ಹಾಸ್ಯ ಬರಹ: ಬಗ್ನ ಕನಸು

– .

 

ಒಂದು ಪುಟ್ಟ ಹಳ್ಳಿ, ಆ ಹಳ್ಳಿಗೆ ಒಂದೋ ಎರಡೋ ಬಸ್ ಬಂದು ಹೋಗುತ್ತವೆ. ರಾತ್ರಿ ಬಂದ ಬಸ್ ಅಲ್ಲೆ ಹಾಲ್ಟಾಗಿ ಮತ್ತೆ ಬೆಳಿಗ್ಗೆ ಏಳು ಗಂಟೆಗೆ ಹೊರಡುತ್ತದೆ. ಪುಟ್ಟಕ್ಕನ ಸಣ್ಣ ಕ್ಯಾಂಟಿನ್ ಊರಿನ ಪಂಚತಾರ ಹೋಟೆಲ್ ಇದ್ದಂತೆಯೇ ಸರಿ. ವಿದಿ ಇಲ್ಲದೆ ಡ್ರೈವರ್ ಬಸ್ಸನ್ನು ಪುಟ್ಟಕ್ಕನ ಕ್ಯಾಂಟಿನ್ ಬದಿಗೆ ನಿಲ್ಲಿಸಿ, ಅವರಿಟ್ಟ ರಾಗಿ ಮುದ್ದೇನೋ, ಅನ್ನಾನೋ ಉಣ್ಕೊಂಡು ರಾತ್ರಿಯೆಲ್ಲ ಸೊಳ್ಳೆಗಳಿಂದ ಕಡಿಸಿಕೊಂಡು ಆ ಬಸ್ಸಲ್ಲೆ ಮಲಗುತ್ತಿದ್ದ. ಜೊತೆಗೆ ಕಂಡಕ್ಟರ್ ಕೂಡ ಜಂಟಿ. ಆ ಊರಿನ ಜನರಿಗೆ ಇವರನ್ನು ಕಂಡರೆ ಅಂಬಾರಿ ನಡೆಸೊ ಮಾವುತರಂತೆ ಅತ್ಯಂತ ಗೌರವ. ಪುಟ್ಟಕ್ಕನು ಅವರಿಗಿಟ್ಟ ಮುದ್ದೆ ಅನ್ನ ಸಾರಿಗೆ ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ನಾಶ್ಟ ಕಾಪಿನೂ ಪ್ರೀ. ಆ ಕ್ಯಾಂಟಿನ್ನಿನಲ್ಲಿ ಕ್ಲೀನಿಂಗ್ ಕೆಲಸ ಮಾಡೋ ಮುನಿಯ ಪುಟ್ಟಕ್ಕನಿಗೆ ಜಾತ್ರೆಯಲ್ಲಿ ಸಿಕ್ಕವನು. ಅವನನ್ನು ತಂದು ಜೋಪಾನ ಮಾಡಿದ್ದಳು ಪುಟ್ಟಕ್ಕ. ಈಗ ಅವನು ಕ್ಯಾಂಟಿನ್ ಕೆಲಸಕ್ಕೆ ನೆರವಾಗುತ್ತಿದ್ದಾನೆ. ಈತನ ಮಾತು ತೊದಲುತ್ತಿದ್ದವು, ಮಾತಿನಲ್ಲಿ ಸ್ಪಶ್ಟತೆ ಇರಲಿಲ್ಲ. ಜೊತೆಗೆ ನಿದ್ದೆಯಲ್ಲಿ ಎದ್ದು ಬಡ ಬಡಿಸುತ್ತ ಓಡಾಡುವ ಕಾಯಿಲೆ ಬೇರೆ. ಕ್ಯಾಂಟಿನ್ ಕೆಲಸ ಮುಗಿದ ಮೇಲೆ ಪಾತ್ರೆಯೆಲ್ಲ ತೊಳೆದು ಸ್ವಚ್ಚ ಮಾಡಿ ಮುನಿಯ ಅಲ್ಲೆ ಚಾಪೆ ಹಾಸಿಕೊಂಡು ಮಲಗಿ ಬಿಡುತ್ತಿದ್ದ.

ಮುನಿಯನ ಹೆಬ್ಬಯಕೆ ಏನೆಂದರೆ ಬೆಂಗಳೂರಿಗೆ ಹೋಗಿ ತನ್ನ ಕನಸಲ್ಲಿ ಕಾಡುವ ಹೀರೋ ಪುನೀತ್ ರಾಜ್ ಕುಮಾರ್ ನನ್ನು ಬೇಟಿಯಾಗುವುದು. (ಇದು ಪುನೀತ್ ರಾಜಕುಮಾರ್ ಅವರು ತೀರಿಕೊಳ್ಳುವುದಕ್ಕೂ ಮೊದಲು). ಅದಕ್ಕಾಗಿ ತನ್ನ ಸ್ನೇಹಿತ ಶಂಕ್ರನಿಗೆ ದುಂಬಾಲು ಬಿದ್ದಿದ್ದ. “ಶಂಕ್ರ ಒಂದ್ ಸರ‍್ತಿ ಬೆಂಗಳೂರ‍್ಗೆ ಹೋಗಿ ಪುನೀತಣ್ಣನ್ನ ನೋಡಿ ಮಾತಾಡಸ್ಕೊಂಡು ಬರ‍್ಬೇಕು ಕಲ” ಎಂದ. ಶಂಕರ “ಬೆಂಗಳೂರಿಗೆ ಹೋಗೊದು ಹುಡುಗಾಟ ಅನ್ಕಂಡಿಯೇ, ಅದ್ಕೆ ಶಾನೆ ದುಡ್ಡು ಬೇಕು”

“ಎಶ್ಟ್ ಬೇಕಾದತ್ಲ?” ಎಂದ ಮುನಿಯ, “ಅಯ್ ಬುಡು ಅದ್ಕೆ ಇನ್ನೂರ್ ರೂಪಾಯಿ ಆದ್ರೂ ಬೇಕು, ನಿನ್ನತ್ರ ಕಾಸು ಎಶ್ಟದೆ?” ಎಂದು ಕೇಳಿದ ಶಂಕರ. ಇವನು ತನ್ನ ಚಡ್ಡಿ ಜೇಬಲ್ಲಿ ಇಟ್ಟಿದ್ದ ಚಿಲ್ರೆ ಕಾಸು ಮುದುರಿದ ಐದು ಹತ್ತರ ನೋಟು ತೆಗೆದು ಎಣಿಸಿದರೆ ಅದು ಐವತ್ತು ರೂಪಾಯಿಯೂ ದಾಟಲಿಲ್ಲ. ನಿರಾಶೆ ಆದ್ರೂ “ಏನ್ ಮಾಡೋದು ಶಂಕ್ರ…? ನೀನು ಏನಾದ್ರೂ ಸಹಾಯ ಮಾಡ್ಲ” ಎಂದರೆ, ಶಂಕ್ರ “ಮುನಿಯ ನೀನ್ಗೇನು ಹುಚ್ಚೆ, ಇನ್ನೂರು ರೂಪಾಯಿ ಕೂಡ್ಸೂದೊ ಸಾಮಾನ್ಯ ಏನ್ಲ? ನೀನು ಪುಟ್ಟಕ್ಕನ್ನೇ ಯಾಕ್ ಕೇಳ್ಬಾರ‍್ದು” ಎಂದ. ಮುನಿಯ “ಏನಿಲ್ಲ ಮತ್ತೆ ಕುಂಡೆ ಮೇಲೆ ಬರೆ ಹಾಕಿ ಕೂರಕ್ ಬರ‍್ದಂಗೆ ಮಾಡಿ ಬಿಡ್ತಾಳಶ್ಟೇ, ಶಂಕ್ರ ನೀನೆ ಏನಾದ್ರೂ ಸಹಾಯ ಮಾಡ್ಲ” ಎಂದು ಗೋಗರೆದಾಗ ಶಂಕ್ರನಿಗೆ ತನ್ನ ಸ್ನೇಹಿತನ ಆಸೆ ಕಂಡು ಮರುಕ ಹುಟ್ಟದಿರಲಿಲ್ಲ. ತನ್ನ ಮನೆಯ ದೇವರ ಕೋಣೆಯಲ್ಲಿ ತನ್ನ ಮುತ್ತಾತನ ಕಾಲದ ಬೆಳ್ಳಿ ಚೊಂಬೊಂದು ಆತನ ಕಣ್ಣು ಮುಂದೆ ಹಾದು ಹೋಯ್ತು. ಮನೆಯಲ್ಲಿ ಹಿರಿಯರು ಆ “ಚೊಂಬು ಮಾರಿದ್ರೆ ಇನ್ನೂರು ರೂಪಾಯಿಗೇನು ಮೋಸ ಇಲ್ಲ” ಎಂದು ಮಾತಾಡೊದನ್ನು ಕೇಳಿದ್ದ. ಶಂಕ್ರ ಮುನಿಯನಿಗೆ “ಇರು ಬಂದೆ” ಎಂದು ಹೇಳಿ ಹೊರಟ. ಒಂದು ಗಂಟೆ ಬಿಟ್ಕೊಂಡು ತನ್ನ ಅಂಗಿಯೊಳಗೆ ಬಚ್ಚಿಟ್ಟುಕೊಂಡು ತಂದಿದ್ದ ಬೆಳ್ಳಿ ಚೊಂಬು ಆತನಿಗೆ ಕೊಡುತ್ತ “ನೋಡು ಇದು ಮಾರಿದ್ರೆ ಇನ್ನೂರು ರೂಪಾಯಿ ಬರ‍್ತದೆ, ಇಲ್ಲ ಇದನ್ನೆ ಕಂಡಕ್ಟರ್ ಅಣ್ಣನಿಗೆ ಕೊಟ್ಟು ನನಗೆ ಬೆಂಗಳೂರಿಗೆ ಕರ‍್ಕೊಂಡು ಹೋಗಿ ಬಿಡಣ್ಣೋ ಎಂದು ಗೋಗರಿ ಸಹಾಯ ಮಾಡ್ತಾನೆ” ಎಂದ ಶಂಕ್ರ ಅಲ್ಲಿಂದ ಅಳುಕುತ್ತಲೇ ಕಾಲು ಕಿತ್ತ.

ಹಳ್ಳಿ ಗಾಡ ನಿದ್ದೆಯಲ್ಲಿದೆ. ಬೀದಿ ದೀಪಗಳಿಲ್ಲದೆ ಎತ್ತ ನೋಡಿದರೂ ಕತ್ತಲೊ ಕತ್ತಲು. ಅಂದು ಅಮಾವಾಸ್ಯೆ ಬೇರೆ. ದರಿದ್ರ ನಾಯಿಗಳು ನಡು ರಸ್ತೆಯಲ್ಲಿ ನಿಂತು ಊಳಿಡುತ್ತಿವೆ. ಅತ್ತ ಹೊಲಗಳಿಗೆ ನುಗ್ಗಿದ ನರಿಗಳೂ ಊಳಿಡುತ್ತಿವೆ. ರಾತ್ರಿ ಸುಮಾರು ಹನ್ನೆರಡು ಗಂಟೆ ಇರಬಹುದು. ನಡು ರಾತ್ರಿ ಎಂದರೆ ದೆವ್ವಗಳು ಓಡಾಡುವ ಸಮಯ ಎಂಬುದು ಹಳ್ಳಿಗರ ಅಬಿಪ್ರಾಯ. ಮುನಿಯ ಬೆಂಗಳೂರಿಗೆ ಹೋಗಿ ಪುನೀತ್ ರಾಜ್ ಕುಮಾರ್ ನನ್ನು ನೋಡುವ ಹೆಬ್ಬಯಕೆಯೊಂದಿಗೆ ಶಂಕ್ರ ತಂದುಕೊಟ್ಟ ಬೆಳ್ಳಿ ಚೊಂಬನ್ನು ಹೊಟ್ಟೆಯ ಬಳಿ ಇಟ್ಟುಕೊಂಡು ಮಲಗಿದವ ಸರಿ ರಾತ್ರಿಯಲ್ಲಿ ಎದ್ದು ಬಿಟ್ಟ. ಅವನಿಗೆ ನಿದ್ರೆಯಲ್ಲಿ ನಡೆಯುವ ಚಟ ಬೇರೆ ಇದೆ “ಅಣ್ಣ ಈ ಚೊಂಬು ತಗೋ ಬೆಂಗ್ಳೂರಿಗೆ ಟಿಕೆಟ್ ಕೊಡು ಪುನೀತಣ್ಣನ್ನ ನೋಡ್ಬೇಕು” ಎಂದು ಬಡ ಬಡಿಸುತ್ತ ಆ ಕತ್ತಲೆಯಲ್ಲೇ ಕ್ಯಾಂಟಿನ್ ಪಕ್ಕದಲ್ಲಿ ನಿಲ್ಲಿಸಿದ್ದ ಬಸ್ಸಿನತ್ತ ನಡೆದು ಹೊರಟ. ಡ್ರೈವರ್ ಓಡಿಸೋ ಲಟಗಾಸು ಬಸ್ಸಿಗೆ ಬಾಗಿಲು ಬೇರೆ ಇಲ್ಲ. ನಿದ್ದೆಯಲ್ಲಿ ನಡೆಯುತ್ತ ಬಡಬಡಿಸುತ್ತ ಮುನಿಯ ಸೀದಾ ಬಸ್ಸು ಹತ್ತಿದ. ಕಂಡಕ್ಟ‍ರ್ ಸೀಟುಗಳನ್ನು ಕೂಡಿಸಿ ಹಾಸಿಗೆ ಮಾಡಿ ಮುಕದ ತುಂಬ ರಗ್ಗು ಹೊದ್ದು ಗೊರಕೆ ಹೊಡೆಯುತ್ತ ಗಾಡ ನಿದ್ರೆಯಲ್ಲಿದ್ದ. ಮುನಿಯ ಅರೆ ಮಂಪರಿನಲ್ಲಿ ಆ ಕತ್ತಲೆಯಲ್ಲಿಯೇ ಮಲಗಿದ್ದ ಕಂಡಕ್ಟರ್ ಬಳಿ ಹೋಗಿ ಬುಜ ಹಿಡಿದು ಅಲುಗಾಡಿಸುತ್ತ “ಅಣ್ಣ ಈ ಚೊಂಬು ತಗೋ ಬೆಂಗ್ಳೂರಿಗೆ ಟಿ‍ಕೆಟ್ ಕೊಡು ಪುನೀತಣ್ಣನ್ನ ನೋಡ್ಬೇಕು” ಎಂದು ಸತತವಾಗಿ ಬಡಬಡಿಸುತಿದ್ದ.

ಗಾಡ ನಿದ್ರೆಯಲ್ಲಿದ್ದ ಕಂಡಕ್ಟರ್ ಗೆ ಗಾಬರಿಯಿಂದ ಎಚ್ಚರವಾಯ್ತು. ಆ ಕತ್ತಲೆಯಲ್ಲಿ ಅಸ್ಪಶ್ಟ ಆಕ್ರುತಿ ಮತ್ತು ಬಿಕ್ಲ ಮುನಿಯನ ಅಸ್ಪಶ್ಟ ಬಡಬಡಿಕೆ ಬಿಟ್ಟರೆ ಮತ್ತೆಲ್ಲವೂ ನೀರವ ಮೌನ. ಕಂಗಾಲಾದ ಕಂಡಕ್ಟರ್ ಹೆದರಿ ಇದು ಯಾವುದೋ ಬೂತದ ಚೇಶ್ಟೆಯೇ ಸರಿ, ಅಲ್ಲದೆ ಇವತ್ತು ಅಮಾವಾಸ್ಯೆ ಬೇರೆ ಎಂದು ನೆನೆದಾಗ ಆತನ ಮೈ‍ಯ್ಯೆಲ್ಲಾ ಬೆವರಿನಿಂದ ತೊಯ್ದು ಹೊಯ್ತು. ಒಂದೇ ಏಟಿಗೆ ಮೈಮೇಲಿನ ಹೊದಿಕೆ ಕಿತ್ತೆಸೆದು “ಡ್ರೈವರಣ್ಣ ಗಾಡಿಯೊಳ್ಗೆ ದೆವ್ವ ಬಂದಿದೆ ಓಡು” ಎಂದು ಮಲಗಿದ್ದ ಡ್ರೈವರ‍್ಗೂ ಎಬ್ಬಿಸಿ ಒಂದೇ ಏಟಿಗೆ ಡ್ರೈವರ್ ಸೀಟಿನ ಬಾಗಿಲು ತೆಗೆದು ಹಾರಿ ಪುಟ್ಟಕ್ಕನ ಮನೆಯ ಕಡೆಗೆ ಓಡಿ ಇಬ್ಬರೂ ಬಾಗಿಲು ಬಡಿಯತೊಡಗಿದರು. ಪುಟ್ಟಕ್ಕ ಗಾಬರಿಯಿಂದ ಬಾಗ್ಲು ತೆಗೆದು “ಏನಾಯ್ತ್ರಣ್ಣ…? ಎಂದಾಗ ಬಾಯಲ್ಲಿ ಮಾತೆ ಹೊರಡದ ಕಂಡಕ್ಟರ್ “ದೆವ್ವ…ದೆವ್ವ…” ಎಂದು ಅಸ್ಪಶ್ಟವಾಗಿ ಒದರುತ್ತಿದ್ದ. “ಎಲ್ಲಿ ದೆವ್ವ?” ಎಂದು ಪುಟ್ಟಕ್ಕ ಕೇಳಿದಾಗ “ಬಸ್ಸಲ್ಲಿ… ಬಸ್ಸಲ್ಲಿ…” ಎಂದ ಕಂಡಕ್ಟರ್. ದೈರ‍್ಯಗಿತ್ತಿ ಪುಟ್ಟಕ್ಕ ಲಾಟೀನು ಹಿಡಿದು “ಅದೆಂತ ದೆವ್ವ ಬರ‍್ರಿ ನೋಡಾನ” ಎಂದು ಮುಂದೆ ನಡೆದು ಬಸ್ ಹತ್ತಿದಳು. ಲಾಟೀನು ಬೆಳಕಿನಲ್ಲಿ ನೋಡಿದರೆ ತನ್ನ ಕ್ಯಾಂಟಿನ್ ಮುನಿಯ ಬಸ್ಸ ಸೀಟಿಗೆ ಒರಗಿ ಬಡಬಡಿಸುತಿದ್ದಾನೆ. ಪುಟ್ಟಕ್ಕ ಆತನ ಕೆನ್ನೆಗೆ ‍ರಪ್ ಅಂತ ಒಂದು ಏಟು ಬಿಗಿದು “ಎದ್ದೇಳ್ಲ ಮೂದೇವಿ, ನಿನಗೆ ನಿದ್ದೇಲಿ ಓಡಾಡೋ ಚಟಕ್ಕೂ, ಆ ಬಡಬಡಿಕೆಗೂ ಕತ್ಲಲ್ಲಿ ನಿನ್ನ ದೆವ್ವ ಅಲ್ದೆ ಮತ್ತೇನ್ ಅನ್ಕೊಂಡಾರು” ಎಂದಾಗ ಮುನಿಯನ ಮಂಪರು ಹಾರಿ ಹೋಗಿ ವಾಸ್ತವಕ್ಕೆ ಬಂದಿದ್ದ. ಆದ್ರೆ ಆ ಗಡಿಬಿಡಿಯಲ್ಲಿ ತಾನು ಹಿಡಿದಿದ್ದ ಬೆಳ್ಳಿ ಚೊಂಬು ಜಾರಿ ಯಾವುದೋ ಸೀಟಿನ ಅಡಿಗೆ ಸೇರಿತ್ತು. ನಾಳೆ ಬಸ್ಸಲ್ಲಿ ಚೊಂಬು ಸಿಕ್ಕವರಿಗೆ ಸೀರುಂಡೆ. ಅದು ದೆವ್ವ ಅಲ್ಲ ಮುನಿಯ ಎಂದು ತಿಳಿದ ಡ್ರೈವರ್, ಕಂಡಕ್ಟ‍ರ್ ನಿಟ್ಟುಸಿರು ಬಿಟ್ಟಿದ್ದರು. ಆದರೆ ಅವರಿಗೆ ನಿದ್ರೆ ಮಾತ್ರ ಹತ್ತಲಿಲ್ಲ. ಬೆಂಗಳೂರಿಗೆ ಹೋಗಿ ಪುನೀತ್ ರಾಜಕುಮಾರ್ ನನ್ನು ಕಾಣುವ ಮುನಿಯನ ಕನಸು ಮಾತ್ರ ಶ್ಯಾನೆ ಬಗ್ನಗೊಂಡಿತ್ತು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: