ಬಸವಣ್ಣನ ವಚನಗಳ ಓದು – 13 ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು
ನೋಡಯ್ಯಾ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ
ಕೂಡಲಸಂಗಮದೇವಾ.

ಅಪಾರವಾದ ಆಸ್ತಿಪಾಸ್ತಿ/ಹಣಕಾಸು/ಒಡವೆ ವಸ್ತುಗಳಿಗೆ ಒಡೆಯರಾಗಿ ಸಿರಿವಂತಿಕೆಯಿಂದ ಮೆರೆಯುತ್ತಿರುವ ವ್ಯಕ್ತಿಗಳ ಸೊಕ್ಕಿನಿಂದ ಕೂಡಿದ ವರ‍್ತನೆಯು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಹಾವು=ಉರಗ/ಸರ‍್ಪ/ನೆಲದ ಮೇಲೆ ಹರಿದಾಡುವ ಒಂದು ಬಗೆಯ ಜಂತು; ತಿನ್=ಕಚ್ಚು/ಕಡಿ; ತಿಂದವರ=ಕಚ್ಚಿದವರನ್ನು/ಕಡಿದವರನ್ನು; ಹಾವು ತಿಂದವರ=ಹಾವು ಕಚ್ಚಿದವರನ್ನು/ಹಾವು ಕಡಿದವರನ್ನು; ನುಡಿ=ಮಾತು/ಸೊಲ್ಲು; ನುಡಿಸು=ಮಾತನಾಡಿಸು; ಬಹುದು=ಆಗುವುದು;

ಹಾವು ತಿಂದವರ ನುಡಿಸಬಹುದು=ಹಾವು ಕಚ್ಚಿ, ಮಯ್ಯಲ್ಲೆಲ್ಲಾ ನಂಜು ಹರಡುತ್ತ, ಸಾವು ಬದುಕಿನ ನಡುವೆ ಸಿಲುಕಿ ಕಂಗಾಲಾಗಿರುವ ವ್ಯಕ್ತಿಯನ್ನು ಮಾತನಾಡಿಸಿದರೆ, ಅಂತಹ ಸಂಕಟದ ಸಮಯದಲ್ಲಿಯೂ ಅವನು ನಮ್ಮೊಡನೆ ಒಂದೆರಡು ಮಾತನಾಡುತ್ತಾನೆ;

ಗರ=ದೆವ್ವ/ಪಿಶಾಚಿ; ಆಯುಸ್ಸು ತುಂಬದೆ ಹರೆಯ ಇಲ್ಲವೇ ನಡುವಯಸ್ಸಿನಲ್ಲಿ ಜೀವನದಲ್ಲಿ ಉಂಟಾಗುವ ಬಹು ಬಗೆಯ ಅವಗಡಗಳಿಂದ ಸತ್ತವರ ಜೀವವು ದೆವ್ವವಾಗಿ ಅಲೆಯುತ್ತಿರುತ್ತದೆ. ಇಂತಹ ದೆವ್ವವು ಬದುಕಿರುವ ವ್ಯಕ್ತಿಗಳ ಮಯ್ ಮನವನ್ನು ಹೊಕ್ಕು, ತಾನು ಜೀವಂತ ವ್ಯಕ್ತಿಯಾಗಿದ್ದಾಗ ಆಸೆಪಟ್ಟಿದ್ದೆಲ್ಲವನ್ನೂ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತದೆಯೆಂಬ ನಂಬಿಕೆಯು ಜನಮನದಲ್ಲಿ ನೆಲೆಸಿದೆ. ಈ ರೀತಿ ಆದಾಗ ಅವನಿಗೆ/ಅವಳಿಗೆ’ಗರ ಮೆಟ್ಕೊಂಡಿದೆ/ದೆವ್ವ ಹಿಡ್ಕೊಂಡಿದೆ’ಎಂದು ಜನರು ಮಾತನಾಡಿಕೊಂಡು, ವ್ಯಕ್ತಿಗೆ ಹಿಡಿದಿರುವ ದೆವ್ವವನ್ನು ಮಾಟಕೂಟಗಳ ಆಚರಣೆಯಿಂದ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಆರೋಗ್ಯ ಶಾಸ್ತ್ರದ ನೆಲೆಯಿಂದ ನೋಡಿದಾಗ ವ್ಯಕ್ತಿಯು ಜೀವನದ ಏಳುಬೀಳುಗಳಲ್ಲಿ/ಆಗುಹೋಗುಗಳಲ್ಲಿ ಮಾನಸಿಕ ರೋಗಿಯಾದಾಗ, ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗದೆ ಪರಿತಪಿಸುತ್ತಿರುವುದನ್ನು ‘ ದೆವ್ವ ಮೆಟ್ಟುಕೊಂಡಿದೆ ‘ ಎಂದು ಜನರು ತಪ್ಪಾಗಿ ತಿಳಿದಿರುವುದು ಕಂಡುಬಂದಿದೆ;

ಹೊಡಿ=ಮಯ್ ಮೇಲೆ ಬರುವುದು/ಮೆಟ್ಟಿಕೊಳ್ಳುವುದು/ಆವರಿಸಿಕೊಳ್ಳುವುದು; ಗರ ಹೊಡೆದವರ=ದೆವ್ವ ಮೆಟ್ಟಿಕೊಂಡವರನ್ನು/ಪಿಶಾಚಿ ಹಿಡಿದುಕೊಂಡವರನ್ನು;

ಗರ ಹೊಡೆದವರ ನುಡಿಸಬಹುದು=ತನ್ನ ಮಯ್ ಮನದ ಮೇಲಣ ಹತೋಟಿಯನ್ನು ಕಳೆದುಕೊಂಡು, ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬ ಅರಿವು ಮತ್ತು ಎಚ್ಚರವಿಲ್ಲದೆ ಬಾಯಿಗೆ ಬಂದಂತೆ ಅರಚಾಡುತ್ತಿರುವ/ಎದ್ದು ಬಿದ್ದು ಒದ್ದಾಡುತ್ತಿರುವ ದೆವ್ವ ಹಿಡಿದ ವ್ಯಕ್ತಿಯನ್ನು ಮಾತನಾಡಿಸಿದರೆ, ತಾನು ಯಾರೆಂಬುದನ್ನೇ ಮರೆತಿರುವ ಆ ವ್ಯಕ್ತಿಯು ಕೂಡ ನಮ್ಮೊಡನೆ ಒಂದೆರಡು ನುಡಿಗಳನ್ನಾಡುತ್ತಾನೆ;

ಸಿರಿ=ಸಂಪತ್ತು/ಹಣಕಾಸು/ಒಡವೆ ವಸ್ತು/ಆಸ್ತಿಪಾಸ್ತಿ; ಸಿರಿಗರ=ಸಿರಿ ಎಂಬ ದೆವ್ವ/ಪಿಶಾಚಿ; ನುಡಿಸಲು=ಮಾತನಾಡಿಸಲು; ಬಾರದು=ಆಗುವುದಿಲ್ಲ ; ನೋಡು+ಅಯ್ಯಾ; ನೋಡು=ಗಮನಿಸು/ವಿಚಾರಮಾಡು/ತಿಳಿ/ಅರಿ;

ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ=ಸಿರಿಯೆಂಬ ದೆವ್ವ ಮೆಟ್ಟಿಕೊಂಡವರನ್ನು ಮಾತನಾಡಿಸಲು ಆಗುವುದಿಲ್ಲ. ಸಿರಿವಂತರಾಗಿ ಬಾಳುತ್ತಿರುವ ವ್ಯಕ್ತಿಗಳಲ್ಲಿ ಬಹುತೇಕ ಮಂದಿ ಅಹಂಕಾರದ ನಡೆನುಡಿಗಳಿಂದ ವರ‍್ತಿಸುವುದು ಸಮಾಜದ ಎಲ್ಲೆಡೆಯಲ್ಲಿ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತದೆ.

‘ಸಿರಿಗರ’ ಎಂಬ ಈ ನುಡಿಗಟ್ಟು ಒಂದು ರೂಪಕವಾಗಿ ಬಳಕೆಯಾಗಿದೆ. ಸಿರಿಯೆಂಬುದೇ ಒಂದು ಗರವಾಗಿದೆ/ದೆವ್ವವಾಗಿದೆ. ಅಂದರೆ ಸಿರಿವಂತಿಕೆಯನ್ನು ಹೊಂದಿರುವ ವ್ಯಕ್ತಿಯು ನಾನೇ ಎಲ್ಲರಿಗಿಂತ ದೊಡ್ಡವನು/ನನ್ನ ಬಳಿ ಇರುವ ಸಂಪತ್ತಿನಿಂದ ಏನನ್ನು ಬೇಕಾದರೂ ಮಾಡಬಲ್ಲೆನು/ಹಣದ ಮುಂದೆ ಬೇರೆಯದೆಲ್ಲವೂ ಸೊನ್ನೆ/ಯಾವುದೇ ವಸ್ತುವನ್ನು ಇಲ್ಲವೇ ಯಾವ ವ್ಯಕ್ತಿಯನ್ನು ಬೇಕಾದರೂ ಕೊಂಡುಕೊಳ್ಳಬಲ್ಲೆನು ಎಂಬ ಒಳಮಿಡಿತಗಳಿಂದ ಕೂಡಿ ಸೊಕ್ಕಿನಿಂದ ಎಲ್ಲರನ್ನೂ ಕಡೆಗಣಿಸಿ, ಮನಬಂದಂತೆ ಮಾತನಾಡುತ್ತಾನೆ ಮತ್ತು ನಡೆದುಕೊಳ್ಳುತ್ತಾನೆ. ದೆವ್ವ ಮೆಟ್ಟಿಕೊಂಡವನು ಹೇಗೆ ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗದೆ ವರ‍್ತಿಸುತ್ತಾನೆಯೋ ಅಂತೆಯೇ ಸಿರಿಗರ ಹೊಡೆದ ವ್ಯಕ್ತಿಯು ಯಾರ ಅಂಕೆಶಂಕೆಯಿಲ್ಲದೆ/ಯಾರನ್ನು ಲೆಕ್ಕಿಸದೆ ಮನಬಂದಂತೆ ನಡೆದುಕೊಳ್ಳುತ್ತಾನೆ. ಇಂತಹ ವ್ಯಕ್ತಿಯ ಜತೆ ಮಾತುಕತೆಯಾಡಲು ಆಗುವುದಿಲ್ಲ;

ಬಡತನ+ಎಂಬ; ಬಡತನ=ಉಣಲಿಲ್ಲದೆ, ಉಡಲಿಲ್ಲದೆ,ವಾಸಿಸಲು ನೆಲೆಯಿಲ್ಲದೆ ವ್ಯಕ್ತಿಯು ಹಸಿವು ಮತ್ತು ಅಪಮಾನದ ಸಂಕಟದಿಂದ ಇರುವುದು; ಎಂಬ=ಎನ್ನುವ; ಮಂತ್ರ=ದೇವರು ಇಲ್ಲವೇ ಅಗೋಚರ ಶಕ್ತಿಯ ಸ್ವರೂಪ, ಗುಣ ಮತ್ತು ಮಹಿಮೆಯನ್ನು ಕೊಂಡಾಡುವ ನುಡಿಗಳು; ಮಂತ್ರವಾದಿ=ಮಂತ್ರಗಳನ್ನು ಉಚ್ಚರಿಸುತ್ತ, ಕೆಲವು ಬಗೆಯ ಆಚರಣೆಗಳ ಮೂಲಕ ವ್ಯಕ್ತಿಗೆ ಹಿಡಿದಿರುವ ದೆವ್ವವನ್ನು ಓಡಿಸುವವನು; ಮಂತ್ರತಂತ್ರ, ಮಾಟಕೂಟಗಳ ಮೂಲಕ ಇರುವುದನ್ನು ಇಲ್ಲವಾಗಿಸುವ, ಇಲ್ಲದ್ದನ್ನು ಕಣ್ಣೆದುರಿಗೆ ಬರುವಂತೆ ಮಾಡುವ ಕಸುವುಳ್ಳವನು ಮಂತ್ರವಾದಿ ಎಂಬ ನಂಬಿಕೆಯು ಜನಮನದಲ್ಲಿದೆ.

ಆದರೆ ವಾಸ್ತವದಲ್ಲಿ ಮಂತ್ರವಾದಿಯು ಇಂದ್ರಜಾಲ/ಕಣ್ಕಟ್ಟಿನ ವಿದ್ಯೆಯ ಮೂಲಕ , ತಾನು ಮಾಡುವುದನ್ನು ನೋಡುವವರು ನಂಬುವಂತೆ ಮಾಡುವ ಕುಶಲತೆಯನ್ನು/ಕಯ್ ಚಳಕವನ್ನು ಹೊಂದಿರುತ್ತಾನೆ; ಹೊಗು=ಒಳಸೇರು/ಪ್ರವೇಶಿಸು/ಕೂಡಿಕೊಳ್ಳು/ಸೇರು; ಹೊಗಲು=ಬಂದು ಸೇರಿಕೊಂಡಾಗ/ಮೇಲೆ ಬಿದ್ದಾಗ; ಒಡನೆ=ಮರು ಗಳಿಗೆಯಲ್ಲಿ/ಕೂಡಲೆ; ನುಡಿವರ್+ಅಯ್ಯಾ; ನುಡಿವರ್=ಮಾತನಾಡುತ್ತಾರೆ;

ಬಡತನವೆಂಬ ಮಂತ್ರವಾದಿ ಹೊಗಲು=ಈ ಪದಕಂತೆಯು ಒಂದು ರೂಪಕವಾಗಿ ಬಳಕೆಯಾಗಿದೆ. ಸಿರಿವಂತಿಕೆಯಿಂದ ಮಯ್ ಮರೆತು ಮೆರೆಯುತ್ತಿದ್ದ ವ್ಯಕ್ತಿಯ ಜೀವನದಲ್ಲಿ ಮುಂದೊಂದು ದಿನ/ಕಾಲಮಾನದಲ್ಲಿ ನಡೆದ ಕೇಡಿನ ಪ್ರಸಂಗಗಳಿಂದಾಗಿ ಅವನ ಸಂಪತ್ತೆಲ್ಲವೂ ಕಯ್ ಬಿಟ್ಟುಹೋಗಿ, ಇದ್ದುದೆಲ್ಲವನ್ನೂ ಕಳೆದುಕೊಂಡು ಕಡುಬಡತನದ ನೆಲೆಗೆ ಬರುತ್ತಾನೆ; ಕೂಡಲಸಂಗಮದೇವಾ=ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ=ಸಿರಿವಂತಿಕೆಯಿದ್ದಾಗ ಇತರರನ್ನು ಒಲವು ನಲಿವುಗಳಿಂದ ಕಂಡು ಮಾತನಾಡಿಸದೇ ಇದ್ದ ವ್ಯಕ್ತಿಯು ಬಡತನಕ್ಕೆ ಸಿಲುಕಿದಾಗ , ಅವನಲ್ಲಿದ್ದ ಅಹಂಕಾರದ ವರ‍್ತನೆಗಳೆಲ್ಲವೂ ಇಲ್ಲವಾಗಿ, ಇತರರೊಡನೆ ಸಹಜವಾಗಿ ಮತ್ತು ಸರಳವಾಗಿ ನಡೆದುಕೊಳ್ಳತೊಡಗುತ್ತಾನೆ ಎಂಬ ಸಾಮಾಜಿಕ ವಾಸ್ತವವನ್ನು ವಚನಕಾರನು ಗುರುತಿಸಿದ್ದಾನೆ.)

ಹೊರಗೆ ಹೂಸಿ ಏವೆನಯ್ಯಾ
ಒಳಗೆ ಶುದ್ಧವಿಲ್ಲದನ್ನಕ್ಕ
ಮಣಿಯ ಕಟ್ಟಿ ಏವೆನಯ್ಯಾ
ಮನಮುಟ್ಟದನ್ನಕ್ಕ
ನೂರನೋದಿ ಏವೆನಯ್ಯಾ
ನಮ್ಮ ಕೂಡಲಸಂಗಮದೇವರ
ಮನ ಮುಟ್ಟದನ್ನಕ್ಕ.

ಒಳ್ಳೆಯ ನಡೆನುಡಿಗಳಿಂದ ಬಾಳಬೇಕೆಂಬ ಅರಿವನ್ನು ಮತ್ತು ಎಚ್ಚರವನ್ನು ಮನದಲ್ಲಿ ಹೊಂದಿರದ ವ್ಯಕ್ತಿಯು ಮಾಡುವ ದೇವರ ಪೂಜೆಯಿಂದ ಇಲ್ಲವೇ ಕಲಿಯುವ ಅಕ್ಕರದ ವಿದ್ಯೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಅರಿವು ಎಂದರೆ ಜೀವನದಲ್ಲಿ’ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ; ಯಾವುದು ನಿಸರ‍್ಗ ಸಹಜ-ಯಾವುದು ಮಾನವ ನಿರ‍್ಮಿತ’ ಎಂಬ ತಿಳುವಳಿಕೆ.

ಎಚ್ಚರ ಎಂದರೆ’ಒಳಿತು ಕೆಡುಕಿನ ಒಳಮಿಡಿತಗಳಿಂದ ಕೂಡಿರುವ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ತನಗೆ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟು ಮಾಡುವ ನಡೆನುಡಿಗಳನ್ನು ಹೊಂದಿರುವುದು’.

( ಹೊರಗೆ=ಬಹಿರಂಗವಾಗಿ/ಹೊರಗಡೆಯಲ್ಲಿ/ಎಲ್ಲರಿಗೂ ಕಾಣುವಂತೆ; ಪೂಸು > ಹೂಸು=ಬಳಿದುಕೊಳ್ಳುವುದು/ಲೇಪಿಸಿಕೊಳ್ಳುವುದು/ತೊಡೆದುಕೊಳ್ಳುವುದು; ಹೂಸಿ=ವಿಬೂತಿಯನ್ನು ಲೇಪಿಸಿಕೊಳ್ಳುವುದು/ಗಂದದ ಕೊರಡನ್ನು ನೀರಿನಿಂದ ತೇಯ್ದಾಗ ಬರುವ ಹಸಿಯನ್ನು ಹಣೆ/ತೋಳು/ಹೊಟ್ಟೆಯ ಮೇಲೆ ಬಳಿದುಕೊಳ್ಳುವುದು; ಏವೆನ್+ಅಯ್ಯಾ: ಏವು=ಏನು ಮಾಡುವುದು; ಏವೆನ್=ಏನು ಮಾಡುವೆನು/ಏನು ಮಾಡಿದಂತಾಯಿತು/ಪ್ರಯೋಜನವೇನು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಒಳಗೆ=ಅಂತರಂಗದಲ್ಲಿ/ಒಳಗಡೆ/ಮನದಲ್ಲಿ; ಶುದ್ಧ+ಇಲ್ಲದ+ಅನ್ನಕ್ಕ; ಶುದ್ಧ=ಚೊಕ್ಕಟವಾದ/ಶುಚಿಯಾದ/ಕೊಳಕು ಇಲ್ಲದಿರುವ; ಅನ್ನಕ್ಕ=ತನಕ/ವರೆಗೆ; ಶುದ್ಧವಿಲ್ಲದನ್ನಕ್ಕ=ಶುದ್ಧವಿಲ್ಲದಿರುವ ತನಕ/ವರೆಗೆ;

ಹೊರಗೆ ಹೂಸಿ ಏವೆನಯ್ಯಾ ಒಳಗೆ ಶುದ್ಧವಿಲ್ಲದನ್ನಕ್ಕ=ಅಂತರಂಗದ ಮನದಲ್ಲಿ ಒಳ್ಳೆಯ ಆಲೋಚನೆಗಳು ಇಲ್ಲದಿರುವಾಗ, ಬಹಿರಂಗದಲ್ಲಿ ದೇಹದ ಮೇಲೆ ವಿಬೂತಿಯನ್ನು/ಗಂದವನ್ನು ಬಳಿದುಕೊಂಡು, ನೋಡುವವರ ಕಣ್ಣಿನಲ್ಲಿ ದೇವರಲ್ಲಿ ಒಲವು ಉಳ್ಳವನಂತೆ ಕಾಣಿಸಿಕೊಳ್ಳುವುದರಿಂದ ಏನು ತಾನೆ ಪ್ರಯೋಜನ;

ಮಣಿ=ದಾರದಿಂದ/ನೂಲಿನಿಂದ ಪೋಣಿಸಲು ಅನುಕೂಲವಾಗುವಂತೆ ನಡುವೆ ತೂತನ್ನು ಹೊಂದಿರುವ ದುಂಡನೆಯ ಹವಳ/ಮುತ್ತು; ಕಟ್ಟು=ಒಡವೆ ವಸ್ತುಗಳನ್ನು ತೊಟ್ಟುಕೊಳ್ಳುವದು/ಮಯ್ ಮೇಲೆ ಹಾಕಿಕೊಳ್ಳುವುದು; ಮನ+ಮುಟ್ಟದ+ಅನ್ನಕ್ಕ; ಮನ=ಮನಸ್ಸು/ಚಿತ್ತ; ಮುಟ್ಟು=ಸೇರು/ತಾಕು/ಪಡೆ/ಹೊಂದು/ತಲುಪು; ಮನಮುಟ್ಟು=ಮನಸ್ಸಿಗೆ ಚೆನ್ನಾಗಿ/ಸರಿಯಾಗಿ ತಿಳಿಯುವುದು; ಮುಟ್ಟದ=ಸೇರದ/ಹೊಂದದ/ಪಡೆಯದ; ಮನಮುಟ್ಟದನ್ನಕ್ಕ=ಮನದಲ್ಲಿ ಒಳ್ಳೆಯ ಒಳಮಿಡಿತ/ಚಿಂತನೆ/ಆಲೋಚನೆಯು ಇಲ್ಲದಿರುವ ತನಕ;

ಮಣಿಯ ಕಟ್ಟಿ ಏವೆನಯ್ಯಾ ಮನಮುಟ್ಟದನ್ನಕ್ಕ=ಮನಸ್ಸಿನಲ್ಲಿ ಒಳ್ಳೆಯ ಒಳಮಿಡಿತಗಳನ್ನು ಹೊಂದಿಲ್ಲದಿರುವಾಗ ಮಣಿಗಳಿಂದ ಮಾಡಿರುವ ಮಾಲೆಯನ್ನು ಕೊರಳಲ್ಲಿ/ತೋಳುಗಳಲ್ಲಿ ಹಾಕಿಕೊಳ್ಳುವುದರಿಂದ ಏನನ್ನು ತಾನೆ ಪಡೆದಂತಾಯಿತು/ಮಾಡಿದಂತಾಯಿತು;

ನೂರನ್+ಓದಿ; ನೂರು=ಹತ್ತರಿಂದ ಹತ್ತನ್ನು ಗುಣಸಿದಾಗ ಬರುವ ಸಂಕೆ/ಅನೇಕ/ಬಹಳ; ಓದು=ಲಿಪಿರೂಪದಲ್ಲಿ ರಚನೆಗೊಂಡಿರುವ ಹೊತ್ತಿಗೆಯಲ್ಲಿನ ವಿಚಾರಗಳನ್ನು ತಿಳಿಯುವುದು/ಕಲಿಯುವುದು/ಉಚ್ಚರಿಸುವುದು; ಕೂಡಲಸಂಗಮದೇವ=ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ಕೂಡಲಸಂಗಮದೇವರ ಮನ ಮುಟ್ಟುವುದು=ಅರಿವು ಮತ್ತು ಎಚ್ಚರದ ನಡೆನುಡಿಗಳ ಮೂಲಕ ದೇವರನ್ನು ಕಾಣುವುದು. ಶಿವಶರಣಶರಣೆಯರು ದೇವರನ್ನು ಕಲ್ಲು/ಮರ/ಮಣ್ಣು/ಲೋಹದ ಆಕಾರದಲ್ಲಿದ್ದ ಲಿಂಗದಲ್ಲಿ ಕಾಣುತ್ತಿರಲಿಲ್ಲ. ಅವರ ಪಾಲಿಗೆ ಒಳ್ಳೆಯ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದು ದೇವರನ್ನು ಒಲಿಸಿಕೊಳ್ಳುವ/ದೇವರನ್ನು ಕಾಣುವ/ದೇವರ ಬಳಿಗೆ ಹೋಗುವ ದಾರಿಯಾಗಿತ್ತು .

ನೂರನೋದಿ ಏವೆನಯ್ಯಾ ನಮ್ಮ ಕೂಡಲಸಂಗಮದೇವರ ಮನಮುಟ್ಟದನ್ನಕ್ಕ= ನೂರಾರು/ಹಲವಾರು ಹೊತ್ತಿಗೆಗಳ ಓದಿನಿಂದ’ಎಲ್ಲ ಬಗೆಯ ದೇವರ ಪೂಜೆ/ಆಚರಣೆಗಳಿಗಿಂತಲೂ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಯೇ ದೊಡ್ಡದು’ಎಂಬುದು ನನ್ನ ಮನಸ್ಸಿಗೆ ಅರಿವಾಗದಿದ್ದರೆ , ಅಂತಹ ಓದಿನಿಂದ ಬಂದ ಪ್ರಯೋಜನವಾದರೂ ಏನು;

ವ್ಯಕ್ತಿಯ ಮನಸ್ಸನ್ನು ಅರಿವು ಮತ್ತು ಎಚ್ಚರದ ನಡೆನುಡಿಯ ಸಂಕೇತವೆಂದು ಹೇಳುವ ಪ್ರಸಂಗವೊಂದು ಬುದ್ದನ ತ್ರಿಪಿಟಕದ ಕತೆಯೊಂದರಲ್ಲಿ ನಿರೂಪಣೆಗೊಂಡಿದೆ. ಒಬ್ಬ ಗುರು ತನ್ನ ಬಳಿ ವಿದ್ಯೆಯನ್ನು ಕಲಿಯುತ್ತಿದ್ದ ಹತ್ತು ಮಂದಿ ಗುಡ್ಡರಿಗೆ/ಶಿಶ್ಯರಿಗೆ ತಲಾ ಒಂದೊಂದು ಮಾವಿನ ಹಣ್ಣನ್ನು ನೀಡಿ ‘ಯಾರೂ ಕಾಣದ ಎಡೆಯಲ್ಲಿ ತಿಂದು ಬನ್ನಿ’ ಎಂದು ಹೇಳಿ ಕಳುಹಿಸುತ್ತಾನೆ. ಕೆಲ ಸಮಯದ ನಂತರ ಹಿಂತಿರುಗಿ ಬಂದ ಗುಡ್ಡರನ್ನು ಕೇಳಿದಾಗ, ಒಬ್ಬನನ್ನು ಹೊರತುಪಡಿಸಿ, ಉಳಿದವರೆಲ್ಲರೂ ತಾವು ಹಣ್ಣನ್ನು ಯಾರೂ ಇಲ್ಲದ ಎಡೆಯಲ್ಲಿ ತಿಂದು ಬಂದ ಬಗೆಯನ್ನು ವಿವರಿಸುತ್ತಾರೆ.

ಹಣ್ಣನ್ನು ಕಯ್ಯಲ್ಲಿಯೇ ಹಿಡಿದು ತಂದಿದ್ದ ಗುಡ್ಡನನ್ನು ನೋಡಿದ ಗುರು ‘ಏಕೆ ನಿನಗೆ ಯಾರೂ ಇಲ್ಲದ ಎಡೆಯೇ ಸಿಗಲಿಲ್ಲವೇ ?’ ಎಂದಾಗ ಗುಡ್ಡನು ‘ನಾನು ಹೋದ ಎಡೆಯಲ್ಲಿ ಬೇರೆ ವ್ಯಕ್ತಿಗಳಿಲ್ಲದಿದ್ದರೂ ನನ್ನ ಮನಸ್ಸು ನಾನು ಮಾಡುವುದೆಲ್ಲವನ್ನೂ ಯಾವಾಗಲೂ ನೋಡುತ್ತಿತ್ತು. ಆದ್ದರಿಂದ ನನ್ನ ಮನಸ್ಸಿಗೆ ಮರೆಮಾಚಿ ಹಣ್ಣನ್ನು ತಿನ್ನಲಾಗಲಿಲ್ಲ’ ಎನ್ನುತ್ತಾನೆ. ವ್ಯಕ್ತಿಯು ಮಾಡುವ ಒಳಿತು ಕೆಡುಕಿನ ಕೆಲಸಗಳೆಲ್ಲವನ್ನೂ ಮನಸ್ಸು ನೋಡುತ್ತಿರುತ್ತದೆ ಎಂಬ ಸತ್ಯವನ್ನು ಈ ಕತೆಯು ನಿರೂಪಿಸುತ್ತದೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *