ಮಾಡಿ ಸವಿಯಿರಿ ಶಾವಿಗೆ ಪಾಯಸ
ಏನೇನು ಬೇಕು ?
- ಹಾಲು – 1 ಲೀಟರ್
- ಕಂಡೆನ್ಸೆಡ್ ಹಾಲು (ನೆಸ್ಲೆ) – 400 ಗ್ರಾಂ
- ಶಾವಿಗೆ – 150 ಗ್ರಾಂ (ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಿ)
- ಕೇಸರಿ – ಸ್ವಲ್ಪ
- ಸಕ್ಕರೆ – ರುಚಿಗೆ ತಕ್ಕಶ್ಟು
- ಲವಂಗ – 3
- ಒಣ ದ್ರಾಕ್ಶಿ ಸ್ವಲ್ಪ
- ಗೋಡಂಬಿ ಸ್ವಲ್ಪ
ಮಾಡುವ ಬಗೆ:
ಮೊದಲಿಗೆ, ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಆಗಾಗ ಕೈಯಾಡಿಸುತ್ತಾ ಇರಿ. ಹಾಲು ಕುದಿಯಲು ಪ್ರಾರಂಬಿಸಿದಾಗ, ಅದಕ್ಕೆ ಲವಂಗ ಮತ್ತು ಕೇಸರಿ ಸೇರಿಸಿ ನಿದಾನವಾಗಿ ಮಿಶ್ರಣ ಮಾಡಿ. ಇದಕ್ಕೆ ನೆಸ್ಲೆ ಕಂಡೆನ್ಸೆಡ್ ಹಾಲು ಸೇರಿಸಿ ಚೆನ್ನಾಗಿ ಕಲಸುತ್ತಾ ಇರಿ. ಹಾಲು ಮತ್ತು ಕಂಡೆನ್ಸೆಡ್ ಹಾಲು ಚೆನ್ನಾಗಿ ಬೆರೆತಿರುವುದನ್ನು ಕಚಿತಪಡಿಸಿಕೊಳ್ಳಿರಿ. ಅವು ಚೆನ್ನಾಗಿ ಬೆರೆತು ಹಾಲು ಇಂಗಿದ ನಂತರ, ಶಾವಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ (ಕಡಿಮೆ ಉರಿಯಲ್ಲಿ). ಇದನ್ನು 3 ರಿಂದ 4 ನಿಮಿಶಗಳ ಕಾಲ ಬೇಯಲು ಬಿಡಿ ಮತ್ತು ಶಾವಿಗೆ ಸಂಪೂರ್ಣವಾಗಿ ಬೆಂದಿದೆಯೆ ಎಂದು ಕಚಿತಪಡಿಸಿಕೊಳ್ಳಿರಿ. ಈಗ ಒಣ ದ್ರಾಕ್ಶಿ ಮತ್ತು ಗೋಡಂಬಿ ಸೇರಿಸಿ ಚೆನ್ನಾಗಿ ಕಲಸಿ, ಪಾತ್ರೆಯನ್ನು ಕೆಳಗಿಡಿ. ಈಗ ಬಿಸಿಯಾದ ಬಿಸಿಯಾದ ಪಾಯಸ ಸವಿಯಲು ಸಿದ್ದವಾಗಿದೆ. ಗಮನಿಸಿ; ಕಂಡೆನ್ಸೆಡ್ ಹಾಲು ಸೇರಿಸಿರುವುದರಿಂದ ಹೆಚ್ಚುವರಿ ಸಕ್ಕರೆ ಬೇಕಾಗುವುದಿಲ್ಲ. ನಿಮಗೆ ಹೆಚ್ಚು ಸಿಹಿ ಬೇಕಿದ್ದರೆ, ಸಕ್ಕರೆ ಸೇರಿಸಬಹುದು.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು