ನಾನ್ಯಾಕೆ ಕೂಗಾಡುತ್ತೇನೆ?

–  ಪ್ರಕಾಶ್ ಮಲೆಬೆಟ್ಟು.

 

ನನ್ನನ್ನು ಸದಾ ಕಾಡುವ ಪ್ರಶ್ನೆಯೊಂದಿದೆ, ನಾನ್ಯಾಕೆ ಕೂಗಾಡುತ್ತೇನೆ? ಉತ್ತರ ನನಗೆ ಗೊತ್ತಿಲ್ಲ. ಹಾಗಾದರೆ ನಾನ್ಯಾಕೆ ಕೂಗಾಡಬೇಕು? ಉತ್ತರ ಗೊತ್ತಿಲ್ಲ. ಹೋಗಲಿ ಯಾವಾಗ ನಾನು ಕೂಗಾಡುತ್ತೆನೆ? ಈ ಪ್ರಶ್ನೆಗೆ ಉತ್ತರ ನನಗೆ ಗೊತ್ತು, ಕೋಪ ಬಂದಾಗ ನಾನು ಕೂಗಾಡುತ್ತೆನೆ. ಹಾಗಾದರೆ ಕೋಪ ಯಾವಾಗ ಬರುತ್ತೆ? ನನ್ನ ದ್ರಶ್ಟಿಯಲ್ಲಿ ನಾನು ಸರಿ, ಬೇರೆಯವರು ತಪ್ಪು ಮಾಡಿದ್ದಾರೆ ಅನ್ನುವ ಬಾವನೆ ಮನಸಿಗೆ ಬಂದಾಗ ನನಗೆ ಕೋಪ ಬರುತ್ತೆ. ಕೋಪ ಬಂದ ಮೇಲೆ ಯಾರ ಮೇಲೆ ನನಗೆ ಕೋಪ ಬಂದಿದೆಯೋ ಅವರ ಮೇಲೆ ನಾನು ಕೂಗಾಡುತ್ತೆನೆ. ಹೌದ? ಹಾಗಾದ್ರೆ ಯಾರ ಮೇಲೆಲ್ಲಾ ಕೂಗಾಡುತ್ತೀಯ? ನಮ್ಮ ಸಂಸ್ತೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ, ನನ್ನ ಮಕ್ಕಳ ಮೇಲೆ, ಹೆಂಡತಿಯ ಮೇಲೆ, ಅಮ್ಮನ ಮೇಲೆ ಕೂಗಾಡುತ್ತೇನೆ. ನನ್ನ ಮನಸಾಕ್ಶಿ ನನ್ನನ್ನು ಪ್ರಶ್ನಿಸುತ್ತೇ. ಹಾಗಾದ್ರೆ ತಪ್ಪು ಮಾಡಿದ ಪ್ರತಿಯೊಬ್ಬರ ಮೇಲು ನೀನು ಹೀಗೆ ಕೂಗಾಡುತ್ತೀಯ? ನೀನು ಮೊದಲು ಕೆಲಸ ನಿರ‍್ವಹಿಸುತ್ತಿದ್ದ ಸಂಸ್ತೆಯ ಮಾಲೀಕರ ಮೇಲು ಕೋಪಗೊಂಡು ಕೂಗಾಡುತಿದ್ದೆಯ? ನಿನ್ನ ಅಪ್ಪನ ಮೇಲೆ ಕೂಗಾಡುತಿದ್ದೆಯ? ನಿನಗಿಂತ ಬಲಶಾಲಿಯಾದವರ ಮೇಲೆ, ಅವರು ತಪ್ಪು ಮಾಡಿದಾಗ ಕೂಗಾಡುತಿದ್ದೆಯ? ಇಲ್ಲ ಕೇವಲ ನಿನಗಿಂತ ದುರ‍್ಬಲವಾದವರ ಮೇಲೆ ಮಾತ್ರ ನಿನ್ನ ಶಕ್ತಿ ಪ್ರದರ‍್ಶನ ಮಾಡುತ್ತೀಯ? ಎಶ್ಟೊಂದು ನಿಜ ಅಲ್ವ! ಅದೆಶ್ಟೇ ಕೋಪ ಬರಲಿ ನಮ್ಮ ಕೋಪ, ಕೂಗಾಟ ಎಲ್ಲವೂ ನಮಗಿಂತ ದುರ‍್ಬಲವಾಗಿರುವವರ ಮೇಲೆ ಮಾತ್ರ. ನಮಗಿಂತ ಪ್ರಬಲವಾಗಿರುವವರು ಅದೆಶ್ಟೇ ತಪ್ಪು ಮಾಡಿದರೂ, ನಮಗೆಶ್ಟೇ ಕೋಪಬಂದರೂ ಅದು ಮನಸಿನಿಂದ ಆಚೆ ಬರದಂತೆ ಜಾಗ್ರತೆ ವಹಿಸುತ್ತೇವೆ. ಹಾಗಾದರೆ ನಮ್ಮ ವ್ಯಕ್ತಿತ್ವ ಟೊಳ್ಳು ಅಂತ ಅನಿಸೋದಿಲ್ವ? ಇಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕು ಅಲ್ವೇ? ತಪ್ಪು ಯಾರೇ ಮಾಡಿದರೂ ಸರಿ, ಅವರು ನಮಗಿಂತ ದುರ‍್ಬಲರಾಗಿರಲಿ, ಇಲ್ಲವೇ ಪ್ರಬಲರಾಗಿರಲಿ ನಾವು ಅವರ ಮೇಲೆ ಕೂಗಾಡಬೇಕು ಅಲ್ವೇ? ನ್ಯಾಯ ಪ್ರತಿಯೊಬ್ಬರಿಗೂ ಒಂದೇ ತರದಲ್ಲಿ ಇರಬೇಕು. ಇಲ್ಲವಾದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಎಲ್ಲಿದೆ?

ಒಂದು ವೇಳೆ ನಮಗಿಂತ ಪ್ರಬಲರಾದವರಲ್ಲಿ ಗಟ್ಟಿಯಾಗಿ ಕೂಗಾಡುವ ಶಕ್ತಿ ನಮ್ಮಲ್ಲಿ ಇಲ್ಲದಿದ್ದಲ್ಲಿ, ದುರ‍್ಬಲರ ಮೇಲೆ ಮಾತ್ರ ನಾವ್ಯಾಕೆ ಕೂಗಾಡಬೇಕು. ಅಶ್ಟಕ್ಕೂ ಕೋಪ ನಿಗ್ರಹಿಸಲು ಕೂಗಾಟ ಒಂದು ಪರಿಹಾರವೇ? ಬೇರೆಯವರ ಮೇಲೆ ಕಿರುಚಾಟ, ಕೂಗಾಟವಿಲ್ಲದೆ ನಮ್ಮ ಕೋಪವನ್ನು ನಿಯಂತ್ರಿಸಲು ಸಾದ್ಯವೇ ಇಲ್ಲವೇ? ಪ್ರತಿಬಾರಿ ನನಗಿಂತ ದುರ‍್ಬಲವಾಗಿರುವವರ ಮೇಲೆ ಕೂಗಾಡಿದಾಗ ಮತ್ತು ನನಗಿಂತ ಪ್ರಬಲವಾಗಿರುವವರ ಎದುರು ನಾನು ಅಸಹಾಯಕನಾದಾಗ ಈ ಪ್ರಶ್ನೆ ನನ್ನನ್ನು ಕಾಡುತ್ತೆ. ಯಾಕಾಗಿ ಕೂಗಾಡಿದೆನೋ ಅನ್ನುವ ಪಶ್ಚಾತಾಪ, ಹಾಗೆ ಅದೇ ತಪ್ಪು ನನಗಿಂತ ಪ್ರಬಲವಾಗಿರುವವರು ಮಾಡಿದಾಗ ಪ್ರಶ್ನಿಸಲಾಗದ ನನ್ನ ದುರ‍್ಬಲ ಮನಸ್ಸಿನ ಬಗ್ಗೆ ಜುಗುಪ್ಸೆ ಅನಿಸಿಬಿಡುತ್ತೆ. ಆದರೆ ಇದು ನನ್ನ ವ್ಯಕ್ತಿತ್ವ ಮಾತ್ರ ಅಲ್ಲ, ಮನಸ್ಸಿಗೆ ಕನ್ನಡಿ ಹಿಡಿದರೆ ನಮ್ಮ ಈ ದುರ‍್ಬಲ ಮತ್ತು ಪ್ರಬಲ ಮನಸ್ಸಿನ ಪ್ರತಿಬಿಂಬ ನಮಗೆ ಕಾಣಿಸುತ್ತೆ ಅಲ್ವೇ. ಒಂದೋ ನಾವು ನಮಗಿಂತ ಪ್ರಬಲರಾಗಿರುವವರನ್ನು ಪ್ರಶ್ನಿಸುವ ಸಾಮರ‍್ತ್ಯವನ್ನು ಬೆಳೆಸಿಕೊಳ್ಳಬೇಕು, ಇಲ್ಲವೇ ನಮಗಿಂತ ದುರ‍್ಬಲವಾಗಿರುವವರ ಮೇಲೆ ನಮ್ಮ ಶಕ್ತಿ
ಪ್ರದರ‍್ಶನ ಮಾಡಬಾರದು. ನಮ್ಮ ಮಾನಸಿಕ ಆರೋಗ್ಯವನ್ನು ಗಮನವಿಟ್ಟುಕೊಂಡು ವಿಚಾರಮಾಡಿದಾಗ ಎರಡನೆಯ ಆಯ್ಕೆಯೇ ಉತ್ತಮ ಅನಿಸುತ್ತೆ.

ಒಂದು ಸುಂದರ ಕತೆ ಇದೆ. ಒಮ್ಮೆ ಒಬ್ಬರು ಗುರುಗಳು ತಮ್ಮ ಶಿಶ್ಯಂದಿರ ಜೊತೆ ಗಂಗಾ ನದಿಯ ತೀರದಲ್ಲಿ ನಡೆದುಕೊಂಡು ಹೋಗುತಿದ್ದರು. ಆಗ ಒಂದು ಜನರ ಗುಂಪು ಪರಸ್ಪರ ಕೂಗಾಡಿಕೊಂಡು, ಕಿರುಚಾಡಿಕೊಂಡು ಜಗಳವಾಡುತ್ತಿರುವುದು ಅವರ ಕಣ್ಣಿಗೆ ಬಿತ್ತು. ಗುರುಗಳು ತಮ್ಮ ಶಿಶ್ಯಂದಿರ ಬಳಿ, ಆ ಜನರ ಗುಂಪು ಪರಸ್ಪರ ಕೂಗಾಡಿಕೊಳ್ಳಲು ಕಾರಣವೇನಿರಬಹುದು ಅಂತ ಕೇಳುತ್ತಾರೆ. ಒಬ್ಬ ಶಿಶ್ಯ ಹೇಳುತ್ತಾನೆ, ಅವರಿಗೆ ಅವರ ಬಾವನೆಗಳ ಮೇಲೆ ನಿಯಂತ್ರಣವಿಲ್ಲ. ಮತ್ತೊಬ್ಬ ಹೇಳುತ್ತಾನೆ, ಅವರು ತಮ್ಮ ಹತಾಶೆಯನ್ನು ಹೊರಗೆ ಹಾಕುತ್ತಿದ್ದಾರೆ. ಕಡೆಗೆ ಗುರುಗಳು ಮುಗುಳು ನಕ್ಕು ಹೇಳುತ್ತಾರೆ, ನೀವು ಹೇಳಿದ ಯಾವ ಕಾರಣಗಳೂ ಕೂಡ ಸರಿಯಾದ ಉತ್ತರ ಅಲ್ಲ. ನಾವು ಪರಸ್ಪರ ಕೋಪಗೊಂಡಾಗ, ಅಲ್ಲಿ ನಮ್ಮ ನಡುವೆ ಪ್ರೀತಿ ಇರೋದಿಲ್ಲ. ಪ್ರೀತಿ ಇಲ್ಲದಿದ್ದಾಗ ಹ್ರುದಯ ದೂರ ಸರಿಯುತ್ತೆ. ಹ್ರುದಯ ದೂರ ಸರಿದಾಗ ನಾವು ಮಾತನಾಡಿದ್ದು ಪರಸ್ಪರ ಕೇಳಿಸೋದಿಲ್ಲ. ಹಾಗಾಗಿ ಕೂಗಾಡಬೇಕಾಗುತ್ತೆ. ಕೋಪ ಹೆಚ್ಚಾದಶ್ಟು ಹ್ರುದಯಗಳ ಅಂತರ ಹೆಚ್ಚಾಗುತ್ತೆ. ಹ್ರುದಯಗಳ ಅಂತರ ಹೆಚ್ಚಾದಶ್ಟು, ಕೂಗಾಟ ಹೆಚ್ಚುತ್ತಾ ಹೋಗುತ್ತೆ. ಇಲ್ಲವಾದಲ್ಲಿ ಹ್ರುದಯಕ್ಕೆ ಕೇಳಿಸೋದಿಲ್ಲ ಅಲ್ವ, ಪರಸ್ಪರ ಪ್ರೀತಿ ಇದ್ದಾಗ ಹ್ರುದಯಗಳು ಹತ್ತಿರ ಇರುತ್ತವೆ. ಆಗ ಮೆಲುವಾಗಿ ಮಾತನಾಡಿದರೂ ಸಾಕು, ಹ್ರುದಯಕ್ಕೆ ಕೇಳಿಸುತ್ತೆ. ಪ್ರೀತಿ ಮತ್ತಶ್ಟು ಹೆಚ್ಚಾದಾಗ, ಹ್ರುದಯಗಳು ಬಹಳ ಸನಿಹದಲ್ಲಿರುತ್ತವೆ. ಹಾಗಾಗಿ ಪಿಸುಗುಟ್ಟಿದರು ಸಾಕು, ಹ್ರುದಯಕ್ಕೆ ಕೇಳಿಸಿಬಿಡುತ್ತದೆ. ಪ್ರೀತಿ ಇನ್ನಶ್ಟು ಹೆಚ್ಚಾದಾಗ, ಹ್ರುದಯಗಳ ನಡುವೆ ಅಂತರವೇ ಇರೋದಿಲ್ಲ. ಆಗ ಮಾತು ಬೇಡ, ಪರಸ್ಪರ ಕಣ್ಣೋಟವೇ ಸಾಕು ಮಾತು ಅರ‍್ತವಾಗಿಬಿಡುತ್ತೆ.

ಎಶ್ಟೊಂದು ಅರ‍್ತಪೂರ‍್ಣ ಮತ್ತು ನಿಜ ಅಲ್ವ. ಮೊದಲು ನಾವು ಪ್ರೀತಿಸಲು ಕಲಿಯಬೇಕು. ಆಗ ಕೋಪ ಬರೋದು ನಿಲ್ಲುತ್ತೆ. ತಪ್ಪು ಮಾಡಿದವರು ನಮ್ಮವರೇ ಅಲ್ವೇ? ಯಾಕಾಗಿ ನಾವು ಕಿರುಚಾಡಬೇಕು. ಸಮಾದಾನ ಚಿತ್ತದಿಂದ ಅವರ ತಪ್ಪನ್ನು ಅವರಿಗೆ ಮನದಟ್ಟು ಮಾಡಿಕೊಡಬಹುದು ಅಲ್ವೇ. ಹಾಗೆ ಮಾಡಿದಾಗ ನಮ್ಮ ಮನಸಿಕ ನೆಮ್ಮದಿ ಕೆಡೋದಿಲ್ಲ ಹಾಗೂ ಬದುಕು ಮತ್ತಶ್ಟು ಸುಂದರವಾಗುತ್ತೆ. ನಮ್ಮನ್ನು ಪ್ರೀತಿಸುವವರು ಹೆಚ್ಚಾಗುತ್ತಾರೆ. ಆದರೆ ಬರೆದಶ್ಟು ಸುಲಬವಾ ಬದಲಾವಣೆ? ಕಂಡಿತ ಇಲ್ಲ. ಎಲ್ಲಿಯವರೆಗೆ ನಮ್ಮ ದುರ‍್ಬಲ ಮನಸ್ಸಿನ ಮೇಲೆ ನಮಗೆ ನಿಯಂತ್ರಣ ಇರೋದಿಲ್ಲೋ, ಕೋಪ ನಿಯಂತ್ರಣ ಕನಸಿನ ಮಾತೇ ನಿಜ. ಆದರೆ ವಯಸ್ಸು ಹೆಚ್ಚಾದಂತೆ ಮನಸು ಮಾಗುತ್ತೆ. ಪ್ರಯತ್ನ ಪಟ್ಟರೆ ಕಬ್ಬಿಣವನ್ನೇ ನುಂಗಬಹುದು ಅನ್ನುತ್ತಾರೆ, ಇನ್ನು ಕೋಪ ನಿಯಂತ್ರಿಸುವುದು ಏನು ಮಹಾ ಅಲ್ವೇ? ನಿಜ ಕಣ್ರೀ ನಾವು ಬದಲಾಗಬೇಕು. ಸಾಯುವ ಸಮಯ ಬಂದಾಗ ನಮ್ಮ ಸುತ್ತ ಪ್ರೀತಿಯ ಸಮುದ್ರವೇ ಹರಿದು ಬರಬೇಕು ಅಲ್ವೇ?

(ಚಿತ್ರಸೆಲೆ: pixbay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *