ನಾ ನೋಡಿದ ಸಿನೆಮಾ: ಅನ್ನ
ಕೆಲವು ದಶಕಗಳ ಹಿಂದೆ, ಅನ್ನ (ಕೂಳು) ಎನ್ನುವುದು ಯಾವಾಗಲೂ, ಎಲ್ಲರಿಗೂ ಸಿಗುತ್ತಿದ್ದಂತ ತಿನಿಸಲ್ಲ. ಅದು ಕೇವಲ ಸಿರಿವಂತರ ಮನೆಯಲ್ಲಿ ಮಾತ್ರ ಕಾಣಬಹುದಾದಂತಹ ತಿನಿಸಾಗಿತ್ತು. ಊಳಿಗ ಕುಟುಂಬಗಳಲ್ಲೂ ಹೆಚ್ಚೆಂದರೆ ಹಬ್ಬ ಹರಿದಿನಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆಗ ರಾಗಿಯೊಂದೇ ಎಲ್ಲರಿಗೂ ಎಟಕುತ್ತಿದ್ದ ದಾನ್ಯ. ಹಳೆ ಮೈಸೂರು ಬಾಗದ ಹಿರಿಯರಿಗೆ ಇದರ ಬಗ್ಗೆ ಅರಿವಿರುತ್ತದೆ. ಹೊಟ್ಟೆ ತುಂಬಿದರೆ ಸಾಕು ಎಂದುಕೊಳ್ಳುವ ಕಾಲ ಕಳೆದು, ರುಚಿಯಾದ ಊಟ ಬೇಕು ಎನ್ನುವ ಕಾಲಗಟ್ಟಲ್ಲಿರುವ ನಮಗೆ ಇದರ ಬಗ್ಗೆ ಅರಿವು ಕಡಿಮೆ. ಕೆಲವೇ ದಶಕಗಳ ಹಿಂದೆ ಇದ್ದ ಈ ಪರಿಸ್ತಿಯನ್ನೇ ಕತಾವಸ್ತುವಾಗಿ ಇಟ್ಟುಕೊಂಡು ಸಿನೆಮಾ ಒಂದು ತೆರೆಗೆ ಬಂದಿದೆ ಅದೇ “ಅನ್ನ”
ಚಾಮರಾಜನಗರ ಜಿಲ್ಲೆಯ ಹನೂರು ಬಾಗದ ಹಳ್ಳಿಯೊಂದರ ಪುಟ್ಟ ಕುಟುಂಬದಲ್ಲಿ ಮಗನನ್ನೇ (ಮಾದೇವ) ಸರ್ವಸ್ವವೆಂದು ತಿಳಿದು, ಇದ್ದದ್ದರಲ್ಲೇ ಬದುಕು ನಡೆಸುತ್ತಿರುವ ಗಂಡ (ಚಿಕ್ಕನಿಂಗ) ಹೆಂಡತಿ (ಸಿವಿ). ಇವರಿಗೆ ಮಗನನ್ನು ಬಿಟ್ಟು ಇನ್ನೇನು ಬೇಕಿಲ್ಲ. ಆ ಪುಟ್ಟ ಹುಡುಗನೂ ಸಹ ಎಲ್ಲರಂತೆ ಆಡುತ್ತಾ, ನಲಿಯುತ್ತಾ ತನ್ನ ಕುಟುಂಬದೊಂದಿಗೆ ಇದ್ದರೂ, ಆತನಿಗಿರುವ ಒಂದೇ ಆಸೆ ಅದು ಅನ್ನ. ದಿನವೂ ಇಟ್ಟು (ರಾಗಿ ಮುದ್ದೆ) ತಿನ್ನಲು ಮಾತ್ರ ಸಾದ್ಯವಿರುವ ಮಾದೇಶನಿಗೆ ಅನ್ನ ತಿನ್ನಬೇಕೆಂಬ ಹಂಬಲ. ಆದರೆ ಅದು ಅಶ್ಟು ಸುಲಬದ ಮಾತಲ್ಲ. ಎಲ್ಲರಿಗೂ ಸಿಗುವಂತಹ ವಸ್ತುವೂ ಅಲ್ಲ, ಆದರೆ ಇದನ್ನು ಅರಿತು ನಡೆಯುವ ವಯಸ್ಸೂ ಅಲ್ಲ. ಮಗನ ಈ ಆಸೆಯನ್ನು ಹೇಗಾದರೂ ನೆರವೇರಿಸಬೇಕೆನ್ನುವ ತಂದೆ ತಾಯಿ, ಆದರೆ ಆ ಬಡತನದಲ್ಲಿ ಅವರ ಪ್ರಯತ್ನಗಳೂ ಪಲಿಸದೆ, ಮಗನ ಆಸೆಯನ್ನು ಮುಂದೂಡುತ್ತಲೇ ಇರಬೇಕಾಗಿರುತ್ತದೆ. ಹೀಗಿರುವಾಗ ಒಮ್ಮೆ ಜಾತ್ರೆಗೆ ಮಗನನ್ನು ಕರೆದೊಯ್ದಾಗ, ಅಲ್ಲಿ ಮಾದೇವ ಕಾಣೆಯಾಗುತ್ತಾನೆ. ಹಲವು ದಿನಗಳ ಪ್ರಯತ್ನದ ನಂತರ ಕಾಣೆಯಾಗಿದ್ದ ಮಗನ ಸುಳಿವು ಸಿಗುತ್ತದೆ, ಆದರೆ ಊಹಿಸಲಾಗದ ಸನ್ನಿವೇಶವೊಂದು ತಲೆದೋರುತ್ತದೆ. ಇದು ಈ ಸಿನೆಮಾದ ಒಂದು ಸಣ್ಣ ಪರಿಚಯ. ಆಸೆ/ಅವಶ್ಯಕತೆಗಳು ಏನೆಲ್ಲಾ ಮಾಡಿಸುತ್ತವೇ ಎನ್ನುವುದನ್ನು ಈ ಸಿನೆಮಾ ಮಂದಿಯ ಮುಂದಿಟ್ಟಿದೆ.
ಚಿತ್ರದ ಮುಕ್ಯ ಪಾತ್ರಗಳಾದ ಮಾದೇವ (ನಂದನ್), ಸಿವಿ(ಪದ್ಮಶ್ರೀ) ತಮ್ಮ ಚೊಚ್ಚಲ ಚಿತ್ರದಲ್ಲೇ ನೋಡುಗರನ್ನು ಸೆಳೆಯುತ್ತಾರೆ. ಮಾದೇವ ಪಾತ್ರದಾರಿ ನಂದನ್, ಈ ಪುಟ್ಟ ಪ್ರತಿಬೆಯನ್ನು ಸಾಮಾಜಿಕ ಜಾಲತಾಣದ ಒಂದು ವೀಡಿಯೊ ತುಣುಕಿನ ಮೂಲಕ ಗುರುತಿಸಿ, ಕರೆತಂದ ಚಿತ್ರತಂಡದ ಕೆಲಸ ಮೆಚ್ಚುವಂತದ್ದು. ತಾಯಿ ಪಾತ್ರದಲ್ಲಿ ಪದ್ಮಶ್ರೀಯವರು ನಿಜಕ್ಕೂ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಚಿಕ್ಕನಿಂಗನ ಪಾತ್ರದಲ್ಲಿ ಸಂಪತ್ ಮೈತ್ರೇಯ ಅವರ ನಟನೆ ಚೆನ್ನಾಗಿದೆ. ಇಡೀ ಸಿನೆಮಾದಲ್ಲಿ ಇದಲ್ಲದೆ ಇನ್ನೂ ಎರಡು ಮುಕ್ಯ ಪಾತ್ರಗಳಿವೆ. ಪಣಗಾರನ ಪಾತ್ರದಲ್ಲಿ ಬಾಲ ರಾಜ್ವಾಡಿ ಹಾಗೂ ಪಣಗಾರನ ಹೆಂಡತಿ ಸರೋಜ ಪಾತ್ರದಲ್ಲಿ ಬುವನ ಮೈಸೂರು ಅವರು ಮಿಂಚಿದ್ದಾರೆ. ಬಾಲ ರಾಜ್ವಾಡಿ ಅವರು ಯಾವುದೇ ಪುಟ್ಟ ಪಾತ್ರವಾಗಲಿ ಅದನ್ನು ಅಚ್ಚುಕಟ್ಟಾಗಿ ನಿಬಾಯಿಸುತ್ತಾರೆ ಎನ್ನುವುದನ್ನು ಈ ಸಿನಿಮಾದಲ್ಲೂ ಮತ್ತೊಮ್ಮೆ ನಿರೂಪಿಸಿದ್ದಾರೆ. ಇನ್ನುಳಿದಂತೆ ನಾಗಶ್ರೀ ಸಿ. ಎಮ್., ರಮೇಶ್ ಎಸ್. ಪಿ., ನಾಗೇಶ್ ಕಂದೇಗಾಲ ಹಾಗೂ ಇತರರು ನಟಿಸಿದ್ದಾರೆ.
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆದ್ದಿರುವ ಹನೂರು ಚೆನ್ನಪ್ಪ ಅವರ ಅನ್ನ ಎನ್ನುವ ಕಿರು ಕತೆ ಆದಾರಿತ ಚಿತ್ರ ಇದಾಗಿದೆ. ನೋಡುಗರನ್ನು ಚಾಮರಾಜನಗರದ ಪರಿಸರಕ್ಕೆ ಕೊಂಡೊಯ್ದಿದ್ದಾರೆ ಕತೆಗಾರ ಹನೂರು ಚೆನ್ನಪ್ಪ ಅವರು. ಇಸ್ಲಾಹುದ್ದೀನ್ ಎನ್. ಎಸ್. ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಇಸ್ಲಾಹುದ್ದೀನ್, ಸಿದ್ದು ಪ್ರಸನ್ನ, ವಿಶಾಲ ರಾಮಚಂದ್ರ, ಸಿರಿಶ್ ವಶಿಶ್ಟ ಅವರ ಚಿತ್ರಕತೆ ಹನೂರು ಪರಿಸರವನ್ನು ತೆರೆಯಮೇಲೆ ಹುಟ್ಟುಹಾಕಿದೆ. ತಿತಿ ಚಿತ್ರದ ನಂತರ ಒಂದು ಬಾಗದ ಕತೆಯನ್ನು ಇಶ್ಟು ಅಚ್ಚುಕಟ್ಟಾಗಿ ಮಂದಿಯ ಮುಂದಿಟ್ಟಿರುವ ಸಿನೆಮಾ ಮತ್ತೊಂದಿಲ್ಲ ಎನ್ನಬಹುದು. ಚಾಮರಾಜನಗರದ ಹನೂರು ಮಾತಿನ ಶೈಲಿ, ಪರಿಸರ, ಆ ಪದಗಳು, ಎಲ್ಲವೂ ದೂರದ ಬೆಂಗಳೂರಿನಲ್ಲಿ ಕೂತು ನೋಡುವವರಿಗೂ, ಎಲ್ಲೋ ನಾವು ಹನೂರಿನ ಬಾಗದಲ್ಲೇ ಇದ್ದೇವೇನೋ ಎಂದು ಅನಿಸುವುದಂತೂ ನಿಜ. ಹನೂರು ಬಾಗದ ಪದಗಳಾದ ಪಳ್ಳಿ(ಶಾಲೆ), ಇಟ್ಟು (ಮುದ್ದೆ), ಅಟ್ಟಿ(ಮನೆ), ಪಣಗಾರ (ಒಡೆಯ) ಹೀಗೆ ಒಂದೊಂದು ಆಯಾಮದಲ್ಲೂ ಆ ಪರಿಸವನ್ನೇ ತುಂಬಿ, ನೋಡುಗರ ಮುಂದೆ ತಂದಿದೆ ಚಿತ್ರತಂಡ. ಗುರುಸ್ವಾಮಿ ಹಾಗೂ ಮಹೇಶ್ವರ ಎನ್ ಅವರ ಸಂಕಲನವಿದ್ದು, ಬಸವರಾಜು ಎಸ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಸೆಪ್ಟೆಂಬರ್ 6, 2024ರಂದು ತೆರೆಗೆ ಬಂದಿರುವ ಈ ಸಿನೆಮಾ, ಹೆಚ್ಚಿನ ತೆರೆಗಳು ಸಿಗದೆ, ನೋಡುಗರಿಂದ ದೂರ ಉಳಿದು, ನಿರ್ಲಕ್ಶಕ್ಕೆ ಒಳಗಾಗಿದ್ದು ನಿಜಕ್ಕೂ ಬೇಸರದ ಸಂಗತಿ. ಪರನುಡಿ ಸಿನಿಮಾಗಳಿಗೆ ರತ್ನಗಂಬಳಿ ಹಾಸುವ ನಮ್ಮಲ್ಲಿ, ಒಂದೊಳ್ಳೆ ಕನ್ನಡ ಚಿತ್ರಕ್ಕೆ ಸರಿಯಾದ ಬಿಡುಗಡೆ ಸಿಗದಿದ್ದದ್ದು ಕನ್ನಡ ಚಿತ್ರರಂಗದ ಪರಿಸ್ತಿತಿಗೆ ಹಿಡಿದ ಕನ್ನಡಿಯಾಗಿದೆ.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು