‘ಅಮ್ಮ ಎಂದರೆ ಏನೋ ಹರುಶವು…’

ಅಶೋಕ ಪ. ಹೊನಕೇರಿ.

ತಾಯಿ, ಅಮ್ಮ, Mother

“ಅಮ್ಮ ಎಂದರೆ ಏನೋ ಹರುಶವು ನಮ್ಮ ಪಾಲಿಗೆ ಅವಳೇ ದೈವವು…” – ಎಂಬುದು ಪ್ರತಿ ಮಕ್ಕಳ ಮನದಲಿ ಅನುರಣಿಸುವ ಹಾಡು. ಅಮ್ಮನ ದಿನದಂದೆ ಅಮ್ಮನ ನೆನೆಯುವುದು ಗುಣ ಗಾನ ಮಾಡುವುದು ತೋರಿಕೆ ಅತವಾ ಅತಿ ಎನಿಸದೆ ಇರದು. ಅಮ್ಮ ಎಂದರೆ ಕಣ್ಣಿಗೆ ಕಾಣುವ, ನಡೆದಾಡುವ ದೇವರು. ಆಕೆ ಕರುಣಾಮಯಿ, ಆಕೆ ತ್ಯಾಗಮಯಿ, ಆಕೆ ಉದಾರತೆಯ ಕಣಜ, ಆಕೆ ಮಮತಾಮಯಿ – ಹೀಗೆ ‘ಅಮ್ಮ’ನನ್ನು ಬಣ್ಣಿಸಲು ಪದಗಳೇ ಸಿಗದು. ಹೆಣ್ಣು ಎಂದರೇನೆ ತಾಳ್ಮೆಯ ಪ್ರತೀಕ, ತಾಯಿ ಎಂದರೆ ತಾಳ್ಮೆಯ ಪರ‍್ಯಾಯವೇ ಸರಿ.

ಬೆದರಿದ ಮಗು ಅಪ್ಪನ ತೋಳಿಗಿಂತ ಅಮ್ಮನ ಮಡಿಲಲ್ಲಿ ಹೆಚ್ಚು ದೈರ‍್ಯ ಕಂಡುಕೊಳ್ಳುತ್ತದೆ. ಅಮ್ಮನ ಮಡಿಲು ಅತ್ಯಂತ ರಕ್ಶಣಾತ್ಮಕ ಎಂಬ ಬಾವ ಮಗುವಿನಲ್ಲಿ ಸಹಜವಾಗಿ ಮೂಡುತ್ತದೆ. ಅಶ್ಟು ಶಕ್ತಿ ಇದೆ ಅಮ್ಮನ ಮಡಿಲಿಗೆ. ಅಮ್ಮನ ಮಡಿಲಿಗೆ ಇಶ್ಟು ಶಕ್ತಿ ಇರುವಾಗ, ಅಮ್ಮ ಎಂಬ ಶಬ್ದಕ್ಕೆ ಆ ವ್ಯಕ್ತಿಗೆ ಎಶ್ಟು ಶಕ್ತಿ ಇರಬೇಡ!!? ಮಕ್ಕಳು ದೊಡ್ಡವರಿರಲಿ, ಸಣ್ಣವರಿರಲಿ ಅಮ್ಮನಿಗೆ ಮಕ್ಕಳು ಮಕ್ಕಳೇ. ಮಕ್ಕಳಿಗೆ ಸ್ವಲ್ಪ ತೊಂದರೆ ಆದರೂ, ಆರೋಗ್ಯ ಕೆಟ್ಟರೂ, ಯಾವುದೇ ಅವಗಡಗಳಿಗೆ ಸಿಲುಕಿದರು ಅಮ್ಮ ಕೊರಗುವಶ್ಟು ಮರುಗುವಶ್ಟು ಈ ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಮರುಗುವುದಿಲ್ಲ. ಅಮ್ಮನ ಆಶೀರ‍್ವಾದ ಶುಬ ಹಾರೈಕೆಗಳು ಮಕ್ಕಳಿಗೆ ಸದಾ ಶ್ರೀರಕ್ಶೆ.

ಈ ತಾಯ್ತನದ ಮಮತೆ ಕೇವಲ ಬುದ್ದಿ, ಆಲೋಚನೆ ಇರುವ ಮನುಶ್ಯರಲ್ಲಿ ಮಾತ್ರ ಶ್ರೇಶ್ಟತೆ ಹೊಂದಿಲ್ಲ. ಮನುಶ್ಯರಂತೆ ಬುದ್ದಿ, ಆಲೋಚನೆ ಇಲ್ಲದ ಪ್ರಾಣಿ ಪಕ್ಶಿಗಳಲ್ಲೂ ರಕ್ತಗತವಾಗಿದೆ. ತಮ್ಮ ಮರಿಗಳನ್ನು ಜೋಪಾನ ಮಾಡುವಾಗಿನ ಕಾಳಜಿ, ಮಮತೆ ಅವುಗಳ ರಕ್ಶಣೆಯಲ್ಲಿ ತೋರುವ ಜವಾಬ್ದಾರಿಯನ್ನು ನಾವು ಮನಗಂಡರೆ ಸಾಕು ‘ತಾಯ್ತನ’ ಎಂಬುವುದು ಈ ಪ್ರಕ್ರುತಿಯಲ್ಲಿ, ಈ ಲೋಕದಲ್ಲಿ ಎಶ್ಟು ಸಹಜವಾಗಿ ಹಾಸುಹೊಕ್ಕಾಗಿದೆ ಎಂಬುದು ಅರಿವಿಗೆ ಬರುತ್ತದೆ.

ಅಮ್ಮನ ರುಣ ಸಾವಿರ ಜನ್ಮ ಎತ್ತಿದರೂ ತೀರಿಸಲು ಸಾದ್ಯವಿಲ್ಲವೆನ್ನುತ್ತಾರೆ. ಇದು ಸತ್ಯ ಕೂಡ. ತನ್ನ ಜೀವ ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುವ ಈ ತಾಯಿಯ ರುಣ ತೀರಿಸಲು ಸಾದ್ಯವೇ ಇಲ್ಲ. ಮಗುವಾಗಿನಿಂದ ಹಿಡಿದು ಬೆಳೆದು ದೊಡ್ಡವರಾಗಿ ಸ್ವತಂತ್ರ ಜೀವನ ನಡೆಸುವವರೆಗೂ ಮಕ್ಕಳ ಬೆನ್ನೆಲುಬಾಗೇ ಇರುವ ಅಮ್ಮ, ಮಕ್ಕಳು ಸ್ವತಂತ್ರ ಜೀವನ ನಡೆಸುವಂತಾದಾಗಲೂ ಕೂಡಾ ಮಕ್ಕಳ ಮೇಲಿನ ಪ್ರೀತಿಯಾಗಲಿ, ತುಡಿತವಾಗಲಿ ಆಕೆಗೆ ಕಡಿಮೆಯಾಗುವುದಿಲ್ಲ. ತಾಯಿ ಸದಾ ತನ್ನ ಮಕ್ಕಳ ಬಗ್ಗೆಯೇ ಚಿಂತಿಸುತ್ತಾಳೆ.

ಇಂತಹ ಅಮ್ಮನನ್ನು,ಮಕ್ಕಳು ಆಕೆಯ ಮುಪ್ಪಿನ ಕಾಲದಲ್ಲಿ ಕಣ್ಣೀರು ಹಾಕಿಸದೆ ಪ್ರೀತಿಯಿಂದ ಕಾಳಜಿಯಿಂದ ಅವಳನ್ನು ನೋಡಿಕೊಂಡರಶ್ಟೇ ಸಾಕು. ಕಿಂಚಿತ್ ಆದರೂ ಅಮ್ಮನ ರುಣ ಸಂದಾಯವಾದೀತು ಮತ್ತು ಅಮ್ಮನ ಶ್ರೀರಕ್ಶೆ ಮಕ್ಕಳು, ಮೊಮ್ಮಕಳಿಗೆ ದಕ್ಕೀತು.  ವಯಸ್ಸಾದ ತಾಯಿಯನ್ನು ನೋಡಲು ನಮಗೆ ಪುರುಸೊತ್ತಿಲ್ಲ, ಅವರು ಮನೆಗೆ ಕಿರಿಕಿರಿ, ಹೆಂಡತಿ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ವ್ರುದ್ದಾಶ್ರಮಕ್ಕೆ ಸೇರಿಸಿ ಕೈತೊಳೆದುಕೊಳ್ಳಬೇಡಿ, ಅಮ್ಮನ ದಿನವು ತೋರಿಕೆ ಪ್ರೀತಿಯ ದಿನವಾಗದಿರಲಿ ಎಂದು ಕಳಕಳಿಯ ಮನವಿ.

(ಚಿತ್ರ ಸೆಲೆ: artponnada.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: