ಮಕ್ಕಳ ಕತೆ: ರಜೆಯ ಮಜಾ

– ವೆಂಕಟೇಶ ಚಾಗಿ.

children, ಮಕ್ಕಳು

ಶಾಲೆಗೆ ರಜೆ ನೀಡಲಾಗಿತ್ತು. ಎಲ್ಲ ಮಕ್ಕಳೂ “ನಮಗೆ ರಜೆ” ಎಂದು ಕುಶಿಯಿಂದ ಮನೆಕಡೆ ಹೋದರು. ‘ಶಾಲೆಗೆ ಇಂತಿಶ್ಟು ದಿನಗಳ ಕಾಲ ರಜೆ ಇದೆ’ ಎಂದು ಗುರುಗಳು ಸೂಚನಾ ಪಲಕದ ಮೇಲೆ ಸೂಚನಾ ಪತ್ರವನ್ನು ಅಂಟಿಸಿ, ಶಾಲೆಯ ಎಲ್ಲಾ ತರಗತಿ ಕೋಣೆಗಳಿಗೆ ಬೀಗ ಜಡಿದು ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಮಕ್ಕಳು ಕುಶಿಯಿಂದ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾ ತಾವು ರಜೆಗೆ ಹೋಗುತ್ತಿರುವ ಊರಿನ ಬಗ್ಗೆ ರಜೆಯಲ್ಲಿ ಕೈಗೊಳ್ಳುವ ಕಾರ‍್ಯಗಳ ಬಗ್ಗೆ ಪರಸ್ಪರ ಹಂಚಿಕೊಳ್ಳುತ್ತ ಮನೆಯತ್ತ ಸಾಗುತ್ತಿದ್ದರು.

ರಾಜು ಹಾಗೂ ಸೀಮಾ ಅಕ್ಕ ಪಕ್ಕದ ಮನೆಯವರು, ರಾಜು ತಾನು ರಜೆಗೆಂದು ತನ್ನ ಅಜ್ಜಿಯ ಊರಿಗೆ ಹೊರಟನು. ಸೀಮಾ ತನಗೆ ಅಜ್ಜಿಯ ಊರು ಇಲ್ಲವೆಂದು ರಾಜುವಿನ ಬಳಿ ಹೇಳಿಕೊಂಡಳು. ರಾಜು ತನ್ನ ಅಪ್ಪ ಅಮ್ಮನಿಗೆ ಸೀಮಾಳನ್ನು ಸಹ ಅಜ್ಜಿಯ ಊರಿಗೆ ಕರೆದುಕೊಂಡು ಹೋಗೋಣವೆಂದು ಹಟ ಹಿಡಿದನು. ಒಂದೇ ತರಗತಿಯಲ್ಲಿ ಓದುತ್ತಿದ್ದುರಿಂದ ಚಿಕ್ಕ ವಯಸ್ಸಿನಿಂದಲೇ ಆತ್ಮೀಯ ಗೆಳೆಯರಾಗಿದ್ದರು. ಆದ್ದರಿಂದ ರಾಜುವಿನ ಮನವಿಯನ್ನು ಅವನ ತಂದೆ ತಾಯಿ ಒಪ್ಪಿದರು. ಹಾಗೂ ಸೀಮಾಳ ತಂದೆ-ತಾಯಿಗಳ ಜೊತೆ ಚರ‍್ಚಿಸಿ ಸೀಮಾಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗುವ ಯೋಚನೆ ಮಾಡಿದರು. ಇದಕ್ಕೆ ಸೀಮಾಳ ತಂದೆ-ತಾಯಿ ಹಾಗೂ ರಾಜುವಿನ ತಂದೆ-ತಾಯಿ ಒಪ್ಪಿದರು. ಸೀಮಾಳಿಗೆ ಹಾಗೂ ರಾಜುವಿಗೆ ತುಂಬಾ ಕುಶಿಯಾಯಿತು. ಸೀಮಾ ತನಗೆ ಬೇಕಾದ ಸಾಮಾನುಗಳನ್ನು ಬಟ್ಟೆ ಬರೆಗಳನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ಸಿದ್ದಳಾಗಿ ರಾಜು ಹಾಗೂ ಅವನ ತಂದೆ ತಾಯಿಯರೊಂದಿರಿಗೆ ಹಳ್ಳಿಗೆ ಹೊರಟಳು.

ರಾಜುವಿನ ಹಳ್ಳಿ ತುಂಬಾ ಸುಂದರವಾಗಿತ್ತು. ಆ ಹಳ್ಳಿಯ ಸುತ್ತಮುತ್ತ ಬರಿ ಹೊಲಗದ್ದೆಗಳೇ ಇದ್ದವು. ರಾಜು ಅಜ್ಜಿಯ ಮನೆ ಬಂದಾಗ, ಅಜ್ಜಿ ರಾಜುವನ್ನು ಆದರದಿಂದ ಬರಮಾಡಿಕೊಂಡರು. ಹಾಗೆಯೇ ಸೀಮಾಳನ್ನು ತನ್ನ ಮೊಮ್ಮಗಳಂತೆ ಬರಮಾಡಿಕೊಂಡು ಸೀಮಾಳಿಗೆ ತಿನ್ನಲೆಂದು ರುಚಿಯಾದ ಸಿಹಿ ತಿಂಡಿಯನ್ನು ಕೊಟ್ಟರು.

ರಾಜು ಸೀಮಾಳನ್ನು ಕರೆದುಕೊಂಡು ತನ್ನ ಅಜ್ಜಿಯ ಮನೆಯನ್ನೆಲ್ಲ ನೋಡಲು ಹೋದನು. ಅಜ್ಜಿಯ ಮನೆ ತುಂಬಾ ಸುಂದರವಾಗಿತ್ತು. ಬಹು ವರ‍್ಶಗಳ ಹಿಂದಿನ ಮನೆಯಾದುದರಿಂದ ಮನೆಯ ಅಲಂಕಾರಗಳು ವಾಸ್ತುಶಿಲ್ಪ, ಕಟ್ಟಡದ ರಚನೆ, ಹಳೆಯ ಪೋಟೋಗಳು, ಹಳೆಯ ವಸ್ತುಗಳು ಇವುಗಳೆಲ್ಲವನ್ನು ನೋಡಿ ರಾಜು ಹಾಗೂ ಸೀಮಾ ತುಂಬಾ ಕುಶಿಯಾದರು.

ಮರುದಿನ ರಾಜು ತನ್ನ ಹಳ್ಳಿಯ ಸ್ನೇಹಿತರನ್ನು ಬೇಟಿಯಾಗಲು ಊರೊಳಗೆ ಹೊರಟನು. ರಾಜು ತನ್ನ ಸ್ನೇಹಿತರನ್ನು ಸೀಮಾಳಿಗೆ ಪರಿಚಯಿಸಿದ. ಸ್ನೇಹಿತರೆಲ್ಲ ರಾಜುವನ್ನು ಕಂಡು ತುಂಬಾ ಸಂತಸಗೊಂಡರು. ಎಶ್ಟೋ ದಿನಗಳಾದ ಮೇಲೆ ರಾಜುವನ್ನು ಬೇಟಿಯಾದರಿಂದ ಎಲ್ಲಾ ಸ್ನೇಹಿತರು, ರಾಜುವಿನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅವನ ವಿದ್ಯಾಬ್ಯಾಸ ಹಾಗೂ ಆಟ ಪಾಟಗಳ ಬಗ್ಗೆ ವಿಚಾರಿಸಿ ರಾಜುವನ್ನು ತಮ್ಮ ಶಾಲೆಯ ಬಳಿ ಕರೆದುಕೊಂಡು ಹೋದರು. ಹಳ್ಳಿಯ ಶಾಲೆ ಮೊದಲಿನಂತೆ ಹಾಳು ಕೊಂಪೆಯಾಗಿರಲಿಲ್ಲ. ಸುತ್ತಲೂ ಕಾಂಪೌಂಡ್ ಹಾಗೂ ಸುಂದರವಾದ ಕಟ್ಟಡಗಳು ಆ ಶಾಲೆಯಲ್ಲಿದ್ದವು. ಶಾಲೆಯ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳು ವಿದವಿದವಾದ ಮಾಹಿತಿ, ಸುಂದರವಾದ ಹೂಗಳು ಇವುಗಳೆಲ್ಲವನ್ನು ನೋಡಿದ ರಾಜುವಿಗೆ ಹಾಗೂ ಸೀಮಾರಿಗೆ ತುಂಬಾ ಆಶ್ಚರ‍್ಯವಾಯಿತು.

“ಈ ಶಾಲೆ ಎಂದು ಸುಂದರವಾಗಿದೆ. ನೋಡಲು ತುಂಬಾ ಹಿತವೆನಿಸುತ್ತಿದೆ” ಎಂದನು ರಾಜು . “ನಮ್ಮ ಊರಿಗೆ ಬಂದ ಗುರುಗಳು ಈ ರೀತಿಯಾಗಿ ನಮ್ಮ ಶಾಲೆಯನ್ನು ಸುಂದರಗೊಳಿಸಿದ್ದಾರೆ. ಅವರ ಪಾಟ ಕೇಳುವುದು ಎಂದರೆ ನಮಗೆ ತುಂಬಾ ಕುಶಿ ಅವರು ನಮಗೆ ಎಲ್ಲಾ ವಿಶಯಗಳನ್ನು ಚೆನ್ನಾಗಿ ಹೇಳಿಕೊಡುತ್ತಾರೆ”, ಎಂದು ಆ ಮಕ್ಕಳೆಲ್ಲ ತಮ್ಮ ಗುರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜುವಿಗೂ ಅಂತಹ ಗುರುಗಳ ಪಾಟವನ್ನು ಕೇಳಬೇಕು ಎನ್ನುವ ಆಸೆಯಾಯಿತು. ಶಾಲೆಯ ದಿನಗಳಲ್ಲಿ ಶಾಲೆಗೆ ಬಂದು ಪಾಟ ಕೇಳುವ ಹಂಬಲವನ್ನು ರಾಜು ವ್ಯಕ್ತಪಡಿಸಿದ. ಎಲ್ಲಾ ಸ್ನೇಹಿತರು ರಾಜವಿಗೆ “ಕಂಡಿತ ನೀನು ನಮ್ಮ ಶಾಲೆಗೆ ಬರಬೇಕು” ಎಂದು ಹೇಳಿದರು.

ನಂತರ ಎಲ್ಲಾ ಸ್ನೇಹಿತರು ಸೇರಿಕೊಂಡು ಊರ ಆಚೆ ಇರುವ ಹಳ್ಳದ ಹಾಗೂ ಕೆರೆಯ ಬಳಿ ಹೊರಟರು . ಕೆರೆಯ ಸುತ್ತ ಮರ-ಗಿಡಗಳು ತುಂಬಾ ಹಸಿರಿನಿಂದ ಕೂಡಿದ್ದವು. ರಾಜು ಹಾಗೂ ಅವನ ಸ್ನೇಹಿತರು ಆ ಗಿಡಗಳನ್ನು ಹತ್ತಿ ಮರಕೋತಿ ಆಟ ಆಡಿದರು. ಸ್ವಲ್ಪ ಸ್ವಲ್ಪ ಸಮಯದ ನಂತರ ಆ ಗಿಡಗಳಲ್ಲಿ ಬೆಳೆದ ರುಚಿಯಾದ ಹಣ್ಣುಗಳನ್ನು ಸವಿದರು. ಸೀಮಾ ಅಲ್ಲಿ ಬೆಳೆದಂತಹ ಹೂಗಳನ್ನು ನೋಡಿ ತುಂಬಾ ಕುಶಿಯಿಂದ “ಈ ಹೂಗಳು ಎಶ್ಟು ಸುಂದರವಾಗಿವೆ! ನೋಡಲು ಮನಮೋಹಕವಾಗಿವೆ” ಎಂದಳು. ನಂತರ ರಾಜುವಿನ ಸ್ನೇಹಿತನೊಬ್ಬ ಅಲ್ಲಿ ಬಿದ್ದಿದ್ದ ತೆಂಗಿನ ಗರಿಗಳನ್ನು ತೆಗೆದುಕೊಂಡು ತನ್ನ ಗುರುಗಳು ಹೇಳಿಕೊಟ್ಟಿದ್ದ ವಿವಿದ ಆಕ್ರುತಿಗಳನ್ನು ಮಾಡಿ ತೋರಿಸಿದ .ಎಲ್ಲರೂ ತೆಂಗಿನ ಗರಿಗಳಿಂದ ವಿವಿದ ಆಕ್ರುತಿಗಳನ್ನು ತಯಾರಿಸಿದರು. ಸೀಮಾ ತೆಂಗಿನಗರಿಗಳಿಂದ ಚೆಂಡು, ಜಡೆ ಮುಂತಾದ ವಸ್ತುಗಳನ್ನು ಮಾಡುವುದನ್ನು ಕಲಿತುಕೊಂಡಳು. ರಾಜು ತನ್ನ ಗೆಳೆಯರಿಂದ ಮತ್ತಶ್ಟು ವಸ್ತುಗಳನ್ನು ಮಾಡುವುದನ್ನು ಕಲಿತುಕೊಂಡನು.

“ಅರೆ, ನಿಮಗೆ ಇವುಗಳನ್ನೆಲ್ಲ ಯಾರು ಕಲಿಸಿಕೊಟ್ಟರು ?” ಎಂದು ರಾಜು ತನ್ನ ಗೆಳೆಯರನ್ನು ಕೇಳಿದ . “ಇವುಗಳನ್ನು ನನ್ನ ಅಣ್ಣ, ಅಕ್ಕ ಅಮ್ಮ, ಅಜ್ಜಿ ಹಾಗೆಯೇ ಬೇರೆಯವರಿಂದ ನಾನು ಕಲಿತುಕೊಂಡೆ. ಹಾಗೆಯೇ ನಮ್ಮ ಅಜ್ಜ ಅಜ್ಜಿಯರು ನಮ್ಮ ತಂದೆ ತಾಯಿಯರು ನಮಗೆ ಇವುಗಳನ್ನು ಮಾಡುವುದು ಕಲಿಸಿದರು” ಎಂದರು.

ಅಲ್ಲಿದ್ದ ಮತ್ತೊಬ್ಬ ಗೆಳೆಯ “ಅಗೋ, ನೋಡಿ ಆ ಕೆರೆಯ ಕೆಸರನ್ನು; ಎಶ್ಟು ಚೆನ್ನಾಗಿದೆ.!! ಅದರಿಂದ ನಾವು ಗೊಂಬೆಗಳನ್ನು ಮಾಡೋಣ ಬನ್ನಿ” ಎಂದು ಎಲ್ಲರನ್ನೂ ಕೆರೆಯ ದಡದ ಬಳಿ ಕರೆದುಕೊಂಡು ಹೋದ. ಎಲ್ಲಾ ಸ್ನೇಹಿತರು ತಮಗೆ ಇಶ್ಟವಾದ ಗೊಂಬೆಗಳನ್ನು ಆ ಮಣ್ಣಿನಿಂದ ಮಾಡತೊಡಗಿದರು. ಕೆಲವರು ಮೊಸಳೆ, ಕೆಲವರು ಪಾತ್ರೆಗಳನ್ನು, ಮತ್ತೆ ಕೆಲವರು ಗಣೇಶನನ್ನು, ಮತ್ತೊಬ್ಬ ಆಟಿಕೆ ವಸ್ತುಗಳನ್ನು, ವಾಹನಗಳನ್ನು ತಯಾರಿಸಿದ. ಸೀಮಾ ಹಾಗೂ ರಾಜು ಹಳ್ಳಿಯ ಸ್ನೇಹಿತರ ಕೌಶಲ್ಯವನ್ನು ಕಂಡು ಮೂಕವಿಸ್ಮಿತರಾದರು. ಅವರಿಂದಲೂ ಆ ಮಣ್ಣಿನಿಂದ ಮಾಡುವ ವಿವಿದ ಆಕಾರಗಳನ್ನು ವಿದಾನವನ್ನು ಕಲಿತರು. ಮತ್ತೊಬ್ಬ ಸ್ನೇಹಿತ ತಾನು ತಂದಿದ್ದ ಹಾಳೆಯನ್ನು ಎತ್ತಿಕೊಂಡು ಚಿಕ್ಕ ಚಿಕ್ಕ ದೋಣಿಗಳನ್ನು ಮಾಡಿ ಕೆರೆಯ ನೀರಿನಲ್ಲಿ ತೇಲಿ ಬಿಟ್ಟ . ಗಾಳಿಗೆ ಆ ದೋಣಿ ಹಗುರವಾಗಿ ತೇಲುತ್ತಿತ್ತು. ಎಲ್ಲರೂ ತೇಲುವ ದೋಣಿಗಳನ್ನು ನೋಡಿ ಸಂತಸಗೊಂಡರು. ಮತ್ತೆ ತಾವು ಕೂಡ ಒಂದೊಂದು ದೋಣಿಯನ್ನು ಕಟ್ಟಬೇಕು ಎಂದು ಅಲ್ಲಿಯೇ ಬಿದ್ದಿದ್ದ ಹಾಳೆಗಳನ್ನು ಎತ್ತಿಕೊಂಡು ಪುಟ್ಟ ಪುಟ್ಟ ದೋಣಿಗಳನ್ನು ಮಾಡಿದರು. ನಂತರ ಅವುಗಳನ್ನು ನೀರ ಮೇಲೆ ತೇಲಿಸಿದರು. ಎಲ್ಲರೂ ಕುಶಿಪಟ್ಟರು.

ಮತ್ತೊಬ್ಬ ಗೆಳೆಯ ಏನೋ ಗುನುಗುತ್ತಿದ್ದ . ರಾಜು “ಅದೇನು ಗುನುಗುತ್ತಿರುವೆ ಜೋರಾಗಿ ಹೇಳು” ಎನ್ನುತ್ತಲೇ ತನ್ನ ಅಜ್ಜಿ ಹೇಳಿಕೊಟ್ಟಿದ್ದ ಒಂದು ಜನಪದ ಗೀತೆ “ಚೆಲ್ಲಿದರು ಮಲ್ಲಿಗೆಯಾ…” ಎಂದು ಹಾಡುತ್ತಿದ್ದ. ಎಲ್ಲರೂ ಜೋರಾಗಿ ಹಾಡತೊಡಗಿದರು.

ಚೆಲ್ಲಿದರು ಮಲ್ಲಿಗೆಯ
ಬಾಣಾ ಸೂರೇರಿ ಮ್ಯಾಲೆ…
ಅಂದದ ಚಂದದ ಮೈಕಾರ ಮಾದೇವಂಗೆ…
ಚೆಲ್ಲಿದರು ಮಲ್ಲಿಗೆಯ…

ಎಂದು ಹಾಡು ಹೇಳಿದರು. ಎಲ್ಲರಿಗೂ ಹಾಡು ಹಾಡುತ್ತಾ, ಸಂತೋಶದಿಂದ ಕುಣಿದಾಡಿದರು. ಮತ್ತೊಬ್ಬ ಗೆಳೆಯ ಜನಪದ ಗೀತೆ “ಉಳವಿಯ ಜಾತ್ರೆಗೆ… ಹೋಗೋಣ ಬನ್ನಿರಮ್ಮ…” ಎಂದು ಹಾಡುತ್ತಾ ಇರುವಂತೆ ಎಲ್ಲಾ ಸ್ನೇಹಿತರು ಆ ಹಾಡಿಗೆ ಚಪ್ಪಾಳೆ ತಟ್ಟುತ್ತಾ ಹಾಡಿದರು.

ಆಗಸದಲ್ಲಿ ಹಾರುತಿದ್ದ ಹಕ್ಕಿಗಳು ಕೆರೆಯ ನೀರಿನಲ್ಲಿ ಈಜುತ್ತಿದ್ದ ಪುಟ್ಟ ಮೀನುಗಳು, ದಂಡೆಯ ಮೇಲೆ ಅಲೆದಾಡುತ್ತಿದ್ದ ಕೊಕ್ಕರೆಗಳು ಇವೆಲ್ಲವನ್ನು ನೋಡಿ ರಾಜು ಹಾಗೂ ಸೀಮಾರಿಗೆ ತುಂಬಾ ಕುಶಿಯಾಯಿತು. “ಇಂದು ಸಂಜೆ ಬನ್ನಿ ಗಿಡದವರೆಗೆ ಮೆರವಣಿಗೆ ಇರುತ್ತೆ ಅಲ್ಲಿಗೆ ತಪ್ಪದೆ ಹೋಗೋಣ ನಾವು ಬಜನಾ ಗೀತೆಗಳನ್ನು ಹಾಡೋಣ” ಎಂದು ರಾಜುವಿನ ಸ್ನೇಹಿತರೆಲ್ಲ ಅಂದರು.

ಸೀಮಾ “ಅದ್ಯಾವ ಮೆರವಣಿಗೆ ?” ಎಂದು ಪ್ರಶ್ನಿಸಿದಳು.

“ನಮ್ಮ ಊರಿನಲ್ಲಿ ದೇವರ ಮೆರವಣಿಗೆ ಇದೆ. ಆ ಸಂದರ‍್ಬದಲ್ಲಿ ಊರಿನ ಎಲ್ಲರೂ ಹೆಣ್ಣು ಮಕ್ಕಳು, ಗಂಡು ಮಕ್ಕಳು ಸೇರಿ ಬಜನೆ ಗೀತೆಗಳು ಹಾಡುತ್ತಾ, ದೇವರ ಹೊತ್ತುಕೊಂಡು ಬನ್ನಿ ಗಿಡದವರೆಗೆ ಹೋಗಿ ನಾವು ಅಲ್ಲಿ ಪೂಜೆಯನ್ನು ಮಾಡಿ ಮತ್ತೆ ದೇವಸ್ತಾನಕ್ಕೆ ಹಿಂದಿರುಗುತ್ತೇವೆ. ಆ ವೈಬವವನ್ನು ನೋಡಲು ತುಂಬಾ ಸುಂದರವಾಗಿರುತ್ತದೆ. ನೀವು ಕಂಡಿತ ಬರಬೇಕು ” ಎಂದರು ಸ್ನೇಹಿತರು. “ಆಗಲಿ” ಎಂದರು. ಸಂಜೆಯಾಗುತ್ತಾ ಬಂದಿದ್ದರಿಂದ ಸೀಮಾ ಹಾಗೂ ರಾಜು ಮನೆಯತ್ತ ಹೊರಟರು.

ಮನೆಗೆ ಬಂದ ಸೀಮಾ ಹಾಗೂ ರಾಜೂರನ್ನು ಅಜ್ಜಿ ಕರೆದು “ಇಂದು ಸಂಜೆ ಕೆಲವೇ ನಿಮಿಶಗಳಲ್ಲಿ ದೇವರ ಮೆರವಣಿಗೆ ಹೊರಡುತ್ತದೆ. ಎಲ್ಲರೂ ಸಿದ್ದರಾಗಿ ಹೊಸ ಬಟ್ಟೆಗಳನ್ನು ದರಿಸಿ ದೇವಸ್ತಾನದ ಬಳಿ ಹೋಗೋಣ” ಎಂದರು. ಸೀಮಾ, ರಾಜು ತಂದೆ ತಾಯಿಯೊಂದಿಗೆ ಮೆರವಣಿಗೆಗೆ ಹೋಗಲು ಸಿದ್ದರಾದರು. ನಂತರ ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು. ಊರಾಚೆ ಇರುವ ದೇವಸ್ತಾನದ ಬಳಿ ಹೊರಟರು. ಬಂಡಿಯ ಪ್ರಯಾಣ ರಾಜು ಹಾಗೂ ಸೀಮಾರಿಗೆ ಕುಶಿ ತಂದಿತು.

ಒಂದು ಹೊಸ ಅನುಬವವನ್ನು ನೀಡಿತು. ದೇವಸ್ತಾನ ಸಮೀಪಿಸುತ್ತಿದ್ದಂತೆಯೇ ಎಲ್ಲರೂ ಬಂಡಿಯಿಂದ ಇಳಿದು ದೇವಸ್ತಾನದ ಬಳಿ ಹೋಗಿ ದೇವರಿಗೆ ನಮಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ಮೆರವಣಿಗೆ ಅದ್ಬುತವಾಗಿತ್ತು. ಕೆಲವು ಹೆಣ್ಣು ಮಕ್ಕಳು ಆರತಿಯನ್ನು ಹಿಡಿದಿದ್ದು ಮಂಗಳ ಗೀತೆಗಳನ್ನು ಹಾಡುತ್ತಿದ್ದರು. ತಲೆಯ ಮೇಲೆ ತುಂಬಿದ ಕಳಶವನ್ನು ಹೊತ್ತು ನಡೆಯುತ್ತಿದ್ದರು.

ಕೆಲವರು ಬಜನಾ ಗೀತೆಗಳು, ಬಜನಾ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಹಾಡುತ್ತಾ ಸಾಗುತ್ತಿದ್ದರು. ರಾಜು ತಾನು ಬಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಸೆ ವ್ಯಕ್ತಪಡಿಸಿದ. ಅದಕ್ಕೆ ಅವನ ತಂದೆಯವರು ಬಜನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದರು. ರಾಜು ತನ್ನ ಹಳ್ಳಿಯ ಸ್ನೇಹಿತನೊಂದಿಗೆ ಜೊತೆಗೂಡಿ ಅವನಿಗೆ ಕೊಟ್ಟಿದ್ದ ತಾಳವನ್ನು ತಾನು ತೆಗೆದುಕೊಂಡು ತಾಳವನ್ನು ಬಾರಿಸುತ್ತಾ ಬಜನೆಯನ್ನು ಹಾಡುತ್ತಾ ಮುಂದೆ ಸಾಗಿದ.

ಆ ಸುಂದರವಾದ ಮೆರವಣಿಗೆಯನ್ನು ನೋಡುತ್ತಲೇ ಹೊತ್ತು ಮುಳುಗುತ್ತಿರುವುದು ಗೊತ್ತಾಗಲೇ ಇಲ್ಲ. ಮೆರವಣಿಗೆಯನ್ನು ಇನ್ನು ನೋಡಬೇಕು ಎನ್ನುವ ಆಸೆ ಎಲ್ಲರ ಮನದಲ್ಲೂ ಮೂಡಿತು.

ಮೆರವಣಿಗೆ ಬನ್ನಿ ಗಿಡಕ್ಕೆ ಬರುತ್ತಿದ್ದಂತೆ ಎಲ್ಲರೂ ಬನ್ನಿ ಕೊಟ್ಟು ತಂದೆ ತಾಯಿಯರಿಗೆ ಗುರು ಹಿರಿಯರಿಗೆ ನಮಿಸಿದರು. ರಾಜು ಹಾಗೂ ಸೀಮಾ ಅವರ ಸಂಸ್ಕಾರವನ್ನು ನೋಡಿ ಅವರಂತೆ ತಾವು ತಮ್ಮ ಅಜ್ಜ ಅಜ್ಜಿ, ತಂದೆ ತಾಯಿಯರಿಗೆ ಹಾಗೂ ಗುರುಹಿರಿಯರಿಗೆ ನಮಿಸಿದರು ಅಲ್ಲಿಯೇ ಆಯೋಜಿಸಲಾಗಿದ್ದ ಪ್ರಸಾದವನ್ನು ಸ್ವೀಕರಿಸಿ, ಮನೆಯತ್ತ ತೆರಳಿದರು.

ಕೆಲವು ದಿನಗಳಾಗುತ್ತಾ ಬಂದಂತೆ ರಜಾ ಅವದಿ ಮುಗಿಯತೊಡಗಿತು.ಇಶ್ಟು ಬೇಗ ರಜೆ ಮುಗಿದು ಹೋಯಿತಲ್ಲ ಎಂಬ ನೋವು ಮನದಲ್ಲಿ ಮೂಡಿತು. ರಾಜುವಿನ ತಂದೆ “ರಾಜು, ಇನ್ನು ಎರಡು ಮೂರು ದಿನಗಳಲ್ಲಿ ರಜೆ ಮುಗಿಯುತ್ತಿದೆ. ನಿಮ್ಮ ಶಾಲೆ ಪ್ರಾರಂಬವಾಗುತ್ತೆ. ನಾವೆಲ್ಲರೂ ಇಂದೇ ಊರಿಗೆ ಹೊರಡಬೇಕು ಸಿದ್ದನಾಗು” ಎನ್ನುತ್ತಲೇ ರಾಜುವಿನ ಕಣ್ಣಲ್ಲಿ ನೀರು ಜಿನುಗಿತು.

ರಾಜು ಹಾಗೂ ಸೀಮಾ ಮತ್ತೊಮ್ಮೆ ತಮ್ಮ ಹಳ್ಳಿಯ ಸ್ನೇಹಿತರನ್ನು ಬೇಟಿಯಾಗಿ ಮತ್ತೆ ರಜೆ ಅವದಿಯಲ್ಲಿ ಕಂಡಿತ ಬರುವೆವೆಂದು ಹೇಳಿ ಬಂದರು. ನಗರಕ್ಕೆ ಹೊರಡಲು ಎಲ್ಲರೂ ಸಿದ್ದರಾಗಿ ಬಸ್ ನಿಲ್ದಾಣಕ್ಕೆ ಬಂದರು. ಬಸ್ಸು ಬರುತ್ತಿದ್ದಂತೆ ರಾಜುವಿಗೆ ಏನೋ ಕಳೆದುಕೊಂಡಂತಹ ಅನುಬವ. ಬಸ್ಸನ್ನೇರಿ ನಗರದತ್ತ ಹೊರಡುತ್ತಲೇ ರಾಜು ಹಳ್ಳಿಯು ಕಣ್ಮರೆಯಾಗುವವರೆಗೂ ಹಳ್ಳಿಯನ್ನು ನೋಡುತ್ತಲೇ ಇದ್ದ. ಸೀಮಾಳ ಕಣ್ಣಲ್ಲು ಆ ಹಳ್ಳಿಯ ಸೌಂದರ‍್ಯ ಮರೆಯಲಾಗಲಿಲ್ಲ. ಇಬ್ಬರೂ ಪರಸ್ಪರ ಹಳ್ಳಿಯ ರಜೆಯ ಅನುಬವಗಳನ್ನು ಹಂಚಿಕೊಳ್ಳುತ್ತಾ ನಗರದತ್ತ ಪ್ರಯಾಣ ಬೆಳೆಸಿದರು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *