ಶಣ್ಮುಕಸ್ವಾಮಿ ವಚನಗಳ ಓದು-2ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಭಾಷೆಗಳ್ಳಗೇಕೊ ಸಹಭೋಜನ
ದ್ವೇಷಗುಣಿಗೇಕೊ ಸಹಭೋಜನ
ವೇಷಧಾರಿಗೇಕೊ ಸಹಭೋಜನ
ಹುಸಿಹುಂಡಗೇಕೊ ಸಹಭೋಜನ
ಮೋಸ ಮರವೆಯಿಂದೆ
ಈಶನೊಡನೆ ಸಹಭೋಜನ ಮಾಡಿದಡೆ
ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ.

ಹೊರನೋಟಕ್ಕೆ ಎಲ್ಲರೊಡನೆ ಒಂದಾಗಿ ಬಾಳುವವನಂತೆ ನಟಿಸುತ್ತಾ, ಒಳಗೊಳಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ವ್ಯಕ್ತಿಗಳ ತೋರಿಕೆ/ಬೂಟಾಟಿಕೆ/ಸೋಗಲಾಡಿತನದ ನಡೆನುಡಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ.

ತೋರಿಕೆ/ಬೂಟಾಟಿಕೆ/ಸೋಗಲಾಡಿತನದ ನಡೆನುಡಿಗಳು ಎಂದರೆ “ವ್ಯಕ್ತಿಯ ಆಡುವುದೇ ಒಂದು, ಮಾಡುವುದೇ ಮತ್ತೊಂದು. ಅಂದರೆ ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತಾ, ಕೈಯಲ್ಲಿ ಕೆಟ್ಟಕೆಲಸಗಳನ್ನು ಮಾಡುತ್ತಿರುವುದು”

( ಭಾಷೆ+ಕಳ್ಳ+ಗೆ+ಏಕೊ; ಭಾಷೆ=ಮಾತು/ನುಡಿ; ಕಳ್ಳ=ಪರರ ಒಡವೆ/ವಸ್ತುಗಳನ್ನು ದೋಚುವವನು; ಕಳ್ಳಗೆ=ಕಳ್ಳನಿಗೆ; ಏಕೊ=ಯಾವುದಕ್ಕಾಗಿ/ಏತಕ್ಕಾಗಿ/ಏನು ತಾನೆ ಪ್ರಯೋಜನ; ಭಾಷೆಗಳ್ಳ=ಕೊಟ್ಟ ಮಾತಿಗೆ ತಪ್ಪಿ ನಡೆಯುವವನು/ಮೋಡಿಯ ಮಾತುಗಳಿಂದ ಜನರನ್ನು ವಂಚಿಸುವವನು/ಮಾತಿನಲ್ಲಿ ಮೊದಲು ಆಸೆ ಹುಟ್ಟಿಸಿ, ಕಡೆಗೆ ಮೋಸ ಮಾಡುವವನು; ಸಹ=ಜೊತೆಯಲ್ಲಿ/ಎಲ್ಲರೊಡನೆ ಬೆರೆತು; ಭೋಜನ=ಊಟ/ಆಹಾರ ಸೇವನೆ/ಉಣ್ಣುವುದು; ಸಹಭೋಜನ=ಇತರರೊಡನೆ ಜತೆಗೂಡಿ ಊಟ ಮಾಡುವುದು; ಸಹಭೋಜನ ಎಂಬ ಈ ಪದವು ಒಂದು ನುಡಿಗಟ್ಟಾಗಿ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ.

ಕನ್ನಡ ನುಡಿಸಮುದಾಯದ ಸಮಾಜವು ಅನೇಕ ಬಗೆಯ ಮತ/ಜಾತಿ/ಲಿಂಗ/ವರ‍್ಗಗಳ ಹೆಣಿಗೆಯಿಂದ ರಚನೆಗೊಂಡಿದೆ. ಇದರಿಂದಾಗಿ ವ್ಯಕ್ತಿ ವ್ಯಕ್ತಿಗಳ ನಡುವೆ ಬಹುಬಗೆಯ ತಾರತಮ್ಯಗಳಿವೆ. ಮತಗಳ ನಡುವೆ ಹಗೆತನ/ಜಾತಿಗಳಲ್ಲಿ ಮೇಲು-ಕೀಳಿನ ತಾರತಮ್ಯ/ಹೆಣ್ಣುಗಂಡಿನ ನಡುವೆ ಗಂಡಿನ ಮೇಲುಗಯ್/ಬಡವ ಬಲ್ಲಿದರ ನಡುವಣ ಅಂತರಗಳೆಲ್ಲವೂ ಜನರನ್ನು ಮಾನಸಿಕವಾಗಿ ಒಡೆದು ಬೇರೆ ಬೇರೆ ಮಾಡಿದೆ. ಜನರನ್ನು ವಿಂಗಡಿಸಿರುವ ಈ ಎಲ್ಲಾ ಬಗೆಯ ಸಾಮಾಜಿಕ ಸಂಗತಿಗಳನ್ನು ದೂರವಿಟ್ಟು/ಕಡೆಗಣಿಸಿ/ಮರೆತು , “ನಾವೆಲ್ಲ ಕೇವಲ ಮಾನವರು/ನಾವೆಲ್ಲ ಒಂದು” ಎಂಬ ಒಲವು ನಲಿವಿನಿಂದ ಜತೆಗೂಡಿ ಸಮಾನತೆಯಿಂದ ಬಾಳುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿ ಮಾಡುವ ಸಾಂಕೇತಿಕ ಆಚರಣೆಯೇ ‘ಸಹಬೋಜನ’;

ಬಾಶೆಗಳ್ಳಗೇಕೋ ಸಹಭೋಜನ=ಆಡುವ ಮಾತುಗಳಿಗೆ ತಕ್ಕಂತೆ ಒಳ್ಳೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದ ವ್ಯಕ್ತಿಯು ಮಾಡುವ ಸಹಬೋಜನದ ನಾಟಕದಿಂದ/ಕಪಟತನದ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಾಮಾಜಕ ವಾಸ್ತವವನ್ನು ಈ ನುಡಿಗಳು ತಿಳಿಸುತ್ತಿವೆ;

ದ್ವೇಷ+ಗುಣಿ+ಗೆ+ಏಕೊ; ದ್ವೇಷ=ಹಗೆತನ/ಆಕ್ರೋಶವನ್ನು ಕಾರುವುದು/ಸೇಡಿನಿಂದ ಕೂಡಿರುವುದು; ಗುಣ=ನಡತೆ/ನಡವಳಿಕೆ/ವರ‍್ತನೆ; ಗುಣಿ=ಗುಣವುಳ್ಳವನು; ಗುಣಿಗೆ=ಗುಣವುಳ್ಳವನಿಗೆ; ದ್ವೇಷಗುಣಿ=ಹಗೆತನ/ಮಚ್ಚರ/ಸೇಡು/ಆಕ್ರೋಶದ ನಡೆನುಡಿಗಳಿಂದ ಕೂಡಿ ಜನರಿಗೆ ಕೇಡನ್ನು ಬಗೆಯುವವನು;

ವೇಷ+ಧಾರಿ+ಗೆ+ಏಕೊ; ವೇಷ=ಉಡುಗೆ ತೊಡುಗೆ/ಒಡವೆ/ವಸ್ತ್ರ/ಬಟ್ಟೆ; ಧಾರಿ=ತೊಟ್ಟಿರುವವನು/ಉಟ್ಟಿರುವವನು; ವೇಷಧಾರಿ=ಪ್ರದರ‍್ಶನ ಕಲೆಗಳಾದ ನಾಟಕ/ಯಕ್ಶಗಾನ/ಬಯಲಾಟಗಳಲ್ಲಿ ಪಾತ್ರವನ್ನು ಮಾಡುವ ನಟ; ವೇಶದಾರಿ ಎಂಬ ಪದವು ಈ ಸನ್ನಿವೇಶದಲ್ಲಿ ಒಂದು ನುಡಿಗಟ್ಟಾಗಿ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ. ವೇಶದಾರಿ ಎಂದರೆ ಕಪಟತನದ/ತೋರಿಕೆಯ ನಡೆನುಡಿಗಳಿಂದ ಜನರನ್ನು ಮರುಳುಮಾಡಿ ವಂಚಿಸುವವನು/ಸಮಯ ಸನ್ನಿವೇಶಕ್ಕೆ ತಕ್ಕಂತೆ ತನ್ನ ನಡೆನುಡಿಗಳನ್ನು ಬದಲಾಯಿಸಿಕೊಳ್ಳುತ್ತ, ಜನರನ್ನು ಮೋಸಗೊಳಿಸುವವನು/ಒಳಗೊಂದು ಹೊರಗೊಂದು ಎನ್ನುವಂತೆ ಮನದೊಳಗೆ ಕೆಟ್ಟ ಉದ್ದೇಶವನ್ನಿಟ್ಟುಕೊಂಡು, ಬಹಿರಂಗದಲ್ಲಿ ತಳುಕಿನ ಮಾತುಗಳಿಂದ ಜನರಿಗೆ ಹಾನಿಯನ್ನುಂಟು ಮಾಡುವವನು/ನಂಬಿಕೆಗೆ ಯೋಗ್ಯನಲ್ಲದ ವ್ಯಕ್ತಿ;

ಹುಸಿ+ಹುಂಡ+ಗೆ+ಏಕೊ; ಹುಸಿ=ಸುಳ್ಳು/ಸಟೆ/ಅಸತ್ಯ ; ಹುಂಡ=ನೀಚ/ಕೇಡಿ/ಹಾಳು ಮಾಡುವವನು/ನಾಶ ಮಾಡುವವನು; ಹುಂಡಗೆ=ಹುಂಡನಿಗೆ; ಹುಸಿಹುಂಡ=ಸುಳ್ಳನ್ನಾಡುವುದರ ಜತೆಗೆ ನೀಚತನದಿಂದ/ಒರಟುತನದಿಂದ/ದಬ್ಬಾಳಿಕೆಯಿಂದ ಎಲ್ಲವನ್ನು ಹಾಳು ಮಾಡುವವನು/ಒಳಿತನ್ನು ನಾಶ ಪಡಿಸುವವನು;

ಮೋಸ=ಕಪಟ/ವಂಚನೆ; ಮರವೆ+ಇಂದ; ಮರವೆ=ಗುಟ್ಟು/ಗೋಪ್ಯ/ರಹಸ್ಯ; ಮೋಸ ಮರವೆ=ನಂಬಿಕೆ ದ್ರೋಹದ ನಡೆನುಡಿ/ನಂಬಿಸಿ ಕತ್ತನ್ನು ಕುಯ್ಯುವಿಕೆ/ಹೊರನೋಟಕ್ಕೆ ಕಾಣದಂತೆ ಒಳಗೊಳಗೆ ಹೀನಕೆಲಸಗಳನ್ನು ಮಾಡುವುದು; ‘ಮರೆಮೋಸ‘ ಎಂಬ ನುಡಿಗಟ್ಟು “ಕೇಡನ್ನು ಬಗೆಯುವುದು“ ಎಂಬ ತಿರುಳಿನಲ್ಲಿ ಕನ್ನಡ ಜನಸಮುದಾಯದ ಮಾತುಕತೆಗಳಲ್ಲಿ ಬಳಕೆಯಲ್ಲಿದೆ;

ಈಶನ್+ಒಡನೆ; ಈಶ=ಒಡೆಯ/ಶಿವ/ಈಶ್ವರ ; ಒಡನೆ=ಜತೆಯಲ್ಲಿ/ಸಂಗಡ/ಒಟ್ಟಿಗೆ; ಮಾಡಿದಡೆ=ಮಾಡಿದರೆ; ಈಶನೊಡನೆ ಸಹಭೋಜನ=ಶಿವ/ಈಶ್ವರ/ಲಿಂಗದ ಪೂಜೆಯ ನೆಪದಲ್ಲಿ ಜನರನ್ನು ಒಗ್ಗೂಡಿಸಿ ಮಾಡುವ ಸಹಭೋಜನ; ಭವ+ಅಲ್ಲಿ; ಭವ=ಪ್ರಪಂಚದ ವ್ಯವಹಾರ/ಜೀವನದಲ್ಲಿನ ಆಗುಹೋಗು; ಭವದಲ್ಲಿ=ಜೀವನದಲ್ಲಿ/ಬದುಕಿನಲ್ಲಿ ನಡೆಯುವ ಪ್ರಸಂಗಗಳಲ್ಲಿ/ವ್ಯವಹಾರಗಳಲ್ಲಿ; ಘಾಸಿ+ಆಗುತ+ಇರ್ಪರು; ಘಾಸಿ=ತೊಂದರೆ/ಹಿಂಸೆ/ನೋವು/ಸಂಕಟ; ಆಗು=ಒದಗಿ ಬರುವುದು/ಜರುಗುವುದು/ನಡೆಯುವುದು; ಇರ್ಪರು=ಇರುವರು;

ಮೋಸ ಮರವೆಯಿಂದ ಈಶನೊಡನೆ ಸಹಭೋಜನ ಮಾಡಿದಡೆ ಭವದಲ್ಲಿ ಘಾಸಿಯಾಗುತಿರ್ಪರು=ಇತ್ತ ನಿಜ ಜೀವನದಲ್ಲಿ ಸುಳ್ಳು, ಕಪಟತನ ಮತ್ತು ನಂಬಿಕೆದ್ರೋಹದ ನಡೆನುಡಿಗಳಿಂದ ಜನರನ್ನು ವಂಚಿಸುತ್ತಾ, ಅತ್ತ ಶಿವನನ್ನು ಒಲಿಸಿಕೊಳ್ಳಲೆಂದು ಪೂಜೆಮಾಡುವುದರ ಮೂಲಕ ಎಲ್ಲರೊಡನೆ ಕೂಡಿ ಬಾಳುವವರಂತೆ ನಟನೆಯನ್ನು ಮಾಡುವವರು, ತಮ್ಮ ಜೀವನದಲ್ಲಿ ಒಳ್ಳೆಯದನ್ನು/ನೆಮ್ಮದಿಯನ್ನು ಹೊಂದಲಾಗದೆ/ಪಡೆಯಲಾಗದೆ ನರಳುತ್ತಿರುತ್ತಾರೆ. ಏಕೆಂದರೆ ಅವರ ನಯವಂಚನೆಯ ನಡೆನುಡಿಗಳೇ ಅವರನ್ನು ನಾನಾ ಬಗೆಗಳಲ್ಲಿ ಗಾಸಿಗೊಳಿಸುತ್ತಿರುತ್ತವೆ ಎಂಬ ಇಂಗಿತವನ್ನು ಈ ವಾಕ್ಯ ಸೂಚಿಸುತ್ತದೆ; ನೋಡು+ಆ; ನೋಡು=ಕಾಣು/ತಿಳಿ ; ನೋಡಾ=ಅರಿತುಕೊ/ತಿಳಿದುಕೊ; ಅಖಂಡೇಶ್ವರಾ=ಶಿವ/ದೇವರು/ವಚನಕಾರನ ವಚನಗಳಲ್ಲಿನ ಅಂಕಿತನಾಮ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *