ನಾ ನೋಡಿದ ಸಿನೆಮಾ: ಕ್ರಿಶ್ಣಂ ಪ್ರಣಯ ಸಕಿ

– ಕಿಶೋರ್ ಕುಮಾರ್.

ಬಾನದಾರಿಯಲ್ಲಿ ಸಿನೆಮಾದ ನಂತರ ಗಣೇಶ್ ಅವರ ಮತ್ತೊಂದು ಸಿನೆಮಾ ತೆರೆಗೆ ಬಂದಿದೆ. ಗಣೇಶ್ ಅವರ ಸಿನೆಮಾಗಳಲ್ಲಿ ಹೆಚ್ಚಿನವು ಪೀಲ್ ಗುಡ್ ಸಿನೆಮಾಗಳು ಎನ್ನುವ ಮಾತಿದೆ. ಆ ಮಾತಿನಂತೆ ಅವರ ಹೆಚ್ಚಿನ ಸಿನೆಮಾಗಳು ಪೀಲ್ ಗುಡ್ ಸಿನಿಮಾಗಳೇ. ಈ ಸಾರಿ ಆ ಸಾಲಿಗೆ ಸೇರುವಂತ ಮತ್ತೊಂದು ಸಿನೆಮಾ ಬಂದಿದೆ ಅದೇ ಕ್ರಿಶ್ಣಂ ಪ್ರಣಯ ಸಕಿ.

ಕತೆಯಲ್ಲಿ ಹೊಸತನವೇನಿಲ್ಲ ಎನ್ನಬಹುದು. ಗಣೇಶ್ ಅವರ ಹಿಂದಿನ ಒಂದು ಸಿನೆಮಾ ಹಾಗೂ ಕನ್ನಡದ ಇತರೆ ಸಿನೆಮಾಗಳ ನೆರಳು ಈ ಸಿನೆಮಾದಲ್ಲಿದೆ. ಎಂದಿನಂತೆ ಒಂದು ದೊಡ್ಡ ಸಿರಿವಂತ ಕುಟುಂಬ, ಒಂದು ಪ್ರೇಮ ಕತೆ, ಅಲ್ಲಿ ಎಲ್ಲವೂ ಸರಿಹೋಗುತ್ತಿದೆ ಎನ್ನುವಾಗ ಎದುರಾಗುವ ತೊಂದರೆ. ಇದು ಸಿನೆಮಾದ ಕತೆ.

ಪಾತ್ರವರ‍್ಗದಲ್ಲಿ ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ರಂಗಾಯಣ ರಗು, ಅಶೋಕ್, ರಾಮಕ್ರಿಶ್ಣ, ಶಶಿಕುಮಾರ‍್, ಶ್ರುತಿ, ಸಾದುಕೋಕಿಲ, ಗಿರೀಶ್ ಶಿವಣ್ಣ, ಶ್ರೀನಿವಾಸ ಮೂರ‍್ತಿ ಹಾಗೂ ಇತರರು ನಟಿಸಿದ್ದಾರೆ. ಇಡೀ ಸಿನೆಮಾದಲ್ಲಿ ರಂಗಾಯಣ ರಗು ಅವರ ಪಾತ್ರ ಚೆನ್ನಾಗಿ ಮೂಡಿ ಬಂದಿದ್ದು, ನೋಡುಗರನ್ನು ನಗಿಸುತ್ತದೆ.

ಕತೆಯನ್ನು ಹೇಳುವ ಶೈಲಿಯಲ್ಲಿ ‍ಸಿನೆಮಾ ತಂಡ ಎಡವಿರುವುದು ಎದ್ದು ಕಾಣುತ್ತದೆ. ಸುಮ್ಮನೆ ಒಂದಾದ ಮೇಲೊಂದು ಹಾಡುಗಳು, ಒಂದು ಸನ್ನಿವೇಶಕ್ಕೂ ಮತ್ತೊಂದು ಸನ್ನಿವೇಶಕ್ಕೂ ಇರದ ನಂಟು ನೋಡುಗನ ತಲೆಕೆಡಿಸುತ್ತದೆ. ನಿರ‍್ದೇಶನ, ಚಿತ್ರಕತೆ ಹಾಗೂ ಎಡಿಟಿಂಗ್ ನಲ್ಲಿ ಸಿನೆಮಾ ತಂಡ ಸೋತಿರುವುದು ಎದ್ದು ಕಾಣುತ್ತದೆ. ಒಂದೆರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ.

ಎ. ವಿ. ಶಿವ ಸಾಯಿ ಅವರ ಚಿತ್ರಕತೆ, ಶ್ರೀನಿವಾಸ ರಾಜು ಅವರ ನಿರ‍್ದೇಶನ, ವೆಂಕಟ್ ರಾಮ ಪ್ರಸಾದ್ ಸಿನೆಮಾಟೊಗ್ರಪಿ, ಕೆ. ಎಂ. ಪ್ರಕಾಶ್ ಅವರ ಎಡಿಟಿಂಗ್, ಅರ‍್ಜುನ್ ಜನ್ಯಾ ಅವರ ಸಂಗೀತ, ತ್ರಿಶೂಲ್ ಎಂಟರ‍್ಟೆನ್ಮೆಂಟ್ ಅವರು ಈ ಸಿನಿಮಾವನ್ನು ನಿರ‍್ಮಿಸಿದ್ದು, ಆಗಸ್ಟ್ 15ರಂದು ಸಿನೆಮಾ ತೆರೆಗೆ ಬಂದಿದೆ.

(ಚಿತ್ರಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks