ನಾ ನೋಡಿದ ಸಿನೆಮಾ: ಕಿಂಗ್ ಆಪ್ ತೀವ್ಸ್

– ಕಿಶೋರ್ ಕುಮಾರ್.

2015 ರಲ್ಲಿ ಲಂಡನ್ ನಲ್ಲಿ ನಡೆದ ಹ್ಯಾಟನ್ ಗಾರ‍್ಡನ್ ಸುರಕ್ಶಿತ ಪೆಟ್ಟಿಗೆ ಕಳ್ಳತನ (Hatton Garden safe deposit burglary) ಲಂಡನ್ ನಲ್ಲಿ ಇದುವರೆಗೂ ನಡೆದಿರುವ ದೊಡ್ಡ ಕಳ್ಳತನಗಳಲ್ಲಿ ಒಂದಾಗಿದೆ. ಇದರಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬಾತನನ್ನು ಬಿಟ್ಟು, ಉಳಿದವರೆಲ್ಲರೂ ಮುದುಕರು ಎನ್ನುವುದು ಮತ್ತೊಂದು ಆಶ್ಚರ‍್ಯಕರವಾದ ಸುದ್ದಿ. ಈ ಎಳೆಯನ್ನು ಇಟ್ಟುಕೊಂಡು 2018 ರಲ್ಲಿ ತೆರೆಗೆ ಬಂದ ಚಿತ್ರ – ಕಿಂಗ್ ಆಪ್ ತೀವ್ಸ್.

ವಯಸ್ಸಾದ ಮುದುಕರ ತಂಡವೊಂದು ತಮ್ಮ ಮುಪ್ಪಿನಲ್ಲಿ ಕೊನೆಯದಾಗಿ ಒಂದು ದೊಡ್ಡ ಕಳ್ಳತನ ಮಾಡಲು ಯೋಜನೆ ಹಾಕುತ್ತದೆ. ಇವರ ಯೋಜನೆಗೆ ಲಂಡನ್ ನ ಹ್ಯಾಟನ್ ಗಾರ‍್ಡನ್ ಸೇಪ್ ಡೆಪಾಸಿಟ್ ಲಿಮಿಟೆಡ್ (ಇದೊಂದು ಸೇಪ್ ಡೆಪಾಸಿಟ್ ಸೇವೆ ಒದಗಿಸುವ ಸಂಸ್ತೆ) ಅನ್ನು ಆಯ್ಕೆಮಾಡಿಕೊಂಡು, ಈ ಕಳ್ಳತನಕ್ಕೆ ಒಬ್ಬ ಆಲಾರ‍್ಮ್ ನಿಪುಣನನ್ನು ಸಹ ಸೇರಿಸಿಕೊಳ್ಳುತ್ತಾರೆ. ಈಸ್ಟರ‍್ ಹಬ್ಬದ ರಜೆಯಲ್ಲಿ ಕಳ್ಳತನ ಮಾಡಲು ನಿರ‍್ದರಿಸುತ್ತಾರೆ. ಹೀಗೆ ಎಲ್ಲಾ ರೀತಿಯ ಯೋಜನೆಯನ್ನೂ ಮಾಡಿಕೊಂಡು ಕಳ್ಳತನ ಮಾಡುವ ಗುಂಪು, ಕಳ್ಳತನ ಮಾಡಿ ನಂತರ ಕದ್ದ ವಸ್ತುಗಳನ್ನು ಹಂಚಿಕೊಳ್ಳುವಾಗ ಅತಿಯಾಸೆಯಿಂದ ಉಂಟಾಗುವ ಬಿಕ್ಕಟ್ಟು ಹಾಗೂ ಇದರ ನಡುವೆ ಪೊಲೀಸರ ಹುಡುಕಾಟದಿಂದ ಹೇಗೆ ತಮ್ಮ ಇಳಿವಯಸ್ಸಿನಲ್ಲಿ ಜೈಲುಪಾಲಾಗುತ್ತಾರೆ ಎನ್ನುವುದು ಸಿನೆಮಾದ ಕತೆ.

ಒಂದು ನಿಜ ಗಟನೆಯ ಆದಾರಿತ ಸಿನೆಮಾವಾದ್ದರಿಂದ ಹೆಚ್ಚಿನ ಕಮರ‍್ಶಿಯಲ್ ವಿಶಯಗಳನ್ನು ಸೇರಿಸದೆ, ಕತೆಗೆ ಒತ್ತು ಕೊಡಲಾಗಿದೆ. ಕತೆಯನ್ನು ಸರಳವಾಗಿ ಕೊಂಡೊಯ್ಯಲಾಗಿದ್ದು, ಒಂದೊಂದು ಒಕ್ಕಣೆಯನ್ನು ಅಚ್ಚುಕಟ್ಟಾಗಿ ನೋಡುಗರ ಮುಂದಿಡಲಾಗಿದೆ. ಒಂದು ಕಳ್ಳತನದ (ಹೈಸ್ಟ್) ಸಿನೆಮಾವನ್ನು ಅದೇ ರೀತಿ ಇಡಲು ಸಿನೆಮಾ ತಂಡ ಒತ್ತು ನೀಡಿರುವುದು ಸಿನೆಮಾದಲ್ಲಿ ಎದ್ದು ಕಾಣುತ್ತದೆ. ಪಾತ್ರಗಳ ನಡುವಿನ ಸಂಬಾಶಣೆ, ಅತಿಯಾಸೆ, ವೈಮಸ್ಸುಗಳ ವ್ಯಕ್ತಪಡಿಸುವಿಕೆ, ವಯೋಸಹಜ ಕಾಯಿಲೆಗಳ ಉಲ್ಲೇಕ ಇವೆಲ್ಲವನ್ನೂ ಆದಶ್ಟು ನೈಜವಾಗಿ ತೋರಲಾಗಿದೆ. ಎಲ್ಲವೂ ಕೈತಪ್ಪಿ ಶರಣಾಗಲೇ ಬೇಕಾದಾಗ, ಮುಕ್ಯ ಪಾತ್ರದಾರಿ ಕೈ ಚೆಲ್ಲಿ ಶರಣಾಗುವ ಸನ್ನಿವೇಶ ನೋಡುಗರ ಮೆಚ್ಚುಗೆ ಪಡೆಯುತ್ತದೆ.

ಬ್ಯಾಟ್ ಮ್ಯಾನ್ ಟ್ರಯಾಲಜಿ, ಇಂಟರ‍್ ಸ್ಟೆಲ್ಲರ‍್, ಡನ್ಕಿರಿಕ್ ಹಾಗೂ ಟೆನೆಂಟ್ ಕ್ಯಾತಿಯ ಮೈಕೆಲ್ ಕೇನ್ ಇಲ್ಲಿ ಮುಕ್ಯ ಪಾತ್ರದಲ್ಲಿ ನಟಿಸಿದ್ದು, ಜಿಮ್ ಬ್ರಾಡ್ ಬೆಂಟ್, ಟಾಮ್ ಕರ‍್ಟನೆ, ಚಾರ‍್ಲಿ ಕಾಕ್ಸ್, ಪಾಲ್ ವೈಟ್ ಹೌಸ್, ಮೈಕೆಲ್ ಗ್ಯಾಂಬನ್, ರೇ ವಿನ್ಸ್ಟೋನ್ ಹಾಗೂ ಇತರರು ನಟಿಸಿದ್ದಾರೆ.

ಜೇಮ್ಸ್ ಮಾರ‍್ಶ್ ಅವರು ಈ ಸಿನೆಮಾವನ್ನು ನಿರ‍್ದೇಶಿಸಿದ್ದು, ಜೋ ಪೆನ್ಹಲ್ ಅವರ ಚಿತ್ರಕತೆ, ಡ್ಯಾನಿ ಕೋಹೆನ್ ಅವರ ಸಿನೆಮಾಟೊಗ್ರಪಿ, ಜಿನ್ಸ್ ಗಾಡ್ಪ್ರೇ ಹಾಗೂ ನಿಕ್ ಮೋರ್ ಅವರು ಎಡಿಟಿಂಗ್ ಹೊಣೆ ಹೊತ್ತಿದ್ದಾರೆ. ವರ‍್ಕಿಂಗ್ ಟೈಟಲ್ ಪಿಲಂಸ್ ಅವರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ. 14 ಸೆಪ್ಟೆಂಬರ‍್ 2018 ರಂದು ತೆರೆಕಂಡ ಈ ಸಿನೆಮಾ ಈಗ ಪ್ರೈಮ್ ವೀಡಿಯೋದಲ್ಲಿ ಲಬ್ಯವಿದೆ.

(ಚಿತ್ರಸೆಲೆ: workingtitlefilms.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *