ಕಿರು ಬರಹ: ಕೈ ಚಳಕ

– .

ಮುಸ್ಸಂಜೆ ನಾವು ನಮ್ಮ ಸ್ನೇಹಿತರು ಚಿಕ್ಕಮಗಳೂರಿನಿಂದ ಕಡೂರಿಗೆ ಪ್ರಯಾಣ ಬೆಳೆಸಲು ಸರ‍್ಕಾರಿ ಕೆಂಪು ಬಸ್ ಏರಿ ಕುಳಿತೆವು. ಬಸ್ ಬಾರಿ ಗದ್ದಲವಿದ್ದಿದ್ದರಿಂದ ಪ್ರಯಾಸದಲ್ಲಿ ನನಗೊಂದು ಕಡೆ ನನ್ನ ಸ್ನೇಹಿತರಿಗೊಂದು ಕಡೆ ಕುಳಿತುಕೊಳ್ಳಲು ತುದಿಯ ಸೀಟು ಸಿಕ್ಕಿದ್ದವು. ಬಸ್ ನಲ್ಲಿ ಬರು ಬರುತ್ತಾ ಜನರಿಂದ ತುಂಬಿ ಬಾರಿ ಗದ್ದಲವಾಗತೊಡಗಿತು. ಆ ಸಮಯದಲ್ಲಿ ಒಬ್ಬ ಆಸಾಮಿ ಬಗಲಿಗೆ ದಪ್ಪನಾದ ಬ್ಯಾಗ್ ನೇತು ಹಾಕಿಕೊಂಡು ಕೊಂಚ ಒಲಾಡುತ್ತಲೆ ಬಸ್ ಹತ್ತಿದ. ಬಸ್ ಅದಾಗಲೆ ತುಂಬಿ ತುಳುಕುತ್ತಿದ್ದರಿಂದ ಬಸ್ಸಿನ ಆ ಮಂದ ಬೆಳಕಿನಲ್ಲೆ ಆತ ಮುಂದೆ ಬಂದು ನಮ್ಮ ಸ್ನೇಹಿತರು ಕುಳಿತಿದ್ದ ತುದಿಯ ಸೀಟಿನ ಪಕ್ಕದಲ್ಲೆ ನಿಂತುಕೊಂಡ. ಬಹುಶಹ ಆತನೊಳಗೆ ಆಗ ಪರಮಾತ್ಮ ಆಡಿಸುತಿದ್ದ ಎಂದು ಕಾಣುತ್ತದೆ. ಸರಿಯಾಗಿ ನಿಂತುಕೊಳ್ಳಲಾಗದೆ ಹೋಗಿ ನಮ್ಮ ಸ್ನೇಹಿತರ ಮೇಲೆ ಬೀಳುತಿದ್ದ. ನಮ್ಮ ಸ್ನೇಹಿತರು “ರೀ ಸ್ವಾಮಿ ಕಂಬ ಹಿಡಿದುಕೊಂಡು ಗಟ್ಟಿಯಾಗಿ ನಿಂತುಕೊಳ್ಳ್ರಿ” ಎಂದು ಎಚ್ಚರಿಸಿದರು. ಬಸ್ ಮತ್ತಶ್ಟು ಜನರಿಂದ ತುಂಬಿ ಬಾರಿ ಗದ್ದಲವಾಗತೊಡಗಿತು. ಉಸಿರಾಡುವುದೂ ಕಶ್ಟವೆನಿಸುವಶ್ಟು ಕಿಕ್ಕಿರಿದಿತ್ತು ನಮ್ಮ ಆ ಸರ‍್ಕಾರಿ ಕೆಂಪು ಬಸ್.

ಆ ಕಿಕ್ಕಿರಿದ ಬಸ್ಸಿನಲ್ಲಿ ಕಂಡಕ್ಟರ್ ಇನ್ನೂ ಹತ್ತಿ ಟಿಕೇಟ್ ಕೊಡಲು ಶುರು ಮಾಡಿರಲಿಲ್ಲ, ಅಶ್ಟರಲ್ಲೆ ನಮ್ಮ ಸ್ನೇಹಿತರ ಕಾಲಿನ ಮೇಲೆ ಮೆತ್ತನೆಯ ವಸ್ತುವೊಂದು ಮೇಲಿಂದ ಬಿದ್ದು ಸೋಕಿತು. ಅದೇನೆಂದು ನೋಡಿದರೆ ಐದು ನೂರು ರೂಪಾಯಿಯ ಒಂದು ಕಂತೆ. ”ಅರೇ ಇದೆಲ್ಲಿಂದ ಬೀಳುತ್ತಿದೆ” ಎಂದು ಅಚ್ಚರಿಯಿಂದ ಸುತ್ತ ಕಣ್ಣು ಹಾಯಿಸಿದರೆ ಅದು ತಮ್ಮ ಪಕ್ಕದಲ್ಲಿ ಓಲಾಡುತ್ತಾ ನಿಂತಿದ್ದ ಮಹಾಶಯನ ಬಗಲಿಗೆ ಹಾಕಿಕೊಂಡ ಬ್ಯಾಗಿನ ತಳದಿಂದ. ನಮ್ಮ ಸ್ನೇಹಿತರು “ರೀ ಸ್ವಾಮಿ ನಿಮ್ಮ ಬ್ಯಾಗಿನಿಂದ ಯಾರೋ ದುಡ್ಡು ಹೊಡೆಯುತಿದ್ದಾರೆ ಅಶ್ಟೂ ಎಚ್ಚರವಿಲ್ಲವಲ್ಲ್ರೀ” ಎಂದು ಬಿದ್ದ ಹಣದ ಕಟ್ಟು ಆತನ ಕೈಗಿತ್ತಾಗ ಆತನಿಗೆ ಕುಡಿದಿದ್ದ ಅಮಲಲೆಲ್ಲ ಜರ‍್ರನೆ ಇಳಿದಿತ್ತು. ಆತ ಗಾಬರಿಯಿಂದು ತನ್ನ ಬ್ಯಾಗ್ ಪರಿಶೀಲಿಸಲು ಮುಂದಾದ. ತಾನು ನೇತು ಹಾಕಿಕೊಂಡ ಬ್ಯಾಗಿನ ತಳಕ್ಕೆ ಯಾರೋ ಬ್ಲೇಡ್ ಹೊಡೆದು, ಹಣ ಎತ್ತುವ ಕೈಚಳಕ ತೋರಿದ್ದರು. ಆ ಗದ್ದಲದಲ್ಲೂ ಬ್ಯಾಗಿನಿಂದ ಹಣ ತೆಗೆದು ಎಣಿಸಿದ ಪುಣ್ಯಾತ್ಮ ಎಲ್ಲವೂ ಸರಿಯಾಗಿದ್ದು, ಒಂದು ಕಂತೆ ಮಾತ್ರ ಕಾಣೆಯಾಗಿದ್ದು ಆತನ ಗಮನಕ್ಕೆ ಬಂತು. ಅದು ಐದುನೂರರ ಒಂದು ಕಂತೆ ಎಂದರೆ ರೂಪಾಯಿ ಐವತ್ತು ಸಾವಿರ. ಆ ಆಸಾಮಿ “ಯಾರೋ ಕಳ್ಳ ನನ್ನ ದುಡ್ಡು ಹೊಡೆಯುತ್ತಿದ್ದಾನೆ ಯಾರು ಬಸ್ ಇಳಿ ಬೇಡ್ರಿ”, ಬಸ್ ಪೋಲಿಸ್ ಸ್ಟೇಶನ್ನ್ಗೆ ಹೊಡಿರಿ ಅಲ್ಲಿ ಎಲ್ಲರ ಬ್ಯಾಗು ಚೆಕ್ ಮಾಡ್ಸಿ ಕಳ್ಳ ಯಾರು ಎಂದು ಹಿಡಿಸ್ತೀನಿ ಎಂದು ಕೂಗಾಡತೊಡಗಿದ.

ಅಶ್ಟರಲ್ಲೆ ಕೈಚಳಕ ತೋರಿದ್ದ ಆಸಾಮಿ ಬಹುಶಹ ಕೆಲಸವಾಗದೆ ಬರಿಗೈಯಲ್ಲಿ ಇಳಿದು ಹೋಗಿದ್ದ ಎಂದು ಕಾಣುತ್ತದೆ. ಆ ಮುಸ್ಸಂಜೆಯ ಬಸ್ಸಿನ ಮಂದ ಬೆಳಕಿನಲ್ಲಿ ಯಾರ ಗಮಕ್ಕೂ ಬಂದಿಲ್ಲ. ಹಾಗಿದ್ದೂ ಆಸಾಮಿಯ ಒಂದು ಕಟ್ಟು ಹಣ ಎಲ್ಲಿ ಹೋಯ್ತು ಎಂಬುದು ಬಸ್ಸಿನೊಳಗಿದ್ದವರ ಯಕ್ಶ ಪ್ರಶ್ನೆಯಾಗಿತ್ತು. ಯಾರ ಕಾಲ ಬುಡದಲ್ಲೇನಾದರೂ ಬಿದ್ದಿದೆಯ ಎಂದು ಇಡೀ ಬಸ್ಸನ್ನೆ ಬ್ಯಾಟರಿ ಬೆಳಕು ಹಾಯಿಸಿ ಹುಡುಕಲಾಯ್ತು. ಆದರೆ ದುಡ್ದಿನ ಕಟ್ಟು ಸಿಗಲಿಲ್ಲ. ಬಹುಶಹ ಕೈಚಳಕ ತೋರಿದವನೆ ಎತ್ತಿಕೊಂಡಿರಬೇಕು ಎಂದು ನಿರ‍್ದರಿಸಿ ಎಲ್ಲಾ ಪ್ರಯಾಣಿಕರನ್ನು ಅವರ ಬ್ಯಾಗುಗಳನ್ನು ಪರಿಶೀಲಿಸಬೇಕು ಇಲ್ಲದಿದ್ದರೆ ಬಸ್ಸನ್ನು ಪೋಲಿಸ್ ಸ್ಟೇಶನ್ಗೆ ಒಯ್ದು ಪೋಲಿಸರಿಂದಲೇ ತಪಾಸಣೆ ಮಾಡಿಸಲಾಗುವುದು ಎಂದು ಹಣ ಕಳೆದುಕೊಂಡ ಆಸಾಮಿ ಕೂಗಾಡತೊಡಗಿದ.

ಅಶ್ಟರಲ್ಲೆ ಬಸ್ ಕಂಡಕ್ಟ‍ರ್ ಗಲಾಟೆ ನೋಡಿ ಜನರ ನಡುವೆ ತೂರಿ ಬಂದು ಆಸಾಮಿಯನ್ನು ವಿಚಾರಣೆ ಮಾಡತೊಡಗಿದ. “ಏನ್ರೀ ಏನದು ಗಲಾಟೆ?” ಎಂದು ಎತ್ತರದ ದ್ವನಿಯಲ್ಲಿ ಪ್ರಶ್ನಿಸಿದ, ಹಣ ಕಳೆದುಕೊಂಡ ಆಸಾಮಿ ನಡೆದದ್ದನ್ನು ಆತನಿಗೆ ಹೇಳಿದ. ಕಂಡಕ್ಟ‍ರ್ ಕೂಡ ಗರಂ ಆಗಿ “ಅಲ್ರೀ ಅಶ್ಟು ಜ್ನಾನ ಬೇಡವೇನ್ರೀ ಇಶ್ಟೊಂದು ಹಣ ಹಿಡ್ಕೊಂಡು ಹೀಗೆ ಕುಡ್ಕೊಂಡು, ಓಲಾಡ್ಕೊಂಡು ಬಸ್ ಹತ್ತಿದಿರ, ಕಳ್ಳ್ರು ಸುಮ್ನೆ ಬಿಡ್ತಾರೇನ್ರೀ ನಿಮ್ಮ ಹಿಂದೆ ಪಾಲೋ ಮಾಡ್ಕೊಂಡು ಬಂದವನೇ ಹೀಗ್ ಮಾಡಿರ‍್ತಾನೆ. ಇಶ್ಟಕ್ಕೂ ಈ ಹಣ ಎಲ್ಲಿಂದ ತರ‍್ತಾ ಇದೀರ‍್ರೀ?” ಎಂದು ಕೇಳಿದಾಗ ಆ ಆಸಾಮಿ “ಹಾಸನದಿಂದ ಅಡಿಕೆ ಮಾರಿ ತಂದ ಹಣ” ಎಂದು ಉಸಿರಿದ. ಈ ಆಸಾಮಿಗೆ ಕುಡಿತದ ಚಟ ಇದ್ದಿದ್ದರಿಂದ ಹಣ ತೆಗೆದುಕೊಂಡು ಬಾರಿಗೆ ಹೋಗಿ ಗುಂಡು ಸೇವೆ ಮಾಡಿಕೊಂಡೆ ಹಾಸನದಿಂದ ಚಿಕ್ಕಮಗಳೂರಿಗೆ ಬಸ್ಸು ಹತ್ತಿದ್ದ. ಚಿಕ್ಕಮಗಳೂರಲ್ಲೂ ಇಳಿದು, ಅಲ್ಲಿ ಬಾರಿಗೆ ಹೋಗಿ ಕುಡಿದು, ಕಡೂರಿನ ಬಸ್ಸು ಹಿಡಿದಿದ್ದ. ಇವನ ಚಲನವಲನ ನೋಡಿದ ಯಾರೋ ಕಳ್ಳ ಇವನನ್ನು ಹಿಂಬಾಲಿಸಿ ಹಣ ಹೊಡೆಯುವ ಕೈಚಳಕ ತೋರಿದ್ದಾನೆ.

ಈ ಆಸಾಮಿಯ ಕೂಗಾಟ ರಂಪಾಟ ನೋಡಿ ಕಂಡಕ್ಟ‍ರ್ ”ಯಾರೂ ಬಸ್ಸಿಂದ ಇಳಿ ಬ್ಯಾಡ್ರಿ, ಬಸ್ಸಿನ ಬಾಗಿಲು ಬಂದ್ ಮಾಡ್ರಿ, ಬಸ್ಸು ಪೋಲಿಸ್ ಸ್ಟೇಶನ್ಗೆ ಒಯ್ಯುತ್ತೇವೆ, ಅಕಸ್ಮಾತ್ ಯಾರಿಗಾದ್ರೂ ಹಣ ಸಿಕ್ಕಿದ್ರೆ, ತಗೊಂಡಿದ್ರೆ ಕೊಟ್ಬಿಡ್ರಿ ಮತ್ತೆ ಪೋಲಿಸ್ ತಪಾಸಣೆ, ಕೇಸು ಅಂತ ತಗಲಾಕೋ ಬ್ಯಾಡ್ರಿ” ಎಂದು ಎಚ್ಚರಿಸಿದ. ದರ‍್ಮಸ್ತಳಕ್ಕೆ ಹೋಗಿ ಬುರುಡೆ ಹೊಡೆಸಿಕೊಂಡು ಗಂದ ಮೆತ್ತಿಕೊಂಡು ಬಲಬದಿಯ ಸೀಟಿನಲ್ಲಿ ಕುಳಿತದ್ದ ಆಸಾಮಿಯ ತಲೆ ಬುರುಡೆಯಲ್ಲಿ ಬೆವರ ಹನಿ ಕಾಣಿಸಿಕೊಳ್ಳತೊಡಗಿತು. ದೇವರ ಸನ್ನಿದಿಗೆ ಹೋಗಿ ಮಂಡೆ ಕೊಟ್ಟು ಬಂದಗಳಿಗೆ ಚೆನ್ನಾಗಿದೆ ಎಂದುಕೊಂಡು, ತನ್ನ ಕಾಲ ಮೇಲೆ ಬಿದ್ದ ಐದುನೂರರ ಒಂದು ಕಂತೆ ಮೆತ್ತಗೆ ಎತ್ತಿಕೊಂಡು ತನ್ನ ಬ್ಯಾಗಿನಲ್ಲಿ ಮಡಗಿಕೊಂಡು ಬಯಸದೆ ಬಂದ ಬಾಗ್ಯಕ್ಕೆ ಒಳಗೊಳಗೆ ಕುಶಿ ಪಡುತಿದ್ದ ಆಸಾಮಿಗೆ ಈಗ ಬೆವರು ಕಿತ್ತಕೊಳ್ಳತೊಡಗಿದೆ. ಬಸ್ಸೀಗ ಪೋಲಿಸ್ ಸ್ಟೇಶನ್ ಕಡೆಗೆ ಓಡಿಸುವ ತಯಾರಿ ನಡೆಸಿದ್ದಾನೆ ಡ್ರೈವ‍ರ್. ಅಲ್ಲಿ ಹೋಗಿ ಎಲ್ಲರ ಮುಂದೆ ನನ್ನ ಮರ‍್ಯಾದೆ ಹೊಗೋದಿಕ್ಕಂತ ಮೆತ್ತಗೆ ಹಣ ಎತ್ತಿಕೊಡುವುದೇ ವಾಸಿ ಎಂದು ತನ್ನ ನಡಗುವ ಕೈಯಿಂದ ಹಣದ ಕಂತೆ ಎತ್ತಿ, “ಕಂಡಕ್ಟ‍ರ್ ಸಾಹೇಬರೆ ಇಲ್ಲಿ ಯಾವ್ದೋ ಒಂದು ದುಡ್ಡಿನ ಕಂತೆ ಬಿದ್ದಿತ್ತು ನೋಡಿ ಯಾರ‍್ದು ಅಂತ” ಎಂದು ನಾಟಕೀಯ ರೂಪದಲ್ಲಿ ತೆಗೆದು ಕೊಟ್ಟ. ಕಂಡಕ್ಟ‍ರ್ “ಅಲ್ರೀ ಒಂದು ಗಂಟೆಯಿಂದ ಶಂಕ ಹೊಡ್ಕೊತಿದೀವಿ, ಕಿವಿಯಲ್ಲಿ ಏನು ಇಟ್ಕೊಂಡಿದ್ರಿ, ನಿಮ್ಮಿಂದ ಸುಕಾಸುಮ್ಮನೆ ಬಸ್ಸು ಹೊರುಡುವ ಸಮಯನು ಹಾಳು ಮಾಡಿದ್ರಿ ಪ್ರಯಾಣಿಕರಿಗೂ ತೊಂದ್ರೆ ಕೊಟ್ರಿ” ಎಂದು ಜೋರು ಮಾಡಿದ.

“ಇಲ್ಲ ಸಾ‍ರ್ ನಾನು ಮಲಗಿ ಬಿಟ್ಟಿದ್ದೆ ಹಂಗಾಗಿ ನನಗೇನು ಗಲಾಟೆ ಅಂತ ತಿಳಿಲಿಲ್ಲ, ನಿದ್ದೆಯಿಂದ ಎದ್ದು ಕಾಲು ಅತ್ತಿತ್ತ ಆಡಿಸಿದಾಗ ಮೆತ್ತನೆ ವಸ್ತು ಕಾಲಿಗೆ ಹತ್ತಿದಂತಾಯ್ತು, ಆಗ ನೋಡಿದ್ರೆ ಇದು ದುಡ್ಡಿನ ಕಂತೆ ಸ‍ರ್” ಎಂದು ಹಲುಬಿದ. ಅದಕ್ಕೆ ಕಂಡಕ್ಟ‍ರ್ ಬಲ್ ನನ್ನ ಮಗ ನೀನು, ಏನು ಗಲಾಟೆ ಆಗ್ದೆ ಸುಮ್ಮನಾಗಿ ಬಿಟ್ಟಿದ್ರೆ ಅನಾಮತ್ ಲಾಟ್ರಿ ಹೊಡಿತಿತ್ತು ಅಲ್ವ? ಎಂದು ವ್ಯಂಗ್ಯವಾಡಿದ. ನಂತರ ಆ ಹಣವನ್ನು ಕಳೆದುಕೊಂಡಿದ್ದ ಪುಣ್ಯಾತ್ಮನಿಗೆ ಕೊಟ್ಟು” “ಮಹರಾಯ ಇಶ್ಟೊಂದು ಹಣ ಹಿಡ್ಕೊಂಡು ಮನೆಗೆ ಹೋಗ್ತಾ ಇದೀಯ ಜೋಪಾನವಾಗಿ ಇರೋದು ಗೊತ್ತಿಲ್ಲ ನಿನಗೆ” ಎಂದು ಕಂಡಕ್ಟ‍ರ್ ಸಹಸ್ರನಾಮ ಹಾಡಿದ ನಂತರ “ರೈಟ್, ರೈಟ್”ಎಂದು ಕೂಗಿ ಡ್ರೈವರ‍್ಗೆ ಬಸ್ಸು ಚಲಾಯಿಸಲು ಅನುಮತಿ ಕೊಟ್ಟ. ಇಡೀ ಬಸ್ಸಿನ ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣ ಮುಂದುವರೆಸಿದರು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks