ಪ್ರೇಕ್ಶಕರ ದಾಂದಲೆಯಿಂದ ರದ್ದಾದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ.

ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕು ಹಾಗೂ ಇನ್ನಿತರ ಪ್ರಕ್ರುತಿ ವಿಕೋಪಗಳಿಂದ ರದ್ದಾಗಿರುವ ಸಾಕಶ್ಟು ಎತ್ತುಗೆಗಳನ್ನು ನಾವು ಕಂಡಿದ್ದೇವೆ. ಅದರೊಂದಿಗೆ ಕೆಲವು ಬಾರಿ ಆಟದ ವೇಳೆ ಅಂಗಳದಲ್ಲಿ ನೆರೆದಿರುವ ನೋಡುಗರ ಗದ್ದಲ-ಗಲಾಟೆಗಳಿಂದಾಗಿಯೂ ಪಂದ್ಯಗಳನ್ನು ಹಟಾತ್ತನೆ ನಿಲ್ಲಿಸಬೇಕಾದ ಪ್ರಮೇಯವು ಬಂದೊದಗಿರುವುದನ್ನು ನಾವು ಅದಿಕ್ರುತವಾಗಿ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಕಾಣಬಹುದು. ಇಂತಹ ವಿಲಕ್ಶಣ ಹಾಗೂ ಕೆಡಕಿನ ಪ್ರಕರಣಗಳು ನಾನಾ ಕಾರಣಗಳಿಂದ ಉಂಟಾಗಿದ್ದರೂ ಕ್ರಿಕೆಟ್ ಆಟಕ್ಕೆ ಚ್ಯುತಿ ತಂದು, ಕ್ರೀಡಾಂಗಣದೊಂದಿಗೆ ಜನರಿಗೂ ಹಾನಿ ಮಾಡಿರುವುದು ದಿಟ. ಈ ಬಗೆಯ ಪ್ರಸಂಗಗಳು ಜರುಗಿದಾಗ ಆತಿತೇಯ ದೇಶವು ಕ್ರಿಕೆಟ್ ಜಗತ್ತಿನ ಮುಂದೆ ಮುಜುಗರವನ್ನು ಅನುಬವಿಸುವುದರೊಟ್ಟಿಗೆ ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿ, ಬವಿಶ್ಯದಲ್ಲಿ ಪಂದ್ಯಗಳನ್ನು ಆಯೋಜಿಸುವ ಅರ‍್ಹತೆಯನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದರೆ, ಇತ್ತೀಚಿಗೆ ಅಸ್ತಿತ್ವಕ್ಕೆ ಬಂದಿರುವ ಐಸಿಸಿಯ ಕಟಿಣ ನೀತಿ-ನಿಯಮಗಳಿಂದಾಗಿ ಪ್ರೇಕ್ಶಕರ ದಾಂದಲೆಗಳು ನಡೆಯದೇ ಇರುವುದು ಸಮಾದಾನಕಾರ ಸಂಗತಿ. ಅಂತಹ ಐದು ಕುಕ್ಯಾತ ಪ್ರಕರಣಗಳನ್ನು ಒಮ್ಮೆ ಮೆಲಕು ಹಾಕೋಣ ಬನ್ನಿ!

ಬಾರತ ಮತ್ತು ವೆಸ್ಟ್ ಇಂಡೀಸ್, ಕೋಲ್ಕತಾ, 1966/67

ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಆತಿತೇಯ ಬಾರತದ ನಡುವೆ ಈಡನ್ ಗಾರ‍್ಡನ್ಸ್ ನಲ್ಲಿ ನಡೆದ 1966/67 ರ ಸರಣಿಯ ಎರಡನೇ ಟೆಸ್ಟ್ ಬಾರತದ ನೆಲದ ಕ್ರಿಕೆಟ್ ಅಂಗಳದಲ್ಲಿ ನಡೆದ ಮೊದಲ ಅಹಿತಕರ ಗಟನೆ ಎಂಬ ಅಪಕ್ಯಾತಿ ಪಡೆಯಿತು. ಬಾರತೀಯರ ಕ್ರಿಕೆಟ್ ಹುಚ್ಚನ್ನು ದುರ‍್ಬಳಕೆ ಮಾಡಿಕೊಂಡು ಬಂಗಾಳ ಕ್ರಿಕೆಟ್ ಸಂಸ್ತೆಯ ಅದಿಕಾರಿಗಳು 80,000 ಮಂದಿ ಕೂರುವ ಸಾಮರ‍್ತ್ಯ ಹೊಂದಿದ್ದ ಸ್ಟೇಡಿಯಮ್ ನಲ್ಲಿ ಸುಮಾರು ನಕಲಿ ಟಿಕೆಟ್ ಗಳನ್ನು ಮಾರಿ ಹೆಚ್ಚು ಮಂದಿ ಸೇರುವಂತೆ ಮಾಡಿರುತ್ತಾರೆ. ಈ ಅವ್ಯವಸ್ತೆಯಿಂದ ಪಂದ್ಯದ ಮೊದಲ ದಿನ ಕೂರಲು ಎಡೆ ಸಿಗದೆ ಆದ ಅನಾನುಕೂಲವನ್ನು ಸಹಿಸಿಕೊಂಡಿದ್ದ ಪ್ರೇಕ್ಶಕರ ತಾಳ್ಮೆಯ ಕಟ್ಟೆ ಎರಡನೇ ದಿನ ಒಡೆದು ನೂರಾರು ಮಂದಿ ಅಂಗಳದೊಳಕ್ಕೆ ನುಗ್ಗುತ್ತಾರೆ. ಆಗ ವಿದಿ ಇಲ್ಲದೆ ಪೊಲೀಸರು ಲಾಟಿ ಚಾರ‍್ಜ್ ಮಾಡುತ್ತಾರೆ. ಪೆಟ್ಟು ತಿಂದು ಇನ್ನೂ ಹೆಚ್ಚು ರೊಚ್ಚಿಗೆದ್ದ ಮಂದಿ ನೆರಳಿಗಾಗಿ ಹಾಕಲಾಗಿದ್ದ ಕ್ರುತಕ ಸ್ಟಾಂಡ್ ನ ಬಿದಿರಿನ ಕಂಬಗಳನ್ನು ಕಿತ್ತು ಬೆಂಕಿ ಹಚ್ಚುತ್ತಾರೆ. ಈ ದಾಂದಲೆ ಸುಮಾರು ಹೊತ್ತು ನಡೆದ ಮೇಲೆ ಹೆಚ್ಚಿನ ಪೊಲೀಸ್ ಪಡೆಯನ್ನು ಕರೆತಂದು ಪರಿಸ್ತಿತಿಯನ್ನು ಒಂದು ಮಟ್ಟಕ್ಕೆ ಹತೋಟಿಗೆ ತರಲಾದರೂ ಎರಡನೇ ದಿನದ ಆಟ ರದ್ದಾಗುತ್ತದೆ. ಈ ಅವಗಡದ ಬಳಿಕ ದಿಗ್ಬ್ರಮೆಗೊಂಡಿದ್ದ ವಿಂಡೀಸ್ ತಂಡದ ಸದಸ್ಯರ ಮನವೊಲಿಸಿ ಮೂರನೇ ದಿನ ಪಂದ್ಯ ಮುಂದುವರೆಸಲು ಬಾರತದ ಕ್ರಿಕೆಟ್ ಸಂಸ್ತೆ ಸಾಕಶ್ಟು ಕಸರತ್ತು ಮಾಡಬೇಕಾಗುತ್ತದೆ. ನಂತರ ಪಂದ್ಯ ಮೊದಲ್ಗೊಂಡು ವಿಂಡೀಸ್ ಇನ್ನಿಂಗ್ಸ್ ಗೆಲುವು ದಾಕಲಿಸುತ್ತದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್, ಕರಾಚಿ, 1969

ರಾಜಕೀಯ ಅರಾಜಕತೆಯಿಂದ ನಲುಗಿ ಹೋಗಿದ್ದ ಪಾಕಿಸ್ತಾನಕ್ಕೆ 1960 ರ ದಶಕದ ಕೊನೆಯಲ್ಲಿ ಇಂಗ್ಲೆಂಡ್ ತಂಡ ಪ್ರವಾಸ ಮಾಡಲು ಒಪ್ಪಿದ್ದು ಆ ಹೊತ್ತಿಗೆ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿರುತ್ತದೆ. ಲಾಹೋರ್ ಹಾಗೂ ಡಾಕಾದಲ್ಲಿ ನಡೆದ ಸರಣಿಯ ಮೊದಲೆರಡು ಟೆಸ್ಟ್ ವೇಳೆಯಲ್ಲಿ ಕೂಡ ಸಣ್ಣಪುಟ್ಟ ಗಲಾಟೆಗಳು ಜರುಗಿದರೂ ಗಂಬೀರವಾಗಿ ಪರಿಗಣಿಸದೆ ಆತಿತೇಯ ಪಾಕಿಸ್ತಾನ ಹುಂಬತನ ಪ್ರದರ‍್ಶಿಸುತ್ತದೆ. ಬಳಿಕ ಕರಾಚಿ ಪಂದ್ಯದ ವೇಳೆ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ತಿತಿ ಮೂರನೇ ದಿನದ ಆಟದ ವೇಳೆ, ನೂರಾರು ವಿದ್ಯಾರ‍್ತಿಗಳು ಸರ‍್ಕಾರದ ವಿರುದ್ದ ಗೋಶಣೆ ಕೂಗುತ್ತಾ ಪಿಚ್ ಕಡೆಗೆ ನುಗ್ಗುತ್ತಿದ್ದಂತೆ ಪರಿಸ್ತಿತಿ ಏಕಾಏಕಿ ವಿಕೋಪಕ್ಕೆ ಹೋಗುತ್ತದೆ. ಮೊದಲಿಗೆ ಪಿಚ್ ಅನ್ನು ಸಂಪೂರ‍್ಣ ನಾಶ ಮಾಡಿದ ವಿದ್ಯಾರ‍್ತಿಗಳು ಆ ಬಳಿಕ ಸ್ಟೇಡಿಯಮ್ ನ ವಿ.ಐ.ಪಿ. ಕೊಟಡಿಗಳಿಗೆ ಬೆಂಕಿ ಇಡುತ್ತಾರೆ. ಬೆಂಕಿ ಎಲ್ಲೆಡೆ ಹರಡಿ ದೂಳು-ಹೊಗೆಯಿಂದ ಅಂಗಳ ಅಕ್ಶರಶಹ ಸ್ಮಶಾನದಂತೆ ಮಾರ‍್ಪಾಡಾಗುತ್ತದೆ. ಒಡನೆಯೇ ಎಚ್ಚುತ್ತುಕೊಂಡ ಪಾಕಿಸ್ತಾನೀ ಅದಿಕಾರಿಗಳು ಪಂದ್ಯವನ್ನು ರದ್ದು ಮಾಡಿ, ಅದೇ ದಿನ ಸಂಜೆ ಇಂಗ್ಲೆಂಡ್ ತಂಡ ತವರಿಗೆ ಮರಳುವಂತೆ ವಿಶೇಶ ವಿಮಾನದ ವ್ಯವಸ್ತೆ ಮಾಡಿ ಅಪಾಯವಾಗದಂತೆ ಕಳುಸಿಕೊಡುತ್ತಾರೆ.

ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ, ಕಿಂಗ್ಸ್ಟನ್, 1978

ಆಗಿನ ಕಾಲದ ಎರಡು ಗಟಾನುಗಟಿ ತಂಡಗಳಾದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಶ್ಟಿತ ಪ್ರಾಂಕ್ ವೋರೆಲ್ ಟ್ರೋಪಿಯ 1978 ರ ಜಮೈಕಾ ಟೆಸ್ಟ್ ಹಟಾತ್ತನೆ ಕೊನೆಗೊಂಡ ಪಂದ್ಯ ಎಂಬ ಕಳಂಕ ಹೊತ್ತು ಇತಿಹಾಸದ ಪುಟ ಸೇರಿತು. ಐದನೇ ಜಮೈಕಾ ಟೆಸ್ಟ್ ನಲ್ಲಿ 369 ರನ್ ಗಳ ಗುರಿಯನ್ನು ಬೆನ್ನತ್ತಿ ಹೊರಟ ಆತಿತೇಯ ವಿಂಡೀಸ್, ವಾನ್ಬರ‍್ನ್ ಹೋಲ್ಡರ್ ಲೆಗ್ ಸ್ಪಿನ್ನರ್ ಜಿಮ ಹಿಗ್ಸ್ ರ ಬೌಲಿಂಗ್ ನಲ್ಲಿ ಕೀಪರ್ ಗೆ ಕ್ಯಾಚಿತ್ತಾಗ 258 ಕ್ಕೆ 9 ವಿಕೆಟ್ ಕಳೆದುಕೊಂಡು ಸೋಲಿನ ಹೊಸ್ತಿಲಲ್ಲಿ ಬಂದು ನಿಲ್ಲುತ್ತದೆ. ಅಸಲಿಗೆ ತಮ್ಮ ಕೆಟ್ಟ ಹೊಡೆತದಿಂದ ಬೇಸರಗೊಂಡ ಹೋಲ್ಡರ್ ಹತಾಶೆಯ ಹಾವಾಬಾವದೊಂದಿಗೆ ಪೆವಿಲಿಯನ್ ಎಡೆಗೆ ಹೆಜ್ಜೆ ಇಡುವುದನ್ನು ಗಮನಿಸಿ, ಪ್ರೇಕ್ಶಕರು ಇದು ಅಂಪೈರ್ ನ ತಪ್ಪು ತೀರ‍್ಮಾನದಿಂದ ಆಗಿರುವ ಅಚಾತುರ‍್ಯ ಎಂದು ತಪ್ಪಾಗಿ ನಂಬಿ ಗಲಾಟೆ ಮೊದಲು ಮಾಡುತ್ತಾರೆ. ಆಗಿನ ಕಾಲಮಾನದಲ್ಲಿ ಕ್ರಿಕೆಟ್ ಆಟವನ್ನು ತಮ್ಮ ಬದುಕಿನ ಅವಿಬಾಜ್ಯ ಅಂಗ ಎಂಬಂತೆ ಪ್ರೀತಿಸುತ್ತಿದ್ದ ಕೆರೆಬಿಯನ್ ಮಂದಿ ತುಸು ಹೊತ್ತಿನಲ್ಲೇ ಕಲ್ಲು, ಬಾಟಲ್ ಗಳು ಮತ್ತು ಕುರ‍್ಚಿಗಳನ್ನು ಅಂಗಳದೊಳಕ್ಕೆ ಎಸೆದು ತಮ್ಮ ಸಿಟ್ಟು ಹೊರಹಾಕುತ್ತಾರೆ. ಪರಿಸ್ತಿತಿಯ ಗಂಬೀರತೆಯನ್ನು ಅರಿತು ಒಡನೆ ಕಾರ‍್ಯೋನ್ಮುಕರಾದ ಸ್ಟೇಡಿಯಮ್ ನ ಸಿಬ್ಬಂದಿ ಆಸ್ಟ್ರೇಲಿಯಾ ಆಟಗಾರರಿಗೆ ತೊಡಕಾಗದಂತೆ ಬಿಗಿ ಬದ್ರತೆಯಿಂದ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯುತ್ತಾರೆ. ಆದರೆ ಬಳಿಕ ಪಂದ್ಯ ಮತ್ತೆ ಶುರುವಾಗದೆ ಗೆಲುವಿನಿಂದ ಕೇವಲ ಒಂದೇ ಒಂದು ವಿಕೆಟ್ ದೂರವಿದ್ದ ಆಸೀಸ್ ‘ಡ್ರಾ’ ಗೆ ತ್ರುಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಅಬಿಮಾನಿಗಳ ಹುಚ್ಚು ವರ‍್ತನೆಯಿಂದ ಬಲಾಡ್ಯ ವಿಂಡೀಸ್ ಒಂದು ಟೆಸ್ಟ್ ಸೋಲಿನಿಂದ ಪಾರಾಗುತ್ತದೆ.

ಬಾರತ ಮತ್ತು ಶ್ರೀಲಂಕಾ, ಕೋಲ್ಕತಾ, 1996

ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾರತ ಆತಿತ್ಯ ವಹಿಸಿದ್ದ 1996 ರ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದ್ದ ಆತಿತೇಯ ಬಾರತ ನೆರೆಯ ಶ್ರೀಲಂಕಾ ಎದುರು ಕೊಲ್ಕತಾಲಿ ಸೆಮಿಪೈನಲ್ ಪಂದ್ಯದಲ್ಲಿ ಕಣಕ್ಕಿಳಿಯುತ್ತದೆ. 251 ರನ್ ಗಳ ಗುರಿಯನ್ನು ಪಡೆದು ಒಳ್ಳೆ ಆರಂಬ ಪಡೆದ ಮೇಲೆ ಸಚಿನ್ ತೆಂಡೂಲ್ಕರ್ 65 ರನ್ ಗಳಿಸಿ ಸ್ಟಂಪ್ ಔಟ್ ಆದಮೇಲೆ, ಬಾರತ ಒಂದರ ಹಿಂದೊಂದು ವಿಕೆಟ್ ಕಳೆದುಕೊಂಡು 98/1 ರಿಂದ 120/8 ಕ್ಕೆ ಕುಸಿದು ಸೋಲನ್ನು ಎದುರು ನೋಡುತ್ತಿರುತ್ತದೆ. ತಮ್ಮ ತಂಡದ ಈ ಮಟ್ಟದ ಕಳಪೆ ಬ್ಯಾಟಿಂಗ್ ನಿಂದ ರೊಚ್ಚಿಗೆದ್ದ ಈಡನ್ ಗಾರ‍್ಡನ್ಸ್ ನ ಪ್ರೇಕ್ಶಕರು ಏಕಾಏಕಿ ಬಾಟಲ್ ಗಳನ್ನು ಶ್ರೀಲಂಕಾ ಆಟಗಾರರತ್ತ ಗುರಿ ಮಾಡಿ ಅಂಗಳದೊಳಕ್ಕೆ ಎಸೆಯುವುದರ ಜೊತೆಗೆ ಸ್ಟಾಂಡ್ ಗಳಲ್ಲಿ ಬೆಂಕಿ ಹಚ್ಚಿ ವಿಕ್ರುತಿ ಮೆರೆಯುತ್ತಾರೆ. ಸ್ತಳೀಯ ಪೊಲೀಸ್ ರ ಪ್ರಯತ್ನದ ಬಳಿಕ ಕೂಡ ಪರಿಸ್ತಿತಿಯನ್ನು ಹತೋಟಿಗೆ ತರಲು ಸಾದ್ಯವಾಗುವುದಿಲ್ಲ. ಇನ್ನು ಇಂತಹ ಅಪಾಯದ ವಾತಾವರಣದಲ್ಲಿ ಪಂದ್ಯ ನಡೆಸುವುದು ಸಲ್ಲದು ಎಂದು ಮನಗಂಡ ಮ್ಯಾಚ್ ರೆಪರೀ ಕ್ಲೈವ್ ಲಾಯ್ಡ್ ಪಂದ್ಯವನ್ನು ಅದಿಕ್ರುತವಾಗಿ ರದ್ದು ಮಾಡಿ ಶ್ರೀಲಂಕಾ ವಿಜಯೀ ಎಂದು ಗೋಶಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ಬಾರತಕ್ಕೆ ಮುಜುಗುರ, ಅವಮಾನವನ್ನು ಉಂಟುಮಾಡಿದ ಈ ಒಂದು-ದಿನದ ಪಂದ್ಯ 90 ರ ದಶಕದ ಬಾರತದ ಕ್ರಿಕೆಟ್ ಒಲವಿಗರ ಅತೀ ನೋವಿನ ಕ್ಶಣವಾಗಿ ಈ ಸೆಮಿಪೈನಲ್ ಇಂದಿಗೂ ನೆನೆಯಲ್ಪಡುತ್ತದೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ, ಲೀಡ್ಸ್, 2001

2001 ರ ಇಂಗ್ಲಿಶ್ ಬೇಸಿಗೆಯ ನ್ಯಾಟ್ವೆಸ್ಟ್ ತ್ರಿಕೋನ ಒಂದು-ದಿನದ ಪಂದ್ಯವೊಂದು ಕಡೇ ಗಳಿಗೆಯಲ್ಲಿ ಅಬಿಮಾನಿಗಳ ದಾಂದಲೆಯಿಂದ ಮುಂದುವರಿಯಲಾಗದೆ ಕೊನೆಗೊಂಡಿತು. ಇಂಗ್ಲೆಂಡ್ ನೀಡಿದ 157 ರನ್ ಗಳ ಗುರಿಯನ್ನು ಯಾವುದೇ ತೊಡಕಿಲ್ಲದೆ ಹಿಂಬಾಲಿಸಿ ಪಾಕಿಸ್ತಾನ 149/4 ತಲುಪಿರುತ್ತದೆ. ಆ ವೇಳೆ ಅಜರ್ ಮಹಮೂದ್ ಡಾಮಿನಿಕ್ ಕಾರ‍್ಕ್ ರ ಎಸೆತದಲ್ಲಿ ಬೌಂಡರಿ ಗಳಿಸುತ್ತಾರೆ. ಚೆಂಡು ಅತ್ತ ತಲುಪುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ನೆರೆದಿದ್ದ ಪಾಕಿಸ್ತಾನೀ ಬೆಂಬಲಿಗರು ಪಂದ್ಯ ಗೆದ್ದೆವು ಎಂದು ಸಂಬ್ರಮಿಸುತ್ತಾ ಅಂಗಳದೊಳಗೆ ನುಗ್ಗುತ್ತಾರೆ. ಆದರೆ ಅಸಲಿಗೆ ಪಾಕಿಸ್ತಾನದ ಗೆಲುವಿಗೆ ಇನ್ನು 4 ರನ್ ಬೇಕಿರುತ್ತದೆ. ಮುಕ್ಯ ಸ್ಕೋರ್ ಬೋರ‍್ಡ್ ನಲ್ಲಿ ತಪ್ಪಾದ ಸ್ಕೋರ್ (ನಾಲ್ಕು ಹೆಚ್ಚು ರನ್) ದಾಕಲಾಗಿದ್ದುದ್ದರಿಂದ ಪ್ರೇಕ್ಶಕರು ಗೆಲುವು ಸವೆಯುತ್ತಾ ಈ ದಾಂದಲೆ ಉಂಟು ಮಾಡುತ್ತಾರೆ. ಆ ಹೊತ್ತಿನಲ್ಲಿ ಅವರನ್ನು ತಡೆಯಲು ಮುಂದಾದ ಸ್ಟೇಡಿಯಮ್ ನ ಸ್ಟಿವರ‍್ಡ್ ಒಬ್ಬರಿಗೆ ಜನರ ಕಾಲ್ತುಳಿತದಿಂದ ತೀವ್ರ ಪೆಟ್ಟಾಗುತ್ತದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅದ್ರುಶ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಜರುಗಿದ ಅನಾಹುತದ ತೀವ್ರತೆಯನ್ನು ಅರಿತು ಇಂಗ್ಲೆಂಡ್ ನ ನಾಯಕ ಅಲೆಕ್ ಸ್ಟೀವರ‍್ಟ್ ಗೆಲುವಿನ ಹೊಸ್ತಿಲಲ್ಲಿ ನಿಂತಿದ್ದ ಪಾಕಿಸ್ತಾನಕ್ಕೆ ಪಂದ್ಯವನ್ನು ಬಿಟ್ಟುಕೊಡುತ್ತಾರೆ. ಪ್ರೇಕ್ಶಕರ ಆಟಾಟೋಪದಿಂದ ಅದಿಕ್ರುತವಾಗಿ ಪಂದ್ಯ ಕೊನೆಗೊಳ್ಳದೆ ಇದ್ದುದ್ದರಿಂದ, ಈ ಪಂದ್ಯವನ್ನೂ ರದ್ದಾದ ಅಪೂರ‍್ಣ ಪಂದ್ಯವೆಂದೇ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಪರಿಗಣಿಸಲಾಗಿದೆ.

(ಚಿತ್ರ ಸೆಲೆ: cricketcountry.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *