ಡಾ. ಬಿ. ಆರ್.ಅಂಬೇಡ್ಕರ್ – ಸಾಮಾಜಿಕ ನ್ಯಾಯದ ಪ್ರತಿಮೆ

– ನಾಗರಾಜ್ ಬೆಳಗಟ್ಟ.ಅಂಬೇಡ್ಕರ್

ತಮಗೆಲ್ಲ ತಿಳಿದಿರುವ ಹಾಗೆ ನಮ್ಮದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ‍್ಶಗಳು ಸಂದಿವೆ. ಈ ಸಮಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ವರ‍್ತಮಾನದ ಬದುಕುಗಳಿಗೆ ಸಮೀಕರಣಗೊಂಡು ಬೆಳೆಯುತ್ತಾ ಬಂದ ದೇಶದ ಹಲವು ಬಗೆಯ ಚಿಂತನದಾರೆಗಳನ್ನು ಸ್ಮರಿಸುವಂತಹ ಸಮಯವಿದು. ಎಲ್ಲ ಚಿಂತನದಾರೆಗಳು ಮಾನವ ಕಲ್ಯಾಣವೇ ತಮ್ಮ ಗುರಿ ಎಂದು ಹೇಳುತ್ತವೆ. ಆದರೆ ಅವುಗಳ ಅನುಶ್ಟಾನದ ಮಾರ‍್ಗಗಳು ಬೇರೆ ಬೇರೆ, ಪ್ರತಿಯೊಂದು ಚಿಂತನದಾರೆಗೂ ತನ್ನದೇ ಆದ ಹಿತಾಸಕ್ತಿ ದೋರಣೆಗಳಿರುತ್ತವೆ. ಆ ಮೂಲಕ ಜನಸಮುದಾಯಗಳನ್ನು, ಸಮಾಜವನ್ನು ಅವು ಪ್ರಬಾವಿಸುತ್ತವೆ. ಅಂತಹ ಪ್ರಬಾವಶಾಲಿ ಚಿಂತನೆಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಚಿಂತನೆಯು ಪ್ರಮುಕವಾಗಿದೆ.

ಬಾರತದ ಚರಿತೆಯನ್ನು ಮುನ್ನಡೆಸಿರುವುದು ರಾಜಮಹಾರಾಜರ ಸೈನ್ಯಗಳಲ್ಲ. ಅವರು ಹೂಡಿದ ಯುದ್ದಗಳೂ ಅಲ್ಲ. ಅವರ ಸಾಮ್ರಾಜ್ಯ ವಿಸ್ತರಣೆಯ ಮಹಾತ್ವಾಕಾಂಕ್ಶೆಗಳೂ ಅಲ್ಲ. ಯಾಕೆಂದರೆ ಬಾರತದ ನೆಲ ಪರಂಪರೆಗಳು ಬೇರೆಲ್ಲಾ ದೇಶಗಳಿಗಿಂತ ಬಿನ್ನವಾದವುಗಳಾಗಿವೆ. ಬಾರತದ ಚರಿತ್ರೆಯನ್ನು ನಿರ‍್ಮಿಸಿರುವುದು, ಸಾಮಾಜಿಕ, ರಾಜಕೀಯ, ಆರ‍್ತಿಕ ಮತ್ತು ಸಾಂಸ್ಕ್ರುತಿಕ ಚರಿತ್ರೆಯನ್ನು ರೂಪಿಸಿರುವ ಪ್ರದಾನ ಅಂಶಗಳೆಂದರೆ – ದರ‍್ಮಗಳು, ಜಾತಿಗಳು, ಜನಾಂಗಗಳಾಗಿವೆ. ಬಾರತೀಯ ಚರಿತ್ರೆಯಲ್ಲಿ ಇವುಗಳು ಎಂದೂ ಯಾವಾಗಲೂ ಐಕ್ಯತೆಯನ್ನಾಗಲಿ, ಸಾಮರಸ್ಯವನ್ನಾಗಲಿ ಮೈಗೂಡಿಸಿಕೊಳ್ಳಲಿಲ್ಲ. ಬಾರತದ ಅಸಮಾನ ಚರಿತ್ರೆಯನ್ನು, ಅಸಮಾನ ಸಮಾಜವನ್ನು ಕಟ್ಟಿದ ಅಂಶಗಳೆಂದರೆ ಇವೇ ದರ‍್ಮಗಳು, ಜಾತಿಗಳು ಮತ್ತು ಜನಾಂಗಗಳಾಗಿವೆ. ಇದು ಮೇಲ್ವರ‍್ಗ, ಮೇಲ್ಜಾತಿ ದರ‍್ಮಗಳ ವೈಬವೀಕರಣದ ಚರಿತ್ರೆಯಾಗಿರುತ್ತದೆಯೇ ವಿನಹ ದೇಶದ ಚರಿತ್ರೆಯಾಗಿರುವುದಿಲ್ಲ.

ಸಾಮಾಜಿಕ ನ್ಯಾಯ ಕುರಿತಾದ ಅಂಬೇಡ್ಕರ್ ಚಿಂತನೆಗಳು ಆದುನಿಕ ಬಾರತದ ಇತಿಹಾಸಕ್ಕೆ ಅಡಿಪಾಯ ಹಾಕಿದವು. ಬಾಬಾಸಾಹೇಬ್‌ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಬೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ನಿರಂತರ ಅನ್ವೇಶಣೆಗೆ ಹೆಸರುವಾಸಿಯಾಗಿದ್ದರು. 1891 ರ ಏಪ್ರಿಲ್ 14ರಂದು ಸಾಮಾಜಿಕವಾಗಿ ಕಡೆಗಣನೆಗೆ ಒಳಗಾಗಿರುವ ದಲಿತ ಕುಟುಂಬದಲ್ಲಿ ಜನಿಸಿದರು. ಅವರ ಆರಂಬಿಕ ಜೀವನವು ಜಾತಿ ಆದಾರಿತ ತಾರತಮ್ಯ ಎದುರಿಸಬೇಕಾಯಿತು. ಇದು ಅಂತಹ ಅನ್ಯಾಯಗಳ ವಿರುದ್ದ ಅವರ ಜೀವಿತಾವದಿಯ ಹೋರಾಟವನ್ನು ಆಳವಾಗಿ ರೂಪಿಸಿತು. ಅವರ ಅಸಾದಾರಣ ಬುದ್ದಿಶಕ್ತಿ ಅವರು ಉನ್ನತ ಶಿಕ್ಶಣವನ್ನು ಪಡೆಯಲು ಕಾರಣವಾಯಿತು.

ಒಬ್ಬ ವ್ಯಕ್ತಿಯ ಅರ‍್ಹತೆ ಮತ್ತು ಸಾದನೆಗಳಿಂದ ಅವನ ಸ್ತಾನಮಾನ ನಿರ‍್ದರಿಸಲ್ಪಡುತ್ತದೆ ಮತ್ತು ಯಾರೂ ಅವನ ಅತವಾ ಅವಳ ಹುಟ್ಟಿನಿಂದಾಗಿ ಮೇಲೆ ಅತವಾ ಅಸ್ಪ್ರುಶ್ಯರಲ್ಲ ಎಂಬ ಸಾಮಾಜಿಕ ವ್ಯವಸ್ತೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದರು.ಸಾಮಾಜಿಕವಾಗಿ ದೀನದಲಿತ ಮತ್ತು ಆರ‍್ತಿಕವಾಗಿ ಶೋಶಿತ ಜನರಿಗೆ ಆದ್ಯತೆ ನೀಡಬೇಕೆಂದು ಅವರು ವಾದಿಸಿದರು. ಕಾನೂನು ಸುದಾರಣೆಗಳಿಂದ ಹಿಡಿದು ಸಾಮಾಜಿಕ ಕ್ರಿಯಾಶೀಲತೆ ಮತ್ತು ರಾಜಕೀಯ ನಾಯಕತ್ವದವರೆಗೆ ಅವರ ಕೊಡುಗೆಗಳು ಬಹುಮುಕಿಯಾಗಿವೆ.

1916ರಲ್ಲಿ, ಲಂಡನ್‌ನಲ್ಲಿ ಅವರ ಅದ್ಯಯನವು ಕಾನೂನು ವ್ಯವಸ್ತೆಗಳು ಮತ್ತು ಆರ‍್ತಿಕ ಸಿದ್ದಾಂತಗಳ ಬಗ್ಗೆ ಅವರ ತಿಳುವಳಿಕೆಯನ್ನು ಹೆಚ್ಚಿಸಿತು ಮತ್ತು ಅವರು ಇವುಗಳನ್ನು ಸಾಮಾಜಿಕ ಅನ್ಯಾಯಗಳನ್ನು ಎದುರಿಸುವ ಸಾದನಗಳಾಗಿ ನೋಡಲಾರಂಬಿಸಿದರು. ಈ ಅವದಿಯಲ್ಲಿಯೇ ಅವರು ಜಾತಿ ಮತ್ತು ಸಾಮಾಜಿಕ ಸುದಾರಣೆಯ ಕುರಿತು ತಮ್ಮ ಅಬಿಪ್ರಾಯಗಳನ್ನು ರೂಪಿಸಿಕೊಂಡರು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಗಾರರಾಗಿ ಅವರ ಬವಿಶ್ಯದ ಪಾತ್ರಕ್ಕೆ ವೇದಿಕೆಯನ್ನು ಸಿದ್ದಪಡಿಸಿದರು. ಜಾತಿ ವ್ಯವಸ್ತೆಯ ನಿರ‍್ಬಂದಗಳಿಂದ ಮುಕ್ತವಾದ ಪಶ್ಚಿಮದಲ್ಲಿ ಅವರ ಶೈಕ್ಶಣಿಕ ಅನುಬವವು ಅವರ ದ್ರುಶ್ಟಿಕೋನಗಳನ್ನು ಆಳವಾಗಿ ರೂಪಿಸಿತು ಮತ್ತು ಬಾರತೀಯ ಸಮಾಜವನ್ನು ಸುದಾರಿಸುವ ಅವರ ದ್ರುಡಸಂಕಲ್ಪಕ್ಕೆ ಉತ್ತೇಜನ ನೀಡಿತು. ಸಮಾಜದ ತುಳಿತಕ್ಕೊಳಗಾದವರಿಗೆ ಪ್ರಮುಕ ದ್ವನಿಯಾಗಿ ಮತ್ತು ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಆದರಿಸಿದ ಸಮಾಜದಲ್ಲಿ ಅಂಬೇಡ್ಕರವರು ಸಾಮಾಜಿಕ ನ್ಯಾಯದ ಬ್ರುಹತ್ ಪ್ರತಿಮೆಯಾಗಿ ನಿಲ್ಲಲು ಅಡಿಪಾಯ ಹಾಕಿತು.

ಅಂಬೇಡ್ಕರ್ ಅವರು ಶಿಕ್ಶಣವನ್ನು ಸಾಮಾಜಿಕ-ಆರ‍್ತಿಕ ಸಬಲೀಕರಣಕ್ಕೆ ಪ್ರಬಲ ಸಾದನವೆಂದು ಒತ್ತಿ ಹೇಳಿದರು. ಅಂಬೇಡ್ಕರ್ ಶಿಕ್ಶಣವನ್ನು ಕೇವಲ ವೈಯಕ್ತಿಕ ಅಬಿವ್ರುದ್ದಿಯ ಸಾದನವಾಗಿ ನೋಡದೆ, ದಬ್ಬಾಳಿಕೆಯ ವಿರುದ್ದ ಹೋರಾಡಲು ಮತ್ತು ಸಾಮಾಜಿಕ ಸುದಾರಣೆಯನ್ನು ಸಾದಿಸಲು ಒಂದು ಆಯುದವಾಗಿ ನೋಡಿದರು. ಅಂಬೇಡ್ಕರವರ ಬರಹಗಳು ಮತ್ತು ಬಾಶಣಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವ್ಯಾಕ್ಯಾನದ ಸಮಗ್ರ ನೋಟವನ್ನು ಒದಗಿಸುತ್ತವೆ. ಜಾತಿಯನ್ನು ಲೆಕ್ಕಿಸದೆ ಪ್ರತಿಯೊಬ ವ್ಯಕ್ತಿಗೂ ಸಮಾನಹಕ್ಕುಗಳು ಮತ್ತು ಅವಕಾಶಗಳನ್ನು ಹೊಂದಿರುವ ಸಮಾಜದಲ್ಲಿ ಅವರು ನಂಬಿಕೆ ಇಟ್ಟಿದ್ದರು. ಅವರು ಆರ‍್ತಿಕ ಸಬಲೀಕರಣದಲ್ಲಿ, ನ್ಯಾಯಯುತ ಕಾರ‍್ಮಿಕ ಹಕ್ಕುಗಳಿಗಾಗಿ ಮತ್ತು ಅದರ ಅತ್ಯಂತ ಕಡೆಗಣನೆಗೆ ಒಳಗಾಗಿರುವವರ ಆರ‍್ತಿಕ ಪ್ರಗತಿಯನ್ನು ಬೆಂಬಲಿಸುವ ಸಮಾಜದ ಸ್ತಾಪನೆಯಲ್ಲಿಯೂ ನಂಬಿಕೆ ಇಟ್ಟಿದ್ದರು.

ಸಾಮಾಜಿಕ ನ್ಯಾಯಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್‌ ಅವರ ಪ್ರಯತ್ನಗಳು

ಅಂಬೇಡ್ಕರ್ ಉದ್ಯೋಗದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸಲು ಹಿಂದೂ ಸಂಹಿತೆ ಮಸೂದೆಗಾಗಿ ಹೋರಾಡಿದರು. ಅವರು ತಮ್ಮ ಜೀವನವನ್ನು ಸಾಮಾಜಿಕ ನ್ಯಾಯದ ಅನ್ವೇಶಣೆ ಮತ್ತು ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವವ ಸಮುದಾಯಗಳ ಸಬಲೀಕರಣಕ್ಕಾಗಿ ಮುಡಿಪಾಗಿಟ್ಟರು. ಅವರ ಸಾಮಾಜಿಕ ನ್ಯಾಯ ಪರಂಪರೆಯು ವಿಶ್ವಾದ್ಯಂತ ಸಮಾನತೆ ಮತ್ತು ಮಾನವ ಹಕ್ಕುಗಳ ಚಳುವಳಿಗಳಿಗೆ ಸ್ಪೂರ‍್ತಿ ನೀಡುತ್ತಲೇ ಇದೆ.

1919ರಲ್ಲಿ ಬ್ರಿಟಿಶರು ಬಾರತ ಸರ‍್ಕಾರಿ ಕಾಯ್ದೆಯನ್ನು ರಚಿಸುತ್ತಿದ್ದ ಸಮಯದಲ್ಲಿ, ಡಾ. ಅಂಬೇಡ್ಕರ್ ಅವರು ಸೌತ್‌ಬರೋ ಸಮಿತಿಯ ಮುಂದೆ ಅಸ್ಪ್ರುಶ್ಯರು ಮತ್ತು ಇತರ ದಾರ‍್ಮಿಕ ಗುಂಪುಗಳ ಒಳಗೊಳ್ಳುವಿಕೆಗಾಗಿ ವಿಶೇಶ ಬೇಡಿಕೆಗಳಿಗಾಗಿ ಪ್ರತಿಪಾದಿಸಿದರು. ತುಳಿತಕ್ಕೊಳಗಾದ ಗುಂಪುಗಳಿಗೆ ಬೇಕಾದ ಮೀಸಲಾತಿ ಮತ್ತು ಮತದಾನದ ಹಕ್ಕುಗಳಿಗಾಗಿ ಬೇಡಿಕೆ ಇಟ್ಟರು. ಬಹಿಶ್ಕ್ರುತ ಹಿತಕಾರಿಣಿ ಸಬಾದ ಮೂಲಕ ತುಳಿತಕ್ಕೊಳಗಾದ ವರ‍್ಗಗಳ ಶಿಕ್ಶಣ, ಸಾಮಾಜಿಕ ಸಮಾನತೆ ಹಾಗೂ ಆರ್‍ತಿಕ ಪ್ರಗತಿಗೆ ಒತ್ತು ನೀಡಿ ಅವರನ್ನು ಮೇಲೆತ್ತಲು ಪ್ರಯತ್ನಿಸಿದರು. ಆಗಾಗಿ ಅವರು ಮೂಕ್ ನಾಯಕ್, ಬಹಿಶ್ಕ್ರುತ ಬಾರತ್‌ ಮತ್ತು ಸಮಾನತೆ ಜನತಾ ಸೇರಿದಂತೆ ದಲಿತ ಹಕ್ಕುಗಳಿಗಾಗಿ ಹಲವಾರು ನಿಯತಕಾಲಿಕೆಗಳನ್ನು ಶುರು ಮಾಡಿದರು.

ಜಾತಿ ಆದಾರಿತ ತಾರತಮ್ಯದಿಂದಾಗಿ ದಲಿತರಿಗೆ ಹಿಂದೂ ದೇವಾಲಯಗಳಿಗೆ ಪ್ರವೇಶ ನಿರ‍್ಬಂದಿಸಲಾಗುತ್ತಿದ್ದ ಸಮಯದಲ್ಲಿ, ಅವರ ಹಕ್ಕುಗಳನ್ನು ಪಡೆಯಲು ಅಂಬೇಡ್ಕರ್ ಚಳುವಳಿಗಳನ್ನು ಮುನ್ನಡೆಸಿದರು. ಅವರ ಪ್ರಯತ್ನಗಳು ಸಾಂಪ್ರದಾಯಿಕ ಜಾತಿ ಶ್ರೇಣಿಗಳನ್ನು ಪ್ರಶ್ನಿಸುವುದು ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದವು. ಜಾತಿ ಆದಾರಿತ ಅಸಮಾನತೆಗಳನ್ನು ಪರಿಹರಿಸಲು ಬೂ ಸುದಾರಣೆಗಳು ಮತ್ತು ಆರ್‍ತಿಕ ಸಬಲೀಕರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಐತಿಹಾಸಿಕವಾಗಿ ಹಿಂದುಳಿದ ದಲಿತರು ಮತ್ತು ಇತರ ಹಿಂದುಳಿದ ವರ‍್ಗಗಳಿಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಮೀಸಲಾತಿ ನೀತಿಗಳಿಗಾಗಿ ಡಾ. ಅಂಬೇಡ್ಕರ್‌ ಅವರ ಪ್ರತಿಪಾದನೆ ಇಂದಿಗೂ ಪ್ರಸ್ತುತವಾಗಿದೆ. ಪ್ರಾತಿನಿದ್ಯ ಮತ್ತು ಅವಕಾಶಗಳನ್ನು ಕಚಿತಪಡಿಸಿಕೊಳ್ಳಲು ಶಿಕ್ಶಣ ಮತ್ತು ಸರ‍್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀತಿಗಳನ್ನು ಪರಿಚಯಿಸುವಲ್ಲಿ ಅಂಬೇಡ್ಕರ್ ಪ್ರಮುಕ ಪಾತ್ರ ವಹಿಸಿದರು. ಈ ನೀತಿಗಳು ಐತಿಹಾಸಿಕ ಅನ್ಯಾಯಗಳನ್ನು ತಗ್ಗಿಸುವ ಮೂಲಕ ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ‍್ಗಗಳಂತಹ ಸಾಮಾಜಿಕ ಚಲನಶೀಲತೆಗೆ ಮಾರ‍್ಗಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಡಾ. ಬಿ. ಆರ್. ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯು ಸಮಕಾಲೀನ ಸಾಮಾಜಿಕ-ಆರ್‍ತಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ಒಂದು ಮೂಲಬೂತ ಚೌಕಟ್ಟನ್ನು ಒದಗಿಸುತ್ತದೆ. ಅವರ ದ್ರುಶ್ಟಿಕೋನವನ್ನು ಅಳವಡಿಸಿಕೊಳ್ಳುವುದು ಎಲ್ಲಾ ವ್ಯಕ್ತಿಗಳಿಗೆ ಸಮಾನತೆ, ಗನತೆ ದಕ್ಕಿಸಿಕೊಡುವ ಮತ್ತು ಸಬಲೀಕರಣಗೊಳಿಸುವ ಬದ್ದತೆಯನ್ನು ಒಳಗೊಂಡಿರುತ್ತದೆ, ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯು ಪ್ರಸ್ತುತ ಸನ್ನಿವೇಶದಲ್ಲಿ ಹಲವಾರು ಕಾರಣಗಳಿಗಾಗಿ ಹೆಚ್ಚು ಪ್ರಸ್ತುತವಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್‌ ಅವರ ಸಂವಿದಾನದ ಅನುಮೋದನೆಗಾಗಿ ಸಂವಿದಾನ ಸಬೆಯನ್ನುದ್ದೇಶಿಸಿ ಮಾಡಿದ ಬಾಶಣದಲ್ಲಿ ಅಂಬೇಡ್ಕರ್‌ ಹೀಗೆ ಹೇಳಿದರು –

“ನಾನು ನನ್ನ ಕೆಲಸವನ್ನು ಪೂರ‍್ಣಗೊಳಿಸಿದ್ದೇನೆ; ನಾಳೆಯಾದರೂ ಸೂರ‍್ಯೋದಯವಾಗಬೇಕೆಂದು ನಾನುಬಯಸುತ್ತೇನೆ. ಹೊಸ ಬಾರತಕ್ಕೆ ರಾಜಕೀಯ ಸ್ವಾತಂತ್ರ‍್ಯ ಸಿಕ್ಕಿದೆ, ಆದರೆ ಸಾಮಾಜಿಕ ಮತ್ತು ಆರ್‍ತಿಕ ಸ್ವಾತಂತ್ರ‍್ಯದ ಸೂರ‍್ಯನು ಇನ್ನೂ ಉದಯಿಸಿಲ್ಲ.ಆ ಸೂರ‍್ಯನ ಉದಯ ಆದಶ್ಟು ಬೇಗ ಆಗಲಿ ಎಂದು ಆಶಿಸುತ್ತೇನೆ.”

(ಚಿತ್ರಸೆಲೆ : wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *