ಬಾಳೆಹಣ್ಣು
– ಸವಿತಾ.
ನಮ್ಮ ಸನಾತನ ದರ‍್ಮದಲ್ಲಿ ಹಣ್ಣುಗಳ ಪೈಕಿ ಬಾಳೆಹಣ್ಣನ್ನು ಸರ‍್ವಶ್ರೇಶ್ಟ ಎಂದು ನಂಬಿದ್ದೇವೆ. ಏಕೆಂದರೆ ಬಾಳೆಹಣ್ಣು ಯಾವುದೇ ಪೂಜೆ ಪುನಸ್ಕಾರಗಳಿರಲೀ ಇತರೆ ಪೂಜಾ ಸಾಮಗ್ರಿಗಳ ಜೊತೆ ಸದಾ ಇರುವ ಒಬ್ಬ ಸದಸ್ಯ. ಹಬ್ಬ ಅತವಾ ಇನ್ನಿತರೆ ಸಂದರ‍್ಬಗಳಲ್ಲಿ ಮನೆಗೆ ಯಾರಾದರೂ ಮುತ್ತೈದೆ ಹೆಣ್ಣು ಮಕ್ಕಳು ಬಂದರೆ ಅರಿಶಿಣ ಕುಂಕುಮ ಹೂವಿನ ಜೊತೆಗೆ ಎಲೆ ಅಡಿಕೆಯೊಟ್ಟಿಗೆ ಎರಡು ಬಾಳೆಹಣ್ಣು ಇಟ್ಟು ಕೊಡುವ ಪದ್ದತಿ ನಮ್ಮದು.
ಬಾಳೆ ತೀರ ಅಂತ ದೊಡ್ಡದಾದ ಗಿಡ. ಈ ಗಿಡ ಸುಮಾರು 10 ರಿಂದ 33ಅಡಿ ಎತ್ತರದಶ್ಟು ಬೆಳೆಯುತ್ತದೆ. ಆದ್ದರಿಂದ ಇದನ್ನು ಬಾಳೆ ಮರ ಎನ್ನುವುದಕ್ಕಿಂತ ಬಾಳೆ ಗಿಡ ಎಂದೇ ಹೆಚ್ಚಾಗಿ ಸಂಬೋದಿಸುವರು. ಇದರ ಕಾಂಡ ಟೊಳ್ಳು. ಬಾಳೆಯ ಕಾಂಡ ಬಾಗವನ್ನು ಬಾಳೆದಿಂಡು ಎಂದು ಕರೆಯುವುದೇ ಹೆಚ್ಚು. ವೈಜ್ನಾನಿಕವಾಗಿ ಬಾಳೆ ಹಣ್ಣು ಮ್ಯುಸೇಸಿ’ ಕುಲಕ್ಕೆ ಸೇರಿದ್ದು ‘ಮ್ಯೂಸಾ ಅಕ್ಯುಮಿನೇಟ (musa acuminata) ಎನ್ನಲಾಗುತ್ತದೆ. ಸುಮಾರು ನಾಲ್ಕು ಸಾವಿರ ವರ‍್ಶಗಳಿಂದಲೂ ಬಾಳೆಯು ನಮ್ಮ ಬಾರತದಲ್ಲಿ ಅಸ್ತಿತ್ವದಲ್ಲಿದೆ ಎಂಬ ಮಾಹಿತಿ ಇದೆ. ಆಗ್ನೇಯ ಏಶ್ಯಾ ಬಾಗದಲ್ಲಿ ಮೊದಲು ಹುಟ್ಟಿದ್ದರೂ ಹೆಚ್ಚಾಗಿ ಇದರ ವಾಸ್ತವ್ಯ ಇರುವುದು ನಮ್ಮ ಬಾರತದಲ್ಲಿ. ತಾಯ್ಲ್ಯಾಂಡ್, ಚೈನಾ, ಇಂಡೋನೇಶ್ಯಾ, ಹೀಗೆ ನಮ್ಮ ನೆರೆ ಹೊರೆಯ ರಾಶ್ಟ್ರಗಳಲ್ಲೂ ಇದರ ಬಳಕೆ ಇದೆ. ನೀರು ಬಸಿದು ಹೋಗುವಂತಹ ಪಲವತ್ತಾದ ಮಣ್ಣು ಇದರ ಬೆಳೆಗೆ ಸೂಕ್ತವಾದುದು. ಬಾಳೆ ಹಣ್ಣಿನ ವಿವಿದ ತಳಿಗಳು ಈಗಾಗಲೇ ತಿಳಿದಿರಬಹುದು. ಅದರ ಗಾತ್ರ, ಎತ್ತರ ಮತ್ತು ದ್ರುಡತೆಗೆ ತಕ್ಕಂತೆ ಬಾಳೆಹಣ್ಣಿನ ವಿವಿದ ಪ್ರಬೇದಗಳನ್ನು ಗುರುತಿಸಬಹುದು. ಪಚ್ಚಬಾಳೆ, ರಸಬಾಳೆ, ಏಲಕ್ಕಿಬಾಳೆ, ಪುಟ್ಟಬಾಳೆ, ನೇಂದ್ರಬಾಳೆ ಹೀಗೆ. ರೈತನಿಗೆ ಬಾಳೆ ಪ್ರಮುಕವಾದ ವಾಣಿಜ್ಯ ಬೆಳೆ.
ಎಲ್ಲರ ಮನೆಯಲ್ಲೂ ಸದಾ ಬಾಳೆಹಣ್ಣು ಇದ್ದೇ ಇರುತ್ತದೆ. ಮಕ್ಕಳಿಗೂ, ಹಿರಿಯರಿಗೂ ಹೀಗೆ ಎಲ್ಲರ ಪ್ರಿಯವಾದ ಹಣ್ಣು ಬಾಳೆಹಣ್ಣು. ಹಣ್ಣುಗಳ ರುಚಿಯಲ್ಲಿ ಮಾವು ಮೊದಲನೇ ಸ್ತಾನ ಪಡೆದುಕೊಂಡರೆ, ಬಾಳೆ ಹಣ್ಣು ಎರಡನೇ ಸ್ತಾನ ಮತ್ತು ಅತ್ಯಂತ ಜನಪ್ರಿಯವಾದ ಹಣ್ಣು. ಬಾಳೆ ಗಿಡದ ಮತ್ತೊಂದು ವಿಶೇಶವೆಂದರೆ ಒಂದು ಗಿಡಕ್ಕೆ ಒಂದು ಬಾರಿಗೆ ನೂರಾರು ಹಣ್ಣುಗಳಿರುವ ಒಂದೇ ಬಾಳೆಗೊನೆ ಬಿಡುವುದು. ಬಾಳೆ ಹಣ್ಣಿನಿಂದ ರಸಾಯನ, ಕೆಲವು ಸಿಹಿತಿಂಡಿ, ಹಾಗೆಯೇ ಚಿಪ್ಸ್, ಬಜ್ಜಿ ತಯಾರಿಸಲಾಗುತ್ತದೆ. ಕೇರಳದಲ್ಲಿ ಬಾಳೆಕಾಯಿ ಚಿಪ್ಸ್ ಒಂದು ಜನಪ್ರಿಯ ವಿಶೇಶ ಕಾದ್ಯ.
ಯಾವುದೇ ರುತುವಿರಲೀ ಸದಾ ದೊರೆಯುವ ಬಾಳೆ ಹಣ್ಣಿನ ಪ್ರಯೋಜನ ನಮ್ಮೆಲ್ಲರ ಗಮನಕ್ಕೆ ಬಂದಿದೆ. ಆದರೂ ಇದರ ಉಪಯೋಗಗಳ ಬಗ್ಗೆ ಇನ್ನಶ್ಟು ವಿಚಾರ ತಿಳಿಯೋಣ. ಉಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಹಲವಾರು ಆರೋಗ್ಯದ ಲಾಬಗಳು ಇವೆ:
- ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಂ, ವಿಟಮಿನ್ ಬಿ6, ವಿಟಮಿನ್ ಸಿ, ನೈಸರ‍್ಗಿಕ ಶರ‍್ಕರ (ಪ್ರುಕ್ಟೋಸ್, ಗ್ಲೂಕೋಸ್, ಸುಕ್ರೋಸ್) ಮತ್ತು ನಾರಿನಾಂಶ (ಪೈಬರ್) ಇದೆ.
- ಬಾಳೆಹಣ್ಣಿನ ನಾರಿನಾಂಶ ಜೀರ್‍ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ, ಇದು ಮಲಬದ್ದತೆಯನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ.
- ಬಾಳೆಹಣ್ಣಿನ ನೈಸರ‍್ಗಿಕ ಕಿಣ್ವಗಳು ಅಜೀರ‍್ಣವನ್ನು ತಡೆಹಿಡಿಯಲು ಸಹಾಯ ಮಾಡುತ್ತವೆ.
- ಬಾಳೆಹಣ್ಣಿನ ಪೊಟ್ಯಾಸಿಯಂ ಹ್ರುದಯದ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಹೊಟ್ಟೆಯ ಹುಣ್ಣಿಗೆ ಒಳ್ಳೆಯ ಮದ್ದು ಈ ಬಾಳೆಹಣ್ಣು.
ಪಚ್ಚಬಾಳೆ, ಏಲಕ್ಕಿಬಾಳೆ ಹಾಗೂ ರಸಬಾಳೆ ಕರ‍್ನಾಟಕದಲ್ಲಿ ಮುಕ್ಯವಾಗಿ ಬೆಳೆಯುವ ಬಾಳೆ ಬೆಳೆಗಳು. ಅವುಗಳ ವ್ಯತ್ಯಾಸವನ್ನು ಗುರುತಿಸೋಣ
ಪಚ್ಚಬಾಳೆ: ರೋಬಾಸ್ಟಾ ಇದರ ಇನ್ನೊಂದು ಹೆಸರು. ಕರ‍್ನಾಟಕ ಮತ್ತು ಬಾರತದ ವಿವಿದ ಬಾಗಗಳಲ್ಲಿ ಅಗಾದವಾಗಿ ಬೆಳೆಯಲಾಗುವ ಮತ್ತು ಬಳಕೆಯಲ್ಲಿರುವ ಹಣ್ಣು. ಈ ಹಣ್ಣು ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಹೆಸರಲ್ಲಿ ಪಚ್ಚೆ ಇದ್ದರೂ ಹಣ್ಣಾದಾಗ ಹಳದಿ ಬಣ್ಣವಾಗಿ, ಸಿಪ್ಪೆ ಸ್ವಲ್ಪ ದಪ್ಪದಾಗಿರುತ್ತದೆ. ಬೇರೆ ಬಾಳೆಹಣ್ಣಿಗಿಂತ ಹೆಚ್ಚು ಪಿಶ್ಟ ಮತ್ತು ಸಿಹಿಯಾಗಿರುತ್ತದೆ. ಆದರೆ ಸುವಾಸನೆ ಕಡಿಮೆ. ಪಚ್ಚೆಬಾಳೆಯಲ್ಲಿ ಕಡಿಮೆ ಗ್ಲೈಸಮಿಕ್ ಸೂಚ್ಯಾಂಕದಿಂದಾಗಿ, ರಕ್ತದಲ್ಲಿನ ಸಕ್ಕರೆ ಏರಿಕೆ ತಡೆಯುತ್ತದೆ. ಡಯಾಬಿಟೀಸ್ ರೋಗಿಗಳಿಗೆ ಸೇವಿಸಲು ಅನುಕೂಲಕರ. ಇದು ನಾರಿನಂಶವಿರುವುದರಿಂದ ಜೀರ‍್ಣಕ್ರಿಯೆಗೆ ಕೈಜೋಡಿಸುತ್ತದೆ.
ಏಲಕ್ಕಿಬಾಳೆ: ಕರ‍್ಪೂರವಲ್ಲಿ ಇದರ ಇನ್ನೊಂದು ಹೆಸರು. ಪಚ್ಚೆಬಾಳೆಹಣ್ಣಿಗಿಂತ ರುಚಿಯಲ್ಲಿ ಮುಂದು. ಪೂಜಾದಿ ದಾರ‍್ಮಿಕ ಕಾರ‍್ಯಗಳಲ್ಲಿಯೂ ಇದರ ಬೇಡಿಕೆ ಹೆಚ್ಚು. ಎಲ್ಲಾ ಬಾಳೆಯಂತೆ ನಾರಿನಾಂಶ ಹೆಚ್ಚು. ಕರುಳಿನ ಬೇನೆ, ಜೀರ್‍ಣಕ್ರಿಯೆಗೂ ಅನುಕೂಲಕಾರಿ. ಏಲಕ್ಕಿಬಾಳೆಯಲ್ಲಿರುವ ಟ್ರಿಪ್ಟೋಪಾನ್ ಮನಸ್ಸಿನ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಏಲಕ್ಕಿ ಬಾಳೆಯ ವಿಶೇಶತೆ.
ರಸಬಾಳೆ: ಇದು ಬಾಳೆಯ ಇನ್ನೊಂದು ತಳಿ, ನಂಜನಗೂಡಿನ ರಸಬಾಳೆ ಎಂದೇ ಪ್ರಸಿದ್ದ. ಗಾತ್ರದಲ್ಲಿ ದಪ್ಪನಾಗಿದ್ದು, ನಂಜನಗೂಡು ಮತ್ತು ಮೈಸೂರಿನ ಸುತ್ತಮುತ್ತ ಬೆಳೆಯುವ ಒಂದು ಬಾಳೆಹಣ್ಣು.
ಬಾಳೆ ಹಣ್ಣಿನ ಸಿಪ್ಪೆಯನ್ನು ಹಳ್ಳಿ ಕಡೆ ದನಕರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಗಿಡಗಳಿಗೆ ಗೊಬ್ಬರವಾಗಿ, ಹಾಕಲಾಗುತ್ತದೆ. ಮೊಡವೆ, ತುರಿಕೆಗಳಂತಹ ಅಲರ‍್ಜಿಗೆ ಬಾಳೆ ಹಣ್ಣಿನ ಸಿಪ್ಪೆಯ ತಿರುಳು ಬಹಳ ಒಳ್ಳೆಯದು. ಟೀ, ಕಾಪೀ, ದೂಮಪಾನ ಸೇವನೆಯಿಂದ ಆಗುವ ಹಲ್ಲಿನ ಮೇಲಿನ ಕಲೆಗಳಿಗೆ ಈ ಸಿಪ್ಪೆಯ ಬಾಗ ಉಪಯೋಗಕಾರಿ.
ಬಾಳೆಯ ಕಾಂಡ ಅತವಾ ಬಾಳೆ ದಿಂಡಿನ ಉಪಯೋಗಗಳು ಈಗೀಗ ಹೆಚ್ಚು ಜನಪ್ರಿಯವಗುತ್ತಿದೆ. ಬಾಳೆ ದಿಂಡಿನ ಜ್ಯೂಸ್, ಪಲ್ಯ ಯಾವುದೇ ಆಗಿರಲಿ ಕಿಡ್ನಿ ಕಲ್ಲು ಕರಗಲು ರಾಮಬಾಣ. ಚಾಟ್ಸ್ ಸೆಂಟರ್ ಗಳಲ್ಲಿ ಇತ್ತೀಚಿಗೆ ರುಚಿಯಾದ ಕಾದ್ಯ ತಯಾರಿಕೆಯಲ್ಲಿ ಬಳಸುತ್ತಿರುತ್ತಾರೆ. ಹಬ್ಬಗಳಲ್ಲಿ ಎಲೆ ಸಮೇತವಿರುವ ಪುಟ್ಟ ಪುಟ್ಟ ಬಾಳೆ ಕಂಬಗಳಿದ್ದರೆ ದೇವರ ಮಂಟಪದ ಎರಡು ಬದಿ ಅಲಂಕಾರಿಕವಾಗಿ ಇಡಬಹುದು. ಮದುವೆ ಮಂಟಪಗಳ ಚಪ್ಪರದ ಕಂಬಗಳಿಗೂ ಕಟ್ಟುವ ಪದ್ದತಿ ಆಚರಣೆಯಲ್ಲಿದೆ. ಆಯುದಪೂಜೆ ವೇಳೆ ವಾಹನಗಳ ಅಲಂಕಾರಕ್ಕೆ ಚಿಕ್ಕ ಮತ್ತು ಚೊಕ್ಕದಾದ ಬಾಳೆ ಕಂಬಗಳು ಅಂದಕ್ಕೆ ಮೆರುಗು ಕೊಡುತ್ತವೆ.
ಪ್ರಮುಕವಾಗಿ ಬಾಳೆಯ ಸಕಲ ಬಾಗಗಳು ಪ್ರಾಚೀನ ಕಾಲದಿಂದಲೂ ಪೂಜಾಕೈಂಕರ‍್ಯಗಳಲ್ಲಿ ತೊಡಗುವುದರಿಂದ ಇದು ತನ್ನ ಉಪಯೋಗಕಾರಿ ಹಾಗೂ ಪಾವಿತ್ರ‍್ಯತೆಗೆ ಹೆಸರಾಗಿದೆ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು