ನಾ ನೋಡಿದ ಸಿನೆಮಾ: ಯುಐ
ಕನ್ನಡ ಚಿತ್ರರಂಗದ ಬುದ್ದಿವಂತ ಅಂತಲೇ ಹೆಸರು ಮಾಡಿರುವ ಉಪೇಂದ್ರ ಅವರು, ನಿರ‍್ದೇಶಕನಾಗಿ ಒಂದು ದೊಡ್ಡ ರಸಿಕರ ಬಳಗವನ್ನೇ ಹೊಂದಿದ್ದಾರೆ. ಇವರು ಹಲವು ವರುಶಗಳಿಗೂಮ್ಮೆ ನಿರ‍್ದೇಶನ ಮಾಡುವುದು ಎಲ್ಲರಿಗೂ ತಿಳಿದದ್ದೇ. 2015 ರಲ್ಲಿ ತೆರೆಕಂಡಿದ್ದ ಉಪ್ಪಿ 2 ಸಿನೆಮಾದ ನಂತರ ಸುಮಾರು 9 ವರುಶಗಳ ಕಾಲ ನಿರ್ದೇಶನದಿಂದ ದೂರ ಉಳಿದಿದ್ದ ಉಪೇಂದ್ರ ಅವರು ಈಗ ಮತ್ತೊಮ್ಮೆ ಯುಐ ಸಿನೆಮಾದಲ್ಲಿ ನಿರ‍್ದೇಶಕನ ಹೊಣೆಯನ್ನು ಹೊತ್ತಿದ್ದಾರೆ.
A ಸಿನೆಮಾದ ನಂತರ ಉಪೇಂದ್ರ ಅವ್ರು ನಿರ‍್ದೇಶಿಸಿದ ಎಲ್ಲಾ ಸಿನೆಮಾಗಳಲ್ಲೂ ಅವರೇ ನಾಯಕ. ಇದು UI ಸಿನಿಮಾದಲ್ಲೂ ಮುಂದುವರೆದಿದೆ. A ಸಿನೆಮಾದಿಂದಲೂ ಉಪೇಂದ್ರ ಅವರು ತಮ್ಮ ಸಿನೆಮಾಗಳ ಮೂಲಕ ಜನರಿಗೆ ಇದ್ದದ್ದನ್ನು ಇದ್ದಹಾಗೆ, ಯಾವುದೇ ಮುಚ್ಚು ಮರೆಯಿಲ್ಲದೆ ಹೇಳುತ್ತಾ ಬಂದಿದ್ದಾರೆ, ಇದರಿಂದಾಗಿಯೇ ಹೆಚ್ಚು ಯುವಕರು ಉಪೇಂದ್ರ ಅವರ ಅಬಿಮಾನಿಗಳಾಗಿರಬೇಕು.
ಈ ಬಾರಿ ಉಪೇಂದ್ರ ಅವರು UI ಸಿನೆಮಾ ಮೂಲಕ ಆಡಳಿತ, ರಾಜಕೀಯ, ಇದರಲ್ಲಿ ಪ್ರಜೆಗಳ ಪಾತ್ರ, ಬವಿಶ್ಯದ ರಾಜಕಾರಣ ಹಾಗೂ ಜನರ ಪರಿಸ್ತಿತಿ ಇದರ ಸುತ್ತ ಕತೆ ಹೆಣೆದಿದ್ದಾರೆ. (2011 ರಲ್ಲಿ ತೆರೆಕಂಡಿದ್ದ ಸೂಪರ್ ಸಿನಿಮಾದಲ್ಲೂ ರಾಜಕೀಯದ ಸುತ್ತ ಕತೆ ಹೆಣೆಯಲಾಗಿತ್ತು). ಇದರೊಟ್ಟಿಗೆ ನೀವು ಬುದ್ಧಿವಂತರಾ, ಇಲ್ಲ ದಡ್ಡರಾ ಎನ್ನುವ ಹುಳುವನ್ನು ನೋಡುಗರ ತಲೆಗೆ ಬಿಟ್ಟಿದ್ದಾರೆ.
ಜನರಿಗೆ ಒಂದು ಸಂದೇಶವನ್ನು ತಮ್ಮದೇ ರೀತಿಯಲ್ಲಿ ನೀಡ ಹೊರಟಿರುವ ಉಪೇಂದ್ರ ಅವರು, ತಾವು ಇದುವರೆಗೂ ಹೇಳಿಕೊಂಡು ಬಂದ ರಾಜಕೀಯ ನಿಲುವುಗಳನ್ನೆಲ್ಲ ಒಂದೆಡೆ ಕಲೆಹಾಕಿ ಸಿನೆಮಾ ಮಾಡಿದ ಹಾಗೆ ತೋರುತ್ತದೆ. ಇತ್ತೀಚಿನ ಕೆಲವು ವರುಶಗಳಲ್ಲಿ ಕನ್ನಡ ನಾಡಿನಲ್ಲಿ ನಡೆದ ಕೆಲವು ಆಗು ಹೋಗುಗಳ ಮೇಲೆ ಒಂದು ಹೊಸ ಹಾಡು ಮಾಡಿದ್ದಾರೆ. ಇದು ಬಿಟ್ಟು ಏನಾದರೂ ಹೊಸತು ಇದೆಯೇ ಎಂದರೆ, ಉತ್ತರ ಇಲ್ಲ. ಕನ್ನಡ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ನಿರ‍್ದೇಕರಾದರೂ, ಇಲ್ಲಿ ಉಪೇಂದ್ರ ಅವರ ನಿರ‍್ದೇಶನ ಇನ್ನೂ 10 ವರುಶಗಳ ಹಿಂದೆ ಉಳಿದಿರುವುದು ಎದ್ದು ಕಾಣುತ್ರದೆ. ಇದುವರೆಗೂ ಹೇಳಿಕೊಂಡು ಬಂದ ಸಾಲುಗಳನ್ನೇ ಮತ್ತೊಮ್ಮೆ ಸಿನೆಮಾದಲ್ಲಿ ಹೇಳಿರೋದನ್ನು ಬಿಟ್ಟರೆ, ಈ ಸಿನೆಮಾದಲ್ಲಿ ಅಂತದ್ದೇನಿದೆ ಎಂದು ಯೋಚಿಸುವ ಸರದಿ ನೋಡುಗನದ್ದು. ಸಿನೆಮಾದ ಉಳಿದ ಪಾತ್ರದಾರಿಗಳೆಲ್ಲ, ಮುಕ್ಯ ಪಾತ್ರದಾರಿಯನ್ನು ಬುದ್ಧಿವಂತ ಎಂದು ನಿರೂಪಿಸಲೇ ಬೇಕೆಂದು ಪಣತೊಟ್ಟಂತೆ ಬಾಸವಾಗುವುದಂತೂ ನಿಜ. ನಾಯಕಿಯ ಪಾತ್ರದಾರಿ (ರೀಶ್ಮಾ ನಾಣಯ್ಯ) ಒಂದು ಹಾಡಿಗೆ ಸೀಮಿತವಾಗಿದ್ದರೆ, ಕಳನಾಯಕ (ರವಿ ಶಂಕರ್) ನಗೆಪಾಟಲಿಗೆ ಈಡಾಗುತಾರೆ. ಹಾಸ್ಯ ಕಲಾವಿದ ಸಾದು ಕೋಕಿಲ ಅವರ ಪಾತ್ರವಾದರೂ ಏನು? ಎನಿಸುವ ಮಟ್ಟಕ್ಕೆ ಸಹ ಕಲಾವಿದರ ಪಾತ್ರಗಳನ್ನು ಕೊಂಡೊಯ್ಯಲಾಗಿದೆ. ಸುಮಾರು ವರುಶಗಳಿಂದ ಕಾದು ಕೂತ ರಸಿಕರಿಗೆ ನಿರಾಸೆಯಾದದ್ದಂತೂ ನಿಜ.
ಡಿಸೆಂಬರ್ 20, 2024 ರಂದು ಸಿನೆಮಾ ಬಿಡುಗಡೆಯಾಗಿದೆ. ಅಜನೀಶ್ ಲೋಕನಾತ್ ಅವರ ಸಂಗೀತ, ವೇಣುಗೋಪಾಲ್ ಅವರ ಸಿನೆಮಾಟೋಗ್ರಪಿ ಹಾಗೂ ವಿಜಯ್ ರಾಜ್ ಅವರ ಎಡಿಟಿಂಗ್ ಇದ್ದು, ಲಹರಿ ಪಿಲಂಸ್ ಹಾಗೂ ವೀನಸ್ ಎಂಟಟೇನರ್‍ಸ್ ಅವರು ಈ ಸಿನೆಮಾದ ನಿರ‍್ಮಾಣದ ಹೊಣೆ ಹೊತ್ತಿದ್ದಾರೆ. ನೀವೇನಾದರೂ ಸಿನೆಮಾ ನೋಡಬೇಕೆಂದಿದ್ದರೆ, ನಿಮ್ಮ ಹತ್ತಿರ ತಿಯೇಟರ‍್ಗಳಲ್ಲಿ ಸಿನೆಮಾ ಲಬ್ಯವಿದೆ.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು