ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 13ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 13: ಬೀಶ್ಮರ ಹಿತನುಡಿ ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಷ್ಮ ವಚನಮ್’ ಎಂಬ ಹೆಸರಿನ 6ನೆಯ ಅದ್ಯಾಯದ 1ನೆಯ ಪದ್ಯದಿಂದ 19ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
ಭೀಷ್ಮ: ಗಂಗಾದೇವಿ ಮತ್ತು ಶಂತನು ರಾಜ ದಂಪತಿಯ ಮಗ. ಕುರುಕುಲದ ಹಿರಿಯ. ಕುರುಕುಲದ ಮಕ್ಕಳಾದ ದ್ರುತರಾಶ್ಟ್ರ ಮತ್ತು ಪಾಂಡುರಾಜನನ್ನು, ಮೊಮ್ಮಕ್ಕಳಾದ ಕೌರವರು ಮತ್ತು ಪಾಂಡವರನ್ನು ಸಾಕಿ ಸಲಹಿದವನು;
*** ಪ್ರಸಂಗ – 13: ಭೀಷ್ಮರ ಹಿತನುಡಿ ***
ಸಂಜಯನ ಮಾತನ್ ಮೀರದೆ… ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದ ವಂದನಮ್ ಗೆಯ್ಯಲೆಂದು ಗಾಂಧಾರಿಯ ನಂದನನ್ ಎಯ್ದೆ ವಂದನ್… ಅಂತು ಎಯ್ದೆ ವಂದಾಗಲ್… ನರ ಶರಕೋಟಿ ತನ್ನ ಶರೀರಮನ್ ಜರ್ಜರಿಸೆ… ಅಸ್ತ್ರವೇದನಾ ಪರವಶನಾಗಿಯುಮ್… ಮುಕುಂದನನ್ ಮರೆದನಿಲ್ಲ… ಏಕಚಿತ್ತದಿಮ್ ಸ್ಮರಿಯಿಸುತಿರ್ದುಮ್…
ಭೀಷ್ಮ: ಅತ್ತಲ್ ಅರಿಭೂಪರಿನ್ ಕುರುಪತಿಗೆ ಎಂತುಟು ಅವಸ್ಥೆಯಾದುದೋ…
(ಎಂದನ್. ಆ ಪರಮಯೋಗಿಗಮ್ ಇಂತುಟು ಮೋಹಮಾಗದೇ… ಅಂತಿರ್ದ ನದೀನಂದನನನ್ ರಾಜರಾಜನ್ ನೋಡಿ ಮನ್ಯೂದ್ಗತ ಕಂಠನಾಗಿ…)
ದುರ್ಯೋಧನ: ವಿನಯಮನ್ ಒಕ್ಕು… ನಿಮ್ಮ ಗುರುವೃದ್ಧರ ಪೇಳ್ದ ಹಿತೋಪದೇಶಮಮ್ ಮನದೊಳ್ ಇಳಿಂಕೆಗೊಂಡು… ಅನಿಲನಂದನ ವೈರದೆ… ನಿಮ್ಮನ್ ಇಂದ್ರನಂದನನೊಡನೆ ಆನೆ ಕಾದಿಸಿದೆನ್… ಆನೆ ಕಡಂಗಿದೆನ್… ಎನ್ನ ಪಾಪಕರ್ಮನ ಕತದಿಂದಮ್ ಈ ನಿಮಗಮ್… ಈ ಇರವು ಆದುದೆ ಸಿಂಧುನಂದನಾ…
(ಎಂದು ಪಶ್ಚಾತ್ತಾಪಮ್ ಗೆಯ್ಯುತುಮ್ ಮುಂಬರ್ಪ ತನ್ನ ಮೊಮ್ಮನ ಕಾಲ ಸೊಪ್ಪುಳಮ್ ಕೇಳ್ದು… ವಿಕಚ ಧವಳ ಕುವಲಯ ವಿಲಾಸಿತೋಪಹಾಸಿಗಳುಮ್… ಕರ್ಣಾಂತ ವಿಶ್ರಾಂತಂಗಳುಮಪ್ಪ ತನ್ನ ಕಣ್ಗಳನ್ ಅರೆ ತೆರೆದು… ದರ ನಿಮೀಲಿತ ಲೋಚನ ಕಮಲಾಕರಮಿರ್ಪಂತೆ ಇರ್ದ ಶಂತನು ತನೂಜನ ಕರ್ಣಾಭ್ಯರ್ಣಮಮ್ ಪೊರ್ದಿ ಸಂಜಯನ್ ಎಂದನ್.)
ಸಂಜಯ: ಅಜ್ಜಾ, ನಿಮ್ಮ ಮೊಮ್ಮನಪ್ಪ ಕುರುಕುಲ ಗಗನಗಭಸ್ತಿಮಾಲಿ ಬಾಹುಶಾಲಿ ದುರ್ಯೋಧನನ್ ಬಂದನ್.
(ಎಂದು ಬಿನ್ನಪಮ್ ಗೆಯ್ಯೆ,… ಯೋಗಿ ಯೋಗಾಭಿಯೋಗಮನ್ ಉಪಸಂಹರಿಸಿ… ತನ್ನ ಚರಣೋಪಾಂತ ಉತ್ತಮಾಂಗನಾಗಿರ್ದ ಪನ್ನಗಪತಾಕನನ್… ಕುರುಕುಲೋತ್ತಂಸನನ್… ಆಶೀರ್ವಚನ ಸಹಸ್ರಂಗಳಿಮ್ ಪರಸಿ… ದಿಕ್ಕರಿ ಕರಾನುಕಾರಿಗಳಪ್ಪ ನಿಜ ಭುಜಾದಂಡಂಗಳಿಂದೆ ತೆಗೆದಪ್ಪಿ ಬಾಷ್ಪಾಂಬುಪೂರಿತ ಲೋಚನನಾಗಿ… .)
ಭೀಷ್ಮ: ಧವಳ ಗಜೇಂದ್ರಮುಮ್… ಧವಳ ಚಾಮರಮುಮ್… ಧವಳಾತಪತ್ರಮುಮ್… ಧವಳ ವಿಲೋಚನ ಉತ್ಪಲ ವಧೂಜನಮುಮ್ ಬೆರಸು… ಕೀರ್ತಿಯಿಮ್ ಅಷ್ಟದಿಕ್ತಟಮ್ ಧವಳಿಸೆ… ಧವಳ ಮಂಗಳಗೇಯದಿನ್ ಒಪ್ಪಿ ಬರ್ಪ ಕೌರವಧವಳಂಗೆ… ದೇಸಿಗನೆ ಬರ್ಪವೊಲ್ ಒರ್ವನೆ ಬರ್ಪುದಾದುದೇ…
(ಎಂದು ಏಕಾಕಿಯಾಗಿ ಬಂದ ಧೃತರಾಷ್ಟ್ರನಂದನನ ಬರವಿನೊಳ್ ಸರಿತ್ಸುತನ್ ಸಮರ ವೃತ್ತಾಂತಮನ್ ಅರಿದು… ವಿಸ್ಮಯಾಕ್ರಾಂತಸ್ವಾಂತನುಮಾಗಿ ಶೋಕಂಗೆಯ್ಯೆ… ರಾಜರಾಜನ್ ನದೀತನೂಜನನ್ ಮಾಣಿಸಿ…)
ದುರ್ಯೋಧನ: ನೀವಪ್ಪೊಡೆ ವಿದಿತ ವೇದಿತವ್ಯರುಮ್ ಭಾವಿತಾತ್ಮರುಮ್ ಆಗಿರ್ದು, ಅಜ್ಞಾನಿಗಳಂತೆ ನೆಗಳಾಗದು.
(ಎಂದು ನಿಜಾಗಮನ ವೃತ್ತಾಂತಮಮ್… ಸಮರ ಪರಿಚ್ಛೇದಮುಮನ್ ಅರಿಪಿದೊಡೆ ಕಿರಿದಾನುಮ್ ಬೇಗಮ್ ಚಿಂತಾಕ್ರಾಂತನಾಗಿರ್ದು…)
ಭೀಷ್ಮ: ಮಗನೆ ಸೋಮವಂಶದಿಂದೆ ಅವಿಚ್ಛಿನ್ನಮಾಗಿ ಬಂದ ಭರತಾನ್ವಯದೊಳ್ ಇನ್ನೆವರೆಗಮ್ ಗೋತ್ರಕಲಹಮೆಂಬುದು ಆದುದಿಲ್ಲ. ನಿಮ್ಮೊಳಾದುದು. ಇನ್ನುಮ್ ಆನ್ ಎಂಬುದನ್ ಇಂಬುಕೆಯ್ವೆಯಪ್ಪೊಡೆ… ಪಾಂಡವರನ್ ಒಡಂಬಡಿಸಿ ಸಂಧಿಯಮ್ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾಳ್ಪೆನ್. ಇನ್ನುಮ್ ಅವರ್ ಎಮ್ಮ ಎಂದುದಮ್ ಮೀರುವರಲ್ಲ. ನೀನುಮ್ ಎಮ್ಮ ಪೇಳ್ದುದಮ್ ಮೀರದೆ ನೆಗಳಲ್ವೇಳ್ಕುಮ್.
(ಎನೆ, ಸುಯೋಧನನ್ ಮುಗುಳ್ನಗೆ ನಕ್ಕು…)
ದುರ್ಯೋಧನ: ನಿಮಗೆ ಪೊಡೆಮಟ್ಟು ಪೋಪುದೆ ಸಮಕಟ್ಟೆನೆ ಬಂದೆನ್. ಅಹಿತರೊಳ್ ಸಂಧಿಯನ್ ಏನ್ ಸಮಕೊಳಿಸಲೆಂದು ಬಂದೆನೆ. ಅಜ್ಜ, ಸಮರದೊಳ್ ಎನಗೆ ಆವುದು ಕಜ್ಜಮ್ ಪೇಳಿಮ್… ಪಾಂಡುಸುತರೊಳ್ ನೆಲಕೆ ಇರಿವೆನ್ ಎಂದು ಬಗೆದಿರೆ… ಚಲಕೆ ಇರಿವೆನ್… ಈ ನೆಲನ್… ಇದು ಪಾಳ್ನೆಲನ್ ಎನಗೆ… ದಿನಪಸುತನನ್ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೇ…
ಅನುಜಸಮೇತನೊಳ್ ಅಂತಕತನಯನೊಳ್ ಅನುಜವ್ಯಪೇತನ್ ದುರ್ಯೋಧನನ್ ಈಗಳ್ ಅಳಿಪಿ ಸಂಧಿ ಗೆಯ್ದೊಡೆ… ಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರೆನೇ… .ಕೂಡೆ ವಿರೋಧಿಯನ್ ತರಿದು ತದ್ವಶಮಾಂಸದೆ ಭೂತಭೋಜನಮ್ ಮಾಡದೆ… ವೈರಿವಾರ ವನಿತಾ ವದನಾಂಬುರುಹಂಗಳಮ್ ಬೆಳರ್ಮಾಡದೆ… ಬಂಧು ಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಮ್ ಮಾಡದೆ ಫಣಿರಾಜಕೇತನನ್ ಪಾಂಡವರೊಳ್ ಸಂಧಿ ಮಾಡುವನೆ…
ಅವರ್ ಮುನ್ ಬಾಡಮನ್ ಅಯ್ದನ್ ಬೇಡಿದೊಡೆ ಆನ್ ಇತ್ತೆನಿಲ್ಲ… ರಾಜ್ಯ ಅರ್ಧಮನ್ ಆನ್ ಬೇಡಿ ಅವರಲ್ಲಿಗೆ ಅಟ್ಟಿದೊಡೆ… ಪವನನಂದನನ್ ಎನ್ನನ್ ಏಡಿಸಿ ರೋಡಿಸನೆ… ಅಜ್ಜ, ಎನ್ನ ಅಣುಗಾಳನ್… ಎನ್ನ ಅಣುಗು ತಮ್ಮನನ್ ಇಕ್ಕಿದ ಪಾರ್ಥ ಭೀಮರ್ ಉಳ್ಳನ್ನೆಗಮ್… ಎನ್ನ ಒಡಲೊಳ್ ಎನ್ನ ಅಸು ಉಳ್ಳಿನಮ್…
ಸಂಧಿಯಮ್ ಒಲ್ಲೆನ್…
ಮುನ್ನಮ್ ಅವಂದಿರ್ ಇರ್ಬರುಮನ್ ಇಕ್ಕುವೆನ್… ಇಕ್ಕಿ ಬಳಿಕ್ಕೆ ನೆಗಳ್ದ ಅಂತಕಾತ್ಮಜನೊಳ್ ಸಂಧಿಗೆಯ್ವೆನ್… ಎನ್ನ ಅಳಲ್ ಆರಿದೊಡೆ ಆಗದು ಎಂಬೆನೇ… ಪುದುವಾಳಲ್ಕೆ ಅಣಮ್ ಆಗದು… ಎಂತುಮ್ ಅವರೊಳ್ ಸಂಧಾನಮನ್ ಮಾಡಲಾಗದು… ಅಜ್ಜ, ನೀಮ್ ಇಲ್ಲದೆ… ಬಿಲ್ಲಗುರುಗಳ್ ತಾಮಿಲ್ಲದೆ… ಆ ಕರ್ಣನಿಲ್ಲದೆ… ದುಶ್ಶಾಸನನಿಲ್ಲದೆ… ಆರೊಡನೆ ರಾಜ್ಯಮ್ ಗೆಯ್ವೆನ್…
ಆರ್ಗೆ ಎನ್ನ ಸಂಪದಮಮ್ ತೋರುವೆನ್… ಆರ್ಗೆ ತೋರಿ ಮೆರೆವೆನ್ ನಾನಾ ವಿನೋದಂಗಳಮ್… .ಖಂಡಿತಮ್ ಎನಿಪ್ಪ ಪರಮಹಿಮಂಡಲ ಧವಳಾತಪತ್ರ ಸಂಪದಮ್ ಎನಗೆ ಏಭಂಡಮ್… ಅದನ್ ಒಲ್ಲೆನ್ ಒಲ್ಲೆನ್… ಅಖಂಡಿತಮ್ ಅಭಿಮಾನಮ್ ಅದನೆ ಬಲ್ವಿಡಿವಿಡಿವೆನ್… ..ಪುಟ್ಟಿದ ನೂರ್ವರುಮ್ ಎನ್ನ ಒಡವುಟ್ಟಿದ ನೂರ್ವರುಮ್ ಇದಿರ್ಚಿ ಸತ್ತೊಡೆ… ಕೋಪಮ್ ಪುಟ್ಟಿ ಪೊದಳ್ದುದು… ಸತ್ತರ್ ಪುಟ್ಟರೆ… ಪಾಂಡವರೊಳ್ ಇರಿದು ಛಲಮನೆ ಮೆರೆವೆನ್…
ಕಾದದೆ ಇರೆನ್ ಅಜ್ಜ… ಇಂದಿನ ಒಂದೆ ಸಮರದೊಳ್ ಆನ್ ಆದೆನ್… ಮೇಣ್… ಪಾಂಡವರಾದರ್… ಅದರಿಂದೆ ಅವನಿತಳಮ್ ಕೌರವಂಗೆ ಆಯ್ತು… ಮೇಣ್… ಪಾಂಡವರ್ಗೆ ಆದುದು.(ಎಂದು ರಾಜಾಧಿರಾಜನ್ ನಿರ್ವ್ಯಾಜ ಶೌರ್ಯಾವಳಂಬಿಯಾಗಿ ನುಡಿಯೆ ಗಾಂಗೇಯನ್ ಅರಿದು ಅತಿವಿಸ್ಮಯಾಕುಲೀಕೃತಚಿತ್ತನಾಗಿ ಮುಹರ್ಮುಹುರ್ ಆಂದೋಳಿತ ಉತ್ತಮಾಂಗನುಮಾಗಿ…)
ಭೀಷ್ಮ: (ತಮ್ಮ ಮನದಲ್ಲಿ)
ಜತುಗೇಹಾನಲ ಬೀಜಮ್… ಉಗ್ರವಿಷಸಂಜಾತ ಅಂಕುರಮ್… ಕ್ರೀಡನೋದ್ಧತಿಕೃತ್ ದ್ಯೂತವಿನೋದ ಪಲ್ಲವಚಯಮ್… ಪಾಂಚಾಲರಾಜ ಆತ್ಮಜಾಯತಕೇಶಗ್ರಹ ಪುಷ್ಪಮಾಗೆ ಬೆಳೆದಾ ವೈರದ್ರುಮಮ್… ಕೌರವಕ್ಷಿತಿಪಾಲ ಊರು ಕಿರೀಟಭಂಗ ಫಲಮಮ್… ಪೇಳ್… ಮಾಡದೆ ಏನ್ ಪೋಕುಮೇ…
(ಎಂದು ನಿಶ್ಚಯಿಸಿ… .ಸಿಂಧುಸುತನ್ ನಿಜೋದರದಿಮ್ ಶರಮ್ ಒಂದನ್ ತೆಗೆದು ಲೆಕ್ಕಣಿಕೆ ಮಾಡಿ, ಗಜಮದಮಸಿಯಮ್ ತರಿಸಿ, ಪತಾಕಾಪಟದೊಳ್ ಬರೆದು ಅಂಧನೃಪತಿಗಮ್ ಅಟ್ಟಿದನ್… ..ಅಂತು ನಿಜನಾಮಾಂಕಿತ ಲೇಖನಮನ್ ಬರೆದು
“ಮೊಮ್ಮನ್ ನುಡಿದ ನುಡಿಯನ್ ಎಂತುಮ್ ಒಡಂಬಡುವನಲ್ಲನ್. ನೀನುಮ್ ಗಾಂಧಾರಿಯುಮ್ ಇರ್ದು, ಕುರುಕುಲ ಪ್ರದೀಪ ದುರ್ಯೋಧನನನ್ ಕೌಂತೇಯರೊಳ್ ಎಂತಾನುಮ್ ಸಂಧಿಯಮ್ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾಳ್ಪುದು”
(ಎಂದು ಸಂಜಯನ ಕಯ್ಯೊಳ್ ಕೊಟ್ಟು ಧೃತರಾಷ್ಟ್ರನಲ್ಲಿಗೆ ಅಟ್ಟುವುದುಮ್… ಕುರುರಾಜನ್ ಸಿಂಧುಸುತನ ಮೊಗಮನ್ ನೋಡಿ…)
ದುರ್ಯೋಧನ: ಅದು ಎನ್ನ ದೂಸರಿನ್ ತುಂಗ ಕುರುವಂಶಮ್ ಅಯಶೋಭಂಗಮ್ ಛಿದ್ರಿತಮ್ ಆಯ್ತು… ಆನುಮ್ ಗಡ ಕುರುರಾಜನೆ… ನೀಮುಮ್ ಗಡ ಸಂಧಾನವೇಳ್ದಿರ್… ಎನಗೆ ಅರಸು ಗಡಾ… .ವೀರವೃತ್ತಿ ಈ ಎನ್ನ ಎರಡುಮ್ ನಿಡುದೋಳ್ ಆಯತ್ತಮ್… ಜಯಮ್ ಎಂಬುದು ದೈವಾಯತ್ತಮ್… ಅಜ್ಜ, ಭರತಾನ್ವಾಯಕ್ಕೆ ಕಲಂಕಮಾಗದಂತಿರೆ ನೆಗಳ್ವೆನ್… ಅಜ್ಜ, ಮಂಗಳ ಮಹಾಶ್ರೀ ಸಂಧಿಕಾರ್ಯಕ್ಕೆ ಬೆಸಕೆಯ್ಯೆನ್…ಬಿಡಿಮ್… ನಿಮ್ಮಯ ಮಾತನ್ ಒರ್ಮೆಗೆ ಲಂಘಿಸಿದೆನ್… ಮದಾಜ್ಞಾಲಂಘನಮ್ ದೋಷಮ್ ಒಂದಿಸದು… ಇನ್ನು ಆಗ್ರಹಮಮ್ ಬಿಸುಳ್ಪುದು.
(ಎನೆ, ಸತ್ತ್ವಕ್ಕಮ್ ತದೇಕಾಂಗಸಾಹಸಕಮ್ ವಿಸ್ಮಯಮುತ್ತು ಮೆಚ್ಚಿ ಪೊಗಳ್ದನ್ ಮಂದಾಕಿನೀನಂದನನ್… .ಅಂತು ಗಾಂಗೇಯನ್ ಮನದೊಳ್ ಪೊಗಳ್ದನ್. “ಅಶುಭಸ್ಯ ಕಾಲಹರಣಮ್” ಎಂಬ ವಾಕ್ಯಾರ್ಥಮನ್ ಅವಧಾರಿಸಿ…)
ಭೀಷ್ಮ: ಮಗನೆ, ನೀನ್ ಎಂತುಮ್ ಎಮ್ಮ ಪೇಳ್ದುದಮ್ ಕಯ್ ಕೊಳ್ಳದೆ… ಛಲಮನೆ ಕಯ್ ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಇರೆನ್ ಎಂಬೆಯಪ್ಪೊಡೆ, ತೀರ್ಥಯಾತ್ರೆಗೆ ಪೋದ ಬಲದೇವನ್ ಬರ್ಪನ್ನೆಗಮ್ , ನೀನ್ ಇರ್ದ ಎಡೆಯನ್ ಅರಿಯದಂತು ಮೆಯ್ಗರೆದು ಅಶ್ವತ್ಥಾಮ ಕೃಪ ಕೃತವರ್ಮರ್ ಬರ್ಪನ್ನೆಗಮ್ ಕಾಲವಂಚನಮ್ ಗೆಯ್ವುದು… ಮೇಣ್… ಜಲಮಂತ್ರ ವಿದ್ಯಾಭ್ಯಾಸಮಮ್ ಕಯ್ ಕೊಂಡು… ಕುರುಕ್ಷೇತ್ರದ ಉತ್ತರ ದಿಶಾ ಭಾಗದೊಳ್ ಇರ್ಪ ವೈಶಂಪಾಯನ ಸರೋವರಮಮ್ ಪೊಕ್ಕಿರ್ದು… ಇಂದಿನ ಒಂದು ಇರುಳಮ್ ಕಳಿಪಿ, ನಾಳೆ ನೀನ್ ನೆಗಳ್ದುದಮ್ ನೆಗಳ್ದುದು.
(ಎನೆ…)
ದುರ್ಯೋಧನ: ಮಹಾಪ್ರಸಾದಮ್. ಇದನ್ ಒಡಂಬಟ್ಟೆನ್. ಅಂತೆ ಗೆಯ್ವೆನ್ .
(ಎಂದು ಹಿತೋಪದೇಶಮ್ ಬೆರಸು ಜಲಮಂತ್ರ ಉಪದೇಶಮಮ್ ಕಯ್ಕೊಂಡು ಕುರುಕುಲ ಪಿತಾಮಹನನ್ ಬೀಳ್ಕೊಂಡು ನಿಜಭುಜ ಗದಾಸಹಾಯನುಮ್ ಆಗಿ ಸಂಗ್ರಾಮ ಭೂಮಿಯೊಳಗನೆ ಬರುತ್ತುಮ್ ತನ್ನ ಅಂತರ್ಗತದೊಳ್..).
ಪದ ವಿಂಗಡಣೆ ಮತ್ತು ತಿರುಳು: ಬೀಶ್ಮರ ಹಿತನುಡಿ
ಸಂಜಯನ ಮಾತನ್ ಮೀರದೆ=ಸಂಜಯನ ಮಾತನ್ನು ತೆಗೆದುಹಾಕದೆ;
ಶರ+ಶಯನ+ಗತನ್+ಆಗಿ+ಇರ್ಪ; ಶರ=ಬಾಣ; ಶಯನ=ಹಾಸುಗೆ; ಗತ=ಒಳಗಿರುವ; ನದೀನಂದನ=ಗಂಗಾದೇವಿಯ ಮಗ ಬೀಶ್ಮ; ಚರಣ+ಅರವಿಂದ; ಚರಣ=ಪಾದ; ಅರವಿಂದ=ತಾವರೆ;
ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದ ವಂದನಮ್ ಗೆಯ್ಯಲೆಂದು=ಬಾಣಗಳ ಮಂಚದ ಮೇಲೆ ಮಲಗಿದ್ದ ಬೀಶ್ಮನ ಪಾದಕಮಲಗಳಿಗೆ ನಮಸ್ಕಾರವನ್ನು ಮಾಡಲೆಂದು;
ಗಾಂಧಾರಿಯ ನಂದನನ್ ಎಯ್ದೆವಂದನ್=ದುರ್‍ಯೋದನನು ಮುಂದೆ ನಡೆದು… ಹತ್ತಿರಕ್ಕೆ ಬಂದನು;
ಅಂತು ಎಯ್ದೆ ವಂದಾಗಲ್=ಆ ರೀತಿ ದುರ್‍ಯೋದನನು ಬಂದಾಗ ಶರಮಂಚದ ಮೇಲೆ ಹೇಗೆ ಮಲಗಿದ್ದ ಬೀಶ್ಮನ ಮಯ್ ಮನದ ಚಿತ್ರಣವನ್ನು ಕವಿಯು ಮುಂದಿನ ನುಡಿಗಳಲ್ಲಿ ಚಿತ್ರಿಸಿದ್ದಾನೆ;
ನರ=ಅರ್‍ಜುನ; ಶರ=ಬಾಣ; ಕೋಟಿ=ನೂರು ಲಕ್ಶ; ತನ್ನ=ಬೀಶ್ಮ;
ಜರ್ಜರ=ಗಾಯಗೊಂಡುದು/ಚಿದ್ರವಾದುದು;
ನರಶರಕೋಟಿ ತನ್ನ ಶರೀರಮನ್ ಜರ್ಜರಿಸೆ=ಅರ್‍ಜುನನು ಬಿಟ್ಟ ಲೆಕ್ಕವಿಲ್ಲದಶ್ಟು ಬಾಣಗಳು ಬೀಶ್ಮನ ದೇಹವನ್ನು ಚಿದ್ರಚಿದ್ರಗೊಳಿಸಿರಲು;
ಅಸ್ತ್ರವೇದನಾ ಪರವಶನಾಗಿಯುಮ್=ಬಾಣಗಳ ಪೆಟ್ಟಿನಿಂದಾದ ನೋವಿನಲ್ಲೇ ಮುಳುಗಿದ್ದರೂ;
ಮುಕುಂದನನ್ ಮರೆದನಿಲ್ಲ=ಕ್ರಿಶ್ಣನನ್ನು ಮರೆಯದೆ;
ಏಕಚಿತ್ತದಿಮ್ ಸ್ಮರಿಯಿಸುತಿರ್ದುಮ್=ಒಂದೇ ಮನಸ್ಸಿನಿಂದ ಕ್ರಿಶ್ಣನ ನಾಮಸ್ಮರಣೆಯನ್ನು ಮಾಡುತ್ತ;
ಅರಿ=ಶತ್ರು/ಹಗೆ;
ಅತ್ತಲ್ ಅರಿಭೂಪರಿನ್ ಕುರುಪತಿಗೆ ಎಂತುಟು ಅವಸ್ಥೆಯಾದುದೋ ಎಂದನ್=ಕುರುಕ್ಶೇತ್ರ ರಣರಂಗ ಹೋರಾಟದಲ್ಲಿ ಶತ್ರುರಾಜರಿಂದ ದುರ್‍ಯೋದನನಿಗೆ ಯಾವ ಅಪಾಯ ಉಂಟಾಯಿತೋ ಎಂದು ಬೀಶ್ಮನು ಆತಂಕಗೊಂಡಿದ್ದನು; ಪರಮ=ಉತ್ತಮ;
ಯೋಗಿ=ಕಾಮ/ಕ್ರೋದ/ಲೋಬ/ಮೋಹ/ಮದ/ಮಾತ್ಸರ್ಯಗಳೆಂಬ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವ ವ್ಯಕ್ತಿ;
ಆ ಪರಮಯೋಗಿಗಮ್ ಇಂತುಟು ಮೋಹಮಾಗದೇ=ಅಂತಹ ಪರಮಯೋಗಿಯಾದ ಬೀಶ್ಮನಿಗೂ ಇಂತಹ ಮೋಹ ಉಂಟಾಯಿತಲ್ಲವೇ;
ಅಂತು+ಇರ್ದ; ನದೀನಂದನ=ಬೀಶ್ಮ; ಮನ್ಯು=ಸಂಕಟ/ಶೋಕ; ಉದ್ಗತ=ಹೊರಹೊಮ್ಮಿದ;
ಅಂತಿರ್ದ ನದೀನಂದನನನ್ ರಾಜರಾಜನ್ ನೋಡಿ ಮನ್ಯೂದ್ಗತ ಕಂಠನಾಗಿ=ಆ ರೀತಿ ಮೊನಚಾದ ಬಾಣಗಳ ಹಾಸುಗೆಯೆ ಮೇಲೆ ಮಲಗಿ, ನೋವಿನಿಂದ ನರಳುತ್ತಿರುವ ಬೀಶ್ಮನನ್ನು ದುರ್‍ಯೋದನನು ನೋಡನೋಡುತ್ತಿದ್ದಂತೆಯೇ ಕೊರಳಿನಲ್ಲಿ ಉಕ್ಕಿಬಂದ ಸಂಕಟದಿಂದ ಗದ್ಗದಿತನಾಗಿ;
ಒಕ್ಕು=ಬಿಡು/ತೊರೆದು; ಇಳಿಂಕೆ=ತಿರಸ್ಕಾರ/ಕಡೆಗಣಿಸು;
ವಿನಯಮನ್ ಒಕ್ಕು=ವಿನಯದಿಂದ ನಡೆದುಕೊಳ್ಳದೆ;
ನಿಮ್ಮ ಗುರುವೃದ್ಧರ ಪೇಳ್ದ ಹಿತೋಪದೇಶಮಮ್ ಮನದೊಳ್ ಇಳಿಂಕೆಗೊಂಡು=ನಿಮ್ಮಂತಹ ಗುರುಹಿರಿಯರು ಹೇಳಿದ ಹಿತನುಡಿಗಳನ್ನು ಮನಸ್ಸಿಗೆ ಹಾಕಿಕೊಳ್ಳದೆ ಕಡೆಗಣಿಸಿ;
ಅನಿಲ=ವಾಯುದೇವ; ನಂದನ=ಮಗ; ಅನಿಲನಂದನ=ವಾಯುದೇವನ ಅನುಗ್ರಹದಿಂದ ಕುಂತಿಯಲ್ಲಿ ಹುಟ್ಟಿದ ಮಗನಾದ ಬೀಮ; ಇಂದ್ರನಂದನ=ದೇವತೆಯಾದ ಇಂದ್ರನ ಅನುಗ್ರಹದಿಂದ ಕುಂತಿಯಲ್ಲಿ ಹುಟ್ಟಿದ ಮಗನಾದ ಅರ್‍ಜುನ;
ಅನಿಲನಂದನ ವೈರದೆ… ನಿಮ್ಮನ್ ಇಂದ್ರನಂದನನೊಡನೆ ಆನೆ ಕಾದಿಸಿದೆನ್=ಬೀಮನೊಡನೆ ಹಗೆತನವನ್ನು ಕಟ್ಟಿಕೊಂಡ ಕಾರಣದಿಂದ ಉಂಟಾದ ಕುರುಕ್ಶೇತ್ರ ರಣರಂಗದಲ್ಲಿ ಅರ್‍ಜುನನೊಡನೆ ನಾನೇ ಕಾದಾಡುವಂತೆ ಮಾಡಿದೆನು;
ಕಡಂಗು=ಹುರುದುಂಬಿಸು/ಪ್ರೇರೇಪಿಸು;
ಆನೆ ಕಡಂಗಿದೆನ್=ನಾನೇ ನಿಮ್ಮನ್ನು ಯುದ್ದಮಾಡಲು ಪ್ರೇರೇಪಿಸಿದೆನು; ಕತ=ಕಾರಣ/ನಿಮಿತ್ತ;
ಸಿಂಧುನಂದನ=ಗಂಗಾದೇವಿಯ ಮಗ ಬೀಶ್ಮ;
ಸಿಂಧುನಂದನಾ, ಎನ್ನ ಪಾಪಕರ್ಮನ ಕತದಿಂದಮ್ ಈ ನಿಮಗಮ್ ಈ ಇರವು ಆದುದೆ ಎಂದು… ಪಶ್ಚಾತ್ತಾಪಮ್ ಗೆಯ್ಯುತುಮ್ ಮುಂಬರ್ಪ… ತನ್ನ ಮೊಮ್ಮನ ಕಾಲ ಸೊಪ್ಪುಳಮ್ ಕೇಳ್ದು=ಅಜ್ಜಾ, ನನ್ನಂತಹ ಪಾಪಿಯ ಕಾರಣದಿಂದಾಗಿ ನಿಮಗೆ ಇಂತಹ ಸ್ತಿತಿಯು ಬಂದೊದಗಿತು ಎಂದು ಪಶ್ಚಾತ್ತಾಪಪಡುತ್ತ, ತನ್ನ ಮುಂದೆ ಬಂದ ಮೊಮ್ಮಗನಾದ ದುರ್‍ಯೋದನನ ಕಾಲ ಸಪ್ಪುಳವನ್ನು ಕೇಳಿ;
ವಿಕಚ=ಅರಳಿದ/ಬಿರಿದ; ಧವಳ=ಬಿಳುಪು; ಕುವಲಯ=ತಾವರೆ; ವಿಲಾಸಿತ+ಉಪಹಾಸಿಗಳ್+ಉಮ್; ವಿಲಾಸಿತ=ಉಲ್ಲಾಸಗೊಳಿಸುವ; ಉಪಹಾಸಿ=ತಿರಸ್ಕರಿಸುವ;
ವಿಕಚ ಧವಳ ಕುವಲಯ ವಿಲಾಸಿತೋಪಹಾಸಿಗಳುಮ್=ಅರಳಿದ ಬೆಳ್ದಾವರೆಯ ಹೂವಿನ ದಳಗಳಿಗಿಂತ ಸುಂದರವಾಗಿರುವ;
ಕರ್ಣ+ಅಂತ; ಕರ್ಣ=ಕಿವಿ;
ಕರ್ಣಾಂತ ವಿಶ್ರಾಂತಂಗಳುಮಪ್ಪ ತನ್ನ ಕಣ್ಗಳನ್ ಅರೆತೆರೆದು=ಕಿವಿಯವರೆಗೂ ಹಬ್ಬಿದ್ದ ತನ್ನ ಕಣ್ಣುಗಳನ್ನು ಸ್ವಲ್ಪ ತೆರೆದು;
ದರ=ಸ್ವಲ್ಪ/ತುಸು; ನಿಮೀಲಿತ=ಮುಚ್ಚಿದ; ಲೋಚನ=ಕಾಣಿಸುವ; ಕಮಲ+ಆಕರಮ್+ಇರ್ಪ+ಅಂತೆ; ಆಕರ=ಹುಟ್ಟುವ ಜಾಗ; ಕಮಲಾಕರ=ಸರೋವರ; ಶಂತನು ತನೂಜ=ಶಂತನು ರಾಜ ಮತ್ತು ಗಂಗಾದೇವಿಯ ಮಗನಾದ ಬೀಶ್ಮ; ಕರ್ಣ+ಅಭ್ಯರ್ಣಮ್+ಅಮ್; ಅಭ್ಯರ್ಣ=ಸಮೀಪ/ಹತ್ತಿರ/ಪಕ್ಕ; ಪೊರ್ದು=ಬಳಿಸಾರು/ಹತ್ತಿರಕ್ಕೆ ಬರು;
ದರನಿಮೀಲಿತ ಲೋಚನ ಕಮಲಾಕರಮಿರ್ಪಂತೆ ಇರ್ದ ಶಂತನು ತನೂಜನ ಕರ್ಣಾಭ್ಯರ್ಣಮಮ್ ಪೊರ್ದಿ ಸಂಜಯನ್ ಎಂದನ್=ಅರೆಮುಚ್ಚಿದ ತಾವರೆ ಹೂವಿನ ಕೊಳದಂತೆ ಕಾಣಿಸುತ್ತಿದ್ದ ಬೀಶ್ಮನ ಕಿವಿಯ ಹತ್ತಿರಕ್ಕೆ ಬಂದು ಸಂಜಯನು ಈ ರೀತಿ ಹೇಳಿದನು;
ಗಗನ=ಆಕಾಶ; ಗಭಸ್ತಿಮಾಲಿ=ಸೂರ್‍ಯ;
ಅಜ್ಜಾ, ನಿಮ್ಮ ಮೊಮ್ಮನಪ್ಪ ಕುರುಕುಲ ಗಗನಗಭಸ್ತಿಮಾಲಿ ಬಾಹುಶಾಲಿ ದುರ್ಯೋಧನನ್ ಬಂದನ್ ಎಂದು ಬಿನ್ನಪಮ್ ಗೆಯ್ಯೆ=ಅಜ್ಜಾ, ನಿಮ್ಮ ಮೊಮ್ಮಗನಾದ ಕುರುಕುಲವನ್ನು ಬೆಳಗುವ ಸೂರ್ಯನೂ ಬಲಶಾಲಿಯೂ ಆದ ದುರ್‍ಯೋದನನು ನಿಮ್ಮನ್ನು ನೋಡಲು ಬಂದಿದ್ದಾನೆ ಎಂದು ಅರಿಕೆ ಮಾಡಿಕೊಳ್ಳಲು;
ಯೋಗಿ=ತಪಸ್ವಿಯಂತಹ ವ್ಯಕ್ತಿತ್ವವುಳ್ಳ ಬೀಶ್ಮ; ಯೋಗ+ಅಭಿಯೋಗಮ್+ಅನ್; ಅಭಿಯೋಗ=ಆಸಕ್ತಿ; ಉಪಸಂಹರಿಸು=ನಿಲ್ಲಿಸು;
ಯೋಗಿ ಯೋಗಾಭಿಯೋಗಮನ್ ಉಪಸಂಹರಿಸಿ=ಬೀಶ್ಮನು ತನ್ನ ದ್ಯಾನವನ್ನು ನಿಲ್ಲಿಸಿ; ಉತ್ತಂಸ=ತಲೆಯಲ್ಲಿ ತೊಡುವ ಒಡವೆ/ಪ್ರಮುಕ ವ್ಯಕ್ತಿ; ಕುರುಕುಲೋತ್ತಂಸ=ಕುರುಕುಲದ ಪ್ರಮುಕ;
ತನ್ನ ಚರಣೋಪಾಂತ ಉತ್ತಮಾಂಗನಾಗಿರ್ದ ಪನ್ನಗಪತಾಕನನ್… ಕುರುಕುಲೋತ್ತಂಸನನ್… ಆಶೀರ್ವಚನ ಸಹಸ್ರಂಗಳಿಮ್ ಪರಸಿ=ತನ್ನ ಪಾದಗಳ ಬಳಿ ತಲೆಯೊಡ್ಡಿ ನಮಿಸುತ್ತಿದ್ದ ದುರ್‍ಯೋದನನನ್ನು… ಕುರುಕುಲದ ಪ್ರಮುಕನನ್ನು ಹತ್ತಾರು ಬಗೆಯ ಒಳ್ಳೆಯ ಮಾತುಗಳಿಂದ ಆಶೀರ್‍ವದಿಸಿ;
ದಿಕ್+ಕರಿ+ಕರ+ಅನುಕಾರಿಗಳ್+ಅಪ್ಪ; ಕರಿ=ಆನೆ; ಕರ=ಸೊಂಡಿಲು; ಅನುಕಾರಿ=ಹೋಲುವಂತಹ; ನಿಜ+ಭುಜಾ+ದಂಡಂಗಳ್+ಇಂದೆ; ನಿಜ=ತನ್ನ;
ದಿಕ್ಕರಿಕರಾನುಕಾರಿಗಳಪ್ಪ ನಿಜಭುಜಾದಂಡಂಗಳಿಂದೆ ತೆಗೆದಪ್ಪಿ=ಬೀಶ್ಮನು ದಿಗ್ಗಜದ ಸೊಂಡಿಲುಗಳಂತಿರುವ ತನ್ನ ದೊಡ್ಡ ತೋಳುಗಳಿಂದ ದುರ್‍ಯೋದನನನ್ನು ಅಪ್ಪಿಕೊಂಡು;
ಬಾಷ್ಪಾಂಬು=ಕಣ್ಣೀರು; ಪೂರಿತ=ತುಂಬಿದ;
ಬಾಷ್ಪಾಂಬುಪೂರಿತ ಲೋಚನನಾಗಿ=ಕಂಬನಿ ತುಂಬಿದ ಕಣ್ಣುಳ್ಳವನಾಗಿ;
ಧವಳ=ಬಿಳಿಪು/ಬಿಳಿಯ; ಗಜೇಂದ್ರ=ಪಟ್ಟದ ಆನೆ; ಚಾಮರ=ಚಮರವೆಂಬ ಪ್ರಾಣಿಯ ಕೂದಲಿನಿಂದ ಮಾಡಿದ ದೊಡ್ಡ ಆಕಾರದ ಬೀಸಣಿಗೆ; ಧವಳ+ಆತಪತ್ರ; ಆತಪತ್ರ=ಕೊಡೆ; ಧವಳಾತಪತ್ರ=ಬೆಳ್ಗೊಡೆ; ಉತ್ಪಲ=ತಾವರೆ; ವಧೂಜನ=ಹೆಂಗಸರು;
ಧವಳ ಗಜೇಂದ್ರಮುಮ್… ಧವಳ ಚಾಮರಮುಮ್… ಧವಳಾತಪತ್ರಮುಮ್… ಧವಳ ವಿಲೋಚನ ಉತ್ಪಲ ವಧೂಜನಮುಮ್ ಬೆರಸು=ರಾಜಲಾಂಚನಗಳಾದ ಬಿಳಿಯ ಪಟ್ಟದಾನೆ… ಬಿಳಿಯ ಚಾಮರ… ಬೆಳ್ಗೊಡೆ… ಬೆಳ್ದಾವರೆಯನ್ನು ಹೋಲುವಂತಹ ಕಣ್ಣುಗಳ ಕಾಂತಿಯಿಂದ ಕೂಡಿರುವ ರಾಜಪರಿವಾರದ ಹೆಂಗಸರಿಂದ ಕೂಡಿ;
ಕೀರ್ತಿಯಿಮ್ ಅಷ್ಟದಿಕ್ತಟಮ್ ಧವಳಿಸೆ=ಕೀರ್‍ತಿಯಿಂದ ಎಂಟು ದಿಕ್ಕುಗಳು ಬೆಳಗುತ್ತಿರಲು;
ಧವಳ ಮಂಗಳಗೇಯದಿನ್ ಒಪ್ಪಿ ಬರ್ಪ ಕೌರವಧವಳಂಗೆ=ಒಳಿತನ್ನುಂಟು ಮಾಡುವ ಮಂಗಳಕರವಾದ ಸ್ತುತಿಗೀತೆಯಿಂದ ಒಡಗೂಡಿ ಕಂಗೊಳಿಸುತ್ತ ಬರುವ ಕುರುಕುಲದ ಪ್ರಮುಕನಿಗೆ; ದೇಸಿಗ=ಗತಿಗೆಟ್ಟವನು/ದಿಕ್ಕಿಲ್ಲದವನು;
ದೇಸಿಗನೆ ಬರ್ಪವೊಲ್ ಒರ್ವನೆ ಬರ್ಪುದಾದುದೇ ಎಂದು=ಗತಿಗೇಡಿಯು ಬರುವಂತೆ ಒಬ್ಬನೇ ಬರುವಂತಾದುದೇ ಎಂದು ಬೀಶ್ಮನು ಸಂಕಟಪಡುತ್ತ;
ಸರಿತ್ಸುತ=ಗಂಗೆಯ ಮಗನಾದ ಬೀಶ್ಮ;
ಏಕಾಕಿಯಾಗಿ ಬಂದ ಧೃತರಾಷ್ಟ್ರನಂದನನ ಬರವಿನೊಳ್ ಸರಿತ್ಸುತನ್ ಸಮರ ವೃತ್ತಾಂತಮನ್ ಅರಿದು=ಒಬ್ಬಂಟಿಯಾಗಿ ಬಂದ ದುರ್‍ಯೋದನನ ಬರುವಿಕೆಯಿಂದಲೇ ಬೀಶ್ಮನು ಕುರುಕ್ಶೇತ್ರ ಯುದ್ದದಲ್ಲಿ ದುರ್‍ಯೋದನನಿಗೆ ಒದಗಿರುವ ದುರಂತವನ್ನು ಅರಿತುಕೊಂಡು;
ವಿಸ್ಮಯ+ಆಕ್ರಾಂತ+ಸ್ವಾಂತನುಮ್+ಆಗಿ; ವಿಸ್ಮಯ=ಅಚ್ಚರಿ; ಆಕ್ರಾಂತ=ಕವಿ/ಆವರಿಸು; ಸ್ವಾಂತ=ಮನಸ್ಸು;
ವಿಸ್ಮಯಾಕ್ರಾಂತಸ್ವಾಂತನುಮಾಗಿ ಶೋಕಂಗೆಯ್ಯೆ=ರಾಜನಾಗಿರುವ ದುರ್‍ಯೋದನನಿಗೆ ಇಂತಹ ದುರ್‍ಗತಿ ಬಂದಿತಲ್ಲಾ ಎಂಬ ಅಚ್ಚರಿಯಿಂದ ಗಾಸಿಗೊಂಡ ಮನಸ್ಸಿನವನಾಗಿ ಬೀಶ್ಮನು ಶೋಕಿಸುತ್ತಿರಲು;
ರಾಜರಾಜನ್ ನದೀತನೂಜನನ್ ಮಾಣಿಸಿ=ದುರ್‍ಯೋದನನು ಬೀಶ್ಮನನ್ನು ಶೋಕಿಸದಂತೆ ತಡೆದು;
ನೀವ್+ಅಪ್ಪೊಡೆ; ಅಪ್ಪೊಡೆ=ಆದರೆ; ವಿದಿತ=ಹೆಸರಾಂತ; ವೇದಿತವ್ಯರು=ತಿಳಿದವರು/ಅರಿತವರು; ಭಾವಿತಾತ್ಮರು=ಒಳಿತು ಕೆಡುಕುಗಳ ಸ್ವರೂಪವನ್ನು ಅರಿತವರು; ನೆಗಳ್=ಮಾಡು/ತೊಡಗು;
ನೀವಪ್ಪೊಡೆ ವಿದಿತವೇದಿತವ್ಯರುಮ್ ಭಾವಿತಾತ್ಮರುಮ್ ಆಗಿರ್ದು ಅಜ್ಞಾನಿಗಳಂತೆ ನೆಗಳಾಗದು ಎಂದು=ನೀವಾದರೆ ಒಳ್ಳೆಯ ತಿಳುವಳಿಕೆಯನ್ನು ಪಡೆದವರು ಮತ್ತು ಒಳಿತು ಕೆಡುಕುಗಳನ್ನು ಒರೆಹಚ್ಚಿ ನೋಡಬಲ್ಲವರು. ಜ್ನಾನಿಗಳಾಗಿರುವ ನೀವು ಅಜ್ನಾನಿಗಳಂತೆ ನಡೆದುಕೊಳ್ಳಬಾರದು ಎಂದು ಬೀಶ್ಮರನ್ನು ಸಮಾದಾನಪಡಿಸಿ;
ನಿಜ=ತನ್ನ;
ನಿಜಾಗಮನ ವೃತ್ತಾಂತಮಮ್=ತಾನು ಬಂದ ಸಂಗತಿಯನ್ನು;
ಸಮರ=ಯುದ್ದ; ಪರಿಚ್ಛೇದ=ನಿಶ್ಚಿತವಾದ ತೀರ್‍ಮಾನ/ನಿರ್‍ಣಯ;
ಸಮರ ಪರಿಚ್ಛೇದಮುಮನ್ ಅರಿಪಿದೊಡೆ=ಕುರುಕ್ಶೇತ್ರ ಯುದ್ದದಲ್ಲಿ ಪಾಂಡವರೊಡನೆ ಹೋರಾಡಲೇಬೇಕೆಂಬ ತನ್ನ ನಿಶ್ಚಿತವಾದ ನಿರ್‍ದಾರವನ್ನು ತಿಳಿಸಿದಾಗ;
ಕಿರಿದಾನುಮ್ ಬೇಗಮ್ ಚಿಂತಾಕ್ರಾಂತನಾಗಿರ್ದು=ಬೀಶ್ಮನು ತುಸು ಸಮಯ ತನ್ನಲ್ಲಿಯೇ ಚಿಂತೆಗೆ ಒಳಗಾಗಿದ್ದು, ಅನಂತರ ದುರ್‍ಯೋದನನಿಗೆ ಈ ರೀತಿ ಹೇಳತೊಡಗುತ್ತಾನೆ;
ಅವಿಚ್ಛಿನಮ್+ಆಗಿ; ಅವಿಚ್ಛಿನ್ನ=ಎಡೆಬಿಡದೆ/ನಿರಂತರವಾಗಿ; ಭರತ+ಅನ್ವಯದೊಳ್; ಅನ್ವಯ=ವಂಶ/ಕುಲ; ಗೋತ್ರಕಲಹ=ಒಂದೇ ಮನೆತನದಲ್ಲಿ ಹುಟ್ಟಿ ಬೆಳೆದ ಮಕ್ಕಳ ನಡುವೆ ನಡೆಯುವ ಜಗಳ/ಕಾದಾಟ/ಹೊಡೆದಾಟ;
ಮಗನೆ ಸೋಮವಂಶದಿಂದೆ ಅವಿಚ್ಛಿನ್ನಮಾಗಿ ಬಂದ ಭರತಾನ್ವಯದೊಳ್ ಇನ್ನೆವರೆಗಮ್ ಗೋತ್ರಕಲಹಮೆಂಬುದು ಆದುದಿಲ್ಲ=ಮಗನೆ, ಸೋಮವಂಶದಿಂದ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಬಾಳಿಬಂದ ಬರತವಂಶದಲ್ಲಿ ಇದುವರೆಗೂ ಅಣ್ಣತಮ್ಮಂದಿರ ನಡುವೆ ದಾಯಾದಿ ಕಲಹ ನಡೆದಿರಲಿಲ್ಲ;
ನಿಮ್ಮೊಳಾದುದು=ನಿಮ್ಮ ತಲೆಮಾರಿನಲ್ಲಿ ಆಯಿತು;
ಇಂಬುಕೆಯ್=ಒಪ್ಪಿಕೊ/ಸಮ್ಮತಿಸು; ಒಡಂಬಡಿಸು=ಒಪ್ಪಿಸು;
ಇನ್ನುಮ್ ಆನ್ ಎಂಬುದನ್ ಇಂಬುಕೆಯ್ವೆಯಪ್ಪೊಡೆ ಪಾಂಡವರನ್ ಒಡಂಬಡಿಸಿ ಸಂಧಿಯಮ್ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾಳ್ಪೆನ್=ಈಗಲೂ ನಾನು ಹೇಳುವುದನ್ನು ನೀನು ಒಪ್ಪಿಕೊಳ್ಳುವುದಾದರೆ, ಪಾಂಡವರನ್ನು ಒಪ್ಪಿಸಿ ಸಂದಿಯನ್ನು ಮಾಡಿ, ಈ ಮೊದಲು ನೀನು ಹಸ್ತಿನಾವತಿಯಲ್ಲಿ, ಪಾಂಡವರು ಇಂದ್ರಪ್ರಸ್ತದಲ್ಲಿ ರಾಜ್ಯವಾಳುತ್ತಿದ್ದಂತೆ ಮಾಡುತ್ತೇನೆ;
ಇನ್ನುಮ್ ಅವರ್ ಎಮ್ಮ ಎಂದುದಮ್ ಮೀರುವರಲ್ಲ=ಈಗಲೂ ಅವರು ನಾವು ಹೇಳಿದ ಮಾತನ್ನು ಕಡೆಗಣಿಸುವುದಿಲ್ಲ;
ನೀನುಮ್ ಎಮ್ಮ ಪೇಳ್ದುದಮ್ ಮೀರದೆ ನೆಗಳಲ್ವೇಳ್ಕುಮ್ ಎನೆ=ನೀನು ಕೂಡ ನಾವು ಹೇಳುವುದನ್ನು ಕಡೆಗಣಿಸದೆ ನಡೆದುಕೊಳ್ಳಬೇಕು ಎಂದು ಬೀಶ್ಮನು ಹಿತನುಡಿಯನ್ನಾಡಲು;
ಸುಯೋಧನನ್ ಮುಗುಳ್ನಗೆ ನಕ್ಕು=ಬೀಶ್ಮನ ನುಡಿಗಳನ್ನು ಕೇಳಿ ದುರ್‍ಯೋದನನು ಮುಗುಳ್ನಗೆ ನಕ್ಕು; ಈ ಮುಗುಳ್ನಗೆಯು ಆನಂದದ ಇಲ್ಲವೇ ಮೆಚ್ಚುಗೆಯಿಂದ ಬಂದ ನಗೆಯಲ್ಲ; ವಿಶಾದದ ನಗೆ; ಸಾವುನೋವಿನ ಸಂಕಟದಲ್ಲಿ ಬೇಯುತ್ತಿರುವ ತನ್ನ ಮುಂದೆ ಸಂದಿಯ ಮಾತು ಪ್ರಸ್ತಾಪವಾಗುತ್ತಿರುವುದು ದುರ್‍ಯೋದನನಿಗೆ ಅಪಾರವಾದ ಯಾತನೆಯನ್ನುಂಟುಮಾಡುತ್ತಿದೆ. ಆ ಯಾತನೆಯನ್ನು ಹತ್ತಿಕ್ಕಲಾಗದೆ “ಅಯ್ಯೋ” ಎಂಬ ಸಂಕಟದ ಬದಲು ಈ ರೀತಿ ನಕ್ಕಿದ್ದಾನೆ;
ಪೊಡೆಮಡು=ನಮಸ್ಕರಿಸು; ಸಮಕಟ್ಟು=ಉಚಿತವಾದುದು/ಸರಿಯಾದುದು/ಯೋಗ್ಯವಾದುದು; ಅಹಿತರು=ಹಗೆಗಳು; ಸಮಕೊಳಿಸು=ಏರ್‍ಪಡಿಸು/ಸಜ್ಜುಗೊಳಿಸು;
ನಿಮಗೆ ಪೊಡೆಮಟ್ಟು ಪೋಪುದೆ ಸಮಕಟ್ಟೆನೆ ಬಂದೆನ್… ಅಹಿತರೊಳ್ ಸಂಧಿಯನ್ ಏನ್ ಸಮಕೊಳಿಸಲೆಂದು ಬಂದೆನೆ=ನಿಮಗೆ ನಮಸ್ಕಾರವನ್ನು ಮಾಡಿ ಹೋಗುವುದು ಒಳ್ಳೆಯದೆಂದು ತಿಳಿದು ಬಂದೆನೇ ಹೊರತು… ನಾನೇನು ಹಗೆಗಳಾದ ಪಾಂಡವರೊಡನೆ ಸಂದಿಯನ್ನು ಮಾಡಿಕೊಳ್ಳಲು ಬಂದಿದ್ದೇನೆಯೇ; ಕಜ್ಜ=ಕಾರ್‍ಯ/ಕೆಲಸ;
ಅಜ್ಜ, ಸಮರದೊಳ್ ಎನಗೆ ಆವುದು ಕಜ್ಜಮ್ ಪೇಳಿಮ್=ಅಜ್ಜ, ಕುರುಕ್ಶೇತ್ರ ಯುದ್ದದಲ್ಲಿ ನಾನು ಮಾಡಬೇಕಾದ ಕಾರ್‍ಯವೇನೆಂಬುದನ್ನು ಹೇಳಿರಿ;
ಪಾಂಡುಸುತರೊಳ್ ನೆಲಕೆ ಇರಿವೆನ್ ಎಂದು ಬಗೆದಿರೆ… ಚಲಕೆ ಇರಿವೆನ್=ಪಾಂಡವರೊಡನೆ ನೆಲಕ್ಕಾಗಿ ಯುದ್ದ ಮಾಡುತ್ತಿರುವೆನೆಂದು ಬಾವಿಸಿದ್ದೀರಾ… ಇಲ್ಲ… ಚಲಕ್ಕಾಗಿ ಹೋರಾಡುತ್ತಿದ್ದೇನೆ;
ಈ ನೆಲನ್ ಇದು ಪಾಳ್ನೆಲನ್ ಎನಗೆ=ಈ ನೆಲವಿದು ನನ್ನ ಪಾಲಿಗೆ ಹಾಳುಬಿದ್ದ ನೆಲ;
ದಿನಪಸುತನನ್ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೇ=ಕರ್‍ಣನನ್ನು ಕೊಲ್ಲಿಸಿದ ಈ ನೆಲದೊಡನೆ ಮತ್ತೆ ನಾನು ಹೊಂದಿಕೊಂಡು ಬಾಳುತ್ತೇನೆಯೇ; ಕುರುಕ್ಶೇತ್ರ ರಣರಂಗದಲ್ಲಿ ಹರಡಿದ್ದ ನೆತ್ತರಿನ ಕೆಸರಿನಲ್ಲಿ ಕರ್‍ಣನ ತೇರಿನ ಚಕ್ರ ಹೂತುಹೋಗಿದ್ದಾಗ, ಸಾರತಿಯಿಲ್ಲದ ಕಾರಣದಿಂದ ಕರ್‍ಣನು ತಾನೇ ತೇರಿನಿಂದ ಇಳಿದುಬಂದು, ನೆತ್ತರಿನ ಕೆಸರಿನ ಆಳದಿಂದ ಚಕ್ರವನ್ನು ಮೇಲೆ ಎತ್ತುತ್ತಿದ್ದಾಗ ಕ್ರಿಶ್ಣನು ಅರ್‍ಜುನನಿಗೆ “ಕರ್‍ಣನನ್ನು ಕೊಲ್ಲಲು ಇದೇ ಸರಿಯಾದ ಸಮಯ” ಎಂದು ಹೇಳಿ ಚಿತಾವಣೆ ಮಾಡುತ್ತಾನೆ. ಕರ್‍ಣನ ಹೋರಾಟದ ಸಮಯದಲ್ಲಿ ಇಂತಹ ಅಡೆತಡೆಗೆ ನೆಲವು ಕಾರಣವಾಯಿತೆಂಬ ಆಕ್ರೋಶ ದುರ್‍ಯೋದನನ ಮನದಲ್ಲಿದೆ;
ಅನುಜ=ತಮ್ಮ; ಅಂತಕ=ಯಮ; ಅಂತಕತನಯ=ಯಮದೇವನ ಅನುಗ್ರಹದಿಂದ ಹುಟ್ಟಿರುವ ದರ್‍ಮರಾಯ;
ಅನುಜವ್ಯಪೇತನ್=ತಮ್ಮಂದಿರನ್ನು ಕಳೆದುಕೊಂಡವನು; ಅಳಿಪಿ=ಆಸೆಪಟ್ಟು; ಮುನಿವರು=ಹಗೆಗಳು; ಮೆಚ್ಚುವರು=ಪ್ರೀತಿಸುವವರು; ಪಕ್ಕು=ಗುರಿ; ನುಡಿಗೆ ಪಕ್ಕಾಗು=ಅಣಕದ ಮಾತುಗಳಿಗೆ ಗುರಿಯಾಗು;
ಅನುಜಸಮೇತನೊಳ್ ಅಂತಕತನಯನೊಳ್ ಅನುಜವ್ಯಪೇತನ್ ದುರ್ಯೋಧನನ್ ಈಗಳ್ ಅಳಿಪಿ ಸಂಧಿ ಗೆಯ್ದೊಡೆ ಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರೆನೇ=ತಮ್ಮಂದಿರ ಒಡಗೂಡಿರುವ ದರ್‍ಮರಾಯನ ಜತೆಯಲ್ಲಿ ತಮ್ಮಂದಿರೆಲ್ಲರನ್ನೂ ಕಳೆದುಕೊಂಡಿರುವ ನಾನು ಈಗ ಅರ್‍ದ ರಾಜ್ಯದ ಆಸೆಗಾಗಿ ಸಂದಿಯನ್ನು ಮಾಡಿಕೊಂಡರೆ, ನನ್ನ ಹಗೆಗಳು ಮಾತ್ರವಲ್ಲ… ನನ್ನನ್ನು ಮೆಚ್ಚುವವರು ಕೂಡ ನನ್ನನ್ನು ಹಂಗಿಸಿ ನುಡಿಯುವುದಿಲ್ಲವೇ; ಎಲ್ಲರ ಕಣ್ಣಿಗೆ ನಾನೊಬ್ಬ ಕೀಳು ವ್ಯಕ್ತಿಯಾಗಿ ಕಾಣುವುದಿಲ್ಲವೇ; ಭೂತಭೋಜನ=ಸತ್ತು ಬಿದ್ದಿರುವ ಹೆಣಗಳನ್ನು ನಾಯಿನರಿ ಮುಂತಾದ ಪ್ರಾಣಿಗಳು ತಿನ್ನುವುದಲ್ಲದೆ, ದೆವ್ವಗಳು ತಿನ್ನುತ್ತವೆ ಎನ್ನುವ ಕಲ್ಪನೆಯೊಂದು ಜನಮನದಲ್ಲಿದೆ;
ಕೂಡೆ ವಿರೋಧಿಯನ್ ತರಿದು ತದ್ವಶಮಾಂಸದೆ ಭೂತಭೋಜನಮ್ ಮಾಡದೆ=ಈಗ ಹಗೆಯನ್ನು ಕತ್ತರಿಸಿ ಕೊಂದು, ಅವನ ಮಾಂಸದಿಂದ ಬೂತಬೋಜನವನ್ನು ಮಾಡದೆ;
ವಾರ=ಗುಂಪು/ಸಮೂಹ; ವೈರಿವಾರ=ಹಗೆಗಳ ಗುಂಪು; ವನಿತಾ=ಹೆಂಗಸು; ವದನ+ಅಂಬುರುಹಂಗಳಮ್; ವದನ=ಮೊಗ; ಅಂಬುರುಹ=ತಾವರೆಯ ಹೂವು; ಬೆಳರ್ ಮಾಡು=ಬಿಳಿಚುಕೊಳ್ಳುವಂತೆ ಮಾಡು;
ವೈರಿವಾರ ವನಿತಾ ವದನಾಂಬುರುಹಂಗಳಮ್ ಬೆಳರ್ಮಾಡದೆ=ಹಗೆಗಳ ಪರಿವಾರದಲ್ಲಿರುವ ಹೆಂಗಸರ ಮೊಗದಾವರೆಯು ಕಾಂತಿಹೀನವಾಗುವಂತೆ ಮಾಡದೆ, ಅಂದರೆ ಅವರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಕಳೆದುಕೊಂಡು ಸಂಕಟದಿಂದ ಗೋಳಾಡುವಂತೆ ಮಾಡದೆ;
ಪೊರ್ದು=ಹೊಂದು;
ಬಂಧು ಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಮ್ ಮಾಡದೆ=ಕುರುಕ್ಶೇತ್ರ ಯುದ್ದದಲ್ಲಿ ತಮ್ಮ ನೆಂಟರನ್ನು ಕಳೆದುಕೊಂಡು ಸಂಕಟದಲ್ಲಿ ಬೇಯುತ್ತಿರುವ ನನ್ನ ಕಡೆಯ ನೆಂಟರಿಶ್ಟರಿಗೆ ನೆಮ್ಮದಿಯನ್ನುಂಟುಮಾಡದೆ, ಅಂದರೆ ಹಗೆಗಳಾದ ಪಾಂಡವರನ್ನು ಕೊಲ್ಲದೆ; ಫಣಿರಾಜಕೇತನ=ದುರ್‍ಯೋದನ;
ಫಣಿರಾಜಕೇತನನ್ ಪಾಂಡವರೊಳ್ ಸಂಧಿ ಮಾಡುವನೆ=ಈ ದುರ್‍ಯೋದನನು ಪಾಂಡವರಲ್ಲಿ ಸಂದಿ ಮಾಡಿಕೊಳ್ಳುತ್ತಾನೆಯೇ; ಬಾಡ=ಹಳ್ಳಿ/ಗ್ರಾಮ;
ಅವರ್ ಮುನ್ ಬಾಡಮನ್ ಅಯ್ದನ್ ಬೇಡಿದೊಡೆ ಆನ್ ಇತ್ತೆನಿಲ್ಲ=ಅವರು ಯುದ್ದಕ್ಕೆ ಮೊದಲು ಸಂದಾನಕ್ಕೆಂದು ಹಸ್ತಿನಾವತಿಗೆ ಕ್ರಿಶ್ಣನನ್ನು ಕಳುಹಿಸಿ ಅಯ್ದು ಹಳ್ಳಿಗಳನ್ನು ಬೇಡಿದಾಗ, ನಾನು ಕೊಡಲಿಲ್ಲ; ಪವನ=ವಾಯುದೇವ; ಪವನನಂದನ=ಬೀಮ; ಏಡಿಸು=ನಿಂದಿಸು/ಅವಹೇಳನ ಮಾಡು; ರೋಡಿಸು=ಹೀಯಾಳಿಸು/ಅಪಹಾಸ್ಯಮಾಡು;
ರಾಜ್ಯ ಅರ್ಧಮನ್ ಆನ್ ಬೇಡಿ ಅವರಲ್ಲಿಗೆ ಅಟ್ಟಿದೊಡೆ ಪವನನಂದನನ್ ಎನ್ನನ್ ಏಡಿಸಿ ರೋಡಿಸನೆ=ಈಗ ನಾನು ಅರ್‍ದರಾಜ್ಯವನ್ನು ಬೇಡಿ ಅವರಲ್ಲಿಗೆ ಸಂದಾನಕ್ಕೆಂದು ಕಳುಹಿಸಿದರೆ, ಬೀಮನು ನನ್ನನ್ನು ಬಯ್ದು, ಹೀಯಾಳಿಸಿ, ಅಪಹಾಸ್ಯಮಾಡುವುದಿಲ್ಲವೇ;
ಅಣುಗ+ಆಳನ್; ಅಣುಗ=ಪ್ರೀತಿಪಾತ್ರನಾದವನು; ಆಳ್=ವ್ಯಕ್ತಿ; ಅಣುಗಾಳ್=ಪ್ರೀತಿಯ ಗೆಳೆಯನಾದ ಕರ್‍ಣ; ಅಣುಗು ತಮ್ಮ=ಪ್ರೀತಿಯ ತಮ್ಮನಾದ ದುಶ್ಶಾಸನ; ಇಕ್ಕು=ಕೊಲ್ಲು;
ಅಜ್ಜ, ಎನ್ನ ಅಣುಗಾಳನ್… ಎನ್ನ ಅಣುಗು ತಮ್ಮನನ್ ಇಕ್ಕಿದ ಪಾರ್ಥ ಭೀಮರ್ ಉಳ್ಳನ್ನೆಗಮ್=ಅಜ್ಜ, ನನ್ನ ಒಲವಿನ ಗೆಳೆಯನಾದ ಕರ್‍ಣನನ್ನು ಕೊಂದಿರುವ ಅರ್‍ಜುನ ಮತ್ತು ನನ್ನೊಲವಿನ ತಮ್ಮನಾದ ದುಶ್ಶಾಸನನನ ಕೊಂದಿರುವ ಬೀಮನು ಜೀವಂತವಾಗಿರುವ ತನಕ;
ಒಡಲ್+ಒಳ್; ಒಡಲು=ದೇಹ/ಮಯ್; ಅಸು=ಉಸಿರು/ಜೀವ/ಪ್ರಾಣ;
ಎನ್ನ ಒಡಲೊಳ್ ಎನ್ನ ಅಸು ಉಳ್ಳಿನಮ್ ಸಂಧಿಯಮ್ ಒಲ್ಲೆನ್=ನನ್ನ ದೇಹದಲ್ಲಿ ಜೀವವಿರುವ ತನಕ ಪಾಂಡವರೊಡನೆ ನನಗೆ ಸಂದಿ ಬೇಕಾಗಿಲ್ಲ;
ಮುನ್ನಮ್ ಅವಂದಿರ್ ಇರ್ಬರುಮನ್ ಇಕ್ಕುವೆನ್=ಈಗ ನಾನು ಯುದ್ದರಂಗದಲ್ಲಿ ಮೊದಲು ಆ ಬೀಮಾರ್‍ಜುನರಿಬ್ಬರನ್ನು ಕೊಲ್ಲುವೆನು;
ಇಕ್ಕಿ ಬಳಿಕ್ಕೆ=ಅವರಿಬ್ಬರನ್ನು ಕೊಂದ ನಂತರ; ನೆಗಳ್=ಕೀರ್ತಿ/ಪ್ರಸಿದ್ದಿ; ಅಂತಕ+ಆತ್ಮಜನ್+ಒಳ್; ಅಂತಕ=ಯಮ; ಆತ್ಮಜ=ಮಗ; ಅಂತಕಾತ್ಮಜ=ಯಮ ದೇವತೆಯ ಅನುಗ್ರಹದಿಂದ ಹುಟ್ಟಿರುವ ಕುಂತಿಯ ಮಗ ದರ್‍ಮರಾಯ;
ನೆಗಳ್ದ ಅಂತಕಾತ್ಮಜನೊಳ್ ಸಂಧಿಗೆಯ್ವೆನ್=ಹೆಸರಾಂತ ದರ್‍ಮರಾಯನ ಜತೆಯಲ್ಲಿ ಸಂದಿಯನ್ನು ಮಾಡಿಕೊಳ್ಳುವೆನು; ಅಳಲ್=ಸಂಕಟ/ಶೋಕ;
ಎನ್ನ ಅಳಲ್ ಆರಿದೊಡೆ ಆಗದು ಎಂಬೆನೇ=ಗೆಳೆಯನಾದ ಕರ್‍ಣ ಮತ್ತು ತಮ್ಮನಾದ ದುಶ್ಶಾಸನನ ಸಾವಿನಿಂದ ನನಗೆ ಉಂಟಾಗಿರುವ ಸಂಕಟದ ಉರಿಯು ಆರಿಹೋದರೆ, ಸಂದಿಯನ್ನು ಬೇಡವೆನ್ನುತ್ತೇನೆಯೇ;
ಪುದುವಾಳ್=ಹೊಂದಿಕೊಂಡು ಜತೆಯಲ್ಲಿ ಬಾಳುವುದು/ಸಂದಿಯನ್ನು ಮಾಡಿಕೊಂಡು ಬಾಳುವುದು; ಅಣಮ್=ಸ್ವಲ್ಪ/ತುಸು/ಕೊಂಚ;
ಪುದುವಾಳಲ್ಕೆ ಅಣಮ್ ಆಗದು=ಪಾಂಡವರೊಡನೆ ಸಂದಿಯನ್ನು ಮಾಡಿಕೊಂಡು ಬಾಳುವುದಕ್ಕೆ ಸ್ವಲ್ಪವೂ ನನ್ನಿಂದಾಗದು;
ಎಂತುಮ್ ಅವರೊಳ್ ಸಂಧಾನಮನ್ ಮಾಡಲಾಗದು=ಯಾವುದೇ ಕಾರಣದಿಂದಲೂ ಪಾಂಡವರೊಡನೆ ಸಂದಾನವನ್ನು ಮಾಡಿಕೊಳ್ಳಲಾಗುವುದಿಲ್ಲ;
ಅಜ್ಜ, ನೀಮ್ ಇಲ್ಲದೆ… ಬಿಲ್ಲಗುರುಗಳ್ ತಾಮಿಲ್ಲದೆ… ಆ ಕರ್ಣನಿಲ್ಲದೆ… ದುಶ್ಶಾಸನನಿಲ್ಲದೆ ಆರೊಡನೆ ರಾಜ್ಯಮ್ ಗೆಯ್ವೆನ್=ಅಜ್ಜ, ಹಿರಿಯರಾದ ನೀವಿಲ್ಲದೆ, ಬಿಲ್ಲಗುರುಗಳಾದ ದ್ರೋಣರಿಲ್ಲದೆ, ಜೀವದ ಗೆಳೆಯನಾದ ಕರ್‍ಣನಿಲ್ಲದೆ , ಒಲವಿನ ತಮ್ಮನಾದ ದುಶ್ಶಾಸನನಿಲ್ಲದೆ ಯಾರೊಡನೆ ನಾನು ರಾಜ್ಯವನ್ನು ಆಳಲಿ;
ಆರ್ಗೆ ಎನ್ನ ಸಂಪದಮಮ್ ತೋರುವೆನ್=ಯಾರಿಗೆ ನನ್ನ ರಾಜತನದ ಸಿರಿವಂತಿಕೆಯನ್ನು ತೋರಲಿ;
ಆರ್ಗೆ ನಾನಾ ವಿನೋದಂಗಳಮ್ ತೋರಿ ಮೆರೆವೆನ್=ಯಾರ ಜತೆಗೂಡಿ ಬಹುಬಗೆಯ ಅಂದಚೆಂದದ ಆನಂದದ ಮನರಂಜನೆಯ ಕ್ರೀಡೆಗಳನ್ನಾಡಿ ನನ್ನ ರಾಜತನವನ್ನು ಮೆರೆಯಲಿ;
ಖಂಡಿತ=ಕತ್ತರಿಸಿದ/ತುಂಡುಮಾಡಿದ/ಪಾಲು ಮಾಡಿದ; ಪರ=ಬೇರೆಯ; ಮಹಿಮಂಡಲ=ಬೂಮಂಡಲ/ರಾಜ್ಯ; ಧವಳಾತಪತ್ರ=ಬೆಳ್ಗೊಡೆ; ಏಭಂಡ=ಏನು ಪ್ರಯೋಜನ/ಯಾವ ಲೆಕ್ಕ;
ಖಂಡಿತಮ್ ಎನಿಪ್ಪ ಪರಮಹಿಮಂಡಲ ಧವಳಾತಪತ್ರ ಸಂಪದಮ್ ಎನಗೆ ಏಭಂಡಮ್=ಇಬ್ಬಾಗ ಮಾಡಿದ ಬೇರೆಯವರ ರಾಜ್ಯದ ಬೆಳ್ಗೊಡೆಯಿಂದ… ಸಂಪತ್ತಿನಿಂದ ನನಗೇನು ಪ್ರಯೋಜನ. ಅಂದರೆ ಇಡಿಯಾದ ರಾಜ್ಯಕ್ಕೆ ಒಡೆಯನಾಗಿ ನಾನು ಆಳಬೇಕೆ ಹೊರತು, ಅರೆಪಾಲಾದ ರಾಜ್ಯದ ಅರಸುತನವಾಗಲಿ ಸಂಪತ್ತಾಗಲಿ ನನಗೆ ಬೇಕಾಗಿಲ್ಲ;
ಅದನ್ ಒಲ್ಲೆನ್ ಒಲ್ಲೆನ್=ಇಬ್ಬಾಗಗೊಂಡ ರಾಜ್ಯದ ಒಡೆತನ ನನಗೆ ಬೇಕಾಗಿಲ್ಲ… ಬೇಕಾಗಿಲ್ಲ;
ಅಖಂಡಿತ=ಸಂಪೂರ್‍ಣ/ಇಡಿಯಾದ; ಅಭಿಮಾನ=ವ್ಯಕ್ತಿಯು ತನ್ನ ಬಗ್ಗೆ ತಾನು ಹೊಂದಿರುವ ಹೆಮ್ಮೆ/ತನ್ನ ನಿಲುವು ಸದಾಕಾಲ ಸರಿಯಾಗಿದೆ ಎಂಬ ಒಳಮಿಡಿತ;
ಬಲ್+ಪಿಡಿ+ಪಿಡಿವೆನ್; ಬಲ್ವಿಡಿ=ಬಲವಾಗಿ ಹಿಡಿದುಕೊಳ್ಳುವುದು;
ಅಖಂಡಿತಮ್ ಅಭಿಮಾನಮ್ ಅದನೆ ಬಲ್ವಿಡಿವಿಡಿವೆನ್=ಸಂಪೂರ್‍ಣವಾದ ಅಬಿಮಾನವನ್ನೇ ನಾನು ಕೊನೆಯವರೆಗೂ ಅವಲಂಬಿಸಿದ್ದೇನೆ. ದುರ್‍ಯೋದನನು ರಾಜ್ಯದ ಅದಿಕಾರದ ಬಗ್ಗೆ ಚಿಕ್ಕಂದಿನಿಂದಲೂ “ಹಸ್ತಿನಾವತಿಯನ್ನು ರಾಜಧಾನಿಯಾಗುಳ್ಳ ಸಾಮ್ರಾಜ್ಯವನ್ನು ತಾನೊಬ್ಬನೇ ರಾಜನಾಗಿ ಆಳಬೇಕು. ಯಾವುದೇ ಕಾರಣದಿಂದಲೂ ರಾಜ್ಯಕ್ಕೆ ಪಾಂಡವರು ಒಡೆಯರಾಗಬಾರದು ಮತ್ತು ರಾಜ್ಯವನ್ನು ಪಾಂಡವರ ಜತೆ ಹಂಚಿಕೊಂಡು ಬಾಳಬಾರದು” ಎಂಬ ನಿಲುವನ್ನು ಹೊಂದಿದ್ದನು. ಇಂತಹ ನಿಲುವಿಗೆ ದಕ್ಕೆ ತರುವಂತಹ ಸಂದಿಯನ್ನು ದುರ್‍ಯೋದನನು ಒಪ್ಪುತ್ತಿಲ್ಲ;
ಪುಟ್ಟಿದ ನೂರ್ವರುಮ್ ಎನ್ನ ಒಡವುಟ್ಟಿದ ನೂರ್ವರುಮ್ ಇದಿರ್ಚಿ ಸತ್ತೊಡೆ… ಕೋಪಮ್ ಪುಟ್ಟಿ ಪೊದಳ್ದುದು=ಹುಟ್ಟಿದ ನೂರು ಮಂದಿ ನನ್ನ ಮಕ್ಕಳು… ನನ್ನ ಒಡಹುಟ್ಟಿದ ನೂರು ಮಂದಿ ತಮ್ಮಂದಿರು ಹಗೆಗಳಾದ ಪಾಂಡವರ ವಿರುದ್ದ ಕುರುಕ್ಶೇತ್ರ ರಣರಂಗದಲ್ಲಿ ಹೋರಾಡುತ್ತ ಸಾವನ್ನಪ್ಪಿದ್ದರಿಂದ, ನನ್ನಲ್ಲಿ ಕೋಪವು ಹುಟ್ಟಿ, ನನ್ನ ಮಯ್ ಮನವೆಲ್ಲವೂ ಆಕ್ರೋಶ ಮತ್ತು ಸೇಡಿನಿಂದ ಕುದಿಯುತ್ತಿದೆ;
ಸತ್ತರ್ ಪುಟ್ಟರೆ=ಒಮ್ಮೆ ಸತ್ತವರು ಮತ್ತೆ ಹುಟ್ಟಿಬರುವುದಿಲ್ಲವೇ. ಸಾವು ಅಂತಹ ಬಯಂಕರವಾದುದಲ್ಲ. ಸಾವಿಗಿಂತ ಅಪಮಾನ ಮತ್ತು ಸೋಲು ಬಯಂಕರವಾದುದು. ಸಾವಿಗಾಗಿ ಹೆದರಿ ಸಂದಿಯನ್ನು ನಾನು ಮಾಡಿಕೊಳ್ಳುವುದಿಲ್ಲ;
ಪಾಂಡವರೊಳ್ ಇರಿದು ಛಲಮನೆ ಮೆರೆವೆನ್=ಪಾಂಡವರೊಡನೆ ಹೋರಾಡಿ ನನ್ನ ಚಲವನ್ನೇ ಸಾದಿಸಿ ತೋರಿಸುತ್ತೇನೆ;
ಕಾದದೆ ಇರೆನ್=ಹೋರಾಟ ಮಾಡದೆ ಸುಮ್ಮನಿರಲು ನನ್ನಿಂದಾಗದು;
ಅಜ್ಜ… ಇಂದಿನ ಒಂದೆ ಸಮರದೊಳ್ ಆನ್ ಆದೆನ್ ಮೇಣ್ ಪಾಂಡವರಾದರ್=ಅಜ್ಜ, ಇಂದು ನಡೆಯುವ ಈ ಒಂದು ಹೋರಾಟದಲ್ಲಿ ನಾನು ಉಳಿಯುತ್ತೇನೆ ಇಲ್ಲವೇ ಪಾಂಡವರು ಉಳಿಯುತ್ತಾರೆ. ಇಬ್ಬರಲ್ಲಿ ಒಬ್ಬರ ಅಳಿವು ನಿಶ್ಚಯ;
ಅವನಿತಳ=ಬೂಮಂಡಲ;
ಅದರಿಂದೆ ಅವನಿತಳಮ್ ಕೌರವಂಗೆ ಆಯ್ತು ಮೇಣ್ ಪಾಂಡವರ್ಗೆ ಆದುದು ಎಂದು=ಆದ್ದರಿಂದ ಬೂಮಂಡಲವು ದುರ್‍ಯೋದನನಿಗೆ ಸೇರುತ್ತದೆ ಇಲ್ಲವೇ ಪಾಂಡವರಿಗೆ ಸೇರುತ್ತದೆ ಎಂದು;
ನಿರ್ವ್ಯಾಜಶೌರ್ಯ+ಅವಲಂಬಿಯಾಗಿ; ನಿರ್ವ್ಯಾಜಶೌರ್ಯ=ಸಹಜವಾದ ಪರಾಕ್ರಮ;
ರಾಜಾಧಿರಾಜನ್ ನಿರ್ವ್ಯಾಜ ಶೌರ್ಯಾವಲಂಬಿಯಾಗಿ ನುಡಿಯೆ=ಚಕ್ರವರ್‍ತಿಯಾದ ದುರ್‍ಯೋದನನು ತನ್ನಲ್ಲಿ ಸಹಜವಾಗಿದ್ದ ಕೆಚ್ಚು ಮತ್ತು ಬಾಹುಬಲವನ್ನು ನಂಬಿಕೊಂಡು ನುಡಿಯಲು;
ಗಾಂಗೇಯನ್ ಅರಿದು=ಬೀಶ್ಮನು ದುರ್‍ಯೋದನನ ಅಂತಿಮ ನಿರ್‍ದಾರವನ್ನು ತಿಳಿದು;
ಅತಿ+ವಿಸ್ಮಯ+ಆಕುಲೀಕೃತ+ಚಿತ್ತನ್+ಆಗಿ; ಆಕುಲೀಕೃತ=ತುಂಬಿದ; ಚಿತ್ತ=ಮನಸ್ಸು;
ಅತಿವಿಸ್ಮಯಾಕುಲೀಕೃತಚಿತ್ತನಾಗಿ=ಬಹಳ ಅಚ್ಚರಿ ತುಂಬಿದ ಮನಸ್ಸಿನವನಾಗಿ; ಒಬ್ಬಂಟಿಯಾಗಿದ್ದರೂ ಕೆಚ್ಚು, ಬಲ ಮತ್ತು ಚಲದಿಂದ ಹೋರಾಡಲು ಅಣಿಯಾಗಿರುವ ದುರ್‍ಯೋದನನ ಮಾತನ್ನು ಕೇಳಿ ಅಚ್ಚರಿಗೊಂಡು;
ಮುಹುರ್=ಮತ್ತೆ/ಪುನಹ; ಮುಹರ್ಮುಹುರ್=ಮತ್ತೆ ಮತ್ತೆ; ಆಂದೋಳಿತ=ತೂಗಾಟ; ಉತ್ತಮಾಂಗ=ತಲೆ;
ಮುಹರ್ಮುಹುರ್ ಆಂದೋಳಿತ ಉತ್ತಮಾಂಗನುಮಾಗಿ=ಬೀಶ್ಮನು ತನ್ನ ತಲೆಯನ್ನು ಅತ್ತಿತ್ತ ಆಡಿಸುತ್ತ;
ಜತುಗೇಹ+ಅನಲ; ಜತುಗೇಹ=ಅರಗಿನ ಮನೆ; ಅನಲ=ಬೆಂಕಿ;
ಜತುಗೇಹಾನಲ ಬೀಜಮ್=ಅರಗಿನ ಮನೆಯ ಬೆಂಕಿಯಲ್ಲಿ ಪಾಂಡವರನ್ನು ಸುಡಲು ಮಾಡಿದ ಸಂಚು ಬೀಜವಾಗಿ;
ಉಗ್ರ=ಬಯಂಕರವಾದ; ಸಂಜಾತ+ಅಂಕುರಮ್; ಸಂಜಾತ=ಹುಟ್ಟಿದ; ಅಂಕುರ=ಮೊಳಕೆ;
ಉಗ್ರವಿಷಸಂಜಾತ ಅಂಕುರಮ್=ಬೀಮನಿಗೆ ವಿಶದ ಲಡ್ಡುಗೆಯನ್ನು ತಿನ್ನಿಸಿ ಕೊಲ್ಲಲು ಮಾಡಿದ ಸಂಚು ಮೊಳಕೆಯಾಗಿ;
ಕ್ರೀಡನ+ಉದ್ಧತಿ+ಕೃತ್; ಕ್ರೀಡನ=ಕ್ರೀಡೆ/ಆಟ; ಉದ್ಧತಿ=ಉತ್ಸಾಹವುಳ್ಳ ; ಕೃತ್=ಮಾಡಿದ; ದ್ಯೂತ=ಜೂಜು/ಪಗಡೆಯಾಟ; ವಿನೋದ=ಮನೋರಂಜನೆಯ ಆಟ; ಪಲ್ಲವ=ಚಿಗುರು; ಚಯ=ಸಮೂಹ/ರಾಶಿ;
ಕ್ರೀಡನೋದ್ಧತಿಕೃತ್ ದ್ಯೂತವಿನೋದ ಪಲ್ಲವಚಯಮ್=ಆಟವಾಡೋಣವೆಂಬ ಉತ್ಸಾಹದಿಂದ ಏರ್‍ಪಡಿಸಿ ಆಡಿದ ಪಗಡೆಯಾಟದ ವಂಚನೆಯು ಚಿಗುರಿನ ರಾಶಿಯಾಗಿ;
ಪಾಂಚಾಲರಾಜ+ಆತ್ಮಜಾ+ಆಯತ+ಕೇಶಗ್ರಹ; ಪಾಂಚಾಲರಾಜ=ದ್ರುಪದ; ಆತ್ಮಜಾ=ಮಗಳು; ಪಾಂಚಾಲರಾಜಾತ್ಮಜಾ=ದ್ರೌಪದಿ; ಆಯತ=ನೀಳವಾದ/ಉದ್ದವಾದ; ಕೇಶ=ತಲೆ ಕೂದಲು; ಗ್ರಹ=ತುಡುಕುವುದು/ಹಿಡಿಯುವುದು; ದ್ರುಮ=ಮರ;
ಪಾಂಚಾಲರಾಜಾ ಆತ್ಮಜಾಯತಕೇಶಗ್ರಹ ಪುಷ್ಪಮಾಗೆ ಬೆಳೆದಾ ವೈರದ್ರುಮಮ್=ದ್ರೌಪದಿಯ ತಲೆಗೂದಲನ್ನು ದುಶ್ಶಾಸನನು ರಾಜಸಬೆಯಲ್ಲಿ ಹಿಡಿದೆಳೆದದ್ದು ಹೂವಾಗಿ ಅರಳಿ ಬೆಳೆದ ಹಗೆತನ ಮರ; ಕೌರವ+ಕ್ಷಿತಿಪಾಲ+ಊರು; ಕ್ಷಿತಿಪಾಲ=ರಾಜ; ಊರು=ತೊಡೆ;
ಕೌರವ ಕ್ಷಿತಿಪಾಲ ಊರು ಕಿರೀಟಭಂಗ ಫಲಮಮ್ ಮಾಡದೆ ಏನ್ ಪೋಕುಮೇ..ಪೇಳ್… ಎಂದು ನಿಶ್ಚಯಿಸಿ=ದುರ್‍ಯೋದನನ ತೊಡೆಯನ್ನು ಮುರಿಯುವ, ಕಿರೀಟವನ್ನು ತೊಡೆಯುವ ಪಲವನ್ನು ಮಾಡದೇ ಹೋಗುವುದೇನು… ಹೇಳು… ಎಂದು ತನ್ನ ಮನದಲ್ಲಿಯೇ ಮುಂದಾಗುವುದನ್ನು ನಿಶ್ಚಯಿಸಿಕೊಂಡು; ನಿಜ+ಉದರದಿಮ್; ನಿಜ=ತನ್ನ; ಉದರ=ಹೊಟ್ಟೆ; ಲೆಕ್ಕಣಿಕೆ=ಬರೆಯಲು ಬಳಸುವ ಉಪಕರಣ;
ಸಿಂಧುಸುತನ್ ನಿಜೋದರದಿಮ್ ಶರಮ್ ಒಂದನ್ ತೆಗೆದು ಲೆಕ್ಕಣಿಕೆ ಮಾಡಿ=ಬೀಶ್ಮನು ತನ್ನ ಹೊಟ್ಟೆಯಲ್ಲಿ ನಾಟಿಕೊಂಡಿದ್ದ ಬಾಣವೊಂದನ್ನು ಹೊರತೆಗೆದು, ಬಾಣದ ಮೊನೆಯನ್ನೇ ಬರಹದ ಉಪಕರಣವನ್ನಾಗಿ ಮಾಡಿಕೊಂಡು; ಗಜಮದ ಮಸಿ=ಆನೆಯ ಗಂಡಸ್ತಳದಿಂದ ಸುರಿದ ರಸ;
ಗಜಮದ ಮಸಿಯಮ್ ತರಿಸಿ=ಗಜಮದಮಸಿಯನ್ನು ತರಿಸಿ; ಪತಾಕೆ=ಬಾವುಟ; ಪಟ=ಬಟ್ಟೆ; ಪತಾಕಾಪಟದೊಳ್ ಬರೆದು=ಬಾವುಟದ ಬಟ್ಟೆಯ ಮೇಲೆ ಬರೆದು; ಅಂಧ=ಕುರುಡ; ನೃಪತಿ=ರಾಜ;
ಅಂಧನೃಪತಿಗಮ್ ಅಟ್ಟಿದನ್=ದ್ರುತರಾಶ್ಟ್ರನಿಗೆ ಪತ್ರವನ್ನು ಕಳುಹಿಸಿದನು;
ಅಂತು ನಿಜನಾಮಾಂಕಿತ ಲೇಖನಮನ್ ಬರೆದು=ಆ ರೀತಿ ತನ್ನ ಹೆಸರಿನಲ್ಲಿ ಬರಹವನ್ನು ರಚಿಸಿ;
ಮೊಮ್ಮನ್ ನುಡಿದ ನುಡಿಯನ್ ಎಂತುಮ್ ಒಡಂಬಡುವನಲ್ಲನ್=ನಮ್ಮ ಮೊಮ್ಮಗನಾದ ದುರ್‍ಯೋದನನು ನಾವು ಹೇಳಿದ ಹಿತನುಡಿಯನ್ನು ಯಾವ ರೀತಿಯಿಂದಲೂ ಒಪ್ಪುತ್ತಿಲ್ಲ;
ನೀನುಮ್ ಗಾಂಧಾರಿಯುಮ್ ಇರ್ದು=ನೀನು ಗಾಂದಾರಿಯು ಅವನ ಬಳಿಗೆ ಬಂದು;
ಪ್ರದೀಪ=ದೀವಿಗೆ/ದೀಪ; ಕುರುಕುಲ ಪ್ರದೀಪ=ಕುರುಕುಲವನ್ನು ಬೆಳಗುವವನು; ಕೌಂತೇಯರು=ಪಾಂಡವರು;
ಕುರುಕುಲ ಪ್ರದೀಪ ದುರ್ಯೋಧನನನ್ ಕೌಂತೇಯರೊಳ್ ಎಂತಾನುಮ್ ಸಂಧಿಯಮ್ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾಳ್ಪುದು ಎಂದು=ಕುರುಕುಲ ಪ್ರದೀಪನಾದ ದುರ್‍ಯೋದನನನ್ನು ಪಾಂಡವರೊಡನೆ ಯಾವ ರೀತಿಯಿಂದಲಾದರೂ ಸಂದಿಯನ್ನು ಮಾಡಿಕೊಳ್ಳುವಂತೆ ಒಪ್ಪಿಸಿ, ಪಗಡೆಯಾಟದ ದುರಂತಕ್ಕೆ ಮೊದಲು ಹಸ್ತಿನಾವತಿಯನ್ನು ರಾಜದಾನಿಯನ್ನಾಗಿ ಮಾಡಿಕೊಂಡು ದುರ್‍ಯೋದನನು ಮತ್ತು ಇಂದ್ರಪ್ರಸ್ತವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಪಾಂಡವರು ಆಳುತ್ತಿದ್ದರೋ ಅದೇ ರೀತಿ ರಾಜ್ಯವನ್ನಾಳುವಂತೆ ಮಾಡುವುದು ಎಂದು ಬರಹದಲ್ಲಿ ಒಕ್ಕಣೆಯನ್ನು ಮಾಡಿ;
ಸಂಜಯನ ಕಯ್ಯೊಳ್ ಕೊಟ್ಟು ಧೃತರಾಷ್ಟ್ರನಲ್ಲಿಗೆ ಅಟ್ಟುವುದುಮ್=ಬೀಶ್ಮನು ಸಂಜಯನ ಕಯ್ಯಲ್ಲಿ ಪತ್ರವನ್ನು ಕೊಟ್ಟು ದ್ರುತರಾಶ್ಟ್ರನ ಬಳಿಗೆ ಕಳುಹಿಸಲು;
ಕುರುರಾಜನ್ ಸಿಂಧುಸುತನ ಮೊಗಮನ್ ನೋಡಿ=ದುರ್‍ಯೋದನನು ಬೀಶ್ಮನ ಮೊಗವನ್ನು ನೋಡಿ;
ತುಂಗ=ಉನ್ನತವಾದ; ಅಯಶೋಭಂಗ=ಅಪಕೀರ್‍ತಿಯುಂಟಾಗಿ ಹಾನಿಗೊಳ್ಳುವುದು; ದೂಸರು=ಕಾರಣ/ನಿಮಿತ್ತ;
ಅದು ಎನ್ನ ದೂಸರಿನ್ ತುಂಗ ಕುರುವಂಶಮ್ ಅಯಶೋಭಂಗಮ್ ಛಿದ್ರಿತಮ್ ಆಯ್ತು=ಅದು ನನ್ನ ಕಾರಣದಿಂದ ಉನ್ನತವಾದ ಕುರುವಂಶ ಅಪಕೀರ್‍ತಿಯಿಂದ ಹಾನಿಗೊಂಡು ಚಿದ್ರಗೊಂಡಿತು;
ಆನುಮ್ ಗಡ ಕುರುರಾಜನೆ=ನಾನು… ಕಂಡಿರಾ… ಈಗ ಕುರುರಾಜನೆ;
ನೀಮುಮ್ ಗಡ ಸಂಧಾನವೇಳ್ದಿರ್ ಎನಗೆ=ನೀವು ನೋಡಿದರೆ ನನಗೆ ಸಂದಾನ ಮಾಡಿಕೊಂಡು ಬಾಳುವಂತೆ ಹೇಳುತ್ತಿರುವಿರಿ;
ಅರಸು ಗಡಾ=ಕಂಡಿರಾ… ನನಗೆ ಅರಸುತನವೇ; ನಿಡು+ತೋಳ್;
ನಿಡುತೋಳ್=ಉದ್ದನೆಯ ತೋಳು; ಆಯತ್ತ=ವಶ;
ವೀರವೃತ್ತಿ ಈ ಎನ್ನ ಎರಡುಮ್ ನಿಡುದೋಳ್ ಆಯತ್ತಮ್=ವೀರತನದ ಹೋರಾಟವು ಈ ನನ್ನ ಎರಡು ಉದ್ದನೆಯ ತೋಳುಗಳ ಬಲದಲ್ಲಿದೆ;
ಜಯಮ್ ಎಂಬುದು ದೈವಾಯತ್ತಮ್=ರಣರಂಗದಲ್ಲಿ ಜಯವೆಂಬುದು ದೇವರ ಇಚ್ಚೆಗೆ ಬಿಟ್ಟಿದ್ದು;
ಭರತ+ಅನ್ವಾಯಕ್ಕೆ; ಅನ್ವಯ/ಅನ್ವಾಯ=ವಂಶ;
ಅಜ್ಜ ಭರತಾನ್ವಾಯಕ್ಕೆ ಕಲಂಕಮಾಗದಂತಿರೆ ನೆಗಳ್ವೆನ್=ಅಜ್ಜ, ಬರತ ವಂಶಕ್ಕೆ ಕೆಟ್ಟಹೆಸರು ಬರದಂತೆ ನಡೆದುಕೊಳ್ಳುತ್ತೇನೆ; ಬೆಸಕೆಯ್=ಹೇಳಿದ ಕೆಲಸವನ್ನು ಮಾಡು;
ಬೆಸಕೆಯ್ಯೆನ್=ಹೇಳಿದ ಕೆಲಸವನ್ನು ಮಾಡುವುದಿಲ್ಲ;
ಅಜ್ಜ, ಮಂಗಳ ಮಹಾಶ್ರೀ ಸಂಧಿಕಾರ್ಯಕ್ಕೆ ಬೆಸಕೆಯ್ಯೆನ್=ಅಜ್ಜ, ಮಂಗಳಕರವಾದುದೆಂದು ನೀವು ಹೇಳುತ್ತಿರುವ ಮಹಾಸಂದಾನವನ್ನು ಪಾಂಡವರೊಡನೆ ನಾನು ಮಾಡಿಕೊಳ್ಳುವುದಿಲ್ಲ;
ಬಿಡಿಮ್=ಸಂದಿಯ ಮಾತನ್ನೇ ಬಿಡಿ;
ಲಂಘಿಸು=ಮೀರು;
ನಿಮ್ಮಯ ಮಾತನ್ ಒರ್ಮೆಗೆ ಲಂಘಿಸಿದೆನ್=ನಿಮ್ಮ ಮಾತನ್ನು ಇದೊಂದು ಬಾರಿ ಮೀರುತ್ತಿದ್ದೇನೆ;
ಮತ್=ನನ್ನ/ನನಗೆ;
ಮತ್ ಆಜ್ಞಾಲಂಘನಮ್ ದೋಷಮ್ ಒಂದಿಸದು=ನಿಮ್ಮ ಆಜ್ನೆಯನ್ನು ಮೀರಿದ ಕಳಂಕ ನನಗೆ ತಟ್ಟುವುದಿಲ್ಲ. ಏಕೆಂದರೆ ನಾನು ಸಂದಿಯನ್ನು ಎಂದಿಗೂ ಬಯಸಿಲ್ಲ;
ಇನ್ನು ಆಗ್ರಹಮಮ್ ಬಿಸುಳ್ಪುದು=ಇನ್ನು ಸಂದಿಗಾಗಿ ಒತ್ತಾಯಮಾಡುತ್ತಿರುವುದನ್ನು ಬಿಡುವುದು; ಸಂದಾನದ ಮಾತನ್ನೇ ಬಿಡಿರಿ ಎಂದು ದುರ್‍ಯೋದನನು ನುಡಿಯಲು;
ಸತ್ತ್ವ=ಶಕ್ತಿ/ಬಲ; ತತ್+ಏಕಾಂಗಸಾಹಸಕಮ್; ಏಕಾಂಗಸಾಹಸ=ಒಬ್ಬಂಟಿಯಾಗಿದ್ದರೂ ಹೋರಾಡುವ ಕೆಚ್ಚು; ವಿಸ್ಮಯಮ್+ಉತ್ತು; ಮಂದಾಕಿನೀನಂದನ=ಬೀಶ್ಮ;
ಸತ್ತ್ವಕ್ಕಮ್ ತದೇಕಾಂಗಸಾಹಸಕಮ್ ವಿಸ್ಮಯಮುತ್ತು ಮೆಚ್ಚಿ ಪೊಗಳ್ದನ್ ಮಂದಾಕಿನೀನಂದನನ್=ದುರ್‍ಯೋದನನ ಶಕ್ತಿ ಮತ್ತು ಒಬ್ಬಂಟಿಯಾಗಿದ್ದರೂ ಹೋರಾಡಬಲ್ಲ ಕೆಚ್ಚಿನ ನಿರ್‍ದಾರವನ್ನು ಕೇಳಿ ಬೀಶ್ಮನು ಮೆಚ್ಚಿ ಹೊಗಳಿದನು;
ಅಂತು ಗಾಂಗೇಯನ್ ಮನದೊಳ್ ಪೊಗಳ್ದನ್=ಆ ರೀತಿ ಬೀಶ್ಮನು ಮನದಲ್ಲಿಯೇ ದುರ್‍ಯೋದನನನ್ನು ಹೊಗಳಿದನು; ಅವಧಾರಿಸು=ಮನಸ್ಸಿಗೆ ತಂದುಕೊಂಡು;
“ಅಶುಭಸ್ಯ ಕಾಲಹರಣಮ್” ಎಂಬ ವಾಕ್ಯಾರ್ಥಮನ್ ಅವಧಾರಿಸಿ=“ಕಾಲಹರಣವನ್ನು ಮಾಡಿದರೆ ಕೆಟ್ಟದ್ದರಿಂದ ಪಾರಾಗಬಹುದು” ಎಂಬ ವಾಕ್ಯದ ಆಶಯವನ್ನು ಮನಸ್ಸಿಗೆ ತಂದುಕೊಂಡು;
ಮಗನೆ , ನೀನ್ ಎಂತುಮ್ ಎಮ್ಮ ಪೇಳ್ದುದಮ್ ಕಯ್ ಕೊಳ್ಳದೆ, ಛಲಮನೆ ಕಯ್ ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಇರೆನ್ ಎಂಬೆಯಪ್ಪೊಡೆ=ಮಗನೆ, ನೀನು ಹೇಗಿದ್ದರೂ ನಾವು ಹೇಳಿದ್ದನ್ನು ಮಾಡದೆ, ಚಲವನ್ನೇ ಹಿಡಿದು ಪಾಂಡುವಿನ ಮಕ್ಕಳೊಡನೆ ಹೋರಾಡದೆ ಇರಲಾರೆನು ಎನ್ನುವೆಯಾದರೆ;
ಮೆಯ್ಗರೆ=ಅಡಗು/ಮರೆಯಾಗು;
ತೀರ್ಥಯಾತ್ರೆಗೆ ಪೋದ ಬಲದೇವನ್ ಬರ್ಪನ್ನೆಗಮ್ ನೀನ್ ಇರ್ದ ಎಡೆಯನ್ ಅರಿಯದಂತು ಮೆಯ್ಗರೆದು=ತೀರ್ತಯಾತ್ರೆಗೆ ಹೋಗಿರುವ ಬಲದೇವನು ಬರುವತನಕ ನೀನು ಇರುವ ಜಾಗವು ಯಾರಿಗೂ ತಿಳಿಯದಂತೆ ಅಡಗಿಕೊಂಡಿದ್ದು;
ಅಶ್ವತ್ಥಾಮ ಕೃಪ ಕೃತವರ್ಮರ್ ಬರ್ಪನ್ನೆಗಮ್ ಕಾಲವಂಚನಮ್ ಗೆಯ್ವುದು=ಕುರುಕ್ಶೇತ್ರ ರಣರಂಗದಲ್ಲಿ ಚದುರಿಹೋಗಿರುವ ಅಶ್ವತ್ತಾಮ, ಕ್ರುಪ, ಕ್ರುತವರ್‍ಮರು ಬರುವವರೆಗೂ ಯಾರ ಕಣ್ಣಿಗೂ ಬೀಳದಂತೆ ಕಾಲವನ್ನು ಕಳೆಯುವುದು;
ಮೇಣ್=ಮತ್ತು; ಜಲಮಂತ್ರ=ನೀರಿನೊಳಗೆ ಜೀವಕ್ಕೆ ಹಾನಿಯಾಗದಂತೆ ಉಚ್ಚರಿಸು ಮಂತ್ರ;
ಜಲಮಂತ್ರ ವಿದ್ಯಾಭ್ಯಾಸಮಮ್ ಕಯ್ ಕೊಂಡು=ಜಲಮಂತ್ರವನ್ನು ಸ್ಮರಿಸುವ ವಿದ್ಯೆಯನ್ನು ಕಲಿತುಕೊಂಡು;
ಕುರುಕ್ಷೇತ್ರದ ಉತ್ತರ ದಿಶಾ ಭಾಗದೊಳ್ ಇರ್ಪ ವೈಶಂಪಾಯನ ಸರೋವರಮಮ್ ಪೊಕ್ಕಿರ್ದು=ಕುರುಕ್ಶೇತ್ರ ರಣರಂಗದ ಉತ್ತರ ದಿಕ್ಕಿನ ಬಾಗದಲ್ಲಿರುವ ವೈಶಂಪಾಯನ ಸರೋವರದಲ್ಲಿ ಮುಳುಗಿಕೊಂಡಿದ್ದು;
ನೆಗಳ್=ಮಾಡು/ಕಯ್ಗೊಳ್ಳು; ಇರುಳು=ರಾತ್ರಿ; ಕಳಿಪಿ=ಕಳೆದು;
ಇಂದಿನ ಒಂದು ಇರುಳಮ್ ಕಳಿಪಿ , ನಾಳೆ ನೀನ್ ನೆಗಳ್ದುದಮ್ ನೆಗಳ್ದುದು ಎನೆ=ಇಂದಿನ ಒಂದು ರಾತ್ರಿಯನ್ನು ಸರೋವರದಲ್ಲಿಯೇ ಅಡಗಿಕೊಂಡಿದ್ದು ಕಳೆದು, ನಾಳೆ ನೀನು ಏನು ಮಾಡಬೇಕೆಂದಿರುವೆಯೋ ಅದನ್ನು ಮಾಡುವುದು ಎನ್ನಲು;
ಮಹಾಪ್ರಸಾದಮ್=ನಿಮ್ಮ ಅನುಗ್ರಹ;
ಇದನ್ ಒಡಂಬಟ್ಟೆನ್=ಇದನ್ನು ಒಪ್ಪಿಕೊಂಡೆನು;
ಅಂತೆ ಗೆಯ್ವೆನ್ ಎಂದು=ಅದೇ ರೀತಿ ಮಾಡುತ್ತೇನೆ ಎಂದು ಹೇಳಿ;
ಹಿತೋಪದೇಶಮ್ ಬೆರಸು ಜಲಮಂತ್ರ ಉಪದೇಶಮಮ್ ಕಯ್ಕೊಂಡು=ಬೀಶ್ಮನ ಹಿತನುಡಿಗಳಿಗೆ ಮನಗೊಟ್ಟು, ಜಲಮಂತ್ರದ ಉಚ್ಚಾರಣೆ ಮತ್ತು ಆಚರಣೆಯ ಬಗೆಯನ್ನು ಬೀಶ್ಮನಿಂದ ಹೇಳಿಸಿಕೊಂಡು;
ಕುರುಕುಲ ಪಿತಾಮಹನನ್ ಬೀಳ್ಕೊಂಡು=ಕುರುಕುಲ ಪಿತಾಮಹನಾದ ಬೀಶ್ಮನನ್ನು ಬೀಳ್ಕೊಂಡು;
ನಿಜಭುಜ ಗದಾಸಹಾಯನುಮ್ ಆಗಿ ಸಂಗ್ರಾಮ ಭೂಮಿಯೊಳಗನೆ ಬರುತ್ತುಮ್=ತನ್ನ ಬಾಹುಬಲ ಮತ್ತು ಗದೆಯ ಶಕ್ತಿಯನ್ನೇ ಅವಲಂಬಿಸಿದವನಾಗಿ, ರಣರಂಗದಲ್ಲಿ ಬರುತ್ತ;
ತನ್ನ ಅಂತರ್ಗತದೊಳ್=ದುರ್‍ಯೋದನನುನ ತನ್ನ ಮನದಲ್ಲಿ ಈ ರೀತಿ ಚಿಂತಿಸತೊಡಗಿದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು