ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 5)

ಸಿ.ಪಿ.ನಾಗರಾಜ.

ನೋಟ – 5

ಅರಸ ಕೇಳು ಸೌಮಿತ್ರಿ, ವೈದೇಹಿಯನೆ ಕೊಂಡು ತೆರಳುವ ರಥಾಗ್ರದೊಳು ಚಲಿಸುವ ಪತಾಕೆ “ಅಹಹ… ರಘುವರನು ಅಂಗನೆಯನು ಉಳಿದನು ಎಂದು ಅಡಿಗಡಿಗೆ ತಲೆ ಕೊಡುಹುವಂತೆ” ಇರಲ್ಕೆ, ಅಯೋಧ್ಯಾಪುರದ ನೆರವಿಯ ಜನಮ್ “ಪರಮ ದಾರುಣಮ್ ಆಯ್ತು ಇದು” ಎಂದು ಗುಜುಗುಜಿಸಿ ಮನದೆ ಕರಗಿ ಕಾತರಿಸುತಿರೆ, ಕಾಲ್ಬಟ್ಟೆಗೊಂಡು ಅನಿಲವೇಗದಿಂದೆ ಆ ರಥವನು ಪರಿಸಿದನು.

ಲಕ್ಷ್ಮಣ: (ತನ್ನ ಮನದಲ್ಲಿ) ಧುರದೊಳು ಆಂತರನು ಇರಿದುಮೆರೆಯಲು ಏರುವರಥಮ್ತರಳೆಯನು ಕಾನನಕೆಕಳುಹಲು ಅಡರ್ವಂತಾಯ್ತು. ಧರೆಯೊಳು ಆರ್ತರನು ಐದೆರಕ್ಷಿಸುವಬುದ್ಧಿಕೋಮಲೆಯಕೊಲೆಗೆಲಸಕೆ ಆಯ್ತು. ಕರುಣಮಿಲ್ಲದೆಹೊರೆವಹರಣಮನು ಸುಡಲಿ. ಎಂತು ಈ ಕೃತ್ಯಮ್ ನಿಷ್ಠುರದೊಳು ಎಸಗುವೆನೊ. ರಾಘವೇಶ್ವರನು ತನಗೆ ಎಂತು ಇದಕ್ಕೆಬೆಸಸಿದನೊ.

(ಎನುತೆ ಸೌಮಿತ್ರಿ ಮರುಗುತೆ ನಡೆದನು. ಬಳ್ಳು ಒರಲ್ದುದು. ಕುಳ್ಳಿರ್ದ ಮೃಗಮ್ ಎದ್ದು ಮುಂದೆ ಮಾರ್ಗವನು ದಾಂಟಿದುದು. ಬಲದ ಕಣ್ಣು ಅದಿರೆ, ಅಳ್ಳೆರ್ದೆಯೊಳು ಅವನಿಸುತೆ…)

ಸೀತೆ: ನೋಡುಲಕ್ಷ್ಮಣಪಥದೊಳು ದುರ್ನಿಮಿತ್ತಂಗಳನುಕಂಡು ಈಗಳ್ ಇದಕೆ ಎನ್ನಮನಮ್ ಡಿಳ್ಳಮ್ ಆದಪುದು. ರಾಮನ ಆಯುಷ್ಯಕೆ ಐಶ್ವರ್ಯಕೆ ಉಳ್ಳಭುಜಬಲಕೆ ಮುಂದೆ ಒಳ್ಳಿತಾಗಲಿ.ಅಸುರರನು ಗೆಲ್ದರಾಘವನು ನಮ್ಮನು ಸಲಹಲಿ.

(ಎಂದಳು. ಅನ್ನೆಗಮ್ ಜಾನಕಿಯ ಕಣ್ಗೆ ಮುಂದೆ ತೋರಿತು ಸನ್ನುತ ರಘೂಧ್ವಹನ ಕೀರ್ತಿಯೆನೆ ಮೂವಟ್ಟೆಯನು ನಡೆದು ಮುಕ್ಕಣ್ಣನನು ಸಾರ್ದು ಮೂಜಗದ ಪಾಪಮನು ಮುರಿದು ಮುಕ್ಕಿ ಮುನ್ನೀರು ಮುಂತಾಗಿ ಮೂದೇವರೊಳಗಾದ ಮುನ್ನುಳ್ಳ ಮೂವತ್ತು ಮೂರ್ಕೋಟಿ ವಿಬುಧರನು ತನ್ನೊಳು ಮುಳುಗಿದರ್ ಅಣಕಿಪ ಪೆಂಪು ಒದವಿ ಪರಿವ ದಿವಿಜ ನದಿಯ ಬೆಳ್ವೊನಲು; ತೆರತೆರದ ಕಲ್ಲೋಲ ಮಾಲೆಗಳ ಲೀಲೆಗಳ; ಬೆರೆಬೆರೆವ ರಾಜಹಂಸಾಳಿಗಳ ಕೇಳಿಗಳ; ಪರಿಪರಿಯ ನೀರ್ವನಿಗಳ; ಆಕರದ ಶೀಕರದ ನೊರೆಯ; ಬೊಬ್ಬುಳಿಯ ಸುಳಿಯ; ಮೊರೆಮೊರೆದು ಘೂರ್ಮಿಸುವ ಪರಿವುಗಳ ಮುರಿಗಳ; ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ; ನೆರೆನೆರೆದು ಮುನಿಜನಮ್ ಸೇವಿಸುವ ಭಾವಿಸುವ ಗಂಗೆಗೆ ಅವನಿಜೆ ಬಂದಳು. ಆ ಜಾಹ್ನವಿಯ ತಡಿಯ ಬನದೆಡೆಯೊಳು ತೆಂಗು ಎಳ ಕವುಂಗು ಪನಸಮ್ ದ್ರಾಕ್ಷೆ ಜಂಬು ನಾರಂಗ ಜಂಬೀರ ಖರ್ಜೂರ ಕಿತ್ತಳೆ ಮಾತುಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಕಪಿತ್ಥಮ್ ಎಂಬ ನಾನಾ ತರುಗಳು ತೊಂಗುವ ಫಲಾವಳಿಯ ಭಾರಂಗಳು ಆವಗಮ್ ಪಿಂಗವು. ಇವನು ಇಳೆಗೆ ಇಳಿಪಬೇಕೆಂದು ಬಾಗಿದ ಒಂದು ಅಂಗಮ್ ಎನೆ ಇಕ್ಕೆಲದೊಳು ಕಣ್ಗೆ ಎಸೆದುವು. ಇಳಿದು ರಥದಿಂದೆ ಮಂದಾಕಿನಿಗೆ ಪೊಡಮುಟ್ಟು, ನಿರ್ಮಲ ತೀರ್ಥದೊಳು ಮಿಂದು, ಬಳಿಕ ನಾವಿಕರೊಡನೆ ನಾವದೊಳು ಭೂಜಾತೆ ಸಹಿತ ಗಂಗೆಯನು ಕಳೆದು, ಸೌಮಿತ್ರಿ ಮತ್ತೆ ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ, ಉಗ್ರ ಮೃಗಪಕ್ಷಿ ಗಣದಿಂದ ಘೂರ್ಮಿಸುವ ಅಡಿ ಇಡುವೊಡೆ ಅಸದಳಮ್ ಎಂಬ ಕರ್ಕಶದ ಮಾರ್ಗದಿಂದೆ ಮುಂದಳೆದು ಹಳುವಮನು ಪೊಕ್ಕನು. ಶಕುನಿ ಚೀತ್ಕಾರ ಘೋಷಣಮಯಮ್; ತೃಣಮಯಮ್; ವಿಕಿರದ ಉಪಲಾಳಿ ಕರ್ಕಶಮಯಮ್; ಶಶಮಯಮ್; ಪ್ರಕಟ ಕಂಟಕ ಕೀರ್ಣ ತರುಮಯಮ್; ರುರುಮಯಮ್; ವಿವಿಧೋಗ್ರಜಂತು ಮಯವು; ನಕುಲ ಮೂಷಕ ಸರೀಸೃಪ ಮಯಮ್; ದ್ವಿಪಮಯಮ್; ಸಕಲ ಭೂವಿಷಮ ಸಂಕುಲಮಯಮ್; ಬಿಲಮಯಮ್; ವೃಕ ಸೂಕರ ವ್ಯಾಘ್ರ ಚಯಮಯಮ್; ಭಯಮಯಮ್ ತಾನು ಎನಿಸಿ ಕಾಡು ಇರ್ದುದು. ಇರುಳಂತೆ ಪಗಲಂತೆ ಮಖದಂತೆ ದಿವದಂತೆ ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ ನಿರುತಮುಮ್ ಸೋಮ ಅರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವ ಆವಾಸಮಾಗಿ, ಧುರದಂತೆ ಕೊಳದಂತೆ ಕಡಲಂತೆ ನಭದಂತೆ ಶರ ಪುಂಡರೀಕ ವಿದ್ರುಮ ಋಕ್ಷಮಯದೊಳು ಇಡಿದಿರುತ ಆ ಮಹಾಟವಿ ಜಾನಕಿಯ ಕಣ್ಗೆ ಘೋರತರಮಾಗಿ ಮುಂದೆ ಇರ್ದುದು. ಅಟವಿಯ ಮಹಾಘೋರ ಗಹ್ವರಮ್ ಮುಂದೆ ದುರ್ಘಟಮಾಗೆ ನಡುನಡುಗಿ ಭೀತಿಯಿನ್ ಸೀತೆ ಸಂಕಟದಿಂದೆ ರಾಮನಾಮಂಗಳನು ಜಪಸುತ… )

ಸೀತೆ: ಎಲೆಸೌಮಿತ್ರಿ, ಕಾನನಮ್ ಇದುಅಟನಕೆ ಅಸದಳಮಪ್ಪುದು. ಇಲ್ಲಿಪುಣ್ಯಾಶ್ರಮದಜಟಿಗಳನು… ವಲ್ಕಲವನುಟ್ಟಮುನಿವಧುಗಳನು… ವಟುಗಳನು… ಶ್ರುತಿಘೋಷಹೋಮಧೂಮಂಗಳನುಕಾಣೆನು

(ಎಂದು ಅಳವಳಿದಳು.)

ಸೀತೆ: ತಂದೆಸೌಮಿತ್ರಿ, ಎಲ್ಲಿಮುನಿಪೋತ್ತಮರಪಾವನದವನದ ಎಡೆಗಳು; ಎಲ್ಲಿಸಿದ್ಧಾಶ್ರಮಂಗಳ ಮಂಗಳಸ್ಥಳಗಳು; ಎಲ್ಲಿಸುಹವಿಗಳಕಂಪೊಗೆದಪೊಗೆ ತಳೆದ ಅಗ್ನಿಹೋತ್ರದಕುಟೀರಂಗಳು; ಎಲ್ಲಿ ಪರಿಚಿತವಾದವಾದವೇದಧ್ವನಿಗಳು… ಅಲ್ಲಿಗೆ ಒಯ್ಯದೆದಾರುದಾರುಣದಕಟ್ಟಡವಿಗೆ ಇಲ್ಲಿಗೆ ಏಕೈತಂದೆ ಹೇಳು.

(ಎಂದು ಜಾನಕಿ ಸುಯ್ದಳು)

ಪಾವನಕೆಪಾವನಮ್;ಮಂಗಳಕೆಮಂಗಳಮ್ ಅದು ಆವನ ಚರಿತ್ರನಾಮಂಗಳು ಆರಾಘವನೆ ಜೀವೇಶನಾಗಿರಲ್ಕೆ, ಆತನ ಅಂಘ್ರಿಯನು ಅಗಲ್ದು ಈಗನಾನು ಬಂದ ಬಳಿಕ, ಈವನದೊಳು ಇನ್ನು ಪುಣ್ಯಾಶ್ರಮಮ್ಗೋಚರಿಪುದೇ.ವನಜದ ಅರಳನು ಉಳಿದ ಆರಡಿಗೆಬೊಬ್ಬುಳಿಯಪೂವಿನೊಳು ಮಧುವುಂಟೆಸೌಮಿತ್ರಿ… ಹೇಳು.

(ಎಂದು ಸೀತೆ ಪೊದಕುಳಿಗೊಂಡಳು. ನರನಾಥ ಕೇಳು, ಅವನಿಸುತೆ ನುಡಿದ ಮಾತಿಗೆ ಉತ್ತರವನ್ ಆಡದೆ ಮನದೊಳು ಉರೆ ನೊಂದು… )

ಲಕ್ಷ್ಮಣ: (ತನ್ನ ಮನದಲ್ಲಿ) ರಾಘವೇಶ್ವರನು ಎಂದಕಷ್ಟಮನು ಪೇಳ್ದಪೆನೊ… ಮೇಣ್… ಉಸಿರದೆ ಇರ್ದಪೆನೊ… ನಿಷ್ಠುರದೊಳು ತರಣಿಕುಲಸಾರ್ವಭೌಮನರಾಣಿಯನು ಬನದೊಳು ಇರಸಿ ಪೋದಪೆನೆಂತೊ… ಪೋಗದಿರ್ದೊಡೆ ಸಹೋದರನು ಅದೇನು ಎಂದಪನೊ… ಹಾ… . ಎಂದು ಲಕ್ಷ್ಮಣನು ಬೆಂದು ಬೇಗುದಿಗೊಂಡನು.ಕಂಬನಿಗಳು ಉಕ್ಕಿದುವು; ಅಧರೋಷ್ಠಮ್ ಅದಿರಿತು; ಒಡಲೊಳು ಅಲಗಿಕ್ಕಿ ತಿರುಪಿದವೊಲಾಯ್ತು; ಉಸಿರು ಎಡೆವರಿಯದೆ ಒಕ್ಕುದು; ಅವಯವಮ್ ಉರೆ ಕಂಪಿಸಿದುದು; ಎರ್ದೆ ಕರಗಿತು; ಸೈರಣೆ ಸಮತೆಗೆಟ್ಟುದು; ಕಂಠದೊಳ್ ಮಾತುಗಳು ಸೆರೆಬಿಗಿದು ಸಿಕ್ಕಿದುವು; ಮಿಕ್ಕು ಮೀರುವ ಶೋಕದಿಂದೆ ಬೆಂಡಾಗಿ ಕಡುಗಕ್ಕಸದ ಕೆಲಸಮನ್ ಉಸಿರಲ್ ಅರಿಯದೆ ಅವನು ಒಯ್ಯನೆ ಅವನಿಸುತೆಗೆ ಇಂತೆಂದನು.)

ಲಕ್ಷ್ಮಣ: ದೇವಿನಿನಗೆ ಇನ್ನೆಗಮ್ ಅದಪೇಳ್ದುದಿಲ್ಲ . ಅಪವಾದಮ್ ಆವರಿಸಿನಿನ್ನನ್ ಒಲ್ಲದೆರಘುಕುಲೋದ್ಭವನು ಸೀವರಿಸಿ,ಕಾಂತಾರಕ್ಕೆಕಳುಹಿಬಿಟ್ಟುಬಾ ಎಂದು ಎನಗೆನೇಮಿಸಿದೊಡೆ,ವಿಭುವಿನ ಆಜ್ಞೆಯನು ಮೀರಲು ಅರಿಯದೆನಿಮ್ಮನು ಈ ವಿಪಿನಕೆ ಒಡಗೊಂಡುಬಂದೆನು. ಇನ್ನು ಒಯ್ಯೊಯ್ಯನೆ ಆವಲ್ಲಿಗಾದೊಡಮ್ ಪೋಗಿ.

(ಎಂದು ಲಕ್ಷ್ಮಣನು ಬಾಷ್ಪಲೋಚನನಾದನು. ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದು ಇಳೆಗೆ ಒರಗುವಂತೆ ಲಕ್ಷ್ಮಣನ ಮಾತು ಕಿವಿತೆರೆಗೆ ಬೀಳದ ಮುನ್ನ ಅಂಗನೆ ಹಮ್ಮೈಸಿ ನಡನಡುಗುತೆ ಧರೆಗೆ ಬಿದ್ದಳು. ಅಂಗೋಪಾಂಗಮನ್ ಮರೆದಳು. ಬಳಿಕ ಸೌಮಿತ್ರಿ ಮರುಗಿ ತಣ್ಣೀರು ತಳೆದು ಪತ್ರದೊಳು ಕೊಡೆವಿಡಿದು ಸೆರಗಿಂದೆ ಬೀಸಿ, ರಾಯನ ಸೇವೆ ಸಂದುದೇ ತನಗೆ ಎಂದು ರೋದಿಸಿದನು. ಒಯ್ಯನೆ ಅರಗಳಿಗೆಯೊಳು ಕಣ್ ತೆರೆದು, ದೈನ್ಯದಿನ್ ಸುಯ್ಯೆಲರನು ಉರೆ ಸೂಸಿ, ಸೌಮಿತ್ರಿಯನು ನೋಡಿ… )

ಸೀತೆ: ಕೊರಳನು ಕೊಯ್ಯಲೊಲ್ಲದೆ ಇಂತುತನ್ನನು ಬಿಡಲುಮಾಡಿದ ಅಪರಾಧಮ್ ಉಂಟೆ. ಕಯ್ಯಾರೆಖಡ್ಗಮನ್ ಕೊಟ್ಟುತನ್ನ ಅರಸಿಯನು ಹೊಯ್ಯೆಂದುಪೇಳದೆ ಅಡವಿಗೆಕಳುಹಿಬಾ ಎಂದನೆ… ಅಯ್ಯಯ್ಯೊ… ರಾಘವನು ಕಾರುಣ್ಯನಿಧಿ.

(ಎಂದು ಅಂಭೋಜನೇತ್ರೆ ಅಳಲ್ದಳು.)

ರಘುಶ್ರೇಷ್ಠನು ಎನ್ನನು ಬಿಟ್ಟನೆ. ಅಕಟಕಟ, ತಾನು ಮುಟ್ಟನೆ. ನೆಗಳ್ದಬಾಳ್ಕೆಗೆಸಂಚಕಾರಮನ್ ಕೊಟ್ಟನೆ. ಸುಮಿತ್ರಾತನುಜ, ಕಟ್ಟರಣ್ಯದೊಳುಕಳುಹಿಬಾಯೆಂದುನಿನಗೆನಿರೂಪಮನ್ ಕೊಟ್ಟನೆ.ತಾನು ಎನ್ನಕಣ್ಬಟ್ಟೆಗೆಟ್ಟನೇ.ಮನೋವಲ್ಲಭನನು ಅಗಲ್ದು ಅಡವಿಯೊಳುನೆಟ್ಟನೆಪಿಶಾಚದವೊಲು ಎಂತಿಹೆನೊ. ಕೆಟ್ಟೆನಲ್ಲಾ

(ಎಂದು ಅಬಲೆ ಒರಲ್ದಳು)

ಕೌಶಿಕಮುನಿಪನೊಡನೆ ಎಂದುಮಿಥಿಲಾಪುರಕ್ಕೆಬಂದುಹರಧನುವಮುರಿದು ಎನ್ನನು ಮದುವೆಯಾದನು , ಅಂದು ಮೊದಲಾಗಿಎನ್ನೊಳು ರಮಿಸಿದನು. ಆನ್ ಅಗಲ್ದೊಡೆತಾನುನವೆದನಲ್ಲದೆ ಒಂದಿದನೆಸೌಖ್ಯಮನ್.ರಾಮನು ಎನಗಾಗಿಕಪಿವೃಂದಮನ್ ನೆರಪಿ,ಕಡಲನುಕಟ್ಟಿ,ದೈತ್ಯರನು ಕೊಂದು, ಅಗ್ನಿಮುಖದೊಳುಪರೀಕ್ಷಿಸಿದನು, ಎನ್ನೊಳು ಅಪರಾಧಮನ್ಕಾಣಿಸಿದನೇ . ಕಲ್ಲು ಮುಳ್ಳಿಡಿದ ಕಾಡೊಳು ಅಂದು ಎನ್ನನು ಉಪಚರಿಸಿಪಲ್ಮೊರೆದುಗರ್ಜಿಪವಿರಾಧನನುಮರ್ದಿಸಿದೆ.ರಾಘವನ ಬಳಿಗೆಬಲ್ಮೆಯಿಮ್ ನಾನು ಕಳುಹಿದೊಡೆಜನಸ್ಥಾನದಿಂದೆಹೋದೆ. ಸೌಮಿತ್ರಿ,ನಲ್ಮೆಯಮ್ ಮರೆದಪೆನೆ.ನೀನು ಎಲ್ಲರ ಒಲ್ಮೆ ಮೈದುನನೆತನಗೆ.ಕಾನನದೊಳು ಎನ್ನ ನಿಲಿಸಲು ಮನಮ್ ಬಂದಪುದೆತಂದೆನಿನಗೆ.

(ಎಂದು ಅಂಬುಜಾಕ್ಷಿ ಕಂಬನಿ ಮಿಡಿದಳು.)

ತೊಳೆವನಾಸಿಕದ, ನುಣ್ ಕದಪುಗಳ, ಪೊಳೆವಕಂಗಳ, ತುರುಗಿದ ಎವೆಯ, ನಿಡುಪುರ್ಬುಗಳ, ಪೆರೆನೊಸಲ, ಥಳಥಳಿಪಮಕುಟದ, ಕಿವಿಯಮಕರಕುಂಡಲದ, ಕೋಮಲಿತಚುಬುಕಾಗ್ರದ, ಲಲಿತಾರುಣ ಅಧರದ, ಮಿರುಗುವರದನಪಂಕ್ತಿಗಳ, ಸೂಸುವ ಎಳೆನಗೆಯ, ಮೋಹನದಚೆಲ್ವಿನ ಒಬ್ಬುಳಿಯೆನಿಪ ರಾಘವನಸಿರಿ ಮೊಗವನು ಅಕಟ ಎಂತುನೋಡದೆ ಮಾಣ್ಬೆನು. ರಾಮನನು, ಭುವನಾಭಿರಾಮನನು,ಗುಣರತ್ನಧಾಮನನು, ರಘುಕುಲೋದ್ದಾಮನನು,ರೂಪಜಿತಕಾಮನನು, ಸತ್ಕೀರ್ತಿಕಾಮನನು,ಶರಣಜನವಾರ್ಧಿಯನು,ಮಿಗೆಪೆರ್ಚಿಪಸೋಮನನು,ಸೌಭಾಗ್ಯ ಸೋಮನನು, ಕುವಲಯಶ್ಯಾಮನನು,ನಿಜತನುಶ್ಯಾಮನನು, ಘನಪುಣ್ಯನಾಮನನು, ಸಂತತಮ್ನಾಮನಂದಣಿಯೆರಮಿಸದೆಎಂತು ಬಾಳ್ವೆನು.

(ರಾಯ ಕೇಳು, ಇಂತಿಂತು ರಾಘವೇಶ್ವರನ ರಮಣೀಯ ಗುಣಮಾಲೆಯನು ನೆನೆನೆನೆದು ಹಂಬಲಿಸುತ ಆಯತಾಂಬಕಿ ಮತ್ತೆ ಮೈಮರೆಯುತ ಎಚ್ಚರುತೆ ಪಾವ್ ಅಗಿದ ಪಸುಳೆವೊಲು ಇರೆ… )

ಲಕ್ಷ್ಮಣ: ತಾಯೆನಿನ್ನನು ಬಿಟ್ಟುಪೋಗಲಾರೆನು.ಪೋಗದೆ ಈ ಅವಸ್ಥೆಯೊಳು ಇರ್ದೊಡೆ ಅಣ್ಣನು ಏಗೈದಪನೊ… ಹಾ…

(ಎಂದು ಲಕ್ಷ್ಮಣನು ಶೋಕಗದ್ಗದನಾಗೆ ಸೀತೆ ಮಗುಳ್ ಇಂತೆಂದಳು)

ಸೀತೆ: ತಂದೆಲಕ್ಷ್ಮಣ, ನಿನ್ನೊಳು ಎಂದೊಡೆ ಇನ್ನೇನು ಅಹುದು. ನೀನು ಹಿಂದಣ ಜನಸ್ಥಾನದ ಅಂದದೊಳುಪೋಗು. ಕೊಂದುಕೊಂಬೊಡೆತನ್ನ ಬೆಂದೊಡಲೊಳು ಬಸಿರದಂದುಗಮ್ ಇದೆ. ಆನ್ ಇಂದು ಕಾನನದೊಳು ಬಂದುದನು ಕಾಣ್ಬೆನು. ಕೌಸಲೆ ಅಡಿಗೆವಂದಿಸಿದೆನು. ಅಪರಾಧಮ್ ಒಂದುಮ್ ಇಲ್ಲದೆತನ್ನಕಂದನು ಎನ್ನನು ತೊರೆದುದನು ದೇವಿಗೆ ಒರೆವುದು.

(ಎನುತ ಅಂದು ಮೃಗಾಕ್ಷಿ ಅಳಲ್ದಳು.)

ಸೀತೆ: ಏಕೆನಿಂದಿಹೆ ಪೋಗು ಸೌಮಿತ್ರಿ. ಇಲ್ಲಿ ತಳುವಿದೊಡೆ ಕಾಕುತ್ಸ್ಥನು ಕೋಪಿಸನೆ. ತನಗೆ ಈ ಕಾಡೊಳು ಉಗ್ರಜಂತುಗಳಲ್ಲಿ ನೆರವುಂಟು. ರಘುನಾಥನು ಏಕಾಕಿಯಾಗಿರ್ಪನು. ಲೋಕದ ಅರಸು ಏಗೈವೊಡಮ್, ತನ್ನ ಕಿಂಕರರು ಬೇಕುಬೇಡೆಂದು ಪೇಳರೆ. ಭರತಶತ್ರುಘ್ನರು ಈ ಕೆಲಸಕೆ ಒಪ್ಪಿದರೆ. ಹನುಮಂತನು ಇರ್ದಪನೆ ಪೇಳು.

(ಎಂದು ಅಬಲೆ ಅಳಲ್ದಳು )

ಸೀತೆ: ಇದು ತನ್ನ ಮರುಳಾಟಮ್. ಆರ್ ಇರ್ದೊಡೆ ಏಗೈವರು. ಆರಾವಣನ ತಮ್ಮನೈಸಲೆ ವಿಭೀಷಣನು ಭೀರುಗಳನರಿದಪನೆ; ಸೋದರಂಗೆ ಉರೆಮುಳಿದಸುಗ್ರೀವನ್ ಎಂಬವಂಗೆಕಾರುಣ್ಯಮ್ ಇರ್ದಪುದೆ; ದೇವಂಗೆಪೇಳುವರು ಮತ್ತುಳಿದಮಂತ್ರಿಗಳು ಅದಾರುಂಟು; ಘೋರಾಟವಿಗೆಕಳಪುವೊಡೆ ನೀನು ಒಪ್ಪಿ ಕೊಂಡುಬಂದೆ.ಇನ್ನು ಒರಲ್ಡೊಡೆ ಏನಹುದು. ಕಡೆಗೆಕರುಣಾಳುರಾಘವನಲ್ಲಿತಪ್ಪಿಲ್ಲ.ಕಡುಪಾತಕಮ್ ಗೈದು ಪೆಣ್ಣಾಗಿಸಂಭವಿಸಿದ ಒಡಲನುಪೊರೆವುದು ಎನ್ನೊಳು ಅಪರಾಧಮುಂಟು.ಸಾಕು ಇಲ್ಲಿರಲ್ಬೇಡ. ನಿಲ್ಲದಿರು. ನೀನುನಡೆಪೋಗು.ನಿನಗೆಮಾರ್ಗದೊಳು ಅಡಿಗಡಿಗೆಸುಖಮ್ ಆಗಲಿ.

(ಎಂದು ಸೀತೆ ಕಂಬನಿಗಳನು ಮಿಡಿದು ಆರ್ತೆಯಾಗಿರಲು, ಸೌಮಿತ್ರಿ ಆ ವಿಪಿನದ ಅಭಿಮಾನಿಗಳ್ಗೆ ನುಡಿದನು.)

ಲಕ್ಷ್ಮಣ: ಎಲೆವನಸ್ಥಳಗಳಿರ, ವೃಕ್ಷಂಗಳಿರ, ಮೃಗಂಗಳಿರ, ಕ್ರಿಮಿಕೀಟಂಗಳಿರ, ಪಕ್ಷಿಗಳಿರ, ಲತೆಗಳಿರ, ತೃಣಗುಲ್ಮಂಗಳಿರ, ಪಂಚಭೂತಂಗಳಿರ, ದೆಸೆಗಳಿರಕಾವುದು. ಎಲೆಧರ್ಮದೇವತೆ, ಜಗಜ್ಜನನಿ ಜಾಹ್ನವಿಯೆ ತನ್ನ ಮಾತೆಯನುಸಲಹಿಕೊಳ್ವುದು. ಎಲೆ ತಾಯೆಭೂದೇವಿ, ಜಾನಕಿಯನುನಿನ್ನಮಗಳು ಇಹಳು

(ಎಂದು ಸೌಮಿತ್ರಿ ಕೈಮುಗಿದನು.)

ಲಕ್ಷ್ಮಣ: ಮಾಳ್ಕೆ ಇನ್ನಾವುದು. ತನ್ನೊಡಲ ಇಬ್ಬಗಿಯಾಗಿಸೀಳ್ ಕೆಡಹಬೇಡನೆ.ಧರಿತ್ರಿಯೊಳು ನಿಷ್ಠುರದಬಾಳ್ಕೆಯನು ಸುಡಲಿ.

(ಎನುತೆ ಲಕ್ಷ್ಮಣನು ದೇವಿಯನು ಬಲವಂದು ನಮಿಸಿ, ಬಳಿಕ ಬೀಳ್ಕೊಂಡು ನಡೆಯಲ್ಕೆ, ಮನಮ್ ಹಿಂದುಹಿಂದಕೆ ದೂಳ್ಕಾಯದೊಳು ಪತ್ತಿ ಪೊರಳ್ವ ಸೀತೆಯ ಕಡೆಗೆ… ಎಂದುಮ್ ಅಗಲದ ಅಣ್ಣನ ಕಡೆಗೆ… ನೀಳ್ಕುಳಿಗೊಳಲ್ಕೆ ತೂಗುಯ್ಯಲೆವೊಲಾದನು. ನಡೆಗೊಳಲು ಬಾಯಾರ್ವಳನು… ಚೀರ್ವಳನು… ಕಡಲಿಡುವ ಕಂಬನಿಯೊಳು ಆಳ್ವಳನು… ಬೀಳ್ವಳನು… ಪುಡಿಯೊಳು ಪೊರಳ್ದು ಬಸವಳಿವಳನು… ಸುಳಿವಳನು ಕಂಡು ಭರತಾವರಜನು ಅಗಲ್ದು… ಅಡಿಗಡಿಗೆ ತಿರುತಿರುಗಿ ನೋಡುವನು… ಬಾಡುವನು… ಬಿಡದೆ ಬಿಸುಸುಯ್ದು ಬೆಂಡಾದಪನು… ಪೋದಪನು ಪೊಡೆಮರಳ್ವನು… ನಿಲ್ವನು… ಅಳಲುವನು ಬಳಲುವನು ಬಟ್ಟೆಯೊಳು ದಿಟ್ಟಿಗೆಟ್ಟು , ತಾಯನು ಎಳೆಗರು ಬಿಚ್ಚುವಂತೆ ಒಯ್ಯನೊಯ್ಯನೆ ಅತ್ಯಾಯಾಸದಿಂದೆ ಅಗಲ್ದು, ಅಮರನದಿಯನು ದಾಂಟಿ ದುಃಖಾರ್ತನಾಗಿ ಅತ್ತಲ್ ಸೌಮಿತ್ರಿ ಸಾಗಿದನು..)

ಪದ ವಿಂಗಡಣೆ ಮತ್ತು ತಿರುಳು

ಅರಸಕೇಳು=ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ಮುನಿಯು ಹೇಳುತ್ತಿದ್ದಾನೆ;

ರಥ+ಅಗ್ರದೊಳು; ಅಗ್ರ=ಮೇಲುಗಡೆ; ವೈದೇಹಿ=ಸೀತೆ; ಪತಾಕೆ=ಬಾವುಟ;

ಸೌಮಿತ್ರಿ ವೈದೇಹಿಯನೆ ಕೊಂಡು ತೆರಳು ವರಥಾಗ್ರದೊಳು ಚಲಿಸುವ ಪತಾಕೆ=ಲಕ್ಷ್ಮಣನು ಸೀತೆಯನ್ನು ಕರೆದುಕೊಂಡು ಹೋಗುತ್ತಿರುವ ತೇರಿನ ಮೇಲುಗಡೆ ಹಾರಾಡುತ್ತಿರುವ ಬಾವುಟ; ಅಹಹ=ಅಯ್ಯಯ್ಯೊ ಎಂಬ ಉದ್ಗಾರ; ಅಂಗನೆ=ಹೆಣ್ಣು; ಉಳಿ=ತ್ಯಜಿಸು; ಅಡಿಗಡಿಗೆ=ಪದೇಪದೇ/ಮತ್ತೆ ಮತ್ತೆ; ಕೊಡುಹು+ಅಂತೆ; ಕೊಡುಹು=ಅಲ್ಲಾಡಿಸು/ಒದರು; ಇರಲ್ಕೆ=ಇರಲು;

“ಅಹಹ… ರಘುವರನು ಅಂಗನೆಯನು ಉಳಿದನು ಎಂದು ಅಡಿಗಡಿಗೆತಲೆ ಕೊಡುಹುವಂತೆ” ಇರಲ್ಕೆ=ಅಯ್ಯಯ್ಯೋ… ರಾಮನು ಸೀತೆಯನ್ನು ತೊರೆದನು ಎಂಬ ಸಂಕಟದಿಂದ ಮತ್ತೆ ಮತ್ತೆ ತಲೆಯನ್ನು ಅಲ್ಲಾಡಿಸುತ್ತಿರುವಂತೆ ಪಟಪಟನೆ ಬಡಿಯುತ್ತಿರಲು; ನೆರವಿ=ಗುಂಪು/ಸಮೂಹ; ಪರಮ=ಅತಿ ಹೆಚ್ಚಿನ; ದಾರುಣ=ಕ್ರೂರತನ/ಉಗ್ರ; ಗುಜುಗುಜಿಸು=ತಂತಮ್ಮಲ್ಲೇ ಮಾತನಾಡಿಕೊಳ್ಳುತ್ತ; ಕಾತರಿಸುತ+ಇರೆ; ಕಾತರಿಸು=ಕಳವಳಗೊಳ್ಳು; ಇರೆ=ಇರಲು;

ಅಯೋಧ್ಯಾಪುರದ ನೆರವಿಯ ಜನಮ್  “ಪರಮ ದಾರುಣಮ್ ಆಯ್ತು ಇದು” ಎಂದು ಗುಜುಗುಜಿಸಿ ಮನದೆ ಕರಗಿ ಕಾತರಿಸುತಿರೆ=ಅಯೋದ್ಯಾಪುರದಲ್ಲಿ ಅಲ್ಲಲ್ಲಿ ಗುಂಪುಗೂಡಿದ್ದ ಜನರು “ಇದು ತುಂಬಾ ಕ್ರೂರತನದ ಕೆಲಸವಾಯಿತು” ಎಂದು ತಮ್ಮತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತ, ಸೀತೆಯ ಬಗ್ಗೆ ಅಪಾರವಾದ ಕರುಣೆಯಿಂದ ಕೂಡಿ, ಸೀತಾದೇವಿಗೆ ಮುಂದೆ ಏನಾಗುವುದೋ ಎಂಬ ಆತಂಕದಿಂದ ಕಳವಳಪಡುತ್ತಿರಲು;

ಕಾಲ್+ಬಟ್ಟೆ+ಕೊಂಡ ಬಟ್ಟೆ=ದಾರಿ/ಮಾರ್ಗ; ಕಾಲ್=ನದಿಯ ನೀರನ್ನು ಇತರ ಕಡೆಗೆ ಹಾಯಿಸಲು ಮಾಡಿರುವ ನಾಲೆ; ಕಾಲ್ಬಟ್ಟೆ=ನದಿಯ ಪಕ್ಕದಲ್ಲಿರುವ ದಾರಿ; ಅನಿಲ=ಗಾಳಿ/ವಾಯು; ಅನಿಲವೇಗ=ತುಂಬಾ ವೇಗವಾಗಿ; ಪರಿ=ಚಲಿಸು/ಓಡಿಸು/ನಡೆಸು;

ಕಾಲ್ಬಟ್ಟೆಗೊಂಡು ಅನಿಲವೇಗದಿಂದೆ ಆ ರಥವನುಪರಿಸಿದನು=ಗಂಗಾ ನದಿಯ ಮಗ್ಗುಲಲ್ಲಿ ಇದ್ದ ದಾರಿಯಲ್ಲಿ ವಾಯುವೇಗದಿಂದ ರಥವನ್ನು ಮುನ್ನಡೆಸಿದನು;

ಧುರ+ಒಳು; ಧುರ=ಕಾಳೆಗ; ಒಳು=ಅಲ್ಲಿ; ಆಂತರನು=ಎದುರಾದವರನ್ನು/ಹಗೆಗಳನ್ನು; ಇರಿ=ತಿವಿ/ಚುಚ್ಚು; ಮೆರೆ=ತೋರಿಸು; ತರಳೆ=ತರುಣಿ/ಯುವತಿ; ಅಡರ್ವಂತೆ+ಆಯ್ತು; ಅಡರು=ಮೇಲಕ್ಕೆ ಹತ್ತು;

ಧುರದೊಳು ಆಂತರನು ಇರಿದು ಮೆರೆಯಲು ಏರುವರಥಮ್ ತರಳೆಯನು ಕಾನನಕೆ ಕಳುಹಲು ಅಡರ್ವಂತಾಯ್ತು=ರಣರಂಗದಲ್ಲಿ ಎದುರಾಗುವ ಹಗೆಗಳನ್ನು ತಿವಿದು ಕೊಂದು ಪರಾಕ್ರಮವನ್ನು ತೋರಿಸಲೆಂದು ಏರಬೇಕಾಗಿದ್ದ ತೇರನ್ನು, ಈಗ ಸೀತಾದೇವಿಯನ್ನು ಕಾಡಿಗೆ ಕಳುಹಿಸಲು ಏರುವಂತಾಯ್ತು;

ಧರೆ+ಒಳು; ಧರೆ=ಬೂಮಂಡಲ; ಆರ್ತರು=ಸಂಕಟಕ್ಕೆ ಗುರಿಯಾದವರು; ಐದೆ=ಚೆನ್ನಾಗಿ; ರಕ್ಷಿಸು=ಕಾಪಾಡು; ಕೋಮಲೆ=ಮೃದು ಸ್ವಭಾವದ ಹೆಣ್ಣು/ಒಳ್ಳೆಯತನವುಳ್ಳ ಹೆಂಗಸು;

ಧರೆಯೊಳು ಆರ್ತರನು ಐದೆರಕ್ಷಿಸುವಬುದ್ಧಿ ಕೋಮಲೆಯಕೊಲೆಗೆಲಸಕೆ ಆಯ್ತು=ಬೂಮಂಡಲದಲ್ಲಿ ಸಂಕಟಕ್ಕೆ ಒಳಗಾದವರನ್ನು ಚೆನ್ನಾಗಿ ಕಾಪಾಡಬೇಕಾಗಿದ್ದ ನನ್ನ ಶಕ್ತಿ ಮತ್ತು ಯುಕ್ತಿಯು ಇದೀಗ ಕೋಮಲೆಯಾದ ಸೀತಾದೇವಿಯನ್ನು ಕೊಲ್ಲುವುದಕ್ಕೆ ಬಳಕೆಯಾಗುತ್ತದೆ;

ಕರುಣಮ್+ಇಲ್ಲದೆ; ಹೊರೆ=ಕಾಪಾಡು; ಹರಣಮ್+ಅನ್; ಹರಣ=ಜೀವ/ಪ್ರಾಣ;

ಕರುಣಮಿಲ್ಲದೆ ಹೊರೆವ ಹರಣಮನ್ ಸುಡಲಿ= ಕರುಣೆಯಿಲ್ಲದೆ ಇಂತಹ ಕ್ರೂರಕೆಲಸದಲ್ಲಿ ತೊಡಗಿರುವ ಈ ನನ್ನ ಜನ್ಮಕ್ಕೆ ಬೆಂಕಿಹಾಕಲಿ

ಕೃತ್ಯ=ಕೆಲಸ/ಕಾರ್ಯ; ನಿಷ್ಠುರ+ಒಳು; ನಿಷ್ಠುರ=ಕ್ರೂರವಾದುದು/ದಯೆಯಿಲ್ಲದ್ದು; ಎಸಗು=ಮಾಡು;

ಎಂತು ಈ ಕೃತ್ಯಮ್ ನಿಷ್ಠುರದೊಳು ಎಸಗುವೆನೊ=ಹೇಗೆ ತಾನೆ ಇಂತಹ ಕೆಲಸವನ್ನು ತುಸುವಾದರೂ ಕರುಣೆಯಿಲ್ಲದೆ ಮಾಡವೆನೊ;
ಬೆಸಸು=ಅಪ್ಪಣೆ ಮಾಡು;

ರಾಘವೇಶ್ವರನು ತನಗೆ ಎಂತು ಇದಕ್ಕೆ ಬೆಸಸಿದನೊ ಎನುತೆ ಸೌಮಿತ್ರಿ ಮರುಗುತೆ ನಡೆದನು=ಅಣ್ಣನಾದ ರಾಮನು ತನಗೆ ಏತಕ್ಕಾದರೂ ಇಂತಹ ಕೆಲಸವನ್ನು ಮಾಡಲು ಹೇಳಿದನೊ ಎಂದು ಲಕ್ಶ್ಮಣನು ಮನದೊಳಗೆ ಸಂಕಟಪಡುತ್ತ ತೇರಿನಲ್ಲಿ ಪಯಣಿಸಿದನು;

ಬಳ್ಳು=ನರಿ; ಒರಲು=ಅರಚು/ಕೂಗು;

ಬಳ್ಳು ಒರಲ್ದುದು=ನರಿಗಳು ಅರಚತೊಡಗಿದವು;

ಕುಳ್ಳಿರ್ದ ಮೃಗಮ್ ಎದ್ದು ಮುಂದೆ ಮಾರ್ಗವನು ದಾಂಟಿದುದು=ಮರಗಿಡ ಮರೆಯಲ್ಲಿ ಕುಳಿತಿದ್ದ ಪ್ರಾಣಿಗಳು ದಾರಿಗೆ ಅಡ್ಡಲಾಗಿ ಹಾಯ್ದುಹೋದವು; ಅದಿರು=ಅಲ್ಲಾಡು/ಬಡಿ/ಹೊಡೆ;

ಬಲದಕಣ್ಣು ಅದಿರೆ=ಬಲದ ಕಣ್ಣಿನ ರೆಪ್ಪೆಗಳು ಬಡಿದುಕೊಳ್ಳಲು;

ಅಳ್ಳೆರ್ದೆ+ಒಳು; ಅಳ್ಳೆರ್ದೆ=ನಡುಗುವ ಎದೆ;

ಅಳ್ಳೆರ್ದೆಯೊಳು ಅವನಿಸುತೆ=ಸೀತೆಯು ಹೆದರಿಕೆಯಿಂದ ತತ್ತರಿಸಿ ನಡುಗುತ್ತ; ಪಥ=ದಾರಿ/ಮಾರ್ಗ; ನಿಮಿತ್ತ=ಶಕುನ; ದುರ್ನಿಮಿತ್ತಂಗಳನು=ಕೆಟ್ಟ ಶಕುನಗಳನ್ನು; ಡಿಳ್ಳ=ದಿಗಿಲು/ಹೆದರಿಕೆ; ಆದಪುದು=ಆಗುತ್ತಿರುವುದು;

ನೋಡು ಲಕ್ಷ್ಮಣ ಪಥದೊಳು ದುರ್ನಿಮಿತ್ತಂಗಳನು ಕಂಡು ಈಗಳ್ ಇದಕೆ ಎನ್ನ ಮನಮ್ ಡಿಳ್ಳಮ್ ಆದಪುದು=ಅದೊ ನೋಡು ಲಕ್ಶ್ಮಣ, ದಾರಿಯಲ್ಲಿ ಉಂಟಾಗುತ್ತಿರುವ ಕೆಟ್ಟಶಕುನಗಳನ್ನು ಕಂಡು, ಇದರಿಂದ ಏನಾಗುವುದೋ ಎಂಬ ಹೆದರಿಕೆಯು ನನ್ನನ್ನು ಕಾಡುತ್ತಿದೆ; ಉಳ್ಳ=ಇರುವ;

ರಾಮನ ಆಯುಷ್ಯಕೆ ಐಶ್ವರ್ಯಕೆ ಉಳ್ಳ ಭುಜಬಲಕೆ ಮುಂದೆ ಒಳ್ಳಿತಾಗಲಿ=ರಾಮನ ಆಯುಸ್ಸು, ಸಿರಿವಂತಿಕೆ ಮತ್ತು ಅವನಲ್ಲಿರುವ ತೋಳ್ಬಲಕ್ಕೆ ಸದಾಕಾಲ ಒಳಿತಾಗಲಿ; ಅಸುರ=ರಕ್ಕಸ; ಸಲಹು=ಕಾಪಾಡು;

ಅಸುರರನು ಗೆಲ್ದ ರಾಘವನು ನಮ್ಮನು ಸಲಹಲಿ ಎಂದಳು=ರಕ್ಕಸರನ್ನು ಸದೆಬಡಿದಿರುವ ರಾಮನು ನಮ್ಮನ್ನು ಕಾಪಾಡಲಿ;

ಅನ್ನೆಗಮ್=ಅಷ್ಟರಲ್ಲಿ;

ಅನ್ನೆಗಮ್ ಜಾನಕಿಯ ಕಣ್ಗೆ ಮುಂದೆ ತೋರಿತು=ಹೀಗೆ ಸೀತೆಯು ತನ್ನ ಮನದ ಆತಂಕವನ್ನು ಲಕ್ಶ್ಮಣನೊಡನೆ ಹೇಳಿಕೊಳ್ಳುತ್ತಿರುವಾಗ ಅವಳ ಕಣ್ಣ ಮುಂದೆ ಗಂಗಾನದಿಯು ಕಂಡುಬಂದಿತು; ಸನ್ನುತ=ಚೆನ್ನಾಗಿ ಹೊಗಳಿದ/ಗುಣಗಾನ ಮಾಡಿದ; ರಘೂಧ್ವಹ=ರಾಮ; ಕೀರ್ತಿ+ಎನೆ; ಎನೆ=ಎನ್ನುವಂತೆ;

ಸನ್ನುತ ರಘೂಧ್ವಹನ ಕೀರ್ತಿಯೆನೆ=ಹೊಗಳಿಕೆಗೆ ಪಾತ್ರನಾದ ರಾಮನ ಕೀರ್ತಿಯೆನ್ನುವಂತೆ;

ಮೂರು+ಬಟ್ಟೆ; ಬಟ್ಟೆ=ದಾರಿ; ಮೂವಟ್ಟೆ=ಮೂರು ದಾರಿ;

ಮೂವಟ್ಟೆಯನು ನಡೆದು=ದೇವಲೋಕ-ಬೂಲೋಕ-ಪಾತಾಳ ಲೋಕವೆಂಬ ಮೂರು ಲೋಕಗಳಲ್ಲಿಯು ಹರಿದು;
ಮುಕ್ಕಣ್ಣ=ಮೂರು ಕಣ್ಣುಳ್ಳ ಶಿವ; ಸಾರ್ದು=ಸಮೀಪಿಸಿ;

ಮುಕ್ಕಣ್ಣನನು ಸಾರ್ದು=ಮೂರು ಕಣ್ಣುಗಳುಳ್ಳ ಶಿವನ ಜಟೆಯನ್ನು ಸೇರಿ;
ಮೂಜಗ=ಮೂರು ಲೋಕಗಳು; ಮುರಿದು=ತುಂಡರಿಸಿ/ನಾಶಪಡಿಸಿ; ಮುಕ್ಕಿ=ಕಬಳಿಸಿ; ಮುನ್ನೀರು=ಕಡಲು/ಸಮುದ್ರ;

ಮೂಜಗದ ಪಾಪಮನು ಮುರಿದುಮುಕ್ಕಿ ಮುನ್ನೀರು ಮುಂತಾಗಿ=ಮೂರು ಲೋಕಗಳಲ್ಲಿಯೂ ಇದ್ದ ಪಾಪವೆಲ್ಲವನ್ನೂ

ಸಂಪೂರ್ಣವಾಗಿ ನಾಶಪಡಿಸಿ ಕಡಲಿನ ಕಡೆಗೆ ಹರಿಯುತ್ತ;
ಮೂದೇವರ+ಒಳಗಾದ; ಮುನ್ನುಳ್ಳ=ಮೊದಲಿನಿಂದಲೂ ಇರುವ; ಮೂದೇವರು=ಬ್ರಹ್ಮ-ವಿಷ್ಣು-ಶಿವ; ವಿಬುಧ=ದೇವತೆ;

ಮೂದೇವರೊಳಗಾದ ಮುನ್ನುಳ್ಳ ಮೂವತ್ತು ಮೂರ್ಕೋಟಿ ವಿಬುಧರನು=ಬ್ರಹ್ಮ-ವಿಶ್ಣು-ಶಿವನನ್ನು ಒಳಗೊಂಡಂತೆ ಮೊದಲಿನಿಂದಲೂ ಇರುವ ಮೂವತ್ತು ಮೂರು ಕೋಟಿ ದೇವತೆಗಳನ್ನು;

ಅಣಕಿಪ=ಅಪಹಾಸ್ಯ ಮಾಡುವ/ಮೂದಲಿಸುವ; ಒದವು=ಉಂಟಾಗು; ಪರಿವ=ಹರಿಯುತ್ತಿರುವ; ದಿವಿಜ=ದೇವತೆ/ಸಗ್ಗದಲ್ಲಿ ಹುಟ್ಟಿದ; ಬೆಳ್ವೊನಲು=ಬೆಳ್ಳನೆಯ ನೊರೆತೊರೆಗಳಿಂದ ಕೂಡಿದ ನದಿ;

ತನ್ನೊಳು ಮುಳುಗಿದರು ಅಣಕಿಪ ಪೆಂಪು ಒದವಿ ಪರಿವ ದಿವಿಜನದಿಯ ಬೆಳ್ವೊನಲು=ತನ್ನಲ್ಲಿ ಮಿಂದೆದ್ದ ಬಕ್ತಜನರು ದೇವತೆಗಳನ್ನು ಅಣಿಕಿಸುತ್ತಾರೆ. ಅಂದರೆ ದೇವತೆಗಳಿಗಿಂತಲೂ ಹೆಚ್ಚಿನ ಪುಣ್ಯವನ್ನು ಗಂಗೆಯ ಸ್ನಾನದಿಂದ ಪಡೆಯುತ್ತಾರೆ ಎಂಬ ಕೀರ್‍ತಿಯನ್ನು ಪಡೆದು ಹರಿಯುತ್ತಿರುವ ಬೆಳ್ಳನೆಯ ನೊರೆತೆರೆಯ ಗಂಗಾ ನದಿ;

ಕಲ್ಲೋಲ=ದೊಡ್ಡ ದೊಡ್ಡ ಅಲೆಗಳು; ಮಾಲೆ=ಸಾಲು/ಪಂಕ್ತಿ; ಲೀಲೆ=ಆಟ/ಕ್ರೀಡೆ/ಬೆಡಗು/ಚೆಲುವು;

ತೆರತೆರದ ಕಲ್ಲೋಲ ಮಾಲೆಗಳ ಲೀಲೆಗಳ=ಗಂಗಾ ನದಿಯಲ್ಲಿ ಬಹುಬಗೆಯಲ್ಲಿ ಹೊಯ್ದಾಡುತ್ತಿರುವ ದೊಡ್ಡ ದೊಡ್ಡ ಅಲೆಗಳ ಉರುಳುವಿಕೆಯ ಚೆಲುವು

ಬೆರೆ=ಕೂಡು/ಸೇರು; ರಾಜಹಂಸ+ಆಳಿಗಳ; ಕೇಳಿ=ಆಟ;

ಬೆರೆಬೆರೆವ ರಾಜಹಂಸಾಳಿಗಳ ಕೇಳಿಗಳ=ಜೊತೆಗೂಡಿರುವ ರಾಜಹಂಸಗಳ ಆಟ

ಪರಿಪರಿ=ಬಹುಬಗೆಯ; ನೀರ್+ಪನಿ; ನೀರ್ವನಿ=ನೀರಿನ ಹನಿ; ಆಕರ=ಮೂಲ/ಉತ್ಪತ್ತಿಯ ಜಾಗ; ಶೀಕರ=ತುಂತುರು;

ಪರಿಪರಿಯ ನೀರ್ವನಿಗಳ ಆಕರದ ಶೀಕರದ ನೊರೆಯ=ನೀರಿನ ಹನಿಗಳಿಂದ ಕೂಡಿದ ಬೆಳ್ಳನೆಯ ನೊರೆಯ ಬಹುಬಗೆಯ ತುಂತುರು;

ಬೊಬ್ಬುಳಿ=ನೀರಿನ ಗುಳ್ಳೆ; ಸುಳಿ=ಮಡು/ನೀರು ಗುಂಡಾಗಿ ತಿರುಗುತ್ತಿರುವ ಜಾಗ;

ಬೊಬ್ಬುಳಿಯ ಸುಳಿಯ=ನೀರಿನ ಗುಳ್ಳೆಗಳಿಂದ ತುಂಬಿದ ಮಡುವಿನ

ಮೊರೆ=ಜೋರಾಗಿ ದನಿಮಾಡುವುದು; ಘೂರ್ಮಿಸು=ಅಬ್ಬರಿಸು/

ಗರ್ಜಿಸು; ಪರಿವು=ಪ್ರವಾಹ/ನೀರಿನ ಓಟ; ಮುರಿ=ತಿರುಗಣೆ/ಹೊರಳುವಿಕೆ;

ಮೊರೆಮೊರೆದು ಘೂರ್ಮಿಸುವ ಪರಿವುಗಳ ಮುರಿಗಳ=ಉಕ್ಕೆದ್ದು ಮೊರೆಯುತ್ತ ಹರಿಯುತ್ತಿರುವ ಪ್ರವಾಹದ ಹೊರಳುವಿಕೆಯ

ಸುಳಿ=ಕಂಡುಬರುವ; ಜಂತು=ಜೀವಿ; ಗೊಂತು=ಮಡು;

ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ=ಮತ್ತೆಮತ್ತೆ ನೀರಿನಿಂದ ಮೇಲಕ್ಕೆ ಚಿಮ್ಮಿ ಕಂಡುಬರುತ್ತಿರುವ ಜಲಜೀವಿಗಳಾದ ಮೀನು, ಮೊಸಳೆಗಳಿಂದ ತುಂಬಿದ ಮಡುವುಗಳ;ನೆರೆ=ಗುಂಪುಗೂಡಿ; ಸೇವಿಸು=ಪೂಜಿಸು; ಭಾವಿಸು=ಜಪಮಾಡು/ದೇವರ ಸ್ಮರಣೆ ಮಾಡು; ಅವನಿಜೆ=ಸೀತೆ;

ನೆರೆನೆರೆದು ಮುನಿಜನಮ್ ಸೇವಿಸುವ ಭಾವಿಸುವ ಗಂಗೆಗೆ ಅವನಿಜೆ ಬಂದಳು=ಗುಂಪುಗೂಡಿ ಮುನಿಜನರು ಜಪಮಾಡುತ್ತ ಪೂಜಿಸುವ ಗಂಗಾನದಿ ಬಳಿಗೆ ಸೀತೆಯು ಬಂದಳು;

ಜಾಹ್ನವಿ=ಗಂಗಾ ನದಿ; ತಡಿ=ದಡ/ತೀರ; ಬನದ+ಎಡೆಯೊಳು; ಬನ=ಕಾಡು; ಎಡೆ=ಜಾಗ;

ಆ ಜಾಹ್ನವಿಯ ತಡಿಯ ಬನದೆಡೆಯೊಳು=ಆ ಗಂಗಾ ನದಿಯ ದಡದಲ್ಲಿದ್ದ ಕಾಡಿನ ಜಾಗದಲ್ಲಿ;

ಎಳ=ಎಳೆಯ/ಸಸಿ; ಕವುಂಗು=ಅಡಕೆ; ಪನಸ=ಹಲಸು; ಜಂಬು=ನೇರಿಳೆ; ನಾರಂಗ=ಹೇರಳೆ; ಜಂಬೀರ=ನಿಂಬೆ; ಮಾತುಳಂಗ=ಮಾದಲವೆಂಬ ಹಣ್ಣು; ತಿಂತ್ರಿಣಿ=ಹುಣಿಸೆ; ಚೂತ=ಮಾವು; ಬಿಲ್ವ=ಬಿಲ್ವಮರದ ಎಲೆಯನ್ನು ಶಿವನ ಪೂಜೆಗೆ ಬಳಸುತ್ತಾರೆ; ಕಪಿತ್ಥ=ಬೇಲದ ಹಣ್ಣು; ತರು=ಮರ; ತೊಂಗು=ತೂಗಾಡು/ತೊನೆದಾಡು; ಫಲ+ಆವಳಿ; ಫಲ=ಹಣ್ಣು; ಆವಳಿ=ಗುಂಪು/ರಾಶಿ; ಆವಗಮ್=ಯಾವಾಗಲೂ; ಪಿಂಗು=ಕಡಿಮೆಯಾಗು/ಕಾಣದಂತಾಗು;

ತೆಂಗು ಎಳ ಕವುಂಗುಪನಸಮ್ ದ್ರಾಕ್ಷೆ ಜಂಬುನಾರಂಗ ಜಂಬೀರ ಖರ್ಜೂರ ಕಿತ್ತಳೆ ಮಾತುಳಂಗ ತಿಂತ್ರಿಣಿ ಚೂತನೆಲ್ಲಿ ಬಿಲ್ವ ಕಪಿತ್ಥಮ್ ಎಂಬ ನಾನಾ ತರುಗಳು ತೊಂಗುವ ಫಲಾವಳಿಯ ಭಾರಂಗಳು ಆವಗಮ್ಪಿಂಗವು=ತೆಂಗು, ಅಡಕೆಯ ಸಸಿಗಳು, ಹಲಸು, ದ್ರಾಕ್ಶಿ, ನೇರಳೆ, ಹೇರಳೆ, ನಿಂಬೆ, ಕರ್‍ಜೂರ, ಕಿತ್ತಳೆ, ಮಾದಳ, ಹುಣಿಸೆ, ಮಾವು, ನೆಲ್ಲಿ, ಬಿಲ್ವ, ಬೇಲ ಮುಂತಾದ ಮರಗಳಲ್ಲಿ ಗೊನೆತುಂಬಿ ತೂಗಾಡುವ ಹಣ್ಣುಗಳು ಯಾವಾಗಲು ಕಡಿಮೆಯಾಗುವುದಿಲ್ಲ. ಅಂದರೆ ಒಂದಲ್ಲ ಒಂದು ಬಗೆಯ ಹಣ್ಣುಗಳು ಕಾಡಿನಲ್ಲಿ ಇದ್ದೇ ಇರುತ್ತವೆ;

ಇಳೆ=ಭೂಮಿ; ಇಳಿಪಬೇಕು+ಎಂದು; ಇಳಿಪು=ತಂದಿರಿಸು/ಕೆಳಕ್ಕೆ ತರು; ಬಾಗ=ಬಗ್ಗಿದ; ಅಂಗ=ರೀತಿ; ಎನೆ=ಎನ್ನುವಂತೆ; ಇಕ್ಕೆಲ=ಎರಡು ಕಡೆಗಳಲ್ಲಿ; ಎಸೆ=ಚೆಲುವಾಗು/ಅಂದವಾಗು;

ಇವನು ಇಳೆಗೆ ಇಳಿಪಬೇಕೆಂದು ಬಾಗಿದ ಒಂದು ಅಂಗಮ್ ಎನೆ ಇಕ್ಕೆಲದೊಳು ಕಣ್ಗೆ ಎಸೆದುವು=ಇಂತಹ ಹಣ್ಣುಗಳೆಲ್ಲವನ್ನು ಬೂಮಿಯಲ್ಲಿ ನೆಲೆಗೊಳಿಸಬೇಕೆಂದು ಮಾಡಿರುವ ಒಂದು ಅಂಗವೇನೋ ಎನ್ನುವಂತೆ ಎರಡು ಕಡೆಗಳಲ್ಲೂ ಹಣ್ಣಿನ ಮರಗಿಡಗಳು ಕಣ್ಣಿಗೆ ಚೆಲುವಾಗಿ ಕಂಡುಬಂದವು; ;

ಮಂದಾಕಿನಿ=ಗಂಗಾ ನದಿಗೆ ಸೇರುವ ಒಂದು ಉಪನದಿಯ ಹೆಸರು; ಪೊಡಮಡು=ನಮಸ್ಕರಿಸು; ನಿರ್ಮಲ=ಶುಚಿಯಾದ/ಪರಿಶುದ್ದವಾದ; ತೀರ್ಥ=ನೀರು;

ಇಳಿದು ರಥದಿಂದೆ ಮಂದಾಕಿನಿಗೆ ಪೊಡಮಟ್ಟು ನಿರ್ಮಲ ತೀರ್ಥದೊಳು ಮಿಂದು=ಸೀತೆಯು ತೇರಿನಿಂದ ಇಳಿದು, ಗಂಗಾನದಿಗೆ ನಮಸ್ಕರಿಸಿ, ಶುಚಿಯಾದ ನೀರಿನಲ್ಲಿ ಸ್ನಾನ ಮಾಡಿ; ನಾವಿಕ=ಅಂಬಿಗ/ದೋಣಿಯನ್ನು ನಡೆಸುವವನು;ನಾವ=ನಾವೆ/ದೋಣಿ; ಭೂಜಾತೆ=ಸೀತೆ; ಕಳೆದು=ದಾಟಿ;

ಬಳಿಕ ನಾವಿಕರೊಡನೆ ನಾವದೊಳು ಭೂಜಾತೆ ಸಹಿತ ಗಂಗೆಯನು ಕಳೆದು=ಅನಂತರ ಅಂಬಿಗರೊಡನೆ ದೋಣಿಯಲ್ಲಿ ಕುಳಿತು ಸೀತೆಯೊಡನೆ ಗಂಗಾನದಿಯನ್ನು ದಾಟಿ;

ಮತ್ತೆ=ಪುನಹ; ಬಿಸುಸುಯ್ದು=ನಿಟ್ಟುಸಿರನ್ನು ಬಿಡುತ್ತ/ಸಂಕಟದಿಂದ ಉಸಿರನ್ನು ಬಿಡುತ್ತ;

ಸೌಮಿತ್ರಿ ಮತ್ತೆ ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ=ಲಕ್ಶ್ಮಣನು ಮತ್ತೆ ತನ್ನ ಮನದೊಳಗೆ ಸಂಕಟದ ಬೇಗೆಯಲ್ಲಿ ಬೇಯುತ್ತ, ನಿಟ್ಟುಸಿರನ್ನು ಬಿಡುತ್ತ ಚಿಂತಿಸುತ್ತ; ಉಗ್ರ=ಭಯಂಕರವಾದ/ಕ್ರೂರವಾದ; ಗಣ=ಸಮೂಹ/ಗುಂಪು; ಘೂರ್ಮಿಸು=ಅಬ್ಬರಿಸು; ಅಡಿ=ಹೆಜ್ಜೆ; ಇಡುವೊಡೆ=ಇಡಬೇಕೆಂದರೆ; ಅಸದಳ=ಅಸಾಧ್ಯ/ಆಗುವುದಿಲ್ಲ; ಕರ್ಕಶ=ಬಿರುಸಾದ; ಮುಂದಳೆದು=ಮುನ್ನಡೆಯುತ್ತ; ಹಳು=ಕಾಡು/ಅರಣ್ಯ; ಪೊಕ್ಕನು=ಪ್ರವೇಶಿಸಿದನು;

ಉಗ್ರ ಮೃಗ ಪಕ್ಷಿ ಗಣದಿಂದ ಘೂರ್ಮಿಸುವ ಅಡಿ ಇಡುವೊಡೆ ಅಸದಳಮ್ ಎಂಬಕರ್ಕಶದಮಾರ್ಗದಿಂದೆ ಮುಂದಳೆದು ಹಳುವಮನು ಪೊಕ್ಕನು=ಮುನ್ನಡೆಯುತ್ತ ಕ್ರೂರವಾದ ಪ್ರಾಣಿಪಕ್ಶಿಗಳ ದನಿಯ ಅಬ್ಬರದಿಂದ ಕೂಡಿರುವ, ಹೆಜ್ಜೆಯಿಡಲು ಆಗದಂತಹ ರೀತಿಯಲ್ಲಿ ಮುಳ್ಳುಕಲ್ಲುಗಳಿಂದ ಕೂಡಿದ ಕೆಟ್ಟ ಹಾದಿಯಲ್ಲಿ
ಮುನ್ನಡೆಯುತ್ತ ಕಾಡಿನೊಳಕ್ಕೆ ಬಂದನು; ಇಲ್ಲಿಂದ ಮುಂದೆ ಸೀತೆ ಮತ್ತು ಲಕ್ಶ್ಮಣ- ಇಬ್ಬರೇ ಕಾಡಿನೊಳಕ್ಕೆ ತೆರಳುತ್ತಾರೆ; ಶಕುನಿ=ಹಕ್ಕಿ; ಚೀತ್ಕಾರ=ದೊಡ್ಡ ದನಿಯಲ್ಲಿ ಅರಚುವಿಕೆ; ಘೋಷಣ=ಕೂಗಿ \ಹೇಳುವಿಕೆ/ಸಾರುವಿಕೆ; ಮಯ=ತುಂಬಿದ;

ಶಕುನಿ ಚೀತ್ಕಾರ ಘೋಷಣಮಯಮ್=ಕಾಡಿನ ಎಲ್ಲೆಡೆಯಲ್ಲಿಯೂ ಹಕ್ಕಿಗಳ ಕೂಗು ದೊಡ್ಡ ದನಿಯಲ್ಲಿ ಕೇಳಿಬರುತ್ತಿತ್ತು;

ತೃಣ=ಹುಲ್ಲು;

ತೃಣಮಯಮ್=ಹುಲ್ಲು ದಟ್ಟವಾಗಿ ಹಬ್ಬಿತ್ತು; ವಿಕಿರದ+ಉಪಲ+ಆಳಿ; ವಿಕಿರ=ಹರಡಿಕೊಂಡಿರುವ; ಉಪಲ=ಕಲ್ಲು; ಆಳಿ=ಗುಡ್ಡೆ/ಗುಂಪು; ವಿಕಿರದುಪಲಾಳಿ=ಎಲ್ಲೆಡೆ ಹರಡಿಕೊಂಡಿರುವ ನುರುಜುಕಲ್ಲಿನ ರಾಶಿ; ಕರ್ಕಶ=ಗಟ್ಟಿಯಾದ/ಬಿರುಸಾದ/ಒರಟಾದ;

ವಿಕಿರದುಪಲಾಳಿ ಕರ್ಕಶಮಯಮ್=ಮೊನಚಾದ ಹಾಗೂ ಒರಟಾದ ನುರುಜುಕಲ್ಲುಗಳು ಹರಡಿಕೊಂಡಿದ್ದವು; ಶಶ=ಮೊಲ;

ಶಶಮಯಮ್=ಮೊಲಗಳಿಂದ ತುಂಬಿತ್ತು; ಪ್ರಕಟ=ಕಣ್ಣಿಗೆ ಕಾಣುವ; ಕಂಟಕ=ಮುಳ್ಳು; ಕೀರ್ಣ=ಮುಸುಕಿದ/ಆವರಿಸಿದ;

ಪ್ರಕಟ ಕಂಟಕ ಕೀರ್ಣ ತರುಮಯಮ್=ಕಾಡಿನಲ್ಲಿ ಮುಳ್ಳಿಡಿದ ಮರಗಳು ಆವರಿಸಿಕೊಂಡಿರುವುದು ಎದ್ದು ಕಾಣುತ್ತಿತ್ತು;

ರುರು=ಜಿಂಕೆ; ಮಯ=ತುಂಬಿದ;

ರುರುಮಯಮ್=ಜಿಂಕೆಗಳ ಹಿಂಡು ಎಲ್ಲೆಡೆಯಲ್ಲಿಯೂ ಇದ್ದವು; ವಿವಿಧ+ಉಗ್ರ+ಜಂತು;

ವಿವಿಧೋಗ್ರಜಂತು ಮಯವು=ಕಾಡಿನ ತುಂಬಾ ಬಗೆಬಗೆಯ ಕ್ರೂರಪ್ರಾಣಿಪಕ್ಶಿಗಳಿದ್ದವು; ನಕುಲ=ಮುಂಗುಸಿ; ಮೂಷಕ=ಇಲಿ; ಸರೀಸೃಪ=ಹಾವು;

ನಕುಲ ಮೂಷಕ ಸರೀಸೃಪ ಮಯಮ್=ಮುಂಗುಸಿ, ಇಲಿ, ಹಾವುಗಳು ಎಲ್ಲೆಡೆ ಸಂಚರಿಸುತ್ತಿದ್ದವು;

ದ್ವಿಪ=ಆನೆ; ಭೂ+ವಿಷಮ; ಭೂ=ಭೂಮಿ; ವಿಷಮ=ಕೆಟ್ಟ; ಸಂಕುಲ=ಸಮೂಹ/ಗುಂಪು;

ದ್ವಿಪಮಯಮ್ ಸಕಲ ಭೂವಿಷಮ ಸಂಕುಲಮಯಮ್=ಆನೆಗಳನ್ನು ಮೊದಲುಗೊಂಡು ಅತ್ಯಂತ ಕ್ರೂರವಾದ ಪ್ರಾಣಿಪಕ್ಶಿಗಳ ಗುಂಪಿನಿಂದ ಕಾಡು ಕೂಡಿತ್ತು;

ಬಿಲಮಯಮ್=ಬಿಲಗಳಿಂದ ಕೂಡಿತ್ತು;

ವೃಕ=ತೋಳ; ಸೂಕರ=ಹಂದಿ; ವ್ಯಾಘ್ರ=ಹುಲಿ; ಚಯ=ಗುಂಪು;

ವೃಕ ಸೂಕರ ವ್ಯಾಘ್ರ ಚಯಮಯಮ್=ತೋಳ, ಹಂದಿ, ಹುಲಿಗಳ ಗುಂಪಿನಿಂದ ಕಾಡು ತುಂಬಿಹೋಗಿತ್ತು

ಭಯಮಯಮ್ ತಾನು ಎನಿಸಿಕಾಡು ಇರ್ದುದು=ಕಾಡನ್ನು ಹೊಕ್ಕವರ ಮಯ್ ಮನದಲ್ಲಿ ಹೆದರಿಕೆಯನ್ನು ಉಂಟುಮಾಡುವಂತೆ ಕಾಡು ಕಂಡುಬರುತ್ತಿತ್ತು

ಇರುಳ್+ಅಂತೆ; ಇರುಳ್=ರಾತ್ರಿ; ಅಂತೆ=ಹಾಗೆ; ಪಗಲ್+ಅಂತೆ; ಪಗಲ್=ಹಗಲು; ಮಖ=ಯಾಗ; ಮಖದಂತೆ=ಯಾಗದ ಕುಂಡದ ಹಾಗೆ; ದಿವ=ದೇವಲೋಕ; ದಿವದಂತೆ=ದೇವಲೋಕದ ಹಾಗೆ; ವರ=ಉತ್ತಮವಾದ; ಪಯೋನಿಧಿ=ಹಾಲಿನ ಕಡಲು; ಕೈಲಾಸಗಿರಿ=ಹಿಮಾಲಯ ಪರ್‍ವತ ಶ್ರೇಣಿಯಲ್ಲಿರುವ ಒಂದು ದೊಡ್ಡ ಬೆಟ್ಟ. ಇಲ್ಲಿ ದೇವರಾದ ಶಿವನು ನೆಲೆಸಿದ್ದಾನೆ ಎಂಬ ನಂಬಿಕೆ ಜನಮನದಲ್ಲಿದೆ;

ಇರುಳಂತೆ ಪಗಲಂತೆ ಮಖದಂತೆ ದಿವದಂತೆ ವರಪಯೋನಿಧಿಯಂತೆ ಕೈಲಾಸಗಿರಿಯಂತೆ =ರಾತ್ರಿಯಂತೆ; ಹಗಲಿನಂತೆ; ಯಾಗದಂತೆ; ದೇವಲೋಕದಂತೆ; ಉತ್ತಮವಾದ ಹಾಲ್ಗಡಲಿನಂತೆ; ಕೈಲಾಸಗಿರಿಯಂತೆ;

ನಿರುತಮ್+ಉಮ್; ನಿರುತ=ನಿಶ್ಚಯ/ದಿಟ; ಸೋಮ=ಚಂದ್ರ; ಅರ್ಕ=ಸೂರ್ಯ; ಶಿಖಿ=ಅಗ್ನಿದೇವ; ಸಹಸ್ರ+ಅಕ್ಷ; ಸಹಸ್ರಾಕ್ಷ=ಸಾವಿರ ಕಣ್ಣುಗಳನ್ನುಳ್ಳ ದೇವತೆಯಾದ ಇಂದ್ರ; ಹರಿ=ವಿಶ್ಣು; ನುತ=ಕೊಂಡಾಡಿದ/ಹೊಗಳಿದ; ಆವಾಸಮ್+ಆಗಿ; ಆವಾಸ=ನೆಲೆ/ಮನೆ;

ನಿರುತಮುಮ್ ಸೋಮ ಅರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವ ಆವಾಸಮಾಗಿ=ದಿಟವಾಗಿ ಚಂದ್ರ, ಸೂರ್‍ಯ, ಅಗ್ನಿದೇವ, ಇಂದ್ರ , ವಿಶ್ಣು ದೇವರುಗಳೆಲ್ಲವೂ ಕೊಂಡಾಡಿದ ಶಿವನ ವಾಸದ ನೆಲೆಯಾಗಿ;

ಮಹಾ+ಅಟವಿ; ಮಹಾ=ದೊಡ್ಡ; ಅಟವಿ=ಅಡವಿ; ಧುರ=ಕಾಳೆಗ; ನಭ=ಆಕಾಶ; ಶರ=ಸರೋವರ; ಪುಂಡರೀಕ=ಹುಲಿ; ವಿದ್ರುಮ=ದೊಡ್ಡ ಮರ; ಋಕ್ಷ=ಕರಡಿ; ಇಡಿದು+ಇರುತ; ಇಡಿದು=ತುಂಬಿರು/ನಿಬಿಡವಾಗು;

ಆಮಹಾಟವಿ ಧುರದಂತೆ ಕೊಳದಂತೆ ಕಡಲಂತೆ ನಭದಂತೆ ಶರಪುಂಡರೀಕ ವಿದ್ರುಮ ಋಕ್ಷಮಯದೊಳು ಇಡಿದಿರುತ=ಆ ದೊಡ್ಡ ಕಾಡು ರಣರಂಗದಂತೆ; ಕೊಳದಂತೆ; ಕಡಲಿನಂತೆ; ಗಗನದಂತೆ; ಸರೋವರಗಳಿಂದ, ಹುಲಿಗಳಿಂದ, ದೊಡ್ಡ ದೊಡ್ಡ ಮರಗಳಿಂದ, ಕರಡಿಗಳಿಂದ ಕಿಕ್ಕಿರಿದು ತುಂಬಿಹೋಗಿರಲು; ಕಾಡಿನಲ್ಲಿರುವ ಚರಾಚರಗಳೆಲ್ಲವೂ ಒಂದೊಂದು ಗಳಿಗೆಯಲ್ಲಿ ಒಂದೊಂದು ಬಗೆಯಲ್ಲಿ ಗೋಚರಿಸುತ್ತಿದ್ದವು ಎಂಬ ರೂಪಕದ ತಿರುಳಿನಲ್ಲಿ ಈ ವರ್‍ಣನೆಯು ನಿರೂಪಣೆಗೊಂಡಿದೆ;

ಘೋರತರಮ್+ಆಗಿ; ಘೋರತರ=ಅತಿ ಉಗ್ರವಾಗಿ;

ಜಾನಕಿಯ ಕಣ್ಗೆ ಘೋರತರಮಾಗಿಮುಂದೆ ಇರ್ದುದು=ಸೀತೆಯ ಕಣ್ಣಿಗೆ ಅತಿ ಬಯಂಕರವಾಗಿ ಕಂಡುಬಂದಿತು;ಗಹ್ವರ=ಗುಹೆ; ದುರ್ಘಟಮ್+ಆಗೆ; ದುರ್ಘಟ=ಒಳಹೊಗಲು ಆಗದಿರುವುದು;

ಅಟವಿಯ ಮಹಾಘೋರ ಗಹ್ವರಮ್ ಮುಂದೆ ದುರ್ಘಟಮಾಗೆ= ಮುಂದೆ ಅಡಿಯಿಡಲು ಆಗದ ಅತಿ ಬಯಂಕರವಾದ ಗುಹೆಯಂತೆ ಕಾಡು ವ್ಯಾಪಿಸಿರಲು;

ನಡುನಡುಗಿ ಭೀತಿಯಿಮ್ ಸೀತೆ ಸಂಕಟದಿಂದೆ ರಾಮನಾಮಂಗಳನು ಜಪಸುತ=ಹೆದರಿಕೆಯಿಂದ ಸೀತೆಯು ನಡನಡುಗುತ್ತ ಸಂಕಟದಿಂದ ರಾಮನ ಹೆಸರನ್ನು ಜಪಿಸುತ್ತ;

ಅಟನ=ಸಂಚಾರ/ಓಡಾಡಲು; ಅಸದಳಮ್+ಅಪ್ಪುದು; ಅಸದಳ=ಅಸಾಧ್ಯ/ಅಶಕ್ತ; ಅಪ್ಪುದು=ಆಗಿರುವುದು;

ಎಲೆ ಸೌಮಿತ್ರಿ, ಕಾನನಮ್ ಇದು ಅಟನಕೆ ಅಸದಳಮಪ್ಪುದು= ಲಕ್ಶ್ಮಣ , ಈ ಕಾಡಿನ ಒಳಕ್ಕೆ ಕಾಲಿಡಲು ಆಗುತ್ತಿಲ್ಲ;

ಪುಣ್ಯ+ಆಶ್ರಮ; ಪುಣ್ಯ=ಮಂಗಳಕರವಾದುದು; ಜಟಿ=ರಿಸಿ/ಮುನಿ; ವಲ್ಕಲವನು+ಉಟ್ಟ; ವಲ್ಕಲ=ನಾರುಮಡಿ/ಮರದ ತೊಗಟೆಯಿಂದ ಮಾಡಿದ ಬಟ್ಟೆ; ಮುನಿವಧುಗಳನು=ಮುನಿಗಳ ಹೆಂಡತಿಯರನ್ನು; ವಟು=ವಿದ್ಯೆಯನ್ನು ಕಲಿಯಲು ಮುನಿಗಳ ಬಳಿಗೆ ಬಂದಿರುವ ಹುಡುಗರು; ಶ್ರುತಿ=ವೇದ; ಘೋಷ=ದೊಡ್ಡ ದನಿಯಲ್ಲಿ ಉಚ್ಚರಿಸುವುದು; ಹೋಮ=ಯಾಗದ ಅಗ್ನಿಕುಂಡ; ದೂಮ=ಹೊಗೆ; ಹೋಮಧೂಮ=ಅಗ್ನಿಕುಂಡದಲ್ಲಿ ದೇವತೆಗಳಿಗೆಂದು ಹಾಕಿದ ವಸ್ತುಗಳೆಲ್ಲವೂ ಬೆಂಕಿಗೆ ಆಹುತಿಯಾದಾಗ ಹೊರಹೊಮ್ಮುವ ಹೊಗೆ; ಅಳವಳಿ=ಕಳವಳಪಡು/ಶೋಕಿಸು;

ಇಲ್ಲಿ ಪುಣ್ಯಾಶ್ರಮದ ಜಟಿಗಳನು ವಲ್ಕಲವನುಟ್ಟ ಮುನಿ ವಧುಗಳನು ವಟುಗಳನು ಶ್ರುತಿ ಘೋಷ ಹೋಮ ಧೂಮಂಗಳನು ಕಾಣೆನು ಎಂದು ಅಳವಳಿದಳು=ದಟ್ಟವಾದ ಈ ಕಾಡಿನ ಎಡೆಯಲ್ಲಿ ಮಂಗಳಕರವಾದ ಆಶ್ರಮದ ರಿಸಿಗಳನ್ನಾಗಲಿ, ನಾರುಮಡಿಯನ್ನುಟ್ಟ ರಿಸಿಪತ್ನಿಯರನ್ನಾಗಲಿ, ವಿದ್ಯೆಯನ್ನು ಕಲಿಯಲು ಬಂದಿರುವ ಹುಡುಗರನ್ನಾಗಲಿ, ವೇದದ ಮಂತ್ರಗಳ ಉಚ್ಚಾರಣೆಯನ್ನಾಗಲಿ, ಹೋಮದ ಕುಂಡದಿಂದ ಹೊರಹೊಮ್ಮುತ್ತಿರುವ ಹೊಗೆಯನ್ನಾಗಲಿ ನಾನು ಕಾಣುತ್ತಿಲ್ಲ ಎಂದು ಕಳವಳಪಟ್ಟಳು;

ಮುನಿಪ+ಉತ್ತಮರ; ಪಾವನ=ಪವಿತ್ರವಾದುದು; ಎಡೆ=ಜಾಗ;

ಎಲ್ಲಿ ಮುನಿ ಪೋತ್ತಮರ ಪಾವನದವನದ ಎಡೆಗಳು=ಉತ್ತಮರೆಂದು ಹೆಸರಾಂತ ಮುನಿಗಳ ಪವಿತ್ರವಾದ ಆಶ್ರಮಗಳು ಈ ಕಾಡಿನಲ್ಲಿ ಎಲ್ಲಿವೆ;

ಎಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಗಳು=ಪವಿತ್ರವಾದ ಆಶ್ರಮಗಳ ಮಂಗಳಕರವಾದ ಜಾಗಗಳು ಎಲ್ಲಿವೆ;

ಹವಿ=ಹೋಮದ ಅಗ್ನಿಕುಂಡಕ್ಕೆ ಹಾಕುವ ತುಪ್ಪು,ಹಾಲು,ಅನ್ನ ಮತ್ತು ಇತರ ವಸ್ತುಗಳು; ಸುಹವಿ=ಹೋಮಾಗ್ನಿಗೆ ಹಾಕುವ ಒಳ್ಳೆಯ ವಸ್ತುಗಳು; ಕಂಪು+ಒಗೆದ; ಕಂಪು=ಪರಿಮಳ/ಸುವಾಸನೆ; ಒಗೆ=ಆವರಿಸು/ವ್ಯಾಪಿಸು/ಹರಡು; ಪೊಗೆ=ಹೊಗೆ; ತಳೆ=ಹೊಂದು; ಅಗ್ನಿಹೋತ್ರ=ಅಗ್ನಿದೇವನನ್ನು ಕುರಿತು ಮಾಡುವ ಹೋಮ; ಕುಟೀರ=ಎಲೆವನೆ/ಯಾಗಶಾಲೆ;

ಎಲ್ಲಿ ಸುಹವಿಗಳ ಕಂಪೊಗೆದ ಪೊಗೆ ತಳೆದ ಅಗ್ನಿಹೋತ್ರದ ಕುಟೀರಂಗಳು=ಹೋಮಕುಂಡದಲ್ಲಿ ಉರಿಯುತ್ತಿರುವ ಬೆಂಕಿಗೆ ಹಾಕಿದ ವಸ್ತುಗಳಿಂದ ಹೊರಹೊಮ್ಮಿದ ಸುವಾಸನೆಯಿಂದ ಕೂಡಿದ ಅಗ್ನಿದೇವನ ಯಾಗಶಾಲೆಗಳೆಲ್ಲಿ;

ವಾದ=ಮಾತುಕತೆ/ಚರ್‍ಚೆ;

ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗಳು=ವೇದಗಳನ್ನು ಕುರಿತು ಚರ್ಚೆ ಮಾಡುತ್ತಿರುವ ರಿಸಿಗಳ ಮಾತುಗಳ ದನಿಯೆಲ್ಲಿ; ಒಯ್ಯದೆ=ಕರೆದುಕೊಂಡು ಬರದೆ; ಸುಯ್=ನಿಟ್ಟುಸಿರು ಬಿಡು;

ಅಲ್ಲಿಗೆ ಒಯ್ಯದೆ=ರಿಸಿಗಳಿಂದ ಕೂಡಿ, ಯಾಗದ ಆಚರಣೆಗಳಿಂದ ಕಂಗೊಳಿಸುತ್ತಿರುವ ಆಶ್ರಮಗಳು ಇರುವ ಕಡೆಗೆ ನನ್ನನ್ನು ಕರೆದುಕೊಂಡುಹೋಗದೆ; ದಾರು=ದೇವದಾರು ಎಂಬ ಹೆಸರಿನ ದೊಡ್ಡ ಮರ; ದಾರುಣ=ಭಯಂಕರವಾದುದು; ಕಡಿದು+ಅಡವಿ; ಕಡಿದು=ದಟ್ಟವಾದುದು; ಕಟ್ಟಡವಿ=ದಟ್ಟವಾದ ಕಾಡು;

ದಾರುದಾರುಣದ ಕಟ್ಟಡವಿಗೆ=ದೊಡ್ಡ ದೊಡ್ಡ ದೇವದಾರು ಮರಗಳಿಂದ ಕೂಡಿ ಬಯಂಕರವಾಗಿರುವ ದಟ್ಟವಾದ ಕಾಡಿಗೆ;

ಇಲ್ಲಿಗೆ ಏಕೈತಂದೆ ಹೇಳು ಎಂದುಜಾನಕಿಸುಯ್ದಳು=ಇಂತಹ ಕಡೆಗೆ ಏತಕ್ಕಾಗಿ ಕರೆದುಕೊಂಡು ಬಂದೆ ಎಂಬುದನ್ನು ಹೇಳು ಎಂದು ಸೀತೆಯು ಸಂಕಟದಿಂದ ನಿಟ್ಟುಸಿರನ್ನು ಬಿಟ್ಟಳು; ಪಾವನ=ಪವಿತ್ರವಾದುದು;

ಪಾವನಕೆ ಪಾವನಮ್=ಪವಿತ್ರವಾದುದಕ್ಕೆ ಇನ್ನೂ ಹೆಚ್ಚಿನ ಪವಿತ್ರತೆಯನ್ನು ತಂದು ಕೊಡುವುದು;

ಮಂಗಳಕೆ ಮಂಗಳಮ್=ಒಳಿತನ್ನು ಉಂಟುಮಾಡುವುದಕ್ಕೆ, ಇನ್ನೂ ಹೆಚ್ಚಿನ ಮಂಗಳವನ್ನು ತಂದು ನೀಡುವುದು;

ಆವನ=ಯಾರ/ಯಾವ ವ್ಯಕ್ತಿಯ; ಚರಿತ್ರ=ನಡವಳಿಕೆ/ನಡೆನುಡಿ; ನಾಮ=ಹೆಸರು;

ಅದು ಆವನ ಚರಿತ್ರನಾಮಂಗಳು=ಪಾವನ ಮತ್ತು ಮಂಗಳಕರವೆಂದು ಯಾರ ಹೆಸರು ಮತ್ತು ನಡೆನುಡಿಗಳು ಇವೆಯೋ;

ಜೀವೇಶನ್+ಆಗಿರಲ್ಕೆ; ಜೀವೇಶ=ಗಂಡ;

ಆರಾಘವನೆ ಜೀವೇಶನಾಗಿರಲ್ಕೆ=ಅಂತಹ ರಾಮನೇ ನನ್ನ ಗಂಡನಾಗಿರುವಾಗ; ಅಂಘ್ರಿ=ಪಾದ; ಅಗಲು=ತೊರೆದು/ದೂರಸರಿದು;

ಆತನ ಅಂಘ್ರಿಯನು ಅಗಲ್ದು ಈಗನಾನು ಬಂದ ಬಳಿಕ ಈವನದೊಳು ಇನ್ನು ಪುಣ್ಯಾಶ್ರಮ್ ಗೋಚರಿಪುದೇ=ಅವನ ಪಾದದಿಂದ ಅಂದರೆ ಅವನ ಬಳಿಯಿಂದ ಈಗ ನಾನು ದೂರಸರಿದು ಬಂದ ಬಳಿಕ, ಇನ್ನು ಈ ಕಾಡಿನಲ್ಲಿ ನನಗೆ ಪುಣ್ಯಾಶ್ರಮವು ಗೋಚರಿಸುತ್ತದೆಯೇ;

ವನಜ=ತಾವರೆ; ಅರಳು=ಅರಳಿದ ಹೂವು; ಉಳಿ=ತ್ಯಜಿಸು/ಬಿಡು; ಆರಡಿ=ದುಂಬಿ; ಬೊಬ್ಬುಳಿ=ಗೊಬ್ಬಳಿ ಮರ; ಪೂವು=ಹೂವು; ಮಧು+ಉಂಟೆ; ಮಧು=ಮಕರಂದ/ಹೂವಿನ ರಸ; ಪೊದಕುಳಿ=ಸಂಕಟ/ಅಳಲು;

ವನಜದ ಅರಳನು ಉಳಿದ ಆರಡಿಗೆ ಬೊಬ್ಬುಳಿಯ ಪೂವಿನೊಳು ಮಧುವುಂಟೆ ಸೌಮಿತ್ರಿ… ಹೇಳು ಎಂದು ಸೀತೆ ಪೊದಕುಳಿಗೊಂಡಳು=ತಾವರೆಯ ಹೂವನ್ನು ಬಿಟ್ಟು ಮುಳ್ಳಿನ ಮರವಾದ ಗೊಬ್ಬಳಿಯ ಹೂವಿನತ್ತ ಬಂದ ದುಂಬಿಗೆ ಹೂವಿನ ಮಕರಂದ ದೊರೆಯುವುದೇ ಲಕ್ಶ್ಮಣ ಎಂದು ಸೀತೆಯು ತನ್ನ ಸಂಕಟವನ್ನು ತೋಡಿಕೊಂಡಳು; ಅಂದರೆ ರಾಮನಿಂದ ದೂರಬಂದ ನನಗೆ ಇನ್ನು ಮುಂದೆ ಒಳ್ಳೆಯದಾಗುವುದಿಲ್ಲವೆಂಬ ಹೆದರಿಕೆಯು ಸೀತೆಯಲ್ಲಿ ಉಂಟಾಗಿದೆ;

ನರನಾಥ=ರಾಜ;

ನರನಾಥಕೇಳು=ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ರಿಸಿಯು ಹೇಳುತ್ತಿದ್ದಾನೆ;

ಅವನಿಸುತೆ=ಬೂದೇವಿಯ ಮಗಳಾದ ಸೀತೆ; ಉರೆ=ಬಹಳವಾಗಿ/ಹೆಚ್ಚಾಗಿ;

ಅವನಿಸುತೆ ನುಡಿದ ಮಾತಿಗೆ ಉತ್ತರವನ್ ಆಡದೆ ಮನದೊಳು ಉರೆನೊಂದು=ಸೀತೆಯ ಆಡಿದ ಮಾತುಗಳಿಗೆ ಲಕ್ಶ್ಮಣನು ಯಾವುದೇ ಉತ್ತರವನ್ನು ನೀಡದೆ ಮನಸ್ಸಿನಲ್ಲಿ ಬಹಳವಾಗಿ ಸಂಕಟಪಡುತ್ತ; ಎಂದ=ಅಣ್ಣನಾದ ರಾಮನು ಹೇಳಿದ; ಕಷ್ಟಮನ್=ಸಂಕಟದ ಸಂಗತಿಯನ್ನು; ಪೇಳ್ದಪೆನೊ=ಹೇಳಲೊ; ಮೇಣ್=ಇಲ್ಲವೇ; ಉಸಿರದೆ=ಏನನ್ನೂ ಹೇಳದೆ; ಇರ್ದಪೆನೊ=ಇರುವೆನೊ;

ರಾಘವೇಶ್ವರನು ಎಂದಕಷ್ಟಮನ್ ಪೇಳ್ದಪೆನೊ… ಮೇಣ್… ಉಸಿರದೆ ಇರ್ದಪೆನೊ=ರಾಮನು ಹೇಳಿರುವ ನೋವಿನ ಸಂಗತಿಯನ್ನು ಸೀತೆಗೆ ಹೇಳಲೊ ಇಲ್ಲವೇ ಹೇಳದೆ ಸುಮ್ಮನಿರಲೊ

ನಿಷ್ಠುರ=ಕ್ರೂರವಾದುದು/ಕರುಣೆಯಿಲ್ಲದುದು; ತರಣಿ=ಸೂರ್‍ಯ; ಸಾರ್ವಭೌಮ=ಚಕ್ರವರ್‍ತಿ; ಪೋದಪೆನೆಂತೊ=ಹೋಗಲೊ;

ನಿಷ್ಠುರದೊಳು ತರಣಿಕುಲ ಸಾರ್ವಭೌಮನ ರಾಣಿಯನು ಬನದೊಳು ಇರಸಿ ಪೋದಪೆನೆಂತೊ=ಕರುಣೆಯಿಲ್ಲದೆ ರಾಮನ ಮಡದಿಯಾದ ಸೀತೆಯನ್ನು ಕಾಡಿನಲ್ಲಿ ಹೇಗೆ ತಾನೆ ಬಿಟ್ಟು ಹೋಗಲಿ;ಬೇಗುದಿ=ಅತಿ ಹೆಚ್ಚಿನ ಸಂಕಟ/ಪರಿತಾಪ; ಬೆಂದು ಬೇಗುದಿಗೊಂಡನು=ಬೆಂಕಿಯಲ್ಲಿ ಬೆಯ್ಯುವಾಗ ಪಡುವ ಸಂಕಟದಂತೆ ಹೆಚ್ಚಿನ ಸಂಕಟಕ್ಕೆ ಒಳಗಾದನು;

ಪೋಗದಿರ್ದೊಡೆ ಸಹೋದರನು ಅದೇನು ಎಂದಪನೊಹಾ… ಎಂದು ಲಕ್ಷ್ಮಣನು ಬೆಂದು ಬೇಗುದಿಗೊಂಡನು=ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗದಿದ್ದರೆ ನನ್ನ ಬಗ್ಗೆ ಅಣ್ಣನು ಅದೇನೆಂದುಕೊಳ್ಳುವನೊ… ಅಯ್ಯೋ… ಎಂದು ಲಕ್ಶ್ಮಣನು ಸಂಕಟದ ಬೇಗೆಯಲ್ಲಿ ಬೆಂದುಹೋದನು;

ಕಂಬನಿಗಳು ಉಕ್ಕಿದುವು=ಕಣ್ಣುಗಳಿಂದ ಒಂದೇ ಸಮನೆ ಕಣ್ಣೀರು ಸುರಿಯತೊಡಗಿತು;

ಅಧರ+ಓಷ್ಠಮ್; ಅಧರ=ಕೆಳಗಡೆ; ಓಷ್ಠ=ತುಟಿ; ಅದಿರು=ನಡುಗು/ಕಂಪಿಸು;

ಅಧರೋಷ್ಠಮ್ ಅದಿರಿತು=ಕೆಳತುಟಿ ಕಂಪಿಸತೊಡಗಿತು;

ಒಡಲು=ದೇಹ/ಮಯ್; ಅಲಗು+ಇಕ್ಕಿ; ಅಲಗು=ಕತ್ತಿ; ಇಕ್ಕಿ=ತಿವಿದು; ತಿರುಪಿದ+ವೊಲ್+ಆಯ್ತು; ವೊಲ್=ಅಂತೆ;

ಒಡಲೊಳು ಅಲಗಿಕ್ಕಿ ತಿರುಪಿದವೊಲಾಯ್ತು=ದೇಹದೊಳಕ್ಕೆ ಕತ್ತಿಯನ್ನು ತಿವಿದು ತಿರುಗಿಸಿದಂತಾಯ್ತು;

ಎಡೆ+ಪರಿಯದೆ; ಪರಿ=ತೀರು/ಮುಗಿ; ಎಡೆವರಿಯದೆ=ತುಂಡಾಗದೆ/ಒಂದೇ ಸಮನೆ; ಒಕ್ಕು=ಹರಿ;

ಉಸಿರುಎಡೆವರಿಯದೆ ಒಕ್ಕುದು=ಒಂದೇ ಸಮನೆ ಉಸಿರು ಹೊರಹೊಮ್ಮತೊಡಗಿತು

ಅವಯವ=ದೇಹ; ಉರೆ=ಬಹಳ ಹೆಚ್ಚಾಗಿ;

ಅವಯವಮ್ ಉರೆ ಕಂಪಿಸಿದುದು=ಇಡೀ ದೇಹ ಬಹಳವಾಗಿ ನಡುಗತೊಡಗಿತು

ಎರ್ದೆ ಕರಗಿತು=ಮನಸ್ಸು ಕುಗ್ಗಿತು

ಸೈರಣೆ=ತಾಳ್ಮೆ/ಸಹನೆ; ಸಮತೆ+ಕೆಟ್ಟುದು; ಸಮತೆ=ನೆಮ್ಮದಿ/ಮನಸ್ಸಿನ ಹತೋಟಿ;

ಸೈರಣೆ ಸಮತೆಗೆಟ್ಟುದು=ತಾಳ್ಮೆ ತಪ್ಪಿಹೋಯಿತು

ಸೆರೆಬಿಗಿ=ಕೊರಳಿನ ನರಗಳು ಎಳೆದುಕೊಂಡು;

ಕಂಠದೊಳ್ ಮಾತುಗಳು ಸೆರೆಬಿಗಿದು ಸಿಕ್ಕಿದುವು=ಕೊರಳಿನಿಂದ ಮಾತು ಹೊರಹೊಮ್ಮದಾದುವು; ಬೆಂಡು+ಆಗಿ; ಬೆಂಡು=ತಿರುಳಿಲ್ಲದ್ದು/ಪೊಳ್ಳು;

ಮಿಕ್ಕು ಮೀರುವ ಶೋಕದಿಂದೆ ಬೆಂಡಾಗಿ=ಉಕ್ಕಿಬಂದ ಸಂಕಟದಿಂದ ಸುಸ್ತಾಗಿ;

ಕಡು+ಕಕ್ಕಸ; ಕಡು=ಅತಿ ಹೆಚ್ಚಿನ; ಕಕ್ಕಸ=ಕಷ್ಟ/ಪ್ರಯಾಸ/ಕ್ರೂರ; ಉಸಿರಲ್=ಹೇಳಲು;

ಕಡುಗಕ್ಕಸದ ಕೆಲಸಮನ್ ಉಸಿರಲ್ ಅರಿಯದೆ=ಅತ್ಯಂತ ಕ್ರೂರವಾದ ರಾಮನ ಅಪ್ಪಣೆಯನ್ನು ನೇರವಾಗಿ ಹೇಳಲು ತಿಳಿಯದೆ; ಒಯ್ಯನೆ=ಕೂಡಲೇ/ಮರುಗಳಿಗೆಯಲ್ಲೇ;

ಅವನು ಒಯ್ಯನೆ ಅವನಿಸುತೆಗೆ ಇಂತೆಂದನು=ಲಕ್ಶ್ಮಣನು ಮರುಗಳಿಗೆಯಲ್ಲಿಯೇ ಸೀತೆಗೆ ಈ ರೀತಿ ಹೇಳಿದನು; ಇನ್ನೆಗಮ್=ಇದುವರೆಗೂ;

ದೇವಿನಿನಗೆ ಇನ್ನೆಗಮ್ ಅದಪೇಳ್ದುದಿಲ್ಲ=ದೇವಿ, ನಿನಗೆ ಇದುವರೆಗೂ ಒಂದು ಸಂಗತಿಯನ್ನು ಹೇಳಿರಲಿಲ್ಲ;

ಅಪವಾದ=ನಿಂದೆ/ತೆಗಳಿಕೆ/ಕೆಟ್ಟ ಹೆಸರು; ಆವರಿಸು=ಸುತ್ತಿಕೊಂಡು;

ಅಪವಾದಮ್ ಆವರಿಸಿನಿನ್ನನ್ ಒಲ್ಲದೆ=ನಿಂದೆಗೆ ಒಳಗಾಗಿ, ನಿನ್ನ ಜೊತೆಯಲ್ಲಿರಲು ಒಪ್ಪದೆ

ರಘು+ಕುಲ+ಉದ್ಭವನು; ಉದ್ಭವ=ಹುಟ್ಟುವುದು; ರಘುಕುಲೋದ್ಭವನು=ರಾಮನು; ಸೀವರಿಸಿ=ಹೇಸು/ಜುಗುಪ್ಸೆಗೊಂಡು;

ರಘುಕುಲೋದ್ಭವನು ಸೀವರಿಸಿ=ರಾಮನು ನಿನ್ನ ಬಗ್ಗೆ ಜುಗುಪ್ಸೆಗೊಂಡು

ಕಾಂತಾರ=ಕಾಡು; ನೇಮಿಸು=ಅಪ್ಪಣೆಮಾಡು/ಕೆಲಸವನ್ನು ವಹಿಸಲು;

ಕಾಂತಾರಕ್ಕೆ ಕಳುಹಿ ಬಿಟ್ಟುಬಾ ಎಂದು ಎನಗೆ ನೇಮಿಸಿದೊಡೆ=ಕಾಡಿಗೆ ಕಳುಹಿಸಿ, ಕಾಡಿನಲ್ಲಿಯೇ ಬಿಟ್ಟು ಹಿಂತಿರುಗು ಎಂದು ನನಗೆ ಅಪ್ಪಣೆ ಮಾಡಲು;ವಿಭು=ರಾಜ; ವಿಪಿನ=ಕಾಡು; ಒಡಗೊಂಡು=ಜತೆಯಲ್ಲಿ ಕರೆದುಕೊಂಡು;

ಆವಿ ಭುವಿನ ಆಜ್ಞೆಯನು ಮೀರಲು ಅರಿಯದೆ ನಿಮ್ಮನು ಈ ವಿಪಿನಕೆ ಒಡಗೊಂಡುಬಂದೆನು=ರಾಜನ ಅಪ್ಪಣೆಯನ್ನು ಕಡೆಗಣಿಸಲು ತಿಳಿಯದೆ, ನಿಮ್ಮನ್ನು ಈ ಕಾಡಿಗೆ ನನ್ನ ಸಂಗಡ ಕರೆದುಕೊಂಡು ಬಂದೆನು;

ಒಯ್ಯೊಯ್ಯನೆ=ಈ ಕೂಡಲೇ; ಆವಲ್ಲಿಗೆ+ಆದೊಡಮ್; ಆವಲ್ಲಿಗೆ=ಯಾವ ಕಡೆಗಾದರೂ; ಬಾಷ್ಪ=ಕಣ್ಣೀರು; ಲೋಚನ=ಕಣ್ಣು; ಬಾಷ್ಪಲೋಚನ=ಅಳಲು ತೊಡಗಿ ಕಣ್ಣೀರನ್ನು ಹಾಕತೊಡಗಿದನು;

ಇನ್ನು ಒಯ್ಯೊಯ್ಯನೆ ಆವಲ್ಲಿಗಾದೊಡಮ್ ಪೋಗಿ ಎಂದು ಲಕ್ಷ್ಮಣನು ಬಾಷ್ಪಲೋಚನನಾದನು=ಈ ಕೂಡಲೇ ಇನ್ನು ಯಾವ ಕಡೆಗಾದರೂ ಹೋಗಿರಿ ಎಂದು ಹೇಳುತ್ತ ಲಕ್ಶ್ಮಣನು ಅಳತೊಡಗಿದನು;

ಪೊಡೆ=ಅಪ್ಪಳಿಸು/ಹೊಡೆ; ಫಲಿತ=ಗೊನೆಯಿಂದ ತೂಗುತ್ತಿರುವ; ಕದಳಿ=ಬಾಳೆ; ಇಳೆ=ಭೂಮಿ; ಒರಗು=ಕೆಳಕ್ಕೆ ಬಾಗು;

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತಕದಳಿ ಮುರಿದು ಇಳೆಗೆ ಒರಗುವಂತೆ=ಬಿರುಗಾಳಿ ಅಪ್ಪಳಿಸಿದಾಗ ಗೊನೆಬಿಟ್ಟ ಬಾಳೆಯ ಗಿಡವು ಅತ್ತಿತ್ತ ತೂಗಾಡಿ ಮುರಿದು ಭೂಮಿಯ ಮೇಲೆ ಒರಗಿ ಬೀಳುವಂತೆ;

ಕಿವಿತೆರೆ=ಕಿವಿಯ ಮೇಲೆ; ಅಂಗನೆ=ಸೀತೆ; ಹಮ್ಮೈಸು=ಎಚ್ಚರ ತಪ್ಪು/ಮೂರ್ಛೆ ಹೋಗು/ಪ್ರಜ್ಞೆ ತಪ್ಪು; ಧರೆ=ಭೂಮಿ/ನೆಲ;

ಲಕ್ಷ್ಮಣನ ಮಾತು ಕಿವಿತೆರೆಗೆ ಬೀಳದ ಮುನ್ನಅಂಗನೆ ಹಮ್ಮೈಸಿ ನಡನಡುಗುತೆ ಧರೆಗೆ ಬಿದ್ದಳು=ಲಕ್ಶ್ಮಣನ ಮಾತುಗಳನ್ನು ಕೇಳುತ್ತಿದ್ದಂತೆಯೇ ಸೀತೆಯು ಎಚ್ಚರತಪ್ಪಿ ನಡನಡುಗುತ್ತ ನೆಲದ ಮೇಲೆ ಬಿದ್ದಳು

ಅಂಗ+ಉಪಾಂಗಮ್+ಅನ್; ಅಂಗ=ದೇಹ; ಉಪಾಂಗ=ದೇಹದ ಇತರ ಭಾಗಗಳು; ಅಂಗೋಪಾಂಗ=ದೇಹದ ಭಾಗಗಳು;

ಅಂಗೋಪಾಂಗಮನ್ ಮರೆದಳು=ಮಯ್ ಮೇಲಿನ ಅರಿವನ್ನೇ ಕಳೆದುಕೊಂಡಳು;

ಮರುಗು=ತಳಮಳ/ಸಂಕಟ;

ಬಳಿಕ ಸೌಮಿತ್ರಿ ಮರುಗಿ=ಆಗ ಲಕ್ಶ್ಮಣನು ಸಂಕಟದಿಂದ ನೊಂದು;

ತಳಿ=ಚಿಮುಕಿಸು/ಸಿಂಪಡಿಸು; ತಣ್ಣೀರು ತಳೆದು=ಸೀತೆಯ ಮೊಗದ ಮೇಲೆ ತಣ್ಣೀರನ್ನು ಚಿಮುಕಿಸಿ;

ಪತ್ರ=ಎಲೆ; ಕೊಡೆ+ಪಿಡಿದು; ಕೊಡೆ=ಚತ್ರಿ; ಕೊಡೆವಿಡಿದು=ನೆರಳು ಮಾಡಿ;

ಪತ್ರದೊಳು ಕೊಡೆವಿಡಿದು=ಅಗಲವಾದ ಎಲೆಯೊಂದರಿಂದ ನೆರಳುಮಾಡಿ

ಸೆರಗು=ಹೆಗಲ ಮೇಲೆ ಹಾಕಿಕೊಳ್ಳುವ ಬಟ್ಟೆಯ ಅಂಚು;

ಸೆರಗಿಂದೆ ಬೀಸಿ=ಸೆರಗಿನ ತುದಿಯಿಂದ ಗಾಳಿಯಾಡಿಸುತ್ತ

ಸೇವೆ=ಊಳಿಗ/ಕೆಲಸ; ಸಲ್ಲು=ನೆರವೇರು/ಈಡೇರು;

ಸಂದುದು=ಈಡೇರುವುದು/ನೆರವೇರುವುದು; ರೋದಿಸು=ಅಳುವುದು;

ರಾಯನ ಸೇವೆ ಸಂದುದೇ ತನಗೆ ಎಂದು ರೋದಿಸಿದನು=ರಾಮನ ಕೆಲಸವನ್ನು ಈ ರೀತಿ ತನಗೆ ಮಾಡುವಂತಾಯಿತೇ ಅಂದರೆ ಇಂತಹ ಕ್ರೂರವಾದ ಕೆಲಸದಲ್ಲಿ ನಾನು ಬಾಗಿಯಾಗುವಂತಾಯಿತಲ್ಲ ಎಂದು ಅಳತೊಡಗಿದನು;

ಒಯ್ಯನೆ ಅರೆಗಳಿಗೆಯೊಳು ಕಣ್ ತೆರೆದು=ಲಕ್ಶ್ಮಣನ ಉಪಚಾರದಿಂದ ಮರುಗಳಿಗೆಯಲ್ಲಿಯೇ ಎಚ್ಚರಗೊಂಡ ಸೀತೆಯು;

ದೈನ್ಯ=ದೀನತೆ/ಅಸಹಾಯಕತೆ; ಸುಯ್+ಎಲರನು; ಸುಯ್=ನಿಟ್ಟುಸಿರು ಬಿಡು; ಎಲರ್=ಗಾಳಿ; ಸುಯ್ಯೆಲರು=ನಿಟ್ಟುಸಿರು; ಉರೆ=ಹೆಚ್ಚಾಗಿ/ಅತಿಶಯವಾಗಿ; ಸೂಸಿ=ಚೆಲ್ಲಿ/ಬಿಟ್ಟು;

ದೈನ್ಯದಿನ್ ಸುಯ್ಯೆಲರನು ಉರೆಸೂಸಿ=ಯಾವ ಆಸರೆಯಿಲ್ಲದೆ ದೀನಳಾಗಿ ಒಡಲ ಸಂಕಟದಿಂದ ಹೊರಹೊಮ್ಮಿದ ನಿಟ್ಟುಸಿರನ್ನು ದೊಡ್ಡದಾಗಿ ಬಿಡುತ್ತ;

ಸೌಮಿತ್ರಿಯನು ನೋಡಿ=ಲಕ್ಶ್ಮಣನನ್ನು ಕುರಿತು;ಕೊಯ್ಯಲ್+ಒಲ್ಲದೆ; ಒಲ್ಲದೆ=ಇಚ್ಚಿಸದೆ/ಬಯಸದೆ;

ಕೊರಳನು ಕೊಯ್ಯಲೊಲ್ಲದೆ=ಕೊರಳನು ಕತ್ತರಿಸಲು ಬಯಸದೆ

ಇಂತು ತನ್ನನು ಬಿಡಲು=ಈ ರೀತಿ ತನ್ನನ್ನು ತ್ಯಜಿಸಲು

ಮಾಡಿದ ಅಪರಾಧಮ್ ಉಂಟೆ=ನಾನು ಮಾಡಿದ ತಪ್ಪೇನು;

ಕಯ್ಯಾರೆ ಖಡ್ಗಮನ್ ಕೊಟ್ಟು ತನ್ನ ಅರಸಿಯನು ಹೊಯ್ಯೆಂದು ಪೇಳದೆ ಅಡವಿಗೆ ಕಳುಹಿ ಬಾ ಎಂದನೆ=ತಾನೇ ಕತ್ತಿಯನ್ನು ನಿನ್ನ ಕಯ್ಯಲ್ಲಿ ಕೊಟ್ಟು, ತನ್ನ ಮಡದಿಯಾದ ನನ್ನನ್ನು ಕತ್ತರಿಸು ಎಂದು ಹೇಳದೆ, ಕಾಡಿನಲ್ಲಿ ಬಿಟ್ಟು ಬಾ ಎಂದನೆ;ಕಾರುಣ್ಯ=ಕರುಣೆಯಿಂದ ತುಂಬಿದ; ನಿಧಿ=ಸಮುದ್ರ/ಕಡಲು/ಸಾಗರ; ಅಂಭೋಜ=ತಾವರೆ; ನೇತ್ರ=ಕಣ್ಣು; ಅಂಭೋಜನೇತ್ರೆ=ಸೀತೆ; ಅಳಲ್=ಸಂಕಟ;

ಅಯ್ಯಯ್ಯೊ… ರಾಘವನು ಕಾರುಣ್ಯನಿಧಿ ಎಂದು ಅಂಭೋಜನೇತ್ರೆ ಅಳಲ್ದಳು=ಅಯ್ಯಯ್ಯೋ… ನನ್ನ ಪತಿಯಾದ ರಾಮನು ಕರುಣಾಸಾಗರನು ಎಂದು ಸೀತೆ ಸಂಕಟಪಡತೊಡಗಿದಳು

ರಘುಶ್ರೇಷ್ಠನು ಎನ್ನನು ಬಿಟ್ಟನೆ=ರಾಮನು ನನ್ನನ್ನು ತೊರೆದನೆ;

ಅಕಟಕಟ, ತಾನು ಮುಟ್ಟನೆ=ಅಯ್ಯಯ್ಯೋ… ಇನ್ನು ಅವನು ನನ್ನನ್ನು ಮುಟ್ಟುವುದಿಲ್ಲವೇ. ಅಂದರೆ ಅವನು ನನ್ನನ್ನು ಒಲವು ನಲಿವಿನಿಂದ ಆಲಂಗಿಸಿಕೊಳ್ಳುವುದಿಲ್ಲವೇ;

ನೆಗಳ್=ಹೆಸರುವಾಸಿಯಾಗು/ಪ್ರಸಿದ್ಧಿಯನ್ನು ಪಡೆ; ಸಂಚಕಾರಮ್+ಅನ್; ಸಂಚಕಾರ=ಕೇಡು/ಹಾನಿ;

ನೆಗಳ್ದ ಬಾಳ್ಕೆಗೆ ಸಂಚಕಾರಮನ್ ಕೊಟ್ಟನೆ=ರಾಮಸೀತೆಯರೆಂಬ ಹೆಸರಾಂತ ದಾಂಪತ್ಯದ ಬದುಕಿಗೆ ಕೇಡನ್ನು ಬಗೆದನೆ

ತನುಜ=ಮಗ; ಸುಮಿತ್ರಾತನುಜ=ಸುಮಿತ್ರೆಯ ಮಗ ಲಕ್ಷ್ಮಣ; ಕಟ್ಟರಣ್ಯ=ದಟ್ಟವಾದ ಕಾಡು; ನಿರೂಪಮ್+ಅನ್; ನಿರೂಪ=ಅಪ್ಪಣೆ/ಆದೇಶ;

ಸುಮಿತ್ರಾ ತನುಜ ಕಟ್ಟರಣ್ಯದೊಳು ಕಳುಹಿ ಬಾಯೆಂದು ನಿನಗೆ ನಿರೂಪಮನ್ ಕೊಟ್ಟನೆ=ಲಕ್ಶ್ಮಣ, ದಟ್ಟವಾದ ಕಾಡಿನಲ್ಲಿ ನನ್ನನ್ನು ಬಿಟ್ಟು ಬಾ ಎಂದು ನಿನಗೆ ಅಪ್ಪಣೆ ಮಾಡಿದನೆ;

ಕಣ್+ಬಟ್ಟೆ+ಕೆಟ್ಟನೇ; ಬಟ್ಟೆ=ದಾರಿ; ಕಣ್ಬಟ್ಟೆ=ಕಣ್ಣ ಮುಂದಿನ ದಾರಿ; ಕೆಡು=ನಾಶವಾಗು/ಇಲ್ಲವಾಗು;

ತಾನು ಎನ್ನಕಣ್ಬಟ್ಟೆಗೆಟ್ಟನೇ=ಅವನು ನನ್ನ ಬದುಕಿನ ದಾರಿಯನ್ನು ಕಾಣದಂತೆ ಮಾಡಿದನೆ

ಜೀವನದಲ್ಲಿ ಇನ್ನು ಮುಂದೆ ಒಳ್ಳೆಯದನ್ನು ನೋಡದಂತೆ ಮಾಡಿದನೆ; ವಲ್ಲಭ=ಗಂಡ;

ಮನೋವಲ್ಲಭನನು ಅಗಲ್ದು=ಮನಮೆಚ್ಚಿದ ಗಂಡನಿಂದ ದೂರವಾಗಿ; ನೆಟ್ಟನೆ=ಒಬ್ಬಂಟಿಯಾಗಿ/ಯಾರ ನೆರವು ಇಲ್ಲದೆ; ಎಂತು+ಇಹೆನೊ; ಇಹೆನೊ=ಇರುವೆನೊ;

ಅಡವಿಯೊಳು ನೆಟ್ಟನೆ ಪಿಶಾಚದವೊಲು ಎಂತಿಹೆನೊ=ಕಾಡಿನಲ್ಲಿ ಒಬ್ಬಂಟಿಯಾಗಿ ದೆವ್ವದಂತೆ ಹೇಗೆ ತಾನೆ ಇರುವೆನೊ

ಕೆಟ್ಟೆನಲ್ಲಾ ಎಂದು ಅಬಲೆ ಒರಲ್ದಳು=ನನ್ನ ಜೀವನ ಹಾಳಾಯಿತಲ್ಲಾ ಎಂದು ಸೀತೆ ಸಂಕಟದಿಂದ ನರಳತೊಡಗಿದಳು

ಕೌಶಿಕಮುನಿಪನ+ಒಡನೆ; ಕೌಶಿಕ=ವಿಶ್ವಾಮಿತ್ರ; ಎಂದು=ಯಾವಾಗ/ಯಾವ ದಿನ; ಮಿಥಿಲಾಪುರ=ಸೀತೆಯ ತಂದೆಯಾದ ಜನಕ ರಾಜನ ರಾಜದಾನಿ; ಹರ=ಶಿವ; ಧನು=ಬಿಲ್ಲು; ಮುರಿ=ತುಂಡುಮಾಡು; ರಮಿಸು=ಆನಂದವನ್ನು ಪಡೆದನು;

ಕೌಶಿಕ ಮುನಿಪನೊಡನೆ ಎಂದುಮಿಥಿಲಾಪುರಕ್ಕೆ ಬಂದು ಹರಧನುವ ಮುರಿದು ಎನ್ನನು ಮದುವೆಯಾದನು , ಅಂದು ಮೊದಲಾಗಿ ಎನ್ನೊಳು ರಮಿಸಿದನು=ವಿಶ್ವಾಮಿತ್ರಮುನಿಯೊಡನೆ ಯಾವಾಗ ಮಿತಿಲಾಪುರಕ್ಕೆ ಬಂದು ನನ್ನ ಮದುವೆಗೆ ಪಣವಾಗಿ ಇಟ್ಟಿದ್ದ ಶಿವನ ಬಿಲ್ಲನ್ನು ಮುರಿದು ನನ್ನನ್ನು ಮದುವೆಯಾದನೊ, ಅಂದಿನಿಂದ ಮೊದಲುಗೊಂಡು ನನ್ನೊಡನೆ ಒಲವು ನಲಿವು ನೆಮ್ಮದಿಯಿಂದ ಇದ್ದನು;

ಆನ್ ಅಗಲ್ದೊಡೆ=ರಾವಣನು ನನ್ನನ್ನು ಅಪಹರಿಸಿ ಲಂಕೆಗೆ ಎಳೆದೊಯ್ದಾಗ

ನವೆದನ್+ಅಲ್ಲದೆ; ನವೆ=ಕೊರಗು/ಬಡವಾಗು; ಒಂದು=ಪಡೆ/ಹೊಂದು;

ತಾನು ನವೆದನಲ್ಲದೆ ಒಂದಿದನೆ ಸೌಖ್ಯಮನ್=ತಾನು ಬಹಳವಾಗಿ ಕೊರಗಿ ಬಡವಾದನಲ್ಲದೆ, ಸುಕವನ್ನು ಹೊಂದಿದನೆ.

ವೃಂದ=ಗುಂಪು; ನೆರಪು=ಕೂಡಿಸು/ಸೇರಿಸು; ದೈತ್ಯ=ರಕ್ಕಸ;

ರಾಮನು ಎನಗಾಗಿ ಕಪಿವೃಂದಮನ್ ನೆರಪಿ, ಕಡಲನು ಕಟ್ಟಿ, ದೈತ್ಯರನು ಕೊಂದು=ನನ್ನನ್ನು ರಾವಣನ ಸೆರೆಯಿಂದ ಬಿಡಿಸುವುದಕ್ಕಾಗಿ ಕಪಿಗಳ ಗುಂಪನ್ನು ಕೂಡಿಸಿ, ಕಡಲಿಗೆ ಸೇತುವೆಯನ್ನು ಕಟ್ಟಿ, ರಕ್ಕಸರನ್ನು ಕೊಂದು; ಅಗ್ನಿಮುಖ=ಬೆಂಕಿಯ ಕುಂಡ;

ಅಗ್ನಿಮುಖದೊಳು ಪರೀಕ್ಷಿಸಿದನು=ಲೋಕದ ಕಣ್ಣಿನಲ್ಲಿ ನಾನು ಶೀಲವತಿ ಎಂಬುದನ್ನು ನಿರೂಪಿಸುವುದಕ್ಕಾಗಿ ಬೆಂಕಿಯ ಕುಂಡವನ್ನು ನಾನು ಪ್ರವೇಶಿಸುವಂತೆ ಮಾಡಿದನು; ಕಾಣಿಸು=ತೋರಿಸು;

ಎನ್ನೊಳು ಅಪರಾಧಮನ್ಕಾಣಿಸಿದನೇ=ನನಗಾಗಿ ಇಶ್ಟೆಲ್ಲಾ ಸಂಕಟಗಳನ್ನು ಮತ್ತು ಸವಾಲುಗಳನ್ನು ಎದುರಿಸಿ ಗೆದ್ದಿದ್ದ ರಾಮನು, ಇದೀಗ ನನ್ನ ಮೇಲೆ ತಪ್ಪನ್ನು ಹೊರಿಸಿದನೆ

ಮುಳ್ಳು+ಇಡಿದ; ಇಡಿದ=ತುಂಬಿದ; ಅಂದು=ಆಗ; ಉಪಚರಿಸು=ಸೇವೆ ಮಾಡು;

ಕಲ್ಲು ಮುಳ್ಳಿಡಿದ ಕಾಡೊಳು ಅಂದು ಎನ್ನನು ಉಪಚರಿಸಿ=ಹದಿನಾಲ್ಕು ವರುಶದ ವನವಾಸದಲ್ಲಿ ಸಮಯದಲ್ಲಿ ಕಲ್ಲುಮುಳ್ಳುಗಳಿಂದ ಕಿಕ್ಕಿರಿದು ತುಂಬಿದ್ದ ಕಾಡಿನಲ್ಲಿ
ನನ್ನನ್ನು ಕಾಪಾಡಿ, ನನ್ನ ಸೇವೆಯನ್ನು ಮಾಡಿ;
ಪಲ್+ಮೊರೆದು; ಪಲ್=ಹಲ್ಲು; ಮೊರೆದು=ಅಬ್ಬರಿಸಿ; ವಿರಾಧ=ಒಬ್ಬ ರಕ್ಕಸ; ಮರ್ದಿಸು=ಕೊಲ್ಲು;

ಪಲ್ಮೊರೆದು ಗರ್ಜಿಪ ವಿರಾಧನನು ಮರ್ದಿಸಿದೆ=ಹಲ್ಲನ್ನು ಮಸೆದು ಅಬ್ಬರಿಸುತ್ತ ನನ್ನನ್ನು ತಿನ್ನಲು ಬರುತ್ತಿದ್ದ ವಿರಾದನೆಂಬ ರಕ್ಕಸನನ್ನು ಕೊಂದೆ

ಬಲ್ಮೆ+ಇಮ್; ಬಲ್ಮೆ=ಒತ್ತಾಯ; ಇಮ್=ಇಂದ; ಜನಸ್ಥಾನ=ವನವಾಸದ ಸಮಯದಲ್ಲಿ ಸೀತೆಯ ಅಪಹರಣಗೊಂಡಾಗ ಸೀತಾರಾಮಲಕ್ಶ್ಮಣರು ವಾಸಿಸುತ್ತಿದ್ದ ಕಾಡಿನ ನೆಲೆಯ ಹೆಸರು;

ರಾಘವನ ಬಳಿಗೆ ಬಲ್ಮೆಯಿಮ್ ನಾನು ಕಳುಹಿದೊಡೆ ಜನಸ್ಥಾನದಿಂದೆ ಹೋದೆ= “ಓ… ಲಕ್ಷ್ಮಣಾ… ಓ… ಸೀತಾ” ಎಂಬ ಮಾರೀಚನ ಮಾಯಾದನಿಯನ್ನು ಕೇಳಿ, ನಾನು ಬಯಸಿದ ಜಿಂಕೆಯನ್ನು ಹಿಡಿಯಲು ಹೋಗಿದ್ದ ರಾಮನು ಅಪಾಯಕ್ಕೆ ಸಿಲುಕಿದನೆಂದು ಹೆದರಿ, ನಿನ್ನನ್ನು ರಾಮನ ಬಳಿಗೆ ಹೋಗಲೇಬೇಕೆಂದು ಹಟ ಹಿಡಿದಾಗ, ನನ್ನನ್ನು ಒಬ್ಬಂಟಿಯಾಗಿ ಬಿಟ್ಟುಹೋಗಲು ಮನಸ್ಸಿಲ್ಲದಿದ್ದರೂ ನನ್ನ ಮಾತಿಗೆ ಎದುರಾಡದೆ ಜನಸ್ತಾನಕ್ಕೆ ಹೋದೆ;

ನಲ್ಮೆ+ಅಮ್; ನಲ್ಮೆ=ಪ್ರೀತಿ/ಒಳಿತು;

ಸೌಮಿತ್ರಿ, ನಲ್ಮೆಯಮ್ ಮರೆದಪೆನೆ=ಲಕ್ಶ್ಮಣ, ಜೀವನದ ಉದ್ದಕ್ಕೂ ನೀನು ನನಗೆ ಮತ್ತು ರಾಮನಿಗೆ ತೋರಿದ ಪ್ರೀತಿ, ಕರುಣೆ ಮತ್ತು ವಿಶ್ವಾಸವನ್ನು ನಾನು ಮರೆಯುತ್ತೇನೆಯೇ;

ಒಲ್ಮೆ=ಪ್ರೀತಿ; ಮೈದುನ=ಗಂಡನ ತಮ್ಮ;

ನೀನು ಎಲ್ಲರ ಒಲ್ಮೆ ಮೈದುನನೆ ತನಗೆ=ಎಲ್ಲರ ಒಳಿತಿಗಾಗಿ ಶ್ರಮಿಸುವ ನೀನು ನನ್ನ ಪಾಲಿನ ಪ್ರೀತಿಯ ಮಯ್ದುನನಾಗಿರುವೆ;

ನಿಲಿಸು=ನಿಲ್ಲಿಸಲು; ಮಿಡಿ=ಹೊಮ್ಮಿಸು; ತಂದೆ=ಲಕ್ಶ್ಮಣನು ಸೀತೆಯ ಪಾಲಿಗೆ ಕೇವಲ ಮಯ್ದುನ ಮಾತ್ರ ಆಗಿರಲಿಲ್ಲ. ತಂದೆಯ ಜಾಗದಲ್ಲೂ ಇದ್ದು ಸೀತಾರಾಮರನ್ನು ಎಚ್ಚರದಿಂದ ಕಾಪಾಡುತ್ತಿದ್ದನು;

ಕಾನನದೊಳು ಎನ್ನ ನಿಲಿಸಲು ಮನಮ್ ಮಂದಪುದೆ ತಂದೆ ನಿನಗೆ ಎಂದು ಅಂಬುಜಾಕ್ಷಿ ಕಂಬನಿ ಮಿಡಿದಳು=ಕಾಡಿನಲ್ಲಿ ನನ್ನನ್ನು ಈ ರೀತಿ ತಂದು ನಿಲ್ಲಿಸಲು ನಿನಗೆ ಮನಸ್ಸಾದರೂ ಹೇಗೆ ಬಂದಿತು ತಂದೆ ಎಂದು ನುಡಿಯುತ್ತ ಸೀತೆಯು ಕಂಬನಿ ಕರೆದಳು

ತೊಳೆವ ನಾಸಿಕದ=ಕಾಂತಿಯಿಂದ ಕೂಡಿರುವ ಮೂಗಿನ;

ನುಣ್ ಕದಪುಗಳ=ನುಣ್ಣನೆಯ ಕೆನ್ನೆಗಳ

ಪೊಳೆವ ಕಂಗಳ=ಹೊಳೆಯುವ ಕಣ್ಣುಗಳ

ತುರುಗಿದ ಎವೆಯ=ಒತ್ತಾಗಿರುವ ಕಣ್ಣಿನ ರೆಪ್ಪೆಯ

ನಿಡಿದಾದ+ಪುರ್ಬು; ನಿಡಿದು=ಉದ್ದವಾದುದು; ಪುರ್ಬು=ಹುಬ್ಬು;

ನಿಡುಪುರ್ಬುಗಳ=ಉದ್ದನೆಯ ಹುಬ್ಬುಗಳ; ಪೆರೆ=ಚಂದ್ರ; ನೊಸಲು=ಹಣೆ;

ಪೆರೆ ನೊಸಲ=ಚಂದ್ರನಂತೆ ಪ್ರಕಾಶಮಾನವಾದ ಹಣೆಯನ್ನುಳ್ಳ;

ಥಳಥಳಿಪ ಮಕುಟದ=ಮಿರುಗುತ್ತಿರುವ ಕಿರೀಟದ;

ಮಕರ=ಮೀನು; ಕುಂಡಲ=ಕಿವಿಗೆ ತೊಡುವ ಓಲೆ;

ಕಿವಿಯ ಮಕರ ಕುಂಡಲದ=ಕಿವಿಯಲ್ಲಿ ತೊಟ್ಟಿರುವ ಮೀನಿನ ಆಕಾರದ ಓಲೆಯ; ಕೋಮಲಿತ=ರಮಣೀಯವಾದ/ಸುಂದರವಾದ; ಚುಬುಕ+ಅಗ್ರದ; ಚುಬುಕ=ಗಲ್ಲ; ಅಗ್ರ=ತುದಿ;

ಕೋಮಲಿತ ಚುಬುಕಾಗ್ರದ=ಸುಂದರವಾದ ಗಲ್ಲದ; ಲಲಿತ+ಅರುಣ; ಲಲಿತ=ಚೆಲುವು/ಮನೋಹರವಾದುದು; ಅರುಣ=ಕೆಂಪು ಬಣ್ಣ; ಅಧರ=ತುಟಿ;

ಲಲಿತಾರುಣ ಅಧರದ=ಚೆಲುವಾದ ಕೆಂಪನೆಯ ತುಟಿಯ; ಮಿರುಗು=ಕಾಂತಿ/ಹೊಳಪು; ರದನ=ಹಲ್ಲು; ಪಂಕ್ತಿ=ಸಾಲು;

ಮಿರುಗುವ ರದನಪಂಕ್ತಿಗಳ=ಹೊಳೆಯುವ ಹಲ್ಲುಗಳ ಸಾಲಿನ

ಸೂಸು=ಚಿಮ್ಮು/ಎಸೆ; ಎಳೆನಗೆ=ಮುಗುಳ್ನಗೆ;

ಸೂಸುವ ಎಳೆನಗೆಯ=ಚಿಮ್ಮುತ್ತಿರುವ ಮುಗುಳ್ನಗೆಯ;

ಒಬ್ಬುಳಿ+ಎನಿಪ; ಒಬ್ಬುಳಿ=ಗುಂಪು/ಸಮೂಹ; ಎನಿಪ=ಎನಿಸುವ;

ಮೋಹನದ ಚೆಲ್ವಿನ ಒಬ್ಬುಳಿಯೆನಿಪ=ನೋಡಿದವರ ಕಣ್ಮನವನ್ನು ಸೆಳೆಯುವಂತಿರುವ ಚೆಲುವಿನ ಆಗರವಾದ; ಸಿರಿಮೊಗ=ಸುಂದರವಾದ ಮೊಗ; ಮಾಣ್=ಸುಮ್ಮನಿರು;

ರಾಘವನ ಸಿರಿ ಮೊಗವನು ಅಕಟ ಎಂತು ನೋಡದೆ ಮಾಣ್ಬೆನು=ರಾಮನ ಸುಂದರವಾದ ಮೊಗವನ್ನು ನೋಡದೆ, ಅಯ್ಯೋ… ಹೇಗೆ ತಾನೇ ಇರುವೆನು;
ಭುವನ+ಅಭಿರಾಮ; ಭುವನ=ಪ್ರಪಂಚ/ಲೋಕ;

ರಾಮನನು=ರಾಮನನ್ನು; ಅಭಿರಾಮ=ಸುಂದರವಾದ;

ಭುವನಾಭಿರಾಮನನು=ಜಗತ್ತಿನಲ್ಲಿಯೇ ಸುಂದರನಾಗಿರುವನನ್ನು; ಗುಣರತ್ನ=ಒಳ್ಳೆಯ ನಡೆನುಡಿ; ಧಾಮ=ನೆಲೆ/ಜಾಗ;

ಗುಣರತ್ನಧಾಮನನು=ಒಳ್ಳೆಯ ನಡೆನುಡಿಗಳಿಗೆ ನೆಲೆಯಾದವನನ್ನು; ರಘು+ಕುಲ+ಉದ್ದಾಮ; ಉದ್ದಾಮ=ಉತ್ತಮವಾದ;

ರಘುಕುಲೋದ್ದಾಮನನು=ರಗುವಂಶದಲ್ಲಿಯೇ ಉತ್ತಮನಾದವನನ್ನು; ಜಿತ=ಜಯಸಲ್ಪಟ್ಟುದ್ದು/ಗೆದ್ದದ್ದು; ಕಾಮ=ಪ್ರೇಮದೇವತೆಯ ಹೆಸರು;

ರೂಪಜಿತಕಾಮನನು=ರೂಪದಲ್ಲಿ ಕಾಮದೇವನಿಗಿಂತಲೂ ಸುಂದರನಾಗಿರುವವನು ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಟ್ಟು ಬಳಕೆಯಾಗಿದೆ; ಸತ್ಕೀರ್ತಿ=ಒಳ್ಳೆಯ ಹೆಸರು; ಕಾಮ=ಆಸೆ/ಬಯಕೆ/ಹಂಬಲ;

ಸತ್ಕೀರ್ತಿಕಾಮನನು=ಒಳ್ಳೆಯ ಹೆಸರನ್ನು ಪಡೆಯಬೇಕೆಂಬ ಹಂಬಲವುಳ್ಳವನನ್ನು;

ಶರಣಜನ=ಆಶ್ರಯವನ್ನು ಕೋರಿ ಬರುವ ಜನರು; ವಾರ್ಧಿ=ಸಾಗರ/ಕಡಲು;

ಶರಣಜನವಾರ್ಧಿಯನು=ತನ್ನ ಆಶ್ರಯವನ್ನು ಕೋರಿಬಂದವರ ಪಾಲಿಗೆ ಸಾಗರದಂತಿರುವವನನ್ನು, ಅಂದರೆ ಅವರನ್ನು ಚೆನ್ನಾಗಿ ಕಾಪಾಡುವವನನ್ನು; ಮಿಗೆ=ಚೆನ್ನಾಗಿ; ಪೆರ್ಚು=ದೊಡ್ಡದಾಗು; ಸೋಮ=ಚಂದ್ರ;

ಮಿಗೆ ಪೆರ್ಚಿಪಸೋಮನನು=ದಿನೇ ದಿನೇ ಹೆಚ್ಚಾಗುವ ಚಂದ್ರನಂತಿರುವವನನ್ನು;

ಸೌಭಾಗ್ಯ ಸೋಮನನು=ಮಂಗಳವನ್ನು ಉಂಟುಮಾಡುವ ಚಂದ್ರನಂತಿರುವವನನ್ನು;

ಕುವಲಯ=ನೀಲಿಯ ತಾವರೆ; ಶ್ಯಾಮ=ಕಡು ನೀಲಿಬಣ್ಣ;

ಕುವಲಯಶ್ಯಾಮನನು=ನೀಲಿ ತಾವರೆಯ ಬಣ್ಣದ ದೇಹವುಳ್ಳವನನ್ನು;

ನಿಜತನುಶ್ಯಾಮನನು=ಕಡುನೀಲಿಯ ದೇಹವುಳ್ಳವನನ್ನು; ಘನ=ದೊಡ್ಡ; ಪುಣ್ಯ=ಒಳ್ಳೆಯ ನಡೆನುಡಿಯಿಂದ ವ್ಯಕ್ತಿಯು ಗಳಿಸುವುದು; ನಾಮ=ಹೆಸರು; ಸಂತತ=ಸದಾಕಾಲ/ಯಾವಾಗಲೂ; ನಾ=ನಾನು; ಮನಮ್+ತಣಿಯೆ; ತಣಿ=ತ್ರುಪ್ತಿಹೊಂದು/ಸಮಾದಾನಗೊಳ್ಳು; ರಮಿಸು=ಆನಂದಪಡು; ಎಂತು=ಹೇಗೆ;

ಘನಪುಣ್ಯ ನಾಮನನು ಸಂತತಮ್ ನಾಮನಂದಣಿಯೆ ರಮಿಸದೆ ಎಂತು ಬಾಳ್ವೆನು=ಒಳ್ಳೆಯ ಹೆಸರನ್ನು ಪಡೆದಿರುವ ರಾಮನೊಡನೆ ಸದಾಕಾಲ ನನ್ನ ಮಯ್ ಮನವು ತಣಿಯುವಂತೆ ಜತೆಗೂಡಿ ಆನಂದಿಸದೆ ಯಾವ ರೀತಿ ಜೀವಿಸಲಿ; ರಾಯ ಕೇಳು=ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ಮುನಿಯು ಹೇಳುತ್ತಿದ್ದಾನೆ; ಇಂತು+ಇಂತು; ಇಂತು=ಈ ರೀತಿ; ರಮಣೀಯ=ಸುಂದರ/ಮನೋಹರ; ಗುಣಮಾಲೆ=ಬಹುಬಗೆಯ ಗುಣಗಳನ್ನು; ಹಂಬಲಿಸು=ಮೊರೆಯಿಡು/ಅಳು/ನೊಂದುಕೊಳ್ಳು;

ಇಂತಿಂತು ರಾಘವೇಶ್ವರನ ರಮಣೀಯ ಗುಣಮಾಲೆಯನು ನೆನೆನೆನೆದು ಹಂಬಲಿಸುತ=ಈ ರೀತಿ ನಾನಾಬಗೆಗಳಲ್ಲಿ ರಾಮನ ಮನೋಹರವಾದ ಗುಣಗಳೆಲ್ಲವನ್ನು ನೆನೆನೆನೆದು ನೊಂದುಕೊಳ್ಳುತ್ತ;

ಆಯತ+ಅಂಬಕಿ; ಆಯತ=ವಿಶಾಲವಾದ; ಅಂಬಕ=ಕಣ್ಣು; ಆಯತಾಂಬಕಿ=ವಿಶಾಲವಾದ ಕಣ್ಣುಗಳನ್ನುಳ್ಳ ಸೀತೆ;

ಆಯತಾಂಬಕಿ ಮತ್ತೆ ಮೈ ಮರೆಯುತ ಎಚ್ಚರುತೆ=ಸೀತೆಯು ತೀವ್ರವಾದ ಸಂಕಟದಲ್ಲಿ ತೊಳಲಾಡುತ್ತ… ಮತ್ತೆ ಮತ್ತೆ ಎಚ್ಚರತಪ್ಪುತ್ತ, ಮತ್ತೆ ಮತ್ತೆ ಎಚ್ಚರಗೊಳ್ಳುತ್ತ; ಪಾವ್=ಹಾವು; ಅಗಿ=ಕಚ್ಚು; ಪಸುಳೆ+ವೊಲು; ಪಸುಳೆ=ಮಗು; ಇರೆ=ಇರಲು;

ಪಾವ್ ಅಗಿದ ಪಸುಳೆ ವೊಲು ಇರೆ=ಹಾವು ಕಚ್ಚಿದ ಮಗುವಿನಂತಿರಲು

ಅಂದರೆ ತನ್ನ ಒಡಲಿನಲ್ಲಿ ಬೇಯುತ್ತಿರುವ ಸಂಕಟವನ್ನು ಹೇಳಿಕೊಳ್ಳಲಾರದೆ ಮೂಕಳಾಗಿರಲು;

ತಾಯೆ ನಿನ್ನನು ಬಿಟ್ಟುಹೋಗಲಾರೆನು=ತಾಯೆ, ನಿನ್ನನ್ನು ಕಾಡಿನಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗುವುದಕ್ಕೆ ನನ್ನಿಂದ ಆಗುತ್ತಿಲ್ಲ;ಅವಸ್ಥೆ=ಇರುವಿಕೆ;

ಪೋಗದೆ ಈ ಅವಸ್ಥೆಯೊಳು ಇರ್ದೊಡೆ=ಅಯೋದ್ಯೆಗೆ ಹಿಂತಿರುಗದೆ ನಿನ್ನೊಡನೆಯೇ ಇದ್ದರೆ; ಏಗೈದಪನೊ=ಏನು ಮಾಡುವನೊ; ಶೋಕ+ಗದ್ಗದನ್+ಆಗೆ; ಶೋಕ=ಸಂಕಟ; ಗದ್ಗದ=ಮಾತನಾಡುವಾಗ ತುಂಬಾ ಸಂಕಟದಿಂದ ಗಂಟಲು ಕಟ್ಟಿದಂತಾಗುವುದು; ಆಗೆ=ಆಗಲು;

ಅಣ್ಣನು ಏಗೈದಪನೊ… ಹಾ… ಎಂದು ಲಕ್ಷ್ಮಣನು ಶೋಕ ಗದ್ಗದನಾಗೆ=ಅಣ್ಣನು ಏನನ್ನು ಮಾಡುತ್ತಾನೆಯೋ… ಹಾ… ಎಂದು ಗೋಳಾಡುತ್ತಿರುವ ಲಕ್ಶ್ಮಣನ ಗಂಟಲು ಕಟ್ಟಿದಂತಾಗಲು; ಮಗುಳ್=ಪುನಹ/ಮತ್ತೆ; ಇಂತು+ಎಂದಳು;

ಸೀತೆ ಮಗುಳ್ ಇಂತೆಂದಳು=ಸೀತೆಯು ಮತ್ತೆ ಲಕ್ಶ್ಮಣನನ್ನು ಕುರಿತು ಈ ರೀತಿ ಹೇಳಿದಳು

ತಂದೆ ಲಕ್ಷ್ಮಣ, ನಿನ್ನೊಳು ಎಂದೊಡೆ ಇನ್ನೇನು ಅಹುದು=ತಂದೆ ಲಕ್ಶ್ಮಣ, ನಿನ್ನೊಡನೆ ನನ್ನ ಸಂಕಟವನ್ನು ಹೇಳಿಕೊಂಡರೆ, ಏನು ತಾನೆ ಪ್ರಯೋಜನ. ಅಂದರೆ ನೀನು ಅಣ್ಣನ ಮಾತನ್ನು ಮೀರಿ ನಡೆಯುವುದಿಲ್ಲ;

ಅಂದ=ರೀತಿ/ಹಾಗೆ; ಪೋಗು=ಹೋಗು;

ನೀನು ಹಿಂದಣ ಜನಸ್ಥಾನದ ಅಂದದೊಳು ಪೋಗು=ವನವಾಸದ ಸನ್ನಿವೇಶದಲ್ಲಿ ನಿನ್ನನ್ನು ನಾನು ಜನಸ್ತಾನದಿಂದ ಒತ್ತಾಯಪೂರ್‍ವಕವಾಗಿ ಕಳುಹಿಸಿದ್ದಾಗ, ನನ್ನನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ಹೋಗಿದ್ದಂತೆ ಈಗಲೂ ಇಲ್ಲಿಂದ ತೆರಳು;

ಬೆಂದ+ಒಡಲ್+ಒಳು; ಬೆಂದ=ಸಂಕಟದಿಂದ ಕೂಡಿರುವ; ಒಡಲ್=ದೇಹ/ಮಯ್; ಬಸಿರು=ಹೊಟ್ಟೆಯಲ್ಲಿ ಮಗುವು ಇರುವುದು; ದಂದುಗ=ತೊಡಕು/ಸಿಕ್ಕು/ತೊಂದರೆ; ಬಸಿರ ದಂದುಗ=ಮಗುವನ್ನು ಹಡೆಯುವ ಕರುಳ ನಂಟು;

ಕೊಂದು ಕೊಂಬೊಡೆತನ್ನ ಬೆಂದೊಡಲೊಳು ಬಸಿರ ದಂದುಗಮ್ ಇದೆ=ಆತ್ಮಹತ್ಯೆಯನ್ನು ಮಾಡಿಕೊಳ್ಳೋಣವೆಂದರೆ ಸಂಕಟದಿಂದ ಬೇಯುತ್ತಿರುವ ತನ್ನ ಒಡಲಲ್ಲಿ ಹಡೆಯಲಿರುವ ಮಗುವಿದೆ

ಆನ್ ಇಂದು ಕಾನನದೊಳು ಬಂದುದನು ಕಾಣ್ಬೆನು=ನಾನು ಇಂದಿನಿಂದ ಕಾಡಿನಲ್ಲಿ ಉಂಟಾಗುವ ಎಲ್ಲ ತೊಡಕುಗಳನ್ನು ಎದುರಿಸುತ್ತೇನೆ

ಅಡಿ=ಪಾದ;

ಕೌಸಲೆ ಅಡಿಗೆ ವಂದಿಸಿದೆನು=ರಾಮನ ತಾಯಿಯೂ ಮತ್ತು ನನ್ನ ಅತ್ತೆಯವರಾದ ಕೌಸಲ್ಯಾದೇವಿಯವರ ಪಾದಕ್ಕೆ ನಮಿಸುತ್ತೇನೆ;ಒರೆ=ಹೇಳು; ಮೃಗ+ಅಕ್ಷಿ; ಮೃಗ=ಜಿಂಕೆ; ಅಕ್ಷಿ=ಕಣ್ಣು; ಮೃಗಾಕ್ಷಿ=ಜಿಂಕೆಯ ಕಣ್ಣುಗಳಂತಹ ಕಣ್ಣುಗಳನ್ನು ಉಳ್ಳವಳು/ಸೀತೆ; ಅಳಲ್ದಳು=ಸಂಕಟಪಟ್ಟಳು;

ಅಪರಾಧಮ್ ಒಂದುಮ್ ಇಲ್ಲದೆತನ್ನ ಕಂದನು ಎನ್ನನು ತೊರೆದುದನು ದೇವಿಗೆ ಒರೆವುದು ಎನುತ ಅಂದು ಮೃಗಾಕ್ಷಿ ಅಳಲ್ದಳು=ಯಾವುದೇ ಒಂದು ತಪ್ಪನ್ನು ಮಾಡದಿದ್ದರೂ, ಅವರ ಮಗನಾದ ರಾಮನು ನನ್ನನ್ನು ತೊರೆದುದನ್ನು ದೇವಿಗೆ ಹೇಳುವುದು ಎನ್ನುತ್ತ ಸೀತೆಯು ಶೋಕಿಸಿದಳು

ಏಕೆ ನಿಂದಿಹೆ ಪೋಗು ಸೌಮಿತ್ರಿ=ಏಕೆ ನಿಂತಿರುವ ಹೋಗು ಲಕ್ಶ್ಮಣ

ತಳುವು=ತಡಮಾಡು; ಕಾಕುತ್ಸ್ಥ=ಕಾಕುತ್ಸ್ತ ಎಂಬ ಹೆಸರಿನ ವಂಶದಲ್ಲಿ ಹುಟ್ಟಿದವನು/ರಾಮ;

ಇಲ್ಲಿ ತಳುವಿದೊಡೆ ಕಾಕುತ್ಸ್ಥನು ಕೋಪಿಸನೆ=ಹಿಂತಿರುಗಿ ಹೋಗುವುದರಲ್ಲಿ ನೀನು ತಡಮಾಡಿದರೆ ರಾಮನು ಕೋಪಿಸಿಕೊಳ್ಳುವುದಿಲ್ಲವೇ;ಉಗ್ರಜಂತು=ಕ್ರೂರಪ್ರಾಣಿ; ನೆರ+ಉಂಟು; ನೆರ=ಸಹಾಯ/ಒತ್ತಾಸೆ/ಆಸರೆ;

ತನಗೆ ಈ ಕಾಡೊಳು ಉಗ್ರಜಂತುಗಳಲ್ಲಿ ನೆರವುಂಟು=ನನಗೆ ಈ ಕಾಡಿನಲ್ಲಿ ಕ್ರೂರವಾದ ಪ್ರಾಣಿಪಕ್ಶಿಗಳ ಒತ್ತಾಸೆಯಿದೆ. ಅಂದರೆ ಅವು ನನ್ನ ಒಡನಾಡಿಯಾಗಿವೆ;ಏಕಾಕಿ+ಆಗಿ+ಇರ್ಪನು; ಏಕಾಕಿ=ಒಬ್ಬಂಟಿಗ; ಇರ್ಪನು=ಇರುವನು;

ರಘುನಾಥನು ಏಕಾಕಿಯಾಗಿರ್ಪನು=ಅಯೋದ್ಯೆಯಲ್ಲಿ ರಾಮನು ಒಬ್ಬಂಟಿಗನಾಗಿದ್ದಾನೆ; ಏಗೈವೊಡಮ್=ಏನನ್ನು ಮಾಡಿದರೂ;

ಲೋಕದ ಅರಸು ಏಗೈವೊಡಮ್=ಲೋಕದ ಅರಸು ಏನನ್ನು ಮಾಡಿದರೂ;ಕಿಂಕರ=ಆಳು/ಸೇವಕ; ಬೇಕುಬೇಡ+ಎಂದು; ಬೇಕುಬೇಡ=ಇದೊಂದು ನುಡಿಗಟ್ಟು. ಈ ಕೆಲಸ ಸರಿಯಾಗಿದೆ. ಆದ್ದರಿಂದ ಇದು ಬೇಕು. ಈ ಕೆಲಸ ಸರಿಯಾಗಿಲ್ಲ. ಆದ್ದರಿಂದ ಇದು ಬೇಡ ಎಂಬ ವಿವೇಕದ ನಿಲುವು;

ತನ್ನ ಕಿಂಕರರು ಬೇಕು ಬೇಡೆಂದು ಪೇಳರೆ=ರಾಜನ ಸೇವಕರು ಅಂದರೆ ರಾಜನಿಗೆ ಆತ್ಮೀಯರಾದವರು “ರಾಜನೇ, ಒಳಿತಿನ ಕೆಲಸವನ್ನು ಮಾಡು. ಕೇಡಿನ ಕೆಲಸವನ್ನು ಮಾಡಬೇಡ” ಎಂಬ ವಿವೇಕದ ಮಾತುಗಳನ್ನು ಹೇಳುವುದಿಲ್ಲವೇ

ಭರತಶತ್ರುಘ್ನರು ಈ ಕೆಲಸಕೆ ಒಪ್ಪಿದರೆ=ಭರತ ಶತ್ರುಗ್ನರು ನನ್ನನ್ನು ತೊರೆಯುವ ಈ ಕೆಲಸಕ್ಕೆ ಒಪ್ಪಿದರೆ;

ಅಬಲೆ=ಹೆಂಗಸು;

ಹನುಮಂತನು ಇರ್ದಪನೆ ಪೇಳು ಎಂದು ಅಬಲೆ ಅಳಲ್ದಳು=ರಾಮನು ಇಂತಹ ಕ್ರೂರತೀರ್‍ಮಾನವನ್ನು ಕಯ್ಗೊಂಡಾಗ ಹನುಮಂತನು ಅಲ್ಲಿ ಇದ್ದನೆ ಹೇಳು ಎಂದು ಸೀತೆ ಶೋಕಿಸಿದಳು

ಮರುಳ್+ಆಟಮ್; ಮರುಳು=ಹುಚ್ಚು; ಆಟ=ವರ್ತನೆ;

ಇದು ತನ್ನ ಮರುಳಾಟಮ್=ಇದೆಲ್ಲವೂ ನನ್ನ ಹುಚ್ಚು. ಅಂದರೆ “ನನ್ನ ಗಂಡನಾದ ರಾಮನು ನನ್ನನ್ನು ಬಹಳವಾಗಿ ಪ್ರೀತಿಸುತ್ತಾನೆ. ನನ್ನ ಮಯ್ದುನರು ಮತ್ತು ರಾಮನಿಗೆ ಆತ್ಮೀಯರಾದವರೆಲ್ಲರೂ ನನ್ನ ಬಗ್ಗೆಯೂ ಪ್ರೀತಿ ಕರುಣೆಯಿಂದ ಕೂಡಿದ್ದಾರೆ” ಎಂಬ ನನ್ನ ನಂಬಿಕೆಯೆಲ್ಲವೂ ಕೇವಲ ನನ್ನ ತಪ್ಪು ಕಲ್ಪನೆ;

ಆರ್ ಇರ್ದೊಡೆ ಏಗೈವರು=ಯಾರು ಇದ್ದರೆ ತಾನೇ ಏನನ್ನು ಮಾಡುವರು;ತಮ್ಮನ್+ಐಸಲೆ; ಐಸಲೆ=ಅಲ್ಲವೇ; ಭೀರುಗಳನ್+ಅರಿಪನೆ; ಭೀರು=ಹೆದರಿಕೆಯುಳ್ಳ ವ್ಯಕ್ತಿ/ಅಂಜಿಕೆಯುಳ್ಳ ವ್ಯಕ್ತಿ/ಅಬಲೆಯಾದ ಹೆಂಗಸು ಎಂಬ ರೂಪಕದ ತಿರುಳು; ಅರಿ=ತಿಳಿ; ಅರಿದಪನೆ=ತಿಳಿಯುತ್ತಾನೆಯೆ;

ಆ ರಾವಣನ ತಮ್ಮನೈಸಲೆ ವಿಭೀಷಣನು ಭೀರುಗಳನರಿದಪನೆ=ವಿಬೀಶಣನು ಆ ರಾವಣನ ತಮ್ಮನಲ್ಲವೇ. ಹೆಂಗಸರ ಸಂಕಟವು ಅವನಿಗೆ ಹೇಗೆ ತಾನೆ ತಿಳಿಯುತ್ತದೆ. ಅಂದರೆ ಹೆಂಗಸರ ಬಗ್ಗೆ ಕ್ರೂರವಾಗಿ ನಡೆದುಕೊಂಡಿದ್ದ ರಾವಣನ ಹಾಗೆಯೇ ಅವನ ತಮ್ಮನಲ್ಲಿಯೂ ಸಹಜವಾಗಿಯೇ ಹೆಂಗಸರ ಬಗ್ಗೆ ಕರುಣೆಯೆಂಬುದು ಇರುವುದಿಲ್ಲ;

ಉರೆ=ಅತಿಶಯವಾಗಿ/ಬಹಳ ಹೆಚ್ಚಾಗಿ; ಮುಳಿ=ಸಿಟ್ಟು/ಕೋಪ; ಸುಗ್ರೀವ=ಕಾಡಿನಲ್ಲಿ ನೆಲೆಸಿದ್ದ ವಾನರ ಬುಡಕಟ್ಟಿನ ರಾಜ; ಸುಗ್ರೀವನ ಸೋದರ=ವಾಲಿ ಎಂಬ ಹೆಸರಿನ ವಾನರ ಬುಡಕಟ್ಟಿನ ರಾಜ;

ಸೋದರಂಗೆ ಉರೆ ಮುಳಿದ ಸುಗ್ರೀವನ್ ಎಂಬವಂಗೆ ಕಾರುಣ್ಯಮ್ ಇರ್ದಪುದೆ=ಒಡಹುಟ್ಟಿದ ಅಣ್ಣನಾದ ವಾಲಿಯ ಬಗ್ಗೆ ಅತಿಯಾಗಿ ಕೋಪಗೊಂಡು ಅಣ್ಣನನ್ನೆ ರಾಮನಿಂದ ಕೊಲ್ಲಿಸಿದ
ಸುಗ್ರೀವನ ಮನದಲ್ಲಿ ಕರುಣೆಯು ಇರುವುದೆ; ಅದು+ಆರ್+ಉಂಟು; ಆರು=ಯಾರು;

ದೇವಂಗೆ ಪೇಳುವರು ಮತ್ತುಳಿದ ಮಂತ್ರಿಗಳು ಅದಾರುಂಟು=ಇನ್ನುಳಿದ ಮಂತ್ರಿಗಳಲ್ಲಿ ರಾಮನಿಗೆ ತಿಳಿಯಹೇಳುವವರು ಯಾರು ತಾನೆ ಇದ್ದಾರೆ

ಘೋರ+ಅಟವಿ; ಅಟವಿ=ಅಡವಿ/ಕಾಡು; ಕಳುಪುವೊಡೆ=ಕಳಿಸುವುದಕ್ಕೆ; ಒರಲ್=ಅರಚು/ಕೂಗಿಕೊಳ್ಳು/ಸಂಕಟಪಡು;

ಘೋರಾಟವಿಗೆ ಕಳಪುವೊಡೆ ನೀನು ಒಪ್ಪಿ ಕೊಂಡು ಬಂದೆ. ಇನ್ನು ಒರಲ್ಡೊಡೆ ಏನಹುದು=ನನ್ನನ್ನು ಬಯಂಕರವಾದ ಕಾಡಿಗೆ ಅಟ್ಟಬೇಕೆಂಬ ರಾಮನ ತೀರ್‍ಮಾನವನ್ನು ನೀನೇ ಒಪ್ಪಿಕೊಂಡು ಇಲ್ಲಿಗೆ ಕರೆದುಕೊಂಡು ಬಂದೆ ಎಂದ ಮೇಲೆ, ಇನ್ನು ನಾನು ಯಾವ ರೀತಿಯಲ್ಲಿ ಪ್ರಲಾಪಿಸಿದರೂ ಅದರಿಂದ ಪ್ರಯೋಜನವೇನು?; ಕರುಣಾ+ಆಳು; ಆಳು=ವ್ಯಕ್ತಿ; ಕರುಣಾಳು=ಕರುಣೆಯೆ ಮಯ್ ತಳೆದು ಬಂದಂತಿರುವ ವ್ಯಕ್ತಿ/ಅಪಾರವಾದ ಕರುಣೆಯ ಗುಣವುಳ್ಳವನು;

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ… ಎನ್ನೊಳು ಅಪರಾಧಮುಂಟು =ನನ್ನ ಮತ್ತು ರಾಮನ ಬದುಕಿನಲ್ಲಿ ನಡೆದ ಆಗುಹೋಗುಗಳೆಲ್ಲವನ್ನೂ ಗಮನಿಸಿದರೆ ಕರುಣಾಳುವಾದ ರಾಮನ ನಡೆನುಡಿಯಲ್ಲಿ ಯಾವ ತಪ್ಪು ಇಲ್ಲ .ಹೆಣ್ಣಾಗಿ ಹುಟ್ಟಿರುವುದೇ ನನ್ನಲ್ಲಿರುವ ದೊಡ್ಡ ತಪ್ಪು. ಗಂಡಿನ ದಬ್ಬಾಳಿಕೆ, ಆಕ್ರಮಣ ಮತ್ತು ಹಲ್ಲೆಗೆ ನಿರಂತರವಾಗಿ ಗುರಿಯಾಗುವ ಕುಟುಂಬದ ವ್ಯವಸ್ತೆಯಲ್ಲಿ ಹೆಣ್ಣಾಗಿ ಹುಟ್ಟುವುದೇ ಒಂದು ಅಪರಾದವಾಗಿದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ಕಡು+ಪಾತಕ+ಅಮ್; ಕಡು=ಬಹಳ/ಅತಿ ಹೆಚ್ಚಿನ; ಪಾತಕ=ಪಾಪ/ಕೆಟ್ಟಕೆಲಸ/ತಪ್ಪು; ಗೈದು=ಮಾಡಿ; ಸಂಭವಿಸು=ಹುಟ್ಟು: ಒಡಲು=ದೇಹ; ಪೊರೆ=ಕಾಪಾಡು; ಒಡಲನು ಪೊರೆವುದು=ಜೀವನವನ್ನು ನಡೆಸುವುದು;;

ಕಡುಪಾತಕಮ್ ಗೈದು ಪೆಣ್ಣಾಗಿ ಸಂಭವಿಸಿದ ಒಡಲನು ಪೊರೆವುದು=ಅತಿಹೆಚ್ಚಿನ ಪಾಪವನ್ನು ಮಾಡಿ ಹೆಣ್ಣಿನ ದೇಹವನ್ನು ಹೊತ್ತುಬಂದಿರುವ ಈ ನನ್ನ ಒಡಲನ್ನು ಕಾಪಾಡಿಕೊಳ್ಳಬೇಕಾಗಿದೆ;; ಎನ್ನೊಳು=ನನ್ನಲ್ಲಿ;

ಸಾಕು ಇಲ್ಲಿರಲ್ಬೇಡ. ನಿಲ್ಲದಿರು. ನೀನು ನಡೆಪೋಗು=ಸಾಕು. ನೀನು ಇಲ್ಲಿರಬೇಡ. ನಿಲ್ಲಬೇಡ. ಇಲ್ಲಿಂದ ಹೊರಡು;

ಆರ್ತ=ಸಂಕಟ/ಅಳಲು/ವೇದನೆ;

ನಿನಗೆ ಮಾರ್ಗದೊಳು ಅಡಿಗಡಿಗೆ ಸುಖಮ್ ಆಗಲಿ ಎಂದು ಸೀತೆ ಕಂಬನಿಗಳನು ಮಿಡಿದು ಆರ್ತೆಯಾಗಿರಲು=ನಿನಗೆ ದಾರಿಯುದ್ದಕ್ಕೂ ಯಾವುದೇ ಅಡೆತಡೆಗಳಾಗದಿರಲಿ ಎಂದು ಸೀತೆಯು ಕಣ್ಣೀರನ್ನು ಹಾಕುತ್ತ, ಸಂಕಟದಿಂದ ನರಳುತ್ತಿರಲು; ವಿಪಿನ=ಕಾಡು; ಅಭಿಮಾನಿ=ಪ್ರೀತಿಯುಳ್ಳವನು; ವಿಪಿನದ ಅಭಿಮಾನಿಗಳು

ಸೌಮಿತ್ರಿ ಆ ವಿಪಿನದ ಅಭಿಮಾನಿಗಳ್ಗೆ ನುಡಿದನು=ಲಕ್ಶ್ಮಣನು ಕಾಡಿನ ಪರಿಸರದಲ್ಲಿದ್ದ ಮರಗಿಡಬಳ್ಳಿ ಪ್ರಾಣಿಪಕ್ಶಿ ಬೆಟ್ಟಗುಡ್ಡಗಳನ್ನು ಕುರಿತು ಮೊರೆಯಿಟ್ಟನು

ವನ=ಕಾಡು; ಸ್ಥಳ=ಜಾಗ/ಎಡೆ; ವೃಕ್ಷ=ಮರಗಿಡ; ಮೃಗ=ಕಾಡಿನಲ್ಲಿರುವ ಪ್ರಾಣಿ; ಲತೆ=ಬಳ್ಳಿ; ತೃಣ=ಹುಲ್ಲು; ಗುಲ್ಮ=ಪೊದೆ; ಪಂಚಭೂತ=ಬೂಮಿ-ಬೆಂಕಿ-ನೀರು-ಗಾಳಿ-ಆಕಾಶ ಎಂಬ ಅಯ್ದು ಬಗೆಯ ಮೂಲ ವಸ್ತುಗಳು; ದೆಸೆ=ಹತ್ತು ದಿಕ್ಕುಗಳು; ಕಾವುದು=ಕಾಪಾಡುವುದು;

ಎಲೆವನಸ್ಥಳಗಳಿರ, ವೃಕ್ಷಂಗಳಿರ, ಮೃಗಂಗಳಿರ, ಕ್ರಿಮಿಕೀಟಂಗಳಿರ, ಪಕ್ಷಿಗಳಿರ, ಲತೆಗಳಿರ, ತೃಣಗುಲ್ಮಂಗಳಿರ, ಪಂಚಭೂತಂಗಳಿರ, ದೆಸೆಗಳಿರಕಾವುದು=ಕಾಡಿನ ಪ್ರಾಂತ್ಯದಲ್ಲಿರುವ ಮರಗಳೇ, ಪ್ರಾಣಿಗಳೇ, ಕ್ರಿಮಿಕೀಟಗಳೇ, ಪಕ್ಶಿಗಳೇ, ಬಳ್ಳಿಗಳೇ, ಹುಲ್ಲುಪೊದೆಗಳೇ, ಅಯ್ದು ಮೂಲಶಕ್ತಿಗಳಾದ ಬೂಮಿ/ಬೆಂಕಿ/ನೀರು/ಗಾಳಿ/ಆಕಾಶಗಳೇ, ಹತ್ತು ದಿಕ್ಕುಗಳೇ ಸೀತಾದೇವಿಯನ್ನು ಕಾಪಾಡುವುದು

ಜಗತ್+ಜನನಿ; ಜನನಿ=ತಾಯಿ; ಜಾಹ್ನವಿ=ಗಂಗಾ ನದಿ; ಸಲಹು=ಕಾಪಾಡು/ಸಾಕು;

ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ ತನ್ನ ಮಾತೆಯನು ಸಲಹಿಕೊಳ್ವುದು=ದರ್‍ಮದೇವತೆಯಾದ ಗಂಗೆಯೇ, ನನಗೆ ತಾಯಿಸ್ವರೂಪಳಾದ ಸೀತಾದೇವಿಯನ್ನು ಯಾವುದೇ ತೊಂದರೆಗಳಿಗೆ ಬಲಿಯಾಗದಂತೆ ನೋಡಿಕೊಂಡು ಕಾಪಾಡುವುದು;

ಎಲೆ ತಾಯೆಭೂದೇವಿ, ಜಾನಕಿಯನು ನಿನ್ನಮಗಳು ಇಹಳು ಎಂದು ಸೌಮಿತ್ರಿ ಕೈಮುಗಿದನು=ಬೂದೇವಿಯೇ , ಸೀತೆಯು ನಿನ್ನ ಮಗಳು. ಅವಳನ್ನು ಕಾಪಾಡುವ ಹೊಣೆ ನಿನ್ನದು ಎಂದು ಲಕ್ಷ್ಮಣನು ನಿಸರ್‍ಗ ದೇವತೆಗಳಿಗೆ ಕಯ್ ಮುಗಿದನು;ಮಾಳ್ಕೆ=ಬಗೆ/ರೀತಿ/ದಾರಿ; ಇನ್ನು+ಆವುದು;

ಮಾಳ್ಕೆ ಇನ್ನಾವುದು=ಇನ್ನು ದಾರಿ ಯಾವುದಿದೆ? ಈಗ ನಾನೇನು ಮಾಡಲಿ;ತನ್ನ+ಒಡಲ; ಒಡಲು=ದೇಹ; ಇಬ್ಬಗಿ+ಆಗಿ; ಇಬ್ಬಗಿ=ಎರಡು ಪಾಲಾಗಿ; ;

ತನ್ನೊಡಲ ಇಬ್ಬಗಿಯಾಗಿ ಸೀಳ್ ಕೆಡಹಬೇಡನೆ=ನನ್ನ ದೇಹವನ್ನು ಎರಡು ಹೋಳುಗಳನ್ನಾಗಿ ಸೀಳಿ ಕೆಡಹಬೇಕೆಂದು ಕೇಳಿಕೊಳ್ಳುತ್ತೇನೆ;ಧರಿತಿ=ಭೂಮಿ; ನಿಷ್ಠುರ=ಕ್ರೂರತನ;

ಧರಿತ್ರಿಯೊಳು ನಿಷ್ಠುರದ ಬಾಳ್ಕೆಯನು ಸುಡಲಿ ಎನುತೆ=ಬೂಮಂಡಲದಲ್ಲಿ ಕ್ರೂರಿಯಾಗಿ ನಡೆದುಕೊಳ್ಳುತ್ತಿರುವ ನನ್ನ ಬಾಳಿಗೆ ಬೆಂಕಿ ಬೀಳಲಿ ಎಂದು ತನ್ನನ್ನು ತಾನೇ ಶಪಿಸಿಕೊಳ್ಳುತ್ತ,

ಬಲವಂದು=ಬಲಗಡೆಯಿಂದು ಒಂದು ಸುತ್ತು ಬಂದು;

ಲಕ್ಷ್ಮಣನು ದೇವಿಯನು ಬಲವಂದು ನಮಿಸಿ=ಲಕ್ಶ್ಮಣನು ಸೀತಾದೇವಿಯ ಬಲಗಡೆಯಿಂದ ಒಂದು ಸುತ್ತುಬಂದು ನಮಸ್ಕಾರವನ್ನು ಮಾಡಿ;:

ಬಳಿಕ ಬೀಳ್ಕೊಂಡು ನಡೆಯಲ್ಕೆ=ಅನಂತರ, ಅವಳಿಂದ ದೂರಸರಿದು ನಡೆಯುತ್ತಿರಲು;

ನೀಳ್ಕುಳಿಗೊಳ್=ಜಗ್ಗುವುದು/ಸೆಳೆಯುವುದು/ಎಳೆಯುವುದು;

ಮನಮ್ ಹಿಂದು ಹಿಂದಕೆ ನೀಳ್ಕುಳಿಗೊಳಲ್ಕೆ=ಲಕ್ಶ್ಮಣನು ಸೀತಾದೇವಿಯನ್ನು ಬಿಟ್ಟು ದೂರದೂರ ನಡೆಯುತ್ತಿದ್ದರೂ ಮನಸ್ಸು ಮಾತ್ರ ಹಿಂದುಹಿಂದಕ್ಕೆ ಅಂದರೆ ಸೀತೆಯ ಕಡೆಗೆ ಎಳೆಯುತ್ತಿರಲು; ದೂಳ್+ಕಾಯದ+ಒಳು; ಕಾಯ=ದೇಹ/ಮಯ್; ದೂಳ್ಕಾಯ=ದೂಳಿನಿಂದ ಕೂಡಿದ ದೇಹ; ಪತ್ತಿ=ಹತ್ತಿ/ಅಂಟಿಕೊಂಡು; ಪೊರಳ್=ಉರುಳಾಡು;

ದೂಳ್ಕಾಯದೊಳು ಪತ್ತಿ ಪೊರಳ್ವ ಸೀತೆಯ ಕಡೆಗೆ=ದೂಳು ಮೆತ್ತಿಕೊಂಡು ನೆಲದ ಮೇಲೆ ಸಂಕಟದಿಂದ ಉರುಳಾಡುತ್ತಿರುವ ಸೀತೆಯ ಕಡೆಗೆ; ಎಂದುಮ್=ಯಾವಾಗಲೂ; ಅಗಲು=ದೂರವಿರು/ಬಿಟ್ಟಿರು;

ಎಂದುಮ್ ಅಗಲದ ಅಣ್ಣನ ಕಡೆಗೆ=ಹುಟ್ಟಿದಂದಿನಿಂದ ಇಂದಿನ ತನಕ ಅಂದರೆ ತನ್ನ ಜೀವನದ ಉದ್ದಕ್ಕೂ ಯಾವಾಗಲೂ ಬಿಟ್ಟಿರದ ಅಣ್ಣ ರಾಮನ ಕಡೆಗೆ; ತೂಗು+ಉಯ್ಯಲೆ+ವೊಲ್+ಆದನು; ತೂಗು=ಅತ್ತಿತ್ತ ಚಲಿಸು; ಉಯ್ಯಲೆ=ತೂಗುಮಣೆ/ಜೋಕಾಲಿ; ತೂಗುಯ್ಯಲೆ=ಒಮ್ಮೆ ಅತ್ತ… ಒಮ್ಮೆ ಇತ್ತ ತೂಗಾಡುವ ಉಯ್ಯಲೆ; ವೊಲ್=ಅಂತೆ/ಹಾಗೆ;

ತೂಗುಯ್ಯಲೆವೊಲಾದನು=ಅತ್ತಿತ್ತ ತೂಗಾಡುವ ಉಯ್ಯಲೆಯಂತೆ ಲಕ್ಶ್ಮಣನು ಸೀತೆಯ ಸಂಕಟ ಮತ್ತು ರಾಮನ ಆದೇಶದ ನಡುವೆ ಸಿಲುಕಿ, ತೀವ್ರವಾದ ಮಾನಸಿಕ ನೋವಿಗೆ ಗುರಿಯಾದನು;

ನಡೆಗೊಳಲು=ಲಕ್ಶ್ಮಣನು ನಡೆದುಬರುತ್ತ ಮತ್ತೊಮ್ಮೆ ಹಿಂತಿರುಗಿ ನೋಡಿದಾಗ;

ಬಾಯಾರ್ವಳನು=ನೀರನ್ನು ಕುಡಿಯಲು ಹಂಬಲಿಸುವವಳನ್ನು;

ಚೀರ್ವಳನು=ಸಂಕಟದಿಂದ ಅರಚುತ್ತಿರುವವಳನ್ನು;

ಕಡಲಿಡುವ ಕಂಬನಿ=ಇದೊಂದು ನುಡಿಗಟ್ಟು. ಒಂದೇ ಸಮನೆ ಉಕ್ಕಿಬಂದು ಹರಿಯುತ್ತಿರುವ ಕಣ್ಣೀರು; ಆಳ್=ನೀರಿನಲ್ಲಿ ಮುಳುಗು;

ಕಡಲಿಡುವ ಕಂಬನಿಯೊಳು ಆಳ್ವಳನು ಬೀಳ್ವಳನು=ಉಕ್ಕಿಹರಿಯುತ್ತಿರುವ ಕಣ್ಣೀರಿನಲ್ಲಿ ಮುಳುಗಿರುವವಳನ್ನು; ಅಂದರೆ ತೀವ್ರವಾದ ಸಂಕಟದಿಂದ ನರಳುತ್ತ ನೆಲದ ಮೇಲೆ ಬೀಳುತ್ತಿರುವವಳನ್ನು; ಪುಡಿ=ದೂಳು; ಪೊರಳ್=ಉರುಳಾಡು; ಬಸವಳಿ=ಸುಸ್ತಾಗು; ಸುಳಿ=ಗುಂಡಾಗಿ ತಿರುಗುವುದು;

ಪುಡಿಯೊಳುಪೊರಳ್ದು ಬಸವಳಿವಳನು ಸುಳಿವಳನು ಕಂಡು=ದೂಳಿನಲ್ಲಿ ಹೊರಳಾಡುತ್ತ ಸುಸ್ತಾಗಿ ತಲೆಸುತ್ತಿದಂತಾಗಿ ಇದ್ದ ಕಡೆಯಲ್ಲಿಯೇ ಚಕ್ರಾಕಾರವಾಗಿ ತಿರುಗುತ್ತಿರುವವಳನ್ನು; ಭರತ+ಅವರಜನ್; ಅವರಜ=ತಮ್ಮ; ಭರತಾವರಜ=ಭರತನ ತಮ್ಮನಾದ ಲಕ್ಶ್ಮಣ; ಅಗಲ್ದು=ದೂರ ದೂರ ಸರಿಯುತ್ತ;

ಭರತಾವರಜನ್ ಅಗಲ್ದು=ಲಕ್ಶ್ಮಣನು ದೂರಸರಿದು ಬರುತ್ತ:

ಅಡಿಗಡಿಗೆತಿರುತಿರುಗಿನೋಡುವನು=ಮತ್ತೆ ಮತ್ತೆ ತಿರುತಿರುಗಿ ನೋಡುವನು; ಬಾಡು=ಕಳೆಗುಂದು/ಮಂಕಾಗು;

ಬಾಡುವನು=ಏನನ್ನೂ ಮಾಡಲಾಗದೆ ಮಂಕಾಗುವನು;

ಬಿಡದೆ=ಒಂದೇ ಸಮನೆ; ಬಿಸುಸುಯ್ದು=ನಿಟ್ಟುಸಿರನ್ನು ಬಿಡುತ್ತ; ಬೆಂಡು+ಆದಪನು;

ಬೆಂಡಾದಪನು=ಬಲಹೀನನಾಗುತ್ತಾನೆ/ಸಂಕಟದ ತೀವ್ರತೆಯಿಂದ ದೇಹದ ಶಕ್ತಿ ಕುಗ್ಗುವುದು;

ಬಿಡದೆಬಿಸುಸುಯ್ದುಬೆಂಡಾದಪನು=ಸಂಕಟದಲ್ಲಿ ಬೇಯುತ್ತ ಒಂದೇ ಸಮನೆ ನಿಟ್ಟುಸಿರನ್ನು ಬಿಡುತ್ತ ಸುಸ್ತಾಗುವನು;

ಪೊಡೆಮರಳ್=ಹೊರಳು/ಉರುಳು;

ಪೋದಪನು ಪೊಡೆಮರಳ್ವನು ನಿಲ್ವನು ಅಳಲುವನು ಬಳಲುವನು=ಮುಂದಕ್ಕೆ ಅಡಿಯಿಡುವನು… ಮತ್ತೆ ಹಿಂದಕ್ಕೆ ಬರುವನು… ಸೀತೆಯಿರುವ ಕಡೆಗೆ ಹೋಗಲಾಗದೆ ನಿಲ್ಲುವನು… ಸಂಕಟದಿಂದ ಅಳುವನು… ಶೋಕದ ತೀವ್ರತೆಯಿಂದ ಸುಸ್ತಾಗುವನು;

ಬಟ್ಟೆಯೊಳು=ದಾರಿಯಲ್ಲಿ; ದಿಟ್ಟಿ+ಕೆಟ್ಟು; ದಿಟ್ಟಿಗೆಟ್ಟು=ಕಣ್ಣು ಮಂಜಾಗಿ;

ಬಟ್ಟೆಯೊಳುದಿ ಟ್ಟಿಗೆಟ್ಟು=ದಾರಿಯಲ್ಲಿ ನಡೆದುಬರುತ್ತಿರುವಾಗ ಕಣ್ಣುಗಳು ಮಂಜಾಗಿ ಮುಂದಕ್ಕೆ ಅಡಿಯಿಡಲಾಗದೆ ನರಳುವನು; ಬಿಚ್ಚು=ಅಗಲು/ಬೇರೆ ಮಾಡು; ಒಯ್ಯನೆ=ಮೆಲ್ಲಗೆ; ಅತ್ಯಾಯಾಸ=ಹೆಚ್ಚಿನ ಬಳಲಿಕೆ;;

ತಾಯನು ಎಳೆಗರು ಬಿಚ್ಚುವಂತೆ ಒಯ್ಯನೊಯ್ಯನೆ ಅತ್ಯಾಯಾಸದಿಂದೆ ಅಗಲ್ದು=ತಾಯಿ ಹಸುವಿನಿಂದ ಎಳೆಗರುವು ಅಗಲುವಂತೆ ಮೆಲ್ಲಮೆಲ್ಲನೆ ಅಂದರೆ ಬಹಳ ಪ್ರಯಾಸದಿಂದ ಸೀತಾದೇವಿಯಿಂದ ದೂರ ದೂರ ಬಂದು; ಅಮರನದಿ=ಗಂಗಾ ನದಿ;

ಅಮರನದಿಯನು ದಾಂಟಿ=ಗಂಗಾ ನದಿಯನ್ನು ದಾಟಿ; ದುಃಖ+ಆರ್ತನ್+ಆಗಿ; ಆರ್ತ=; ಅತ್ತಲು=ಆ ಕಡೆ/ಅಯೋಧ್ಯೆಯ ಕಡೆಗೆ;

ದುಃಖಾರ್ತನಾಗಿ ಅತ್ತಲು ಸೌಮಿತ್ರಿ ಸಾಗಿದನು=ಸಂಕಟದಲ್ಲಿ ನರಳುತ್ತ ಅಯೋದ್ಯೆಯ ಕಡೆಗೆ ಲಕ್ಶ್ಮಣನು ನಡೆದನು;

(ಚಿತ್ರ ಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks