ಪತ್ತೇದಾರಿ ಕತೆ: ಮಾಯವಾದ ಹೆಣ(ಕಂತು-2)

 ಬಸವರಾಜ್ ಕಂಟಿ.

interrogate

ಕಂತು-1 ಕಂತು-2

ಮಾರನೇಯ ದಿನ ಪುಲಕೇಶಿ, ವಿಜಯನಗರ ಸ್ಟೇಶನ್ನಿನಲ್ಲಿ ತನ್ನ ಗೆಳೆಯ ಎಸ್. ಆಯ್ ರವಿಕುಮಾರ್ ಜೊತೆ ಕೇಸಿನ ಕಡತ ಹಿಡಿದು, ಹಾಳೆಗಳನ್ನು ತಿರುವಿಹಾಕುತ್ತಾ ಕುಳಿತಿದ್ದ. ಅದರಲ್ಲಿ ನಿನ್ನೆ ಅವನ ಅಂಗಡಿಗೆ ಬಂದ ಹುಡುಗಿ-ರಶ್ಮಿಯ ದೂರು, ರಾಗವೇಂದ್ರ ಅವರ ಗೆಳೆಯರ ಹೇಳಿಕೆಗಳು ಇದ್ದವು. ಆ ಹೇಳಿಕೆಗಳಲ್ಲಿ ಹಿಂದಿನ ದಿನ ನಡೆದ ಜಗಳದ ಬಗ್ಗೆಯೂ ವಿವರ ನೀಡಲಾಗಿತ್ತು. ಅವನ್ನೆಲ್ಲ ಓದಿದ ಬಳಿಕ ರವಿಕುಮಾರ್ ಅವರನ್ನು ಕೇಳಿದ ಪುಲಕೇಶಿ, “ಅಂದ್ರೆ ಮಾರನೇಯ ದಿನ ಬೆಳಗ್ಗೆ ಕಮೀಶನರ್ ಅವರ ಮನೆಯಿಂದ ಹೋದ ರಾಗವೇಂದ್ರ ಮತ್ತೆ ಕಣ್ಣಿಗೆ ಬಿದ್ದಿಲ್ಲ”

“ಹೌದು”, ಎಂದರು ರವಿಕುಮಾರ್.

“ಹಿಂದಿನ ದಿನ ನಡೆದ ಜಗಳ ನೋಡಿದರೆ ಈ ಹೇಳಿಕೆಗಳಲ್ಲಿ ಸುಳ್ಳು ಇರಬಹುದು ಅಲ್ವಾ?”

“ಅಂದ್ರೆ?”

“ರಾಗವೇಂದ್ರ ಅವರಿಗೆ ಏನೋ ಹೆಚ್ಚು ಕಮ್ಮಿಯಾಗಿ, ಇವರೆಲ್ಲ ಸುಳ್ಳು ಹೇಳುತ್ತಿರಬಹುದಲ್ವಾ?”

“ಅವರು ಸುಳ್ಳು ಹೇಳ್ತಿದ್ದಾರೆ ಅನ್ನುವಂತಹ ಯಾವ ಸುಳಿವೂ ನನಗೆ ಸಿಗಲಿಲ್ಲ. ಅಲ್ದೆ ಕಮಿಶನರ್ ಶಂಕರ್ ಅವರು ಇನ್ವೆಸ್ಟಿಗೇಶನ್ ಗೆ ತುಂಬಾ ಸಪೋರ‍್ಟ್ ಮಾಡಿದ್ರು. ಅವರ ಮನೆಯೆಲ್ಲಾ ನಾನು ಸರ‍್ಚ್ ಮಾಡಿದೆ. ಅಲ್ಲಿ ಯಾವ ಅನಾಹುತಾನೂ ನಡೆದಿರುವ ಕಿಂಚಿತ್ ಕ್ಲೂ ಕೂಡ ಸಿಗ್ಲಿಲ್ಲಾ”

“ಹಾಗಾದ್ರೆ ಕೇಸ್ ಕ್ಲೋಸಾ?”

ಬೇರೆ ದಾರಿ ಇಲ್ಲಾ ಎನ್ನುವಂತೆ ಬುಜಗಳನ್ನು ಎತ್ತಿ ಇಳಿಸಿದರು ರವಿಕುಮಾರ್.

ಅದಾದ ಒಂದು ದಿನಕ್ಕೆ, ತನ್ನ ಪರಿಚಯಗಳನ್ನು ಬಳಸಿಕೊಂಡು, ಆ 5 ಗೆಳೆಯರ ಹಿನ್ನಲೆ ಏನು, ಈಗ ಏನೇನು ಮಾಡುತ್ತಿದ್ದಾರೆ, ಅವರ ದಿನಚರಿ ಎಂತಹದ್ದು, ಎನ್ನುವ ಮಾಹಿತಿಯನ್ನು ಕಲೆಹಾಕಲು ಮುಂದಾದನು ಪುಲಕೇಶಿ. ಅಶ್ಟರಲ್ಲಿ ಎಸ್. ಆಯ್ ರವಿಕುಮಾರ್ ಅವರಿಂದ ಕರೆ ಬಂದಿತು. ವರ‍್ತೂರು ಕೆರೆಯ ಬಳಿ ಹೆಣವೊಂದು ಸಿಕ್ಕಿದ್ದು, ಅದು ರಾಗವೇಂದ್ರ ಅವರದೇ ಆಗಿರುವುದಕ್ಕೆ ಸಾಕಶ್ಟು ಸುಳಿವುಗಳು ಸಿಕ್ಕಿವೆ ಎಂದು ಹೇಳಿ, ತಕ್ಶಣ ವಿಕ್ಟೋರಿಯಾ ಆಸ್ಪತ್ರೆಗೆ ಬರುವಂತೆ ಹೇಳಿದ. ತಡಮಾಡದೆ ಅಲ್ಲಿಗೆ ಹೋದಾಗ, ಆಗಲೇ ರಾಗವೇಂದ್ರರ ಅಕ್ಕನ ಮಗಳು ರಶ್ಮಿ ತನ್ನ ಇತರ ಸಂಬಂದಿಕರೊಂದಿಗೆ ಅಲ್ಲಿಗೆ ಬಂದಿದ್ದಳು. ಅವರ ಅಳುಮುಕ ನೋಡಿ, ಬಹುತೇಕ ಆ ಹೆಣ ರಾಗವೇಂದ್ರ ಅವರದೇ ಎಂದು ಪುಲಕೇಶಿಗೆ ಗೊತ್ತಾಯಿತು. ಅಲ್ಲಿ ಸಿಕ್ಕ ಎಸ್. ಆಯ್ ರವಿಕುಮಾರ್, ಪುಲಕೇಶಿಗೆ ಹೆಣ ತೋರಿಸಿ ವಿವರ ಹೇಳಿದರು.

“ಡಾಕ್ಟರ್ ಪ್ರಕಾರ, ಟವಲ್ ತರಾ ಇರೋ ಬಟ್ಟೆಯಿಂದ ಯಾರೋ ಅವರ ಕತ್ತು ಹಿಸುಕಿ ಕೊಂದಿದ್ದಾರೆ. ಗುರುತು ಸಿಗಬಾರ‍್ದು ಅಂತಾ ಮಯ್ಮೇಲಿದ್ದ ಬಟ್ಟೆ ತೆಗೆದು, ಬೆಳ್ಳಂದೂರು ಕೆರೆ ಹತ್ರ ಹರಿಯೋ ಚರಂಡಿ ನೀರಿಗೆ ಎಸೆದಿದ್ದಾರೆ”

“ಅಲ್ಲೇ ಎಸೆದಿದ್ದು ಅಂತಾ ಹೇಗ್ ಹೇಳ್ತೀಯಾ?” ಕೇಳಿದ ಪುಲಕೇಶಿ.

“ಅಲ್ಲಿಂದ ಹರಿದು ಬರೋ ನೀರಲ್ಲೇ ಹೆಣ ಸಿಕ್ಕಿದ್ದು. ಅದಲ್ದೆ, ಬೆಳ್ಳಂದೂರು ಕೆರೆ ಹತ್ರ ಹೆಣ ಈಸಿಯಾಗಿ ಎಸೀಬಹುದು. ರಾತ್ರಿ ಹೊತ್ತು ಯಾರೂ ಓಡಾಡ್ದೆ ಇರೋ ಜಾಗ ಅಲ್ಲಿದೆ”

“ಓಹ್! ಸರಿ, ಮುಂದೆ?”

“ಪೋಸ್ಟ್ ಮಾರ‍್ಟೆಮ್ ರಿಪೋರ‍್ಟ್ ಪ್ರಕಾರ ಸತ್ತ ದಿನ, ಮತ್ತೆ ಅದೇ ದಿನ ಕಾಣೆಯಾದವರ ಪಟ್ಟಿ ನೋಡಿ ತಾಳೆ ಹಾಕ್ದಾಗ ಇದ್ದದ್ದು ಇವರೊಬ್ಬರೇ”

“ಏನಾದ್ರು ಕ್ಲೂ?” ಕೇಳಿದ ಪುಲಕೇಶಿ.

“ಸತ್ತ ರೀತಿ ಬಿಟ್ರೆ, ಬೇರೆ ಏನೂ ಇಲ್ಲ. ಇನ್ಮುಂದೆ ಶುರು ಮಾಡ್ಬೇಕು”

“ಸರಿ ಹಾಗಿದ್ರೆ. ನೀನು ಇನ್ವೆಸ್ಟಿಗೇಶನ್ ಮಾಡೋವಾಗ ಮರಿದೇ ಕರಿ”

“ಆಯ್ತಪ್ಪಾ… ನಿನ್ ಜೊತೆ ಇನ್ವೆಸ್ಟಿಗೇಶನ್ ಮಾಡೋದ್ರಲ್ಲೂ ತ್ರಿಲ್ ಇರುತ್ತೆ”, ಎಂದು ಮುಗುಳ್ನಕ್ಕರು ರವಿಕುಮಾರ್. ತಾನೂ ನಗುತ್ತಾ ಅಲ್ಲಿಂದ ಹೊರಟನು ಪುಲಕೇಶಿ.

**********************************************************************

ಆ ದಿನ ಸಂಜೆ, ರವಿಕುಮಾರ್ ಜೊತೆ ಸೇರಿ ಕಮೀಶನರ್ ಶಂಕರ್ ಅವರ ಮನೆಗೆ ಹೋದನು ಪುಲಕೇಶಿ, ತನಿಕೆ ನಡೆಸಲು. ಪುಲಕೇಶಿಯ ಪರಿಚಯ ಹೇಳಿದ ಮೇಲೆ, ರಾಗವೇಂದ್ರ ಅವರು ಕೊಲೆಯಾಗಿರುವ ಸುದ್ದಿ ತಿಳಿಸಿ, ತಮ್ಮ ಕೇಳ್ವಿಗಳನ್ನು ಶುರುಮಾಡಿದರು,
“ರಾಗವೇಂದ್ರ ಅವರು ನಿಮ್ಮ ಮನೆಗೆ ಬಂದಿದ್ದ ದಿನವೇ ಕೊಲೆಯಾಗಿದ್ದಾರೆ ಸರ್, ಹಾಗಾಗಿ ತನಿಕೆನಾ ಬೇರೆ ದಿಕ್ಕಿನಲ್ಲಿ ಮಾಡ್ಬೇಕಾಗುತ್ತೆ. ದಯವಿಟ್ಟು ನೀವು ಕೋಆಪರೇಟ್ ಮಾಡ್ಬೇಕು”

“ಕಂಡಿತ.”, ಎಂದು ಗಟ್ಟಿ ದನಿಯಲ್ಲಿ ಹೇಳಿದರು ಶಂಕರ್. “ನನಗೆ ಗೊತ್ತಿರೋದೆಲ್ಲಾ ಈಗಾಗ್ಲೆ ಹೇಳಿದೀನಿ. ಇನ್ನೂ ಏನಾದ್ರೂ ಕೇಳೋದಿದ್ರೆ ಕೇಳಿ. ಅವನು ಸತ್ತಿರೋದು ನನಗೂ ತುಂಬಾ ದುಕ್ಕಾ ಆಗಿದೆ”

“ಅವತ್ತು ರಾತ್ರಿ ರಾಗವೇಂದ್ರ ಅವರ ಕತ್ತನ್ನಾ ಹಿಸುಕಿ ಕೊಲೆ ಮಾಡಿದ್ದಾರೆ. ನಿಮಗೆ ಕೂಗಾಡೋ ದನಿ ಏನಾದ್ರು ಕೇಳಿಸಿತ್ತಾ?”

“ಇಲ್ಲಾ. ನನಗೆ ಎಚ್ಚರ ಆಗಿದ್ದು ಬೆಳಗ್ಗೆನೇ. ನಾನು ಎದ್ದು ರೂಮಿನಿಂದ ಆಚೆ ಬಂದಾಗ, ಮುಂಬಾಗ್ಲು ತೆರೆದಿತ್ತು. ನಮ್ಮವರೇ ಯಾರೋ ತೆರೆದು ಹೊರಗಡೆ ಹೋಗಿರಬಹುದು ಅನ್ಕೊಂಡು ಸುಮ್ಮನಾದೆ. ಆಮೇಲೆ ಎಲ್ರೂ ಎದ್ದು ಬಂದ್ರು, ರಾಗವೇಂದ್ರ ಒಬ್ಬನ್ನಾ ಬಿಟ್ಟು. ಅವ್ನು ಮಲಗಿದ್ದ ಕೋಣೆಗೆ ಹೋಗಿ ನೋಡಿದ್ವಿ, ಅಲ್ಲಿ ಅವ್ನು ಇರಲಿಲ್ಲಾ. ಕೋಣೆ ಎಲ್ಲಾ ನೀಟಾಗೇ ಇತ್ತು… ನೀವ್ ಹೇಳೋ ರೀತಿ ಗಲಾಟೆ ಏನೂ ನಡೆದಿರಲಿಲ್ಲಾ”

ಶಂಕರ್ ಅವರ ಮಾತಿನ ಏರಿಳಿತಗಳನ್ನು ಪುಲಕೇಶಿ ಗಮನಿಸುತ್ತಿದ್ದ. “ಆಮೇಲೆ ಏನ್ ಮಾಡಿದ್ರಿ?” ಕೇಳಿದರು ರವಿಕುಮಾರ್.

“ಅವ್ನ ಮೊಬಾಯಿಲಿಗೆ ಕಾಲ್ ಮಾಡಿದ್ವಿ. ಸ್ವಿಚ್ ಆಪ್ ಅಂತಾ ಬಂತು. ಅದೇ… ಹಿಂದಿನ ದಿನ ಜಗಳ ಆಗಿತ್ತಲ್ಲಾ… ಅವ್ನು ಸಿಟ್ ಮಾಡ್ಕೊಂಡು ಹೋಗಿರಬಹುದು ಅಂತಾ ನಾವು ಸುಮ್ಮನಾದ್ವಿ”

“ನಿಮಗೆ ಯಾರ್ ಮೇಲಾದ್ರೂ ಡೌಟು…?”

“ಯಾರ್ ಮೇಲೆ ಅಂತಾ ಡೌಟು ಪಡೋದು? ನಾವೆಲ್ರೂ ಒಳ್ಳೆ ಗೆಳೆಯರಾಗಿದ್ವಿ”, ಎಂದು ಮಂಕಾದರು ಶಂಕರ್.

ಪುಲಕೇಶಿ ಬಾಯಿ ತೆರೆದ, “ಸರ್… ರಾಗವೇಂದ್ರ ಅವರ ಜಗಳ ಆಗಿದ್ದು ಮೇಜರ್ ಅಶೋಕ್ ಜೊತೆ. ಹಾಗಾಗಿ ನಮಗೆ ಅವರ ಮೇಲೆ ಅನುಮಾನ ಬರೋದು ಸಹಜ. ಅವರನ್ನಾ ಬಿಟ್ಟು, ಮೇಜರ್ ಸಂದೀಪ್ ಮತ್ತು ಶ್ರೀನಿವಾಸ್ ಅವರ ಜೊತೆ ರಾಗವೇಂದ್ರ ಅವರ ಸಂಬಂದ ಹೇಗಿತ್ತು?”

“ಚೆನ್ನಾಗೇ ಇತ್ತು… ಚೆನ್ನಾಗೇ ಇತ್ತು”, ಎಂದು ತಡವರಿಸಿದರು ಶಂಕರ್.

**********************************************************************

“ರಾಗವೇಂದ್ರ ಸತ್ತ ಸುದ್ದಿ ಗೊತ್ತಾದ ಮೇಲೆ, ಮಿಕ್ಕ ಗೆಳೆಯರು ಒಬ್ಬರಿಗೊಬ್ಬರು ಪೋನ್ ಮಾಡ್ಕೊಂಡು ಮಾತಾಡಿದಾರೆ”, ಎಂದು ಶ್ರೀನಿವಾಸ್ ಅವರ ಮನೆಗೆ ಹೋಗುವ ದಾರಿಯಲ್ಲಿ ಪುಲಕೇಶಿಗೆ ವಿಶಯ ತಿಳಿಸಿದರು ರವಿಕುಮಾರ್. “ಅವರ ಪೋನ್ ಟಾಪ್ ಮಾಡ್ಸಿದೀನಿ… ಆದ್ರೆ ಯಾವ್ ಕ್ಲೂ ಕೂಡ ಸಿಕ್ಕಿಲ್ಲಾ, ಎಲ್ಲಾ ಮಾಮೂಲಿ ಮಾತುಗಳೇ. ಯಾರ್ ಕೊಲೆ ಮಾಡಿರಬಹುದು ಅಂತಾ ಒಬ್ಬರಿಗೊಬ್ಬರು ಕೇಳಿಕೊಳ್ತಾ ಇದ್ರು”, ಎಂದರು.

“ಹಾಗಾದ್ರೆ ಯಾರೋ ಒಬ್ಬರು ಮಾತ್ರ ಕೊಲೆ ಮಾಡಿದ್ದಾರೆ ಅಂತಾಯ್ತು”, ಎಂದನು ಪುಲಕೇಶಿ.

“ಹೌದು. ನಾನು ಅದನ್ನೇ ಯೋಚನೆ ಮಾಡ್ತಾಯಿದ್ದೆ”.

“ಕತ್ತು ಹಿಸುಕೋಕೆ ತುಂಬಾ ಶಕ್ತಿ ಮತ್ತು ದೈರ‍್ಯ ಬೇಕು ಅಲ್ವಾ?”

“ಹೌದು. ಅಶೋಕ್ ಮತ್ತು ಸಂದೀಪ್ ಮಿಲಿಟರಿಯಲ್ಲಿ ಇದ್ದವರು. ಇನ್ನು ಶಂಕರ್ ಅವರು ಒಂದ್ ಕಾಲದಲ್ಲಿ ಚಿರತೆ ಅಂತಾ ಇಲಾಕೆಯಲ್ಲಿ ಹೆಸರು ಮಾಡಿದವ್ರು. ಹಾಗಾಗಿ ಶ್ರೀನಿವಾಸ್ ಅವರ ಮೇಲೆ ಸ್ವಲ್ಪ ಅನುಮಾನ ಕಮ್ಮಿ”, ಎಂದರು ರವಿಕುಮಾರ್.

ಶ್ರೀನಿವಾಸ್ ಅವರು ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರು. ರಾಜಕೀಯದಲ್ಲಿ ತಮಗಿದ್ದ ಪರಿಚಯಗಳನ್ನು ಬಳಸಿ ಹಲವಾರು ದೊಡ್ಡ ದೊಡ್ಡ ಟೆಂಡರ್ ಗಿಟ್ಟಿಸಿ ಸಾಕಶ್ಟು ದುಡ್ಡು ಮಾಡಿದ್ದರು. ಇಂದಿರಾ ನಗರದ ಅವರ ಬಂಗಲೆಯ ಮುಂದೆ ತಮ್ಮ ಗಾಡಿ ನಿಲ್ಲಿಸಿ ಒಳಗಡೆ ಹೋದಾಗ ಇಬ್ಬರಿಗೂ ಅಚ್ಚರಿ ಕಾದಿತ್ತು. ಅವರು ಅಂದುಕೊಂಡ ಹಾಗೆ ಶ್ರೀನಿವಾಸ್ ಇರಲಿಲ್ಲ. ಬದಲಿಗೆ, ಆರಡಿ ಎತ್ತರ, ಅದಕ್ಕೆ ತಕ್ಕಹಾಗೆ ದಪ್ಪ, ಬಿಗಿ ಮಯ್ಕಟ್ಟು, ಸಿನಿಮಾ ನಾಯಕರಂತೆ ಕಾಣುತ್ತಿದ್ದ ಅವರನ್ನು ನೋಡಿ ಇಬ್ಬರೂ ದಂಗಾದರು.

“ನೀವು ನಿಜವಾಗಲೂ ಶಂಕರ್ ಅವರ ವಾರಿಗೆಯವರಾ?” ಕೇಳಿದನು ಪುಲಕೇಶಿ.

ನಗುತ್ತಾ, “ಹೌದು. ನನ್ ವಯಸ್ಸು ಕೇಳಿ ಎಲ್ರೂ ಹೀಗೇ ಅಂತಾರೆ. ಬಾಡಿ ಪಿಟ್ ಆಗಿ ಇಟ್ಕೊಳ್ಳೋದು ಅಂದ್ರೆ ನನಗೆ ತುಂಬಾ ಇಶ್ಟ”, ಎಂದರು ಶ್ರೀನಿವಾಸ್.

ಕಾಪಿಯ ಉಪಚಾರ ಮುಗಿದ ಮೇಲೆ ಮಾತಿಗೆ ಹೊರಳಿದರು ರವಿಕುಮಾರ್.

“ನಿಮ್ಮ ಮತ್ತು ರಾಗವೇಂದ್ರ ಅವರ ಸಂಬಂದ ಹೇಗಿತ್ತು?”

“ನಾವಿಬ್ರೂ ಚಿಕ್ಕವರಿದ್ದಾಗಿಂದ್ಲೂ ತುಂಬಾ ಒಳ್ಳೆ ಪ್ರೆಂಡ್ಸ್. ನಾವಿಬ್ರೆ ಅಲ್ಲಾ… ಅಶೋಕ್, ಸಂದೀಪ್, ಶಂಕರ್, ನಾವೆಲ್ಲಾ ಒಟ್ಟಿಗೆ ಓದಿದವ್ರು”

“ಅವತ್ತು ಸಂಜೆ ಆ ಜಗಳ ಬಿಟ್ರೆ ಇನ್ನೇನಾದ್ರು ನಡಿತಾ ಸರ‍್?” ಪುಲಕೇಶಿ ಕೇಳಿದನು.

ತುಸು ನೆನಪಿಸಿಕೊಂಡು, “ಇಲ್ಲಾ… ಹಾಗೇನೂ ನಡೀಲಿಲ್ಲಾ”

“ನಿಮಗೆ ಯಾರ್ ಮೇಲಾದ್ರು ಅನುಮಾನ?”

“ಅಶೋಕ್ ಜೊತೆ ಜಗಳಾ ಆಗಿದ್ದೇನೋ ಸರಿ… ಆದ್ರೆ ಅಶ್ಟಕ್ಕೆ ಕೊಲೆ ಮಾಡ್ತಾನೆ ಅಂದ್ರೆ ನನಗೆ ನಂಬೋಕಾಗೊಲ್ಲ”

“ರಾಗವೇಂದ್ರ ಅವರ ಮನೆಯ ಸ್ತಿತಿ ಅಶ್ಟೊಂದು ಚೆನ್ನಾಗಿರಲಿಲ್ಲ… ಅಂದ್ರೆ ಮಿಕ್ಕ ಗೆಳೆಯರಶ್ಟು ಚೆನ್ನಾಗಿ ಇರಲಿಲ್ಲ… ಅವರಿಗೆ ಸಹಾಯ ಮಾಡ್ಬೇಕು ಅಂತಾ ನಿಮಗೆ ಅನಿಸಲಿಲ್ವಾ ಸರ‍್?”

“ಅವ್ನು ಬಾಯಿ ಬಿಟ್ಟು ಕೇಳಿದ್ರೆ ಕೊಡ್ತಿದ್ದೆ… ಆದ್ರೆ ಅವನಿಗೆ ದುರಹಂಕಾರ”

“ಸರಿ ಸರ‍್”, ಎಂದು ರವಿಕುಮಾರ್ ಅವರು ಅಲ್ಲಿಂದ ಹೊರಡಲು ಅಣಿಯಾದರು.

**********************************************************************

ಮೇಜರ್ ಅಶೋಕ್ ಅವರ ಮನೆಯಲ್ಲಿ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಸಾಕಶ್ಟು ಕಿರಿ ಕಿರಿ ಮಾಡುತ್ತಿದ್ದರು ಪುಲಕೇಶಿ ಮತ್ತು ರವಿಕುಮಾರ್.

“ನಿಮಗೆ ಸಿಟ್ಟು ಬಂದು ರಾತ್ರಿ ಎದ್ದು ಹೋಗಿ ಅವರ ಕೊಲೆ ಯಾಕೆ ಮಾಡಿರಬಾರದು?” ಕೇಳಿದರು ರವಿಕುಮಾರ್.

ಸಾಕಶ್ಟು ಸಿಟ್ಟು ಏರಿದ್ದ ಅಶೋಕ್, “ನೋಡಿ, ನಿಮ್ ಹತ್ರ ಪ್ರೂಪ್ ಇದ್ರೆ ಮಾತಾಡಿ. ಸುಮ್ನೆ ಏನೇನೋ ಮಾತಾಡಿ ನನ್ ಟಾಯಿಮ್ ವೇಸ್ಟ್ ಮಾಡ್ಬೇಡಿ” ಎಂದರು.

“ಎವಿಡೆನ್ಸ್ ಹುಡುಕೋದು ಏನು ಕಶ್ಟ ಅಲ್ಲಾ ಸರ್. ನೀವಾಗೆ ಒಪ್ಕೊಂಡ್ರೆ ಒಳ್ಳೇದು”

“ಅಲ್ರಿ… ಅಶ್ಟಕ್ಕೂ ಅವನು ಅದೇ ಮನೇಲಿ ಸತ್ತಿದ್ದಾನೆ ಅಂತಾ ಹೇಗ್ ಹೇಳ್ತೀರಾ? ಅವ್ನು ರಾತ್ರಿನೇ ಎದ್ದು ಹೊರಗೆ ಹೋಗಿರಬಹುದು. ಅಲ್ಲಿ ಇನ್ಯಾರೋ ಅವನನ್ನಾ ಕೊಂದಿರಬಹುದು ಅಲ್ವಾ?”

ಇಬ್ಬರೂ ಸುಮ್ಮನಾದರು. ಅಶೋಕ್ ಅವರ ಮಾತಿನಲ್ಲಿ ತೂಕವಿತ್ತು. “ಇಲ್ದಿದ್ರೆ ಅವನು ಚೀರಾಡೋ ದನಿ ನಮಗೆ ಕೇಳ್ಬೆಕಿತ್ತು ಅಲ್ವಾ?”, ಮರಳಿ ಪ್ರಶ್ನೆ ಕೇಳಿದರು ಅಶೋಕ್.

ಸ್ವಲ್ಪ ಹೊತ್ತು ಸುಮ್ಮನಿದ್ದು, ಬಳಿಕ, “ನಾವೀಗ ಹೊರಡ್ತೀವಿ”, ಎಂದು ‌ಇಬ್ಬರೂ ಅಲ್ಲಿಂದ ಹೊರಟರು.

**********************************************************************

ಮೇಜರ್ ಸಂದೀಪ್ ಅವರು ತುಂಬಾ ಸಲೀಸಾದ ವ್ಯಕ್ತಿಯಾಗಿದ್ದರು. ತಮಗನಿಸಿದ್ದನ್ನು ನೇರವಾಗಿ, ದಿಟ್ಟವಾಗಿ ಮಾತಾಡಿದರು. ಆ ರಾತ್ರಿ ಅಶೋಕ್ ಅವರ ಬಗ್ಗೆ ಆಡಿದ ಮಾತುಗಳಿಗೆ ರಾಗವೇಂದ್ರರದೇ ತಪ್ಪು ಎಂದು ಹೇಳುತ್ತಾ, ಬಾಯಿ ತುಂಬಾ ಬಯ್ದರು.

“ಹಾಗಾದ್ರೆ ಅಶೋಕ್ ಅವರೇ ಕೊಲೆ ಮಾಡಿರಬಹುದಾ? ಎಂದರು ರವಿಕುಮಾರ್.

“ನನಗೇನೂ ಹಾಗೆ ಅನಿಸ್ತಾಯಿಲ್ಲ”

“ಶಂಕರ್ ಅತವಾ ಶ್ರೀನಿವಾಸ್?”

“ಇಲ್ಲಾ… ಅವರಾದ್ರು ಯಾಕೆ ಮಾಡ್ತಾರೆ? ಅದೂ ರಾಗುನಾ… ಪಾಪದ್ ಮುಂಡೇದು”

“ಹಾಗಾದ್ರೆ ನೀವೇ”, ತಟ್ಟನೆ ಹೇಳಿದನು ಪುಲಕೇಶಿ.

ಸಂದೀಪ್ ಅವರ ಮುಕ ತುಸು ಬಿಗಿಯಿತು. “ನಾನು ಆ ಮನುಶ್ಯನ್ನಾ ಕೊಲೆ ಮಾಡಿಲ್ಲಾ”, ಎಂದು ಅಳುಕಿಲ್ಲದೆ ಹೇಳಿದರು.

“ನಿಮ್ಮ ಮತ್ತು ಅವರ ಸಂಬಂದ ಹೇಗಿತ್ತು?”

“ನಾವು ಒಳ್ಳೆ ಪ್ರೆಂಡ್ಸ್ ಆಗಿದ್ವಿ. ಆಗಾಗ ಮೀಟ್ ಮಾಡ್ತಾ ಇದ್ವಿ”

“ಅಶೋಕ್ ಅವರಂತೆ ನಿಮ್ಮದು ಯಾವುದೋ ಗುಟ್ಟು ರಾಗವೇಂದ್ರ ಅವರಿಗೆ ಗೊತ್ತಾಗಿ, ಎಲ್ಲರ ಮುಂದೆ ಬಾಯಿ ಬಿಟ್ಟರೆ ತೊಂದರೆಯಾಗಬಹುದು ಎಂದು ನೀವೇ ಯಾಕೆ ಅವನನ್ನು ಕೊಲೆ ಮಾಡಿರಬಾರದು?” ಕೇಳಿದನು ಪುಲಕೇಶಿ.

“ನಿಮ್ಮ ಯಾವುದೋ ಗುಟ್ಟು ಅವನಿಗೆ ಗೊತ್ತಾಗಿ ನೀವೇ ಯಾಕೆ ಅವತ್ತು ರಾತ್ರಿ ಅವನನ್ನಾ ಕೊಲೆ ಮಾಡಿರಬಾರದು?” ಎಂದು ಅಣಕಿಸುತ್ತಾ, “ಡಿಟೆಕ್ಟೀವ್ ಅಂತೀರಾ… ಪ್ರೂಪ್ ಇಟ್ಕೊಂಡ್ ಮಾತಾಡ್ರಿ” ಎಂದರು.

(ಮುಂದುವರೆಯುವುದು : ಕೊನೆಯ ಕಂತು ನಾಳೆಗೆ)

( ಚಿತ್ರ ಸೆಲೆ: rockstargames.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 25/02/2016

    […] Twitter Facebook RSS Feed ← ಪತ್ತೇದಾರಿ ಕತೆ: ಮಾಯವಾದ ಹೆಣ(ಕಂತು-2) […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *