ಮಾಡಿ ಸವಿಯಿರಿ ಪುಟಾಣಿ ಚುರುಮುರಿ ಚಕಳಿ
– ಸವಿತಾ.
ಏನೇನು ಬೇಕು ?
- ಪುಟಾಣಿ (ಹುರಿಗಡಲೆ) – 1 ಲೋಟ
- ಚುರುಮುರಿ (ಕಡಲೇಪುರಿ) – 1 ಲೋಟ
- ಒಣ ಕೊಬ್ಬರಿ ತುರಿ – 4 ಚಮಚ
- ಬೆಲ್ಲ – 1 ಲೋಟ
- ತುಪ್ಪ – 1 ಚಮಚ
ಮಾಡುವ ಬಗೆ
ಮೊದಲಿಗೆ ಪುಟಾಣಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿರಿ. ನಂತರ ಇದನ್ನು ಒಂದು ಅಗಲ ಪಾತ್ರೆಗೆ ಸುರಿದಿಡಿ. ಆಮೇಲೆ ಕಡಲೇಪುರಿಯನ್ನು ಮಿಕ್ಸರ‍್ ನಲ್ಲಿ ಪುಡಿ ಮಾಡಿಟ್ಟುಕೊಳ್ಳಿರಿ. ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಮತ್ತು ಅದಕ್ಕೆ ಎರಡು ಚಮಚ ನೀರು ಬೆರೆಸಿ ಬಿಸಿ ಮಾಡಿ ಬೆಲ್ಲ ಕರಗಿಸಿಕೊಳ್ಳಿರಿ ( ಪಾಕ ಮಾಡುವುದು ಬೇಡ ). ನಂತರ ಮಾಡಿಟ್ಟುಕೊಂಡ ಹುರಿಗಡಲೆ ಮತ್ತು ಕಡಲೇಪುರಿ ಪುಡಿಯನ್ನು ಬೆಲ್ಲಕ್ಕೆ ಸೇರಿಸಿ, ಚೆನ್ನಾಗಿ ಕಲಸಿ. ಈಗ ಒಂದು ತಟ್ಟೆಗೆ ತುಪ್ಪ ಸವರಿ, ಕಲಸಿದ ಮಿಶ್ರಣ ತಟ್ಟೆಗೆ ಸುರಿದು, ಮೇಲೆ ಒಣ ಕೊಬ್ಬರಿ ತುರಿ ಸ್ವಲ್ಪ ಹಾಕಿ ಕೈಯಿಂದ ತಟ್ಟಿ ಕೊಂಡು ಚೌಕಾಕಾರ ಚಕಳಿ ಕತ್ತರಿಸಿ. ಈಗ ಹುರಿಗಡಲೆ ಕಡಲೇಪುರಿ ( ಪುಟಾಣಿ ಚುರುಮುರಿ ಚಕಳಿ ) ಸವಿಯಲು ಸಿದ್ದ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು