ಕನೆಕ್ಟೆಡ್ ಕಾರುಗಳು – ಕಂತು 2

– ಜಯತೀರ‍್ತ ನಾಡಗವ್ಡ

ಬೆಸುಗೆಯ ಕಾರುಗಳ ಅನುಕೂಲಗಳೇನು?

ಗಾಡಿಯೊಳಗಡೆ ಮನೋರಂಜನೆ, ಬದ್ರತೆ ಮತ್ತು ಅಪಗಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಬವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಶಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಕ್ಯೆಗೆ ತಕ್ಕಂತೆ ಹೆಚ್ಚಿನ ಬಂಡಿಗಳ ಓಡಾಟವನ್ನು ಸುಲಬ ಸರಳಗೊಳಿಸಿ, ಸಾರಿಗೆ ಏರ‍್ಪಾಟಿನಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಬೆಸುಗೆಯ ಕಾರುಗಳು ನೆರವಾಗುವುದು ಕಚಿತ.

ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ಒಳ್ಳೆಯ ಗುಣಮಟ್ಟದ ತಿಳಿನಲಿ ಏರ‍್ಪಾಟು(Infotainment System), ಅಂಡ್ರ‍್ಯಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಏರ‍್ಪಾಟಿನಿಂದ ಸರಳವಾಗಿ ಜೋಡಣೆಗೊಳ್ಳುತ್ತವೆ. ಈ ಏರ‍್ಪಾಟುಗಳಿಗೆ ಹೆಚ್ಚಿನ ನಿಕರ ಮಾಹಿತಿ ಒದಗಿಸಿ ಕಾರು ಓಡಿಸುಗರಿಗೆ ದಾರಿತೋರಲಿದೆ ಬೆಸುಗೆಯ ಕಾರುಗಳು. ಒಬ್ಬ ವ್ಯಕ್ತಿ ಕಾರಿನಲ್ಲಿ ಮಾರುಕಟ್ಟೆಗೆ ಹೋಗಿದ್ದಾಗ,, ಅವಸರದಲ್ಲಿ ಕಾರು ಪಾರ‍್ಕ್ ಮಾಡಿ, ಕಾರಿಗೆ ಬೀಗ ಹಾಕದೇ ದೂರ ಬಂದಾಗ, ಕಾರಿಗೆ ಬೀಗ ಹಾಕದೇ ಇರುವುದು ನೆನಪಾಗುತ್ತದೆ. ಆದರೆ,ಆ ವ್ಯಕ್ತಿಗೆ ನೆನಪಾಗುವ ಮೊದಲೇ ಆತನ ಮೊಬೈಲ್ ತಕ್ಶಣ ಎಚ್ಚರಿಕೆ ಸಂದೇಶ ನೀಡುತ್ತದೆ. ಕನೆಕ್ಟೆಡ್ ಕಾರ್ ತಂತ್ರಜ್ನಾನದ ಮೂಲಕ ಬೆಸೆದುಕೊಂಡ ಕಾರು ಮತ್ತು ಮೊಬೈಲ್, ಇಂತ ಹೊತ್ತಲ್ಲಿ ಸಹಾಯಕ್ಕೆ ಬರುತ್ತದೆ. ಟ್ಯಾಕ್ಸಿ ಕಂಪನಿಯ ಮಾಲೀಕನೊಬ್ಬ ತನ್ನ ಮೊಬೈಲ್ ಮೂಲಕವೇ ತನ್ನ ಹತ್ತಾರು ಟ್ಯಾಕ್ಸಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಕ್ಶಣಾರ‍್ದದಲ್ಲಿ ಕಂಡುಕೊಳ್ಳಬಹುದು. ತನ್ನ ಟ್ಯಾಕ್ಸಿ ಓಡಿಸುಗರಿಗೆ ಸಾಗುವ ದಾರಿಯ ಸಂಚಾರ ದಟ್ಟಣೆಯ ಮಾಹಿತಿ ಒದಗಿಸಿ, ಅದಕ್ಕೆ ತಕ್ಕಂತೆ ಮಾರ‍್ಗ ಬದಲಿಸಿ ಸುಲಬವಾಗಿ ಊರು ಮುಟ್ಟುವ ಸಲಹೆ ನೀಡಬಹುದು. ಕಾರಿನಲ್ಲಿ ದೂರದ ಊರಿಗೆ ಸಾಗುತ್ತಿದ್ದೀರಿ, ಮನೆಯಲ್ಲಿ ಗೀಸರ್ ಆಪ್ ಮಾಡುವುದು ಆಗ ನೆನಪಾಗುತ್ತದೆ, ಚಿಂತೆ ಬೇಡ ನಿಮ್ಮ ಕಾರು ಮನೆಯಲ್ಲಿನ ಗೀಸರ‍್ ಆಪ್ ಮಾಡುತ್ತದೆ. ನೀವು ಮತ್ತು ಕುಟುಂಬ, ವಾರದ ಕೊನೆಯಲ್ಲಿ ಮಾಲ್‍ವೊಂದಕ್ಕೆ ಹೋಗಬೇಕೆಂದುಕೊಂಡಿರುತ್ತೀರಿ, ಆ ಮಾಲ್‍ನಲ್ಲಿ ಪಾರ‍್ಕಿಂಗ್‌ಗೆ ಎಶ್ಟು ಜಾಗಗಳು ಕಾಲಿ ಇವೆ ಎಂಬುದನ್ನು ನಿಮ್ಮ ಕಾರು ನಿಮಗೆ ತಿಳಿಸುತ್ತದೆ. ಮಾಲ್‌ನ ಸುತ್ತಮುತ್ತಲಿನ ಪರಿಸರದ ನೇರ ಮಾಹಿತಿ ಕನೆಕ್ಟೆಡ್ ಕಾರ್ ಮೂಲಕ ನಿಮ್ಮ ಕಾರು ಪಡೆದುಕೊಂಡು ನಿಮಗೆ ಮಾಹಿತಿ ನೀಡುತ್ತದೆ. ಆಗ ನೀವು ಪಾರ‍್ಕಿಂಗ್‍ಗಾಗಿ ಅಲೆದಾಡುವ-ಸಮಯ ಕಳೆಯುವ ಅಗತ್ಯ ಇರುವುದಿಲ್ಲ. ಇನ್ನೊಂದು ಪ್ರಮುಕ ಅನುಕೂಲವೆಂದರೆ ಜಿಯೋ ಪೆನ್ಸಿಂಗ್(Geo-Fencing). ಅಂದರೆ ನಿರ‍್ದಿಶ್ಟ ದಾರಿಯಲ್ಲಿ, ನಿರ‍್ದಿಶ್ಟ ವಾತಾವರಣದಲ್ಲಿ ಮಾತ್ರ ಗಾಡಿ ಓಡಿಸುವಂತೆ ಮಾಡುವುದು. ಉದಾಹರಣೆಗೆ ನೀವು ನಿಮ್ಮ ಮನೆಯಲ್ಲಿ ಮಗ/ಮಗಳಿಗೆ ಕಾಲೇಜಿಗೆ ಹೋಗಿಬರಲು ಕಾರನ್ನು ಕೊಡಿಸುತ್ತೀರಿ ಎಂದುಕೊಳ್ಳಿ. ದಿನವೂ ಮಕ್ಕಳು ಕಾಲೇಜಿಗೆ ಅದೇ ದಾರಿಯಲ್ಲಿ ಸಾಗಿ ಮರಳಿ ಬರುವಂತೆ ಮಾಡಬಹುದು, ಬಂಡಿ ಅದೇ ವಾತಾವರಣದಲ್ಲಿ ಸಾಗಿ ಬರುವ ಮಾಹಿತಿಯನ್ನು ಒಮ್ಮೆ ಜಿಯೋ ಪೆನ್ಸಿಂಗ್ ಮೂಲಕ ಪೀಡ್ ಮಾಡಿ, ಕನೆಕ್ಟೆಡ್ ಕಾರು ಮೂಲಕ ನಿಮ್ಮ ಮೊಬೈಲ್ ಮತ್ತು ಕಾರು ಬೆಸೆದುಕೊಂಡಿದ್ದರೆ, ಈ ದೈನಂದಿನ ಕಾಲೇಜಿಗೆ ಹೋಗಿ ಬರುವ ದಾರಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಹೀಗೆ ಕಾರು ಓಡಾಡುವ ಚಟುವಟಿಕೆಯ ಮೇಲೆ ಸುಲಬವಾಗಿ ಕಣ್ಣಿಡಬಹುದು. ಕಾರೊಂದು ದಾರಿಯಲ್ಲಿ ಸಾಗುವಾಗ ಅಪಗಾತಕ್ಕೀಡಾದರೆ, ಕೂಡಲೇ ಹತ್ತಿರದ ಸಂಚಾರಿ ಪೋಲೀಸ್‍ರಿಗೂ ಇಲ್ಲ ಅಪಗಾತವಾದ ವ್ಯಕ್ತಿಗಳ ಕುಟುಂಬಕ್ಕೆ ಕೂಡಲೇ ಕಾರು ಮಾಹಿತಿ ಒದಗಿಸಿ ಜೀವ ಉಳಿಸುವ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಗಾಡಿಯೊಂದು ಗಾಟಿ ಪ್ರದೇಶದಲ್ಲಿ ಸಾಗುತ್ತಿದೆ, ಮುಂದೆ ಹತ್ತಾರು ಮೈಲಿ ದೂರದಲ್ಲಿ ಗುಡ್ಡ ಕುಸಿತ, ಬೂಕುಸಿತವಾದರೆ, ಕೂಡಲೇ ಅದರ ಮಾಹಿತಿ ಗಾಡಿಗೆ ತಲುಪುತ್ತದೆ. ಆಗ ಓಡಿಸುಗ ಮುಂದೆ ಸಾಗುವ ಅಪಾಯವನ್ನು ಅರಿತು ಗಾಡಿಯ ಸಾಗುವ ದಾರಿಯನ್ನು ಬದಲಿಸಿಯೋ ಇಲ್ಲವೇ ಬದ್ರವಾದ ಜಾಗವನ್ನು ಸೇರಿಕೊಳ್ಳಬಹುದು. ದೈನಂದಿನ ವ್ಯವಹಾರದ ಮೇಲೆ ಕಣ್ಣಿಡಲು, ಕಳ್ಳ-ಕಾಕರ ಚಟುವಟಿಕೆಗಳ ಮಾಹಿತಿ ಪಡೆದು ಪೋಲೀಸ್ ವ್ಯವಸ್ತೆಗೆ ನೆರವಾಗಲು ಬೆಸುಗೆಯ ಗಾಡಿಗಳ ಅಗತ್ಯವಿರಲಿದೆ.

ಅನಾನುಕೂಲಗಳ ವಿಶಯ ಬಂದಾಗ, ಕಾರುಗಳ ಹ್ಯಾಕಿಂಗ್ ಮುಕ್ಯವಾದ ತೊಡಕಾಗುವ ಸಾದ್ಯತೆ ಇದೆ. ಮಿಂಬಲೆ ಮೂಲಕ ಬೆಸೆದುಕೊಂಡಿರುವ ಗಾಡಿಗಳನ್ನು ವೆಬ್ಸೈಟ್ ಹ್ಯಾಕ್ ಮಾಡುವಂತೆ ದೂರದಲೆಲ್ಲೋ ಇರುವ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡರೆ ಆಗುವ ಅನಾಹುತಗಳನ್ನು ಯೋಚಿಸಿ. ಇನ್ನೂ ದಿಗಿಲುಕೋರರು ಕಾರುಗಳನ್ನು ತಮ್ಮ ವಶಕ್ಕೆ ಪಡೆದು, ಯಾವುದೋ ದೇಶದ ಮೂಲೆಯಿಂದ ಕಾರನ್ನು ಅದರ ಮಾಲೀಕನ ಮೊಬೈಲ್ ಹೀಗೆ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದು ಕೊಲೆ ಸುಲಿಗೆ ಮಾಡುವ ಅಪಾಯ ತಪ್ಪಿದ್ದಲ್ಲ. ಮಾದಕ ವಸ್ತು ಸಾಗಾಟಗಾರರು ಈ ತಂತ್ರಜ್ನಾನದ ಮೂಲಕ ಕಳ್ಳದಾರಿಗಳ ಮೂಲಕ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಸಮಾಜವನ್ನು ಹಾಳುಗೆಡುವಬಹುದು.

ಮಾಹಿತಿ ಗುಟ್ಟನ್ನು ಕಾಪಾಡಿಕೊಳ್ಳುವುದು ಕಶ್ಟ. ಬೆಸುಗೆಯ ಗಾಡಿಗಳನ್ನು ಕ್ಲೌಡ್, ಆಪ್ ಮೂಲಕ ಸಾಕಶ್ಟು ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರಿಂದ ಕಾರಿನೊಡೆಯರ ವೈಯುಕ್ತಿಕ ಮಾಹಿತಿ ಕಾರು ತಯಾರಕರಿಗೆ ಸುಲಬವಾಗಿ ತಲುಪುತ್ತದೆ. ಇಂತ ಮಾಹಿತಿಗೆ ಪ್ರವೇಶವಕಾಶ(Access) ಹೊಂದಿರುವವರು ತಮಗಿಶ್ಟದಂತೆ ದುರುಪಯೋಗ ಪಡಿಸಿಕೊಳ್ಳುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬೆಸುಗೆಯ ಗಾಡಿಗಳ ಸಾದಕ ಬಾದಕಗಳ ಚರ‍್ಚೆಗಳು ದಿನೇದಿನೇ ಜೋರಾಗಿ ನಡೆಯುತ್ತಲೇ ಇವೆ. ಬೆಸುಗೆಯ ಗಾಡಿಗಳ ಅನಾನುಕೂಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಬರದಲ್ಲಿ ಸಾಗಿವೆ. ಇದರ ಮದ್ಯೆಯೇ ಸಾಕಶ್ಟು ಬೆಸುಗೆಯ ಗಾಡಿಗಳು ಬಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನವೂ ಓಡಾಡುತ್ತಿವೆ.

(ಮಾಹಿತಿ ಹಾಗೂ ಚಿತ್ರ ಸೆಲೆ: qorvo.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *