ಹೊಂಗಾರೆ ದಾಸಪ್ಪನವರ ಕುರ‍್ಚಿ

–  ಡಾ. ವಿಶ್ವನಾತ ಎನ್. ನೇರಳಕಟ್ಟೆ.

ಬರತಪುರದಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿಗಿದ್ದ ಗೌರವ ಮುಕ್ಯಮಂತ್ರಿಗಳ ಕುರ‍್ಚಿಗಿಂತಲೂ ಸ್ವಲ್ಪ ಹೆಚ್ಚಿನದೇ ಎನ್ನುವುದು ಬರತಪುರದ ಎಲ್ಲರಿಗೂ ಇದ್ದ ನಂಬಿಕೆ. ಹೊಂಗಾರೆ ಮನೆತನವೆಂದರೆ ನ್ಯಾಯತೀರ‍್ಮಾನಕ್ಕೆ ಹೆಸರುವಾಸಿ. ಕಳೆದ ಆರು ತಲೆಮಾರುಗಳಲ್ಲಿಯೂ ಬರತಪುರದಲ್ಲಿ ಉದ್ಬವಿಸಿದ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಗಾರಿಕೆಯನ್ನು ನಿಬಾಯಿಸಿದ್ದು ಆ ಮನೆಯವರೇ. ಇಂತಹ ಜವಾಬ್ದಾರಿಯನ್ನು ಹಿಂದಿವನರಿಗಿಂತಲೂ ಹೆಚ್ಚು ಸಮರ‍್ತವಾಗಿ ನಿರ‍್ವಹಿಸಿದವರೆಂದರೆ ಹೊಂಗಾರೆ ದಾಸಪ್ಪನವರು. ಹಿಂದಿನ ಎರಡು ತಲೆಮಾರುಗಳ ನ್ಯಾಯತೀರ‍್ಮಾನದ ಬಗೆಯನ್ನು ಕಾಣುತ್ತಲೇ ಬಂದಿದ್ದ ಅವರು ತನ್ನ ಅಜ್ಜ, ಅಪ್ಪನಿಗಿಂತಲೂ ದಕ್ಶತೆಯಿಂದ ಕಾರ‍್ಯನಿರ‍್ವಹಿಸುವ ಪರಿಪಾಟ ಬೆಳೆಸಿಕೊಂಡಿದ್ದರು. ಈ ಕಾರಣದಿಂದಲೇ ಹೊಂಗಾರೆ ಮನೆತನದ ಕುರ‍್ಚಿಯಾಗಿದ್ದದ್ದು ಅವರ ಕಾಲದಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿಯಾಗಿ ಮಾರ‍್ಪಟ್ಟಿತ್ತು. ಆ ಕುರ‍್ಚಿಯಲ್ಲಿ ಕುಳಿತು ನ್ಯಾಯ ತೀರ‍್ಮಾನಿಸುವುದೆಂದರೆ ಅದೊಂದು ದೊಡ್ಡ ಗೌರವ ಎನ್ನುವ ಬಾವನೆ ಬೆಳೆದು ಬಲಗೊಂಡಿತ್ತು. ಕುರ‍್ಚಿಯಲ್ಲಿ ಕುಳಿತವರು ನೀಡುವ ಅಬಿಪ್ರಾಯ ಅವರದ್ದಲ್ಲ, ದೇವರೇ ಅವರ ಬಾಯಿಯಲ್ಲಿ ನುಡಿಸುವಂತದ್ದು ಎಂಬ ಅಲೌಕಿಕ ನಂಬಿಕೆ ಸ್ರುಶ್ಟಿಯಾಗಿತ್ತು. ಇದರಿಂದಾಗಿ ಆ ಕುರ‍್ಚಿ ಮೇಲೆ ಕುಳಿತು ನೀಡಿದ ತೀರ‍್ಮಾನವನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಇಂತಹ ಹಿರಿಮೆ ಹೊಂದಿದ್ದ ಹೊಂಗಾರೆ ದಾಸಪ್ಪನವರ ಕುರ‍್ಚಿ ಗಡಿಮೀರಿದ ಜನಪ್ರಿಯತೆ ಗಳಿಸಿಕೊಂಡದ್ದು ದಾಸಪ್ಪನವರಿಗಿಂತ ಎರಡು ತಲೆಮಾರು ನಂತರದ ಹೊನ್ನಪ್ಪನವರಿಂದಾಗಿ. ಹುಟ್ಟುವಾಗಲೇ ಮಾತಿನ ಕೌಶಲ್ಯವನ್ನು ಪಡೆದುಕೊಂಡೇ ಬಂದಿದ್ದ ಹೊನ್ನಪ್ಪನವರು ಬರತಪುರದ ಹೊರಗೂ ಸಹ ಬಾಶಣಕಾರರಾಗಿ ಹೆಸರು ಮಾಡಿದ್ದರು. ಇದರಿಂದಾಗಿ ಅವರ ನ್ಯಾಯತೀರ‍್ಮಾನದ ಕುರ‍್ಚಿಯೂ ಸಹ ಜನಪ್ರಿಯತೆ ಪಡೆದಿತ್ತು. ಬರತಪುರದಾಚೆಯವರೂ ಸಹ ಅವರಲ್ಲಿಗೆ ನ್ಯಾಯತೀರ‍್ಮಾನಕ್ಕೆ ಬರುತ್ತಿದ್ದರು

ಹೀಗೆ ನ್ಯಾಯತೀರ‍್ಮಾನಕ್ಕೆಂದು ಬಂದ ಒಬ್ಬ ವ್ಯಕ್ತಿ ಹೊನ್ನಪ್ಪನವರ ತೀರ‍್ಪು ಕೇಳಿ ಸಂತಸಗೊಂಡು, ದುಬಾರಿ ವಾಚೊಂದನ್ನು ಉಡುಗೊರೆ ನೀಡಿದ. ಇದನ್ನು ಸುತ್ತಮುತ್ತಲಿದ್ದ ಜನರು ಗಮನಿಸಿದರು. ಸುದ್ದಿ ಬಾಯಿಯಿಂದ ಬಾಯಿಗೆ ಹರಡಿತು. ನ್ಯಾಯತೀರ‍್ಮಾನಕ್ಕೆ ಬರುವವರು ಉಡುಗೊರೆಯೊಂದನ್ನು ಹೊತ್ತು ತರುವುದು ಕಾಯಮ್ಮಾಯಿತು. ಸದ್ದೇ ಇಲ್ಲದೆ ನ್ಯಾಯತೀರ‍್ಮಾನದ ಕುರ‍್ಚಿಯ ಪಕ್ಕದಲ್ಲಿಯೇ ಕಾಣಿಕೆ ಹುಂಡಿಯೊಂದು ತಲೆಎತ್ತಿತು. ನ್ಯಾಯ ಪಡೆಯುವ ಉದ್ದೇಶ ಹೊತ್ತುಬಂದವರು ಕಿಸೆಯಿಂದ ಕೈಗೆ ಬಂದಶ್ಟನ್ನು ಕಾಣಿಕೆ ಹುಂಡಿಗೆ ಹಾಕಿ ತ್ರುಪ್ತರಾಗುತ್ತಿದ್ದರು. ವಾರದ ಕೊನೆಗೆ ಲೆಕ್ಕ ಹಾಕಿದರೆ ಅಚ್ಚರಿಪಡುವಶ್ಟು ಹಣ ಅದರಲ್ಲಿರುತ್ತಿತ್ತು. ವಾಸ್ತವವಾಗಿ ಹೊನ್ನಪ್ಪನವರಿಗೆ ಇದೆಲ್ಲಾ ಇಶ್ಟ ಇರಲಿಲ್ಲ. ನ್ಯಾಯತೀರ‍್ಮಾನ ಮಾಡುವುದೆಂದರೆ ಅದು ಜನರ ಸೇವೆ ಮಾಡುವ ಬಲುದೊಡ್ಡ ಅವಕಾಶ ಎಂಬ ನಂಬಿಕೆ ಅವರಲ್ಲಿತ್ತು. ಜನರು ಹಣ ಕೊಡುವುದನ್ನು ಅವರು ಬಯಸಿದವರೇ ಅಲ್ಲ. ಆದರೆ ಜನರು ಅವರಾಗಿಯೇ ಹಣ ಕೊಡುತ್ತಿರುವಾಗ ಬೇಡ ಎಂದರೆ ಜನರೆಲ್ಲಿ ನೊಂದುಕೊಳ್ಳುತ್ತಾರೋ, ದೊಡ್ಡಸ್ತಿಕೆ ಎಂದುಕೊಳ್ಳುತ್ತಾರೋ ಎಂಬ ವಿಪರೀತ ಮುಜುಗರ ಅವರಲ್ಲಿತ್ತು. ಜೊತೆಗೆ ಅವರ ಹೆಂಡತಿ ಮತ್ತು ಮಗ “ಹಣ ಅದಾಗಿಯೇ ಬರುವಾಗ ಬೇಡ ಎನ್ನುವುದು ಲಕ್ಶ್ಮಿಗೆ ಅವಮಾನ ಮಾಡಿದಂತೆ” ಎಂದು ಹೇಳಿ, ಅವರ ಬಾಯಿ ಮುಚ್ಚಿಸಿದ್ದರು. ಕಾಲ ಕಳೆದುಹೋಯಿತು. ಹೊನ್ನಪ್ಪನವರು ತೀರಿಕೊಂಡಿದ್ದರು. ಈಗ ಕುರ‍್ಚಿ ಮೇಲೆ ಕೂರುವ ಅವಕಾಶ ಅವರ ಮಗ ದರ‍್ಮಪ್ಪನದ್ದು. ಈ ಕಾಲದಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿ ಬೇರೆಯದೇ ಆಯಾಮವೊಂದನ್ನು ಪಡೆದುಕೊಂಡಿತು. ಹಳೆಯ ಸಣ್ಣ ಕಾಣಿಕೆ ಹುಂಡಿಯನ್ನು ಬದಿಗೆ ತಳ್ಳಿ ಅದರ ಜಾಗದಲ್ಲಿ ದೊಡ್ಡ ಗಾತ್ರದ, ಅಗಲ ಬಾಯಿಯ ಕಾಣಿಕೆ ಹುಂಡಿ ಆಸೀನವಾಗಿತ್ತು. ನ್ಯಾಯ ಬೇಕೆಂದು ಬರುವವರು ದೊಡ್ಡ ಉಡುಗೊರೆ ತಂದಶ್ಟೂ ಹೆಚ್ಚು ಬೆಲೆ ದೊರಕುತ್ತಿತ್ತು. ಉಡುಗೊರೆ ನೋಡಿಯೇ ನ್ಯಾಯತೀರ‍್ಮಾನ ಆಗುತ್ತದೆ. ಹೆಚ್ಚು ಬೆಲೆಯ ಉಡುಗೊರೆ ಕೊಟ್ಟವರ ಪರವಾಗಿಯೇ ತೀರ‍್ಪು ಬರುವುದು ಎಂಬ ಸುದ್ದಿಯೂ ನಿದನಿದಾನಕ್ಕೆ ಹರಡತೊಡಗಿತು. ಇದರಿಂದಾಗಿ ಆ ಕುರ‍್ಚಿಯ ಗೌರವ ಕಡಿಮೆಯಾಗತೊಡಗಿತು. ಆದರೆ ಕೋರ‍್ಟಿಗೆ ಹೋಗಲು ಇಶ್ಟವಿಲ್ಲದ, ವಕೀಲರಿಗೆ ಆಗಾಗ ಕರ‍್ಚು ಮಾಡುವ ಸಾಮತ್ರ‍್ಯವಿಲ್ಲದವರು ಹೊಂಗಾರೆ ದಾಸಪ್ಪನ ಕುರ‍್ಚಿಗೇ ಶರಣು ಬರುತ್ತಿದ್ದರು.

****

ಈಗ ಆ ಕುರ‍್ಚಿ ತನ್ನ ಮೇಲೆ ಕೂರುವವರಿಲ್ಲದ ಪರಿಸ್ತಿತಿಯನ್ನು ಎದುರಿಸುವಂತಾಗಿತ್ತು. ದರ‍್ಮಪ್ಪನವರು ಐದು ತಿಂಗಳ ಹಿಂದೆ ತೀರಿಕೊಂಡಿದ್ದರು. ಅವರ ನಂತರ ಅವರ ಒಬ್ಬನೇ ಮಗ ತುಂಗಪ್ಪ ಆ ಕುರ‍್ಚಿ ಮೇಲೆ ಕುಳಿತಿದ್ದ. ನ್ಯಾಯತೀರ‍್ಮಾನವನ್ನೂ ಮಾಡಿದ್ದ. ಆದರೆ ಆ ನ್ಯಾಯತೀರ‍್ಮಾನವಾದ ಮಾರನೇ ದಿನವೇ ತುಂಗಪ್ಪ ಕಣ್ಮರೆಯಾಗಿದ್ದ. “ಸಂಜೆ ಬರುತ್ತೇನೆ” ಎಂದು ಹೇಳಿ, ಕಾರನ್ನು ಮನೆಯಲ್ಲೇ ಬಿಟ್ಟು, ಬಂದಿದ್ದವರ ಜೊತೆಗೆ ಅವರ ಕಾರಿನಲ್ಲೇ ಹೋಗಿದ್ದರು. ಅಶ್ಟೇ ಗೊತ್ತಿದ್ದದ್ದು ಅವನ ಹೆಂಡತಿಗೆ. ಹೋದದ್ದೆಲ್ಲಿಗೆ? ಏನಾಯಿತು? ಯಾವುದೂ ತಿಳಿಯಲಿಲ್ಲ. ಜನರನ್ನು ಕಳುಹಿಸಿ ಹುಡುಕಿದ್ದು, ಪೋಲೀಸ್ ಕಂಪ್ಲೇಂಟ್ ಕೊಟ್ಟದ್ದು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಐದು ತಿಂಗಳಾದರೂ ತುಂಗಪ್ಪನ ಸುಳಿವೇ ಇಲ್ಲ. ಬರತಪುರದ ಜನರೇ ಈಗ ಹೊಂಗಾರೆ ದಾಸಪ್ಪನವರ ಕುರ‍್ಚಿಯ ಬಗ್ಗೆ ಏನಾದರೂ ತೀರ‍್ಮಾನ ತೆಗೆದುಕೊಳ್ಳಬೇಕಿತ್ತು. ತುಂಗಪ್ಪನಿಗೆ ಗಂಡುಮಕ್ಕಳಿರಲಿಲ್ಲ. ಇದ್ದ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿಕೊಂಡಾಗಿದೆ. ಪರಿಸ್ತಿತಿ ಹೀಗಿರುವಾಗ ಇನ್ನುಮುಂದೆ ಆ ಕುರ‍್ಚಿಯಲ್ಲಿ ಕೂರುವವರು ಯಾರು ಎನ್ನುವುದನ್ನು ನಿರ‍್ದಾರ ಮಾಡುವುದಕ್ಕಾಗಿ ಊರಿನವರೆಲ್ಲರೂ ಹೊಂಗಾರೆ ಮನೆಯ ಮುಂದೆ ಸೇರಿಕೊಂಡಿದ್ದರು. ಊರಿನವರೆಲ್ಲಾ ಅಳೆದೂ ತೂಗಿ ನಿರ‍್ದರಿಸುವ ಉಸ್ತುವಾರಿಯನ್ನು ಬರತಪುರದ ಹಿರಿಯರಲ್ಲಿ ಹಿರಿಯರೆನಿಸಿಕೊಂಡಿದ್ದ ಮಾದಣ್ಣನವರ ಹೆಗಲಿಗೆ ಹೊರಿಸಿದ್ದರು. “ಈ ಕುರ‍್ಚಿಯ ಮಹತ್ವ ಏನು ಅಂತ ನಿಮಗೆಲ್ಲಾ ತಿಳಿದದ್ದೇ. ನಾನೇನೂ ಹೊಸದಾಗಿ ಹೇಳಬೇಕಾದ ಅಗತ್ಯ ಇಲ್ಲ. ಇಂತಹ ಜವಾಬ್ದಾರಿ ಹೊತ್ತಿದ್ದ ತುಂಗಪ್ಪ ಈಗ ಐದು ತಿಂಗಳಿನಿಂದ ಕಣ್ಮರೆ ಆಗಿರುವುದು ಬೇಸರದ ಸಂಗತಿ…” ಎಂದು ಮಾತು ಶುರುಮಾಡಿದ ಮಾದಣ್ಣ ನಿರ‍್ದಾರದಾಚೆ ಹೊರಳಿಕೊಂಡರು. “ತುಂಗಪ್ಪನಿಗೆ ಗಂಡುಮಕ್ಕಳಿಲ್ಲ. ತೀರ‍್ಮಾನ ಕೊಡಬೇಕಾದವರು ಹೊಂಗಾರೆ ಮನೆತನಕ್ಕೆ ಸೇರಿದವರೇ ಆಗಿರಬೇಕು. ಹಾಗಿದ್ದರೇ ಒಳ್ಳೆಯದು. ಆದ್ದರಿಂದ ತುಂಗಪ್ಪನ ತಂಗಿ ಗಿರಿಜೆಯ ಮಗ ಗಂಗಾದರ ಇನ್ನುಮುಂದೆ ಈ ಕುರ‍್ಚಿಯಲ್ಲಿ ಕುಳಿತುಕೊಳ್ಳಲಿ ಎನ್ನುವುದು ನನ್ನ ನಿರ‍್ದಾರ” ಎಂದರು. ಊರಿನವರೆಲ್ಲರೂ ಅದಕ್ಕೆ ಒಪ್ಪಿಗೆ ಇರುವಂತೆ ತಲೆಯಾಡಿಸಿದರು.

ಇನ್ನೇನು ಸಮಸ್ಯೆ ಬಗೆಹರಿಯಿತು ಎಂದು ಎಲ್ಲರೂ ನಿರಾಳರಾಗುವಶ್ಟರಲ್ಲಿ ನಾಟಕೀಯ ಸನ್ನಿವೇಶವೊಂದು ನಿರ‍್ಮಾಣಗೊಂಡಿತು. ಅಲ್ಲಿಗೆ ಬಂದ ಪುರುಶೋತ್ತಮ ಹೆಸರಿನ ಒಬ್ಬ ಯುವಕ ಮತ್ತು ಮದ್ಯವಯಸ್ಸಿನ ಹೆಂಗಸು ಬರತಪುರವೇ ಅಚ್ಚರಿಪಡುವ ವಿಚಾರವೊಂದನ್ನು ಹೇಳತೊಡಗಿದರು. ಅವರಿಬ್ಬರೂ ನುಡಿದ ಪ್ರಕಾರ, ತುಂಗಪ್ಪ ಹೆಂಡತಿಯಿದ್ದರೂ ಆ ಹೆಂಗಸಿನ ಜೊತೆ ಮೊದಲಿನಿಂದಲೂ ಸಂಬಂದ ಇಟ್ಟುಕೊಂಡಿದ್ದ. ಆಗಾಗ ಅವಳಲ್ಲಿಗೆ ಹೋಗಿಬರುತ್ತಿದ್ದ. ಆ ಸಂಬಂದದಲ್ಲಿ ಜನಿಸಿದವನೇ ಆ ಯುವಕ. ಕುರ‍್ಚಿ ಮೇಲೆ ಕೂರುವ ಅದಿಕಾರ ಏನಿದ್ದರೂ ತನ್ನ ಈ ಮಗನದ್ದು ಎನ್ನುವುದು ಆ ಹೆಂಗಸಿನ ವಾದ. ಈಗ ಸೇರಿದ್ದ ಜನರು ಬೇರೆ ಬೇರೆ ಅಬಿಪ್ರಾಯ ವ್ಯಕ್ತಪಡಿಸತೊಡಗಿದರು. ಪುರುಶೋತ್ತಮನಿಗೇ ನ್ಯಾಯತೀರ‍್ಮಾನದ ಜವಾಬ್ದಾರಿ ಕೊಡಬೇಕೆಂದು ಕೆಲವರು ಹೇಳಿದರು. ಇನ್ನೂ ಕೆಲವರು ಅಕ್ರಮ ಸಂಬಂದದಲ್ಲಿ ಜನಿಸಿದವನಿಗೆ ಆ ಅದಿಕಾರ ಕೊಡುವುದು ಸರಿಯಲ್ಲ ಎಂದರು. ಆ ಹೆಂಗಸು ಹೇಳಿದ್ದು ನಿಜ ಎಂದು ನಂಬುವುದಾದರೂ ಹೇಗೆ? ಎಂಬ ಪ್ರಶ್ನೆ ಕೆಲವರದ್ದು. ತುಂಗಪ್ಪನ ಹೆಂಡತಿ ಮೂಲೆಯಲ್ಲಿ ನಿಂತಿದ್ದವಳು ಈಗ ಎದುರಿಗೆ ಬಂದು “ನನ್ನ ಯಜಮಾನರಿಗೆ ಇಂತಹ ಸಂಬಂದವೆಲ್ಲಾ ಇರಲಿಲ್ಲ. ಅವರು ಅಂತವರಲ್ಲ. ಇವಳು ಸುಳ್ಳು ಬೊಗಳುತ್ತಿದ್ದಾಳೆ” ಎಂದು ಕೋಪದಿಂದ ಹೇಳತೊಡಗಿದಳು. ಮಾದಣ್ಣನವರು ಏನಾದರೂ ಹೇಳಿಯಾರು, ಸಮಸ್ಯೆ ಬಗೆಹರಿಸಿಯಾರು ಎಂದಂದುಕೊಂಡು ಊರವರೆಲ್ಲಾ ಅವರತ್ತ ತಿರುಗಿದರೆ ಅವರು ವಿಪರೀತ ನಿರಾಶೆಗೊಳಗಾದವರಂತೆ “ಎಲ್ಲವನ್ನೂ ಕಾಲವೇ ನೋಡಿಕೊಳ್ಳುತ್ತದೆ ಬಿಡಿ” ಎಂದು ಹೇಳಿ, ಅಲ್ಲಿಂದ ಹೊರಟುಹೋದರು. ಸರಿಯಾದ ತೀರ‍್ಮಾನ ಇಲ್ಲದೆಯೇ ಊರೆಲ್ಲಾ ಚದುರಿಹೋಯಿತು.

***

ಇದಾಗಿ ಒಂದು ವಾರ ಕಳೆಯುವಶ್ಟರಲ್ಲಿ ಊರಾಚೆಯ ತೋಪೊಂದರಲ್ಲಿ ಕೊಳೆತು ನಾರುತ್ತಿದ್ದ ಶವವೊಂದು ದೊರಕಿತು. ಊರವರೆಲ್ಲರೂ ಅದು ತುಂಗಪ್ಪನದೇ ಶವ ಎಂದುಕೊಂಡರು. ಆದರೆ ಆ ಶವ ಯಾವ ಪರಿಯಲ್ಲಿ ಕೊಳೆತುಹೋಗಿತ್ತೆಂದರೆ ಅದು ಯಾರದ್ದೆಂಬ ಗುರುತು ಸಿಗುವುದು ಸಾದ್ಯವೇ ಇರಲಿಲ್ಲ. ಪೋಲೀಸರನ್ನು ಕರೆಸಿದ್ದಾಯಿತು. ಶವವನ್ನು ಪರೀಕ್ಶೆಗೆ ಒಳಪಡಿಸಿದ್ದಾಯಿತು. ಹೊಂಗಾರೆ ಮನೆತನದ ಜೊತೆಗೆ ಹೊಂದಿಬರದ ಕಾರಣ ಅದು ತುಂಗಪ್ಪನ ಶವವಲ್ಲ ಎಂದು ರುಜುವಾತಾಯಿತು. ಅನಾತ ಶವವೆಂಬ ಹಣೆಪಟ್ಟಿ ಹೊತ್ತು ದಹನಕ್ಕೆ ಒಳಗಾಯಿತು.

***

ಪರಿಸ್ತಿತಿ ಹೀಗಿರುವಾಗಲೇ ಹೊಂಗಾರೆ ದಾಸಪ್ಪನ ಕುರ‍್ಚಿಗೊಂದು ವಾರಸುದಾರನನ್ನು ನೇಮಿಸುವ ಹೊಣೆಗಾರಿಕೆಯನ್ನು ತಾವೆಲ್ಲಾ ಅವಲಕ್ಶಿಸಿ ಕುಳಿತಿದ್ದೇವೆಂಬ ಬಾವ ಬರತಪುರದ ಎಲ್ಲರಲ್ಲೂ ಜಾಗ್ರುತವಾಯಿತು. ಬರತಪುರದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಸಮಸ್ಯೆ ಬಗೆಹರಿಸಲು ಪಂಚಾಯಿತಿ ಸೇರಿಸಲಾಯಿತು. ತುಂಗಪ್ಪನ ಮಗ ಎಂದು ಹೇಳಿಕೊಳ್ಳುತ್ತಿದ್ದ ಯುವಕ ಮತ್ತು ಅವನ ತಾಯಿಯನ್ನೂ ಕರೆಸಲಾಯಿತು. ಮಾದಣ್ಣನವರನ್ನೇ ಮುಕ್ಯಸ್ತರೆನ್ನುವ ರೀತಿಯಲ್ಲಿ ಕೂರಿಸಲಾಗಿತ್ತು. ತೀರ‍್ಮಾನವೊಂದನ್ನು ಕೈಗೊಳ್ಳಲಿದ್ದೇವೆ ಎಂಬ ಬರವಸೆಯಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿಯನ್ನು ತಂದಿಡಲಾಗಿತ್ತು.
ಹಿಂದೆ ನಡೆದ ಮಾತುಕತೆ, ವಾಗ್ವಾದಗಳಿಗೆಲ್ಲಾ ಮತ್ತೊಮ್ಮೆ ಮುನ್ನುಡಿ ಬರೆವಂತೆ ಮಾದಣ್ಣನವರು “ಈಗ ಕುರ‍್ಚಿಯ ಮೇಲೆ ಗಂಗಾದರನನ್ನು ಕೂರಿಸಬೇಕೋ ಅತವಾ ಪುರುಶೋತ್ತಮನನ್ನೋ ಎನ್ನುವುದೇ ಉಳಿದಿರುವ ಪ್ರಶ್ನೆ. ಅದನ್ನು ತೀರ‍್ಮಾನ ಮಾಡಿ ಮುಗಿಸಿದರೆ ನಮ್ಮ ಊರಿನ ಮೇಲಿರುವ ಬಲುದೊಡ್ಡ ಜವಾಬ್ದಾರಿಯನ್ನು ನೀಗಿಕೊಂಡಂತಾಗುತ್ತದೆ. ತುಂಗಪ್ಪ ಕಾಣೆಯಾದಾಗಿನಿಂದ ಯಾವ ನ್ಯಾಯ ತೀರ‍್ಮಾನವೂ ಆಗಿಲ್ಲ. ಇದು ನಮ್ಮ ಊರಿನ ಪರಂಪರೆಯೊಂದು ನಿಂತುಹೋಗಿರುವುದರ ಸಂಕೇತ. ಅದು ಮತ್ತೆ ಮೊದಲಿನ ಹಾಗೆಯೇ ಮುಂದುವರಿಯುವಂತೆ ನಾವೆಲ್ಲರೂ ಮಾಡಬೇಕು” ಎಂದವರು ಮಾತನ್ನೊಮ್ಮೆ ನಿಲ್ಲಿಸಿದರು.

ಅವರು ಮಾತು ನಿಲ್ಲಿಸುವುದಕ್ಕೇ ಕಾದಿದ್ದವನಂತೆ ಬೊಟ್ಯ ಎಂಬವನು “ಆ ಪುರುಶೋತ್ತಮ ತುಂಗಪ್ಪನವರಿಗೆ ಹುಟ್ಟಿದ್ದಾನೋ ಇಲ್ಲವೋ ಗೊತ್ತಿಲ್ಲದೆಯೇ ಅವನಿಗೆ ಅದಿಕಾರ ಕೊಡುವುದಾದರೂ ಹೇಗೆ? ರಕ್ತಸಂಬಂದ ಇರಬೇಕಲ್ಲಾ. ಅದು ಇದೆ ಅನ್ನುವುದಕ್ಕೆ ಸಾಕ್ಶಿ ಏನು?” ಎಂದ. “ಹಾಗಿದ್ದರೆ ಗಂಗಾದರನೂ ಕೂಡಾ ತುಂಗಪ್ಪನವರ ಮಗನೇನೂ ಅಲ್ಲ. ತಂಗಿಯ ಮಗ ಅಶ್ಟೇ. ಅವನು ವಾರಸುದಾರ ಆಗುತ್ತಾನಾ?” ಎಂದ ನೀಲಯ್ಯ.

ಬೊಟ್ಯನಿಗೂ ನೀಲಯ್ಯನಿಗೂ ಮದ್ಯೆ ಜೋರು ಜೋರು ಮಾತು ಬೆಳೆಯತೊಡಗಿತು. ಕಳೆದ ಎಂಟು ವರ‍್ಶಗಳಿಂದ ಅವರಿಬ್ಬರ ಮದ್ಯೆ ಸರಿಯಿಲ್ಲ ಎನ್ನುವುದು ಇಡೀ ಬರತಪುರಕ್ಕೇ ತಿಳಿದಿರುವ ವಿಚಾರ. ಇವರಿಬ್ಬರ ವಾದ ವಿವಾದ ಇನ್ನಶ್ಟು ಜನರ ಕೂಡುವಿಕೆ ಪಡೆದುಕೊಳ್ಳುತ್ತಾ ಹೀಗೆಯೇ ಮುಂದುವರಿಯುತ್ತಿತ್ತು.

ಅದನ್ನು ನಿಲ್ಲಿಸುವ ರೀತಿಯಲ್ಲಿ ಹೊನ್ನಯ್ಯ ಒಂದು ವಿಚಾರವನ್ನು ಪ್ರಸ್ತಾಪಿಸಿದ- “ತುಂಗಪ್ಪನವರ ಕಾರು ಚಾಲಕ ಇದ್ದಾನಲ್ಲಾ ಕಾಳ, ಅವನೇ ಅಲ್ಲವಾ ಇಪ್ಪತ್ತು ಮೂವತ್ತು ವರ‍್ಶದಿಂದಲೂ ಎಲ್ಲಾ ಕಡೆಗೂ ಅವರ ಜೊತೆಗೆ ಹೋಗುತ್ತಿದ್ದವನು? ಅಂದಮೇಲೆ ಅವನಿಗೆ ಈ ಪುರುಶೋತ್ತಮನ ಅಮ್ಮನ ಬಗ್ಗೆ ಗೊತ್ತಿರುತ್ತದೆ. ಅವನನ್ನೇ ಕೇಳಬಹುದಲ್ಲಾ?” ಪಂಚಾಯಿತಿ ಸೇರಿದ್ದ ಎಲ್ಲರಿಗೂ ಹೊನ್ನಯ್ಯನ ಮಾತು ಸರಿ ಎನಿಸಿತು. ಕಾಳನಿಗಾಗಿ ನೋಡತೊಡಗಿದರು. ಅವನು ಪಂಚಾಯಿತಿಯಲ್ಲಿರಲಿಲ್ಲ. ಅವನನ್ನು ಕರೆತರಲೆಂದು ಅವನ ಮನೆಗೆ ಜನರನ್ನು ಕಳಿಸಿದ್ದಾಯಿತು. ಅವನು ಮನೆಯಲ್ಲಿರಲಿಲ್ಲ. ಯಾವಾಗಲೂ ಮನೆಯಲ್ಲಿರುವ ಅವನ ಹೆಂಡತಿಯದ್ದೂ ಸುದ್ದಿಯಿಲ್ಲ. ಮನೆ ಬಾಗಿಲಿಗೆ ಬೀಗ ಬಿದ್ದಿತ್ತು. ಹುಡುಕಿಹೋಗಿದ್ದ ಜನರು ಬಂದು ಪಂಚಾಯಿತಿಗೆ ಸುದ್ದಿ ಮುಟ್ಟಿಸಿದರು. “ಹಾಗಿದ್ದ ಮೇಲೆ ಗಂಗಾದರನನ್ನೇ ನೇಮಿಸಿದರಾಯಿತು” ಎಂಬ ಅಬಿಪ್ರಾಯ ಕಟ್ಟೆ ಮೇಲೆ ಕುಳಿತಿದ್ದ ಒಬ್ಬರಿಂದ ಬಂತು. “ಪುರುಶೋತ್ತಮನೇ ಇರಲಿ” ಎಂದು ಇನ್ನೊಬ್ಬರೆಂದರು. ಮಾತು, ಪ್ರತಿಮಾತು ನಡೆಯುತ್ತಲೇ ಇತ್ತು. ವಾಗ್ವಾದ ಹೆಚ್ಚುತ್ತಲೇ ಹೋಯಿತು. ತಮ್ಮದೇ ಸರಿ ತಮ್ಮದೇ ಸರಿ ಎಂಬ ಹಟ ಎಲ್ಲರದ್ದೂ. ಆಗ ಒಂದು ಮೂಲೆ ಹಿಡಿದು ಕುಳಿತಿದ್ದ ಸಂಕಪ್ಪನವರು “ತುಂಗಪ್ಪನೂ ಕೂಡಾ ತನ್ನ ಅಪ್ಪನಿಗೆ ಹುಟ್ಟಿದವನಲ್ಲ. ಆದರೂ ಕುರ‍್ಚಿ ಮೇಲೆ ಕೂರಲಿಲ್ಲವೇ” ಎಂದು ಹೇಳಿದರೂ ಸಹ ಜನರ ಜೋರು ಗಲಾಟೆಯಲ್ಲಿ ಅದು ಕೇಳಲೇ ಇಲ್ಲ. ಏನೆಂದರೂ ಒಮ್ಮತ ಮೂಡದ ಪರಿಯನ್ನು ಕಂಡು ಹೊಂಗಾರೆ ದಾಸಪ್ಪನವರ ಕುರ‍್ಚಿ ಮಹಾಮೌನಕ್ಕೆ ಶರಣಾಗಿತ್ತು.

(ಚಿತ್ರ ಸೆಲೆ: copilot.microsoft.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications