ಕಿರು ಬರಹ: ಎರಡನೆ ಅವಕಾಶ
“ಮನಸಿದ್ದಡೆ ಮಾರ್ಗ ” – ಆ ಮನಸ್ಸೆ ನೆನೆಗುದಿಗೆ ಬಿದ್ದರೆ ಕಂಡಿತ ಅವಕಾಶದ ದಾರಿಗಳು ಮುಚ್ಚಿ ಹೋಗುತ್ತವೆ. ಎಂತಹದ್ದೇ ಸಂಕಶ್ಟ ಎದುರುದಾರೂ ದೈರ್ಯಗೆಡದೆ ಮನಸ್ಸಿನ ಬಾಗಿಲನ್ನು ಮುಚ್ಚಬೇಡಿ. ಪ್ರತಿಯೊಬ್ಬರ ಸಾದನೆಯಲ್ಲಿ ಆತ್ಮಸ್ತೈರ್ಯ ಎಂಬುದು ಮಹತ್ವದ ಪಾತ್ರವಹಿಸುತ್ತದೆ. ಸೋಲುಗಳ ಮೇಲೆ ಸೋಲು ಬಂದೆರಗಿದಾಗ ಆತ್ಮಸ್ತೈರ್ಯ ಕುಂದುವುದು ಸಹಜ. ಹಾಗೆಂದ ಮಾತ್ರಕ್ಕೆ ಅವಕಾಶದ ಬಾಗಿಲುಗಳು ಮುಚ್ಚಿದ್ದಾವೆ ಎಂದಲ್ಲ.
ಕೂಲಿ ಮಾಡುವ ಕುಟುಂಬದಲ್ಲಿ ಅಪ್ಪ ಹುಟ್ಟು ಕುಡುಕ, ಆತನ ಸಂಜೆಯ ನಿಶೆಯ ಪರಾಕಾಶ್ಟೆ ಚರಂಡಿಯಲ್ಲಿ ಬಿದ್ದು ಏಳಲಾಗದೆ ಒದ್ದಾಡುವುದರಲ್ಲೇ ಪರ್ಯಾವಸನಗೊಳ್ಳುತ್ತಿತ್ತು. ಆತನ ಕೂಲಿಯ ಕಾಸು ಕುಡಿಯುವುದರಲ್ಲೆ ಕಾಲಿಯಾಗುತಿತ್ತು. ಹೆಂಡತಿ, ಮೂರು ಗಂಡುಮಕ್ಕಳ ಆತನ ಸಂಸಾರದಲ್ಲಿ ಅವರಿಗೆ ನಲಿವಿಗಿಂತ ನೋವೆ ಹೆಚ್ಚು. ದಿನವೂ ಹೆಂಡತಿ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಟ್ಟ ಬುತ್ತಿ. ಕುಡುಕ ಯಜಮಾನನಿಗೆ ಮನೆಯ ಹಿತ್ತಾಳೆ, ತಾಮ್ರ, ಕಂಚಿನ ಸಾಮಾನುಗಳು ಸಾಲದೆ ತನ್ನ ಹೆಂಡತಿ ಕೊರಳಿನ ಗುಲಗಂಜಿ ತೂಕದ ತಾಳಿಯೂ ಸಾರಾಯಿ ಅಂಗಡಿಯ ಪಾಲಾಗಿತ್ತು. ತಾಯಿ ಅವರಿವರ ಮನೆಯ ಕಸಮುಸುರೆ ಮಾಡಿ ತರುವ ಅಶ್ಟಿಶ್ಟು ಅನ್ನ, ಬಿಡಿಗಾಸಿನಲ್ಲಿ ಮಕ್ಕಳ ಒಪ್ಪೊತ್ತಿನ ಹೊಟ್ಟೆಯಶ್ಟೆ ತುಂಬುತ್ತಿತ್ತು. ಮಕ್ಳಳು ಕಶ್ಟಗಳ ಸರಮಾಲೆಯನ್ನೇ ಹೊದ್ದು ಬೆಳೆದಂತೆ, ಮನೆ ಅವರಿಗೆ ನರಕವೆನಿಸತೊಡಗಿತು. ಹಿರಿಯ ಮಗ ದುಡಿಮೆಗೆ ಬೆಂಗಳೂರು ಪಾಲಾದ, ಕಿರಿಯ ಮಗ ಯಾವುದೋ ಕಾಂಟ್ರ್ಯಾಕ್ಟರ್ ಬಳಿ ಕೆಲಸಕ್ಕಾಗಿ ಊರು ಬಿಟ್ಟ. ನಡುವಿನ ಮಗ ಒಂಬತ್ತನೇ ತರಗತಿ ಓದುತ್ತಿರುವುದನ್ನು ಬಿಟ್ಟು, ಕಾಡಿಗೆ ಹೋಗಿ ಸೌದೆ ಕಡಿದು ತಂದು ಹೋಟೆಲುಗಳಿಗೆ ಮಾರಿ ತನ್ನ ಅಮ್ಮನ, ಕಡೆಗೆ ತನ್ನ ಕುಡುಕ ಅಪ್ಪನ ಹೊಟ್ಟೆಯ ಹಸಿವಿಗೆ ಅರೆಕಾಸು ಮಜ್ಜಿಗೆ ಕುಡಿಸಿ ಬದುಕಿಸಲು ನೆರವಾಗುತ್ತಿದ್ದ. ಸರಿ ಸುಮಾರು ಎರಡು ವರ್ಶಗಳ ಕಾಲ ಆತ ಓದಿನ ಹಂಗು ಬಿಟ್ಟು ಇದೇ ಸೌದೆ ಮಾರಿ ಜೀವನ ಮಾಡತೊಡಗಿದ.
ಎರಡು ವರ್ಶದ ನಂತರ ಹಿರಿಯಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವನು ಮನೆಗೆ ಬಂದ. ತನ್ನ ತಮ್ಮ ಓದದೆ ಕಾಡಿನಿಂದ ಸೌದೆ ಕಡಿದು ತಂದು ಮಾರುವುದನ್ನು ಕಂಡು ಸಿಟ್ಟುಗೊಂಡು, ಅವನಿಗೆ ಬೈಯ್ದು “ಕಡೆಪಕ್ಶ ಎಸ್ ಎಸ್ ಎಲ್ ಸಿ ಯಾದರೂ ಮುಗಿಸು, ಏನಾದರೂ ಉಪಯೋಗವಾಗುತ್ತದೆ” ಎಂದು ಪುನಹ ಶಾಲೆಗೆ ಕಳುಹಿಸಿದ. ಬಹುಶಹ ಶಾಲೆಬಿಟ್ಟು ಸೌದೆ ಕಡಿದು ಮಾರುತಿದ್ದ ನಡುವಿನ ತಮ್ಮನಿಗೆ ಇದು ಎರಡನೇ ಇನ್ನಿಂಗ್ಸ್ ಎಂದೇ ಕಾಣುತ್ತದೆ. ಅಂದರೆ ಬದುಕಿನಲ್ಲಿ ಓದಲು ಸಿಕ್ಕ ಎರಡನೇ ಅವಕಾಶ.
ಶಾಲೆಗೆ ಮರುದಾಕಲಾತಿ ಆದ ದಿನದಿಂದ ಅವನ ಹಣೆಬರಹವೂ ಬದಲಾಯಿತೇನೋ ಗೊತ್ತಿಲ್ಲ. ಆತ ಮತ್ತೆ ಓದಿನಿಂದ ಎಂದೂ ವಿಮುಕನಾಗಲಿಲ್ಲ. ಆತನ ಓದಿಗಾಗಿ ನಡೆಸಿದ ಹೋರಾಟ ಸಂಗರ್ಶವನ್ನು ಇಲ್ಲಿ ದಾಕಲಿಸಲು ಪುಟಗಳು ಸಾಲುವುದಿಲ್ಲ ಬಿಡಿ. ಆತ ಮುಂದೆ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಪ್ರತಮ ದರ್ಜೆಯಲ್ಲಿ ಪಾಸಾಗಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್ಯಾಂಕ್ ಪಡೆದು, ನಂತರ ಬಾರತ ಸರಕಾರದ ಪ್ರತಿಶ್ಟಿತ ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ. ಪ್ರಾಮಾಣಿಕತೆ ಮತ್ತು ನಿಶ್ಟೆಯಿಂದ ಕೆಲಸ ನಿರ್ವಹಿಸಿ, ಹಂತ ಹಂತವಾಗಿ ಬಡ್ತಿ ಪಡೆದು ಕೊನೆಗೆ ಜನರಲ್ ಮ್ಯಾನೇಜರ್ ಆಗಿ ನಿವ್ರುತ್ತಿ ಹೊಂದಿ, ಚೆನ್ನೈಯಲ್ಲಿ ನಿವ್ರುತ್ತ ಜೀವನ ಸಾಗಿಸುತ್ತಿರುವ ಇವರು ನಮಗೆ ಹತ್ತಿರದ ಸಂಬಂದಿಕರು ಎನ್ನುವುದು ಕೂಡ ನನ್ನ ಹೆಮ್ಮೆ.
ಬಿರುಗಾಳಿಯೇ ಬೀಸಲಿ, ದೊಡ್ಡ ಅಲೆಗಳು ಏರೇರಿ ಬರಲಿ, ಎಡೆಬಿಡದೆ ಕಲ್ಲಿನಂತಹ ಮಳೆ ಸುರಿಯಲಿ, ಏರಿ ಸಾಗುತಿರುವ ದೋಣಿಗೆ ದೈರ್ಯದಿಂದ ಹುಟ್ಟು ಹಾಕಿ ಮುಂದೆ ಸಾಗಿಸು. ಎಂತಹ ಸಂದರ್ಬದಲ್ಲೂ ದ್ರುತಿಗೆಡದೆ, ಆತ್ಮಸ್ತೈರ್ಯದಿಂದ ನೀನು ಸಾಗುತ್ತಿರುವ ದೋಣಿಯನ್ನು ಮುಳಗದಂತೆ ಎಚ್ಚರಿಕೆವಹಿಸು, ಕಂಡಿತ ನೀನು ಗುರಿಯನ್ನು ತಲುಪುವೆ ಎನ್ನುವ ಸಂದೇಶ ನೀಡುವ ನನ್ನ ಸಂಬಂದಿಯ ಕರಗಿ ಹೋಗುತಿದ್ದ ಬದುಕಿನಲ್ಲಿ ಮತ್ತೆ ಓದಲು ಸಿಕ್ಕಿದ್ದು ಎರಡನೆ ಅವಕಾಶ ಎಂಬುದು ಅಶ್ಟೇ ಸತ್ಯ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು