ಕಿರುಗವಿತೆಗಳು

ನಿತಿನ್ ಗೌಡ.

ಕದಿಯಬೇಕಿದೆ

ಕದಿಯಬೇಕಿದೆ ಮುದ್ದಾದ ಕ್ಶಣವನು,
ನಿನ್ನೊಲವ ಹೊತ್ತಿಗೆಯಿಂದ.
ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ,
ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ

ಕಲ್ಪನೆಯ ಲಹರಿ

ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,
ಕಾಣಲಾದೀತೆ ಕವಿ ಕಲ್ಪನೆಯ ಲಹರಿಯ,
ಅರಿಯಾಲಾದೀತೆ ಹೆಣ್ಣಿನೊಲವಿನ ಆಲೋಚನೆಯ,
ನೀರಮೇಲಿನ ಹೆಜ್ಜೆಯಂತೆ ಅವು;
ಸಾಗು ನೀ ಬದುಕು ಬಂದಂತೆ, ಹೆಚ್ಚೇನು ಕೆದಕದೆ

ಒಡಮೂಡಿದ ಒಲವು

ನಾ ಪ್ರೇಮಿಸುವ ಪರಿಯ ನೀ
ಅರಿಯದೆ ಹೋದೆ,
ನೀ ಪ್ರೀತಿಗಾಗಿ ಪರಿತಪಿಸುವ ಪರಿಯ ನಾ
ತಿಳಿಯದೆ ಹೋದೆ,
ಇನ್ನಾದರೂ ಸವೆಸುವ ಬಾ ಬದುಕ ಹಾದಿಯನು
ಒಡಗೂಡಿ, ಒಡಮೂಡಿದ ಒಲವ ಅನುಬವದಿಂದ

ಹಸನಾಗುವುದು ಬಾಳು

ಅಗಲಿದ ಒಲವಿಗೆ, ನೆನಪುಗಳೇ ಸಾಂಗತ್ಯ
ಆಗದಿರು ನೀ ನೆನಪುಗಳ ಪಂಜರದ ಗಿಳಿ
ಮಂಕು ಕವಿಯುವುದು ಆಗ, ಮುಂಬೊತ್ತು ಕಾಣದೆ;
ಹಸನಾಗುವುದು ಬಾಳು, ನೀ ಗತವ ಮೀರಲು

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *