ನಾ ನೋಡಿದ ಸಿನೆಮಾ: ಪೆಪೆ
ವಿನಯ್ ರಾಜ್ ಕುಮಾರ್ ಅವರು ಕನ್ನಡದ ಒಂದೊಳ್ಳೆಯ ನಟ ಎಂದರೆ ತಪ್ಪಿಲ್ಲ. ಚಿತ್ರದಿಂದ ಚಿತ್ರಕ್ಕೆ ಅವರ ನಟನೆ ಪಕ್ವವಾಗುತ್ತಾ ಬರುತ್ತದೆ. ಅದಶ್ಟೇ ಅಲ್ಲದೆ, ಅವರು ಒಪ್ಪಿಕೊಳ್ಳುವ ಸಿನೆಮಾ ಕತೆಗಳೂ ಸಹ ಒಂದಕ್ಕೊಂದು ಹೊಸತನದಿಂದ ಕೂಡಿರುತ್ತವೆ. ಅವರ ಮೊದಲ ಸಿನಿಮಾ ಸಿನೆಮಾ ಸಿದ್ದಾರ‍್ತ ಒಂದು ರೊಮ್ಯಾಂಟಿಕ್ ಸಿನೆಮಾವಾದರೆ, ಎರಡನೇ ಸಿನೆಮಾ ರನ್ ಆಂಟನಿ ತ್ರಿಲ್ಲರ್ ಸಿನೆಮಾವಾಗಿತ್ತು, ಮುಂದೆ ಅನಂತು vs ನುಸ್ರತ್ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನೆಮಾ, ಮುಂದೆ 10 ಒಂದು ಕ್ರೀಡೆಯ ಬಗೆಗಿನ ಸಿನೆಮಾ, ಒಂದು ಸರಳ ಪ್ರೇಮ ಕತೆ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನೆಮಾ ಹೀಗೆ ಒಂದಕ್ಕೊಂದು ಹೊಸತನವನ್ನು ನೋಡುಗರರಿಗೆ ನೀಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಇವೆಲ್ಲದಕ್ಕಿಂತಲು ಬೇರೆಯದೇ ಕತೆಯನ್ನು ಆಯ್ಕೆ ಮಾಡಿಕೊಂಡಿರುವ ವಿನಯ್ ಅವರು ಒಂದು ಆಕ್ಶನ್ ಕ್ರೈಮ್ ಸಿನೆಮಾದ ಮೂಲಕ ಜನರ ಮುಂದೆ ಬಂದಿದ್ದಾರೆ.
ಎರಡು ಸಮುದಾಯಗಳ ನಡುವಿನ ಬಿಕ್ಕಟ್ಟು ಹಲವಾರು ವರುಶಗಳವರೆಗೆ ರಕ್ತದ ಹೊಳೆಯನ್ನೇ ಹರಿಸುತ್ತದೆ. ಒಂದು ಸಮುದಾಯವನ್ನು ತಮ್ಮಡಿಯಲ್ಲೇ ಇಡಬೇಕೆನ್ನುವ ಮಂದಿ ಒಂದೆಡೆಯಾದರೆ, ತನ್ನ ಸಮುದಾಯವೂ ಸಹ ತಲೆ ಎತ್ತಿ ನಡೆಯಬೇಕೆನ್ನುವ ಯುವಕ ಪೆಪೆ. ಇದಕ್ಕಾಗಿ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದೇ ಕತೆ.
ನಾಯಕ ವಿನಯ್ ರಾಜ್ ಕುಮಾರ್ ಅವರ ನಟನೆ ಚೆನ್ನಾಗಿ ಮೂಡಿ ಬಂದಿದ್ದು, ಯಾವ ಪಾತ್ರಕ್ಕಾದರೂ ಸೈ ಎನ್ನುವಂತೆ ನಟಿಸಿದ್ದಾರೆ. ನಾಯಕಿಯಾಗಿ ಕಾಜಲ್ ಸುಂದರ್ ಪಾತ್ರ ಚೆನ್ನಾಗಿ ಮೂಡಿ ಬಂದಿದ್ದು, ಇವರ ಸಿನೆಮಾ ಪಯಣದಲ್ಲಿ ಸಿಕ್ಕಿರುವ ಒಂದೊಳ್ಳೆ ಪಾತ್ರ ಎಂದರೆ ತಪ್ಪಾಗಲಾರದು. ತುಂಬಾ ದಿನಗಳ ನಂತರ ಮಯೂರ್ ಪಟೇಲ್ ಅವರು ಚಿತ್ರರಂಗಕ್ಕೆ ಮರಳಿದ್ದು, ಒಂದು ಪ್ರಾತ್ರದಲ್ಲಿ ತಮ್ಮ ನಟನೆಯಿಂದ ನೋಡುಗರನ್ನು ಸೆಳೆಯುತ್ತಾರೆ. ನಾಯಕನ ತಾಯಿಯಾಗಿ ಅರುಣಾ ಬಾಲರಾಜ್ ಅವರ ನಟನೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನವೀನ್ ಡಿ ಪಡಿಲ್ ಅವರು ಇಲ್ಲಿ ಒಂದು ಗಂಬೀರ ಪಾತ್ರವನ್ನು ನಿರ‍್ವಹಿಸಿರುವುದು ವಿಶೇಶ. ಇನ್ನುಳಿದಂತೆ ಬಾಲ ರಾಜ್ವಾಡಿ, ಮೆಡಿನಿ ಕೆಲಮನೆ, ಯಶ್ ಶೆಟ್ಟಿ ಹಾಗೂ ಇತರರು ನಟಿಸಿದ್ದಾರೆ.
ಶ್ರೀಲೇಶ್ ಎಸ್ ನಾಯರ್ ಅವರ ಚಿತ್ರಕತೆ ಹಾಗೂ ನಿರ‍್ದೇಶನವಿದ್ದು, ಮನು ಶೆಡ್ಗರ್ ಅವರ ಎಡಿಟಿಂಗ್, ಪೂರ‍್ಣಚಂದ್ರ ಅವರ ಸಂಗೀತವಿದೆ. ಅಬಿಶೇಕ್ ಜಿ ಕಾಸರಗೋಡು ಅವರ ಸಿನೆಮಾಟೊಗ್ರಪಿ ಚೆನ್ನಾಗಿ ಮೂಡಿಬಂದಿದೆ. ಉದಯ್ ಶಂಕರ್ ಎಸ್ ಹಾಗೂ ಬಿ.ಎಂ. ಶ್ರೀರಾಮ್ ಕೋಲಾರ ಅವರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ.
30 ಆಗಸ್ಟ್ 2024 ರಂದು ಬಿಡುಗಡೆಯಾದ ಈ ಸಿನೆಮಾ ಈಗ ಅಮೇಜಾನ್ ಪ್ರೈಮ್ ನಲ್ಲಿ ಲಬ್ಯವಿದೆ. ನೀವೇನಾದರೂ ಕ್ರೈಮ್ ಆಕ್ಶನ್ ಸಿನೆಮಾ ಪ್ರಿಯರಾಗಿದ್ದರೆ ಪೆಪೆ ನಿಮ್ಮನ್ನು ರಂಜಿಸುತ್ತದೆ.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು