ನಾಟಕರತ್ನ ಡಾ. ಗುಬ್ಬಿ ವೀರಣ್ಣ – ಕಂತು 2

– ಶ್ಯಾಮಲಶ್ರೀ.ಕೆ.ಎಸ್.

ಗುಬ್ಬಿ ಕಂಪನಿಯ ಪ್ರಮುಕ ನಾಟಕಗಳು ಎಚ್ಚಮ ನಾಯಕ, ಸದಾರಮೆ, ಕುರುಕ್ಶೇತ್ರ, ಜೀವನನಾಟಕ, ದಶಾವತಾರ, ಪ್ರಬಾಮಣಿ ವಿಜಯ, ಕಬೀರ್, ಗುಲೇ ಬಕಾವಲಿ, ಅಣ್ಣ ತಮ್ಮ, ಲವ ಕುಶ, ಗುಣಸಾಗರಿ ಇತ್ಯಾದಿ. ಇವಲ್ಲದೆ 1926ರಿಂದ ಅನೇಕ ಕನ್ನಡ ಚಲನಚಿತ್ರಗಳನ್ನೂ ನಿರ‍್ಮಿಸಿದರು. ಮುಂದೆ ಈ ಸಂಸ್ತೆಯ ಹೆಸರು ‘ದ ಕರ‍್ನಾಟಕ ಪಿಲ್ಮ್ಸ್ ಲಿಮಿಟೆಡ್’ ಎಂದಾಯಿತು. ಈ ಕಂಪನಿ ತಯಾರಿಸಿದ ‘ಬೇಡರ ಕಣ್ಣಪ್ಪ’ ಸಿನಿಮಾ ಡಾ. ರಾಜಕುಮಾರ್, ನರಸಿಂಹರಾಜು, ಅವರ ಮೊದಲ ಸಿನಿಮಾ ಆಗಿ ಇತಿಹಾಸವನ್ನೇ ಸ್ರುಶ್ಟಿಸಿತು. ಇದು 1954 ರಲ್ಲಿ ತೆರೆಕಂಡಿತು. ಹೆಚ್. ಎಲ್.ಎನ್ ಸಿಂಹ ರವರು ಈ ಚಿತ್ರದ ನಿರ‍್ದೇಶಕರಾಗಿದ್ದರು. ಗುಬ್ಬಿ ವೀರಣ್ಣನವರು ಕನ್ನಡ ನಾಡಿನಲ್ಲಿ ಬರೀ ನಾಟಕಗಳಲ್ಲದೇ ಕನ್ನಡ ಸಿನಿಮಾಗಳನ್ನು ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟ ಮೊದಲಿಗರು. ಅವರಿಂದಲೇ ಕನ್ನಡ ಸಿನಿಮಾಗಳು ತೆರೆಯ ಮೇಲೆ ಮೂಡಿಬಂದವು ಎಂಬುದು ಹೆಮ್ಮೆಯ ವಿಶಯ.

ವೀರಣ್ಣನವರಿಗೆ ಸಂದ ಬಿರುದುಗಳು:

ಮೈಸೂರಿನ ಅರಸರಾದ ನಾಲ್ವಡಿ ಕ್ರುಶ್ಣರಾಜ ಒಡೆಯರ್ ಅವರಿಂದ ವರ‍್ಸಟೈಲ್ ಕಮೆಡಿಯನ್ ಬಿರುದು ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ನಾಟಕರತ್ನ ಎಂಬ ಬಿರುದುಗಳು ಶ್ರೀಯುತರಿಗೆ ಲಬಿಸಿವೆ. 1955ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿ ಮತ್ತು 1972ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಲಬಿಸಿದವು. ಹೈದರಾಬಾದ್ ನಿಜಾಮರು ತಮ್ಮ ಇಡೀ ರಾಜಬಳಗದೊಂದಿಗೆ ಬಂದು ಕುರುಕ್ಶೇತ್ರ ನಾಟಕ ನೋಡಿ ಸಂತಸಗೊಂಡು ‘ಕರ‍್ನಾಟಕಾಂದ್ರ ನಾಟಕ ಸಾರ‍್ವಬೌಮ’ ಎಂದು ಬಿರುದನ್ನು ನೀಡಿ ಗೌರವಿಸಿದರು. ಮೈಸೂರು ವಿಶ್ವವಿದ್ಯಾಲಯ ವೀರಣ್ಣನವರಿಗೆ ಗೌರವ ಡಾಕ್ಟರೇಟ್ಟ್ ಪದವಿ ನೀಡಿ ಗೌರವಿಸಿತು.ಕರ‍್ನಾಟಕ ಸರ‍್ಕಾರ ವೀರಣ್ಣನವರ ಹೆಸರಿನಲ್ಲಿ ಶ್ರೇಶ್ಟ ರಂಗಬೂಮಿ ಸಾದನೆಗೆ ಪ್ರಶಸ್ತಿ ಪುರಸ್ಕಾರ ಸ್ತಾಪಿಸಿದೆ. ಅಲ್ಲದೇ ತುಮಕೂರು ಜಿಲ್ಲೆಯ ನಗರ ಬಾಗದಲ್ಲಿ ಅವರ ನೆನಪಿಗಾಗಿ ಗುಬ್ಬಿ ವೀರಣ್ಣ ಕಲಾಕ್ಶೇತ್ರ ಎಂಬ ಸಬಾಂಗಣವನ್ನು ದಶಕಗಳ ಹಿಂದೆಯೇ ಸ್ತಾಪಿಸಿದೆ. ಈ ಸಬಾಂಗಣದಲ್ಲಿ ರಂಗಚಟುವಟಿಕೆಗಳು, ಸಾಂಸ್ಕ್ರುತಿಕ ಕಾರ‍್ಯಕ್ರಮಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಗುಬ್ಬಿ ಕಂಪನಿಯ ಶಾಕೆಗಳು ಮೈಸೂರು, ಬೆಂಗಳೂರು ಹೀಗೆ ನಾನಾ ಕಡೆ ಹಬ್ಬಿತ್ತು. 1924ರಲ್ಲಿ ಬೆಂಗಳೂರಿನ ಸುಬೇದಾರ ಚತ್ರಂ ರಸ್ತೆಯಲ್ಲೊಂದು ರಂಗಮಂದಿರ ಹಾಗೂ 1930 ರಲ್ಲಿ ಶಿವಾನಂದ ತಿಯೇಟರ್ ಎಂಬ ರಂಗಮಂದಿರವನ್ನು ಸ್ತಾಪಿಸಿದರು. ವೀರಣ್ಣನವರ ಕುಟುಂಬದ ಸದಸ್ಯರು ಅಂದರೆ ಶ್ರೀಯುತರ ಪತ್ನಿಯರು ಮಕ್ಕಳು, ಮೊಮ್ಮಕ್ಕಳು ನಾಟಕರಂಗದಲ್ಲಿ ಮತ್ತು ಕೆಲವರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೀರಣ್ಣನವರಿಗೆ ಸುಂದ್ರಮ್ಮ, ಬದ್ರಮ್ಮ, ಜಯಮ್ಮ ಎಂಬ ಮೂವರು ಪತ್ನಿಯರು. ಮೂವರೂ ಗುಬ್ಬಿ ಕಂಪನಿಯಲ್ಲಿ ತಮ್ಮ ಪತಿಯೊಂದಿಗೆ ಬಣ್ಣ ಹಚ್ಚಿದ ಪ್ರತಿಬಾನ್ವಿತರು. ಅವರ ಮೊದಲನೇ ಪತ್ನಿ ಸುಂದ್ರಮ್ಮನವರು ನಾಟಕದಲ್ಲಿ ಬಾಗಿಯಾಗಿದ್ದಾಗ ವೇದಿಕೆ ಮೇಲೆ ಕುಸಿದು ಪ್ರಾಣತ್ಯಾಗ ಮಾಡಿದರಂತೆ. ಆ ವೇಳೆಯಲ್ಲಿ ವೀರಣ್ಣನವರು ನಾಟಕವನ್ನು ಅರ‍್ದಕ್ಕೆ ನಿಲ್ಲಿಸದೇ ದುಃಕವನ್ನು ಬಚ್ಚಿಟ್ಟು ಮುಂದುವರಿಸಿ ಮುಕ್ತಾಯಗೊಳಿಸಿದರಂತೆ. ಇದು ಅವರು ತಮ್ಮ ಕಲೆಗೆ ನೀಡುತ್ತಿದ್ದ ಗೌರವ ಮತ್ತು ಶ್ರದ್ದಾ ಬಕ್ತಿಯನ್ನು ತೋರಿಸುತ್ತದೆ.

ಪ್ರಸಿದ್ದ ರಂಗಕರ‍್ಮಿ ಹಾಗೂ ಚಿತ್ರನಟಿ, ಮಾಜಿ ಎಮ್ ಎಲ್ ಸಿ, ಬಿ. ಜಯಶ್ರೀ ಅವರು ಗುಬ್ಬಿ ವೀರಣ್ಣನವರ ಮೊಮ್ಮಗಳಾಗಿದ್ದಾರೆ. ನಟಿ ಬಿ. ಜಯಶ್ರೀ ಯವರ ಮುಂದಾಳತ್ವದಲ್ಲಿ ಅವರ ತಾತನವರ ನೆನಪಿಗಾಗಿ ಗುಬ್ಬಿ ತಾಲ್ಲೂಕಿನಲ್ಲಿ ಗುಬ್ಬಿ ವೀರಣ್ಣ ರಂಗಮಂದಿರವನ್ನು ಸುಮಾರು ಎಂಟತ್ತು ವರ‍್ಶಗಳ ಹಿಂದಶ್ಟೇ ನಿರ‍್ಮಿಸಲಾಗಿದೆ. ಇನ್ನೀರ‍್ವ ಮೊಮ್ಮಕ್ಕಳಾದ ಸುಂದರಶ್ರೀ ಮತ್ತು ನಟರಾಜ್ ರವರು ಕೂಡ ನಾಟಕ, ಕಿರುತೆರೆ, ಹಿರಿತೆರೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಜೀವಿತಾವದಿಯಲ್ಲಿ ಕಲಾಸೇವಕರಾಗಿದ್ದ ಈ ಮೇರು ಕಲಾಸಾದಕ ನಾಟಕರತ್ನ 1974ರಲ್ಲಿ ದೈವಾದೀನರಾದರಾಗಿದ್ದರೂ ಇಂದಿಗೂ ಅವರ ಹೆಸರು ಅಜರಾಮರ. ಈಗಲೂ ದಿವಂಗತ ಗುಬ್ಬಿ ವೀರಣ್ಣನವರ ಸಮಾದಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿದೆ. ಈ ಬಗಯಾಗಿ ಇವರು ತಮ್ಮ ಜೀವಮಾನದ ಸಾದನೆಯಿಂದ, ಹಲವರಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ.

 

(ಚಿತ್ರ ಸೆಲೆ: karnataka.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks