೇಳಿಕೊಂಡಿರಿ. ಈಗ ಅದನ್ನೇ ನೆಪವನ್ನಾಗಿ ಮಾಡಿಕೊಂಡು ನಿಮ್ಮನ್ನು ತೊರೆಯುತ್ತಿದ್ದಾನೆ” ಎಂಬ ಸಂಕಟದ ದನಿಯನ್ನು ಸೂಚಿಸುವಂತೆ ಹೇಳಿದ ಲಕ್ಶ್ಮಣನ ಮಾತಿನ ಹಿನ್ನೆಲೆಯನ್ನು ಸೀತೆಯು ತಿಳಿಯದೆ;
ಆಯತ+ಅಂಬಕಿ; ಆಯತ=ವಿಶಾಲವಾದ; ಅಂಬಕ=ಕಣ್ಣು; ಆಯತಾಂಬಕಿ=ವಿಶಾಲವಾದ ಕಣ್ಣುಗಳನ್ನುಳ್ಳ ಸೀತೆ; ಸಂಭ್ರಮ+ಅನ್ವಿತೆಯಾದಳು; ಅನ್ವಿತೆ=ಕೂಡಿದವಳು;
ಆಯತಾಂಬಕಿ ಅತಿ ಸಂಭ್ರಮಾನ್ವಿತೆಯಾದಳು=ಸೀತೆಯು ಆನಂದದಿಂದ ಓಲಾಡಿದಳು;
ಅಭೀಷ್ಟಮ್+ಅನ್; ಅಭೀಷ್ಟ=ಆಸೆ/ಬಯಕೆ/ಇಚ್ಚೆ; ಸಲಿಸುವನು=ಈಡೇರಿಸುವನು/ನೇರವೇರಿಸುವನು; ಕಾಂತ=ಗಂಡ/ಪತಿ;
ತನ್ನ ಅಭೀಷ್ಟಮನ್ ಸಲಿಸುವನು ಕಾಂತನು ಎಂಬ ಉತ್ಸವದೊಳು=ತನ್ನ ಬಯಕೆಯನ್ನು ರಾಮನು ಈಡೇರಿಸುತ್ತಿದ್ದಾನೆ ಎಂಬ ಸಡಗರದಿಂದ; ಅಂಬುಜ+ಆನನೆ; ಅಂಬುಜ=ತಾವರೆ; ಆನನ=ಮುಖ/ಮೊಗ; ಅಂಬುಜಾನನೆ=ತಾವರೆಯಂತಹ ಮೊಗವುಳ್ಳವಳು. ಸುಂದರವಾದ ಮುಖವನ್ನುಳ್ಳ ಹೆಣ್ಣನ್ನು ಬಣ್ಣಿಸಲು ಈ ನುಡಿಗಟ್ಟನ್ನು ಬಳಸುತ್ತಾರೆ:
ನಂಬಿದರ=ನಂಬಿದವರ; ಕೃಪಾಳು=ಕರುಣೆಯ ಗುಣವುಳ್ಳವನು; ಕಾಂತ=ಗಂಡ;
ನಂಬಿದರ ಅಭೀಷ್ಟಮನ್ ಸಲಿಸುವ ಕೃಪಾಳು ತಾನು ಎಂಬುದನು ಎನ್ನ ಕಾಂತನು ಇಂದು ಎನಗೆ ಕಾಣಿಸಿದನು ಎಂದು ಕೌಸಲೆಗೆ ಪೇಳ್ದು=“ನಂಬಿದವರ ಕೋರಿಕೆಯನ್ನು ಈಡೇರಿಸುವ ಕರುಣಾವಂತನು ತಾನು” ಎಂಬುದನ್ನು ಇಂದು ನನ್ನ ರಾಮನು ನನಗೆ ಮನಗಾಣಸಿದನು ಎಂದು ಅತ್ತೆಯಾದ ಕೌಸಲ್ಯೆಯ ಮುಂದೆ ರಾಮನ ಗುಣಗಾನ ಮಾಡಿ;
ಕೌಸಲ್ಯೆ=ದಶರತ ರಾಜನ ಮೊದಲನೆಯ ಹೆಂಡತಿ. ರಾಮನ ತಾಯಿ; ಮುಂದು+ಪರಿದು; ಮುಂಬರಿದು=ಮುಂದಕ್ಕೆ ಬಂದು; ಒಡಂಬಡಿಸಿ=ಒಪ್ಪಿಸಿ; ಬಲವಂದು=ಬಲಗಡೆಯಿಂದ ಸುತ್ತುಬಂದು; ಕಾಲ್ಗೆ+ಎರಗಿ; ಎರಗಿ=ನಮಸ್ಕರಿಸಿ; ಪರಕೆ+ಪೆತ್ತು; ಪರಕೆ=ಆಶೀರ್‍ವಾದ; ಪರಕೆವೆತ್ತು=ಆಶೀರ್‍ವಾದವನ್ನು ಪಡೆದು;
ಮುಂಬರಿದು ಒಡಂಬಡಿಸಿ ಬಲವಂದು ಕಾಲ್ಗೆರಗಿ ತುಂಬಿದ ಪರಕೆವೆತ್ತು=ಸೀತೆಯ ಅತ್ತೆಯ ಮುಂದಕ್ಕೆ ಬಂದು, ತಾನು ಕಾಡಿಗೆ ಹೋಗುತ್ತಿರುವದಕ್ಕೆ ಅತ್ತೆಯ ಅನುಮತಿಯನ್ನು ಪಡೆದುಕೊಂಡ ನಂತರ, ಬಲಗಡೆಯಿಂದ ಅವರನ್ನು ಒಮ್ಮೆ ಸುತ್ತುಬಂದು, ಕಾಲುಗಳಿಗೆ ನಮಿಸಿ, ಆಶೀರ್‍ವಾದವನ್ನು ಪಡೆದುಕೊಂಡು;
ಕೈಕೆಯೀ ದೇವಿಗೆ ಶಿರಂಬಾಗಿ=ಕೈಕೆಯೀ ದೇವಿಯವರಿಗೆ ತಲೆಬಾಗಿ ನಮಿಸಿ;
ವರ=ಪೂಜ್ಯರಾದ; ಸುಮಿತ್ರೆ=ದಶರತ ರಾಜನ ಎರಡನೆಯ ಹೆಂಡತಿ. ಲಕ್ಶ್ಮಣ ಮತ್ತು ಶತ್ರುಗ್ನರ ತಾಯಿ;
ವರಸುಮಿತ್ರೆಗೆ ನಮಿಸಿ ಸಖಿಯರನು ಸಂತೈಸಿ ಬೀಳ್ಕೊಂಡಳು=ಪೂಜ್ಯರಾದ ಸುಮಿತ್ರಾದೇವಿಯವರಿಗೆ ನಮಸ್ಕರಿಸಿ, ಗೆಳತಿಯರನ್ನು ಸಮಾದಾನ ಪಡಿಸಿ, ಅಲ್ಲಿಂದ ಹೊರಟಳು;
ನಿಜಮ್ ಇದೆಂದು=ತನ್ನ ಕೋರಿಕೆಯಂತೆ ಆಶ್ರಮದಲ್ಲಿರುವ ರಿಸಿಪತ್ನಿಯರ ಬಳಿ ಕೆಲವು ದಿನಗಳ ಕಾಲ ಇದ್ದುಬರುತ್ತೇನೆ ಎಂಬುದನ್ನೇ ನಿಜವೆಂದು ತಿಳಿದು;
ಮಿಗೆ=ಹೆಚ್ಚಾಗಿ/ಅತಿಶಯವಾಗಿ; ಅಗರು=ಸುವಾಸನೆಯುಳ್ಳ ವಸ್ತು; ಚಂದನ=ಶ್ರೀಗಂಧದ ಚೆಕ್ಕೆ; ಅನುಲೇಪನ=ಮುಖಕ್ಕೆ ಬಳಿದುಕೊಳ್ಳುವ ವಸ್ತು; ದಿವ್ಯ+ಅಂಬರ; ದಿವ್ಯ=ಉತ್ತಮವಾದ/ಮನೋಹರವಾದ; ಅಂಬರ=ಬಟ್ಟೆ/ವಸ್ತ್ರ; ದಿವ್ಯಾಂಬರ=ಮನೋಹರವಾದ ಮತ್ತು ಬೆಲೆಬಾಳುವ ಬಟ್ಟೆ; ಮಣಿ=ಮುತ್ತು, ರತ್ನ, ವಜ್ರದ ಹರಳುಗಳು; ಭೂಷಣ=ಒಡವೆ; ಸುವಸ್ತು=ಒಳ್ಳೆಯ ವಸ್ತು; ಇಂಬಿಟ್ಟು=ಸರಿಯಾಗಿ ಜೋಡಿಸಿಕೊಂಡು;
ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯರ್ಗೆ ಅಗರು ಚಂದನ ಕುಂಕುಮ ಅನುಲೇಪನಗಳನು ಬಗೆಬಗೆಯ ದಿವ್ಯಾಂಬರಗಳನು ವಿವಿಧ ಮಣಿಭೂಷಣ ಸುವಸ್ತುಗಳನು ತೆಗೆದು ಕಟ್ಟಿಸಿ ರಥದೊಳು ಇಂಬಿಟ್ಟು=ಆಶ್ರಮವಾಸಿಗಳಾದ ರಿಸಿಗಳಿಗೆ ಮತ್ತು ರಿಸಿಪತ್ನಿಯರಿಗೆ ಕೊಡಲೆಂದು ಅಗರು ಚಂದನ ಕುಂಕುಮ ಅನುಲೇಪನದ ವಸ್ತುಗಳನ್ನು, ಬೆಲೆಬಾಳುವ ಮನೋಹರವಾದ ಬಟ್ಟೆಗಳನ್ನು, ಮುತ್ತು ರತ್ನ ವಜ್ರದ ಹರಳುಗಳಿಂದ ಕೂಡಿದ ಒಡವೆಗಳಲ್ಲವನ್ನೂ ತೆಗೆದು ಕಟ್ಟಿಸಿಕೊಂಡು ತೇರಿನಲ್ಲಿ ಜೋಡಿಸಿಟ್ಟುಕೊಂಡು;
ಅಂಘ್ರಿ=ಪಾದ; ಚೆಂಬೊನ್ನು=ಕೆಂಪನೆಯ ಲೋಹ/ಚಿನ್ನ; ಪಾವುಗೆ=ಪಾದಕೆ/ಮೆಟ್ಟು;
ರಾಮನ ಅಂಘ್ರಿಗಳ ಚೆಂಬೊನ್ನ ಪಾವುಗೆಗಳನು ತರಿಸಿಕೊಂಡು=ರಾಮನು ತೊಡುವ ಚಿನ್ನದ ಪಾದುಕೆಗಳನ್ನು ತರಿಸಿಕೊಂಡು;
ಒಗುಮಿಗೆ=ಹೆಚ್ಚಳ/ಅತಿಯಾದ; ಅಂಗನೆ=ಹೆಣ್ಣು; ಮಣಿ=ಮುತ್ತು, ರತ್ನ, ವಜ್ರದ ಹರಳುಗಳು; ವರೂಥ=ರತ/ತೇರು; ಅಡರು=ಏರು/ಹತ್ತು;
ಒಗುಮಿಗೆಯ ಹರುಷದೊಳು ಅಂಗನೆ ಮಣಿವರೂಥಮನು ಅಡರ್ದಳು=ಸೀತಾದೇವಿಯು ಅತಿಯಾದ ಆನಂದದಿಂದ ಕೂಡಿದವಳಾಗಿ ಮಣಿಗಳಿಂದ ಅಲಂಕಾರಗೊಂಡಿರುವ ತೇರನ್ನು ಏರಿ ಕುಳಿತಳು;
ತರಿಸಲ್=ನಿಶ್ಚಯಿಸು; ತರಿಸಂದು=ನಿಶ್ಚಯಿಸಿಕೊಂಡು; ಕಜ್ಜ=ಕೆಲಸ; ಉಗ್ರ=ಕ್ರೂರ/ಕರುಣೆಯಿಲ್ಲದ;
ಅಗ್ರಜನು ತರಿಸಂದು ತನ್ನೊಳು ಆಡಿದ ಕಜ್ಜದ ಉಗ್ರಮನು=ಅತ್ತ ಸೀತಾದೇವಿಯನ್ನು ತೊರೆಯುವ ನಿಶ್ಚಯವನ್ನು ಮಾಡಿಕೊಂಡು ಅಣ್ಣನಾದ ರಾಮನು ತನ್ನ ಜತೆಯಲ್ಲಿ ಹೇಳಿರುವ ಕೆಲಸದ ಕ್ರೂರತೆಯನ್ನು;
ಬನ=ಕಾಡು/ಅರಣ್ಯ; ಪೋದಪೆನು=ಹೋಗುತ್ತಿದ್ದೇನೆ; ಸಮಗ್ರ=ಪರಿಪೂರ್ಣವಾದ;
ಬನಕೆ ಪೋದಪೆನು ಎಂಬ ದೇವಿಯ ಸಮಗ್ರ ಸಂತೋಷಮನ್ ಕಂಡು=ಇತ್ತ ತಾನು ಕಾಡಿನಲ್ಲಿರುವ ರಿಸಿಪತ್ನಿಯರ ಬಳಿಗೆ ಹೋಗುತ್ತಿದ್ದೇನೆ ಎಂದು ಆನಂದದಿಂದ ಓಲಾಡುತ್ತಿರುವ ಸೀತಾದೇವಿಯನ್ನು ಕಂಡು;
ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು ನಿಗ್ರಹಿಸಿಕೊಂಡು= ಲಕ್ಶ್ಮಣನು ಮನದಲ್ಲಿ ಮರುಗುತ್ತ, ಒತ್ತಿಬರುತ್ತಿರುವ ಕಣ್ಣೀರನ್ನು ತಡೆದುಕೊಂಡು;
ಸಾರಥಿಗೆ ಸೂಚನೆಗೈದು=ಸಾರತಿಗೆ ತೇರನ್ನು ಮುನ್ನಡೆಸಲು ಸೂಚನೆಯನ್ನು ನೀಡಿ;
ವ್ಯಗ್ರ=ಕಳವಳ/ಉದ್ವೇಗ; ವ್ಯಗ್ರದಿಂದೆ ಆಗ=ಮನದಲ್ಲಿ ತೀವ್ರತರವಾದ ಸಂಕಟವನ್ನು ಪಡುತ್ತಾ; ದೇವಗ್ರಾಮ=ದೇವನೂರು; ನಿಲಯ=ಮನೆ/ನೆಲೆಸಿರುವ ಜಾಗ ; ಉಂಗುಟ=ಕಾಲಿನ ಹೆಬ್ಬರಳು; ಒಗೆ=ಹುಟ್ಟು; ಅಮಲ=ಪರಿಶುದ್ದಳಾದ; ಜಾಹ್ನವಿ=ಗಂಗಾನದಿ; ತಡಿ=ದಂಡೆ/ತೀರ; ಐದಿಸು=ಬರು/ಸಮೀಪಿಸು;
ಆ ದೇವಗ್ರಾಮನಿಲಯ ಲಕ್ಷ್ಮೀಶನ ಉಂಗುಟದೊಳ್ ಒಗೆದ ಅಮಲಜಾಹ್ನವಿಯ ತಡಿಗೆ ರಥವನು ಐದಿಸಿದನು=ದೇವನೂರಿನಲ್ಲಿ ನೆಲೆಸಿರುವ ಲಕ್ಶ್ಮೀಶ ದೇವರ ಹೆಬ್ಬೆರಳಿನಿಂದ ಹುಟ್ಟಿ ಹರಿಯುತ್ತಿರುವ ಗಂಗಾನದಿಯ ತೀರಕ್ಕೆ ತೇರನ್ನು ಮುನ್ನಡೆಸಲು ಸಾರತಿಗೆ ಹೇಳಿದನು;
(ಚಿತ್ರ ಸೆಲೆ: ವಿಕಿಪೀಡಿಯ)
ಇತ್ತೀಚಿನ ಅನಿಸಿಕೆಗಳು