ಗುದ್ದುವಿಕೆ ತಡೆಯಲು ಪೋರ‍್ಡ್ ಚಳಕ

ಜಯತೀರ‍್ತ ನಾಡಗವ್ಡ.

ಇತ್ತೀಚಿಗೆ ಬಂಡಿಗಳ ಗುದ್ದುವಿಕೆಯಿಂದಾಗಿ ದಾರಿ ಅವಗಡಗಳು ಹೆಚ್ಚುತ್ತಿವೆ. ಮಂದಿ ಸಂಕ್ಯೆ ಏರಿಕೆಯಾಗಿ ಅದಕ್ಕೆ ತಕ್ಕಂತೆ ಕಾರು, ಇಗ್ಗಾಲಿ ಬಂಡಿಗಳೂ ಬೀದಿಗಿಳಿದಿವೆ. ಇದರಿಂದ ಬಂಡಿಗಳ ಒಯ್ಯಾಟ ಹೆಚ್ಚಾಗಿ ಗುದ್ದುವಿಕೆಯಂತಹ ಅವಗಡಗಳನ್ನು ತಡೆಯುವುದು ಅಸಾದ್ಯವಾಗುತ್ತಿದೆ. ಬಂಡಿ ತಯಾರಕ ಕೂಟಗಳಿಗೂ ಇದು ಒಂದು ತಲೆನೋವಾಗಿದ್ದು, ಗುದ್ದುವಿಕೆ ತಪ್ಪಿಸುವ ಬಂಡಿ ತಯಾರಿಸುವ ಒತ್ತಡ ಇವರ ಮೇಲೆ ಬಿದ್ದಿದೆ.

ತಮ್ಮ ಬಂಡಿಗಳಲ್ಲಿ ಗುದ್ದುವಿಕೆಯ ಪರಿಣಾಮ ಕಡಿಮೆಗೊಳಿಸಬಲ್ಲ ಚಳಕ ಅಳವಡಿಸುವತ್ತ ಎಲ್ಲ ಬಂಡಿ ತಯಾರಕರು ಕಣ್ಣು ನೆಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಬಾರತದಲ್ಲಿ ತಯಾರಿಸಿದ ಹಲವು ಹೆಸರುವಾಸಿ ಕಾರುಗಳನ್ನು ಗುದ್ದುವಿಕೆ ಒಳಪಡಿಸಿದಾಗ ಅವುಗಳು ಕಾಯ್ದುಕೊಳ್ಳಬೇಕಾಗಿದ್ದ ಗುಣಮಟ್ಟದಲ್ಲಿ ಸೋತಿವೆ ಎಂದು ಎನ್ ಕ್ಯಾಪ್ (NCAP) ಸಂಸ್ತೆಯು ವರದಿ ಸಲ್ಲಿಸಿ ತಾನೋಡ ಕಯ್ಗಾರಿಕೆಯಲ್ಲಿ ದೊಡ್ಡ ಸುದ್ದಿ ಮಾಡಿತ್ತು.

ಈ ನಿಟ್ಟಿನಲ್ಲಿ ಓಡಿಸುಗನಿಗೆ ನೆರವಾಗಬಲ್ಲ, ದಾರಿಹೋಕರನ್ನು ಗುರುತಿಸಬಲ್ಲ ಹೊಸ ಚಳಕದ ಕಾರುಗಳನ್ನು ಬೆಳೆಸುವಲ್ಲಿ ತಾನೋಡ ಕಯ್ಗಾರಿಕೆಯವರು ತೊಡಗಿಕೊಂಡಿದ್ದಾರೆ. ಇದರಲ್ಲಿ ಜಗತ್ತಿನ ದೊಡ್ಡ ಕೂಟಗಳಲ್ಲೊಂದಾದ ಅಮೇರಿಕಾದ ಪೋರ‍್ಡ್ ಕೂಡ ಕೆಲಸ ಮಾಡುತ್ತಿದ್ದು, ಇದೀಗ ಗುದ್ದುವಿಕೆ ಕಡಿಮೆಗೊಳಿಸುವ ಹೊಚ್ಚ ಹೊಸ ಚಳಕವೊಂದನ್ನು ಪೋರ‍್ಡ್ ಅಣಿಗೊಳಿಸುತ್ತಿದೆ.

ಪೋರ‍್ಡ್ ನ ಹೆಸರುವಾಸಿ ಕಾರು ಮೊಂಡಿಯೊದ (MONDEO) ಹೊಸ ಮಾದರಿಯೊಂದರಲ್ಲಿ ಈ ಚಳಕದ ಒರೆ ಹಚ್ಚುವಿಕೆಯ ಕೆಲಸ ಬಿರುಸಿನಿಂದ ಸಾಗಿದ್ದು, ಇದೇ ವರುಶದಲ್ಲಿ ಯುರೋಪ್ ನಲ್ಲಿ ಬಿಡುಗಡೆ ನಡೆಸುವ ತರಾತುರಿಯಲ್ಲಿದೆ. ಕೆಳಕಂಡ 3 ವಿಶೇಶ ಚಳಕಗಳು ಈ ಬಂಡಿಯಲ್ಲಿರಲಿವೆ ಎಂದು ತಿಳಿದು ಬಂದಿದೆ.

– ಓಡಿಸುಗನಿಗೆ ನೆರವಾಗಬಲ್ಲ (Driver Assist), ದಾರಿಹೋಕರ ಗುರುತಿಸುವಿಕೆ (Pedestrian Detection)
– ಮುನ್ಗುದ್ದುವಿಕೆಯ ಸೂಚನೆ (Pre-Collision Detection), ಓಡಿಸುಗ ಬಂಡಿ ನಿಲ್ಲಿಸಿ ಅಪಗಾತ ತಡೆಯುವಂತೆ ನೆರವಾಗುವಿಕೆ (Driver Auto braking assist)
– ಸಾಲು ಕಾಯ್ದುಕೊಳ್ಳುವಿಕೆಯ ಇಲ್ಲವೇ ದಾಟುವಿಕೆಗೆ ನೆರವಾಗಬಲ್ಲ (Lane Keeping Assist) ಚಳಕ, ದೂರದಿಂದ ಕಾಣದ ತಿರುವುಗಳ ಬಗ್ಗೆ ಮಾಹಿತಿ ಒದಗಿಸುವುದು (Blind Spot Information system)

ಇದರಲ್ಲೂ ಮುನ್ಗುದ್ದುವಿಕೆಯ ಸೂಚನೆ ಮತ್ತು ಓಡಿಸುಗ ಬಂಡಿಗೆ ಬಲುಬೇಗ ತಡೆಯೊಡ್ಡಬಲ್ಲ ಚಳಕಗಳು ತುಂಬಾ ಕುತೂಹಲ ಹುಟ್ಟಿಸಿವೆ. ಕಾರುಗಳು ಮುಂಬಾಗದಿಂದ ಗುದ್ದಿ (Frontal Crash) ಅಪಗಾತವಾಗುವಿಕೆಯನ್ನು ತಡೆಯುವಲ್ಲಿ ಈ ಚಳಕ ನೆರವಾಗಲಿದೆ. ಇದರಲ್ಲಿ ಕಾರಿಗೆ ಒಂದು ಅಲೆಗಾವಲು (RADAR) ಮತ್ತು ತಿಟ್ಟಕ (Camera) ಅಳವಡಿಸಲಾಗಿರುತ್ತದೆ.

ಇವುಗಳ ಮೂಲಕ ಕಾರು ತಾನು ಮುಂದೆ ಸಾಗುವ ದಾರಿಯ ಪೂರ‍್ತಿ ಮಾಹಿತಿ ಪಡೆದು, ಯಾವುದೇ ಅಡೆತಡೆಗಳು ಬಂದರೆ ಕಾರನ್ನು ತಡೆಯುವಂತೆ ಓಡಿಸುಗನಿಗೆ ಸೂಚಿಸುತ್ತದೆ. ಕೆಲವು ಕ್ಶಣಗಳಲ್ಲಿ ಓಡಿಸುಗ ಕಾರಿನ ತಡೆತುಳಿಗೆಯ (Brake Pedal) ಮೂಲಕ ನಿಲ್ಲಿಸದೇ ಹೋದಲ್ಲಿ, ಕಾರಿನ ಮೆದುಜಾಣ್ಮೆಯು ಕಾರನ್ನು ಚಕ್ಕನೆ ನಿಲ್ಲಿಸಿ ಮುಂದಾಗುವ ಅನಾಹುತವನ್ನು ತಡೆಯುತ್ತದೆ. ಇದು ಗೂಗಲ್ ಅಣಿಗೊಳಿಸುತ್ತಿರುವ ಕಾರಿನಂತೆ ತನ್ನಿಂದ ತಾನೇ ತಡೆಯೊಡ್ಡಿ ಕಾರನ್ನು ನಿಲ್ಲಿಸುತ್ತದೆ

Ford2

ಬಂಡಿಗಳ ಮುಂದೆ ಎದುರಾಗುವ ದಿನದ ಸಾಮಾನ್ಯ ಚಿತ್ರಣ ಹಾಗೂ ದಾರಿಹೋಕರು ಇವುಗಳ ನಡುವಿನ ಬೇರ‍್ಮೆ ಗುರುತಿಸುವಂತೆ ಬಂಡಿಗಳ ಮೆದುಜಾಣ್ಮೆಯನ್ನು ಬೆಳೆಸಲಾಗಿದೆ. ದಾರಿಹೋಕರಂತೆ ಹೋಲುವ ಆಳುಗೊಂಬೆಗಳನ್ನು(Manikin) ಬಳಸಿ ಕಾರುಗಳ ಒರೆಹಚ್ಚುವ ಕೆಲಸ ನಡೆಯುತ್ತಿದ್ದು ಈಗಾಗಲೇ ಪೋರ‍್ಡ್ ಕೂಟದವರು ಮೂರು ಲಕ್ಶ ಮಯ್ಲಿಯಶ್ಟು ಕಾರನ್ನು ಓಡಿಸುವ ಮೂಲಕ ಇದನ್ನು ಗಟ್ಟಿಗೊಳಿಸಿದ್ದಾರೆ.

Ford 1ಈ ಅರಕೆಯ ಹೊಣೆಹೊತ್ತಿರುವ ಪೋರ‍್ಡ್ ಕೂಟದ ಸ್ಕಾಟ್ ಲಿಂಡ್ ಸ್ಟ್ರೋಮ್ (Scott Lindstrom) ಹೇಳುವಂತೆ ಜಗತ್ತಿನ 3 ವಿವಿದ ಕಂಡಗಳಲ್ಲಿ ಅಲ್ಲಿನ ಬಗೆ ಬಗೆಯ ವಾತಾವರಣಗಳಲ್ಲಿ ಕಾರುಗಳನ್ನು ಓಡಿಸಿ ಈ ಮೂರು ಲಕ್ಶ ಮಯ್ಲಿಗಳನ್ನು ಪೂರ‍್ತಿಗೊಳಿಸಲಾಗಿದೆ. ಹೆಚ್ಚು ಮಂದಿ ದಟ್ಟಣೆ ಹೊಂದಿರುವ ಬಾರತ, ಚೀನಾ ನಾಡುಗಳಿಗೆ ಇಂತಹ ಕಾರುಗಳು ತಕ್ಕುದಾಗಿವೆ. ಇದರಿಂದ ಹೆಚ್ಚಿನ ಅನಾಹುತಗಳನ್ನು ತಡೆಯಬಹುದು. ಒಯ್ಯಾಟದ ದಟ್ಟಣೆಯಿಂದ ನಮ್ಮ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪಗಾತಗಳನ್ನು ತಡೆಯಲು ಇಂತಹ ಚಳಕದ ಕಾರುಗಳು ಬೇಗನೇ ಬೀದಿಗಿಳಿಯಲಿ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: 1. media.ford.com, 2. www.ford.com, 3. www.motorauthority.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *