ಕಿರುಬರಹ: ಕೊನೆಗೂ ಸಿಕ್ಕ ನೆಮ್ಮದಿ
ಬಾಗಲಕೊಟೆಯಿಂದ ದಾರವಾಡಕ್ಕೆ ಬರಬೇಕೆಂದರೆ ಹರ ಸಾಹಸವೇ ಸರಿ. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ದಾರವಾಡದ ಚಿಗರಿ ಬಸ್ಸು ಹತ್ತಿ ದಾರವಾಡಕ್ಕೆ ಬರಬೇಕು. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಸಾಕಶ್ಟು ಬಸ್ಸುಗಳಿಲ್ಲದ ಕಾರಣ, ಬಾಗಲಕೋಟೆಯಿಂದ ಗದ್ದನಕೇರಿ ಕ್ರಾಸ್ ಗೆ ಬಂದು ಅಲ್ಲಿಂದ ಬಿಜಾಪುರದಿಂದ ಹುಬ್ಬಳ್ಳಿಗೆ ಸಂಚರಿಸುವ ಬಸ್ಸು ಹಿಡಿದು ಪ್ರಯಾಣಿಸುವ ಯೋಜನೆ ನನ್ನದಾಗಿತ್ತು. ಬಿಜಾಪುರದಿಂದ ಹುಬ್ಬಳ್ಳಿಗೆ ಸಾಕಶ್ಟು ಬಸ್ಸು ಸಂಚರಿಸುವುದರಿಂದ ಮತ್ತು ನಿಯಮಿತ ನಿಲುಗಡೆ ಹೊಂದಿರುವುದರಿಂದ ಈ ನಿರ್ದಾರಕ್ಕೆ ಬಂದಿದ್ದೆ.
ಸರಿ ನಮ್ಮ ಸರ್ಕಾರಿ ಸಾರಿಗೆ ಕೆಂಪು ಬಸ್ಸೇನೋ ಬಂತು ಆದರೆ ಅದು ಬಿಜಾಪುರದಿಂದ ಬರುವಾಗಲೆ ಉಚಿತ ಮಹಿಳಾ ಪ್ರಯಾಣಿಕರ ಜೊತೆಗೆ ಅಲ್ಲೊಂದು ಇಲ್ಲೊಂದು ಪುರುಶ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಆ ಬಸ್ಸು ಒಂಬತ್ತು ತಿಂಗಳು ಹೊತ್ತ ಗರ್ಬಿಣಿ ಹೆಂಗಸಿನ ನಡಿಗೆಯಂತೆ ಏದುಸಿರು ಬಿಟ್ಟಕೊಂಡು ಬಂದು ಗದ್ದನಕೇರಿ ಕ್ರಾಸ್ ನಲ್ಲಿ ನಿಲುಗಡೆಯಾಯ್ತು. ಅದು ನಿಂತದ್ದೆ ತಡ ಜಾತ್ರೆಯಲ್ಲಿ ರತ ಎಳೆಯಲು ಮುಗಿ ಬೀಳುವಂತೆ ಬಸ್ಸು ಹತ್ತಲು ಜನ ನುಗ್ಗತೊಡಗಿದರು. ಇಳಿಯುವವರು ಒಂದು ಪಟ್ಟಾದರೆ ಹತ್ತುವವರು ಎರಡು ಪಟ್ಟು ಇದ್ದರು, ಅದರಲ್ಲೂ ಮಹಿಳಾಮಣಿಗಳ ಸಂಕ್ಯೆಯೆ ಹೆಚ್ಚಾಗಿತ್ತು.
ನನಗೆ ಈ ಬಸ್ಸಿನೊಳಗೆ ಸೀಟು ಸಿಗುವುದು ಹೋಗಲಿ ಇದರ ಒಳಗೆ ತೂರಿಕೊಳ್ಳುವುದೂ ಅಸಾದ್ಯವಾಗಿತ್ತು. ಆದರೂ ನನ್ನ ಪ್ರಯತ್ನ ಬಿಡದೆ ಕಿಟಕಿ ಬದಿಯಿಂದಲೇ ಸೀಟು ಬಿಟ್ಟು ಇಳಿಯುವವರಿಗೆ ನನ್ನ ಬ್ಯಾಗ್ ಪಾರ್ಸಲ್ ಮಾಡಿ, ವಿನಮ್ರ ಮನವಿಯೊಂದಿಗೆ ಒಂದು ಸೀಟು ರಿಸರ್ವ್ ಮಾಡಿಸಿಕೊಂಡೆ. ನಂತರ ಬಸ್ಸಿನೊಳಗೆ ತೂರಿಕೊಳ್ಳಲು ಸಜ್ಜಾಗಿ ಕಶ್ಡಪಟ್ಟು ಬಸ್ಸಿನ ಬಾಗಿಲವರೆಗೂ ನುಗ್ಗಿದೆ ಅಲ್ಲಿಂದ ಮುಂದೆ ಬಸ್ಸಿನೊಳಗೆ ಹೇಗೆ ತೂರಿಕೊಂಡೆನೋ ನನಗೆ ತಿಳಿಯದಾಯ್ತು. ನಾನು ಬಸ್ಸು ಹತ್ತಿದೆ ಎನ್ನುವುದಕ್ಕಿಂತ ನನ್ನ ಸಹ ಪ್ರಯಾಣಿಕರು ಬಸ್ಸಿನೊಳಗೆ ನನ್ನನ್ನು ಹತ್ತಿಸಿದರು ಎಂದರೂ ತಪ್ಪಿಲ್ಲ.
ಸರಿ ಇನ್ನೂ ನನ್ನ ಬ್ಯಾಗ್ ಇಟ್ಟು ರಿಸರ್ವ್ ಮಾಡಿದ ಸೀಟಿನ ಹತ್ತಿರ ಹೋಗುವುದು ಸುಲಬದ ಮಾತಾಗಿರಲಿಲ್ಲ. ನಾನೇ ಜನರನ್ನು ಒತ್ತಿಸಿಕೊಂಡು ನನ್ನ ರಿಸರ್ವ್ ಸೀಟಿನ ಹತ್ತಿರ ಬಂದರೆ, ಆಗಲೇ ಯಾರೋ ಹುರಿ ಮೀಸೆ ಹಮ್ಮೀರ ಬ್ಯಾಗು ಸರಿಸಿ ಕುಳಿತೇ ಬಿಟ್ಟಿದ್ದ. ನಾನು “ಏಳಪ್ಪ ಮೇಲೆ ಅಲ್ಲಿ ನನ್ನ ಬ್ಯಾಗು ಇಟ್ಟಿದ್ದೆ” ಎಂದಾಗ ಆತ ”ಏನ್ರೀ ಈ ಸೀಟು ನಿಮ್ದೆ ಅಂತ ಹೆಸರು ಬರ್ದೈತೇನು?” ಎಂದು ಅಬ್ಬರಿಸಿದ, ನಾನು “ಸರಿಯಪ್ಪ ನೀನೇ ಕುಂತುಕೊ, ಕಡೆ ಪಕ್ಶ ಆ ಬ್ಯಾಗು ತೆಗೆದು ನಿನ್ನ ತೊಡೆ ಮೇಲೆ ಇಟ್ಕೊ” ಎಂದೆ, ಸದ್ಯ ಶಾಂತನಾಗಿ ನನ್ನ ಬ್ಯಾಗನ್ನು ತನ್ನ ತೊಡೆಯ ಮೇಲಿಟ್ಟುಕೊಂಡ.
ಆ ಬಸ್ಸಿನ ಗದ್ದಲದೊಳಗೆ ನಾನು ಮಡಿಕೆಯೊಳಗಿನ ಮಜ್ಜಿಗೆ ಕಡಿಯುವ ಕಡೆಗೋಲಿನಂತೆ ತೀವ್ರ ಕಡೆತಕ್ಕೆ ಒಳಗಾಗಿ ಶೋಶಿತನಾಗಿದ್ದೆ. ಹುರಿ ಮೀಸೆ ಹಮ್ಮೀರ ಮುಂದಿನ ಬಸ್ಸು ನಿಲುಗಡೆಯಲ್ಲಿ ಇಳಿಯುವಾಗ ಅದಿಕಾರವಾಣಿಯಲ್ಲಿ “ಬನ್ನಿ ಸಾ… ಕುಂತಕಳಿ ಬಸ್ಸು ಊರ ಮುಟ್ಟೋಗಂಟ ಬೇಕಾರೆ ಮಲ್ಕೊಂಡು ಹೋಗಿ ಯಾರು ಬ್ಯಾಡ ಅಂದೋರು…?” ಎಂದಾಗ ಇವನ ಉಡಾಪೆ ಮಾತುಗಳಿಂದ ನನಗೆ ನಕಶಿಕಾಂತ ಉರಿ ಹತ್ತಿದರೂ, ಸಾರ್ವಜನಿಕ ಸ್ತಳವಾದ್ದರಿಂದ ಸುಮ್ಮನಿದ್ದೆ. ನನ್ನ ಪಕ್ಕದ ಸೀಟಿನಲ್ಲಿ ಬಹುಶಹ ಟೆಕ್ಕಿಯೊಬ್ಬ ಕುಳಿತಿದ್ದ. ಆತ ಬೆಂಗಳೂರಿಗೆ ಪ್ರಯಾಣಿಸಲು ಹುಬ್ಬಳ್ಳಿಯಿಂದ ಟ್ರೇನು ಹಿಡಿದು ಹೋಗುವುದಕ್ಕಿರಬೇಕು, ಆತನೂ ಸಹ ಉದ್ದದ ಬ್ಯಾಗು ಹಿಡಿದುಕೊಂಡಿದ್ದ. ಬಸ್ಸು ರಶ್ಶೋ ರಶ್ಶು. ಟೆಕ್ಕಿಯ ಬದಿಗೆ ನಿಂತಿದ್ದ ಹೆಂಗಳೆಯರು ಡ್ರೈವರ್ ಬ್ರೇಕ್ ಒತ್ತಿದಾಗಲೆಲ್ಲ ಆಯ ತಪ್ಪಿ ಅವನ ಮೇಲೆ ಬೀಳುತಿದ್ದರು. ಅದರಲ್ಲೊಂದು ಮುದುಕಿ ಮೈಮೇಲೆ ಬೀಳುವುದರ ಜೊತೆಗೆ ವಟ ವಟ ವಟಗುಟ್ಟುತಿತ್ತು. ಆ ಅಜ್ಜಿ ಟೆಕ್ಕಿಯನ್ನು ಕುರಿತು “ಏನಪ್ಪ ನೀ ಬರೋದಲ್ದೆ ಇಶ್ಟು ದೊಡ್ಡ ಬ್ಯಾಗ್ ಬೇರೆ ಕೇಡು ನಿನಗೆ” ಎಂದಾಗ ಟೆಕ್ಕಿಗೆ ಉರಿ ಕಿತ್ಕೊಂಡು” ನಿನಗೇನು ಕಶ್ಟನಮ್ಮ ನಾನು ಬ್ಯಾಗ್ ಹಿಡ್ಕೊಂಡ್ರೆ?”. “ಏ.. ಮೊದ್ಲೆ ನಿಲ್ಲಕ್ ಜಾಗಿಲ್ಲ ಇಲ್ಲಿ ಇಶ್ಟು ದೊಡ್ಡ ಬ್ಯಾಗ್ ಬೇರೆ ತಂದಿಯಾ…?” ಎಂದಾಗ ಟೆಕ್ಕಿ “ನನಗೆ ಅಗತ್ಯ ಇದೆ ತಂದದೀನಿ ಕಣಮ್ಮ” ಎಂದ. ಅಜ್ಜಿ ಬಲು ಕಿರಕಲು ಪಾರ್ಟಿ ಅಂತ ಕಾಣುತಿತ್ತು ಆಕೆ “ಸುಮ್ನೆ ಮನಿಯಾಗೆ ಇರಕ್ಕ್ ಬರ್ತಿರ್ಲಿಲ್ಲೇನಪ್ಪ ಈ ರಶ್ಶ್ನಾಗೆ ನೀನು, ನಿನ್ನ್ ಬ್ಯಾಗು…. ಶಿವನೇ…?” ಎಂದಳು. ಅದಕ್ಕೆ ಟೆಕ್ಕಿ “ಏನ್ ಮಾತಾಡ್ತಿಯಮ್ಮ… ನನಗೆ ಕೆಲಸ ಇದೆ, ಅದಕ್ಕೆ ಹೋಗ್ತಾ ಇದೀನಿ, ಈ ವಯಸ್ಸಲ್ಲಿ ನೀನು ಮನೇಲಿ ಇರೋದು ಬಿಟ್ಟು ನಿನಗೇನು ಕೆಲ್ಸ ಈ ರಶ್ಶಲ್ಲಿ ಓಡಾಡೊದಕ್ಕೆ…?” ಎಂದ. ಅದಕ್ಕೆ ಅಜ್ಜಿ, “ಏ… ನಾನೇನು ಮನೆಲೇ ಇರೋಳೇ… ನನ್ ಮೊಮ್ಮಗಳು ಬಾಣಂತಿ ಕಣಪ್ಪ, ಬಯಕೆ ಊಟ ತಗೊಂಡು ಓಯ್ತಾ ಇದೀವಿ. ಅದರಾಗೆ ಈ ಬಸ್ಸು ಬೇರೆ ಹೆಣ್ಮಕ್ಕಳಿಗೆ ಪ್ರೀ ಬಿಟ್ಟಾರಲ್ಲಪ್ಲ ಅದ್ಕೆ ಮನೇಲಿ ಕುಂತು ಏನ್ಮಾಡೋದು ಅಂತ ಬಂದೆ” ಎಂದು ವಟಗುಡುತ್ತಲೇ ಇತ್ತು. ಟೆಕ್ಕಿಗೆ ಇನ್ನು ಈ ಮುದುಕಿ ಜೊತೆಗೆ ಮಾತು ಮುಂದುವರೆಸಿ ಉಪಯೋಗವಿಲ್ಲ ಅನಿಸರಬೇಕು ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಮೊಬೈಲ್ ಪೋನಿನೊಳಗಿನ ಸಂಗೀತ ಕೇಳುತ್ತಾ ಕಣ್ಣು ಮುಚ್ಚಿ ಕುಳಿತ. ಆ ಅಜ್ಜಿ ವಟಗುಡುತ್ತಲೆ ಇತ್ತು, ಕಡೆಗೂ ಆ ಅಜ್ಜಿ ಇಳಿಯುವ ಸ್ಟಾಪ್ ಬಂತು. ಆಕೆ ಇಳಿದು ಹೋದ ಮೇಲೆ ಬಸ್ಸು ಸ್ವಲ್ಪ ಶಾಂತವೆನಿಸಿತು. ನಾನು ಕಣ್ಣು ಮುಚ್ಚಿ ಮೆಲ್ಲಗೆ ನಿದಿರೆಗೆ ಜಾರಿದೆ.
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು