ಚಳಿಗಾಲಕ್ಕೆ ಕಾರಿನ ಆರೈಕೆ

– ಜಯತೀರ‍್ತ ನಾಡಗವ್ಡ

 

ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು ಚಳಿಗಾಲದಲ್ಲಿ ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುವೆ.

    1.ಗಾಡಿಯ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಕಚಿತಪಡಿಸಿಕೊಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗಲು ಕಿರಿದಾಗಿದ್ದು, ಸೂರ‍್ಯ ತಡವಾಗಿ ಹುಟ್ಟಿ ಬೇಗನೆ ಮುಳುಗುವವನು. ಇದರಿಂದ ಗಾಡಿ ಓಡಿಸುಗರಿಗೆ ಗಾಡಿಯ ದೀಪದ ಅಗತ್ಯ ಹೆಚ್ಚು. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಇಬ್ಬನಿ ಕವಿದು ದಾರಿ ಮಂಜು ಮಂಜಾಗುವುದು ಹೆಚ್ಚು, ಆಗ ಕೂಡ ಗಾಡಿಗಳ ದೀಪ ಆನ್ ಮಾಡಿ ಗಾಡಿಗಳನ್ನು ಓಡಿಸಿಕೊಂಡು ಹೋಗಬೇಕು. ಆದ್ದರಿಂದ ಬಂಡಿಯ ಮುಂದೀಪ, ಹಿಂದೀಪ, ಇಬ್ಬನಿಗೆಂದೇ ನೀಡಿರುವ(Fog Lamp) ದೀಪಗಳು ಹಾಗೂ ತೋರುಕ(Indicator) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಕಚಿತ ಪಡಿಸಿಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ, ನುರಿತ ಮೆಕ್ಯಾನಿಕ್‌ಗಳ ಬಳಿ ತೋರಿಸಿ ಸರಿಪಡಿಸಿಕೊಳ್ಳಬೇಕು.

    2. ಗಾಡಿಯ ಮಿಂಕಟ್ಟು:

ಗಾಡಿಯ ಮಿಂಕಟ್ಟು ಸರಿಯಾಗಿ ಕೆಲಸ ಮಾಡಬೇಕು. ಚಳಿಗಾಲದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಕಡಿಮೆ ತಾಪಮಾನ ಇರುವುದರಿಂದ, ಗಾಡಿಗಳ ಬ್ಯಾಟರಿ ತಣ್ಣಗಾಗಿರುತ್ತದೆ. ಕೆಲವೊಮ್ಮೆ, ರಾತ್ರಿಯಿಡೀ ನಿಂತಿರುವ ಗಾಡಿಗಳು ಬೆಳಗಿನ ಜಾವ ಬೇಗನೇ ಶುರುವಾಗಲ್ಲ, ಕಾರಣ ಬ್ಯಾಟರಿ ವಾರ‍್ಮ್-ಅಪ್ ಆಗಿರುವುದಿಲ್ಲ. ಗಾಡಿಯ ಬ್ಯಾಟರಿ ಹಳೆಯದಾಗಿದ್ದಾಗ ಈ ತೊಂದರೆ ಕಂಡುಬರುವುದುಂಟು. ಈ ಸಮಯದಲ್ಲಿ ಜಂಪರ‍್ ತಂತಿಗಳು ಇದ್ದರೆ, ಅವುಗಳನ್ನು ನೆರೆಹೊರೆಯವರ ಕಾರಿನ ಬ್ಯಾಟರಿಗೆ ಜೋಡಿಸಿ ಜಂಪ್ ಸ್ಟಾರ‍್ಟ್ ಮಾಡಬಹುದು. ಅಕ್ಕಪಕ್ಕದಲ್ಲಿ ಬೇರೆ ಕಾರು ಸಿಗದೇ ಇದ್ದಲ್ಲಿ, ಹೀಗೆ ಮಾಡಬಹುದು. ಬಹಳಶ್ಟು ಕಾರಿನ ವಿಮೆಗಳು ಇಲ್ಲವೇ ಶೋರೂಮ್‌ಗಳು ದಾರಿಬದಿ ನೆರವು(roadside assist) ಎಂಬ ಸೇವೆಗಳನ್ನು ನೀಡಿರುತ್ತಾರೆ. ದಾರಿಬದಿ ನೆರವು ನವರಿಗೆ ಕರೆಮಾಡಿದರೆ, ಉಚಿತವಾಗಿ ಬಂದು ನಿಮಗೆ ಜಂಪ್ ಸ್ಟಾರ‍್ಟ್ ಮಾಡಿಕೊಡುತ್ತಾರೆ. ದಾರಿಬದಿ ನೆರವು ಎಂಬುದು ಇಂತಹ ಇಕ್ಕಟ್ಟಿನ ಸಂದರ‍್ಬಗಳಲ್ಲಿ ನೆರವಿಗೆ ಬರುತ್ತದೆ. ಪದೇ ಪದೇ ಈ ರೀತಿ ಗಾಡಿಯ ಬ್ಯಾಟರಿ ಕೆಟ್ಟು ನಿಲ್ಲುತ್ತಿದ್ದರೆ, ಬ್ಯಾಟರಿಯನ್ನು ಒಂದೊಮ್ಮೆ ನುರಿತ ಮೆಕ್ಯಾನಿಕ್ ಬಳಿ ತೋರಿಸಿ ಹೊಸ ಬ್ಯಾಟರಿಗೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.

3.ಕೀಲೆಣ್ಣೆ ಮತ್ತು ತಂಪುಕಗಳ ಮಾಹಿತಿ:

ಗಾಡಿಯ ಕೀಲೆಣ್ಣೆ (Engine Oil) ಮತ್ತು ತಂಪುಕಗಳ(Coolant) ಮಟ್ಟವನ್ನು ಆಗಾಗ ಪರೀಕ್ಶಿಸಿ. ಇವುಗಳ ಮಟ್ಟ ಕಡಿಮೆ ಎನ್ನಿಸಿದರೆ, ಗಾಡಿಯ ಬಳಕೆ ಕೈಪಿಡಿಯಲ್ಲಿ ಹೆಸರಿಸಿದ ಗುಣಮಟ್ಟದ ಕೀಲೆಣ್ಣೆ ಮತ್ತು ತಂಪುಕವನ್ನು ತುಂಬಿಸಬೇಕು.ಅತಿಯಾದ ಚಳಿಯ ವಾತಾವರಣದಲ್ಲಿ ಗಾಡಿಯು ಸುಮಾರು ಹೊತ್ತು ಶುರು ಮಾಡದೇ ಬಿಟ್ಟರೆ, ಕೀಲೆಣ್ಣೆ ಮುಂತಾದವು ಕೆಲವೊಮ್ಮೆ ಹೆಪ್ಪುಗಟ್ಟುವುದುಂಟು, ಇದರಿಂದ ಗಾಡಿಯು ಬೇಗನೇ ಶುರುವಾಗದೇ ಇರಬಹುದು. ಒಂದೊಮ್ಮೆ, ಗಾಡಿಯನ್ನು ಒಂದೇ ಕಡೆ ಹಲವಾರು ದಿನ ನಿಲ್ಲಿಸುವ ಸಂದರ‍್ಬ ಬಂದರೆ, ದಿನವೂ ಒಂದು ಸಲ ಕಾರನ್ನು ಶುರು ಮಾಡಿ ಇಲ್ಲವೇ ಮನೆಯ ಅಕ್ಕಪಕ್ಕದಲ್ಲಿ 2-3 ಸುತ್ತು ಹಾಕಿ ಬಂದರೆ ಒಳ್ಳೆಯದು.

     4. ಒರೆಸುಕ ಮತ್ತು ಗಾಳಿತಡೆ ಗಾಜುಗಳು:

ಚಳಿಗಾಲದಲ್ಲಿ ಒರೆಸುಕ(Wiper) ಮತ್ತು ಗಾಳಿತಡೆ ಗಾಜುಗಳು(Wind Shield Glass) ಸರಿಯಾಗಿ ಕೆಲಸ ಮಾಡುತ್ತಿರಬೇಕು. ಗಾಳಿತಡೆ ಗಾಜುಗಳಲ್ಲಿ ಯಾವ ಚಿಕ್ಕ ಪುಟ್ಟ ತೂತುಗಳು ಇರದೇ ಬದ್ರವಾಗಿರಬೇಕು. ಒರೆಸುಕಗಳು ಹಳತಾಗಿದ್ದರೆ, ಬದಲಾಯಿಸಿ ಬಿಡಿ. ಗಾಡಿಯನ್ನು ಆಚೆ ಕಡೆ, ಯಾವುದೇ ಹೊದಿಕೆಯಿರದೇ ರಾತ್ರಿಹೊತ್ತು ನಿಲ್ಲಿಸಬೇಕಾಗಿ ಬಂದರೆ, ಬೆಳಿಗ್ಗೆ ಗಾಡಿಯ ಗಾಳಿತಡೆ ಗಾಜಿನ ಮೇಲೆ ಸಾಕಶ್ಟು ಮಂಜು ಸೇರಿಕೊಂಡು, ಗಾಡಿ ಮುಂದೆ ಏನೂ ಕಾಣದಂತೆ ಅಡ್ಡಿಯಾಗುತ್ತದೆ. ಆಗ, ಗಾಡಿಯಲ್ಲಿರುವ ಮಂಜು ಕರಗಿಸುಕ(Defroster) ಶುರು ಮಾಡಿ ಸ್ವಲ್ಪ ಹೊತ್ತು ಬಿಟ್ಟರೆ ಮಂಜು ಕರಗಿ, ಮುಂದಿನ ದಾರಿ ಸ್ಪಶ್ಟವಾಗಿ ಕಾಣುತ್ತದೆ. ಗಾಡಿಯಲ್ಲಿರುವ ಮಂಜು ಕರಗಿಸುಕ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಕಾತರಿ ಪಡಿಸಿಕೊಳ್ಳಿ.

     5. ಗಾಲಿಯ ಸ್ತಿತಿ:

ಗಾಡಿಯ ಗಾಲಿಗಳ ಒತ್ತಡದ ಮಟ್ಟ ಕುಸಿದಿದ್ದರೆ, ಗಾಳಿ ತುಂಬಿಸಿ ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಇಂದಿನ ಹೆಚ್ಚಿನ ಕಾರುಗಳಲ್ಲಿ ಗಾಲಿಗಳ ಒತ್ತಡದ ಮಟ್ಟ ತಿಳಿಸುವ ಅರಿವಿಕ(Tyre pressure monitroing sensor) ಇರುತ್ತವೆ. ಇವುಗಳು ಕಾರಿನ ತೋರುಮಣೆ(Dashboard) ನಲ್ಲೇ ಗಾಲಿಗಳ ಒತ್ತಡದ ಮಟ್ಟ ತೋರಿಸುತ್ತವೆ. ಗಾಲಿಗಳಲ್ಲಿ ಗಾಳಿ ಕಡಿಮೆಯಾದಾಗ ಅರಿವಿಕಗಳು ಸರಿಪಡಿಸುವಂತೆ ಮಾಹಿತಿ ಕೊಡುತ್ತವೆ. ಅದನ್ನು ಬಳಸಿಕೊಂಡು, ಗಾಳಿ ಒತ್ತಡ ಸರಿಯಾದ ಮಟ್ಟದಲ್ಲಿ ಇರುವಂತೆ ಗಾಳಿ ತುಂಬಿಸಬೇಕು. ಹಾಗೆಯೇ ಗಾಲಿಗಳು ಅತಿಯಾಗಿ ಸವೆದಿದ್ದರೆ, ಒಮ್ಮೆ ಸರಿಯಾಗಿ ಪರೀಕ್ಶಿಸಿಕೊಳ್ಳಬೇಕು. ಗಾಲಿಗಳ ಸವೆತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರಿನ ಬಳಕೆದಾರರ ಕೈಪಿಡಿಯಲ್ಲಿ ನೋಡಿ ತಿಳಿಯಬಹುದು. ಕಾರಿನಲ್ಲಿರುವ ಬಿಡಿ-ಗಾಲಿ(spare wheel)ಯನ್ನು ತುರ‍್ತು ಅಗತ್ಯಕ್ಕೆ ಬಳಸಿಕೊಳ್ಳಿ.

ದೂರದೂರಿಗೆ, ಮಂಜುಬೀಳುವ ಅತಿಚಳಿಯ ಪ್ರದೇಶಗಳ ತೆರಳುವ ಮುನ್ನ ಅಲ್ಲಿನ ವಾತಾವರಣ ಬಗ್ಗೆ ತಿಳಿದುಕೊಂಡು, ಕಾರಿನ ಎಲ್ಲ ಏರ‍್ಪಾಟು ಸರಿಯಾಗಿ ಕೆಲಸ ಮಾಡುವುದನ್ನು ಕಚಿತಪಡಿಸಿಕೊಂಡಿರಿ.

(ಚಿತ್ರಸೆಲೆ: acko.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *