ಹೊರಬಾನ ಅಚ್ಚರಿಗಳು

– ನಿತಿನ್ ಗೌಡ.

ಕಡಲಾಳ ಮತ್ತು ಹೊರಬಾನು ತನ್ನೊಡಲೊಳಗೆ ಅಚ್ಚರಿಯ ಆಗುಹೋಗುಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಈ ಸಂಗತಿಗಳು ಮನುಶ್ಯ ಸಹಜ ಗುಣಗಳಾದ ಕುತೂಹಲ ಮತ್ತು ಹುಡುಕಾಟದ ಹಪಹಪಿಕೆಗೆ ಇಂಬು‌ ನೀಡುತ್ತವೆ. ಅಂತಹುದೇ ಕೆಲವು‌ ಅಚ್ಚರಿ ವಿಶಯಗಳನ್ನು ನೋಡೋಣ.

ನೇಸರನ‌ ಬಗೆಗಿನ‌ ಅಚ್ಚರಿಗಳು:

1. ನೇಸರನ ಈಗಿನ ವಯಸ್ಸು ಅಂದಾಜು 454 ಕೋಟಿ‌ ಏಡುಗಳು. ಇದು ಕೇವಲ ಅವನ ನಡು ವಯಸ್ಸಾಗಿದ್ದು, ನೇಸರ ಇನ್ನೂ 500ಕೋಟಿ ವರುಶ ಬದುಕುತ್ತಾನೆ.
2. ನೇಸರ ತಾನುರಿದು, ನಮಗೆಲ್ಲ ಬೆಳಕು ಮತ್ತು ಕಾವೊದೊಗಿಸುವುದು ನಮಗೆಲ್ಲಾ ಗೊತ್ತಿದೆ. ಹೀಗೆ ಉರಿಯುವಾಗ ಅದರಿಂದ 100ಡೆಸಿಬೆಲ್ ಅಶ್ಟು ಸದ್ದು ಉಂಟಾಗುತ್ತದೆ, ಆದರೂ ಅದು ನಮಗೆ ಕೇಳಿಸುವುದಿಲ್ಲ! ಇದಕ್ಕೆ ಕಾರಣ ನಮ್ಮ ಇಳೆ ಮತ್ತು‌ ನೇಸರನ ನಡುವಿರುವ ಮುಚ್ಚರ(vacuum). 100ಡೆಸಿಬೆಲ್ ಅಂದರೆ ಅಂದಾಜು ಒಂದು ಕಾರಿನ ಹಾರ್‍ನ್ ಅಶ್ಟು ಸದ್ದಿರುತ್ತದೆ.
3.ನೇಸರ ಬಳಗದ ಒಟ್ಟೂ ರಾಶಿಯಲ್ಲಿ (Mass), ನೇಸರನದೆ ಹಿರಿದಾದ ಪಾಲು; 98.86%! ಅಂದರೆ ಬೂಮಿಗೆ ಹೋಲಿಸಿದಲ್ಲಿ ಅಂದಾಜು ಮೂರು ಲಕ್ಶದ ಮೂವತ್ತು ಸಾವಿರ ಪಟ್ಟು ಹೆಚ್ಚು.
4.ನೇಸರನೊಳಗೆ ಅಂದಾಜು ಹತ್ತುಲಕ್ಶ ಇಳೆಗಳನ್ನು ಹಿಡಿಸಬಹುದಾದಶ್ಟು ಜಾಗವಿದೆ.
5. ಇಂದು ಇಳೆಯ ಮೇಲಿನ ಜೀವ ರಾಶಿಗಳ ಇರುವಿಕೆಗೆ ನೇಸರನೇ ಮೂಲ. ಮರ ಗಿಡಗಳು ತನ್ನೂಟವನ್ನು ತಯಾರಿಸುವುದು, ಬೆಳಕಿನೂಟ(photosynthesis) ಎಂಬ ಕೆಲಸದಿಂದಾಗಿದ್ದು, ಇದಕ್ಕೆ ಬೇಕಾಗುವ ಬೆಳಕು ನೇಸರನಿಂದ ದೊರೆಯುತ್ತದೆ. ಬೆಳಕಿನೂಟದಿಂದ ದೊರಕುವ ಅತಿ ಮುಕ್ಯ ಉತ್ಪನ್ನವೆಂದರೆ ಅದು ಉಸಿರುಗಾಳಿ(oxygen). ಬೂಮಿಯ ಮೇಲಿನ ಉಸಿರುಗಾಳಿಯ ಅರ‌್ದದಶ್ಟು ತಯಾರಾಗವುದು ಕಡಲಾಳದಲ್ಲಿ. ಎತ್ತುಗೆಗೆ ಪೋಟೋಪ್ಲಾಂಕ್ಟನ್ ಮತ್ತು ಕೆಲ್ಪ್ ಎನ್ನುವ ಸಸ್ಯಗಳು, ನೇಸರನ ಬೆಳಕನ್ನು ಬಳಸಿ ಬೆಳಕಿನೂಟ ಕ್ರಿಯೆ ನಡೆಸಿ, ಉಸಿರುಗಾಳಿ ನೀಡುತ್ತವೆ.
6.ಇಳೆಯ ಮೇಲಿರುವ ಸುತ್ತಣ ವಾತಾವರಣ, ಕಡಲ ಮೇಲಿನ ಮಿಂಚಲೆಗಳಿಗೆ (Ocean currents) ಕಾರಣ ನೇಸರ ಮತ್ತವನ ತನ್ಸೆಳೆತ.
7. ಇರುಳಾದಮೇಲೆ ಬಾನಲ್ಲಿ ಹೊಳೆಯುವ ಚಂದ್ರನ, ಹೊಳಪಿಗೆ ಕಾರಣ ನೇಸರ! ಚಂದ್ರ ತನ್ನದೇ ಆದ ಬೆಳಕನ್ನು ಹೊಂದಿಲ್ಲ. ನೇಸರನ ಬೆಳಕಿನ ಕದಿರುಗಳು ಚಂದ್ರನ ಮೇಲ್ಬಿದ್ದು ಮರಳಿ(Reflection) ಬೂಮಿಯೆಡೆಗೆ ಬರುವುದರಿಂದ.ಚಂದ್ರ ಹೊಳೆಯುವಂತೆ ಕಾಣುತ್ತದೆ.
8. ದಗ ದಗಿಸಿ ಉರಿಯುವ, ನೇಸರನ ಕೆನ್ನಾಲಿಗೆಯಿಂದ (solar flares) ಸಿಡಿದೇಳುವ ಸುಡುಗಾಳಿ, ನಮ್ಮ ಇಳೆಯ ತೆಂಕಣ ಮತ್ತು ಬಡಗಣ ತುದಿಯಲ್ಲಿ(Poles) ‌ಉಂಟಾಗುವ ಬಣ್ಣ-ಬಣ್ಣದ ಬೆಳಕಿನ ಚಿತ್ತಾರದಾಟಕೆ ಕಾರಣವೆಂದರೆ‌ ಸೋಜಿಗವೆನಿಸುದಿಲ್ಲವೇ! ಈ‌ ಚಿತ್ತಾರಗಳನ್ನು ಅರೋರಾ ಅಸ್ಟ್ರಾಲಿಸ್(Southern Lights) ಮತ್ತು ಅರೋರ ಬೊರಿಯಾಲಿಸ್(Northern Lights) ಎನ್ನುವರು.


9. ಬೆಳಕು‌ ಒಂದು ಸೆಕೆಂಡಿಗೆ ಮೂರು ಲಕ್ಶ ಕಿ.ಮೀ ದೂರ ಸಾಗುತ್ತದೆ. ಹೀಗಿದ್ದೂ, ನೇಸರನ ಬೆಳಕು ಇಳೆಯ ತಲುಪಲು ಬರೋಬ್ಬರಿ ಎಂಟು ನಿಮಿಶ ಇಪ್ಪತ್ತು ಸೆಕೆಂಡುಗಳು ಬೇಕು!! ಇದನ್ನು ಇನ್ನೊಂದು ಬಗೆಯಲ್ಲಿ ‌ಹೇಳುವುದಾದರೆ, ನಾವು ಈಗ ನೋಡುತ್ತಿರುವ ನೇಸರ 8ನಿಮಿಶ ಹಳೆಯ ನೇಸರ! ಅಂದರೆ ಗತಕಾಲದ ನೇಸರ.
10. ನೇಸರ ಸೆಕೆಂಡಿಗೆ 220km ದೂರ ಸಾಗುತ್ತಾನೆ. ಹೀಗಿದ್ದೂ ನಮ್ಮ ಹಾಲ್ಗಡಲ ಅರಿಲ್ವಳಿಯ(Milky Way Galaxy)
ನಡುವೆ ಸುತ್ತುಹಾಕಲು, ಬರೋಬ್ಬರಿ 225-250 ದಶ ಲಕ್ಶ ವರುಶ ಬೇಕಾಗುತ್ತದೆ.
11. ಮುಂದೊಂದು ದಿನ ನಮ್ಮ ನೇಸರ ಸಾಯುವನು. ನೇಸರನು ಕೂಡಾ ಒಂದು ಅರಿಲ್ ಆಗಿದ್ದು, ಅರಿಲ್ಗಳು ತಮ್ಮದೇ ಆದ ಜೀವನ ಚಕ್ರವನ್ನು ಹೊಂದಿರುತ್ತವೆ. ಅದರಲ್ಲಿ ಬಿಳಿ ಮಾಣಿ/ಕುಳ್ಳ(White Dwarf) ಹಂತ ಕೂಡಾ ಒಂದು. ಆಗ ನೇಸರ ನಮ್ಮ ಬೂಮಿಯ ಗಾತ್ರಕ್ಕೆ ಕುಗ್ಗುತ್ತಾನೆ! ಹೀಗಿದ್ದರೂ ಆತನ ರಾಶಿ ಹೆಚ್ಚೂ ಕಡಿಮೆ‌ ಮೊದಲಿನಶ್ಟೆ ಇರುತ್ತದೆ. ಇದು ಅಚ್ಚರಿಯಲ್ಲವೇ!
12. ನೇಸರ ತನ್ನ ಜೀವನ‌ ಚಕ್ರದ ಒಂದು ಹಂತವಾದ ಕೆಂಪು ದಡೂತಿ (Red Giant) ಗಟ್ಟ ತಲುಪಿದಾಗ; ತಾನು ಈಗಿರುವ ಗಾತ್ರಕ್ಕಿಂತ 256 ಪಟ್ಟು ಹೆಚ್ಚು ಹಿಗ್ಗುತ್ತಾನೆ. ಆಗ ಶುಕ್ರ, ಬುದ, ಮಂಗಳ ಸೇರಿದಂತೆ ನಮ್ಮ ಇಳೆಯನ್ನೂ ನುಂಗುವನು!

ಮುಂದಿನ ಸಂಚಿಕೆಯಲ್ಲಿ ‌ಇಂತಹುದೇ ಇನ್ನಶ್ಟು ಸಂಗತಿಗಳನ್ನು ನೋಡೋಣ.

(ಮಾಹಿತಿಸೆಲೆ ಮತ್ತು ಚಿತ್ರಸೆಲೆ: theplanets.org, pixabay.com, depositphotos.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks