ಕಿರುಗವಿತೆಗಳು: ಗಣಿತದಲ್ಲಿನ ಒಲವು
– ನಿತಿನ್ ಗೌಡ.
ಸಮಾನಾಂತರ ಗೆರೆಗಳು
ಸಾಗುವವು ಇವು ಎಡೆಬಿಡದೆ ನಿರಂತರ,
ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ;
ಆದರೆ, ಸೇರಲಾರವಿವು ಒಂದನೊಂದು.
ಇಂತಾದರೂ ಇದೊಂದು ಕೊನೆಯಿರದ
ಒಲವ ಪಯಣ ಅಲ್ಲವೇ ?
******
ದುಂಡು
ಸಾಗುವವು ಒಂದು ಬಿಂದು ಇನ್ನೊಂದರ ಅರಸಿ
ಎಶ್ಟು ಸಾಗಿದರೇನು, ಒಂದನು ಇನ್ನೊಂದು ಮುಟ್ಟಬಹುದೇನು?
ಸೇರದಿರದಿದ್ದರೇನಂತೆ!
ಇಂತಹ ನುಚ್ಚುನೂರಾದ ಒಲವೆಂಬ ಬಿಂದುಗಳೇ
ಕೂಡಿ ಮೈದಳೆದು ನಿಲ್ಲುವುದು, ಎಲ್ಲರೊಳು ಒಂದಾದ ದುಂಡು..
******
ಸೀಳುಗೆರೆಗಳು
ಆದದ್ದು ಬೇಟಿ ಒಮ್ಮೆಯೇ!!
ಇಶ್ಟೇ ಸಾಕಾಗಿತ್ತು, ಒಲವು ಚಿಗುರಲು..
ಮುನ್ನಡೆಯುತಲೇ, ಕಾಯುತಿರುವವು ಅವು,
ದಾರಿ ಇನ್ನೊಮ್ಮೆ ಕೂಡಬಹುದೇನೋ ಎಂಬ ಬಯಕೆಯಲಿ!
ಆದರೆ ಇದು ಕೊನೆಯಿರದ ನಿರೀಕ್ಶೆ
******
(ಚಿತ್ರಸೆಲೆ: microsoft.com )
ಇತ್ತೀಚಿನ ಅನಿಸಿಕೆಗಳು