ಕ್ರಿಕೆಟ್ ಆಟದ ಕೆಲವು ತಿರುವುಗಳು

ಹರ‍್ಶಿತ್ ಮಂಜುನಾತ್.cricket-live-updates-app-1408340387ಸುಮಾರು ಹದಿನೆಂಟನೇ ನೂರೇಡಿನಲ್ಲಿ ಹುಟ್ಟಿದ ದಾಂಡಾಟ (Cricket)ವು ಇಲ್ಲಿಯವರೆಗೆ ಬಹಳಶ್ಟು ಪರಿಣಾಮಕಾರಿ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಜೊತೆಗೆ ಹಿಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಬಿಮಾನಿಗಳಲ್ಲಿ ಹೆಚ್ಚುತ್ತಿರುವ ದಾಂಡಾಟದ ಬಗೆಗಿನ ಕವ್ತುಕವು, ಹೊಸ ಬದಲಾವಣೆಗೆ ಸಾಕ್ಶಿಯಾಗುತ್ತಾ ಬಂದಿದೆ. ಸರಿ ಸುಮಾರು ಮೂರು ನೂರೇಡುಗಳಿಂದ ದಾಂಡಾಟದ ದಾಂಡು, ಚೆಂಡು, ಕ್ಶೇತ್ರ ರಕ್ಶಣೆ ಮತ್ತು ಕಾನೂನುಗಳು ಬಹಳಶ್ಟು ಬದಲಾವಣೆಗಳಲ್ಲಿ ಮಿಂದೆದ್ದು, ಇಂದಿನ ದಾಂಡಾಟವಾಗಿ (Modern Cricket) ನಮ್ಮ ಮುಂದೆ ನಿಂತಿದೆ. ಅಶ್ಟಕ್ಕೂ ಇವು ರಾತ್ರೋ ರಾತ್ರಿ ನಡೆದ ಬದಲಾವಣೆಗಳೇನಲ್ಲ ಅತವಾ ತಾನು ಹುಟ್ಟಿದ ಇಂಗ್ಲೆಂಡ್ ನಾಡೊಂದರಲ್ಲೇ ಆದ ಬದಲಾವಣೆಗಳೇನಲ್ಲ. ಬದಲಾಗಿ ಈ ಆಟವು ಮೂರು ನೂರೇಡುಗಳ ಕಾಲ ಜಗತ್ತಿನೆಲ್ಲೆಡೆ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಇಂದಿನ ದಾಂಡಾಟದ ಬೇಕು ಬೇಡಗಳ ಮುನ್ನೋಟದಿಂದ ಹತ್ತು ಹಲವು ಬಗೆಗಳಲ್ಲಿ ಮಾರ‍್ಪಾಡುಗಳನ್ನು ಕಂಡುಕೊಂಡಿತು.

ಈ ಕುರಿತಂತೆ 1789ರಲ್ಲಿ ಮೊಟ್ಟ ಮೊದಲ ಬಾರಿಗೆ ದಾಂಡಾಟದ ಕಾನೂನುಗಳನ್ನು ಕ್ರಮಬದ್ದವಾಗಿ ರೂಪಿಸಲಾಯಿತು. ಇಂದಿಗೂ ದಾಂಡಾಟದ ಕಾನೂನುಗಳಡಿಯಲ್ಲೇ ದಾಂಡಾಟ ನಡೆದುಕೊಂಡು ಬಂದಿದೆ. ಆ ಕಾರಣಕ್ಕಾಗಿಯೇ ದಾಂಡಾಟದ ಕಾನೂನುಗಳನ್ನು 1789 ದಾಂಡಾಟದ ಕಾನೂನುಗಳು (1789 Laws of cricket) ಎಂದು ಕರೆಯಲಾಗುತ್ತದೆ. ಇಲ್ಲೊಂದು ವಿಶೇಶವೆಂದರೆ ಜಗತ್ತಿನ ಎಲ್ಲಾ ಬಗೆಯ ಪಯ್ಪೋಟಿಗಳಿಗೆ ಹೋಲಿಸಿದಾಗ, ದಾಂಡಾಟವನ್ನು ಮಾತ್ರ ಕಾನೂನುಗಳಡಿ(Laws) ಆಡಲಾಗುತ್ತದೆ. ಉಳಿದ ಎಲ್ಲಾ ಬಗೆಯೆ ಪಯ್ಪೋಟಿಗಳು ನಿಯಮಾವಳಿ(Rules)ಗಳಡಿ ಆಡಲಾಗುತ್ತದೆ.

ದಾಂಡಾಟವೆಂಬ ಪಯ್ಪೋಟಿ ಬೆಳಕಿಗೆ ಬಂದದ್ದು ಇಂಗ್ಲೆಂಡ್ ನಾಡಿನಲ್ಲಾದರೂ ಜಗತ್ತಿನ ಹೆಚ್ಚಿನ ನಾಡುಗಳಿಗೆ ಬಹುಬೇಗನೆ ಪಸರಿಸಿಕೊಂಡಿತು. ಇದು ಮೊದಲ ಬಾರಿಗೆ ಅಮೇರಿಕಾ ಮತ್ತು ಕೆನಡಾ ನಾಡುಗಳ ನಡುವೆ ಪಯ್ಪೋಟಿ ಸಾಗುವ ಮೂಲಕ ದಾಂಡಾಟವು ಇಂಗ್ಲೆಂಡ್ ನಾಡಿನ ಗೆರೆದಾಟಿ, ಜಗತ್ತಿನ ಪಯ್ಪೋಟಿಯಾಗಿ ಮೊದಲ್ಗೊಂಡಿತು. ಈ ಬಳಿಕವೇ 1789 ದಾಂಡಾಟದ ಕಾನೂನುಗಳು ಕೂಡ ಜಾರಿಗೆ ಬಂದದ್ದು. ಅಲ್ಲದೇ ನಾವೀಗ ಕಾಣುತ್ತಿರುವ ಇಂದಿನ ದಾಂಡಾಟದ ಬದಲಾವಣೆಗಳು ಶುರುವಾದದ್ದು ಇಂಗ್ಲೆಂಡ್ ಮತ್ತು ಪಡುಬಡಗಣ ಅಮೇರಿಕಾದಲ್ಲಿ. ಅದೂ ಕೂಡ ಒಂದೇ ಹೊತ್ತಿನಲ್ಲಿ.

ಅದರಲ್ಲೂ ಅಮೇರಿಕನ್ನರು ತಮ್ಮ ನಾಡಿನಾದ್ಯಂತ ದಾಂಡಾಟಕ್ಕೆ ವ್ಯಾಪಕವಾದ ಬೆಂಬಲ ನೀಡಿ ಬೆಳೆಸ ತೊಡಗಿದರು. ಅಶ್ಟಕ್ಕೂ ಮೊದಲ ಅಂತರಾಶ್ಟ್ರೀಯ ದಾಂಡಾಟದ ಪಯ್ಪೋಟಿ ನಡೆದದ್ದು ಅಮೇರಿಕಾದಲ್ಲಿ. ಈ ಪಯ್ಪೋಟಿ ನಡೆದದ್ದು ಅಮೇರಿಕಾ ಮತ್ತು ಕೆನಡಾ ನಾಡುಗಳ ನಡುವೆ. ಆದರೆ ಇಂದು ದಾಂಡಾಟದಲ್ಲಿ ಮುಂದುವರಿದ ನಾಡುಗಳ ಸಾಲಿನಲ್ಲಿ ಅಮೇರಿಕಾ ಬಹಳಶ್ಟು ಹಿಂದೆ ಉಳಿದಿದೆ. ಒಂದೆಡೆ ದಾಂಡಾಟವನ್ನೇ ಹೋಲುವ, ಅಮೇರಿಕಾ ನಾಡುಗಳಲ್ಲಿ ಸಂಚಲನ ಮೂಡಿಸಿದ ಬೇಸ್ ಬಾಲ್ ಪಯ್ಪೋಟಿಯೂ ಇದಕ್ಕೆ ಕಾರಣವಾಗಿರಬಹುದು.

ಕೆಲ ರಾಜಕೀಯ ಸಮರಗಳ ಹೊತ್ತಿನಲ್ಲಿ, ಅಸ್ಟ್ರೇಲಿಯಾ ತಂಡವು ಇಂಗ್ಲೀಶರ ಎದುರು ದಾಂಡಾಟದ ಸವಾಲೆಸೆದಿತ್ತು. ಅಲ್ಲಿಂದ ಹುಟ್ಟಿದ್ದೇ ‘ಆಶಸ್’ ಕೂಟಗಳು. ದಾಂಡಾಟದ ಅತಿ ಹಳೆಯ ಕೂಟ ಎಂದು ಕರೆಸಿಕೊಳ್ಳುವ ‘ಆಶಸ್’ ನಡೆದದ್ದು, ಅಮೇರಿಕಾ ಮತ್ತು ಕೆನಡಾ ನಾಡುಗಳ ನಡುವೆ ನಡೆದ ಪಯ್ಪೋಟಿಯ ಇಪ್ಪತ್ತಯ್ದು ವರುಶಗಳ ಬಳಿಕ. ಹಾಗಾಗಿ ಅಮೇರಿಕಾ ಮತ್ತು ಕೆನಡಾ ನಡುವಿನ ಪಯ್ಪೋಟಿಯೇ ದಾಂಡಾಟದ ಅತಿ ಹಳೆಯ ಕೂಟ. ಆದರೇ ಇಂದಿನವರೆಗೂ ನಿರಂತರವಾಗಿ ನಡೆದು ಬಂದಿರುವ ಕಾರಣ, ಸಾಂಪ್ರದಾಯಿಕ ಆಶಸ್ ಕೂಟವು ಹಳೆಯ ಕೂಟವಾಗಿ ಗುರುತಿಸಿಕೊಂಡಿದೆಯಶ್ಟೆ.

ಇಂಗ್ಲೆಂಡ್ ನಾಡುಗಳಲ್ಲಿ ಬ್ರಿಟೀಶ್ ಅದಿಕಾರಿಗಳ ನಡುವೆ ಹೆಚ್ಚಾಗಿ ದಾಂಡಾಟದ ಪಯ್ಪೋಟಿಗಳು ಏರ‍್ಪಡುತ್ತಿದ್ದವು. ಇದರಿಂದ ಪ್ರಶಸ್ತಿ ಸುತ್ತುಗಳು ಕೇವಲ ಪಯ್ಪೋಟಿಗೆ ಸೀಮಿತವಾಗಿರದೆ ಪ್ರತಿಶ್ಟೆಯ ಸುತ್ತುಗಳಾಗಿ ಬದಲಾದವು. ಇದರಿಂದ ಪಯ್ಪೋಟಿಯ ಹೊತ್ತಿನಲ್ಲಿ ಎರೆಡೂ ತಂಡಗಳಿಂದ ಕೆಲವು ರಾಜಕೀಯ ಲಾಬಿಗಳು ಮೊದಲ್ಗೊಂಡವು. ಇದು ದಾಂಡಾಟವನ್ನು ಹೊಸದಾರಿಯತ್ತ ಮುಕ ಮಾಡುವಂತೆ ಮಾಡಿತು.

ಅಲ್ಲಿಂದೀಚೆಗೆ ದಾಂಡಾಟವು ವ್ಯಾಪಾರದ ದಿಕ್ಕಿನತ್ತ ಮುಕ ಮಾಡಿತು. ಇದರ ಹೆಸರಿನಲ್ಲಿ ವ್ಯವಹಾರಗಳು ಪ್ರಾರಂಬವಾದವು. ಇದು ದಾಂಡಾಟದ ಪೋಟಿಗಾರರಿಗೆ ಹಣದ ಹೊಳೆಯನ್ನೇ ಹರಿಸತೊಡಗಿತು. ಇಲ್ಲಿಂದ ದಾಂಡಾಟ ಎಂಬುದು ಮಂದಿಗೆ ಒಂದು ಕೆಲಸದಂತೆ ಗೋಚರಿಸಿತು. ಮುಂದೆ ಇದನ್ನೇ ಕೆಲಸವಾಗಿಸಿಕೊಂಡ ಯುವ ಪೀಳಿಗೆ ದಾಂಡಾಟದ ಪರಿಣಿತಿ ಹೊಂದುತ್ತಾ ಹೋದರು. ಈ ಮಾರ‍್ಪಾಡು ಮುಂದೆ ಪರಿಣಿತ ತಂಡಗಳ ಹುಟ್ಟಿಗೆ ಕಾರಣವಾಯಿತು.

ನಿಜಕ್ಕೂ ದಾಂಡಾಟವೆಂಬುದು ಮಾರ‍್ಪಾಡುಗಳ ಪರ‍್ವವಾಗಿ ನಿಂತದ್ದು ಹತ್ತೊಂಬತ್ತನೇ ನೂರೇಡಿನಲ್ಲಿ. ಎರಡು ಗೂಟ(Wickets)ಗಳ ಬಳಕೆಯಿಂದ ಆಡಲಾಗುತ್ತಿದ್ದ ಆಟವು, 1789 ದಾಂಡಾಟದ ಕಾನೂನುಗಳಿಗೆ ಕೆಲವು ಬದಲಾವಣೆಗಳನ್ನು ತರುವ ಮೂಲಕ ಮೂರು ಗೂಟಗಳ ಬಳಕೆಯನ್ನು ಮಾಡಲಾಯಿತು. ಅಲ್ಲದೇ ನಾಲ್ಕು ಎಸೆತಗಳ ಒಂದು ಎಸೆತಗಟ್ಟಿನಿಂದ(Overs), ಅಯ್ದು ಎಸೆತಗಳ ಒಂದು ಎಸೆತಗಟ್ಟಿಗೆ ಏರಿಸಲಾಯಿತು. ಇಂದು ಆರು ಎಸೆತಗಳ ಒಂದು ಎಸೆತಗಟ್ಟಾಗಿ ಮುಂದುವರೆಯುತ್ತಿದೆ. ದಾಂಡಾಟ ಮೊದಲ್ಗೊಂಡಾಗ ಬಯಲು ಮತ್ತು ನಡುಹಾಸು(Pitch) ಕುರಿತು ಹೆಚ್ಚಿನ ಗಮನಹರಿಸಿರಲಿಲ್ಲ. ಬಳಿಕ ಆಟದ ಬಯಲಲ್ಲಿ ಹದವಾಗಿ ಹುಲ್ಲನ್ನು ಬೆಳೆಸುವ ಮೂಲಕ ಸಿದ್ದಗೊಳಿಸುವಂತೆ ನೋಡಿಕೊಳ್ಳಲಾಯಿತು ಮತ್ತು ನಡುಹಾಸುನ್ನು ಚೆಂಡು ಪುಟಿತ(Bounce)ಗೊಳ್ಳಲು ಸಾದ್ಯವಾಗುವಂತಹ ನಿರ‍್ದಿಶ್ಟವಾದ ಮಣ್ಣನ್ನು ಬಳಸುವ ಮೂಲಕ ಸಿದ್ದಗೊಳಿಸಲಾಯಿತು.

ಹತ್ತೊಂಬತ್ತನೇ ನೂರೇಡಿನ ಹೊತ್ತಿನಲ್ಲಿ ಇಂಡಿಯಾದಲ್ಲಿ ಬ್ರಿಟೀಶರ ಆಳ್ವಿಕೆಯಿತ್ತು. ಇದರಿಂದ ದಾಂಡಾಟದ ಗಾಳಿ ಇತ್ತಲೂ ಬೀಸಿತ್ತು. ಒಂದರ‍್ತದಲ್ಲಿ ಹೇಳುವುದಾದರೆ, ಇಂಡಿಯಾ ನಾಡಿನಲ್ಲಿಯೂ ದಾಂಡಾಟ ಹುಟ್ಟುಹಾಕಿದವರು ಇಂಗ್ಲೀಶರೇ. ಅಂದರೆ, ಬ್ರಿಟೀಶ್ ರಾಣಿಯೇ ಇಂಡಿಯಾದಲ್ಲಿ ಮೊದಲು ದಾಂಡಾಟದ ತಂಡವನ್ನು ಕಟ್ಟಿದ್ದು. ಈ ತಂಡಗಳನ್ನು ಬಳಸಿಕೊಂಡು ಮೊದಮೊದಲು ಕೇವಲ ಮನರಂಜನೆಯ ಬಾಗವಾಗಿ ತಂಡಗಳನ್ನು ಅಣಿಗೊಳಿಸಲಾಯಿತು. ಆ ಹೊತ್ತಿನಲ್ಲಿ ಬ್ರಿಟೀಶ್ ಅದಿಕಾರಿಗಳು ಮತ್ತು ಇಂಡಿಯಾ ತಂಡಗಳ ನಡುವೆ ಮನರಂಜನಾ ಪೋಟಿಗಳು ನಡೆಯುತ್ತಿದ್ದವು. ಮುಂದೆ ದಾಂಡಾಟದ ಪ್ರಚಂಡ ಬೆಳವಣಿಗೆಯ ಕಾರಣದಿಂದಾಗಿ ಇಂಡಿಯಾದಲ್ಲಿಯೂ ಪರಿಣಿತ ಪೋಟಿಗಾರರ ಸೇರುವಿಕೆಯಲ್ಲಿ ಅಂತರಾಶ್ಟ್ರೀಯ ಮಟ್ಟದ ತಂಡಗಳು ರೂಪುಗೊಂಡವು.

ಸುಮಾರು ಇಪ್ಪತ್ತನೇ ನೂರೇಡಿನವರೆಗೂ ಒಂದು ಹಂತವಾಗಿ ನಡೆದು ಬಂದಿದ್ದ ದಾಂಡಾಟವು ಅಲ್ಲಿಂದೀಚೆಗೆ ಹೊಸದಾದ ಬದಲಾವಣೆಗಳನ್ನು ಕಂಡುಕೊಂಡಿತು. ಹತ್ತೊಂಬತ್ತನೇ ನೂರೇಡಿನಲ್ಲಿ ಹುಟ್ಟಿಕೊಂಡ ಕಾಮನ್‍ವೆಲ್ತ್ ಕೂಟಗಳು ದಾಂಡಾಟದ ನಾಗಾಲೋಟಕ್ಕೆ ಅಡ್ಡಗಾಲಿಟ್ಟಿತು. ಆಗ ಅಂತರಾಶ್ಟ್ರೀಯ ಮಟ್ಟದಲ್ಲಿ ಕೆಲವೇ ಕೆಲವು ಪ್ರಮುಕ ತಂಡಗಳು ಮಾನ್ಯತೆ ಪಡೆದುಕೊಂಡಿದ್ದವು, ಬಳಿಕ ಬೇರೆ ನಾಡುಗಳ ಇನ್ನಶ್ಟು ಹೊಸ ತಂಡಗಳನ್ನು ಅಂತರಾಶ್ಟ್ರೀಯ ಮಟ್ಟದ ದಾಂಡಾಟದ ಅಂಗಣಕ್ಕೆ ದಾರಿಮಾಡಿಕೊಂಡವು. ಅಂದರೆ ಈ ಹೊಸ ತಂಡಗಳ ಕೂಡುವಿಕೆಯಲ್ಲಿ ದಾಂಡಾಟದ ‘ವಿಶ್ವಕಪ್’ ಕೂಟಗಳ ಆಯೋಜನೆಗೆ ಪ್ರೇರೇಪಿಸಿತು. ಇಲ್ಲಿಂದ ದಾಂಡಾಟದ ಮತ್ತೊಂದು ವಯ್ಬವ ಮೊದಲ್ಗೊಂಡಿತು.

(ಚಿತ್ರಸೆಲೆ: sportskeeda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: