ಕವಿತೆ: ಅಬ್ಬಾ ಮಳೆ
– ವೆಂಕಟೇಶ ಚಾಗಿ.
ಗಗನ ಬಿರಿದು ಸುರಿದ ಹಾಗೆ
ಮಳೆಯು ದಿನವು ಸುರಿದಿದೆ,
ಅಬ್ಬಾ ಮಳೆಯು, ಎಂತ ಮಳೆ!
ಇಳೆಯು ತುಂಬಿ ಹರಿದಿದೆ
ಕೆರೆ ತೊರೆ ಹೊಳೆಗಳೆಲ್ಲಾ,
ಗಡಿಯ ಮೀರಿ ಹರಿಯುತಿವೆ,
ಕಟ್ಟೆ ಒಡೆದು ಕೋಡಿ ಬಿದ್ದು
ಶರದಿ ಎಡೆಗೆ ನದಿಯು ಸಾಗಿದೆ
ಬೆಟ್ಟ ಗುಡ್ಡ ನೀರು ನುಂಗಿ,
ದಿನವು ಕುಸಿಯತೊಡಗಿವೆ
ನರನು ಕಟ್ಟಿದಂತ ಮನೆಯು,
ಮಣ್ಣಿನಲ್ಲಿ ಹುದುಗಿ ನಲುಗಿದೆ
ಮಳೆಯ ಕೋಪ ಯಾರ ಮೇಲೆ,
ಜನರ ಮನಕೆ ತಿಳಿಯದಾಗಿದೆ?
ನರನಿಗಶ್ಟೆ ಬದುಕು ಇರದು,
ಪಕ್ಶಿ ಪ್ರಾಣಿ ಬದುಕಬೇಕಿದೆ
ನದಿಯ ತಡೆದು ಕಟ್ಟೆ ಕಟ್ಟಿ,
ನರನು ಸ್ವಾರ್ತ ಮೆರೆದನು
ಬೆಟ್ಟ ಗುಡ್ಡ ಕಡಿದು ಹಾಕಿ,
ಮನೆಯ ಕಟ್ಟಿ ಬೆಳೆದನು
ಅರಿತು ನಡೆದು ಬದುಕಿದಾಗ
ನಿಸರ್ಗ ಸ್ಶರ್ಗ ಮರೆಯದಿರಿ,
ದರೆಗೆ ಯಾರು ಒಡೆಯರಲ್ಲ
ಉಳಿಸಿ ಬೆಳೆಸಿ ಬದುಕಿರಿ
(ಚಿತ್ರಸೆಲೆ: wikimedia)
ಇತ್ತೀಚಿನ ಅನಿಸಿಕೆಗಳು