ಕವಿತೆ: ಬರವಸೆ ಕಳೆದುಕೊಂಡವರು
ದಣಿಗಳ ಕೈ ಕೆಳಗೆ ಕೆಲಸ ಮಾಡುವ ಕೂಲಿಗಳು
ಸಾಲದ ಕೆಂಡ ಹೊತ್ತು ದುಡಿಯುವ ಆಳುಗಳು
ಬೆವರಿನ ಹನಿಗಳು ಬೂಮಿಗೆ ಸುರಿದು ನೆನೆದವು
ದಣಿಗಳು ಬೆಳೆದರು ನಾವು ಇನ್ನೂ ಬೆಳೆಯಲೇ ಇಲ್ಲಾ
ನಮ್ಮನ್ನು ಉದ್ದರಿಸಲು ಬಂದವು ನೂರಾರು ಯೋಜನೆಗಳು
ಬಲ್ಲವರ ಬತ್ತಳಿಕೆ, ಚೀಲ ಮದ್ಯ ಸೇರಿ ಹೋದವು
ಹೊಸ ಹೊಸ ನಾಯಕರು ಬಂದು ಅಬ್ಬರಿಸಿದರು
ನಾಯಕರ ಆಸ್ತಿ ಹೆಚ್ಚಿತು ನಮ್ಮ ಹಸಿವು ತೀರಲಿಲ್ಲಾ
ಸಣ್ಣ ತಪ್ಪಾದರು ದೊಡ್ಡ ತುಳಿತಕ್ಕೆ ಸಿಕ್ಕು ನಲುಗಿದೆವು
ನೋವು, ಸಂಕಟ, ಬಡತನ, ದುಕ್ಕ ಬಳುವಳಿಯಾದವು
ನಾವು ಅಕ್ಶರ ಇಲ್ಲದವರು ನಿರ‍್ಲಕ್ಶ್ಯಕ್ಕೆ ಸೀಮಿತವಾದವರು
ಮತ್ತೆ ಮೇಲೆಳುತ್ತೇವೆ ಎನ್ನುವ ಬರವಸೆ ಕಳೆದುಕೊಂಡವರು
ಶೋಶಣೆಯಿಂದ ಮುಕ್ತವಾಗದೆ ಜೀವಂತ ಹೆಣವಾದವರು
ನಮ್ಮ ಮಕ್ಕಳನ್ನು ಗುಲಾಮಗಿರಿ ಕುಂಡಕ್ಕೆ ತಳ್ಳಲಾರೆವು
ಸೂರು, ನೀರು, ಅನ್ನ, ಅಕ್ಶರ ನೀಡುವ ನಾಯಕರು ಬೇಕಿದೆ
ಎಲ್ಲಿದ್ದೀರಾ ಬದಲಾವಣೆಯ ಕ್ರಾಂತಿ ಬರವಸೆ ನಾಯಕರೆ ಎದ್ದು ಬನ್ನಿ
ಕಿರೀಟ ತೊಡಿಸುವುದು ಬೇಡಾ, ನಮಗೆ ಮೂಲ ಸೌಕರ‍್ಯ ಕೊಡಿ
ಉಳ್ಳವರ ಪಾದದಡಿಯಿಂದ ಮೇಲಕ್ಕೆತ್ತಿ ಕಣ್ಣೀರು ಒರೆಸಿ
ಹುಟ್ಟಿನಿಂದ ಇಲ್ಲಿವರೆಗೆ ಆತ್ಮ ಬರವಸೆ ಕಳೆದುಕೊಂಡವರು
ನಮ್ಮ ಹಕ್ಕು ನಮಗೆ ದಕ್ಕಲು ಬವಿಶ್ಯದ ಬರವಸೆ ನೀಡಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು