ಹೊನಲುವಿಗೆ 12 ವರುಶ ತುಂಬಿದ ನಲಿವು

– ಹೊನಲು ತಂಡ.

ಪ್ರತಿ ದಿನವೂ ಹೊಸತನದೊಂದಿಗೆ ಬೇರೆ ಬೇರೆ ವಿಶಯಗಳನ್ನು ಓದುಗರ ಮುಂದೆ ತರುವ ಹೊನಲು ಮಾಗಜೀನ್‌ಗೆ ಇಂದು ತನ್ನ 12ನೆಯ ಹುಟ್ಟು ಹಬ್ಬದ ಸಡಗರ.ನಿರಂತರವಾಗಿ ವಿವಿದ ವಿಶಯಗಳ ಔತಣವನ್ನು ಬಡಿಸುತ್ತಾ, ಓದುಗರ ಮನ ಗೆದ್ದಿರುವ ಹೊನಲು, ಈಗ 13ನೇ ವರುಶಕ್ಕೆ ಹೆಜ್ಜೆಯಿಟ್ಟಿದೆ.

ಹೊನಲು ಆರಂಬವಾದಾಗಿನಿಂದಲೇ ನುರಿತ ಬರಹಗಾರರೊಂದಿಗೆ ಹೊಸ ಬರಹಗಾರರಿಗೂ ವೇದಿಕೆಯಾಗಬೇಕೆಂಬ ಹೆಬ್ಬಯಕೆ ನಮ್ಮದಾಗಿತ್ತು. ಅಂತೆಯೇ ಇಂದು 360ಕ್ಕೂ ಹೆಚ್ಚು ಬರಹಗಾರರು ತಮ್ಮ ಬರಹಗಳನ್ನು ಹೊನಲಿನಲ್ಲಿ ಮೂಡಿಸಿರುವುದು ನಮಗೆ ಹೆಮ್ಮೆ ಮತ್ತು ಸಾರ‍್ತಕತೆಯನ್ನು ತಂದುಕೊಡುತ್ತಿದೆ. ಮೊದಲ ಬಾರಿಗೆ ಬರಹ ಮಾಡಲು ಕೈ ಹಾಕಿರುವ ಹಲವರು, ನೂರಾರು ಬರಹಗಳನ್ನು ಹೊನಲಿಗಾಗಿ ಮಾಡಿದ್ದಾರೆ. ಹೊಸ ಬರಹಗಾರರು ನಿರಂತರವಾಗಿ ಹೊನಲಿನ ಬಳಗವನ್ನು ಸೇರುತ್ತಿರುವುದು ನಮಗೆ ನಲಿವು ನೀಡುತ್ತಿದೆ.

ಕಾರುಗಳು, ಹೊರಬಾನು, ಅಚ್ಚರಿ ಮೂಡಿಸುವ ಸಂಗತಿಗಳು, ಕತೆ, ಕವಿತೆ, ಅಡುಗೆ, ಆಟೋಟ, ಅರಿಮೆ – ಹೀಗೆ ಬಗೆಬಗೆಯ ವಿಶಯಗಳ ಸುತ್ತ ಇರುವ ಬರಹಗಳು ಹೊನಲಿನ ಸಂಪತ್ತನ್ನು ಹೆಚ್ಚಿಸಿವೆ. ವಿಶೇಶವಾಗಿ, ಶಿವಶರಣರ ವಚನಗಳು ಮತ್ತು ಆದಿಪುರಾಣ, ಹರಿಶ್ಚಂದ್ರ ಕಾವ್ಯದಂತಹ ಹೆಬ್ಬೊತ್ತಿಗೆಗಳನ್ನು(epic) ಇಂದಿನ ತಲೆಮಾರಿಗೆ ಸುಳುವಾಗಿ ತಿಳಿಸುವ ಸುಮಾರು 200 ಹೆಚ್ಚು ಬರಹಗಳು ಓದುಗರ ಮೆಚ್ಚುಗೆ ಪಡೆದಿವೆ. ಸಾವಿರಕ್ಕೂ ಮೀರಿದ ಕವಿತೆಗಳು, 200ಕ್ಕೂ ಹೆಚ್ಚು ಕತೆಗಳು ಹೊನಲಿನಲ್ಲಿವೆ. ಮಕ್ಕಳಿಗಾಗಿಯೇ ಮೀಸಲಾದ ನೂರಾರು ಬರಹಗಳು ಆನೆ ಬಂತಾನೆ ಎಂಬ ಹೊನಲಿನ ಕವಲಿನಲ್ಲಿವೆ.

ಹೊನಲಿನ ಹರವು ದಿನದಿಂದ ದಿನಕ್ಕೆ ಹಬ್ಬುತ್ತಿದೆ. ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಹೊನಲಿನ ಓದುಗರಿದ್ದಾರೆ; ಕರ‍್ನಾಟಕ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಿಂದಶ್ಡೇ ಅಲ್ಲದೇ ಹೊರನಾಡುಗಳಿಂದಲೂ ಬರಹಗಾರರು ತಮ್ಮ ಬರಹಗಳನ್ನು ಹೊನಲಿಗೆ ಮಾಡುತ್ತಿದ್ದಾರೆ. ಪೇಸ್‌ಬುಕ್ ಮತ್ತು ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಪುಟಗಳ ಮೂಲಕ ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಹೊನಲು ತಲುಪುತ್ತಿದೆ.

ಬರಹಗಾರರ ಹುಮ್ಮಸ್ಸು ಮತ್ತು ಶ್ರದ್ದೆಯಿಂದ ಹೊನಲು ಇಂದು 4,800ಕ್ಕೂ ಹೆಚ್ಚು ಬರಹಗಳ ಕಣಜವಾಗಿದೆ. ಓದುಗರ ಪ್ರೋತ್ಸಾಹ ಮತ್ತು ಬೆಂಬಲದಿಂದಲೇ ಈ ಪಯಣ ಯಶಸ್ವಿಯಾಗಿ ಸಾಗುತ್ತಿದೆ.

ಬರಹಗಾರರ ಹುಮ್ಮಸ್ಸು ಮತ್ತು ಓದುಗರ ವಿಶ್ವಾಸವೇ ಹೊನಲಿನ ಶಕ್ತಿ. ಹೊನಲಿಗಾಗಿ ಸಮಯ ಮೀಸಲಿಟ್ಟು ಬರಹ ಮಾಡಿರುವ ಮತ್ತು ಮಾಡುತ್ತಿರುವ ಎಲ್ಲ ಬರಹಗಾರರಿಗೆ, ಮತ್ತು ನಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸುತ್ತಾ ಬೆಂಬಲ ನೀಡುತ್ತಿರುವ ಎಲ್ಲ ಓದುಗರಿಗೂ ಮನದಾಳದಿಂದ ನನ್ನಿಗಳನ್ನು ತಿಳಿಸುತ್ತೇವೆ.

ಇದೀಗ ಹೊಸ ವಸಂತಕ್ಕೆ ಕಾಲಿಡುತ್ತಿರುವ ಹೊನಲಿಗೆ, ನಿಮ್ಮ ಬೆಂಬಲ ಹೀಗೆಯೇ ಸದಾ ಜೊತೆಯಾಗಿರಲಿ ಎಂದು ಕೋರುತ್ತೇವೆ.

ಪೇಸ್‌ಬುಕ್‌ ಪುಟ: https://www.facebook.com/honalu.mimbagilu
ಟ್ವಿಟರ್ ಗೂಡು: https://twitter.com/honalunet
ಇನ್‌ಸ್ಟಾಗ್ರಾಂ: https://www.instagram.com/honalunet

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *